Tag: farmer

  • ಮಂಡ್ಯ: ಸಿಎಂ ಖಡಕ್ ಆದೇಶದ ಬೆನ್ನಲ್ಲೇ ರೈತರಿಗೆ ಬ್ಯಾಂಕ್‍ಗಳಿಂದ ಸರಣಿ ನೋಟಿಸ್

    ಮಂಡ್ಯ: ಸಿಎಂ ಖಡಕ್ ಆದೇಶದ ಬೆನ್ನಲ್ಲೇ ರೈತರಿಗೆ ಬ್ಯಾಂಕ್‍ಗಳಿಂದ ಸರಣಿ ನೋಟಿಸ್

    -ಬರ ಪರಿಹಾರದ ಹಣ ಸಾಲಕ್ಕೆ ವಜಾ

    ಮಂಡ್ಯ: ಸನ್ಮಾನ್ಯ ಮುಖ್ಯಮಂತ್ರಿಗಳು ಮಂಡ್ಯದ ಮಳವಳ್ಳಿಯಲ್ಲಿ ಯಾವುದೇ ಬ್ಯಾಂಕ್‍ಗಳು ರೈತರಿಂದ ಸಾಲ ವಸೂಲಿಗೆ ಮುಂದಾಗಬೇಡಿ ಅಂತಾ ಖಡಕ್ ಸಂದೇಶ ನೀಡಿದ್ರು. ಆದ್ರೆ ಮಂಡ್ಯದ ಹಲವು ಬ್ಯಾಂಕ್‍ಗಳು ಈಗಾಗಲೇ ರೈತರಿಗೆ ಸಾಲ ಮರುಪಾವತಿಗೆ ನೋಟೀಸ್ ನೀಡಿವೆ. ಅದ್ರ ಜೊತೆ ಸರ್ಕಾರ ಬರ ಪರಿಹಾರಕ್ಕೆಂದು ನೀಡಿದ್ದ ಹಣವನ್ನು ಸಾಲಕ್ಕೆ ವಜಾ ಮಾಡಿಕೊಂಡಿವೆ. ಇದ್ರಿಂದ ಕಂಗಾಲಾಗಿರುವ ರೈತ ಸಮುದಾಯ, ಸ್ವಾಮಿ ಮುಖ್ಯಮಂತ್ರಿಗಳೇ ನಮ್ಮ ಕಷ್ಟ ಕೇಳದೇ ಎಲ್ಲಿದ್ದೀರಿ ಅಂತಾ ಕಣ್ಣೀರು ಹಾಕುತಿದ್ದಾರೆ.

    ಹೌದು. ಒಂದೆಡೆ ಖಾಲಿ ಕಾಲುವೆ. ಮತೊಂದೆಡೆ ಬೆಳೆ ಇಲ್ಲದೆ ಬಣಗುಡುತ್ತಿರೋ ಭೂಮಿ. ಇಂತಹ ಸಂಕಷ್ಟದಲ್ಲಿರುವ ಮಂಡ್ಯ ರೈತರಿಗೆ ಬ್ಯಾಂಕ್‍ಗಳ ನೋಟಿಸ್ ಬೇರೆ. ಇಲ್ಲಿನ ರೈತರು ಒಡವೆ ಅಡವಿಟ್ಟು ಸಾಲ-ಸೋಲ ಮಾಡಿ ಒಂದಿಷ್ಟು ಬೆಳೆ ಬೆಳೆದಿದ್ರು. ಅದು ಮಳೆಯಿಲ್ಲದೆ ಕೈಗೆ ಬರ್ಲಿಲ್ಲ. ಈ ಸಮಸ್ಯೆಗಳ ಅರಿವಿದ್ರೂ ಬ್ಯಾಂಕ್‍ಗಳು ಮಾತ್ರ ನಿಮ್ಮ ಒಡವೆ ಹರಾಜಿಗೆ ಬಂದಿದೆ ಎಂದು ನೋಟಿಸ್ ನೀಡಿವೆ. ಇದ್ರಿಂದ ಕಂಗಾಲಾಗಿರೋ ರೈತರು, ಮುಖ್ಯಮಂತ್ರಿಗಳೇ ನೀವೇ ಒಳ್ಳೇ ಬೆಲೆಗೆ ನಮ್ಮ ಒಡವೆ ತಗೊಂಡು ನಮ್ಮನ್ನ ಕಾಪಾಡಿ ಅಂತಿದ್ದಾರೆ.

    ಮಂಡ್ಯದ ಕೆಲವು ಬ್ಯಾಂಕ್‍ಗಳು ಬರ ಪರಿಹಾರಕ್ಕೆಂದು ರೈತರ ಖಾತೆಗೆ ಹಾಕಿರುವ ಹಣವನ್ನ ಸಾಲಕ್ಕೆ ವಜಾ ಮಾಡಿಕೊಂಡಿವೆ. ಇದ್ರಿಂದ ರೈತರು ಕಣ್ಣೀರು ಹಾಕ್ತಿದ್ದಾರೆ.

    ಯಾವುದೇ ಕಾರಣಕ್ಕೆ ಸಾಲಕ್ಕೆ ಇದನ್ನು ಚುಪ್ತಾ ಮಾಡಿಕೊಳ್ಳಬಾರದೆಂದು ಜಿಲ್ಲಾಡಳಿತ ಈಗಾಗಲೇ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್ ಗಳು ಗಮನಕ್ಕೆ ತಂದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಾ ಮಂಡ್ಯ ತಹಶೀಲ್ದಾರ್ ಮಾರುತಿ ಪ್ರಸನ್ನ ಹೇಳಿದ್ದಾರೆ.

    ಒಟ್ಟಿನಲ್ಲಿ ರೈತರ ಬದುಕು ದಿನ ದಿನಕ್ಕೂ ಮೂರಾಬಟ್ಟೆಯಾಗ್ತಿದೆ. ಆದ್ರೆ ಜನಪ್ರತಿನಿಧಿಗಳು ಮಾತ್ರ ರಾಜಕಾರಣ ಮಾಡ್ಕೊಂಡು ಕಾಲ ಕಳೆಯುತ್ತಿರೋದು ವಿಪರ್ಯಾಸ.

  • ವಿಷಸೇವಿಸಿ ವೇದಿಕೆಯೇರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ನೀಡಿ ಕುಸಿದು ಬಿದ್ದ ರೈತ!

    ವಿಷಸೇವಿಸಿ ವೇದಿಕೆಯೇರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ನೀಡಿ ಕುಸಿದು ಬಿದ್ದ ರೈತ!

    ಮಂಡ್ಯ: ವಿಷ ಸೇವಿಸಿ ಉಸ್ತುವಾರಿ ಸಚಿವರ ಬಳಿ ಬಂದ ರೈತ, ಸರ್ಕಾರದಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಸಿಕ್ಕಿಲ್ಲ ಎಂದು ಸಚಿವರಿಗೆ ಮನವಿ ಪತ್ರ ಕೊಟ್ಟು ಕುಸಿದು ಬಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ.

    ನಗರದ ಕಲಾಮಂದಿರಲ್ಲಿ ಜಿಲ್ಲಾಡಳಿತದಿಂದ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಪ್ಪ ಸೇರಿದಂತೆ ಹಲವು ಜನ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ರು.

    ಈ ವೇಳೆ ಮೊದಲೇ ವಿಷ ಸೇವಿಸಿ ಬಂದಿದ್ದ ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದ ರೈತ ಅಪ್ಪಾಜಿ ಎಂಬುವವರು, ಕಲಾಮಂದಿರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಮೇಲೆ ಕುಳಿತಿದ್ದ ಸಚಿವ ಕೃಷ್ಣಪ್ಪ ಅವರಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಪತ್ರದಲ್ಲಿ ನಾಲೆ ನಿರ್ಮಾಣಕ್ಕೆ ಸರ್ಕಾರ ತಮ್ಮ ಜಮೀನು ವಶಪಡಿಸಿಕೊಂಡಿದೆ. ಆದ್ರೆ ಜಮೀನಿನ ಎರಡೂವರೆ ಲಕ್ಷ ಹಣ ಪರಿಹಾರ ನಮಗೆ ತಲುಪಿಲ್ಲ. ಇದ್ರಿಂದ ಸಾಲ ಹೆಚ್ಚಾಗಿ ಸಂಕಷ್ಟ ಅನುಭವಿಸುವಂತಾಗಿದ್ದು, ತಮ್ಮ ಸಮಸ್ಯೆ ಪರಿಹರಿಸಿ ಎಂದು ಕೇಳಿಕೊಂಡಿದ್ದಾರೆ.

    ಮನವಿ ಪತ್ರ ನೀಡಿ ಕಲಾ ಕಲಾಮಂದಿರದಿಂದ ಹೊರ ಬಂದ ರೈತ ಮೊದಲೇ ವಿಷ ಸೇವಿಸಿದ್ದರಿಂದ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ರೈತ ಅಪ್ಪಾಜಿ ಬಳಿ ಬಂದ ಪೊಲೀಸರು ಪರಿಶೀಲಿಸಲಾಗಿ ವಿಷ ಸೇವಿಸಿರುವುದು ಪತ್ತೆಯಾಗಿದೆ. ಕೂಡಲೇ ರೈತನನ್ನು ಪೊಲೀಸರು ಆಟೋದಲ್ಲಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

  • ಕೋಟಿ ರೂ. ಮೆಕ್ಕೆಜೋಳ ಖರೀದಿಸಿ ರೈತರಿಗೆ ವ್ಯಾಪಾರಿಯಿಂದ ದೋಖಾ

    ಕೋಟಿ ರೂ. ಮೆಕ್ಕೆಜೋಳ ಖರೀದಿಸಿ ರೈತರಿಗೆ ವ್ಯಾಪಾರಿಯಿಂದ ದೋಖಾ

    – ಪೊಲೀಸರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ

    ಬಳ್ಳಾರಿ: ರೈತರು ಬರಗಾಲದಲ್ಲಿ ಕಷ್ಟಪಟ್ಟು ಬೆಳದಿದ್ದ ಮೆಕ್ಕೆಜೋಳವನ್ನು ಖರೀದಿ ಮಾಡಿದ್ದ ವ್ಯಾಪಾರಿಯೊಬ್ಬ ಹಣ ನೀಡದೇ ಮೋಸ ಮಾಡಿದ್ದಾನೆ. ರೈತರಿಗೆ ಹಣ ನೀಡಬೇಕೆಂದು ಪೊಲೀಸರು ಹೇಳಿದರೇ ಅವರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ ಹಾಕಿದ್ದಾನೆ.

