Tag: Fast Tag

  • Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ

    Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bengaluru Mysuru Expressway) ಸಂಚಾರಕ್ಕೆ ಮುಕ್ತಗೊಂಡಿದ್ದು ಮಂಗಳವಾರದಿಂದ ಟೋಲ್ (Toll) ಸಂಗ್ರಹವೂ ಪ್ರಾರಂಭವಾಗಿದೆ. ಆದರೆ ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ ಕಂಡುಬಂದಿದೆ. ಇದರಿಂದ ವಾಹನ ಸವಾರರು ಬೆಳಗ್ಗೆಯಿಂದಲೇ ಪರದಾಡುವಂತಾಗಿದೆ.

    ಮಂಗಳವಾರ ಕಣಮಿಣಕಿ ಟೋಲ್‌ನಲ್ಲಿ ಆರಂಭದಲ್ಲೇ ತಾಂತ್ರಿಕ ದೋಷ ಕಂಡುಬಂದಿದೆ. ಫಾಸ್ಟ್ ಟ್ಯಾಗ್ (Fast Tag) ಅಳವಡಿಸಲಾಗಿದ್ದರೂ ಅವು ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಬೂತ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅತ್ತ ಫಾಸ್ಟ್ ಟ್ಯಾಗ್ ಇಲ್ಲದೇ ಹೋದ ವಾಹನ ಸವಾರರು ಅದರ ದುಪ್ಪಟ್ಟು ದರವನ್ನು ಕಟ್ಟಬೇಕಾಗುತ್ತದೆ.

    ಟೋಲ್ ಶುಲ್ಕ ಎಷ್ಟು?
    ಬೆಂಗಳೂರಿನಿಂದ ನಿಡಘಟ್ಟದವರೆಗೆ ಸುಮಾರು 56 ಕಿ.ಮೀ ರಸ್ತೆಗೆ ಟೋಲ್ ಸಂಗ್ರಹ ಆರಂಭವಾಗಿದೆ. ಕಾರು, ಜೀಪ್, ವ್ಯಾನ್‌ಗಳಿಗೆ ಏಕಮುಖ ಸಂಚಾರಕ್ಕೆ 135 ರೂ. ಯಾದರೆ, ದ್ವಿಮುಖ ಸಂಚಾರಕ್ಕೆ 205 ರೂ. ಯಾಗುತ್ತದೆ. ಸ್ಥಳೀಯ ವಾಹನಗಳಿಗೆ 70 ರೂ. ಹಾಗೂ ತಿಂಗಳ ಪಾಸ್ 4,525 ರೂ. ಇದೆ. ಲಘು ವಾಹನ, ಮಿನಿಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 220 ರೂ. ಇದ್ದು, ದ್ವಿಮುಖ ಸಂಚಾರಕ್ಕೆ 330 ರೂ. ಇದೆ. ಸ್ಥಳೀಯ ವಾಹನಗಳಿಗೆ 110 ರೂ. ಇದ್ದು, ತಿಂಗಳ ಪಾಸ್ 7,315 ರೂ. ಇದೆ. ಬಸ್ ಹಾಗೂ ಟ್ರಕ್‌ಗಳ ಏಕಮುಖ ಸಂಚಾರಕ್ಕೆ 460 ರೂ, ದ್ವಿಮುಖ ಸಂಚಾರಕ್ಕೆ 690 ರೂ. ಇದೆ. ಸ್ಥಳೀಯ ವಾಹನಗಳಿಗೆ 230 ರೂ. ಇದ್ದು, ಮಾಸಿಕ ಪಾಸ್ 15,325 ರೂ. ಇದೆ.

    ಮೂರು ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 500ರೂ., ದ್ವಿಮುಖ ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250 ರೂ. ಹಾಗೂ ತಿಂಗಳ ಪಾಸ್‌ಗೆ 16,715 ರೂ. ನಿಗದಿಯಾಗಿದೆ. ಭಾರೀ ನಿರ್ಮಾಣ ವಾಹನಗಳಿಗೆ ಏಕಮುಖ ಸಂಚಾರಕ್ಕೆ 720 ರೂ. ಇದ್ದು, ದ್ವಿಮುಖ ಸಂಚಾರಕ್ಕೆ 1,080 ಇದೆ. ಸ್ಥಳೀಯ ವಾಹನಗಳಿಗೆ 360 ರೂ. ಹಾಗೂ ತಿಂಗಳ ಪಾಸ್‌ಗೆ 24,030 ರೂ. ಇದೆ. ಅತಿ ಗಾತ್ರದ ವಾಹನಗಳ ಏಕಮುಖ ಸಂಚಾರಕ್ಕೆ 880 ರೂ., ದ್ವಿಮುಖ ಸಂಚಾರಕ್ಕೆ 1,315 ರೂ, ಸ್ಥಳೀಯ ವಾಹನಗಳಿಗೆ 440 ರೂ. ಹಾಗೂ ತಿಂಗಳ ಪಾಸ್‌ಗೆ 29,255 ರೂ. ಇದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಸಾಧಾರಣ ಮಳೆ

