Tag: farmer

  • ವಿಡಿಯೋ: ರಾಸುಗಳಿಗೆ ನಿತ್ಯ ಮೇವನ್ನು ಹೊಂದಿಸಲು ಮೇವಿನ ಲಾರಿಗಳ ಹಿಂದೆ ಓಡ್ತಿದ್ದಾರೆ ರೈತರು!

    ವಿಡಿಯೋ: ರಾಸುಗಳಿಗೆ ನಿತ್ಯ ಮೇವನ್ನು ಹೊಂದಿಸಲು ಮೇವಿನ ಲಾರಿಗಳ ಹಿಂದೆ ಓಡ್ತಿದ್ದಾರೆ ರೈತರು!

    ತುಮಕೂರು: ಇತ್ತೀಚಿನ ವರ್ಷಗಳಲ್ಲಿ ಬರದ ಛಾಯೆ ಯಾವ ರೀತಿಯಲ್ಲಿದೆ ಅಂದರೆ ರೈತರು ತಾವು ಸಾಕಿರುವ ರಾಸುಗಳಿಗೆ ಮೇವು ಸಿಗುತ್ತಿಲ್ಲ. ಇನ್ನು ಕೆಲ ಕಡೆ ಮಳೆ ಮರೀಚಿಕೆಯಾಗಿದ್ದು, ಬೆಳೆ ಇಲ್ಲದೇ ರೈತಾಪಿ ವರ್ಗ ಹಣೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ರೈತ ಎಷ್ಟು ಬಳಲಿದ್ದಾನೆ ಎನ್ನುವುದಕ್ಕೆ ಜಿಲ್ಲೆಯ ಹೊಲತಾಳು ಗ್ರಾಮದ ಬರದ ಸುದ್ದಿ ಓದಿದ್ರೆ ನಿಮಗೆ ತಿಳಿಯುತ್ತದೆ.

    ಬರದಿಂದಾಗಿ ಹಸುಗಳಿಗೆ ಮೇವು ಸಿಗದ ಹಿನ್ನೆಲೆಯಲ್ಲಿ ಕೊರಟಗೆರೆ ತಾಲೂಕಿನ ಹೊಲತಾಳು ಗ್ರಾಮದ ರೈತರು ಮೇವು ತುಂಬಿದ ಲಾರಿಗಳ ಹಿಂದೆ ಓಡಿ ಅವುಗಳಿಂದ ಬಿದ್ದ ಅಲ್ಪ ಸ್ವಲ್ಪ ಮೇವನ್ನು ಸಂಗ್ರಹಿಸುತ್ತಿದ್ದಾರೆ.

    ನಿತ್ಯ ರಾಜ್ಯ ಹೆದ್ದಾರಿ ಮುಖಾಂತರ ಕೊರಟಗೆರೆ ಮಾರ್ಗವಾಗಿ ಮಧುಗಿರಿ ಶಿರಾ ಪಾವಗಡ ತಲುಪುವ ಮೇವಿನ ಲಾರಿಗಳಿಗಾಗಿ ಕಾದು ಕುಳಿತುಕೊಳ್ಳುವ ರೈತರು ಲಾರಿ ಬಂದ ತಕ್ಷಣ ಅದರ ಹಿಂದೆಯೇ ಓಡುತ್ತಾರೆ.

    ಕೆಲವೊಮ್ಮೆ ಲಾರಿಯಿಂದ ಮೇವನ್ನು ಕೀಳುವ ಪ್ರಯತ್ನ ಮಾಡುತ್ತಾರೆ. ಸಾಧ್ಯವಾಗದಿದ್ದರೆ ಮರದ ಮೇಲೆ ಹತ್ತಿ ಕುಳಿತು ಲಾರಿಗಳು ಮರದ ಅಡಿ ಚಲಿಸುವಾಗ ದೊಣ್ಣೆಯಿಂದ ಮೇವನ್ನು ಬೀಳಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದಾರೆ. ಜನ ಮೇವನ್ನು ಸಂಗ್ರಹಿಸುತ್ತಿರುವ ನೋವಿನ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://youtu.be/KBEXrJn4494

     

  • ಕೊಡಗಿನ ಕಾಫಿ, ಕರಿಮೆಣಸು ಬೆಳಗಾರರಿಗೂ ತಟ್ಟಿದ ಬರಗಾಲದ ಬಿಸಿ

    ಕೊಡಗಿನ ಕಾಫಿ, ಕರಿಮೆಣಸು ಬೆಳಗಾರರಿಗೂ ತಟ್ಟಿದ ಬರಗಾಲದ ಬಿಸಿ

    ಮಡಿಕೇರಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಇದು ಕೊಡಗಿನ ಕಾಫಿ ಹಾಗೂ ಕರಿಮೆಣಸು ಬೆಳೆಗಾರರ ಸ್ಥಿತಿಯಾಗಿದೆ. ಬೇಕಾದಾಗ ಸಮಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಕಾಫಿ ಕರಿಮೆಣಸು ಗಿಡಗಳು ದಿನದಿಂದ ದಿನಕ್ಕೆ ಒಣಗುತ್ತಿವೆ.

    ಡಿಸೆಂಬರ್ ನಲ್ಲಿ ಆರಂಭವಾಗುವ ಕಾಫಿ ಕೂಯ್ಲು ಮಾರ್ಚ್‍ವರೆಗೂ ನಡೆಯುತ್ತದೆ. ನಂತರ ಮಳೆ ಅಥವಾ ನೀರಾವರಿ ಮೂಲಕ ಬೆಳೆಗಾರರು ಕಾಫಿಗಿಡದಲ್ಲಿ ಹೂಗಳನ್ನರಳಿಸಿ ಮುಂದಿನ ಬೆಳೆಗೆ ತೋಟಗಳನ್ನ ಅಣಿಗೊಳಿಸುತ್ತಾರೆ. ಆದರೆ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಕಡಿಮೆ ಮಳೆಯೇ ಬಿದ್ದ ಕಾರಣ ಕಾಫಿ ಗಿಡಗಳು ಒಣಗಲು ಆರಂಭವಾಗಿದೆ.

    ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಕೊಡಗಿನಲ್ಲಿ ಮಳೆಯಾಗಿ ಕಾಫಿ ಗಿಡಗಳಲ್ಲಿ ಹೂ ಬರುವುದು ವಾಡಿಕೆ. ಅದರೆ ಈ ಬಾರಿ ಮಳೆಯೇ ಬಾರದೇ ಗಿಡಗಳು ನಾಶವಾಗುತ್ತಿವೆ. ಆದರೆ ಕಳೆದ ಒಂದು ವಾರದ ಹಿಂದೆ ಮಳೆ ಬಂದು ಕಾಫಿ ಗಿಡಗಳಲ್ಲಿ ಸ್ವಲ್ಪ ಪ್ರಮಾಣದ ಹೂ ಬಿಟ್ಟಿದೆ. ಈಗ ಹೂ ಬಿಟ್ಟಿರುವುದು ಈಗ ಸಮಸ್ಯೆಯಾಗಿದೆ.

    ಕಾಫಿ ಬೆಳೆಯ ಜೊತೆಗೆ ಕರಿಮೆಣಸು ಬೆಳೆಯುತ್ತಾರೆ. ಈ ಬಾರಿ ಪ್ರತಿ ಕೆಜಿ ಮೆಣಸಿಗೆ 700 ರೂ ಇದೆ. ಆದರೆ ಮಳೆ ಇಲ್ಲದೇ ಮೆಣಸಿನ ಬೀಜವೆಲ್ಲವೂ ಹಾಳಾಗುತ್ತಿದ್ದು, ಗುಣಮಟ್ಟ ಕಡಿಮೆಯಾಗ್ತಿದೆ.

    ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಕರಿಮೆಣಸು ಗಿಡಗಳನ್ನು ತೆಗೆದು ಹೊಸದಾಗಿಯೇ ನಾಟಿ ಮಾಡಬೇಕಾಗುತ್ತದೆ. ಹೀಗೆ ಹೊಸದಾಗಿ ನಾಟಿ ಮಾಡಿದ ಬೆಳೆಯಿಂದ ಫಸಲು ಬರಲು ಸುಮಾರು 5 ರಿಂದ 7 ವರ್ಷ ಬೇಕಾಗುತ್ತದೆ. ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಬಾಳೆಲೆ, ನಿಟ್ಟೂರು, ಮಾಯಾಮುಡಿ ಗ್ರಾಮಗಳ ರೈತರು ಈ ತೊಂದರೆಗೆ ಒಳಗಾಗಿದ್ದಾರೆ.

     

  • ಎನ್‍ಆರ್‍ಬಿಸಿ 5ಎ ಕಾಲುವೆ ಹೋರಾಟ: ಸಮಾವೇಶ ಮಾರ್ಗ ಮಧ್ಯೆ ರೈತ ಮುಖಂಡ ಸಾವು

    ಎನ್‍ಆರ್‍ಬಿಸಿ 5ಎ ಕಾಲುವೆ ಹೋರಾಟ: ಸಮಾವೇಶ ಮಾರ್ಗ ಮಧ್ಯೆ ರೈತ ಮುಖಂಡ ಸಾವು

    ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆಯ 5ಎ ಕಾಲುವೆ ಯೋಜನೆ ಜಾರಿಗೆ ಆಗ್ರಹಿಸಿ ರಾಯಚೂರಿನ ಲಿಂಗಸುಗೂರು ತಾಲೂಕಿನ ಮಸ್ಕಿಯಲ್ಲಿ ಆಯೋಜಿಸಿದ್ದ ಬೃಹತ್ ರೈತ ಸಮಾವೇಶಕ್ಕೆ ತೆರಳುತ್ತಿದ್ದ ರೈತ ಮುಖಂಡರೊಬ್ಬರು ಮಾರ್ಗಮಧ್ಯದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಅಮೀನಗಡ ಗ್ರಾಮದ 45 ವರ್ಷದ ಬಸವರಾಜ್ ನಿಡಿಗೋಳ ಹೋರಾಟದಲ್ಲಿ ಸಾವನ್ನಪ್ಪಿದ ರೈತ ಮುಖಂಡ. ಬಸವರಾಜ್ ಅವರು 5 ಎ ಕಾಲುವೆ ಹೋರಾಟ ಸಮಿತಿಯ ಮುಖಂಡರಾಗಿದ್ದು ಹಲವಾರು ಹೋರಾಟಗಳನ್ನ ರೂಪಿಸಿದ್ದರು. ಯೋಜನೆ ಜಾರಿಯಾದ್ರೆ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ ಎಂದು ಸುಮಾರು ವರ್ಷಗಳಿಂದ ಹೋರಾಟ ನಡೆಸಿದ್ರು. ಹೋರಾಟದ ಅಂಗವಾಗಿ ಇಂದು ಮಸ್ಕಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ದುರದೃಷ್ಟವಶಾತ್ ರೈತ ಮುಖಂಡ ಬಸವರಾಜ್ ಸಮಾವೇಶಕ್ಕೆ ಬರುವಾಗಲೇ ಅಸುನೀಗಿದ್ದಾರೆ.

    ಮೃತರ ಅಂತ್ಯ ಕ್ರಿಯೆ ಲಿಂಗಸುಗೂರಿನ ಅಮಿನಗಡ ಗ್ರಾಮದಲ್ಲೇ ನಡೆಯಲಿದ್ದು ಸಮಾವೇಶ ಮುಗಿದ ಬಳಿಕ ರೈತರೆಲ್ಲಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಮಾವೇಶದಲ್ಲಿ ಮಾನ್ವಿ, ಲಿಂಗಸುಗೂರು, ಸಿಂಧನೂರು ತಾಲೂಕಿನ ನೂರಾರು ರೈತರು ಭಾಗವಹಿಸಿದ್ದರು. ಹಿಂದುಳಿದ ಭಾಗವನ್ನು ಸರ್ಕಾರಗಳು ಪದೇ ಪದೇ ನಿರ್ಲಕ್ಷಿಸುತ್ತಿವೆ. 5ಎ ಕಾಲುವೆ ಯೋಜನೆ ಜಾರಿ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ ಅಂತ ರೈತ ಹೋರಾಟಗಾರರು ಸಮಾವೇಶದಲ್ಲಿ ಎಚ್ಚರಿಸಿದ್ದಾರೆ.

     

  • ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಮಾಲೀಕನಾದ ಪಂಜಾಬಿನ ರೈತ!

    ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಮಾಲೀಕನಾದ ಪಂಜಾಬಿನ ರೈತ!

    ಲುಧಿಯಾನಾ: 45 ವರ್ಷದ ವ್ಯಕ್ತಿಯೊಬ್ಬರು ಪರಿಹಾರ ಹಣ ಪಡೆಯುವುದಕ್ಕಾಗಿ ಕೋರ್ಟ್ ಮೆಟ್ಟಿಲೇರಿ ಕೊನೆಗೆ ರೈಲಿನ ಮಾಲಿಕತ್ವವನ್ನೇ ಪಡೆದ ಅಪರೂಪದ ಘಟನೆ ಲುಧಿಯಾನಾದಲ್ಲಿ ನಡೆದಿದೆ.

