Tag: farming

  • ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ

    ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ

    – ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಉತ್ಪನ್ನ ಮಾರಾಟ ಮಳಿಗೆ
    – ರೈತರನ್ನು ಅಧಿಕಾರಿಗಳು ಪ್ರೀತಿಯಿಂದ ನಡೆಸಿಕೊಳ್ಳಬೇಕು

    ಶಿವಮೊಗ್ಗ: ರೇಷ್ಮೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಮಾರುಕಟ್ಟೆಗೆ ತೆರಳುವ ರೈತರು ಪೊಲೀಸರು ಮತ್ತು ದಲ್ಲಾಳಿಗಳಿಂದ ಬೇಸತ್ತಿದ್ದು, ಅವರಿಗೆ ತೊಂದರೆ ಆಗದಂತೆ ವಿಶೇಷ ಗುರುತಿನ ಚೀಟಿ ನೀಡುವುದಾಗಿ ರೇಷ್ಮೆ ಸಚಿವ ಡಾ.ನಾರಾಯಣಗೌಡ ಹೇಳಿದರು.

    ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರ ಜೊತೆ ಸಚಿವರು ಸಂವಾದ ನಡೆಸಿದರು. ರೇಷ್ಮೆ ಗಿಡಗಳಿಗೆ ತ್ರಿಪ್ಸ್ ಆ್ಯಂಡ್ ಮೈಟ್ಸ್ ಎನ್ನುವ ಎಲೆ ತಿನ್ನುವ ಕೀಟದ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಹೇಗೆ ತಡೆಗಟ್ಟುವುದು ಮತ್ತು ಹೆಚ್ಚಿನ ಇಳುವರಿ ಕುರಿತು ಮಾಹಿತಿ ನೀಡಲು ವಿಜ್ಞಾನಿಗಳನ್ನು ಕರೆಸಿ ರೈತರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಚಿವರು ರೇಷ್ಮೆ ಹೊಲಕ್ಕೆ ರೈತರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಉಚಿತವಾಗಿ ನುವಾನ್ ಮತ್ತು ರೋಗಾರ್ ಎನ್ನುವ ಔಷಧವನ್ನು ಸಿಂಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಈ ವೇಳೆ ಅತ್ಯುತ್ತಮ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ:  ಭಾರತ್ ಬಂದ್ ಮಾಡಿದ್ದು ರೈತರಲ್ಲ, ಮಧ್ಯವರ್ತಿಗಳು: ನಾರಾಯಣಗೌಡ

    ರೈತರೊಂದಿಗೆ ಹೊಲದಲ್ಲಿ ನಿಂತುಕೊಂಡೇ ಸಂವಾದ ನಡೆಸಿದ ಸಚಿವರು: ರೈತರು ಶ್ರಮ ಜೀವಿಗಳು. ಅವರೊಂದಿಗೆ ಅಧಿಕಾರಿಗಳು ಗೌರವದಿಂದ ನಡೆದುಕೊಳ್ಳಬೇಕು. ರೈತರನ್ನು ಅಧಿಕಾರಿಗಳು ಪ್ರೀತಿಯಿಂದ ನಡೆಸಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ರೇಷ್ಮೆಗೆ ಉತ್ತಮ ದರ ಸಿಗುತ್ತಿದೆ. ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಉತ್ಪನ್ನ ಮಾರಾಟ ಮಳಿಗೆ ಮಾಡುತ್ತೇವೆ. ರೈತರಿಗೆ ನಷ್ಟವಾಗದಂತೆ ತಡೆಯಲು ಹೈಟೆಕ್ ಮಾರುಕಟ್ಟೆ ಕೂಡ ಮಾಡುತ್ತಿದ್ದೇವೆ. ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡುತ್ತೇವೆ ಎಂದರು. ಇದನ್ನೂ ಓದಿ:   ಭಾರತ್ ಬಂದ್ ನಡುವೆ ಕಾರ್ಖಾನೆಗೆ ಬೀಗ ಹಾಕಲು ರೈತರ ಯತ್ನ

    ಸುಮಾರು ಮುಕ್ಕಾಲುಗಂಟೆಗಳ ಕಾಲ ರೈತರೊಂದಿಗೆ ನಿಂತುಕೊಂಡೇ ಸಚಿವರು ಸಂವಾದ ನಡೆಸಿದರು. ರೇಷ್ಮೆ ಬೆಳೆಗಾರರ ಸಮಸ್ಯೆ ಬಗ್ಗೆ ಅರಿವಿದೆ. ಈಗ ದರ ಏರಿಕೆ ಆಗಿದೆ. ರೇಷ್ಮೆ ಬೆಳೆಗಾರರೊಂದಿಗೆ ನಾನು ಸದಾ ಇರುತ್ತೇನೆ. ಯಾವುದೇ ಸಂದರ್ಭಲ್ಲೂ ರೈತರ ಜೊತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

    ರೈತರೊಂದಿಗೆ ಊಟ ಮಾಡಿದ ಸಚಿವರು: ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ನಡೆಸಿದ ಸಚಿವರು, ಬಳಿಕ ರೈತರ ಮನೆಗೆ ತೆರಳಿ ಅವರೊಂದಿಗೆ ಊಟ ಸವಿದರು. ಸಚಿವರು ತಮ್ಮ ಊರಿಗೆ ಬಂದು ತಮ್ಮೊಂದಿಗೇ ಕುಳಿತು ಊಟ ಮಾಡಿದ್ದಕ್ಕಾಗಿ ರೈತರು ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ:  ಬಸ್- ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

    ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ವೇತ, ಹಿರಿಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

  • ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

    ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

    ಚಿಕ್ಕಬಳ್ಳಾಪುರ: ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಳಿಯ ಹಳೆ ಊರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಲಿಖಿತ್(14) ಹಾಗೂ ಹರಿ ಚರಣ್(13) ಮೃತರು. ಮೃತ ಬಾಲಕರು ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆ ಈಜಾಡಲು ಗ್ರಾಮದ ಹೊರವಲಯದ ಜಯಣ್ಣ ಎಂಬುವವರಿಗೆ ಸೇರಿದ ಕೃಷಿಹೊಂಡದ ಬಳಿ ತೆರಳಿದ್ದಾರೆ. ಆದರೆ ಇಬ್ಬರು ಬಾಲಕರಿಗೂ ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬದಲ್ಲಿ ನಿರಾಶ್ರಿತರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

    ಸಂಜೆಯಾದರೂ ಬಾಲಕರು ಮನೆಗೆ ಬಾರದ ಕಾರಣ ಪೋಷಕರು ಹುಡುಕಾಡಿದಾಗ ಕೃಷಿಹೊಂಡದಲ್ಲಿ ಬಾಲಕರ ಮೃತ ದೇಹಗಳು ಪತ್ತೆಯಾಗಿದೆ. ಇನ್ನೂ ಗ್ರಾಮಸ್ಥರೇ ಮೃತದೇಹಗಳನ್ನು ಹೊರತೆಗೆದು ಮೃತರ ಮನೆ ಬಳಿ ತೆಗೆದುಕೊಂಡು ಹೋಗಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ:  ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭ- ಕಾಂಗ್ರೆಸ್, ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟ

    ವಿಷಯ ತಿಳಿದ ಗೌರಿಬಿದನೂರು ಸಿಪಿಐ ಶಶಿಧರ್ ಹಾಗೂ ಗ್ರಾಮಾಂತರ ಠಾಣಾ ಪಿಎಸ್‍ಐ ವಿಜಯ್ ಮೃತ ಕುಟುಂಬಸ್ಥರ ಮನವೊಲಿಸಿ ಮೃತದೇಹಗಳನ್ನು ತಡರಾತ್ರಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆ ಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ:  ನಾನು ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್

    ಇಬ್ಬರು ಬಾಲಕರು ಅಕ್ಕಪಕ್ಕದ ಮನೆಯವರಾಗಿದ್ದು, ಸ್ನೇಹಿತರಾಗಿದ್ದರು. ಸಾವಿನಲ್ಲೂ ಸಹ ಇಬ್ಬರು ಒಂದಾಗಿ ಜೀವ ಬಿಟ್ಟಿದ್ದಾರೆ. ಸದ್ಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿ ಕೆಲಸದಲ್ಲಿ ಸಖತ್ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ

    ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿ ಕೆಲಸದಲ್ಲಿ ಸಖತ್ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅದಿತಿ ಪ್ರಭುದೇವ ಅವರು ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಕೃಷಿಯಲ್ಲಿ ಬ್ಯುಸಿಯಾಗಿರುವ ವೀಡಿಯೋ ಸೋಶಿಯಲ್ ಮೀಡಿಯಾದಕಲ್ಲಿ ಸಖತ್ ವೈರಲ್ ಆಗುತ್ತಿದೆ.

    ಎಲ್ಲರಿಗೂ ನಮಸ್ಕಾರ, ನಾನು ಹಳ್ಳಿಯ ಹೆಣ್ಣು ಮಗಳಾದರೂ, ರೈತ ಕುಟುಂಬದ ಹಿನ್ನೆಲೆ ಇದ್ದರೂ ಈಗಿರುವ ಪರಿಸ್ಥಿತಿಯಲ್ಲಿ ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರವಾಗಲಿ, ಕೆಲಸವಾಗಲಿ, ದಿನಚರಿಯಾಗಲಿ ವಿಭಿನ್ನವಾಗಿ ಇರಬಹುದು. ಆದರೂ ಪ್ರತಿಸಲ ಯಾವುದೇ ಹಳ್ಳಿಗೆ ಹೋದರೂ ಇರುವ ಒಂದೆರಡು ದಿನಗಳಾದರೂ ವಾತಾವರಣವನ್ನು ಪ್ರೀತಿಯಿಂದ ಅನುಭವಿಸುತ್ತೇನೆ. ಪ್ರಕೃತಿಯ ಜೊತೆಗಿನ ನಂಟು ಜೀವನಕ್ಕೆ ಸಾರ್ಥಕತೆಯನ್ನು ನೆಮ್ಮದಿಯನ್ನು ತರುತ್ತದೆ. ಆ ಸಂತೋಷವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ಎಂದಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ಅನೇಕ ಜನರ ಕನಸಂತೆ ನನಗೂ ನನ್ನದೇ ಆದ ಒಂದು ಪುಟ್ಟ ತೋಟ ಮಾಡುವ ಹಂಬಲ. ನೋಡೋಣ, ಮುಂದೊಂದು ದಿನ ಅದು ಆದರೂ ಆಗಬಹುದು. ಅದೆಷ್ಟೋ ಬಾರಿ ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದಿದ್ದರೂ, ಮೈತುಂಬಾ ಸಾಲವಿದ್ದರೂ ಪ್ರತಿನಿತ್ಯ ಕಷ್ಟಪಟ್ಟು ಕೆಲಸ ಮಾಡಿ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವ ದೇವರು ಅನ್ನಬ್ರಹ್ಮ ರೈತನಿಗೆ ಈ ಮೂಲಕ ನಮನ. ಈ ವೀಡಿಯೋ ಪ್ರತಿಯೊಬ್ಬ ರೈತ ಮಿತ್ರನಿಗೆ ಸಮರ್ಪಣೆ ಎಂದು ಅದಿತಿ ಪ್ರಭುದೇವ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ಕೆಲವು ದಿನಗಳ ಹಿಂದೆ ತಮ್ಮ ಊರಿನಲ್ಲಿ ಕಾಲ ಕಳೆದ ವೀಡಿಯೋವನ್ನು ತಮ್ಮದೇ ಹೊಸ ಯೂಟ್ಯೂಬ್ ಚಾನಲ್‍ನಲ್ಲಿ ಹಂಚಿಕೊಂಡಿದ್ದರು. ಕೊಟ್ಟಿಗೆ ಕಸ ಗೂಡಿಸುವುದು, ರೊಟ್ಟಿ ತಟ್ಟುವುದು, ಸಂಜೆ ಹಾಲು ಕರೆಯುವುದರವರೆಗಿನ ಚಟುವಟಿಕೆಗಳ ವೀಡಿಯೋವನ್ನು ಪೋಸ್ಟ್ ಮಾಡಿದ್ದರು.ಇದೀಗ ಗದ್ದೆಯಲ್ಲಿ ಕೆಲಸ ಮಾಡುತ್ತಾ ಸಮಯ ಕಳೆದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಲಾಕ್‍ಡೌನ್‍ನಲ್ಲಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡ್ತಿರುವ ನಟಿ ಕೀರ್ತಿ

    ಲಾಕ್‍ಡೌನ್‍ನಲ್ಲಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡ್ತಿರುವ ನಟಿ ಕೀರ್ತಿ

    ಚೆನ್ನೈ: ಕೊರೊನಾ ಲಾಕ್‍ಡೌನ್ ಸಮಯವನ್ನು ಕೆಲವು ನಟ-ನಟಿಯರು ತಮ್ಮ ಕುಟುಂಬದ ಜೊತೆಗೆ ಕಳೆಯುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲಾಕ್‍ಡೌನ್‍ನಲ್ಲಿ ಏನು ಮಾಡುತ್ತಿದ್ದೇವೆ ಎಂದು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಿದ್ದಾರೆ. ಆದರೆ ತಮಿಳು ನಟಿಯೊಬ್ಬರು ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡೋದ್ರಲಿ ಬ್ಯುಸಿಯಾಗಿದ್ದಾರೆ.