    ಹಿರೇಹೆಗ್ಡಾಳ ಗ್ರಾಮ ಪಂಚಾಯತಿ ಸದಸ್ಯ, ದಲ್ಲಾಳಿ ಚಂದ್ರಪ್ಪ ಎಂಬವನೇ ರೈತರಿಗೆ ಹಣ ನೀಡದೇ ಸತಾಯಿಸುತ್ತಿರುವ ವ್ಯಕ್ತಿ. ಜಿಲ್ಲೆಯ ಕೂಡ್ಲಗಿ ತಾಲೂಕಿನ ಇಚಲ, ಬೊಮ್ಮನಹಳ್ಳಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ನೂರಾರು ರೈತರ ಬಳಿ ಮೆಕ್ಕೆಜೋಳ ಖರೀದಿಸಿ ವ್ಯಾಪಾರಿ ಇದೂವರೆಗೂ ರೈತರಿಗೆ ಹಣ ನೀಡಿಲ್ಲ.

    ಚಂದ್ರಪ್ಪ ಕಲೆ ರೈತರಿಗೆ ಚೆಕ್ ನೀಡಿದ್ದಾನೆ.ಆದರೆ ಚಂದ್ರಪ್ಪ ನೀಡಿರುವ ಎಲ್ಲ ಚೆಕ್‍ಗಳು ಬೌನ್ಸ್ ಆಗಿವೆ. ಹೀಗಾಗಿ ಹಣ ಕೊಡಿಸುವಂತೆ ರೈತರು ಪೊಲೀಸ ಠಾಣೆ ಮೇಟ್ಟಿಲೇರಿದ್ರೆ, ಚಂದ್ರಪ್ಪ ಇದೀಗ ಪೊಲೀಸರನ್ನೆ ಬೆದರಿಸುತ್ತಿದ್ದಾನೆ. ರೈತರ ಹಣ ಕೊಡುವಂತೆ ತಾಕೀತೂ ಮಾಡಿದ ಕೂಡ್ಲಗಿ ಡಿವೈಎಸ್‍ಪಿ ತಮಗೆ ಕಿರುಕುಳ ನೀಡಿದ್ರೂ ಅಂತಾ ಪೊಲೀಸರ ವಿರುದ್ಧವೇ ವ್ಯಾಪಾರಿ ಚಂದ್ರಪ್ಪ ಡೆತ್‍ನೋಟ್ ಬರೆದಿಟ್ಟು ಪೊಲೀಸರನ್ನು ಬೆದರಿಸುತ್ತಿದ್ದಾನೆ.

    ರೈತರಿಂದ ಮೆಕ್ಕಜೋಳ ಖರೀದಿಸಿ ಹಣ ಕೊಡದೆ ಪೊಲೀಸರನ್ನೆ ಬೆದರಿಸುತ್ತಿರುವ ಚಂದ್ರಪ್ಪನಿಂದ ಹಣ ಪಡೆಯೋದೇಗೆ ಅಂತಾ ರೈತರು ಇದೀಗ ಕಂಗಾಲಾಗಿದ್ದಾರೆ. ಇತ್ತ ರೈತರು ನಮಗೆ ಹಣ ಕೊಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.

     

  • ತೆರೆದ ಕೊಳವಿ ಬಾವಿ ಮುಚ್ಚಿಸಿ ಫೋಟೋ ಕಳಿಸಿದ್ರೆ ಖಾತೆಗೆ ಹಣ

    ತೆರೆದ ಕೊಳವಿ ಬಾವಿ ಮುಚ್ಚಿಸಿ ಫೋಟೋ ಕಳಿಸಿದ್ರೆ ಖಾತೆಗೆ ಹಣ

    ಕೊಪ್ಪಳ: ನೀವು ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿದ್ದೀರಾ? ನಿಮ್ಮ ಸುತ್ತಮುತ್ತಲು ತೆರೆದ ಕೊಳವೆ ಬಾವಿ ಇದೆಯೇ? ಹಾಗಾದ್ರೆ ತಡಮಾಡದೇ ಸ್ಥಳದ ಮಾಹಿತಿಯ ಜೊತೆಗೆ ಫೋಟೋವನ್ನು ವಾಟ್ಸಪ್ ಮಾಡಿದ್ರೆ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ.

    ಆರಂಭದ ಪೀಠಿಕೆ ಓದಿ ಖಾತೆಗೆ ಹಣ ನೀಡುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ ಎಂದು ನೀವು ಭಾವಿಸಿದರೆ ತಪ್ಪಾದಿತು. ತೆರೆದ ಕೊಳವೆ ಬಾವಿ ದುರಂತಕ್ಕೆ ಮನಮಿಡಿದ ಪ್ರಗತಿಪರ ರೈತರೊಬ್ಬರು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

    ಜಿಲ್ಲೆಯ ಗಂಗಾವತಿ ಪಟ್ಟಣದ ಪ್ರಗತಿಪರ ರೈತ ಶಿವಪ್ಪ ಚಳ್ಳಕೇರಿ ಅವರು 500 ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಇಂದು ತೆರೆದ ಕೊಳವೆ ಬಾವಿ ಮುಚ್ಚಿಸೋದಕ್ಕಾಗಿ ಒಂದು ಲಕ್ಷ ರೂಪಾಯಿ ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿದ್ದಾರೆ.

    ಕೊಪ್ಪಳ ಜಿಲ್ಲೆಯಲ್ಲಿ ಈಗಾಗ್ಲೇ 338 ವಿಫಲ ಕೊಳವೆ ಬಾವಿಗಳಿವೆ ಅಲ್ದೆ ಕೊಪ್ಪಳ ನಗರದಲ್ಲಿ 21 ವಿಫಲ ಕೊಳವೆ ಬಾವಿಗಳಿವೆ. ತೆರೆದ ಕೊಳವೆ ಬಾವಿ ಮುಚ್ಚಬೇಕಂತ ಮಾತನಾಡೋವ್ರೆ ಹೆಚ್ಚು ಆದ್ರೆ ಯಾರು ಮುಚ್ಚೋಕೆ ಮುಂದಾಗೊಲ್ಲ. ಆದ್ರೆ ಇಂತಹ ಬಹುಮಾನ ಘೋಷಣೆ ಮಾಡೋದ್ರಿಂದ ಮುಚ್ಚುತ್ತಾರೆ ಅನ್ನೋ ನಿರೀಕ್ಷೆಯಿದೆ ಎಂದು ಶಿವಪ್ಪ ಅವರು ತಿಳಿಸಿದ್ದಾರೆ.

    ಬಹುಮಾನ ಪಡೆಯಲು ಹೀಗೆ ಮಾಡ್ಬೇಕು: ಕೊಪ್ಪಳ ಜಿಲ್ಲೆಯಲ್ಲಿ ತೆರೆದ ಕೊಳವೆ ಬಾವಿ ಇರೋ ಫೋಟೋ ಹಾಗೂ ಮುಚ್ಚಿದ ಬಳಿಕ ಫೋಟೋ ಮತ್ತು ಗ್ರಾಮ ಪಂಚಾಯತ್‍ನಿಂದ ದೃಢೀಕರಣ ಪತ್ರದ ಜೊತೆಗೆ ಬ್ಯಾಂಕ್ ಖಾತೆಯ ಮಾಹಿತಿಯನ್ನು 8861318934 ನಂಬರ್ ಗೆ ವಾಟ್ಸಾಪ್ ಮಾಡಿದ್ರೆ 500 ರೂ. ಬಹುಮಾನ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಈ ಬಹುಮಾನದ ನೀಡುವ ಅವಧಿ 6 ತಿಂಗಳು ಆಗಿದ್ದು, ಜನರು ಫೋಟೋಗಳನ್ನು ಕಳುಹಿಸಬಹುದು.

    ರಾಜ್ಯದಲ್ಲಿ ತೆರೆದ ಕೊಳವೆ ಬಾವಿ ಮುಚ್ಚೋ ಅಭಿಯಾನವಾಗ್ತಿದೆ. ಆದ್ರೆ ಕೊಪ್ಪಳದ ಪ್ರಗತಿಪರ ರೈತ ಬಹುಮಾನ ಘೋಷಣೆ ಮಾಡೋ ಮೂಲಕ ಗಮನಸೆಳೆದಿದ್ದಾರೆ. ಇನ್ಮೇಲಾದ್ರೂ ತೆರೆದ ಕೊಳವೆ ಬಾವಿ ಮುಚ್ಚಿ ಮುಂದೆ ಇಂಥ ದುರಂತ ಆಗದಿರಲಿ ಅನ್ನೋದೆ ಎಲ್ಲರ ಆಶಯ.

  • ತಮಗೆ ಹುಣಸೆ ಹಣ್ಣು ಮಾರಾಟ ಮಾಡದಕ್ಕೆ ರೈತನ ಮೇಲೆ ದಲ್ಲಾಳಿಗಳಿಂದ ಹಲ್ಲೆ

    ತಮಗೆ ಹುಣಸೆ ಹಣ್ಣು ಮಾರಾಟ ಮಾಡದಕ್ಕೆ ರೈತನ ಮೇಲೆ ದಲ್ಲಾಳಿಗಳಿಂದ ಹಲ್ಲೆ

    ಚಿಕ್ಕಬಳ್ಳಾಪುರ: ಮಾರಾಟಕ್ಕೆ ತಂದಿದ್ದ ಹುಣಸೆ ಹಣ್ಣನ್ನು ತಮಗೆ ನೀಡಲಿಲ್ಲ ಎಂಬ ಕಾರಣಕ್ಕೆ ಕೆಲ ದಲ್ಲಾಳಿಗಳು ರೈತರೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ಪಟ್ಟಣದ ಮಾರುಕಟ್ಟೆಯಲ್ಲಿ ನಡೆದಿದೆ.

    ಮಿಂಡಿಗಲ್ ಗ್ರಾಮದ 50 ವರ್ಷದ ನಾರಾಯಣಸ್ವಾಮಿ ಹಲ್ಲೆಗೊಳಗಾಗಿರುವ ರೈತ. ಹುಣಸೆ ಹಣ್ಣು ಮಾರಾಟ ಮಾಡಲು ಮಾರುಕಟ್ಟೆಗೆ ಬಂದಿದ್ದ ರೈತ ನಾರಾಯಣಸ್ವಾಮಿ ಬಳಿಯಿದ್ದ ಹುಣಸೆ ಹಣ್ಣನ್ನ ಬಲವಂತವಾಗಿ ಎಲ್.ಟಿ.ನರಸಿಂಹ ಎಂಬುವರಿಗೆ ಸೇರಿದ ಮಂಡಿಯ ದಲ್ಲಾಳಿಗಳು ತೆಗೆದುಕೊಂಡು ಹೋಗಿದ್ದಾರೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ನಾರಾಯಣಸ್ವಾಮಿ ಈ ಮೊದಲೇ ನಾನು ಟಿ.ಜಿ ಗೋಪಾಲಪ್ಪ ಮಂಡಿಯವರ ಬಳಿ ಅಡ್ವಾನ್ಸ್ ಪಡೆದಿದ್ದೇನೆ ಅವರಿಗೆ ಮಾರಾಟ ಮಾಡುತ್ತೇನೆ ಅಂತ ಹೇಳಿದ್ದಾರೆ.

    ಇದರಿಂದ ಕೆರಳಿದ ದಲ್ಲಾಳಿಗಳು ರೈತ ನಾರಾಯಣಸ್ವಾಮಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರೈತ ನಾರಾಯಣಸ್ವಾಮಿಯ ಕೈಗೆ ಗಂಭೀರ ಗಾಯವಾಗಿದ್ದು ಸದ್ಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • ಅಪ್ಪನ ಆಸೆಯಂತೆ ಕೃಷಿ ವಿವಿಯಲ್ಲಿ ಓದಿ 11 ಚಿನ್ನದ ಪದಕ ಪಡೆದ ರೈತನ ಮಗ

    ಅಪ್ಪನ ಆಸೆಯಂತೆ ಕೃಷಿ ವಿವಿಯಲ್ಲಿ ಓದಿ 11 ಚಿನ್ನದ ಪದಕ ಪಡೆದ ರೈತನ ಮಗ

    ಬೆಂಗಳೂರು: ಅಪ್ಪನ ಆಸೆಯಂತೆ ಕೃಷಿಯಲ್ಲಿ ಓದಿ ಚಿನ್ನದ ಪದಕ ಪಡೆದ್ರು. ಆದ್ರೆ ಈ ಸಾಧನೆಯನ್ನು ಕಣ್ತುಂಬಿಕೊಳ್ಳಬೇಕಿದ್ದ ತಂದೆಯೇ ಇಹಲೋಕ ತ್ಯಜಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದ ಸಾಧಕನ ಕಥೆ ಇದು.

    ಹೌದು. ಮಂಡ್ಯದ ವಿಸಿ ಫಾರ್ಮ್‍ನ ಕೃಷಿ ಕಾಲೇಜು ವಿದ್ಯಾರ್ಥಿ ರಘುವೀರ್ ಬರೋಬ್ಬರಿ 11 ಚಿನ್ನದ ಪದಕ ಪಡೆದು ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ಕೃಷಿ ವಿಶ್ವವಿದ್ಯಾಲಯದ 51ನೇ ಘಟಿಕೋತ್ಸವದಲ್ಲಿ ಇವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯ್ತು.

    ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ರಘುವೀರ್ ರೈತ ಮಾದಪ್ಪ ಅವರ ಪುತ್ರ. ರಘುವೀರ್ ಅವರನ್ನ ಕೃಷಿ ಪದವೀಧರನನ್ನಾಗಿ ಮಾಡಬೇಕೆಂಬ ಆಸೆ ತಂದೆ ಮಾದಪ್ಪರಲ್ಲಿ ಇತ್ತು. ಅಪ್ಪನ ಆಸೆಯಂತೆ ಕಷ್ಟ ಪಟ್ಟು ಓದಿದ ರಘುವೀರ್, ಮೊದಲ ಶ್ರೇಯಾಂಕ ಪಡೆದು 11 ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಆದ್ರೆ ವಿಧಿಯ ಆಟ ಮಗನ ಸಾಧನೆ ನೋಡಲು ಇಂದು ತಂದೆ ಇಲ್ಲ. ಅಪ್ಪನ ಸಾವಿನ ನಡುವೆ ಸಾಧನೆಯ ಕೃಷಿ ಮಾಡಿದ ಖುಷಿ ರಘುವೀರ್ ಅವರದ್ದು.

    ಈ ಘಟಿಕೋತ್ಸವದಲ್ಲಿ 953 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯ್ತು. ಚಿಂತಾಮಣಿಯ ರೇಷ್ಮೆ ಕಾಲೇಜಿನ ಸಿ.ಪ್ರೀತಿ, ಜಿಕೆವಿಕೆಯ ಅರ್ಚನಾ 6 ಚಿನ್ನದ ಪದಕ ಪಡೆದ್ರೆ, ಸ್ನಾತಕೋತ್ತರ ವಿಭಾಗದಲ್ಲಿ ಆರತಿ 7 ಚಿನ್ನದ ಪದಕ ಪಡೆದಿದ್ದಾರೆ.

    ಒಟ್ಟಿನಲ್ಲಿ ಸಾಧನೆಗೆ ಛಲ ಇದ್ರೆ ಸಾಕು ಅನ್ನೋ ಮಾತನ್ನ ರೈತ ಮಾದಪ್ಪ ಅವರ ಮಗ ರಘವೀರ್ ಸಾಧಿಸಿ ತೋರಿಸಿದ್ದಾರೆ. ಇವರ ಈ ಸಾಧನೆ ಮತ್ತಷ್ಟು ವಿದ್ಯಾರ್ಥಿಗಳಿಗೆ ಮಾದರಿ.

  • ಕಾಟಾಚಾರಕ್ಕೆ ಗೋಶಾಲೆ ನಿರ್ಮಾಣ: ಮೇವೂ ಇಲ್ಲ, ನೀರು ಇಲ್ಲ ಕೊನೆಗೆ ಗೋಶಾಲೆಯೇ ಮುಚ್ಚಿದ್ರು

    ಕಾಟಾಚಾರಕ್ಕೆ ಗೋಶಾಲೆ ನಿರ್ಮಾಣ: ಮೇವೂ ಇಲ್ಲ, ನೀರು ಇಲ್ಲ ಕೊನೆಗೆ ಗೋಶಾಲೆಯೇ ಮುಚ್ಚಿದ್ರು

    ರಾಮನಗರ: ಜಾನುವಾರುಗಳಿಗೆ ಮೇವು ಒದಗಿಸಲೆಂದು ಕಾಟಾಚಾರಕ್ಕೆ ಜಿಲ್ಲಾಡಳಿತ ಗೋಶಾಲೆ ನಿರ್ಮಾಣ ಮಾಡಿತ್ತು. ಆದ್ರೆ ಗೋಶಾಲೆ ಇದ್ದಷ್ಟು ದಿನ ಗೋವುಗಳಿಗೆ ಸರಿಯಾಗಿ ಮೇವು ಒದಗಿಸುತ್ತಿರಲಿಲ್ಲ. ಕೊನೆಗೆ 15 ದಿನಗಳ ಕಾಲ ಗೋವುಗಳಿಗೆ ಮೇವು ನೀಡದ ಜಿಲ್ಲಾಡಳಿತ ಗೋವುಗಳನ್ನು ರೈತರಿಗೆ ವಾಪಾಸ್ಸು ಕಳುಹಿಸಿದೆ.

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಮರಳವಾಡಿ ಗ್ರಾಮದ ಅನ್ನಪೂರ್ಣೇಶ್ವರಿ ದೇವಾಲಯದ ಸಮೀಪ ಜಿಲ್ಲಾಡಳಿತದಿಂದ ಗೋಶಾಲೆ ತೆರೆಯಲಾಗಿತ್ತು. ಆದ್ರೆ ಗೋಶಾಲೆ ನಿರ್ಮಾಣವಾದ ಬಳಿಕ ಸಕಲ ಸವಲತ್ತು ನೀಡಬೇಕಾದ ಅಧಿಕಾರಿಗಳು ಸರಿಯಾಗಿ ಇತ್ತ ಸುಳಿಯಲಿಲ್ಲ. ಇದ್ದಷ್ಟು ದಿನ ಮೇವನ್ನೂ ಸಹ ಪೂರೈಸಿಲ್ಲ. ಜಾನುವಾರುಗಳಿಗೆ ಮೇವು ಕಳುಹಿಸಿ ಅಂತಾ ಫೋನ್ ಮಾಡಿದ್ರೆ ಅಧಿಕಾರಿಗಳೇ ಗರಂ ಆಗಿ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ರೈತರು ಹೇಳುತ್ತಾರೆ.

    ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು ಬರ ಪರಿಶೀಲನೆಗಾಗಿ ಭೇಟಿ ನೀಡಿದ್ದಾಗ ಈ ಗೋಶಾಲೆಯನ್ನು ತೆರೆಯಲಾಗಿತ್ತು. ಕಾನೂನು ಸಚಿವ ಟಿ.ಬಿ ಜಯಚಂದ್ರ ಬರಪರಿಹಾರ ಪರಿಶೀಲನೆ ಪ್ರವಾಸದ ವೇಳೆ ಈ ಗೋಶಾಲೆಯನ್ನು ಉದ್ಘಾಟಿಸಿದ್ರು. ಆದ್ರೆ ಮೊದಲು ಗೋಶಾಲೆಯನ್ನು ದೇವಾಲಯದ ಆವರಣದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆಸಲಾಗಿತ್ತು.

    ಆದರೆ ಅಧಿಕಾರಿಗಳೇ ದೇವಾಲಯದ ಆವರಣದಿಂದ ಹೊರಗೆ ಬರುವಂತೆ ರೈತರಿಗೆ ಸೂಚನೆ ಸಹ ನೀಡಿ ಕೇವಲ 30 ಜಾನುವಾರುಗಳಿಗೆ ಸಾಕಾಗುಷ್ಟು ಗೋಶಾಲೆ ನಿರ್ಮಾಣ ಮಾಡಿದ್ರು. ಆದ್ರೆ ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಸತತ 15 ದಿನಗಳ ಕಾಲ ಮೇವನ್ನೇ ಒದಗಿಸಿಲ್ಲ. ಕೊನೆಗೆ ಗೋಶಾಲೆಯನ್ನೇ ಮುಚ್ಚಿದ್ದಾರೆ. ಇದೀಗ ಬರಗಾಲವಿದ್ದು ಮತ್ತೆ ಗೋಶಾಲೆ ತೆರೆಯಿರಿ ಎಂದು ರೈತರು ಆಗ್ರಹಿಸಿದ್ದಾರೆ.

    ಒಟ್ಟಾರೆ ಕಾಟಾಚಾರಕ್ಕೆ ಕೆಲಸ ಮಾಡೋ ಅಧಿಕಾರಿಗಳು ನಮಗೆ ಬೇಕಿಲ್ಲ ಅನ್ನೋದು ರೈತರ ಆಕ್ರೋಶವಾಗಿದೆ. ಜೊತೆಗೆ ಕಾಟಾಚಾರಕ್ಕೆ ಗೋಶಾಲೆ ತೆರೆದು ರೈತರು ಹಾಗೂ ಜಾನುವಾರುಗಳಿಗೆ ಮೋಸ ಮಾಡಿದ ಜಿಲ್ಲಾಡಳಿತದ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

     

  • ಮೇವು ಕೇಂದ್ರದಿಂದ ವಿತರಿಸಿದ ಮೇವು ತಿಂದು 6 ಹಸುಗಳು ಸಾವು

    ಮೇವು ಕೇಂದ್ರದಿಂದ ವಿತರಿಸಿದ ಮೇವು ತಿಂದು 6 ಹಸುಗಳು ಸಾವು

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಲ್ಲಯನಪುರ ಗ್ರಾಮದಲ್ಲಿ ಮೇವು ಕೇಂದ್ರದಿಂದ ವಿತರಿಸಿದ ಮೇವನ್ನು ತಿಂದು ಆರು ಹಸುಗಳು ಸಾವನ್ನಪ್ಪಿವೆ.

    ಗ್ರಾಮದ ಶಿವಯ್ಯ, ಬೆಲ್ಲಯ್ಯ, ಚಂದ್ರ, ಮರಿಸಿದ್ದಯ್ಯ ಮತ್ತು ದೊಡ್ಡಬಳ್ಳಯ್ಯ ಎಂಬ ರೈತರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ಭೀಕರ ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಸುಗಳಿಗೆ ಮೇವಿಲ್ಲದ ಕಾರಣ ಕೃಷಿ ಇಲಾಖೆಯಿಂದ ಮೇವು ಕೇಂದ್ರದ ಮೂಲಕ ವಿತರಿಸಲಾಗಿದ್ದ ಜೋಳದ ಪುಡಿಯನ್ನು ತಿಂದ ಆರು ಹಸುಗಳು ಸಾವನ್ನಪ್ಪಿವೆ.

    ಹಸುಗಳು ಸಾವನ್ನಪ್ಪಿದ್ದರಿಂದ ರೈತರಿಗೆ ಒಂದೂವರೆ ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ. ಇದಲ್ಲದೆ ಇನ್ನೂ ಕೆಲವು ಹಸುಗಳು ಮೇವನ್ನು ತಿಂದು ಅಸ್ವಸ್ಥಗೊಂಡಿವೆ. ಮೇವಿಲ್ಲದ ಸಂದರ್ಭದಲ್ಲಿ ಕೃಷಿ ಇಲಾಖೆ ರೈತರಿಗೆ ಮೇವು ಒದಗಿಸಿ ರೈತರ ಮುಖದಲ್ಲಿ ಮಂದಹಾಸ ತಂದಿತ್ತು. ಆದರೆ ಇಂದು ನಡೆದಿರುವ ಘಟನೆಯಿಂದ ರೈತರು ಕಂಗಾಲಾಗಿದ್ದಾರೆ. ಸದ್ಯ ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡಿರುವ ಹಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

     

  • ರಾಯಚೂರು ರೈತನ ಸಾಲ 5 ಲಕ್ಷ: ಬ್ಯಾಂಕ್ ಕೇಳುತ್ತಿದೆ 24 ಲಕ್ಷ!

    ರಾಯಚೂರು ರೈತನ ಸಾಲ 5 ಲಕ್ಷ: ಬ್ಯಾಂಕ್ ಕೇಳುತ್ತಿದೆ 24 ಲಕ್ಷ!

    -ಬ್ಯಾಂಕ್‍ನಿಂದ ರೈತನಿಗೆ ಸ್ಥಿರಾಸ್ಥಿ ಜಪ್ತಿ ವಾರೆಂಟ್

    -ಸಿಎಂ ಆದೇಶ ಮೀರಿ ಬಲವಂತದ ವಸೂಲಿಗೆ ಮುಂದಾಗಿರುವ ಬ್ಯಾಂಕ್

    ರಾಯಚೂರು: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು ರೈತರು ಸಾಲದ ಸುಳಿಯಲ್ಲಿ ನಲುಗಿ ಹೋಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನೋಟಿಸ್ ನೀಡಬಾರದು ಎಂದು ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಮಾತ್ರ ಬಡ್ಡಿಗೆ ಬಡ್ಡಿ ಹಾಕಿ ರೈತನ ಮನೆ, ಜಮೀನಿನ ಹರಾಜಿಗೆ ಬ್ಯಾಂಕ್ ಮುಂದಾಗಿದೆ.

    ದೇವದುರ್ಗದ ಗೂಗಲ್ ಗ್ರಾಮದ ರೈತ ದೊಡ್ಡವಿರುಪಾಕ್ಷಪ್ಪ ಬ್ಯಾಂಕ್ ನೋಟಿಸ್‍ಗಳನ್ನ ಹಿಡಿದು ಸಹಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.

    ಐದು ಎಕರೆ 12 ಗುಂಟೆ ಜಮೀನು ಹೊಂದಿರುವ ದೊಡ್ಡವಿರುಪಾಕ್ಷಪ್ಪ ಕೃಷಿ ಚಟುವಟಿಕೆಗಳಿಗಾಗಿ ಇಲ್ಲಿನ ಕೊಪ್ಪರ ಶಾಖೆಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನಲ್ಲಿ 5 ಲಕ್ಷ ಸಾಲ ಪಡೆದಿದ್ದರು. ಆದ್ರೆ ಸಾಲದ ಮೊತ್ತವನ್ನ 10 ಲಕ್ಷ 81 ಸಾವಿರ ಅಂತ ಹೇಳುತ್ತಿರುವ ಬ್ಯಾಂಕ್ ಈಗ ಬಡ್ಡಿಗೆ ಬಡ್ಡಿ ಸೇರಿಸಿ 24 ಲಕ್ಷ 42 ಸಾವಿರ ಕಟ್ಟುವಂತೆ ನೋಟೀಸ್ ನೀಡಿದೆ. ಸಾಲ ಪಾವತಿಸದಿದ್ದರೆ ಚಿರಾಸ್ಥಿಗಳಾದ ಮನೆ, ಜಮೀನನ್ನ ಹರಾಜು ಹಾಕುವುದಾಗಿ ವಾರೆಂಟ್ ನೀಡಿದೆ. ಇದರಿಂದ ದಿಗಿಲುಗೊಂಡಿರುವ ರೈತ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತಿದ್ದಾರೆ.

    2006 ರಿಂದ 9 ಕಂತುಗಳಲ್ಲಿ ಐದು ಲಕ್ಷ ರೂಪಾಯಿ ಸಾಲ ಪಡೆದ ರೈತ ಈಗಲೂ ಸಾಲ ತೀರಿಸಲು ಸಿದ್ಧರಿದ್ದಾರೆ. ಆದ್ರೆ ನ್ಯಾಯಯುತವಾದ ಮೊತ್ತವನ್ನ ನಿಗದಿ ಪಡಿಸಿ ಕಂತುಗಳಲ್ಲಿ ಕಟ್ಟಲು ಅವಕಾಶ ಕೊಡಿ ಅಂತ ಕೇಳುತ್ತಿದ್ದಾರೆ. ಇನ್ನೂ ರೈತನ ಬೆಂಬಲಕ್ಕೆ ನಿಂತಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬ್ಯಾಂಕ್‍ನ ನಡೆಯನ್ನ ಖಂಡಿಸಿದೆ. ರೈತನ ಸ್ಥಿರಾಸ್ಥಿ ಜಪ್ತಿಗೆ ಮುಂದಾದ್ರೆ ಪರಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಅಂತ ರೈತ ಮುಖಂಡ ಚಾಮರಸ ಮಾಲೀಪಾಟೀಲ್ ಎಚ್ಚರಿಸಿದ್ದಾರೆ.

    ಒಟ್ಟಿನಲ್ಲಿ, ಸತತ ಮೂರು ವರ್ಷಗಳ ಬರಗಾಲ, ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತ ವಿರುಪಾಕ್ಷಪ್ಪನಿಗೆ ಬ್ಯಾಂಕ್‍ನ ಸ್ಥಿರಾಸ್ಥಿ ಜಪ್ತಿ ವಾರೆಂಟ್ ದಿಕ್ಕುಕಾಣದಂತೆ ಮಾಡಿದೆ. ಕನಿಷ್ಠ ಈಗಲಾದ್ರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಸಾಲ ತೀರಿಸಲು ಬ್ಯಾಂಕ್ ಅನುವುಮಾಡಿಕೊಡಬೇಕಿದೆ.

  • ಮಂಡ್ಯ: ಮಳೆ-ಗಾಳಿ ರಭಸಕ್ಕೆ ನೆಲಕಚ್ಚಿದ ಬಾಳೆ

    ಮಂಡ್ಯ: ಮಳೆ-ಗಾಳಿ ರಭಸಕ್ಕೆ ನೆಲಕಚ್ಚಿದ ಬಾಳೆ

    ಮಂಡ್ಯ: ಇಷ್ಟು ದಿನ ಭೀಕರ ಬರಗಾಲದಿಂದ ತತ್ತರಿಸಿದ್ದ ಮಂಡ್ಯ ರೈತರು, ಇದೀಗ ಮಳೆಗಾಳಿಯ ರಭಸಕ್ಕೆ ಬೆಳೆ ನಾಶವಾಗಿ ಕಂಗಾಲಾಗಿದ್ದಾರೆ.

    ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹಡೇನಹಳ್ಳಿ ಗ್ರಾಮದಲ್ಲಿ ಬಾಳೆ ತೋಟ ಬಹುತೇಕ ನಾಶವಾಗಿದೆ. ಗ್ರಾಮದ ಮಾಯಣ್ಣಗೌಡ ಎಂಬುವರಿಗೆ ಸೇರಿದ 8.5 ಎಕರೆ ತೋಟದಲ್ಲಿ ಬಾಳೆ ಬೆಳೆದಿದ್ದರು.

    ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬಾಳೆ ನೆಲ ಕಚ್ಚಿರೋದ್ರಿಂದ ರೈತ ಮಾಯಣ್ಣಗೌಡರಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಸೂಕ್ತ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಮಾಯಣ್ಣಗೌಡ ಮನವಿ ಮಾಡಿಕೊಂಡಿದ್ದಾರೆ.