    ಲುಧಿಯಾನಾದ ಕಟಾನಾ ಗ್ರಾಮದ ನಿವಾಸಿಯಾದ ಸಂಪೂರಣ್ ಸಿಂಗ್ ಅಮೃತಸರ – ನವದೆಹಲಿಯ ನಡುವೆ ಓಡಾಡುವ ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್‍ನ ಒಡೆಯರಾಗಿದ್ದಾರೆ. 2015ರಲ್ಲಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನೀಡಿದ ಆದೇಶದಂತೆ ಉತ್ತರ ರೈಲ್ವೆಯವರು ಸಂಪೂರಣ್ ಸಿಂಗ್ ಅವರಿಗೆ ಜಮೀನಿನ ಹೆಚ್ಚುವರಿ ಪರಿಹಾರ ಹಣ ನೀಡಿರಲಿಲ್ಲ. ಈ ಕಾರಣಕ್ಕಾಗಿ ನ್ಯಾಯಾಧೀಶರಾದ ಜಸ್ಪಾಲ್ ವರ್ಮಾ 12030 ನಂಬರಿನ ರೈಲನ್ನ ಸಂಪೂರಣ್ ಸಿಂಗ್ ಅವರ ಹೆಸರಿಗೆ ಮಾಡಿದ್ದು ತಾಂತ್ರಿಕವಾಗಿ ರೈಲನ್ನ ಸಂತ್ರಸ್ತ ರೈತನಿಗೆ ನೀಡಿದ್ದಾರೆ. ಅಲ್ಲದೆ ಉತ್ತರ ರೈಲ್ವೆಯ ಸ್ಟೇಷನ್ ಮಾಸ್ಟರ್ ಕಚೇರಿಯನ್ನೂ ಕೂಡ ಸಂಪೂರಣ್ ಸಿಂಗ್ ಅವರ ಹೆಸರಿಗೆ ಮಾಡಿದ್ದಾರೆ. ಇದರ ಫಲವಾಗಿ ರೈಲು ಈಗ ಸಂಪೂರಣ್ ಸಿಂಗ್ ಅವರ ಆಸ್ತಿಯಾಗಿದೆ. (ಕಾನೂನು ಪ್ರಕ್ರಿಯೆ ಪ್ರಕಾರ ವ್ಯಕ್ತಿಯೊಬ್ಬ ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನ್ಯಾಯಾಲಯವು ಸಾಲ ನೀಡಿದವರ ಮನವಿಯಂತೆ ಸಾಲ ಪಡೆದವನ ಕೆಲವು ನಿರ್ದಿಷ್ಟ ಆಸ್ತಿಯನ್ನು ಸಾಲ ನೀಡಿದವನ ಹೆಸರಿಗೆ ವರ್ಗಾಯಿಸುವಂತೆ ನಿಯೋಜಿಸುತ್ತದೆ)

    ಏನಿದು ಪ್ರಕರಣ: 2007ರಲ್ಲಿ ಲುಧಿಯಾನಾ ಚಂಡೀಘಢ ರೈಲ್ವೆ ಲೈನ್‍ಗಾಗಿ ರೈತರ ಜಮೀನನ್ನು ಉತ್ತರ ರೈಲ್ವೆ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ನಂತರ ಕೋರ್ಟ್ ಎಕರೆಗೆ 25 ಲಕ್ಷ ರೂ. ಇದ್ದ ಪರಿಹಾರವನ್ನು 50 ಲಕ್ಷ ರೂ.ಗೆ ಹೆಚ್ಚಳ ಮಾಡಿತ್ತು. ಹೀಗಾಗಿ ಸಂಪೂರಣ್ ಸಿಂಗ್ ಅವರಿಗೆ ಒಟ್ಟು 1.47 ಕೋಟಿ ರೂ. ಪರಿಹಾರ ಹಣ ಸಿಗಬೇಕಿತ್ತು. ಆದ್ರೆ ರೈಲ್ವೆಯವರು ಕೊಟ್ಟಿದ್ದು ಮಾತ್ರ 42 ಲಕ್ಷ ರೂ. ಹೀಗಾಗಿ ಹೆಚ್ಚುವರಿ ಪರಿಹಾರ ಹಣಕ್ಕಾಗಿ 2012ರಲ್ಲಿ ಸಂಪೂರಣ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಜನವರಿ 2015ರಲ್ಲಿ ರೈತನಿಗೆ ಬಾಕಿ ನೀಡಬೇಕಿರುವ ಪರಿಹಾರ ಹಣ ನೀಡುವಂತೆ ಕೋರ್ಟ್ ಉತ್ತರ ರೈಲ್ವೆಗೆ ಆದೇಶ ನೀಡಿತ್ತು. ಆದ್ರೆ ರೈಲ್ವೆಯವರು ಹಣ ನೀಡದ ಹಿನ್ನೆಲೆಯಲ್ಲಿ ಆದೇಶವನ್ನು ಅನುಷ್ಠಾನಗೊಳಿಸುವಂತೆ ಕೋರಿ ಸಂಪೂರಣ್ ಸಿಂಗ್ ಮತ್ತೆ ಮನವಿ ಸಲ್ಲಿಸಿದ್ದರು.

    ಸಂಪೂರಣ್ ಸಿಂಗ್ ರೈಲನ್ನು ಏನು ಮಾಡಿದ್ರು?: ಸ್ವರ್ಣ ಶತಾಬ್ದಿ ಎಕ್ಸ್ ಪ್ರೆಸ್ ರೈಲು ನಿಲ್ದಾಣಕ್ಕೆ ಬಂದು ತಲುಪುವುದಕ್ಕೆ 1 ಗಂಟೆ ಮುಂಚೆ ಸಂಪೂರಣ್ ಸಿಂಗ್ ಮತ್ತು ಅವರ ವಕೀಲರಾದ ರಾಕೇಶ್ ಗಾಂಧಿ ನಿಲ್ದಾಣಕ್ಕೆ ಹೋಗಿದ್ದರು. ನಂತರ ರೈಲು ಚಾಲಕನಿಗೆ ಕೋರ್ಟ್ ಆದೇಶ ಪ್ರತಿಯನ್ನು ತೋರಿಸಿದ್ರು. ನಂತರ ಸೆಕ್ಷನ್ ಎಂಜಿನಿಯರ್ ಪ್ರದೀಪ್ ಕುಮರ್ ರೈಲನ್ನು ನ್ಯಾಯಾಲಯದ ಅಧಿಕಾರಿಯ ಸಮ್ಮುಖದಲ್ಲಿ ಬಿಟ್ಟುಕೊಟ್ಟಿದ್ದು, ಈ ಮೂಲಕ ಸದ್ಯಕ್ಕೆ ರೈಲು ನ್ಯಾಯಾಲಯದ ಆಸ್ತಿಯಾಗಿದೆ.

    ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಾವು ರೈಲಿನ ಪ್ರಯಾಣವನ್ನು ನಿಲ್ಲಿಸಲಿಲ್ಲ ಎಂದು ಸಂಪೂರಣ್ ಸಿಂಗ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

    ರೈಲನ್ನ ಮನೆಗೆ ತೆಗೆದುಕೊಂಡು ಹೋಗೋಕಾಗುತ್ತಾ?: ಕೋರ್ಟ್ ಆದೇಶದ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ವಿಭಾಗೀಯ ರೈಲ್ವೆ ಮ್ಯಾನೇಜರ್ ಅನುಜ್ ಪರ್ಕಾಶ್, ರೈತನಿಗೆ ನೀಡಬೇಕಿರುವ ಪರಿಹಾರ ಹಣದ ವಿಚಾರವಾಗಿ ಏನೋ ಸಮಸ್ಯೆಯಾಗಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಇಂತಹ ಆದೇಶಗಳನ್ನು ಕಾನೂನು ಇಲಾಖೆ ಪರಿಶೀಲಿಸುತ್ತದೆ. ಅರ್ಜಿದಾರ 300 ಮೀಟರ್ ಉದ್ದದ ರೈಲನ್ನು ತೆಗೆದುಕೊಂಡು ಏನು ಮಾಡ್ತಾರೆ? ಅದನ್ನು ಮನೆಗೆ ತೆಗೆದುಕೊಂಡು ಹೋಗೋಕಾಗುತ್ತಾ? ಎಂದು ಪ್ರಶ್ನಿಸಿದ್ದಾರೆ.

  • ಅರೆಮಲೆನಾಡು ಹಾಸನ ಜಿಲ್ಲೆಯಲ್ಲೂ ಮೂಡಿದ ಬರ: 1 ಸಾವಿರ ಅಡಿ ಕೊರೆದರೂ ನೀರಿಲ್ಲ

    ಅರೆಮಲೆನಾಡು ಹಾಸನ ಜಿಲ್ಲೆಯಲ್ಲೂ ಮೂಡಿದ ಬರ: 1 ಸಾವಿರ ಅಡಿ ಕೊರೆದರೂ ನೀರಿಲ್ಲ

    ಹಾಸನ: ಅರೆಮಲೆನಾಡು ಎಂದು ಕರೆಸಿಕೊಳ್ಳುವ ಹಾಸನ ಜಿಲ್ಲೆಯಲ್ಲಿ ಬರದ ಛಾಯೆ ಕಾಣಿಸಿಕೊಂಡಿದೆ. ಕಳೆದೆರೆಡು ವರ್ಷಗಳಿಂದ ಮಳೆರಾಯ ಮುನಿಸಿಕೊಂಡಿರುವುದರಿಂದ ಉತ್ತರ ಕರ್ನಾಟಕ ಜಿಲ್ಲೆಗಳಂತೆ ಹಾಸನದಲ್ಲಿ ಈ ಬಾರಿ ಬರ ಕಾಣಿಸಿಕೊಂಡಿದೆ. ಮಳೆ ಇಲ್ಲದೆ ಕುಡಿವ ನೀರಿಗೆ ಹಾಹಾಕಾರ, ಮೇವಿನ ಕೊರತೆ ಒಂದೆಡೆಯಾದ್ರೆ ಕೋಟ್ಯಾಂತರ ಪ್ರಮಾಣದ ಬೆಳೆ ನಷ್ಟ ಒಂದು ಕಡೆಯಾಗಿದೆ.

    ಜಿಲ್ಲೆಯಲ್ಲಿ ಅನಾವೃಷ್ಟಿಯಿಂದ ಅಂದಾಜು 115 ಕೋಟಿ ರೂ. ಬೆಳೆನಷ್ಟ ಸಂಭವಿಸಿದೆ. ಇದಕ್ಕೆ ಇನ್ಬುಟ್ ಸಬ್ಸಿಡಿ ರೂಪದಲ್ಲಿ 115 ಕೋಟಿ ಪರಿಹಾರ ಕೊಡಬೇಕಿದ್ದು, ಇಷ್ಟು ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿ ಹಲವು ದಿನಗಳು ಕಳೆದಿದ್ದರೂ, ಪರಿಹಾರ ಹಣವನ್ನು ಸರ್ಕಾರ ಈವರೆಗೂ ಬಿಡುಗಡೆ ಮಾಡಿಲ್ಲ. ಜಿಲ್ಲೆಯ ವಾರ್ಷಿಕ ಬಿತ್ತನೆ ಪ್ರದೇಶ 2.54 ಲಕ್ಷ ಹೆಕ್ಟೇರ್. ಪ್ರಸಕ್ತ ವರ್ಷ 2.6 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಮಳೆಯಿಲ್ಲದೇ 1.61 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ.33 ಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಳೆ ಹಾಳಾಗಿದೆ.

    ಬರಿದಾದ ಕೆರೆಯ ಒಡಲು: 2016-17 ನೇ ಸಾಲಿನಲ್ಲಿ ಒಟ್ಟು 43 ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಲ್ಲಿ ಸರಕಾರದ 5 ಲಕ್ಷ ಪರಿಹಾರ ಸಿಕ್ಕಿರುವುದು 33 ರೈತರಿಗೆ ಮಾತ್ರ. ಸಾಲದಿಂದಲೇ ಸಾವಿಗೆ ಶರಣಾಗಿದ್ದರೂ ಪರಿಹಾರ ಸಿಗದ ರೈತ ಕುಟುಂಬಗಳು ಅಂಗಲಾಚುವ ಪರಿಸ್ಥಿತಿ ಇದೆ. ಇದು ಬೆಳೆನಷ್ಟ ಮತ್ತು ಅನ್ನದಾತನ ಸ್ಥಿತಿಯಾದರೆ ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿರುವುದರಿಂದ ಸಣ್ಣ ಹಾಗೂ ದೊಡ್ಡ ಕೆರೆ ಸೇರಿ 3200 ಕ್ಕೂ ಹೆಚ್ಚು ಕೆರೆಗಳ ಪೈಕಿ ಬಹುತೇಕ ಕೆರೆಗಳ ಒಡಲು ಬರಿದಾಗಿವೆ.

    ಜಿಲ್ಲಾ ಮಟ್ಟದ ಸರ್ವೇ ಪ್ರಕಾರ, ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ 1074 ಮಿಲಿ ಮೀಟರ್. ಆದರೆ ಮುಂಗಾರು ಆರಂಭದಿಂದ ಡಿಸೆಂಬರ್ ಕೊನೆವರೆಗೆ ಬಿದ್ದಿರುವುದು ಕೇವಲ 778 ಮಿಮೀ ಮಳೆ ಮಾತ್ರ. ಶೇ.28 ರಷ್ಟು ಮಳೆ ಕೊರತೆಯಾಗಿದ್ದು, ತೇವಾಂಶ ಕೊರತೆಯಾಗಿ ಜಿಲ್ಲೆಯಲ್ಲಿ ಶೇ.75 ರಷ್ಟು ಬೆಳೆ ಹಾಳಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯ ಒಟ್ಟು 8 ತಾಲೂಕುಗಳಾದ ಹಾಸನ, ಹೊಳೆನರಸೀಪುರ, ಆಲೂರು, ಬೇಲೂರು, ಚನ್ನರಾಯಪಟ್ಟಣ, ಅರಕಲಗೂಡು, ಅರಸೀಕೆರೆ ಮತ್ತು ಸಕಲೇಶಪುರ ತಾಲೂಕು ಪೈಕಿ ಸಕಲೇಶಪುರ ಹೊರತುಪಡಿಸಿ 7 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ.

    ಕುಸಿದ ಅಂತರ್ಜಲ ಮಟ್ಟ: ಮಳೆಯಿಲ್ಲದೇ ಹೆಚ್ಚು ಕಡೆ ಅಂತರ್ಜಲ ಬತ್ತಿ ಹೋಗಿರುವುದರಿಂದ ಜಿಲ್ಲಾದ್ಯಂತ ಕುಡಿಯುವ ನೀರಿಗೆ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳ ಪರಿಸ್ಥಿತಿ ಹೇಳ ತೀರದ್ದಾಗಿದೆ. ಎಷ್ಟೋ ಹಳ್ಳಿಗಳಲ್ಲಿ ಮನೆ ಕೆಲಸ ಬಿಟ್ಟು ಬಿಂದಿಗೆ ನೀರು ಹಿಡಿದುಕೊಳ್ಳಲು ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ಈಗಲೂ ಇದೆ. ಒಂದು ಬಿಂದಿಗೆ ನೀರು ಪಡೆಯಲು ಗ್ರಾಮಸ್ಥರು, ಮಹಿಳೆಯರು ರಾತ್ರಿ ವೇಳೆಯೂ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬೇಲೂರು, ಅರಸೀಕೆರೆ, ಹೊಳೆನರಸೀಪುರ, ಹಾಸನ, ಅರಸೀಕೆರೆ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಕ್ಷರಶಃ ಬಿಗಡಾಯಿಸಿದೆ. ಮಳೆಯಿಲ್ಲದೇ ಅಂತರ್ಜಲ ಬತ್ತಿ ಹೋಗಿ 1 ಸಾವಿರ ಅಡಿ ಬೋರ್ ವೆಲ್ ಕೊರೆದರೂ ನೀರು ಬರುತ್ತಿಲ್ಲ.ಬಂದರೂ ಅದರಲ್ಲಿ ಫ್ಲೋರೈಡ್ ಅಂಶ ಮೊದಲೇ ಸಂಕಷ್ಟದಲ್ಲಿರುವ ಜೀವಕೆ ವಿಷ ಉಣಿಸುತ್ತಿದೆ.

    ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಿದ್ದ ಜನಪ್ರತಿನಿಧಿಗಳು ಅವರತ್ತ ಇವರು, ಇವರತ್ತ ಅವರು ಬೊಟ್ಟು ಮಾಡಿಕೊಂಡು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಅತ್ತ ರೈತ ಜಾನುವಾರುಗಳಿಗೆ ಕುಡಿಯಲು ನೀರು ಜೊತೆಗೆ ಮೇವಿಲ್ಲದೇ ಪರಿತಪಿಸುತ್ತಿದ್ದಾನೆ. ಮೂಕ ದನಕರುಗಳ ಮೇವಿನ ಸ್ಥಿತಿ ಎಲ್ಲಿಗೆ ಬಂದಿದೆ ಎಂದ್ರೆ ಹಿಂದೆಲ್ಲಾ ಮೆಕ್ಕೆಜೋಳದ ಕಡ್ಡಿ ನಿರುಪಯುಕ್ತ ಎನಿಸಿತ್ತು. ಜೋಳ ಬಿಡಿಸಿದ ನಂತರ ರಾಶಿ ರಾಶಿ ಜೋಳದ ಕಡ್ಡಿಗೆ ಬೆಂಕಿ ಹಚ್ಚಲಾಗುತ್ತಿತ್ತು. ಆದರೀಗ ಆ ಒಣ ಕಡ್ಡಿಯೇ ಜಾನುವಾರುಗಳ ಹೊಟ್ಟೆ ತುಂಬಿಸಬೇಕಿದೆ. ಜಾನುವಾರುಗಳು ಮತ್ತು ರೈತನ ಪರಿಸ್ಥಿತಿ ಹೀಗಿದ್ದರೂ, ಜವಾಬ್ದಾರಿ ಸ್ಥಾನದಲ್ಲಿರುವವರು ಒಮ್ಮೆಯೂ ಇತ್ತ ಮುಖ ಮಾಡಿಲ್ಲ. ಕಲ್ಪವೃಕ್ಷ ತೆಂಗಿನ ಮರಗಳು ಎಳನೀರು ಕೊಡುವ ಬದಲು ಅವುಗಳು ತಮ್ಮ ಜೀವ ಉಳಿಸಿಕೊಳ್ಳಲು ನೀರು ಬೇಡುತ್ತಿವೆ.

    ಪಾಳು ಬಿದ್ದ ಗದ್ದೆಗಳು: ಇತ್ತೀಚೆಗೆ ಕೇಂದ್ರ ಬರ ಅಧ್ಯಯನ ತಂಡವೂ ಸೇರಿದಂತೆ ಒಟ್ಟು 3 ತಜ್ಞರ ತಂಡಗಳು ಜಿಲ್ಲೆಯ ಕೆಲಭಾಗಗಳಲ್ಲಿ ಪ್ರವಾಸ ಮಾಡಿ ಮಳೆ-ಬೆಳೆಯ ಪರಿಸ್ಥಿತಿ ಅವಲೋಕಿಸಿದೆ. ಜಿಲ್ಲೆಯ ಜೀವನದಿ ಹೇಮಾವತಿ ಕಳೆದ 3 ದಶಕಗಳಿಂದ ಕೇವಲ ಹಾಸನಕ್ಕೆ ಮಾತ್ರವಲ್ಲದೇ ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಿಗೂ ಕುಡಿಯಲು ಮತ್ತು ಕೃಷಿಗೆ ನೀರುಣಿಸುತ್ತಿದೆ. ಹೇಮಾವತಿ ಅಚ್ಚುಕಟ್ಟು ಪ್ರದೇಶ ಆರೂವರೆ ಲಕ್ಷ ಹೆಕ್ಟೇರ್ ಇದೆ. ಆದ್ರೆ ಕಳೆದ 2 ವರ್ಷಗಳಿಂದ ಒಮ್ಮೆಯೂ ಹೇಮಾವತಿ ಜಲಾಶಯ ಭರ್ತಿಯಾಗದೇ ಇರುವುದರಿಂದ ನೀರಾವರಿ ಬೆಳೆಗೆ ನೀರಿಲ್ಲದೇ ಲಕ್ಷಾಂತರ ರೈತರ ಅನ್ನದ ಆಸೆಗೆ ಕಲ್ಲು ಬಿದ್ದಿದೆ. ಭತ್ತ ಬೆಳೆಯಬೇಕಿದ್ದ ಗದ್ದೆಗಳು ಪಾಳು ಬಿದ್ದಿವೆ.

    ಹೇಮಾವತಿ ಡ್ಯಾಂನ ನೀರಿನ ಸಂಗ್ರಹ ಕಡಿಮೆಯಾಗಿದೆ. 37 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಜಲಾಶಯದಲ್ಲಿಂದು 3.57 ಟಿಎಂಸಿ ನೀರಿದೆ. ಇದರಲ್ಲಿ ಬಳಕೆಗೆ ನೀರು ಲಭ್ಯವಿಲ್ಲ. ಆದರೆ ಡೆಡ್ ಸ್ಟೋರೆಜ್ ನೀರನ್ನು ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ನದಿಯ ಒಳಹರಿವು ಮಾತ್ರ ಶೂನ್ಯವಾಗಿದೆ. ಇದನ್ನು ನಂಬಿರುವ ಮಂದಿಗೆ ಮುಂದಿನ ದಿನಗಳು ಕಡುಕಷ್ಟವಾಗುವುದು ಖಚಿತ.

     

  • ಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನ

    ಜಮೀನಿಗೆ ಬಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನ

    ಹಾಸನ: ಜಮೀನಿಗೆ ಬಿದ್ದಿದ್ದ ಬೆಂಕಿ ನಂದಿಸಲು ಹೋಗಿ ರೈತರೊಬ್ಬರು ಸಜೀವ ದಹನವಾಗಿರೋ ಘಟನೆ ಜಿಲ್ಲೆಯ ಆಲೂರು ತಾಲೂಕು ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.

    55 ವರ್ಷದ ಪುಟ್ಟಸ್ವಾಮಿಗೌಡ ಸಜೀವ ದಹನವಾದ ರೈತ. ಇವರ ಜಮೀನಿಗೆ ಕಳೆದ ರಾತ್ರಿ ಬೆಂಕಿ ತಗುಲಿತ್ತು. ಬೆಂಕಿ ನಂದಿಸಲು ಹೋಗಿ ಪುಟ್ಟಸ್ವಾಮಿಗೌಡ ಅದರೊಳಗೆ ಸಿಲುಕಿ ಹೊರಬಾರಲಾರದೆ ಬೆಂದು ಹೋಗಿದ್ದಾರೆ. ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆಲೂರು ಸರ್ಕಾರಿ ಆಸ್ಪತ್ರೆಗೆ ಶಾಸಕ ಹೆಚ್‍ಕೆ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅತ್ತ ಬಳ್ಳಾರಿಯಲ್ಲಿನ ತೋರಣಗಲ್‍ನಲ್ಲಿ ಸಾಮೀಲ್‍ಗೆ ಬೆಂಕಿ ಬಿದ್ದು ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಮರದ ದಿಮ್ಮಿಗಳು ಗುರುವಾರ ರಾತ್ರಿಯಿಡೀ ಹೊತ್ತಿ ಉರಿದಿವೆ. ಜಮಾಲುದ್ದಿನ್ ಅನ್ನೋರಿಗೆ ಸೇರಿದ್ದ ಸಾಮಿಲ್‍ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಅಂದಾಜು ಒಂದೂವರೆ ಕೋಟಿ ರೂ. ಮೌಲ್ಯದ ಮರದ ದಿಮ್ಮಿಗಳು ಸುಟ್ಟು ಕರಕಲಾಗಿವೆ. ಇನ್ನು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ 4 ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು.

  • ಹಾವೇರಿ: ಕಾಲುವೆ ನಿರ್ಮಾಣ ವಿರೋಧಿಸಿ ವಿಷಸೇವಿಸಿ ರೈತರಿಂದ ಆತ್ಮಹತ್ಯೆ ಯತ್ನ

    ಹಾವೇರಿ: ಕಾಲುವೆ ನಿರ್ಮಾಣ ವಿರೋಧಿಸಿ ವಿಷಸೇವಿಸಿ ರೈತರಿಂದ ಆತ್ಮಹತ್ಯೆ ಯತ್ನ

    ಹಾವೇರಿ: ಮೂಲನಕ್ಷೆ ಬಿಟ್ಟು ಹಾವೇರಿ ತಾಲೂಕಿನ ಕಳ್ಳಿಹಾಳ ಮತ್ತು ತೋಟದಯಲ್ಲಾಪುರ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರಿಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಅಜ್ಜಪ್ಪ ಮತ್ತು ಹೊನ್ನಪ್ಪ ಆತ್ಮಹತ್ಯೆಗೆ ಯತ್ನಿಸಿದ ರೈತರು. ಕಳೆದ ಎರಡು ವರ್ಷಗಳಿಂದ ಕಳ್ಳಿಹಾಳ ಗ್ರಾಮದ ಬಳಿ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಮೂಲನಕ್ಷೆಯನ್ನ ತೋರಿಸುತ್ತಿಲ್ಲ. ಮೊದಲು ಸರ್ವೇ ಮಾಡಿದ ಜಮೀನು ಬೇರೆ, ಆದ್ರೆ ಈಗ ಕಾಲುವೆ ನಿರ್ಮಾಣ ಮಾಡುತ್ತಿರೋ ಜಮೀನುಗಳು ಬೇರೆ. ಹಾಗಾಗಿ ಅಧಿಕಾರಿಗಳು ಮೂಲನಕ್ಷೆಯನ್ನ ತೋರಿಸಿ ತುಂಗಾಮೇಲ್ದಂಡೆ ಕಾಲುವೆ ನಿರ್ಮಾಣ ಮಾಡಲಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.

    ಕಳ್ಳಿಹಾಳ ಹಾಗೂ ತೋಟದಯಲ್ಲಾಪುರ ಗ್ರಾಮದ ರೈತರು ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಇದೂವರೆಗೂ ಯಾರು ಕಾಲುವೆ ನಿರ್ಮಾಣದ ಮೂಲಕ್ಷೆಯನ್ನು ತೋರಿಸಿಲ್ಲ. ಇನ್ನು ಅಸ್ವಸ್ಥಗೊಂಡ ಅಜ್ಜಪ್ಪ ಹಾಗೂ ಹೊನ್ನಪ್ಪ ರೈತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಜಲ್ಲಾಸ್ಪತ್ರೆ ಮುಂದೆ ರೈತರು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಆಗ್ರಹಿಸಿ ಕಲೆ ಸಮಯ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು. ಇನ್ನಾದ್ರೂ ಅಧಿಕಾರಿಗಳು ಪರಿಶೀಲನೆ ಮಾಡಿ ಮೂಲನಕ್ಷೆ ತೋರಿಸಿ ಕಾಲುವೆ ನಿರ್ಮಾಣ ಮಾಡಬೇಕಿದೆ.

     

  • ಕಣ್ಣಿಲ್ಲದಿದ್ರೂ ಕೃಷಿಯಲ್ಲಿ ಸಾಧಕ: ಕೆಲಸದಾಳುಗಳಿಗೆ ಇವರೇ ಮಾರ್ಗದರ್ಶಕ

    ಕಣ್ಣಿಲ್ಲದಿದ್ರೂ ಕೃಷಿಯಲ್ಲಿ ಸಾಧಕ: ಕೆಲಸದಾಳುಗಳಿಗೆ ಇವರೇ ಮಾರ್ಗದರ್ಶಕ

    ಚಿಕ್ಕಬಳ್ಳಾಪುರ: ಕೆಲವರಿಗೆ ಎಲ್ಲಾ ಅಂಗಗಳೂ ಚೆನ್ನಾಗಿದ್ರೂ ದುಡಿದು ತಿನ್ನೋಕೆ ಸೋಮಾರಿತನ. ಆದರೆ ನಮ್ಮ ಈ ಪಬ್ಲಿಕ್ ಹೀರೋಗೆ ಎರಡೂ ಕಣ್ಣುಗಳಿಲ್ಲ. ಆದ್ರೂ ಕೃಷಿ ಮಾಡ್ತಿದ್ದಾರೆ. ಮಾದರಿ ರೈತನಾಗಿ ನಾಲ್ಕೈದು ಜನಕ್ಕೆ ಕೆಲಸ ಕೊಟ್ಟಿದ್ದಾರೆ. ತಮ್ಮ ಅಂಧತ್ವವನ್ನೇ ಮೆಟ್ಟಿನಿಂತಿದ್ದಾರೆ.

    ಯಲ್ಲಪ್ಪ ನಮ್ಮ ಪಬ್ಲಿಕ್ ಹೀರೋ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದುರ್ಗೇನಹಳ್ಳಿಯವರು. ಇವರಿಗೆ 3 ವರ್ಷವಿದ್ದಾಗ ಅಪ್ಪ ತೀರಿ ಹೋದ್ರು. 5 ವರ್ಷವಿದ್ದಾಗ ಪೋಲಿಯೋ ಅಟ್ಯಾಕ್ ಆಗಿ ಎರಡೂ ಕಣ್ಣುಗಳ ದೃಷ್ಟಿ ಹೋಯ್ತು. ಇಂತ ಕಡುಕಷ್ಟದಲ್ಲಿ ತಾಯಿ ನೆರಳಲ್ಲಿ ಬೆಳೆದ ಯಲ್ಲಪ್ಪ ಇವತ್ತು ಮಾದರಿ ರೈತರಾಗಿದ್ದಾರೆ. ಎರಡು ಎಕರೆ ಬಂಜರು ಭೂಮಿಯನ್ನ ಫಲವತ್ತಾಗಿ ಮಾಡಿ ಪಾಲಿ ಹೌಸ್ ನಿರ್ಮಿಸಿ ಸೌತೆಕಾಯಿ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದಾರೆ.

    ಯಲ್ಲಪ್ಪರಿಗೆ ಮದುವೆಯಾಗಿದ್ದು, ಇವರ ಹೆಂಡತಿ ಇವರನ್ನು ಅರ್ಥಮಾಡಿಕೊಳ್ಳದೇ ದೂರವಾದ್ರು. 12 ವರ್ಷದ ಪುಟ್ಟ ಮಗನಿದ್ದಾನೆ. ಮಗ ಹಾಗೂ ಅಮ್ಮ ಯಲ್ಲಪ್ಪರಿಗೆ ಕೆಲಸದಲ್ಲಿ ಸಾಥ್ ನೀಡುತ್ತಾರೆ. ಕಣ್ಣಿಲ್ಲದಿದ್ರೂ ಯಲ್ಲಪ್ಪ ಸ್ವಾಭಿಮಾನದಿಂದ ಸಾರ್ಥಕತೆಯ ಜೀವನ ನಡೆಸುತ್ತಿದ್ದಾರೆ.

    https://www.youtube.com/watch?v=9e3K0CcFIIc

     

  • ಯೋಗದ ಫಲ: ಬರಗಾಲದಲ್ಲೂ ಭರ್ಜರಿ ಬೆಳೆ ಬೆಳೆದ ರಾಯಚೂರಿನ ರೈತ

    ಯೋಗದ ಫಲ: ಬರಗಾಲದಲ್ಲೂ ಭರ್ಜರಿ ಬೆಳೆ ಬೆಳೆದ ರಾಯಚೂರಿನ ರೈತ

    -ಮೌಂಟ್ ಅಬುನಲ್ಲಿ ಮೊದಲ ಪ್ರಯೋಗವಾದ ಯೋಗಿ ಕೇಥಿ ಪದ್ಧತಿ
    -ಧ್ಯಾನದ ಮೂಲಕ ತೋಟದಲ್ಲಿ ಧನಾತ್ಮಕ ವಾತಾವರಣ ನಿರ್ಮಾಣ

    ರಾಯಚೂರು: ಇಡೀ ರಾಜ್ಯದಲ್ಲಿ ಅವಧಿಗೂ ಮುನ್ನವೇ ಆರಂಭವಾಗಿರುವ ಬಿಸಿಲು ಹಾಗೂ ಬರಗಾಲ ನೀರಿನ ಅಭಾವ ಉಂಟುಮಾಡಿದೆ. ನದಿ, ಕೆರೆಗಳು ಬತ್ತಿ ರೈತರು ಬರಗಾಲದ ಭೀಕರತೆಯನ್ನ ಅನುಭವಿಸುತ್ತಿದ್ದಾರೆ. ಇಂತಹ ಬರಗಾಲದಲ್ಲೂ ರಾಯಚೂರಿನ ರೈತರೊಬ್ಬರು ಬಂಗಾರದ ಬೆಳೆ ಬೆಳೆದಿದ್ದಾರೆ. ಅತ್ಯಂತ ದೇಶಿ ಪದ್ಧತಿಯಲ್ಲಿ ಧ್ಯಾನದ ಮೂಲಕ ಭರ್ಜರಿ ಫಸಲು ಸಿಕ್ಕಿದೆ. ಆ ರೈತನ ಜಮೀನು ನೋಡುವುದೇ ಕಣ್ಣಿಗೊಂದು ಹಬ್ಬ.

    ರಾಯಚೂರಿನ ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ರೈತ ಬಸವರಾಜ್ ಪಪ್ಪಾಯಿ ತೋಟದಲ್ಲಿ ಧ್ಯಾನ ಮಾಡುತ್ತಲೇ ಭರ್ಜರಿ ಬೆಳೆ ಬೆಳೆದಿದ್ದಾರೆ. ಮೂಲತಃ ಸೋಲಾರ್ ಸಿಸ್ಟಮ್ ವ್ಯಾಪಾರಿಯಾಗಿದ್ದ ಬಸವರಾಜ್ ಕೃಷಿಯ ಮೇಲಿನ ಒಲವಿನಿಂದ ಈಗ ರೈತರಾಗಿ ಯಶಸ್ಸು ಕಂಡಿದ್ದಾರೆ. ಇಲ್ಲಿನ ಗೊಲ್ಲದಿನ್ನಿ ಗ್ರಾಮದ ಬಳಿ 3 ಎಕರೆ 32 ಗುಂಟೆ ಜಮೀನು ಹೊಂದಿರುವ ಬಸವರಾಜ್ ಒಂದು ಬೋರ್‍ವೆಲ್ ಸಹಾಯದಿಂದ ಬರಡು ಭೂಮಿಯಲ್ಲಿ ಭರ್ಜರಿ ಪಪ್ಪಾಯಿ, ದಾಳಿಂಬೆ ಬೆಳೆದಿದ್ದಾರೆ.

    ಕೆಂಪು ಮಣ್ಣನ್ನ ಹೊಂದಿರುವ ಭೂಮಿಯಲ್ಲಿ ಹನಿನೀರಾವರಿ ಅಳವಡಿಸಿಕೊಂಡಿದ್ದಾರೆ. ಆದ್ರೆ ಇವರು ಬೆಳೆ ಬೆಳೆಯುತ್ತಿರುವ ಪದ್ಧತಿ ಮಾತ್ರ ಹೊಸತು. ಮೌಂಟ್ ಅಬು ನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ನಡೆಸಿದ ಯಶಸ್ವಿ ಪ್ರಯೋಗವಾದ ಯೋಗಿ ಕೇಥಿ ಪದ್ಧತಿ. ಅಂದ್ರೆ ಹೊಲದಲ್ಲಿ ಧ್ಯಾನ ಮಾಡುವ ಮೂಲಕ ಧನಾತ್ಮಕ ಶಕ್ತಿಯನ್ನ ಉಂಟುಮಾಡಿ ಉತ್ತಮ ಫಸಲನ್ನ ತೆಗೆಯುವುದು. ಈ ಪದ್ದತಿಯಲ್ಲಿ ಹೊಲದ ಮಾಲೀಕರಿಂದ ಹಿಡಿದು ಕೆಲಸಗಾರರು ಸಹ ಯಾವುದೇ ಮಾದಕ ವಸ್ತುಗಳ ವ್ಯಸನ ಮಾಡುವಂತಿಲ್ಲ.

    ಕಳೆದ 20 ವರ್ಷದಿಂದ ಜಾರಿಯಲ್ಲಿರುವ ಯೋಗಿ ಕೇಥಿ ಪದ್ಧತಿಯಲ್ಲಿ ರಾಜಸ್ಥಾನ,ಗುಜರಾತ್, ಮಹಾರಾಷ್ಟ್ರ ರೈತರು ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಈಗ ರಾಜ್ಯದಲ್ಲೂ ಇದರ ಪ್ರಯೋಗ ನಡೆದಿದೆ. ಸಾಮಾನ್ಯ ಪಪ್ಪಾಯಿ ತೋಟದಲ್ಲಿ ಒಂದು ಗಿಡಕ್ಕೆ 60 ಕೆ.ಜಿ ತೂಕದಷ್ಟು ಹಣ್ಣುಗಳು ಬಿಟ್ಟರೆ ಬಸವರಾಜ್ ತೋಟದಲ್ಲಿ 100 ಕೆ.ಜಿ. ತೂಕದಷ್ಟು ಅಂದ್ರೆ ಸರಾಸರಿ 80 ಹಣ್ಣುಗಳು ಸಿಗುತ್ತಿವೆ. ಕ್ರಿಮಿ, ಕೀಟ, ರೋಗಬಾಧೆಯಿಂದ ದೂರವಿರುವ ಬೆಳೆ ಸಂಪೂರ್ಣ ಸಾವಯವ ಗೊಬ್ಬರದಿಂದಾಗಿದ್ದು, ಕಡಿಮೆ ಖರ್ಚಿನ ಬೇಸಾಯವಾಗಿದೆ.

    2400 ಪಪ್ಪಾಯಿ, 2400 ದಾಳಿಂಬೆ ಗಿಡಗಳನ್ನ ಒಂದರ ಪಕ್ಕದಲ್ಲಿ ಒಂದನ್ನ ಬೆಳೆಸಿರುವುದರಿಂದ ಎರಡು ಬೆಳೆಗಳು ಪರಸ್ಪರ ಬೆಳವಣಿಗೆಗೆ ಸಹಕಾರಿಯಾಗಿವೆ. ಏಳು ತಿಂಗಳಲ್ಲೇ ಪಪ್ಪಾಯಿ ಉತ್ತಮ ಫಸಲು ಬಂದಿದ್ದು, ದಾಳಿಂಬೆ ಈಗ ಹೂ ಬಿಡುತ್ತಿದೆ. ಗಿಡದಲ್ಲೆ ಹಣ್ಣು ಮಾಗುವುದರಿಂದ ಅತ್ಯುತ್ತಮ ರುಚಿಯ ಹಣ್ಣುಗಳು ಸಿಗುತ್ತವೆ. ಮುಂಗಡವಾಗಿ ಕಾಯ್ದಿರಿಸಿ ಹಣ್ಣುಗಳನ್ನ ಕೊಳ್ಳಲು ವ್ಯಾಪಾರಿಗಳು ತಾವಾಗಿಯೇ ಬಸವರಾಜ್ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. ಭೀಕರ ಬರಗಾಲವಿದ್ದರೂ ಅತ್ಯಂತ ಕಡಿಮೆ ಪ್ರಮಾಣದ ನೀರನ್ನ ಬಳಸಿ ಬಸವರಾಜ್ ಉತ್ತಮ ಬೆಳೆ ಬೆಳೆದು ಮಾದರಿಯಾಗಿದ್ದಾರೆ. ಬೆಳೆ ಹಾಗೂ ನೂತನ ಕೃಷಿ ಪದ್ದತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತರು ಬಸವರಾಜ್ ಅವರ ಮೋಬೈಲ್ ಸಂಖ್ಯೆ 9886838888 ಕ್ಕೆ ಸಂಪರ್ಕಿಸಬಹುದು.

  • ಸಾಲಬಾಧೆ ತಾಳಲಾರದೆ ವಿದ್ಯುತ್ ತಂತಿ ಹಿಡಿದು ರೈತ ಆತ್ಮಹತ್ಯೆ

    ಸಾಲಬಾಧೆ ತಾಳಲಾರದೆ ವಿದ್ಯುತ್ ತಂತಿ ಹಿಡಿದು ರೈತ ಆತ್ಮಹತ್ಯೆ

    ರಾಯಚೂರು : ಸಾಲಬಾಧೆ ತಾಳಲಾರದೆ ಜಿಲ್ಲೆಯ ಸಿಂಧನೂರು ತಾಲೂಕಿನ ಚಿತ್ರಾಲಿ ಗ್ರಾಮದ ರೈತರೊಬ್ಬರು ಇಂದು ಬೆಳಗಿನ ಜಾವ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    45 ವರ್ಷದ ಸಿದ್ದಯ್ಯಸ್ವಾಮಿ ಮೃತ ರೈತ. 9 ಎಕರೆ ಜಮೀನು ಹೊಂದಿದ್ದ ಸಿದ್ದಯ್ಯಸ್ವಾಮಿ ಅವರು ನೀರಿನ ಕೊರತೆಯಿಂದ ಬೆಳೆ ನಷ್ಟವಾಗಿ ಕೈ ಸಾಲ ಸೇರಿದಂತೆ ಬ್ಯಾಂಕ್‍ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್ ಮೋಟಾರ್ ತಂತಿ ಹಿಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಸಿದ್ದಯ್ಯಸ್ವಾಮಿ ಅವರು ತಮ್ಮ ಒಂಬತ್ತು ಎಕರೆಯಲ್ಲಿ ಭತ್ತವನ್ನು ಬೆಳದಿದ್ದರು. ತುಂಗಭದ್ರ ಕಾಲುವೆಯ ನೀರನ್ನೇ ನಂಬಿ ಭತ್ತ ಬೆಳದಿದ್ದರು. ಬರಗಾಲದಿಂದ ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಸಿದ್ದಯ್ಯಸ್ವಾಮಿ ಬೆಳೆದ ಭತ್ತ ಸಂಪೂರ್ಣವಾಗಿ ಒಣಗಿ ಹೋಗಿತ್ತು. ರೈತ ಸಿದ್ದಯ್ಯಸ್ವಾಮಿ ಜವಳಗೇರಾ ಸಿಂಡಿಕೇಟ್ ಬ್ಯಾಂಕ್ ನಲ್ಲಿ 8 ಲಕ್ಷ ಸಾಲ, ಖಾಸಗಿಯಾಗಿ 8 ಲಕ್ಷ ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.