    ತಮಿಳು ನಟಿ ಕೀರ್ತಿ ಪಾಂಡಿಯನ್ ಟ್ರ್ಯಾಕ್ಟರ್ ಓಡಿಸುತ್ತಾ ಹೊಲ ಉಳುಮೆ ಮಾಡುತ್ತಾ ತಮ್ಮ ಲಾಕ್‍ಡೌನ್ ಅವಧಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಾ ಲಾಕ್‍ಡೌನ್ ಸಮಯ ಕಳೆಯುತ್ತಿರುವ ನಟಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮತ್ತೆ ಕೃಷಿಯನ್ನು ಪ್ರಾರಂಭಿಸಿದ್ದೇನೆ ಎಂದು ಕ್ಯಾಪ್ಷನ್ ಜೊತೆಗೆ ಕ್ವಾರಂಟೈನ್, ಫಾರ್‍ಮಿಂಗ್ ಎಂದು ಹ್ಯಾಶ್‍ಟ್ಯಾಗ್ ಹಾಕಿ ಟ್ವಿಟ್ಟರ್, ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

    ಮಲಯಾಳಂನಿಂದ ತಮಿಳಿಗೆ ರಿಮೇಕ್ ಆಗುತ್ತಿರುವ ಹೆಲನ್ ಸಿನಿಮಾದಲ್ಲಿ ಕೀರ್ತಿ ಪಾಂಡಿಯನ್ ಸದ್ಯ ನಟಿಸುತ್ತಿದ್ದಾರೆ. ಕೀರ್ತಿ ತಂದೆ ಅರುಣ್ ಪಾಂಡಿಯನ್ ಕೂಡ ನಟರಾಗಿದ್ದು, ಸಾಕಷ್ಟು ತಮಿಳಿನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಹಲವು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.

    ಕೀರ್ತಿ ಅವರು ಪಕ್ಕಾ ಹಳ್ಳಿ ಹುಡುಗಿಯಂತೆ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿರುವ ವಿಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಕೀರ್ತಿ ಅವರ ಹಳ್ಳಿ ಹುಡುಗಿ ಅವತಾರಕ್ಕೆ ಮನಸೋತಿದ್ದಾರೆ.

    https://www.instagram.com/p/B_FS5CTnDDg/

  • ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?

    ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?

    ಬೆಂಗಳೂರು: ದೇಶಾದ್ಯಂತ ನಿಷೇಧಗೊಂಡಿರುವ ಕ್ಯಾಟ್ ಫಿಶ್ ಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡುತ್ತಿದ್ದ ಹೊಂಡಗಳ ಮೇಲೆ ಇಂದು ಅಧಿಕಾರಿಗಳು ದಾಳಿ ನಡೆಸಿ ಜೆಸಿಬಿ ಮೂಲಕ ತೆರವು ಗೊಳಿಸಿದ್ದಾರೆ.

    ಹೊಸಕೋಟೆ ತಾಲೂಕಿನ ಬೈಲಾನರಸಾಪುರ ಹಾಗು ಎನ್.ಹೊಸಹಳ್ಳಿ ಗ್ರಾಮಗಳಲ್ಲಿ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ತಾಲೂಕು ತಹಶೀಲ್ದಾರ್, ಮೀನುಗಾರಿಕೆ ಇಲಾಖೆ ಹಾಗೂ ನಂದಗುಡಿ ಪೋಲಿಸ್ ಇಲಾಖೆಯ ಅಧಿಕಾರಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

    ಗ್ರಾಮಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದು ಎರಡು ತಂಡಗಳಾಗಿ 2 ಜೆಸಿಬಿಗಳ ಮೂಲಕ ಕ್ಯಾಟ್ ಫಿಶ್ ಹೊಂಡಗಳನ್ನು ತೆರವು ಕಾರ್ಯಚರಣೆ ನಡೆಸಿದರು. ಈ ಹಿಂದೆಯೂ ಸಹ ಜಿಲ್ಲಾ ಎಸ್ಪಿ ರವಿ ಡಿಚನ್ನಣ್ಣನವರ್ ಅವರ ನೇತೃತ್ವದಲ್ಲಿ ತೆರವುಗೊಳಿಸಿದ್ದರೂ ಸಹ ಮತ್ತೆ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಪ್ರಾರಂಭಿಸಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ದಾಳಿ ನಡೆಸಿ ಹೊಂಡಗಳನ್ನು ಧ್ವಂಸಗೊಳಿಸಿದ್ದಾರೆ.

    ಇಂದು ದಿನಪೂರ್ತಿ ಅಧಿಕಾರಿಗಳ ತಂಡ ತೆರವು ಕಾರ್ಯಚರಣೆ ಮಾಡಿ ಎರಡು ಗ್ರಾಮಗಳಲ್ಲಿ ಸಂಪೂರ್ಣ ಕ್ಯಾಟ್ ಫಿಶ್ ಹೊಂಡಗಳನ್ನು ತೆರವುಗೊಳಿಸಿದ್ದಾರೆ. ಕ್ಯಾಟ್ ಫಿಶ್ ಸಾಕಾಣಿಕೆ ಹಾಗೂ ಹೊಂಡಗಳ ಜಾಗದ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಕ್ಯಾಟ್ ಫಿಶ್ ಅಪಾಯವೇಕೆ?
    ಕ್ಯಾಟ್ ಫಿಶ್ ಗಳನ್ನು ಕೊಳೆತ ಕೊಳದೊಳಗೆ ಸಾಕಲಾಗುತ್ತದೆ. ಈ ಮೀನಿಗೆ ಆಹಾರವಾಗಿ ಸತ್ತ ಪ್ರಾಣಿಗಳು, ಸತ್ತ ದನ ಮತ್ತು ನಾಯಿಯ ಶವ ಹಾಕಲಾಗುತ್ತದೆ. ಅದನ್ನೇ ತಿಂದ ಕ್ಯಾಟ್ ಫಿಶ್ ಗಳು ದಷ್ಟ ಪುಷ್ಟವಾಗಿ ಬೆಳೆಯುತ್ತದೆ. ಕಡಿಮೆ ಬೆಲೆ ನಿಗದಿ ಆಗಿರುವ ಕಾರಣ ಗ್ರಾಹಕರು ತಿಳಿಯದೇ ಈ ಮೀನನ್ನು ಖರೀದಿ ಮಾಡುತ್ತಾರೆ.

    ಈ ಮೀನುಗಳಲ್ಲಿ ಪಾದರಸ ಅಂಶವಿದ್ದು, ಮನುಷ್ಯ ನರವ್ಯೂಹಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಕ್ಯಾನ್ಸರ್ ಕಾರಕ ಅಂಶವಿದ್ದು, ಗರ್ಭಿಣಿಯರು ತಿಂದರೆ ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

    ದಷ್ಟ ಪುಷ್ಟವಾಗಿ ಬಳೆದ ಪರಿಣಾಮ ಮೀನಿನಲ್ಲಿ ಮುಳ್ಳು ಕಮ್ಮಿ ಇರುತ್ತದೆ. ಈ ಕಾರಣಕ್ಕೆ ಜನರು ಇದನ್ನು ಹೆಚ್ಚು ತಿನ್ನ ಇಷ್ಟಪಡುತ್ತಾರೆ. ಆದರೆ ಇದನ್ನು ತಿಂದರೆ ರಕ್ತ ಹೆಪ್ಪುಗಟ್ಟಿ ಹೃದಯ ಸಂಬಂಧಿ ಖಾಯಿಲೆ ಬರುತ್ತದೆ. ಮೀನುಗಾರಿಕಾ ಇಲಾಖೆಯ ಅಧ್ಯಯನದಲ್ಲಿ ಈ ಅಂಶಗಳು ದೃಢಪಟ್ಟಿರುವುದರಿಂದ ಈ ಮೀನನ್ನು ಭಾರತದಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿದೆ.

  • ಕೃಷಿಯಲ್ಲಿ ತೊಡಗಿಕೊಂಡ ರುದ್ರೇಶ್ವರ ಮಠದ ಮಹಾಂತ ಸ್ವಾಮೀಜಿ

    ಕೃಷಿಯಲ್ಲಿ ತೊಡಗಿಕೊಂಡ ರುದ್ರೇಶ್ವರ ಮಠದ ಮಹಾಂತ ಸ್ವಾಮೀಜಿ

    ದಾವಣಗೆರೆ: ಮುಂಗಾರು ಶುರುವಾಗಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಕೆಲ ಕಡೆ ಉತ್ತಮ ಬೆಳೆಯಾಗಿದ್ದು, ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ರೀತಿ ದಾವಣಗೆರೆಯ ಹೆಬ್ಬಾಳು ಗ್ರಾಮದ ರುದ್ರೇಶ್ವರ ಮಠದ ಮಹಾಂತ ಸ್ವಾಮೀಜಿಗಳು ಸ್ವತಃ ತಾವೇ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಬಿದ್ದ ಮಳೆಗೆ ಮೆಕ್ಕೆಜೋಳ ಬೆಳೆ ಹಸನಾಗಿ ಬೆಳೆದಿದ್ದು, ಮಹಾಂತ ಸ್ವಾಮೀಜಿಗಳು ಸ್ವತಃ ತಾವೇ ಎಡೆಕುಂಟೆ ಹೊಡೆದು ಮಾದರಿಯಾಗಿದ್ದಾರೆ. ಮಠದ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳದಲ್ಲಿ ಕಳೆ ಇದ್ದು ಸ್ವತಃ ಸ್ವಾಮೀಜಿಗಳೇ ಎಡೆಕುಂಟೆ ಹೊಡೆದು ಕಳೆ ತೆಗೆದಿದ್ದಾರೆ.

