Tag: Farmers Protest Site

  • ರೈತರ ಪ್ರತಿಭಟನಾ ನಿರತ ಸ್ಥಳದಲ್ಲಿಯೇ ಮದುವೆಯಾದ ಜೋಡಿ

    ರೈತರ ಪ್ರತಿಭಟನಾ ನಿರತ ಸ್ಥಳದಲ್ಲಿಯೇ ಮದುವೆಯಾದ ಜೋಡಿ

    – ಕೇಂದ್ರಕ್ಕೆ ರೈತರಿಂದ ಎಚ್ಚರಿಕೆ

    ಭೋಪಾಲ್: ಮಧ್ಯಪ್ರದೇಶ ರೈತ ನಾಯಕರೊಬ್ಬರ ಮಗನ ಮದುವೆಯನ್ನು ರೈತರು ಪ್ರತಿಭಟನೆ ಮಾಡುತ್ತಿದ್ದ ಸ್ಥಳದಲ್ಲೇ ಮಾಡಿ ಕೇಂದ್ರಕ್ಕೆ ಎಚ್ಚರಿಕೆ ನೀಡುವ ಮೂಲಕ ಗಮನಸೆಳೆದಿದ್ದಾರೆ.

    ಭೋಪಾಲ್‍ನಿಂದ 500 ಕಿ.ಮೀ ಅಂತರದಲ್ಲಿರುವ ರೇವಾ ಎಂಬ ಪ್ರದೇಶದಲ್ಲಿ ಕಳೆದ ಹಲವು ತಿಂಗಳಿನಿಂದ ರೈತರು ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ಭಾಗವಹಿಸುತ್ತಿರುವ ರೈತ ಸಂಘದ ನಾಯಕರೊಬ್ಬರು ತಮ್ಮ ಮಗನ ಮದುವೆಯನ್ನು ಪ್ರತಿಭಟನಾ ನಿರತ ಪ್ರದೇಶದಲ್ಲೇ ಮಾಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ನಾವು ಎಂತಹ ಸಂದರ್ಭ ಬಂದರೂ ಈ ಜಾಗವನ್ನು ಬಿಟ್ಟು ತೆರಳದೆ ತಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.

    ನಾವು ಕೇಂದ್ರ ಸರ್ಕಾರಕ್ಕೆ ಬಲವಾದ ಸಂದೇಶ ನೀಡುತ್ತಿದ್ದು, ಯಾವುದೇ ಸಂದರ್ಭದಲ್ಲೂ ಈ ಜಾಗವನ್ನು ಬಿಟ್ಟು ಕದಲುವುದಿಲ್ಲ. ಇಲ್ಲೇ ಮದುವೆಯನ್ನು ನೆರವೇರಿಸಿದ್ದೇವೆ. ಈ ಮದುವೆಯಲ್ಲಿ ಯಾವುದೇ ವರದಕ್ಷಿಣೆ ಪಡೆಯದೆ ಮಾಡಿದ್ದೇವೆ ಈ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದೇವೆ ಎಂದು ಮಧ್ಯಪ್ರದೇಶದ ಕಿಸಾನ್ ಯೂನಿಯನ್‍ನ ಜಿಲ್ಲಾ ನಾಯಕ ರಾಮ್‍ಜಿತ್ ಸಿಂಗ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮಧ್ಯಪ್ರದೇಶದ ರೇವಾ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿರುವ ಸುಮಾರು 100ಕ್ಕೂ ಹೆಚ್ಚು ರೈತರ ಸಮ್ಮುಖದಲ್ಲಿ ಮದುವೆಯಾದ ನವ ದಂಪತಿ ಸಚಿನ್ ಮತ್ತು ಆಸ್ಮಾ ಸಿಂಗ್ ಸಂವಿಧಾನವನ್ನು ರಕ್ಷಿಸುವ ಪ್ರಮಾಣ ಮಾಡಿ, ಬಾಬಾ ಸಾಹೇಬ್ ಮತ್ತು ಸಾವಿತ್ರಿಬಾಯ್ ಪುಲೆ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ಸಪ್ತಪದಿ ತುಳಿದರು.

    ನಂತರ ಮದುವೆಯಲ್ಲಿ ತಮಗೆ ಸಿಕ್ಕ ಉಡುಗೊರೆಗಳನ್ನು ಪ್ರತಿಭಟನೆ ನಿರತ ರೈತರಿಗೆ ನೀಡಿ ನಮ್ಮ ಬೇಡಿಕೆ ಈಡೇರುವವರೆಗೆ ಇಲ್ಲಿಂದ ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನೂತನ ರೈತ ಮಸೂದೆಯನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿಯ ಗಡಿ ಪ್ರದೇಶ ಮತ್ತು ಇತರ ಭಾಗಗಳಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.