Tag: Fast Bowling

  • ‘ಟೀಂ ಇಂಡಿಯಾ ವೇಗದ ಬೌಲಿಂಗ್ ಕ್ರಾಂತಿಯ ಕಿಡಿ ಹೊತ್ತಿಸಿದ್ದು ಕನ್ನಡಿಗ ಜಾವಗಲ್ ಶ್ರೀನಾಥ್’

    ‘ಟೀಂ ಇಂಡಿಯಾ ವೇಗದ ಬೌಲಿಂಗ್ ಕ್ರಾಂತಿಯ ಕಿಡಿ ಹೊತ್ತಿಸಿದ್ದು ಕನ್ನಡಿಗ ಜಾವಗಲ್ ಶ್ರೀನಾಥ್’

    ಹೈದರಾಬಾದ್: ಟೀಂ ಇಂಡಿಯಾ ಮಾಜಿ ಆಟಗಾರ, ಮೈಸೂರು ಎಕ್ಸ್‌ಪ್ರೆಸ್‌ ಎಂದೇ ಖ್ಯಾತಿ ಪಡೆದಿದ್ದ ಜವಾಗಲ್ ಶ್ರೀನಾಥ್ ಟೀಂ ಇಂಡಿಯಾ ವೇಗದ ಬೌಲಿಂಗ್ ಕ್ರಾಂತಿಯ ಕಿಡಿ ಹೊತ್ತಿದ್ದರು ಎಂದು ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಅಭಿಪ್ರಾಯ ತಿಳಿಸಿರುವ ಲಕ್ಷ್ಮಣ್, ಮೈಸೂರಿನ ಭಾಗದಿಂದ ಬಂದು ವೇಗದ ಬೌಲಿಂಗ್ ಮೂಲಕ ನೋಡುಗರ ಕಣ್ಣಿಗೆ ಹಬ್ಬ ನೀಡುತ್ತಿದ್ದರು. ಭಾರತದ ವೇಗದ ಬೌಲಿಂಗ್‍ನಲ್ಲಿ ಕ್ರಾಂತಿಯನ್ನು ಹುಟ್ಟು ಹಾಕಿದ್ದರು. ವೇಗದ ಬೌಲಿಂಗ್‍ಗೆ ಸಹಕಾರಿಯಲ್ಲದ ಪಿಚ್‍ಗಳಲ್ಲೂ ಅದ್ಭುತ ಸ್ಪೆಲ್ ಮಾಡುತ್ತಿದ್ದ ವೇಗಿ. ಕಠಿಣ ಸಂದರ್ಭದಲ್ಲೂ ಅತ್ಯುತ್ತಮ ಬೌಲಿಂಗ್ ಮಾಡುವ ತುಡಿತವೇ ಅವರ ಯಶಸ್ವಿ ಬೌಲಿಂಗ್‍ಗೆ ಕಾರಣ ಎಂದು ಕನ್ನಡಿಗ ಜಾವಗಲ್ ಶ್ರೀನಾಥ್‍ರನ್ನು ಹೊಗಳಿದ್ದಾರೆ.

    ಟೀಂ ಇಂಡಿಯಾ ಪರ ಅಕ್ಟೋಬರ್ 18, 1991ರಲ್ಲಿ ಪಾದಾರ್ಪಣೆ ಮಾಡಿದ್ದ ಜಾವಗಲ್ ಶ್ರೀನಾಥ್ ಅವರು 67 ಟೆಸ್ಟ್, 229 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್‍ನಲ್ಲಿ 236 ವಿಕೆಟ್, ಏಕದಿನ ಮಾದರಿಯಲ್ಲಿ 315 ವಿಕೆಟ್ ಕಬಳಿಸಿದ್ದಾರೆ. ಅಂದಹಾಗೇ ಪಾಕಿಸ್ತಾನ ವಿರುದ್ಧ 1999ರ ವಿಶ್ವಕಪ್ ಪಂದ್ಯದಲ್ಲಿ ಶ್ರೀನಾಥ್ ಗಂಟೆಗೆ 154.5 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. 11 ವರ್ಷಗಳ ತಮ್ಮ ವೃತ್ತಿ ಜೀವನಕ್ಕೆ 2003ರ ವಿಶ್ವಕಪ್ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದರು. ಆ ವೇಳೆಗೆ ಟೀಂ ಇಂಡಿಯಾ ಪರ ಕಪಿಲ್ ದೇವ್ ಬಳಿಕ ಹೆಚ್ಚು ವಿಕೆಟ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೀನಾಥ್ ಪಾತ್ರರಾಗಿದ್ದರು.

    ಟೀಂ ಇಂಡಿಯಾ ಬೌಲಿಂಗನ್ನು ಎದುರಿಸುತ್ತಿದ್ದ ಬ್ಯಾಟ್ಸ್ ಮನ್‍ಗಳು ತಂಡದ ಸ್ಪಿನ್ ಬೌಲಿಂಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಕೆಲ ಸಮಯದಿಂದ ಟೀಂ ಇಂಡಿಯಾ ವೇಗದ ಬೌಲಿಂಗ್ ಪಡೆ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದು, ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಹಲವು ಅನುಭವಿ ಆಟಗಾರರು ಟೀಂ ಇಂಡಿಯಾ ವೇಗದ ಪಡೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತದಿಂದ ಅದ್ಭುತ ಬೌಲರ್ ಗಳು ಬೆಳಕಿಗೆ ಬರುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ದಿಗ್ಗಜ ಆಟಗಾರ ಜಾಸನ್ ಗಿಲೆಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದರು.

    ಕೊರೊನಾ ಕಾರಣದಿಂದ ವಿಶ್ವ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣದ ಮೂಲಕ ವೃತ್ತಿ ಜೀವನ ವಿಶೇಷ ಅನುಭವ ಹಾಗು ಎದುರಿಸಿದ್ದ ಸನ್ನಿವೇಶಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ವಿವಿಎಸ್ ಲಕ್ಷ್ಮಣ್ ಕೂಡ ತಮ್ಮ ವೃತ್ತಿ ಜೀವನದ ಮೇಲೆ ಪ್ರಭಾವ ಬೀರಿದ ಹಲವು ಆಟಗಾರರಿಗೆ ಗೌರವ ಸಲ್ಲಿಸುತ್ತಿದ್ದು, ಈಗಾಗಲೇ ರಾಹುಲ ದ್ರಾವಿಡ್, ಸಚಿನ್ , ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಅವರಿಗೆ ಗೌರವ ಸಲ್ಲಿಸಿದ್ದಾರೆ.