    ಶ್ರೀಗಳು ಕೇವಲ ಕೃಷಿಯೊಂದೆ ಅಲ್ಲ ಗೋವುಗಳನ್ನು ಸಂರಕ್ಷಿಸುವುದು, ಭಕ್ತರಿಗೆ ಉಚಿತವಾಗಿ ನಾಟಿ ಔಷಧಿಯನ್ನು ನೀಡುತ್ತಿದ್ದು ಪ್ರತಿನಿತ್ಯ ನೂರಾರು ಭಕ್ತರು ಆಗಮಿಸಲಿದ್ದಾರೆ. ಮಹಾಂತ ಸ್ವಾಮೀಜಿಗಳು ಕಾವಿ ತೊಟ್ಟು ಕೃಷಿ ಮಾಡುತ್ತಿರುವುದು ಇತರರಿಗೂ ಮಾದರಿಯಾಗಿದ್ದಾರೆ.

  • ಮನೆಯಲ್ಲಿನ ವೇಸ್ಟ್ ನೀರನ್ನೇ ಕೃಷಿಗೆ ಬಳಕೆ- ರೈತನ ಸ್ಮಾರ್ಟ್ ಐಡಿಯಾಗೆ ಜನ ಫಿದಾ

    ಮನೆಯಲ್ಲಿನ ವೇಸ್ಟ್ ನೀರನ್ನೇ ಕೃಷಿಗೆ ಬಳಕೆ- ರೈತನ ಸ್ಮಾರ್ಟ್ ಐಡಿಯಾಗೆ ಜನ ಫಿದಾ

    ಚಿಕ್ಕಬಳ್ಳಾಪುರ: ನದಿ, ಕೊಳವೆಬಾವಿ ನೀರು ಇಲ್ಲದಿದ್ದರೇನು ನಾನು ಕೃಷಿ ಮಾಡೇ ಮಾಡುತ್ತೀನಿ ಎಂದು ಪಣ ತೊಟ್ಟ ರೈತರೊಬ್ಬರು ಮನೆಯಲ್ಲಿ ವೇಸ್ಟ್ ಆಗುವ ನೀರನ್ನೇ ಕೃಷಿಗೆ ಬಳಸಿ ಬೇಷ್ ಅನಿಸಿಕೊಂಡಿದ್ದಾರೆ.

    ಹೌದು, ಒಂದು ಕಡೆ ಜಮೀನ ಬಳಿ ಯಾವುದೇ ನದಿ ನಾಲೆಗಳಿಲ್ಲ, ಮತ್ತೊಂದೆಡೆ ಸಾವಿರ ಅಡಿ ಬಗೆದರೂ ಭೂ ತಾಯಿಯ ಓಡಲಲ್ಲೂ ನೀರಿಲ್ಲ. ಕೊರೆದ ಕೊಳವೆಬಾವಿಯಲ್ಲಿ ನೀರು ಸಿಗಲ್ಲ, ಅಪ್ಪಿ ತಪ್ಪಿ ಸಿಕ್ಕರೂ ಯಾವಾಗ ನೀರು ನಿಂತು ಹೋಗುತ್ತೋ ಹೇಳೋಕಾಗಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲೂ ಚಿಕ್ಕಬಳ್ಳಾಪುರ ತಾಲೂಕು ಕುಪ್ಪಹಳ್ಳಿ ಗ್ರಾಮದ ರೈತ ಮುನಿಯಪ್ಪನ ಸ್ಮಾರ್ಟ್ ಐಡಿಯಾ ಮಾಡಿ ಕೃಷಿ ಮಾಡುತ್ತಿದ್ದಾರೆ.

    ಮುನಿಯಪ್ಪನವರು ಸ್ಮಾರ್ಟ್ ಐಡಿಯಾ ಮಾಡಿ ಮನೆಯಲ್ಲಿ ಪಾತ್ರೆ, ಬಟ್ಟೆ ತೊಳೆದು ವ್ಯರ್ಥವಾಗುವ ನೀರನ್ನೇ ಬಳಸಿ ರೇಷ್ಮೆ ಸೊಪ್ಪು ಬೆಳೆಯುತ್ತಿದ್ದಾರೆ. ಇವರು ತಮ್ಮ ಬಳಿ ಇರುವ 30 ಗುಂಟೆ ಮಳೆಯಾಧಾರಿತ ಕೃಷಿ ಭೂಮಿಯಲ್ಲಿ ಮರಕಡ್ಡಿ ಮೂಲಕ 330 ರೇಷ್ಮೇ ಸೊಪ್ಪಿನ ಮರಗಳನ್ನ ಬೆಳೆಸಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಉದ್ಯೋಗ ಖಾತರಿ ಯೋಜನೆಯ ಲಾಭ ಪಡೆದ ರೈತ ಮುನಿಯಪ್ಪ ಮರಕಡ್ಡಿ ಪದ್ಧತಿ ಮೂಲಕ ರೇಷ್ಮೆ ಸೊಪ್ಪು ಬೆಳೆಯೋ ಕಾಯಕ ಶುರುಮಾಡಿದರು. ಆದರೆ ನೀರೇ ಇಲ್ಲದ ಕೇವಲ ಮಳೆ ಆಧಾರಿತ ಭೂಮಿಯಲ್ಲಿ ಬೆಳೆ ಬೆಳೆಯೋದು ಹೇಗೆ ಎಂದು ರೈತ ಹಿಂಜರಿಯಲಿಲ್ಲ. ಮೊದ ಮೊದಲು ಟ್ಯಾಂಕರ್ ಮೂಲಕ ನೀರುಣಿಸೋ ಉಪಾಯ ಮಾಡಿ, ತದನಂತರ ಟ್ಯಾಂಕರ್ ನೀರು ಬಲು ದುಬಾರಿ ಅಗಿದ್ದೇ ತಡ ಕಸದಿಂದ ರಸ ಅನ್ನೋ ಹಾಗೆ ವೇಸ್ಟ್ ಪ್ಲಾಸ್ಟಿಕ್ ಬಾಟಲಿಗಳನ್ನ ಬಳಸಿಕೊಂಡು ರೇಷ್ಮೆ ಮರಗಳಿಗೆ ನೀರುಣಿಸೋ ಕೆಲಸ ಮಾಡುತ್ತಿದ್ದಾರೆ.

    ಮುನಿಯಪ್ಪ ತಮ್ಮ ಮನೆಯಲ್ಲಿ ಪಾತ್ರೆ, ಬಟ್ಟೆ ತೊಳೆದು, ಸ್ನಾನ ಮಾಡಿ ವ್ಯರ್ಥವಾಗುವ ಪೋಲಾಗುವ ನೀರನ್ನ ಒಂದು ಕಡೆ ಶೇಖರಣೆ ಮಾಡಿ ಆ ನೀರನ್ನೇ ರೇಷ್ಮೆ ಸೊಪ್ಪು ಬೆಳೆಯೋಕೆ ಬಳಸುತ್ತಿದ್ದಾರೆ. ಪ್ರತಿ ದಿನ ತಮ್ಮ ಟಿವಿಎಸ್ ಎಕ್ಸ್‍ಎಲ್ ಗಾಡಿ ಮೂಲಕ 20 ಲೀಟರ್ ಪ್ಲಾಸ್ಟಿಕ್ ಕ್ಯಾನಿನಲ್ಲಿ ನೀರು ತಂದು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬುತ್ತಾರೆ, ದಿನಕ್ಕೆ ಎರಡು ಬಾರಿ ಸರದಿಯಂತೆ ಎಲ್ಲಾ ಬಾಟಲಿಗಳಿಗೆ ನೀರು ತುಂಬಿ, ರೇಷ್ಮೆ ಸೊಪ್ಪು ಸೊಂಪಾಗಿ ಬೆಳೆದು ನಿಲ್ಲುವಂತೆ ಶ್ರಮವಹಿಸಿದ್ದಾರೆ. ರೈತ ಮುನಿಯಪ್ಪನ ಐಡಿಯಾ ಕಂಡ ಪಕ್ಕದ ತೋಟದ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸೊಂಪಾಗಿ ಬೆಳೆದು ನಿಂತಿರೋ ರೇಷ್ಮೆ ಸೊಪ್ಪನ್ನ ಎರಡು-ಮೂರು ತಿಂಗಳಿಗೊಮ್ಮೆ ರೈತ ಮುನಿಯಪ್ಪ ಮಾರಾಟ ಮಾಡುತ್ತಿದ್ದು, ಪ್ರತಿ ಬಾರಿ 3 ರಿಂದ 4 ಸಾವಿರ ರೂಪಾಯಿ ಕೈಗೆ ಸಿಗುತ್ತಿದೆಯಂತೆ. ಹೀಗಾಗಿ ಸುಮ್ಮನೆ ಕೂರದೆ ಎಷ್ಟೇ ಕಷ್ಟ ಬಂದರೂ ಇಷ್ಟಪಟ್ಟು ವಿಭಿನ್ನ ಆಲೋಚನೆ ಮಾಡಿ ಕೆಲಸ ಮಾಡಿದರೇ ಪ್ರತಿಫಲ ಸಿಕ್ಕೆ ಸಿಗುತ್ತೆ ಎಂದು ಮುನಿಯಪ್ಪ ಹೇಳಿದ್ದಾರೆ.