     

    ಯಾವ್ಯಾವ ವಾಹನಗಳಿಗೆ ಪ್ರವೇಶ?
    ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಈ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್‌ಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ನಿರ್ದಿಷ್ಟ ವೇಗ, ಸುರಕ್ಷತೆ ಹಾಗೂ ಯಾವುದೇ ಅಡೆ-ತಡೆ ಇಲ್ಲದೇ ಪ್ರಯಾಣಿಸಲು ಈ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ ಸರ್ವಿಸ್ ರಸ್ತೆ ನಿರ್ಮಾಣ ಆಗುವವರೆಗೂ ಆಟೋ ಹಾಗೂ ಬೈಕ್‌ಗಳಿಗೆ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶವಿದೆ. ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ಬೈಕ್ ಆಟೋ ಟ್ರ್ಯಾಕ್ಟರ್‌ಗಳು ಈ ರಸ್ತೆಯಲ್ಲಿ ಪ್ರವೇಶಿಸುವಂತಿಲ್ಲ. ಸರ್ವಿಸ್ ರಸ್ತೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿರದ ಕಾರಣ ಹೆದ್ದಾರಿಯಲ್ಲಿ ಬೈಕ್, ಆಟೋ ಸಂಚಾರಕ್ಕೆ ಅವಕಾಶ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಗೊಂದಲವಿದೆ. ಇದನ್ನೂ ಓದಿ: ಕೋರ್ಟ್‌ನಲ್ಲಿ ಇಂದು 5, 8ನೇ ತರಗತಿ ಪಬ್ಲಿಕ್ ಪರೀಕ್ಷೆ ಅರ್ಜಿ ವಿಚಾರಣೆ

  • ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

    ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

    ನವದೆಹಲಿ: ಜನವರಿ 1ರಿಂದ ದೇಶದ ಎಲ್ಲ 4 ಚಕ್ರ ಮೇಲ್ಪಟ್ಟ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಪ್ರಸ್ತುತ ದಿನಗಳಲ್ಲಿ ಫಾಸ್ಟ್ ಟ್ಯಾಗ್ ಉಪಯುಕ್ತವಾಗಿದ್ದು, ವಾಹನಗಳನ್ನು ಎಲ್ಲ ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸುವ ಅಗತ್ಯವಿಲ್ಲ. ಇದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಹ ಈ ಕುರಿತು ಆದೇಶ ಹೊರಡಿಸಿತ್ತು. ಹಳೆ ವಾಹನ ಸೇರಿ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ತಿಳಿಸಿತ್ತು. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    ನವೆಂಬರ್ 2020ರಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸುತ್ತೋಲೆ ಹೊರಡಿಸಿ, ಫಾಸ್ಟ್ ಟ್ಯಾಗ್ ಮೂಲಕ ಡಿಜಿಟಲ್ ಹಾಗೂ ಐಟಿ ತಂತ್ರಜ್ಞಾನ ಆಧರಿತ ಶುಲ್ಕ ಪಾವತಿಯನ್ನು ಉತ್ತೇಜಿಸಲಾಗುವುದು. ಜನವರಿ 1, 2021ರಿಂದ ಹಳೆ ವಾಹನಗಳು ಸೇರಿ ಎಂ ಹಾಗೂ ಎನ್ ಮಾದರಿಯ ಎಲ್ಲ ವಾಹನಗಳಿಗೆ ಕಡ್ಡಾಯವಾಗಿದೆ ಎಂದು ತಿಳಿಸಿದೆ.

    ಡಿಸೆಂಬರ್ 1,2017ರಿಂದ ಇತ್ತೀಚಿನ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ವಾಹನ ಉತ್ಪಾದನೆ ಕಂಪನಿಗಳು ಅಥವಾ ಡೀಲರ್ ಗಳು ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ನೀಡಬೇಕು. ಅಲ್ಲದೆ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸಬೇಕಾದರೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. ನ್ಯಾಷನಲ್ ಪರ್ಮಿಟ್ ವಾಹನಗಳಿಗೆ ಅಕ್ಟೋಬರ್ 1, 2019ರಿಂದಲೇ ಕಡ್ಡಾಯಗೊಳಿಸಲಾಗಿದೆ ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.

  • ಟೋಲ್ ಸಿಬ್ಬಂದಿಯ ಮೇಲೆ ಪುಂಡರಿಂದ ಹಲ್ಲೆ

    ಟೋಲ್ ಸಿಬ್ಬಂದಿಯ ಮೇಲೆ ಪುಂಡರಿಂದ ಹಲ್ಲೆ

    ನೆಲಮಂಗಲ: ಆರು ಮಂದಿ ಪುಂಡರು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಜಾಸ್ ಟೋಲ್ ಗೇಟ್ ನಲ್ಲಿ ನಡೆದಿದೆ.

    ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸದರೇ ಡಬಲ್ ಹಣವನ್ನು ಟೋಲ್ ನಲ್ಲಿ ಪಾವತಿಸಬೇಕು. ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದ ಲಾರಿಯಲ್ಲಿ ಬಂದ ಯುವಕರಿಗೆ ಸಿಬ್ಬಂದಿ ಡಬಲ್ ಹಣವನ್ನು ಪಾವತಿಸುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ಪುಂಡರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ನಾಗಪುರದ ಮೂಲದ ಟೋಲ್ ಸಿಸ್ಟಮ್ ಎಂಜಿನೀಯರ್ ಹಾಗೂ ಇನ್ನೋರ್ವ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಟೋಲ್ ಪ್ಲಾಜಾ ದಲ್ಲಿ ಹೊರ ರಾಜ್ಯದ ಯುವಕರು ಕೆಲಸ ಮಾಡುತ್ತಿದ್ದು, ಸ್ಥಳೀಯ ಸವಾರರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಐದು ದಿನ ಬಾಕಿ

    ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಐದು ದಿನ ಬಾಕಿ

    ಬೆಂಗಳೂರು: ಫಾಸ್ಟ್ ಟ್ಯಾಗ್ ಅಳವಡಿಸಲು ಕೇವಲ ಐದೇ ದಿನ ಬಾಕಿಯಿದೆ.

    ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುವ ಶೇ. 60ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿದ್ದು, ಅಂತಿಮ ಗಡುವಿಗೆ  ಬಾಕಿ ಉಳಿದ ಐದು ದಿನಗಳಲ್ಲಿ ಶೇ.25ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳುವುದು ಬಾಕಿಯಿದೆ.

    ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅಳವಡಿಕೆ ನೀಡಿದ್ದ ಗಡುವು ವಿಸ್ತರಣೆ ಐದು ದಿನಗಳಲ್ಲಿ (ಜ.15) ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದಿದ್ದರೆ ಕ್ಯಾಶ್ ಲೈನ್ ನಲ್ಲಿ ಮಾತ್ರ ಸಂಚರಿಸಬೇಕು.

    ರಾಜ್ಯದಲ್ಲಿ ಫಾಸ್ಟ್ ಟ್ಯಾಗ್‍ಗೆ ಬೇಡಿಕೆ ಕಡಿಮೆಯಾಗಿದೆ. ಟೋಲ್ ಪ್ಲಾಜಾಗಳಲ್ಲಿ ತೆರೆದಿರುವ ಫಾಸ್ಟ್ ಟ್ಯಾಗ್ ಸೆಂಟರ್ ಗಳು, ಬ್ಯಾಂಕ್‍ಗಳು, ಆನ್‍ಲೈನ್ ಮಾರ್ಕೆಟ್‍ನಲ್ಲಿ ಫಾಸ್ಟ್ ಟ್ಯಾಗ್ ಗೆ ಬೇಡಿಕೆ ಇಳಿಮುಖವಾಗಿದೆ. ಡಿಸೆಂಬರ್ 15ರ ವೇಳೆಗೆ ರಾಜ್ಯದಲ್ಲಿ ಶೇ.40ರಷ್ಟಿದ್ದ ಫಾಸ್ಟ್ ಟ್ಯಾಗ್ ಅಳವಡಿಕೆ ಪ್ರಮಾಣ ಕಳೆದ 25 ದಿನಗಳಲ್ಲಿ ಶೇ. 20ರಷ್ಟು ಹೆಚ್ಚಾಗಿದೆ. ಅಂದರೆ ಇವರೆಗೆ ರಾಜ್ಯದಲ್ಲಿ ಒಟ್ಟು ಶೇ.60ರಷ್ಟು ಫಾಸ್ಟ್ ಟ್ಯಾಗ್ ಅಳವಡಿಕೆಯಾಗಿದೆ.

    ವಾಹನಗಳಿಗೆ ಫಾಸ್ಟ್ ಟ್ಯಾಗ್ ಸ್ಟಿಕರ್ ಅಳವಡಿಕೆ ನಿರೀಕ್ಷಿತ ಮಟ್ಟಕ್ಕೆ ಮುಟ್ಟಿಲ್ಲ. ಆದರೂ ಇನ್ನೈದು ದಿನಗಳಲ್ಲಿ ಫಾಸ್ಟ್ ಟ್ಯಾಗ್ ವಾಹನಗಳ ಸಂಖ್ಯೆ ಶೇ.80ಕ್ಕೆ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳ ಸಂಚಾರಕ್ಕೆ ಟೋಲ್ ಪ್ಲಾಜಾಗಳಲ್ಲಿ ಒಂದು ಪಥ ಮೀಸಲಿಡಲು ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.

  • ಫಾಸ್ಟ್ ಟ್ಯಾಗ್‍ನಿಂದ ಆದಾಯ ಸೋರಿಕೆಗೆ ಬಿತ್ತು ಕತ್ತರಿ- ಶೇ.15ರಷ್ಟು ಹೆಚ್ಚಳವಾಯ್ತು ಟೋಲ್ ಸಂಗ್ರಹ

    ಫಾಸ್ಟ್ ಟ್ಯಾಗ್‍ನಿಂದ ಆದಾಯ ಸೋರಿಕೆಗೆ ಬಿತ್ತು ಕತ್ತರಿ- ಶೇ.15ರಷ್ಟು ಹೆಚ್ಚಳವಾಯ್ತು ಟೋಲ್ ಸಂಗ್ರಹ

    ನವದೆಹಲಿ: ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಬಳಕೆಯನ್ನು ಕೇಂದ್ರ ಸರ್ಕಾರ ಮುಂದೂಡಿದ್ದರೂ, ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಪ್ರಮಾಣ ಶೇ.15 ರಷ್ಟು ಹೆಚ್ಚಾಗಿದೆ.

    ಮೂಲಗಳ ಮಾಹಿತಿಯ ಅನ್ವಯ ಎನ್‍ಎಚ್‍ಎಐ ಟೋಲ್ ಆದಾಯ 80 ಕೋಟಿ ರೂ. ದಾಟಿದ್ದು, ಇದಕ್ಕೂ ಮುನ್ನ ಸರಾಸರಿ 65 ರಿಂದ 68 ಕೋಟಿ ರೂ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸಂಗ್ರಹವಾಗಿತ್ತು. ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಆದಾಯ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಟೋಲ್‍ಗಳಲ್ಲಿ ಸೋರಿಕೆಯಾಗುತ್ತಿದ್ದ ಆದಾಯಕ್ಕೆ ಪೂರ್ಣವಿರಾಮ ಬೀಳುವ ಸಾಧ್ಯತೆಯಿದೆ.

    ಇದುವರೆಗೂ ದೇಶದಲ್ಲಿರುವ 530 ಟೋಲ್ ಪ್ಲಾಜಾಗಳಲ್ಲಿ 40 ರಿಂದ 45 ಪ್ಲಾಜಾಗಳಲ್ಲಿನ ‘ಟೋಲ್ ಟೈಮ್ ಝೀರೋ’ ಟೈಮ್ ದಾಖಲಾಗಿದೆ. ಕಳೆದ ವರ್ಷ 488 ಟೋಲ್ ಪ್ಲಾಜಾ ಗಳಲ್ಲಿ ಸರಾಸರಿ ಕಾಯುವ ಸಮಯ ಭಾನುವಾರ 12 ನಿಮಿಷವಾಗಿತ್ತು. ಉಳಿದಂತೆ ಇತರೇ ದಿನಗಳಲ್ಲಿ ಸರಾಸರಿ 10.04 ನಿಮಿಷ ಬೇಕಾಗಿತ್ತು.

    ಈಗಲೂ ಮಾಹಿತಿಯ ಕೊರತೆಯಿಂದಾಗಿ ವಾಹನಗಳು ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡದೇ ಇದ್ದರೂ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಲೇನ್‍ಗಳಿಗೆ ಪ್ರವೇಶ ಮಾಡುತ್ತಿದ್ದರಿಂದ ಕೆಲ ಸಮಸ್ಯೆ ಆಗುತ್ತಿದೆ. ಈ ವೇಳೆ ಡಬಲ್ ಚಾರ್ಜ್ ಪಾವತಿ ಮಾಡಲು ನಿರಾಕರಿಸುತ್ತಿದ್ದಾರೆ. ಅಲ್ಲದೇ ಕೆಲ ಪ್ಲಾಜಾಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಅಂತಹ ಸ್ಥಳಗಳಲ್ಲಿ ವಾಹನ ಸವಾರರು ಸಾಕಷ್ಟು ಬ್ಯಾಲೆನ್ಸ್ ಇದ್ದರೆ ಉಚಿತ ಪ್ರವೇಶ ನೀಡಲಾಗುತ್ತಿದೆ ಎಂದು ಟೋಲ್ ಸಿಬ್ಬಂದಿ ಹೇಳಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ದೇಶದ 245 ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ತೃಪ್ತಿದಾಯಕವಾಗಿದ್ದು, ಎಲ್ಲಾ ಪ್ಲಾಜಾಗಳಲ್ಲಿ ನೇರ ನಗದು ಸ್ವೀಕರಿಸುವ ಒಂದು ಲೇನ್ ಮಾತ್ರ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಉಳಿದ 242 ಪ್ಲಾಜಾಗಳಲ್ಲಿ ಶೇ.25 ರಷ್ಟು ಲೇನ್‍ಗಳಲ್ಲಿ ನಗದು ಸ್ವೀಕರಿಸಲಾಗುತ್ತಿದೆ. ಇನ್ನು 40-42 ಪ್ಲಾಜಾಗಳಲ್ಲಿ ನಿರೀಕ್ಷಿತ 25% ರಷ್ಟು ಪ್ರಮಾಣದಲ್ಲಿ ಫಾಸ್ಟ್ ಟ್ಯಾಗ್ ಬಳಕೆ ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

  • ಫಾಸ್ಟ್ ಟ್ಯಾಗ್ ಇದ್ದರೂ ತಪ್ಪದ ‘ಕ್ಯೂ’- ಪರ, ವಿರೋಧ ಚರ್ಚೆ

    ಫಾಸ್ಟ್ ಟ್ಯಾಗ್ ಇದ್ದರೂ ತಪ್ಪದ ‘ಕ್ಯೂ’- ಪರ, ವಿರೋಧ ಚರ್ಚೆ

    ಬೆಂಗಳೂರು: ಟೋಲ್‍ಗಳಲ್ಲಿ ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ್ದು, ವಾಹನ ಸವಾರರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಕಾರಣ ಮೂರು ಬಾರಿ ಕಾಲಾವಕಾಶ ವಿಸ್ತರಣೆ ಮಾಡಿದೆ. ಇದರ ನಡುವೆ ಫಾಸ್ಟ್ ಟ್ಯಾಗ್ ಕಡ್ಡಾಯದ ಪರ, ವಿರೋಧ ಚರ್ಚೆಗಳು ನಡೆಯುತ್ತಿದೆ.

    ದೇಶದ್ಯಾಂತ ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಾಯುವಿಕೆ ಕೊನೆಗೊಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಪರಿಚಯಿಸಿದ್ದು, ವಾಹನ ಸವಾರರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬಹುತೇಕ ವಾಹನ ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅಳವಡಿಕೆಗೆ ನೀಡಿದ್ದ ಗಡುವನ್ನು ಮತ್ತೆ 30 ದಿನಗಳ ಕಾಲ ವಿಸ್ತರಿಸಿದೆ. ಈ ಹಿನ್ನೆಲೆ ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ.

    ಬೆಂಗಳೂರು ತಮಿಳುನಾಡು ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಟೋಲ್ ಬಳಿ ಫಾಸ್ಟ್ ಟ್ಯಾಗ್ ಅಳವಡಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಸವಾರರು ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಖುಷಿಯಾಗಿದ್ದಾರೆ. ಆದರೆ ಫಾಸ್ಟ್ ಟ್ಯಾಗ್ ವಿತರಣೆ ವ್ಯವಸ್ಥೆ ಸರಿ ಇಲ್ಲದ ಕಾರಣ ಫಾಸ್ಟ್ ಟ್ಯಾಗ್ ವಿತರಣೆ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಕೆಲ ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್‍ನ ಅರಿವು ಮೂಡಿಸಬೇಕು ಎಂಬುದು ವಾಹನ ಸವಾರರು ಅಭಿಪ್ರಾಯವಾಗಿದೆ.

    ಫಾಸ್ಟ್ ಟ್ಯಾಗ್ ಅಳವಡಿಕೆ ಹಾಗೂ ಸ್ಕ್ಯಾನಿಂಗ್ ನಲ್ಲಿ ಹಲವು ಲೋಪಗಳಿದ್ದು, ಇದರಿಂದಾಗಿ ಫಾಸ್ಟ್ ಟ್ಯಾಗ್ ಅಳವಡಿಸಿದ್ದರು ಟೋಲ್ ಗಳಲ್ಲಿ ಕಾಯುವಿಕೆ ಮುಂದುವರಿದಿದೆ. ಇದಕ್ಕೆ ಫಾಸ್ಟ್ ಟ್ಯಾಗ್ ವಿತರಿಸುತ್ತಿರುವ ಏಜೆನ್ಸಿಗಳು ಗುಣಮಟ್ಟದ ಟ್ಯಾಗ್ ವಿತರಣೆ ಮಾಡದ ಕಾರಣ ಹಾಗೂ ವಾಹನಗಳಲ್ಲಿ ಸರಿಯಾದ ಸ್ಥಳದಲ್ಲಿ ಟ್ಯಾಗ್ ಅಳವಡಿಸಿದ ಕಾರಣ ಟೋಲ್ ಗೇಟ್ ಗಳಲ್ಲಿ ಸ್ಕ್ಯಾನಿಂಗ್ ನಿಧಾನ ಗತಿಯಲ್ಲಿ ಆಗುತ್ತಿದ್ದು, ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ ಎಂಬುದು ಅತ್ತಿಬೆಲೆ ಟೋಲ್ ಮ್ಯಾನೇಜರ್ ತಿಮ್ಮಯ್ಯನವರ ಅಭಿಪ್ರಾಯ.

    ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ತಿಮ್ಮಯ್ಯ ಅವರು, ಕರ್ನಾಟಕದಲ್ಲಿ ಅತ್ತಿಬೆಲೆ ಟೋಲ್ ಫಾಸ್ಟ್ ಟ್ಯಾಗ್ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು. ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಗಂಟೆಗಟ್ಟಲೆ ಟೋಲ್ ಗಳಲ್ಲಿ ಕಾಯುವುದು ತಪ್ಪಿತೆಂದೂ ಫಾಸ್ಟ್ ಟ್ಯಾಗ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಸ್ಥಳೀಯ ವಾಹನ ಸವಾರರು ಕೆಲವೇ ಮೀಟರ್ ರಸ್ತೆ ಉಪಯೋಗಕ್ಕೆ ದುಡ್ಡು ತರಬೇಕೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  • ಫಾಸ್ಟ್ ಟ್ಯಾಗ್ ಅಳವಡಿಕೆ- ವಾಹನ ಸವಾರರು ಸ್ವಲ್ಪ ನಿರಾಳ

    ಫಾಸ್ಟ್ ಟ್ಯಾಗ್ ಅಳವಡಿಕೆ- ವಾಹನ ಸವಾರರು ಸ್ವಲ್ಪ ನಿರಾಳ

    – ಸದ್ಯ ಶೇ.75 ಗೇಟ್‍ಗಳಲ್ಲಿ ಮಾತ್ರ ಫಾಸ್ಟ್ ಟ್ಯಾಗ್
    – ಉಳಿದ ಶೇ.25 ಗೇಟ್‍ಗಳಿಗೆ ಹಂತ ಹಂತವಾಗಿ ವಿಸ್ತರಣೆ

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಡಿ.15ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇದಕ್ಕೀಗ ಕೊಂಚ ಸಡಿಲಿಕೆ ನೀಡಿದ್ದು, ಸದ್ಯ ಎಲ್ಲ ಟೋಲ್‍ಗಳ ಶೇ.75 ಗೇಟ್‍ಗಳು ಮಾತ್ರ ಫಾಸ್ಟ್ ಟ್ಯಾಗ್ ವ್ಯವಸ್ಥೆ ಹೊಂದಲಿವೆ. ಉಳಿದ ಶೇ.25ರಷ್ಟನ್ನು ಹಂತ ಹಂತವಾಗಿ ವಿಸ್ತರಿಸಲು ತೀರ್ಮಾನಿಸಲಾಗಿದೆ.

    ಟೋಲ್‍ನ ಎಲ್ಲ ಗೇಟ್‍ಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸಲು ಕೇಂದ್ರ ಸರ್ಕಾರ ಸಮಯಾವಕಾಶ ನೀಡಿದ್ದು, ಶೇ.75 ರಷ್ಟು ಗೇಟ್‍ಗಳಿಗೆ ಮಾತ್ರ ಫಾಸ್ಟ್‍ಟ್ಯಾಗ್ ತಂತ್ರಜ್ಞಾನವನ್ನು ಅಳವಡಿಸಲು ನಿರ್ಧರಿಸಲಾಗಿದೆ. ಉಳಿದ ಶೇ.25ರಷ್ಟನ್ನು ಹಂತ ಹಂತವಾಗಿ ವಿಸ್ತರಿಸಲು ತೀರ್ಮಾನಿಸಲಾಗಿದೆ.

    ಜುಲೈನಲ್ಲಿ ಹೆದ್ದಾರಿ ಸಚಿವಾಲಯದಿಂದ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ(ಎನ್‍ಎಚ್‍ಎಐ)ಕ್ಕೆ ಪತ್ರ ಬರೆದು ಎಲ್ಲ ರಾಷ್ಟ್ರೀಯ ಹೆದ್ದಾರಿಗಳ, ತುರ್ತು ನಿರ್ವಹಣೆಗಾಗಿ ಒಂದು ಗೇಟ್ ಹೊರತುಪಡಿಸಿ, ಉಳಿದೆಲ್ಲ ಟೋಲ್ ಗೇಟ್‍ಗಳಿಗೆ ಡಿಸೆಂಬರ್ 1ರೊಳಗೆ ಫಾಸ್ಟ್ ಟ್ಯಾಗ್ ಅಳವಡಿಸುವಂತೆ ಸೂಚಿಸಿತ್ತು. ಆದರೆ ನಂತರ ನವೆಂಬರ್ 29ರಂದು ಆದೇಶ ಹೊರಡಿಸಿ, ಈ ಗಡುವನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಿತ್ತು. ಇದನ್ನೂ ಓದಿ:  ಡಿಸೆಂಬರಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ – ಎಲ್ಲಿ ಸಿಗುತ್ತೆ? ಶುಲ್ಕ ಎಷ್ಟು? ಈ ವಿಚಾರಗಳನ್ನು ತಿಳಿದಿರಿ

    ಇದೀಗ ಮತ್ತೆ ಈ ಕುರಿತು ನಿರ್ಧಾರ ಕೈಗೊಂಡಿದ್ದು, ಮೊದಲ ಹಂತದಲ್ಲಿ ಪ್ರತಿ ಟೋಲ್‍ನ ಶೇ.75ರಷ್ಟು ಗೇಟ್ ಗಳಿಕೆ ಮಾತ್ರ ಫಾಸ್ಟ್ ಟ್ಯಾಗ್ ಅಳವಡಿಸಿ, ಶೇ.25ರಷ್ಟು ಗೇಟ್ ಗಳಲ್ಲಿ ನಗದು ಸ್ವೀಕರಿಸುವಂತೆ ತಿಳಿಸಿದೆ. ಅಲ್ಲದೆ ಈ ಶೇ.25ರಷ್ಟು ಗೇಟ್‍ಗಳನ್ನು ಹಂತ ಹಂತವಾಗಿ ಫಾಸ್ಟ್ ಟ್ಯಾಗ್ ಗೆ ಒಳಪಡಿಸಲಾಗುವುದು ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ.