Tag: farmer

  • ಚಿಕ್ಕಬಳ್ಳಾಪುರ: ಕಣ್ಮನ ಸೆಳೆಯೋ ಫಲ ಪುಷ್ಪ ಪ್ರದರ್ಶನ- ಫೋಟೋಗಳಲ್ಲಿ ನೋಡಿ

    ಚಿಕ್ಕಬಳ್ಳಾಪುರ: ಕಣ್ಮನ ಸೆಳೆಯೋ ಫಲ ಪುಷ್ಪ ಪ್ರದರ್ಶನ- ಫೋಟೋಗಳಲ್ಲಿ ನೋಡಿ

    -ಬಣ್ಣ ಬಣ್ಣದ ಗುಲಾಬಿಗಳಲ್ಲಿ ಅರಳಿ ನಿಂತ ಭೋಗನಂಧೀಶ್ವರ ದೇಗುಲ

    ಚಿಕ್ಕಬಳ್ಳಾಪುರ: ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯೊದ್ರಲ್ಲಿ ಜಿಲ್ಲೆಯ ರೈತರು ಫೇಮಸ್. ನಗರದ ಹೊರ ವಲಯದಲ್ಲಿ ಜಿಲ್ಲಾಡಳಿತ ಹಾಗೂ ನಂದಿ ಉದ್ಯಾನ ಕಲಾ ಸಂಘದಿಂದ ಫಲಪುಷ್ಪ, ತೋಟಗಾರಿಕೆ ಹಾಗೂ ಕೃಷಿ ಮೇಳ ಆಯೋಜಿಸಲಾಗಿದೆ.

    ಇಂದಿನಿಂದ ಮೂರು ದಿನಗಳ ಕಾಲ ಈ ಫಲ-ಪುಷ್ಪ ಪ್ರದರ್ಶನ ನಡೆಯಲಿದೆ. ಮೇಳದಲ್ಲಿ ಸುಂದರ ಹೂಗಳ ರಾಶಿ ಒಂದಡೆಯಾದ್ರೆ, ಮತ್ತೊಂದೆಡೆ ಅಡುಗೆಗೆ ಬಳಸುವ ವಿವಿಧ ತರಕಾರಿಗಳ ಕಲರ್ ಕಲರ್ ಚಿತ್ತಾರ ಎಲ್ಲರನ್ನು ತನ್ನತ್ತ ಸೆಳೆಯುತ್ತಿವೆ.

    ಬಣ್ಣ ಬಣ್ಣದ ಗುಲಾಬಿಗಳಿಂದ ಇತಿಹಾಸ ಪ್ರಸಿದ್ಧ ಶ್ರೀ ಬೋಗನಂದೀಶ್ವರ ದೇವಾಲಯ ನಿರ್ಮಾಣ ಮಾಡಲಾಗಿದೆ. ಮರಳಿನ ಕಲಾಕೃತಿಯಲ್ಲಿ ವಿಶ್ವ ವಿಖ್ಯಾತ ಸರ್ ಎಂ. ವಿಶ್ವೇಶ್ವರಯ್ಯ ಅವರ ಚಿತ್ರಣ ಮೂಡಿಬಂದಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಫಲ-ಪುಷ್ಪ, ತೋಟಗಾರಿಕೆ ಹಾಗೂ ಕೃಷಿ ಮೇಳವನ್ನ ಆಯೋಜಿಸಲಾಗಿದೆ.

    ತರಕಾರಿಗಳಲ್ಲಿ ಮೂಡಿ ಬಂದಿರುವ ಮೊಸಳೆ, ನವಿಲು ಹೀಗೆ ಹತ್ತು ಹಲವು ಪ್ರಾಣಿಗಳ ಕಲಾಕೃತಿಗಳು ಕಣ್ಣಿಗೆ ಮುದ ನೀಡುತ್ತಿದೆ. ಇನ್ನೂ ಮೇಳದಲ್ಲಿ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿದ್ದು ಮೇಳದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಮೇಳದಲ್ಲಿ ರೈತರಿಗೆ ಬೇಕಾದ ಉಪಯುಕ್ತ ಮಾಹಿತಿ ಸಿಕ್ಕಿದ್ದು, ರೈತರಿಗೆ ಸಂತಸದ ಜೊತೆ ಲಾಭದಾಯಕವೂ ಆಗಿದೆ.

  • ನನ್ನ ಸಾವಿಗೆ ಸರ್ಕಾರವೇ ಕಾರಣ: ಡೆತ್‍ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

    ನನ್ನ ಸಾವಿಗೆ ಸರ್ಕಾರವೇ ಕಾರಣ: ಡೆತ್‍ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

    ವಿಜಯಪುರ: ನನ್ನ ಸಾವಿಗೆ ಸರ್ಕಾರವೇ ಕಾರಣ ಅಂತಾ ಡೆತ್ ನೋಟ್ ಬರೆದಿಟ್ಟು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ನಡೆದಿದೆ.

    43 ವರ್ಷದ ಸಂತೋಷ ಕುಲಕರ್ಣಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ.

    `ನನ್ನ ಸಾವಿಗೆ ಬೇರಾರು ಕಾರಣವಲ್ಲ, ಸರ್ಕಾರವೇ ಕಾರಣ. ಸಾಲ ಬಾಧೆಯೇ ನನ್ನ ಸಾವಿಗೆ ಕಾರಣವಾಗಿದೆ. I am so sorry.. I am quite.! ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಅಲ್ಲದೇ ಸಾಲಗಾರರ ಹೆಸರು, ಅವರು ನೀಡಿದ ಸಾಲದ ಸಂಪೂರ್ಣ ವಿವರವನ್ನೂ ಕೂಡ ಅದರಲ್ಲಿ ಉಲ್ಲೇಖಿಸಿದ್ದಾರೆ.

    7 ಎಕರೆ ಜಮೀನು ಹೊಂದಿದ್ದ ಸಂತೋಷ್, ಬ್ಯಾಂಕ್ ನಲ್ಲಿ 7 ಲಕ್ಷ ಮತ್ತು ಇತರೆ 5 ಲಕ್ಷ ಸಾಲ ಮಾಡಿದ್ದರು. ಇದೀಗ ಕಬ್ಬು ಮತ್ತು ದಾಳಿಂಬೆ ಬೆಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಸಾಲದ ಹೊರೆ ತಾಳಲಾರದೆ ಈ ನಿರ್ಧಾರ ಕೈಗೊಂಡಿದ್ದಾರೆ.

    ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಮಾರಾಟವಾಗ್ತಿದೆ ಜೀವ ಜಲ

    ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಮಾರಾಟವಾಗ್ತಿದೆ ಜೀವ ಜಲ

    -ಕುಡಿಯಲು ನೀರಿಲ್ಲದಿದ್ದರೂ ಜೋರಾಗಿದೆ ತುಂಗಭದ್ರೆಯಲ್ಲಿ ನೀರಿನ ವ್ಯಾಪಾರ

    -ಖಾಸಗಿ ಬೋರ್‍ವೆಲ್‍ಗಳ ಮೇಲೆ ಹಿಡಿತ ಸಾಧಿಸುವ ಜಿಲ್ಲಾಡಳಿತದ ಉದ್ದೇಶ ವಿಫಲ

    ರಾಯಚೂರು: ಜಿಲ್ಲೆಯಲ್ಲಿ ಹರಿಯುವ ತುಂಗಾಭದ್ರ ನದಿ ಸಂಪೂರ್ಣ ಬತ್ತಿಹೋಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಭಣಿಸುತ್ತಿದೆ. ಪರಸ್ಥಿತಿ ಹೀಗಿದ್ದರೂ ನದಿ ತಟದಲ್ಲಿ ಖಾಸಗಿ ಬೋರ್‍ವೆಲ್ ಕೊರೆದಿರುವ ರೈತರು ನೀರನ್ನ ಆಂಧ್ರಪ್ರದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಖಾಸಗಿ ಬೋರ್‍ವೆಲ್, ಕೆರೆಗಳನ್ನ ಸ್ವಾಧೀನಕ್ಕೆ ಪಡೆದು ಬರಗಾಲ ನಿರ್ವಹಣೆಗೆ ಮುಂದಾಗಿರುವ ಜಿಲ್ಲಾಡಳಿತಕ್ಕೆ ಹಿನ್ನೆಡೆಯಾಗಿದೆ.

    ರಾಯಚೂರಲ್ಲಿ ನೀರಿನ ಸಮಸ್ಯೆ ಹೇಳತೀರದ ಮಟ್ಟಕ್ಕೆ ಇದ್ರೂ ಜಿಲ್ಲೆಯಿಂದ ಆಂಧ್ರಪ್ರದೇಶದ ಗಡಿಯ ಜಮೀನುಗಳಿಗೆ ನೀರು ಮಾರಾಟವಾಗುತ್ತಿದೆ. ಅದೂ ಬತ್ತಿ ಹೋಗಿರೋ ತುಂಗಾಭದ್ರಾ ನದಿಯ ಮೂಲಕ ನೀರನ್ನ ಸರಬರಾಜು ಮಾಡಲಾಗುತ್ತಿದೆ. ರಾಜ್ಯದ ನದಿಯ ಈ ದಡದಿಂದ ಆಂಧ್ರಪ್ರದೇಶದ ಆ ದಡದವರೆಗೆ ಪೈಪ್‍ಲೈನ್ ಅಳವಡಿಸಿ ಬೋರ್‍ವೆಲ್ ನೀರನ್ನ ಹರಿಸಲಾಗುತ್ತಿದೆ. ಇನ್ನೂ ಕೆಲ ರೈತರು ನದಿಯಲ್ಲಿ ಹೊಂಡಗಳನ್ನ ನಿರ್ಮಿಸಿ ಅದಕ್ಕೆ ನೀರನ್ನ ಬಿಡುತ್ತಿದ್ದಾರೆ. ಆಂಧ್ರ ರೈತರು ಆ ಹೊಂಡಗಳಿಂದ ನೀರನ್ನ ಪಂಪ್ ಸೆಟ್ ಮೂಲಕ ಪಡೆದುಕೊಳ್ಳುತ್ತಿದ್ದಾರೆ.

    ನದಿ ತಟದಲ್ಲಿ ಬೋರ್‍ವೆಲ್ ಕೊರೆದಿರುವ ರೈತರಲ್ಲಿ ಕೆಲವರ ಬೆಳೆ ಕಟಾವಾಗಿದ್ದು, ಇನ್ನೂ ಕೆಲವು ರೈತರ ಬೆಳೆ ಹಾಳಾಗಿದ್ದರಿಂದ ಆಂಧ್ರಪ್ರದೇಶದ ರೈತರಿಗೆ ನೀರು ಮಾರುತ್ತಿದ್ದಾರೆ. ಭತ್ತ, ಮೆಕ್ಕೆಜೋಳ ಬೆಳೆದಿರುವ ಆಂಧ್ರದ ಕರ್ನೂಲ್ ಜಿಲ್ಲೆಯ ಮಾಧಾವರಂ, ಅಗಸನೂರು, ಕಂದಕನೂರು, ರಾಂಪುರ ಗ್ರಾಮಗಳ ರೈತರು ರಾಜ್ಯದ ಚಿಕ್ಕಮಂಚಾಲಿ, ತುಂಗಭದ್ರಾ, ಬುಳ್ಳಾಪುರ, ಎಲೆಬಿಚ್ಚಾಲಿ, ಕಮಲಾಪುರ ಗ್ರಾಮಗಳ ಬೋರ್‍ವೆಲ್‍ನಿಂದ ನೀರು ಪಡೆಯುತ್ತಿದ್ದಾರೆ.

    ಮೊದಲಿನಿಂದಲೂ ಬೇಸಿಗೆಯಲ್ಲಿ ನೀರಿನ ವ್ಯವಹಾರ ನಡೆಯುತ್ತಲೇ ಬಂದಿದೆ. ದಿನ, ವಾರದ ಲೆಕ್ಕದಲ್ಲಿ ನೀರನ್ನ ಮಾರಾಟ ಮಾಡುತ್ತಿದ್ದಾರೆ. ಆದ್ರೆ ಈ ವರ್ಷ ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ಖಾಸಗಿ ಬೋರ್‍ವೆಲ್‍ಗಳನ್ನ ವಶಕ್ಕೆ ಪಡೆದು ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ನದಿ ತಟದ ಜನ ನೀರನ್ನ ಆಂಧ್ರಪ್ರದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ. ಎಲ್ಲೆಲ್ಲಿ ನೀರಿನ ಮಾರಾಟ ನಡೆಯುತ್ತಿದೆ ಅನ್ನೋದನ್ನ ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

    ಒಟ್ನಲ್ಲಿ, ಜಿಲ್ಲೆಯ ಕೆಲವೆಡೆ ದುಡ್ಡು ಕೊಟ್ರೂ ನೀರು ಸಿಗದ ಪರಸ್ಥಿತಿ ಎದುರಾಗಿರುವಾಗ ಜಿಲ್ಲೆಯ ರೈತರೇ ಆಂಧ್ರಕ್ಕೆ ನೀರು ಮಾರಾಟ ಮಾಡುತ್ತಿರುವುದು ವಿಪರ್ಯಾಸ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ನೀರನ್ನ ಒದಗಿಸಬೇಕಿದೆ.

     

  • ಮಂಡ್ಯದಲ್ಲಿ ಉಳುಮೆ ಮಾಡುತ್ತಲೇ ಸಾವನ್ನಪ್ಪಿದ ಅನ್ನದಾತ

    ಮಂಡ್ಯದಲ್ಲಿ ಉಳುಮೆ ಮಾಡುತ್ತಲೇ ಸಾವನ್ನಪ್ಪಿದ ಅನ್ನದಾತ

    ಮಂಡ್ಯ: ಜಮೀನಿನಲ್ಲಿ ಉಳುಮೆ ಮಾಡುವಾಗ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

    58 ವರ್ಷದ ಬೋರೆಗೌಡ ಎಂಬವರೇ ಹೃದಯಾಘಾತದಿಂದ ಸಾವನ್ನಪ್ಪಿದ ಕರ್ಮಯೋಗಿ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿತ್ತು. ಹೀಗಾಗಿ ಬೋರೆಗೌಡ ಅವರು ಶುಕ್ರವಾರ ಮಧ್ಯಾಹ್ನ ತಮ್ಮ ಮಗನಿಗೆ ಬಿತ್ತನೆ ಬೀಜ ತರಲು ಹೇಳಿ, ಜಮೀನಲ್ಲಿ ಉಳುಮೆ ಮಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದು ಬಿದಿದ್ದಾರೆ.

    ಈ ವೇಳೆ ಅಕ್ಕಪಕ್ಕದ ಜಮೀನಲ್ಲಿ ಕೆಲಸ ಮಾಡ್ತಿದ್ದ ರೈತರು ಬರುವಷ್ಟರಲ್ಲಿ ರೈತ ಬೋರೇಗೌಡ ಸಾವನ್ನಪ್ಪಿದ್ದಾರೆ. ಒಂದು ಕಡೆ ಉಳುಮೆಗೆಂದು ಕಟ್ಟಿದ್ದ ಎತ್ತುಗಳು, ಮತ್ತೊಂದು ಕಡೆ ಹೃದಯಾಘಾತದಿಂದ ಜಮೀನಲ್ಲೇ ಮೃತಪಟ್ಟ ರೈತನ ದೃಶ್ಯ ಎಂತಹವರ ಕಣ್ಣಲ್ಲೂ ಕಣ್ಣೀರು ತರಿಸುವಂತಿತ್ತು.

  • ಬಳ್ಳಾರಿ: ಆಕಸ್ಮಿಕ ಬೆಂಕಿ, ಲಕ್ಷಾಂತರ ಮೌಲ್ಯದ ಬಾಳೆ ಕಬ್ಬು ಬೆಂಕಿಗಾಹುತಿ !

    ಬಳ್ಳಾರಿ: ಆಕಸ್ಮಿಕ ಬೆಂಕಿ, ಲಕ್ಷಾಂತರ ಮೌಲ್ಯದ ಬಾಳೆ ಕಬ್ಬು ಬೆಂಕಿಗಾಹುತಿ !

    ಬಳ್ಳಾರಿ: ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ, ಕಬ್ಬು ಬೆಂಕಿಗಾಹುತಿಯಾದ ಬೆಂಕಿ ಅವಘಡ ಜಿಲ್ಲೆಯ ಹೊಸಪೇಟೆ ತಾಲೂಕಿನ ಅನಂತಶಯನ ಗುಡಿ ಗೇಟ್ ಬಳಿ ನಡೆದಿದೆ.

    ಮೊದಲಿಗೆ ಶ್ರೀ ರಾಮನಗರ ಮಾಗಣಿ ಪ್ರದೇಶದ ಅಮೀರ್ ಎಂಬವರ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಬೆಂಕಿ ಪಕ್ಕದ ಜಮೀನುಗಳಿಗೆ ವ್ಯಾಪಿಸಿಕೊಂಡಿತ್ತು. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಶೀಘ್ರವೇ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಬರಗಾಲದ ವೇಳೆಯಲ್ಲಿ ಬೆಂಕಿ ಅನಾಹುತ ಸಂಭವಿಸಿರುವುದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ.

     

  • ಅಧಿಕಾರಿಗಳ ನಿರ್ಲಕ್ಷ್ಯ: 8 ದಿನಗಳಿಂದ ತೊಗರಿ ಮಾರಾಟ ಮಾಡಲು ಹರಸಾಹಸ ಪಡುತ್ತಿದ್ದಾರೆ ಯಾದಗಿರಿ ರೈತರು

    ಅಧಿಕಾರಿಗಳ ನಿರ್ಲಕ್ಷ್ಯ: 8 ದಿನಗಳಿಂದ ತೊಗರಿ ಮಾರಾಟ ಮಾಡಲು ಹರಸಾಹಸ ಪಡುತ್ತಿದ್ದಾರೆ ಯಾದಗಿರಿ ರೈತರು

    ಯಾದಗಿರಿ: ಜಿಲ್ಲೆಯಲ್ಲಿ ಕಳೆದ 8 ದಿನಗಳಿಂದ ತೊಗರಿ ಕೇಂದ್ರ ಬಂದ್ ಆದ ಪರಿಣಾಮ ರೈತರು ತಾವು ಕಷ್ಟದಿಂದ ಬೆಳೆದ ತೊಗರಿಯನ್ನು ಮಾರಾಟ ಮಾಡಲು ಕಷ್ಟಪಡುತ್ತಿದ್ದಾರೆ.

    ಕಳೆದ 8 ದಿನಗಳಿಂದ ರೈತರು ಸಾವಿರಾರು ಕ್ವಿಂಟಲ್ ತೊಗರಿ ಧಾನ್ಯಗಳನ್ನು ವಾಹನದಲ್ಲಿ ಹಾಕಿಕೊಂಡು ಕೃಷಿ ಉತ್ಪನ್ನ ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಿದ್ದಾರೆ. ಆದರೆ ತೊಗರಿ ಖರೀದಿ ಕೇಂದ್ರದಲ್ಲಿ ಖರೀದಿಸುವರು ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿತದ ಪರಿಣಾಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ವಿಂಟಲ್ ತೊಗರಿಗೆ 5500 ರೂಪಾಯಿಯ ಬೆಂಬಲ ಬೆಲೆಯೊಂದಿಗೆ ತೊಗರಿ ಖರೀದಿಸುತ್ತಿದೆ. ಕೇಂದ್ರ ಸರಕಾರದ ಭಾರತೀಯ ಆಹಾರ ನಿಗಮವು ತೊಗರಿ ಖರೀದಿ ಕೇಂದ್ರ ತೆಗೆದು ತೊಗರಿ ಖರೀದಿ ಮಾಡಲಾಗುತ್ತಿತ್ತು.

    ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಹೊರಭಾಗದ ಹಸನಾಪುರನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಳೆದ 8 ದಿನಗಳಿಂದ ತೊಗರಿ ಖರೀದಿ ಕೇಂದ್ರಕ್ಕೆ ಅಧಿಕಾರಿಗಳು ಬೀಗ ಹಾಕಿಕೊಂಡು ಹೋಗಿದ್ದಾರೆ. ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಖರೀದಿ ಮಾಡದೇ ನಿಷ್ಕಾಳಜಿ ತೋರಿಸುತ್ತಿದ್ದಾರೆ. ಈ ಹಿಂದೆ ಕೂಡ ಸಮರ್ಪಕವಾಗಿ ತೊಗರಿ ಖರೀದಿ ಮಾಡಿಲ್ಲ. ಈಗ ಮತ್ತೆ ರೈತರಿಂದ ತೊಗರಿ ಖರೀದಿ ಮಾಡಲು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ.

    ತೊಗರಿ ಖರೀದಿ ಕೇಂದ್ರ ಸ್ಥಗಿತ ಹಿನ್ನೆಲೆಯಲ್ಲಿ ಜಿಲ್ಲೆಯ ಅನ್ನದಾತರು ಕಂಗಾಲಾಗಿದ್ದಾರೆ. ಬಿಸಿಲಿನ ತಾಪವೂ ಹೆಚ್ಚಾಗಿದ್ದು ರೈತರು ತಾವು ಬೆಳೆದ ತೊಗರಿಯನ್ನು ತೆಗೆದುಕೊಂಡು ಖರೀದಿ ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ಇನ್ನು ಕೆಲ ರೈತರು ಸಾಗಾಟ ವೆಚ್ಚಕ್ಕೆ ಹೆದರಿ ಎಪಿಎಂಸಿಯಲ್ಲಿ ಕುಳಿತಿದ್ದಾರೆ. ಹಗಲು ರಾತ್ರಿಯನ್ನದೇ ತೊಗರಿ ಯಾರಾದ್ರು ಕಳ್ಳತನ ಮಾಡಬಹುದೆಂದು ತಾವು ಮಾರಾಟಕ್ಕೆ ತಂದಿದ್ದ ಧಾನ್ಯಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಸರಿಯಾಗಿ ಊಟ ನಿದ್ದೆ ಇಲ್ಲದೇ ರೈತರು ತೊಗರಿ ಖರೀದಿ ಕೇಂದ್ರದ ಬಾಗಿಲು ಯಾವಾಗ ತೆಗೆಯುತ್ತೆ ಎಂದು ಕಾಯುತ್ತಿದ್ದಾರೆ. ಇನ್ನು ಮುಂದಾದ್ರು ಈ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಜರುಗಿಸುವ ಮೂಲಕ ರೈತರ ನೆರವಿಗೆ ಬರಬೇಕಿದೆ.

     

  • ಹೆಚ್‍ಡಿ ಕುಮಾರಸ್ವಾಮಿಗೆ ಡೆತ್‍ನೋಟ್ ಬರೆದಿಟ್ಟು ಮಂಡ್ಯದಲ್ಲಿ ರೈತ ಆತ್ಮಹತ್ಯೆ

    ಹೆಚ್‍ಡಿ ಕುಮಾರಸ್ವಾಮಿಗೆ ಡೆತ್‍ನೋಟ್ ಬರೆದಿಟ್ಟು ಮಂಡ್ಯದಲ್ಲಿ ರೈತ ಆತ್ಮಹತ್ಯೆ

    ಮಂಡ್ಯ: ನಾನು ಸತ್ತ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಮುಖ ನೋಡಲು ಬರಬೇಕು ಎಂದು ಪತ್ರ ಬರೆದಿಟ್ಟು ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಬಿ.ಹೊಸೂರು ಗ್ರಾಮದಲ್ಲಿ ನಡೆದಿದೆ.

    ಸಾಲಬಾಧೆಯಿಂದ ಬೇಸತ್ತಿದ್ದ ರೈತ ಶಿವಣ್ಣ ಇಂದು ತಮ್ಮ ಜಮೀನಿನ ಬಳಿ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್‍ನೋಟ್ ಬರೆದಿಟ್ಟಿರುವ ಶಿವಣ್ಣ, ಹೆಎಚ್‍ಡಿ. ದೇವೇಗೌಡರಿಗೆ ತಮ್ಮ ಕೊನೆಯ ನಮಸ್ಕಾರ ತಿಳಿಸಿದ್ದಾರೆ. ತನ್ನ ಸಾವಾದ ಮೇಲೆ ಕೊನೆ ದರ್ಶನ ಪಡೆಯಲು ಕುಮಾರಸ್ವಾಮಿ ಅವರು ಬರಬೇಕು. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಹೆಚ್‍ಡಿ.ಕುಮಾರಸ್ವಾಮಿ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಡೆತ್ ನೋಟ್‍ನಲ್ಲಿ ಬರೆದಿದ್ದಾರೆ.

    ಇನ್ನು ರೈತ ಶಿವಣ್ಣರಿಗೆ ಸುಮಾರು ಆರು ಎಕರೆ ಜಮೀನಿದ್ದು ಕಬ್ಬು, ರಾಗಿ, ಭತ್ತ ಬೆಳೆಯುತ್ತಿದ್ರು. ಭೀಕರ ಬರಗಾಲದಿಂದಾಗಿ ಸುಮಾರು ಐದು ಲಕ್ಷ ರೋಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ರು. ಇದ್ರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾರುಕೋಲು ಹಿಡಿದ್ರೆ ಯಾವ ರೈತರಿಗೂ ಕಮ್ಮಿ ಇಲ್ಲ ನಮ್ಮ ಪಬ್ಲಿಕ್ ಹೀರೋ

    ಬಾರುಕೋಲು ಹಿಡಿದ್ರೆ ಯಾವ ರೈತರಿಗೂ ಕಮ್ಮಿ ಇಲ್ಲ ನಮ್ಮ ಪಬ್ಲಿಕ್ ಹೀರೋ

    ರಾಯಚೂರು: ಒಬ್ಬ ಅನಕ್ಷರಸ್ಥ ಬಡ ವಿಧವೆ ಮಹಿಳೆ ಐವರು ಮಕ್ಕಳೊಂದಿಗೆ ಸುಂದರ ಬದುಕು ಕಟ್ಟಿಕೊಂಡು ಪಬ್ಲಿಕ್ ಹೀರೋ ಆಗಿದ್ದಾರೆ

    ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮದ ನಿವಾಸಿ ಯಂಕಮ್ಮ ನಮ್ಮ ಪಬ್ಲಿಕ್ ಹೀರೋ. 10 ವರ್ಷಗಳ ಹಿಂದೆ ಗಂಡ ಸಾವನ್ನಪ್ಪಿದಾಗ ಎದೆಗುಂದದ ಯಂಕಮ್ಮ ಅವರು ಐವರು ಮಕ್ಕಳೊಂದಿಗೆ ಬಾಳಿ ಬದುಕಬೇಕು ಎಂಬ ಛಲ ಬೆಳೆಸಿಕೊಂಡವರು. ಇರೋ 8 ಎಕರೆಯ ಜಮೀನಿಗೆ ತಾವೇ ಕಚ್ಚೆ ಕಟ್ಟಿ ಇಳಿದ್ರು. ಎತ್ತುಗಳಿಗೆ ನೊಗ ಕಟ್ಟಿದ್ರು. ಬಿತ್ತಿ ಬೆಳೆದು ಮಾರುಕಟ್ಟೆಗೆ ಬೆಳೆ ಸಾಗಿಸೋ ತನಕ ಎಲ್ಲಾ ಕೆಲಸವನ್ನೂ ಯಂಕಮ್ಮ ನವರೇ ಮಾಡುತ್ತಾರೆ.

    ಐವರು ಮಕ್ಕಳಲ್ಲಿ ಓರ್ವ ಮಗಳಿಗೆ ಮದುವೆ ಮಾಡಿದ್ದಾರೆ. ಮೂರು ಜನ ಹೆಣ್ಣು ಮಕ್ಕಳು ಹೈಸ್ಕೂಲ್ ಮೆಟ್ಟಿಲೇರಿದ್ದಾರೆ. ಯಂಕಮ್ಮ ಅವರು ಈಗ ಜಮೀನಿಗೆ ಒಂದು ಬೋರ್‍ವೆಲ್ ಹಾಕಿಸಿಕೊಂಡಿದ್ದಾರೆ. ಮಗ ಎದೆಯುದ್ದಕ್ಕೆ ಬೆಳೆದು ಅಮ್ಮನಿಗೆ ಸಹಾಯ ಮಾಡ್ತಿದ್ದಾನೆ.

    ಕಷ್ಟ ಬಂದಾಗ ಅಬಲೆ ಕೂಡ ಹೇಗೆ ದಿಟ್ಟತನದಿಂದ ತನ್ನ ಬದುಕು ಕಟ್ಟಿಕೊಳ್ಳುತ್ತಾಳೆ ಎಂಬುದಕ್ಕೆ ಈ ಯಂಕಮ್ಮ ಸಾಕ್ಷಿಯಾಗಿದ್ದಾರೆ. ಯಾವ ಪುರುಷನಿಗೂ ಕಮ್ಮಿಯಿಲ್ಲದಂತೆ ಕೃಷಿ ಮಾಡಿ, ಸೈ ಎನಿಸಿಕೊಂಡ ಯಂಕಮ್ಮರಿಗೆ ನಮ್ಮದೊಂದು ನಮಸ್ಕಾರ.

    https://www.youtube.com/watch?v=PH6IWGZID3c

     

  • ಬೆಳೆಹಾನಿ ಪರಿಹಾರ ಬೇಕಂದ್ರೆ ಅಧಿಕಾರಿಗೆ ರೈತರು ಲಂಚ ಕೊಡ್ಬೇಕು!

    ಬೆಳೆಹಾನಿ ಪರಿಹಾರ ಬೇಕಂದ್ರೆ ಅಧಿಕಾರಿಗೆ ರೈತರು ಲಂಚ ಕೊಡ್ಬೇಕು!

    ರಾಯಚೂರು: ಮುಂಗಾರು ಬೆಳೆಹಾನಿ ಪರಿಹಾರದ ಅರ್ಜಿ ತೆಗೆದುಕೊಳ್ಳಲು ಗ್ರಾಮ ಲೆಕ್ಕಾಧಿಕಾರಿಯೊಬ್ಬ ರೈತರಿಂದ ಹಣ ವಸೂಲಿ ಮಾಡುವುದನ್ನ ರೈತರೇ ವಿಡಿಯೋ ಚಿತ್ರಿಕರಿಸಿ ಬಯಲು ಮಾಡಿದ್ದಾರೆ.

    ರಾಯಚೂರಿನ ಲಿಂಗಸುಗೂರು ತಾಲೂಕಿನ ಚಿತ್ತಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾವೂರು, ಚಿತ್ತಾಪೂರ, ರೋಡಲಬಂಡಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿ ಶಿವಪ್ಪ ಸೋಮನಾಳ ಮೇಲೆ ಲಂಚದ ಆರೋಪ ಕೇಳಿ ಬಂದಿದೆ.

    ಪ್ರತಿಯೊಬ್ಬ ರೈತರಿಂದ 200, 300 ರೂಪಾಯಿಗಳನ್ನ ವಸೂಲಿ ಮಾಡಿ ಅರ್ಜಿಯನ್ನು ಮುಂದಕ್ಕೆ ಕಳುಹಿಸುವುದಾಗಿ ಹೇಳುತ್ತಿದ್ದಾನೆ. ಇದುವರೆಗೂ 120 ಕ್ಕೂ ಹೆಚ್ಚು ಜನರಿಂದ ಹಣ ವಸೂಲಿ ಮಾಡಿದ್ದಾನೆ ಅಂತ ರೈತರು ಆರೋಪಿಸಿದ್ದಾರೆ.

    ಆದ್ರೆ ಅರ್ಜಿಯನ್ನು ಆನ್ ಲೈನ್ ಮೂಲಕವೇ ತುಂಬಿ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಬೇಕು. ಅರ್ಜಿಯೊಂದಿಗೆ ಆಧಾರ ಕಾರ್ಡ್‍ನ್ನೂ ಲಿಂಕಮಾಡಬೇಕು. ಬೆಳೆಪರಿಹಾರಕ್ಕೆ ಅರ್ಜಿ ಹಾಕುವ ಪ್ರಕ್ರೀಯೆ ಈಗಾಗಲೇ ಎರಡು ತಿಂಗಳ ಹಿಂದೆಯೇ ಮುಗಿದ್ದಿದ್ದರೂ, ಆಫ್‍ಲೈನ್ ಅರ್ಜಿ ತುಂಬಬೇಕು ಅಂತ ಶಿವಪ್ಪ ಹಣ ವಸೂಲಿಗೆ ಇಳಿದಿದ್ದಾನೆ ಅಂತ ರೈತರು ಹೇಳಿದ್ದಾರೆ.

    ಈ ಬಗ್ಗೆ ಲಿಂಗಸುಗೂರು ತಹಶೀಲ್ದಾರ್ ಶಿವಾನಂದ್ ಸಾಗರ್‍ಗೂ ದೂರು ನೀಡಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಶಿವಾನಂದ್ ಸಾಗರ್ ತಿಳಿಸಿದ್ದಾರೆ.

    https://www.youtube.com/watch?v=x-eozmX-iNE

  • ಮದ್ಯಗೋಷ್ಠಿ ತಾಣವಾಗುತ್ತಿವೆ ಎನ್‍ಆರ್‍ಬಿಸಿ ಸೇತುವೆಗಳು: ರೈತರ ಕೂಗು ಕೇಳದ ಸರ್ಕಾರ

    ಮದ್ಯಗೋಷ್ಠಿ ತಾಣವಾಗುತ್ತಿವೆ ಎನ್‍ಆರ್‍ಬಿಸಿ ಸೇತುವೆಗಳು: ರೈತರ ಕೂಗು ಕೇಳದ ಸರ್ಕಾರ

    ರಾಯಚೂರು: ಬಿರು ಬೇಸಿಗೆಯಲ್ಲಿ ಮೇಲಗಡೆ ತಂಪು, ಕೆಳಗಡೆ ತಂಪು, ಅಲ್ಲಲ್ಲಿ ನಿಂತ ನೀರು, ತಣ್ಣನೆ ಮರಳಲ್ಲಿ ಮುಂಜಾನೆಯಿಂದ ಸಂಜೆವರೆಗೂ ಮದ್ಯಪಾನ. ಇದು ರಾಯಚೂರಿನ ದೇವದುರ್ಗದ ನಾರಾಯಣಪುರ ಬಲದಂಡೆ ಕಾಲುವೆಯ ಸೇತುವೆಗಳ ಕೆಳಗೆ ಕಂಡು ಬರುವ ಸಾಮಾನ್ಯ ದೃಶ್ಯ. ಬಿಸಿಲನಾಡು ರಾಯಚೂರಿನಲ್ಲಿ ಬರಗಾಲದಿಂದ ಖಾಲಿ ಖಾಲಿಯಾಗಿರುವ ಎನ್‍ಆರ್‍ಬಿಸಿ ಕಾಲುವೆಗಳು ಈಗ ಮದ್ಯವ್ಯಸನಿಗಳ ಹಾಟ್ ಸ್ಪಾಟ್‍ಗಳಾಗುತ್ತಿವೆ.

    ಬಿರುಬಿಸಿಲಿನ ಝಳತಪ್ಪಿಸಿಕೊಂಡು ಮದ್ಯಪಾನಮಾಡಲು ವ್ಯಸನಿಗಳು ಕಾಲುವೆಯ ಸೇತುವೆಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಒಂದೆಡೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟಕ್ಕೆ ಕಿವಿಗೊಡದ ಸರ್ಕಾರದ ನಿಲುವು ಮದ್ಯಪಾನಿಗಳಿಗೆ ಅನುಕೂಲವಾಗಿದೆ. ನೀರಾವರಿ ಸಲಹಾ ಸಮಿತಿ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನೆಲೆಯಲ್ಲಿ ಕಾಲುವೆಗಳು ಖಾಲಿ ಖಾಲಿಯಾಗಿವೆ. ಹೀಗಾಗಿ ದಾರಿಹೋಕರು, ಪುಂಡಪೋಕರಿಗಳು, ಸುತ್ತಮುತ್ತಲ ಗ್ರಾಮಗಳ ಮದ್ಯವ್ಯಸನಿಗಳಿಗೆ ಸೇತುವೆ ಕೆಳಗಿನ ಕಾಲುವೆ ಜಾಗ ಮದ್ಯಪಾನಕ್ಕೆ ಹೇಳಿಮಾಡಿಸಿದಂತಾಗಿದೆ. ಮದ್ಯಪಾನ ಮಾಡಿ ಬಾಟಲ್, ಪೌಚ್, ನೀರಿನ ಪ್ಲಾಸ್ಟಿಕ್ ಗ್ಲಾಸ್‍ಗಳನ್ನ ಕಾಲುವೆಯಲ್ಲೇ ಎಸೆದು ಹೋಗುತ್ತಿದ್ದಾರೆ.

    ನೀರಾವರಿ ಸಲಹಾ ಸಮಿತಿ ನಾರಾಯಣಪುರ ಬಲದಂಡೆ ಕಾಲುವೆಗೆ ಮಾರ್ಚ್ 26 ರಿಂದ 30 ರವರೆಗೆ ಐದು ದಿನಗಳ ಕಾಲ ನೀರು ಹರಿಸಲು ನಿರ್ಧರಿಸಿದೆ. ಆದ್ರೆ ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರುವ ರೈತರಿಗೆ ನೀರು ತಲುಪುವುದು ಅನುಮಾನವಾಗಿದೆ. ಇನ್ನೂ ಕೇವಲ 5 ದಿನ ನೀರು ಹರಿಸಿದರೆ 16, 17, 18 ನೇ ವಿತರಣಾ ಕಾಲುವೆಗೆ ಹನಿ ನೀರು ಸಹ ತಲುಪುವುದಿಲ್ಲ ಅಂತ ರೈತರು ಆರೋಪಿಸಿದ್ದಾರೆ.

    ಏಪ್ರಿಲ್ 10 ರವರೆಗೆ ಕಾಲುವೆಗೆ ನೀರು ಹರಿಸುವಂತೆ ರೈತರು ಹೋರಾಟ ನಡೆಸಿದ್ದಾರೆ. ಕಾಳು ಕಟ್ಟಿರುವ ಭತ್ತ, ಶೇಂಗಾ ,ಕಡಲೆ ಬೆಳೆಗಳು ಒಣಗಿಹೋಗುತ್ತಿದ್ದು, ಕಾಲುವೆಯ ಕೆಳಭಾಗದ ರೈತರು ಬೆಳೆಹಾನಿ ಆತಂಕದಲ್ಲಿದ್ದಾರೆ. ಆದ್ರೆ ಸರ್ಕಾರ ಮಾತ್ರ ಕಾಲುವೆಗೆ ನೀರು ಬಿಡುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮದ್ಯ ವ್ಯಸನಿಗಳಿಗೆ ಸರ್ಕಾರವೇ ಜಾಗ ಹುಡುಕಿ ಕೊಟ್ಟಂತಾಗಿದೆ.

    ಒಟ್ನಲ್ಲಿ, ಪವಿತ್ರ ಕೃಷ್ಣೆ ಹರಿಯಬೇಕಾದ ಸ್ಥಳದಲ್ಲಿ ಮದ್ಯಗೋಷ್ಠಿಗಳು ನಡೆಯುತ್ತಿವೆ. ಬೆಳಿಗ್ಗೆಯಿಂದಲೇ ಠಿಕಾಣಿ ಹೂಡೋ ಕುಡುಕರು ಸಂಜೆ ವೇಳೆಗೆ ಮನೆಕಡೆ ತೆರಳುತ್ತಿದ್ದಾರೆ. ಕನಿಷ್ಟ ಈಗಲಾದ್ರೂ ಸರ್ಕಾರ ಎಚ್ಚೆತ್ತು ಕುಡುಕರ ತಾಣವಾಗುತ್ತಿರುವ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕಿದೆ. ರೈತರ ಬೆಳೆಗಳನ್ನ ರಕ್ಷಿಸಬೇಕಿದೆ.