  • ಸ್ಟಾರ್ಟ್ ಆಯ್ತು ಮದ್ಯವನ್ನು ಬಳಸಿ ಆಲೂಗಡ್ಡೆ ಬೆಳೆಸುವ ಟ್ರೆಂಡ್!

    ಸ್ಟಾರ್ಟ್ ಆಯ್ತು ಮದ್ಯವನ್ನು ಬಳಸಿ ಆಲೂಗಡ್ಡೆ ಬೆಳೆಸುವ ಟ್ರೆಂಡ್!

    ಲಕ್ನೋ: ಉತ್ತರ ಪ್ರದೇಶದ ಬುಲಂದರ್‌ಶಹರ್‌ನ ರೈತರು ಆಲೂಗೆಡ್ಡೆ ಕೃಷಿಯಲ್ಲಿ ಮದ್ಯವನ್ನು ಬಳಸಿ ಸುದ್ದಿಯಾಗಿದ್ದಾರೆ.

    ಹೌದು, ಸಾಮಾನ್ಯವಾಗಿ ರೈತರು ಬೆಳೆಗಳನ್ನು ಬೆಳೆಯಲು ನೀರು, ಗೊಬ್ಬರ ಬಳಸುತ್ತಾರೆ. ಆದರೆ ಬುಲಂದರ್‌ಶಹರ್‌ನ ರೈತರು ಮಾತ್ರ ಹೊಸ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ಭಾಗದಲ್ಲಿ ರೈತರು ತಮ್ಮ ಬೆಳೆಗಳು ಹಾನಿಯಾಗಬಾರದೆಂದು ಮದ್ಯವನ್ನು ಔಷಧಿ ರೀತಿ ಬಳಸುತ್ತಿದ್ದಾರೆ.

    ಇದನ್ನು ನೋಡಿದ ಕೃಷಿ ತಜ್ಞರು, ಮದ್ಯವನ್ನು ಬೆಳೆಗಳಿಗೆ ಹಾಕುವ ಬದಲು ಸರಿಯಾದ ಔಷಧಿಗಳನ್ನು ಬಳಸಬೇಕು. ಇದರಿಂದ ಬೆಳೆಗೂ ಒಳ್ಳೆಯದು ಮತ್ತು ಅದನ್ನು ಸೇವಿಸುವವರಿಗೂ ಒಳ್ಳೆಯದು ಎಂದು ಹೇಳಿ ಈ ಹೊಸ ವಿಧಾನವನ್ನು ತಿರಸ್ಕರಿಸಿದ್ದಾರೆ. ಹೀಗೆ ಮದ್ಯವನ್ನು ಬಳಸುವುದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಇದು ಹಣವನ್ನು ಹಾಳುಮಾಡುವ ವಿಧಾನ. ಇದರಿಂದ ಏನೂ ಉಪಯೋಗವಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

    ಕೃಷಿ ತಜ್ಞರು ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿಸಿದರೂ, ನಾವು ಮಾತ್ರ ಮದ್ಯವನ್ನೇ ಬಳಸಿ ಆಲೂಗಡ್ಡೆ ಬೆಳೆಸುತ್ತೇವೆ ಅದರಿಂದ ನಮಗೆ ಹೆಚ್ಚು ಇಳುವರಿ ಸಿಗುತ್ತದೆ ಅಂತ ರೈತರು ಹೇಳುತ್ತಿದ್ದಾರೆ.

    ಅದರಲ್ಲೂ ರೈತರೊಬ್ಬರು ತಮ್ಮ ಜಮೀನಿನಲ್ಲಿ ಆಲೂಗಡ್ಡೆ ಬೆಳೆಗೆ ಮದ್ಯವನ್ನು ಸಿಂಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾವು ಒಮ್ಮೆ ಈ ವಿಧಾನ ಅನುಸರಿಸೋಣ ಎಂದು ಜನರು ಚರ್ಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv