Tag: farmer

  • ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ-ಕೃಷಿ ಚಟುವಟಿಕೆ ಆರಂಭ

    ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ-ಕೃಷಿ ಚಟುವಟಿಕೆ ಆರಂಭ

    ಬೆಂಗಳೂರು: ಕಳೆದೊಂದು ವಾರದಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ರೈತರು ತಮ್ಮ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನ ಆರಂಭಿಸಿದ್ದಾರೆ.

    ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಈ ವರ್ಷ ಪ್ರಾರಂಭದಲ್ಲೇ ಉತ್ತಮ ಮುಂಗಾರು ಮಳೆಯಾಗುತ್ತಿದೆ. ವರುಣರಾಯ ರೈತರಿಗೆ ತನ್ನ ಕೃಪೆ ತೋರಿದ್ದಾನೆ. ಇನ್ನೂ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೆರೆ ಕುಂಟೆಗಳಲ್ಲಿ ನೀರು ತುಂಬಿ ಜಾನುವಾರುಗಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ.

    ಉತ್ತಮ ರೀತಿಯಲ್ಲಿ ಮುಂಗಾರು ಮಳೆಯಾಗುತ್ತಿರುವುದರಿಂದ ಈಗಾಗಲೇ ತಾಲೂಕಿನ ರೈತರು ತಮ್ಮ ಫಲವತ್ತಾದ ಭೂಮಿಯನ್ನ ಉಳುಮೆ ಮಾಡಿ ಬಿತ್ತನೆಗೆ ಮುಂದಾಗಿದ್ದಾರೆ. ಈ ಬಾರಿ ಉತ್ತಮ ಮಳೆಯಿಂದ ಒಳ್ಳೆಯ ಫಸಲು ಕೈ ಸೇರುತ್ತೆ ಎಂಬ ನಂಬಿಕೆಯಲ್ಲಿ ರೈತರಿದ್ದಾರೆ.

     

  • ರೈತರೇ ಈಗಲೇ ಬಿತ್ತನೆ ಮಾಡಿ, ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

    ರೈತರೇ ಈಗಲೇ ಬಿತ್ತನೆ ಮಾಡಿ, ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

    ಚಾಮರಾಜನಗರ: ಈಗ ಮಳೆ ಬರ್ತಿದೆ. ಈಗಲೇ ಬಿತ್ತನೆ ಕಾರ್ಯ ಶುರು ಮಾಡಿ. ಒಂದು ವೇಳೆ ಬಿತ್ತನೆ ಮಾಡಿಲ್ಲ ಅಂದ್ರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.

    ಬರಗಾಲದಲ್ಲಿ ರೈತರ ನೆರವಿಗೆ ಬಾರದ ಜಿಲ್ಲಾಡಳಿತ ಇದೀಗ ಎರಡು ಮೂರು ಬಾರಿ ಮಳೆ ಬಿದ್ದ ತಕ್ಷಣವೇ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಆದೇಶ ನೀಡಿದೆ. ಒಂದು ವೇಳೆ ಬಿತ್ತನೆ ಕಾರ್ಯದಲ್ಲಿ ತೊಡಿಗಿಕೊಳ್ಳದಿದ್ದರೆ ರೈತರಿಗೆ ಭೂ ಸುಧಾರಣೆ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರೈತರ ಮೇಲೆ ಜಿಲ್ಲಾಧಿಕಾರಿಗಳು ಹಕ್ಕು ಚಲಾವಣೆ ಮಾಡಿದ್ದಾರೆ.

    ಡಿಸಿ ಒಬ್ಬ ಮೂರ್ಖ: ಇವಾಗ್ಲೇ ಬಿತ್ತನೆ ಮಾಡಿ ಎಂಬುವುದು ದುರಂಹಕಾರ ಆದೇಶ. ಬಿತ್ತನೆ ಮಾಡದೇ ಇದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಆದೇಶ ನೀಡಿದ್ದಾರೆ. ಕೂಡಲೇ ಅದನ್ನ ಹಿಂಪಡೆಯಬೇಕು. ಇದೊಂದು ನಾಚಿಕೆಗೇಡಿತನದ ಕೆಲಸ. ಡಿಸಿ ಒಬ್ಬ ಮೂರ್ಖ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಾಮರಾಜನಗರದಲ್ಲಿ ಕಳೆದ ಐದು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು, ಇದರಿಂದ ಮಣ್ಣಿನ ಸತ್ವ ಸಂಪೂರ್ಣ ಕಳೆದುಕೊಂಡಿದೆ. ಇದೀಗ ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ತಕ್ಕ ಮಟ್ಟಿಗೆ ಮಳೆ ಆಗುತ್ತಿದೆ. ಹೀಗಾಗಿ ರೈತರು ತಮ್ಮ ಜಮೀನನ್ನು ಉತ್ತು ಹದ ಮಾಡಿಕೊಂಡು ಮಣ್ಣನ್ನು ಫಲವತ್ತುಗೊಳಿಸುತ್ತಿದ್ದಾರೆ. ಹೀಗಿರುವಾಗ ಏಕಾ ಏಕಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಈ ಆದೇಶದಿಂದ ರೈತರು ಆಕ್ರೋಶಗೊಂಡಿದ್ದು, ಡಿಸಿ ತಮ್ಮ ಆದೇಶವನ್ನು ವಾಪಸ್ಸು ಪಡೆದು ರೈತರ ಕ್ಷಮೆ ಯಾಚನೆ ಮಾಡಬೇಕೆಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.

     

  • ಎರಡೂ ಕಣ್ಣು ಕಾಣಿಸದಿದ್ರೂ ಕೈ ಚಾಚದೇ, ವ್ಯವಸಾಯ ಮಾಡಿ ದುಡಿದು ತಿನ್ನುವ ಆದರ್ಶವಾದಿ ಮಂಡ್ಯದ ಸಣ್ಣನಂಜೇಗೌಡ್ರು

    ಎರಡೂ ಕಣ್ಣು ಕಾಣಿಸದಿದ್ರೂ ಕೈ ಚಾಚದೇ, ವ್ಯವಸಾಯ ಮಾಡಿ ದುಡಿದು ತಿನ್ನುವ ಆದರ್ಶವಾದಿ ಮಂಡ್ಯದ ಸಣ್ಣನಂಜೇಗೌಡ್ರು

    ಮಂಡ್ಯ: ಇವರಿಗೆ ಎರಡೂ ಕಣ್ಣೂ ಕಾಣಲ್ಲ. ಆದ್ರೆ ಇವರು ಮಾಡದೇ ಇರೋ ಕೆಲಸವೇ ಇಲ್ಲ. ಎತ್ತರದ ತೆಂಗಿನ ಮರ ಹತ್ತಿ ಕಾಯಿ ಕೀಳ್ತಾರೆ. ದಿನ ನಿತ್ಯ ಸಾವಿರಾರು ಕಾಯಿ ಸುಲೀತಾರೆ. ಕಣ್ಣಿದ್ದವರೂ ನಾಚಿಸುವಂತೆ ವ್ಯವಸಾಯ ಮಾಡ್ತಾರೆ. ಮಂಡ್ಯದ ಆ ಸ್ವಾಭಿಮಾನಿ ಸಣ್ಣನಂಜೇಗೌಡರೇ ಇಂದಿನ ನಮ್ಮ ಪಬ್ಲಿಕ್ ಹೀರೋ.

    ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಕುಂದೂರು ಗ್ರಾಮದ ಸಣ್ಣನಂಜೇಗೌಡರಿಗೆ ಬುದ್ಧಿ ಬರುವ ಮುನ್ನವೇ ಕಾಯಿಲೆಯಿಂದಾಗಿ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡ್ರು. ಅಪ್ಪಟ ಸ್ವಾಭಿಮಾನಿಯಾದ ಇವರು ಕಣ್ಣಿಲ್ಲ ಅಂತಾ ಕೈ ಕಟ್ಟಿ ಕೂರಲಿಲ್ಲ. ತೆಂಗಿನ ಮರ ಹತ್ತೋದ್ರಿಂದ ಹಿಡಿದು, ದಿನಕ್ಕೆ ನೂರಾರು ಕಾಯಿ ಸುಲಿಯೋದು ಹೀಗೆ ವ್ಯವಸಾಯದ ಎಲ್ಲಾ ಕೆಲಸ ಮಾಡ್ತಾರೆ. ನಾಟಿ ಮಾಡೋದು, ಬೆಳೆ ಕೊಯ್ಲು ಮಾಡೋದು, ದನ ಕರು ಮೇಯಿಸೋದು ಯಾವುದೇ ಕೆಲಸ ಇರಲಿ ಕಣ್ಣಿದ್ದವರಿಗಿಂತ ಏನೂ ಕಮ್ಮಿ ಇಲ್ಲ.

    ಸಣ್ಣನಂಜೇಗೌಡರದು ಪತ್ನಿ ಹಾಗೂ ಇಬ್ಬರು ಮಕ್ಕಳ ಚಿಕ್ಕ ಸಂಸಾರ. ಕೇವಲ 20 ಗುಂಟೆಯಷ್ಟು ಜಮೀನಿದೆ. ಸಂಸಾರ ಸುಸೂತ್ರವಾಗಿ ನಡೆಯಲು ಅಂಧತ್ವ ಸಮಸ್ಯೆಯಾಗಬಾರದೆಂದು ಬೇರೆ ಕೆಲಸ ಕೂಡಾ ಮಾಡ್ತಾರೆ. ದೇಹದಲ್ಲಿ ಉಸಿರು ಇರೋತನಕ ದುಡಿದೇ ತಿನ್ನಬೇಕು ಎನ್ನುವ ಸಣ್ಣನಂಜೇಗೌಡರ ಆದರ್ಶ ಗ್ರಾಮದ ಯುವಕರಿಗೆ ಮಾದರಿಯಾಗಿದೆ.

    ಕಣ್ಣು ಇಲ್ಲದೇ ಇರುವುದು ಸಮಸ್ಯೆಯಲ್ಲ. ಆದ್ರೆ ಕಣ್ಣಿಲ್ಲ ಎಂದು ಕೊರಗುತ್ತಾ ಬೇರೆಯವರಿಗೆ ಹೊರೆಯಾಗಿ ಬದುಕುವುದು ನಿಜವಾದ ಸಮಸ್ಯೆ ಎಂದು ಸಾರುವ ಸಣ್ಣನಂಜೇಗೌಡರು ನಮ್ಮ ಪಬ್ಲಿಕ್ ಹೀರೋ ಎಂದು ಹೇಳಲು ನಮಗೆ ಹೆಮ್ಮೆ.

    https://www.youtube.com/watch?v=HixQgEbGmZM

  • ಉಳುಮೆಗೆ ಹೋದ ರೈತನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಉಳುಮೆಗೆ ಹೋದ ರೈತನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಹಾವೇರಿ: ಜಮೀನು ಉಳುಮೆ ಮಾಡಲು ಹೋದ ರೈತರಿಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ ಓರ್ವ ರೈತ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ನಜಿಕಲಕಮಾಪುರ ಗ್ರಾಮದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ ಸಿದ್ದಪ್ಪ ಪಡಗೋದಿ 46 ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನ ಬೆನ್ನೆಪ್ಪ ಡಬ್ಬಣ್ಣನವರ್ 48 ವರ್ಷ ವ್ಯಕ್ತಿಯನ್ನ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ.

    ಕಳೆದ ಒಂದೂವರೆ ವರ್ಷದಿಂದ 27 ಎಕರೆ ಜಮೀನು ವಿವಾದ ನ್ಯಾಯಾಲಯದಲ್ಲಿತ್ತು. ನ್ಯಾಯಾಲಯ ಸಿದ್ದಪ್ಪ ಪಡಗೋದಿ ಅವರಿಗೆ ಜಮೀನು ಎಂದು ತೀರ್ಪು ನೀಡಿತ್ತು. ಆದ್ರೆ ಇಂದು ಜಮೀನು ಉಳುಮೆ ಮಾಡಲು ಹೋದ ಸಿದ್ದಪ್ಪ ಪಡಗೋದಿಯನ್ನ ಬೀರಪ್ಪ ಪಡಗೋದಿ, ಸಿದ್ದಪ್ಪ, ಸುನೀಲ ಸೇರಿದಂತೆ 15 ಕ್ಕೂ ಹೆಚ್ಚು ಜನರು ಜಮೀನಿಗೆ ತೆರಳಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.

    ವಿಷಯ ತಿಳಿಯುತ್ತಿದ್ದ ಹೆಚ್ಚುವರಿ ಎಸ್ಪಿ ಶ್ರೀನಾಥ ಜೋಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

  • ರೈತನಿಂದ ಲಂಚ ಪಡೆಯುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ

    ರೈತನಿಂದ ಲಂಚ ಪಡೆಯುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ

    ರಾಯಚೂರು: ರೈತನೋರ್ವರಿಗೆ ಜಮೀನಿನ ಸರ್ವೆ ಟಿಪ್ಪಣಿ ಬರೆದುಕೊಡಲು ಲಂಚ ಪಡೆಯುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

    ರಾಯಚೂರು ತಹಶೀಲ್ದಾರ್ ಕಚೇರಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಸರ್ವೆ ಸೂಪರವೈಸರ್ ಫರ್ನಾಂಡಿಸ್ ಎಂಬವರನ್ನ ವಶಕ್ಕೆ ಪಡೆದಿದ್ದಾರೆ. ಬಾಪೂರು ಗ್ರಾಮದ ತಿಮ್ಮಪ್ಪ ಎಂಬ ರೈತನಿಂದ ಲಂಚ ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ.

    ಜಮೀನಿನ ಸರ್ವೇ ಕಾರ್ಯ ಮುಂದುವರೆಸಲು ಫರ್ನಾಂಡಿಸ್ 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಕೊನೆಗೆ 2000 ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆದಿದೆ. ಎಸಿಬಿ ಅಧಿಕಾರಿ ಸಣ್ಣಮನಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಫರ್ನಾಂಡಿಸ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

     

  • ಮೂಕ ಪ್ರಾಣಿಗಳಿಗಾಗಿ ನದಿಗೇ ಬೋರ್‍ವೆಲ್ ನೀರು ಬಿಟ್ರು, ಐದಾರು ಊರುಗಳ ಪ್ರಾಣಿಗಳಿಗೆಲ್ಲಾ ಇವರೇ ಭಗೀರಥ..!

    ಮೂಕ ಪ್ರಾಣಿಗಳಿಗಾಗಿ ನದಿಗೇ ಬೋರ್‍ವೆಲ್ ನೀರು ಬಿಟ್ರು, ಐದಾರು ಊರುಗಳ ಪ್ರಾಣಿಗಳಿಗೆಲ್ಲಾ ಇವರೇ ಭಗೀರಥ..!

    ಹಾವೇರಿ: ಈ ವರ್ಷ ನದಿ, ಹಳ್ಳಗಳಲ್ಲೂ ಕುಡಿಯೋಕೆ ನೀರಿಲ್ಲ. ನೀರಿಗಾಗಿ ಜನ ಮತ್ತು ಜಾನುವಾರುಗಳು ನಿತ್ಯವೂ ಪರದಾಡು ಪರಿಸ್ಥಿತಿ ಇದೆ. ಆದ್ರೆ ಇಲ್ಲೊಬ್ಬ ರೈತ ತಮ್ಮ ಬೋರ್‍ವೆಲ್ ನೀರಲ್ಲಿ ಪೈರು ಬೆಳೆಯೋದು ಬಿಟ್ಟು, ನದಿಗೇ ನೇರವಾಗಿ ನೀರು ಬಿಡ್ತಿದಾರೆ. ಪ್ರತಿನಿತ್ಯವೂ ಸಾವಿರಾರು ಕುರಿ, ಮೇಕೆ, ಕಾಡುಪ್ರಾಣಿ ಹಾಗೂ ಪಕ್ಷಿಗಳು ದಾಹ ತಣಿಸುತ್ತಿದ್ದಾರೆ.

    ಬೋರ್‍ವೆಲ್ ನೀರನ್ನು ನೇರವಾಗಿ ನದಿಗೇ ಬಿಡ್ತಿರೋ ರಾಜು ಸಿಂಗಣ್ಣನವರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ರಾಜು ಅವರು ಜಿಲ್ಲೆಯ ವಣೂರು ತಾಲೂಕಿನ ಕಳಸೂರು ಗ್ರಾಮದ ನಿವಾಸಿ. ಈ ಬಾರಿ ವರದಾ ನದಿ ಬತ್ತಿ ಹೋಗಿರೋದ್ರಿಂದ ಜನ, ಜಾನುವಾರು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಲ್ಲ. ಪ್ರಾಣಿ, ಪಕ್ಷಿ, ಜನರ ಕಷ್ಟ ನೋಡಿದ ರಾಜು ಪೈರು ಬೆಳೆಯಲು ಕೊರೆಸಿದ್ದ ಬೋರ್‍ವೆಲ್ ನೀರನ್ನೇ ನದಿಗೆ ಬಿಡ್ತಿದ್ದಾರೆ. ನದಿಯ ಗುಂಡಿಯಲ್ಲಿ ನಿಂತ ನೀರು ಕುಡಿದು ಮೂಕ ಪ್ರಾಣಿಗಳು ದಾಹ ನೀಗಿಸಿಕೊಳ್ತಿವೆ. ಮಳೆ ಬಂದು ನದಿಗೆ ನೀರು ಬರೋತನಕ ನದಿಗೆ ನೀರು ಬಿಡ್ತೀನಿ ಎಂದು ರಾಜು ಹೇಳುತ್ತಾರೆ.

    ಪ್ರಾಣಿ, ಪಕ್ಷಿಗಳಿಗೆ ನೀರು ಕೊಡುವ ಉದ್ದೇಶದಿಂದಲೇ ಈ ಬಾರಿ ರಾಜು ಬೇಸಿಗೆ ಬೆಳೆ ಬೆಳೆದಿಲ್ಲ. ರಾಜು ಅವರ ಬೋರ್‍ವೆಲ್‍ನಿಂದ ಕಳಸೂರು, ದೇವಗಿರಿ, ಕೋಳೂರು ಸೇರಿದಂತೆ ಸುತಮುತ್ತಲಿನ ಗ್ರಾಮದ ರೈತರ ಜಾನುವಾರುಗಳು ತಮ್ಮ ದಾಹವನ್ನು ತಣಿಸಿಸೂಳ್ಳುತ್ತಿವೆ.

    ಬೆಂಗಳೂರಂತಹ ಮಹಾನಗರಗಳಲ್ಲಿ ಹನಿ ನೀರಿಗೂ ದುಡ್ಡು ಕೊಡಬೇಕಾದ ಪರಿಸ್ಥಿತಿ ಇದೆ. ನೀರಿಗಾಗಿ ದಿನಗಟ್ಟಲೆ ಕೊಡ ಹಿಡಿದು ನಿಲ್ಲಬೇಕಾದ ದೃಶ್ಯ ಕಾಣ್ತಿವೆ. ಆದರೆ ರಾಜು ಅವರ ಈ ಕಾರ್ಯ ನೋಡಿದ್ರೆ ಜಾನುವಾರುಗಳಿಗೆ ಬರಗಾಲದ ಭಗೀರಥನಾಗಿದ್ದಾರೆ.

    https://www.youtube.com/watch?v=wIs_onT-jM4

     

  • ಮಗಳ ಮದುವೆಯ ಹಿಂದಿನ ದಿನವೇ ರೈತ ಆತ್ಮಹತ್ಯೆ!

    ಮಗಳ ಮದುವೆಯ ಹಿಂದಿನ ದಿನವೇ ರೈತ ಆತ್ಮಹತ್ಯೆ!

    ಯಾದಗಿರಿ: ಮಗಳ ಮದುವೆಯ ಹಿಂದಿನ ದಿನವೇ ಸಾಲ ಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೀರೆವಡಗೇರಾ ಗ್ರಾಮದಲ್ಲಿ ನಡೆದಿದೆ.

    ರೈತ ಭೀಮೇಶಪ್ಪ ಕರಿಕಳ್ಳಿ (50) ಆತ್ಮಹತ್ಯೆ ಮಾಡಿಕೊಂಡ ರೈತ. ಇಂದು ಭೀಮೇಶಪ್ಪ ಅವರ ಮಗಳ ಮದುವೆ ರಾಯಚೂರು ಜಿಲ್ಲೆಯಲ್ಲಿ ನಡೆಯಬೇಕಿತ್ತು. ಆದ್ರೆ ಮಗಳ ಮದುವೆ ಮುನ್ನವೇ ಗುರುವಾರದಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಒಂದು ಎಕರೆ ಹೊಲವಿದ್ದು ಎರಡು ಲಕ್ಷ ರೂಪಾಯಿ ಕೈ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

    ಗುರುವಾರ ಬೆಳಿಗ್ಗೆ ಮನೆಯಿಂದ ಹೊರಹೋದ ಭೀಮೇಶಪ್ಪ ಮನೆಗೆ ಬಾರದೆ ಇರುವುದರಿಂದ ಕುಟುಂಬದವರು ಹುಡುಕಲು ಆರಂಭಿಸಿದ್ದು, ಹೀರೆವಡಗೇರಾ ಹೊರವಲಯದ ಹೊಲವೊಂದರಲ್ಲಿ ಶವವಾಗಿ ಸಿಕ್ಕಿದ್ದಾರೆ.

    ಭೀಮೇಶಪ್ಪ ಅವರಿಗೆ ಮೂರು ಜನ ಗಂಡು ಮಕ್ಕಳು, ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ. ಘಟನೆ ಸಂಬಂಧ ಹಿರೇವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆರೆಯಲ್ಲಿ ಶ್ರಮದಾನ ಮಾಡಿದ ಹಾವೇರಿಯ ಜಿಲ್ಲಾಧಿಕಾರಿ

    ಕೆರೆಯಲ್ಲಿ ಶ್ರಮದಾನ ಮಾಡಿದ ಹಾವೇರಿಯ ಜಿಲ್ಲಾಧಿಕಾರಿ

    ಹಾವೇರಿ: ಜಿಲ್ಲಾಧಿಕಾರಿಗಳು ಅಂದ್ರೆ ಕಚೇರಿ ಕೆಲಸ ಮಾಡಿಕೊಂಡು ಅಧಿಕಾರಿಗಳ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವುದು ಕಾಮನ್. ಆದ್ರೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿಯ ಜೊತೆ ಸೇರಿಕೊಂಡು ಶ್ರಮದಾನ ಮಾಡಿ, ಅವರ ಕುಂದು-ಕೊರತೆಗಳನ್ನ ಕೇಳಿದ್ದಾರೆ.

    ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದ ಕೆರೆಯಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕೆರೆಯಲ್ಲಿ ಹೂಳು ಎತ್ತಲಾಗುತ್ತಿತ್ತು. ಶ್ರಮದಾನದಲ್ಲಿ ಜಿಲ್ಲಾಧಿಕಾರಿಗಳು ಭಾಗವಾಹಿಸುವದರ ಜೊತೆ ಕಾರ್ಮಿಕರ ತೊಂದರೆಗಳನ್ನು ಆಲಿಸಿದರು.

    ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಪ್ರತಿಯೊಬ್ಬರ ಸಮಸ್ಯೆಗಳನ್ನು ಕೇಳಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸದ್ಯ ಪ್ರತಿ 15 ದಿನಕ್ಕೆ ವೇತನವನ್ನ ನೀಡಲಾಗುತ್ತದೆ. ಅದನ್ನ ಕಡಿಮೆ ಮಾಡಿ ಪ್ರತಿವಾರ ತಮ್ಮ ಖಾತೆಗೆ ಹಣಬರುವಂತೆ ಮಾಡಬೇಕು ಎಂದು ಕಾರ್ಮಿಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

    ಪ್ರಸ್ತಕ ವರ್ಷ ಬರಗಾಲ ಇರೋದ್ರಿಂದ ಬೇರೆ ಕಡೆ ಕೆಲಸ ಸಿಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ 100 ರಿಂದ 150 ದಿನಗಳ ಕಾಲ ಬಡಕೂಲಿಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ನಮ್ಮ ಜೊತೆಗೆ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ ಮಾಡಿಸಿದ್ರು. ನಮಗೆ ಬಹಳ ಸಂತೋಷವಾಗಿದೆ. ಅಲ್ಲದೆ ನಮ್ಮ ವೇತನವನ್ನ ವಾರಕ್ಕೆ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಕೂಲಿ ಕಾರ್ಮಿಕೆ ಸರೋಜಮ್ಮ ಸುಣಗಾರ ಹೇಳಿದರು.

  • ಕ್ರಿಮಿನಾಶಕ ಸಿಂಪಡನೆಗೆ ಸಿದ್ಧಗೊಂಡ ಡ್ರೋನ್- ರಾಯಚೂರು ಕೃಷಿ ವಿವಿ ವಿದ್ಯಾರ್ಥಿ ಸಾಧನೆ

    ಕ್ರಿಮಿನಾಶಕ ಸಿಂಪಡನೆಗೆ ಸಿದ್ಧಗೊಂಡ ಡ್ರೋನ್- ರಾಯಚೂರು ಕೃಷಿ ವಿವಿ ವಿದ್ಯಾರ್ಥಿ ಸಾಧನೆ

    -ಜಿಪಿಎಸ್ ಮೂಲಕ ಕುಳಿತಲ್ಲೆ ಕ್ರಿಮಿನಾಶಕ ಸಿಂಪಡನೆ

    ರಾಯಚೂರು: ಹೊಲ, ಗದ್ದೆಗಳಲ್ಲಿ ಕೆಲಸ ಮಾಡಲು ಕೂಲಿಯಾಳುಗಳನ್ನ ಹುಡುಕುವುದರಲ್ಲೇ ರೈತರು ಸುಸ್ತಾಗಿ ಹೋಗುತ್ತಿದ್ದಾರೆ. ಹೀಗಾಗಿ ರೈತರಿಗೆ ಅನುಕೂಲವಾಗಲಿ ಅಂತ ರಾಯಚೂರು ಕೃಷಿ ವಿವಿಯ ವಿದ್ಯಾರ್ಥಿ ರೈತ ಸ್ನೇಹಿ ಯಂತ್ರವನ್ನ ಅಭಿವೃದ್ಧಿಪಡಿಸಿದ್ದಾರೆ. ಕಡಿಮೆ ಸಮಯ, ಕಡಿಮೆ ಜನ ಹಾಗೂ ಆರೋಗ್ಯಕರ ಬೇಸಾಯಕ್ಕಾಗಿ ಡ್ರೋನ್ ಮೊರೆಹೋಗಿದ್ದಾರೆ.

    ಡ್ರೋನ್ ಅಂದ್ರೆ ಥಟ್ಟನೆ ನೆನಪಾಗೋದು ದೊಡ್ಡ ದೊಡ್ಡ ಸಭೆ, ಸಮಾರಂಭಗಳಲ್ಲಿ ದೃಶ್ಯಗಳನ್ನ ಚಿತ್ರಿಕರಿಸಲು ಹಾಗೂ ಭದ್ರತೆಗೆ ಬಳಸುವ ಸಾಧನವಾಗಿ ಅಷ್ಟೇ. ಆದ್ರೆ ರಾಯಚೂರಿನ ಕೃಷಿ ವಿವಿಯ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಯಲ್ಲಪ್ಪ ಈಗ ಡ್ರೋನನ್ನು ಕ್ರಿಮಿನಾಶಕ ಸಿಂಪಡಿಸುವ ಯಂತ್ರವನ್ನಾಗಿಸಿದ್ದಾರೆ. ಹಳೆಯ ಪದ್ಧತಿಗಳಲ್ಲೇ ಹೊಲ ಗದ್ದೆಗಳಲ್ಲಿ ಬೇಸಾಯ ಮಾಡಲು ಕಷ್ಟಪಡುತ್ತಿದ್ದ ತಂದೆ ಹಾಗೂ ಸಹೋದರರಿಗೆ ಸ್ಪಂದಿಸಲು ಕೃಷಿ ಎಂಜಿನೀಯರಿಂಗ್‍ಗೆ ಸೇರಿದ ಯಲಪ್ಪ ಇಂತಹದ್ದೊಂದು ಸಾಧನೆ ಮಾಡಿದ್ದಾರೆ.

    ಎಂ.ಟೆಕ್ ಅಂತಿಮ ವರ್ಷದ ಪ್ರಾಜೆಕ್ಟ್‍ಗಾಗಿ ಡ್ರೋನ್ ಆಪರೇಟೆಡ್ ಅಗ್ರಿಕಲ್ಚರ್ ಸ್ಪ್ರೇಯರ್ ಅಭಿವೃದ್ದಿಪಡಿಸಿದ್ದಾರೆ. ಕಾಲೇಜು ಅನುದಾನದಲ್ಲೇ ಎರಡು ಲಕ್ಷ ರೂಪಾಯಿಯಲ್ಲಿ ತಯಾರಿಸಿರುವ ಈ ಸಾಧನಕ್ಕೆ ಜಿಪಿಎಸ್ ಅಳವಡಿಸಲಾಗಿದೆ. ಹೊಲದ ಬದುವಿನಲ್ಲೇ ಕುಳಿತು ರಿಮೋಟ್ ಕಂಟ್ರೋಲ್ ನಿಂದ ಇಡೀ ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಬಹುದಾಗಿದೆ. ಇದರಿಂದ ಕೂಲಿಯಾಳು ಸಮಸ್ಯೆಯಿಲ್ಲ, ಕ್ರಿಮಿನಾಶಕದ ಸೈಡ್ ಎಫೆಕ್ಟ್ ಸಹ ಇಲ್ಲ.

    ಭತ್ತ, ಕಡಲೆ, ತೊಗರಿ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಾದ ನಿಂಬೆ, ಮಾವು, ಸಪೋಟ ಸೇರಿದಂತೆ ಎತ್ತರದ ಮರಗಳಿಗೂ ಸುಲಭವಾಗಿ ಕ್ರಿಮಿನಾಶಕ ಸಿಂಪಡಿಸಬಹುದು. ಡ್ರೋನ್ ಗೆ 5 ಲೀಟರ್ ಟ್ಯಾಂಕ್ ಅಳವಡಿಸಲಾಗಿದ್ದು ಕ್ರಿಮಿನಾಶಕ ಮಿಶ್ರಣ ಬೆರಿಸಿ ಜಿಪಿಎಸ್ ಮೂಲಕ ಕೆಲಸ ನಿಗದಿ ಮಾಡಿದ್ರೆ ಸಾಕು ಕೆಲಸ ಮುಗಿದಂತೆ.

    ಗದ್ದೆಯಲ್ಲಿ ನೀರು ನಿಂತಾಗ ರೈತರು ಹೊಲದಲ್ಲಿ ಓಡಾಡಿ ಕ್ರಿಮಿನಾಶಕ ಸಿಂಪಡಿಸುವುದು ಕಷ್ಟದ ಕೆಲಸ. ಆದ್ರೆ ವಿದ್ಯಾರ್ಥಿ ಯಲ್ಲಪ್ಪ ತಯಾರಿಸಿರೋ ಈ ಡ್ರೋನ್‍ನಿಂದ ಗದ್ದೆ ಬದುವಿನ ಮೇಲೆ ಕುಳಿತು ಕೆಲಸ ಮಾಡಬಹುದು. ರೈತನ ಮಗನಾಗಿ ರೈತರ ಅನುಕೂಲಕ್ಕೆ ಯಲ್ಲಪ್ಪ ಅಭಿವೃದ್ದಿಪಡಿಸಿರುವ ಡ್ರೋನ್ ಕ್ರಿಮಿನಾಶಕ ಸಿಂಪಡಿಸುವ ಯಂತ್ರ ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನೂ ಪಡೆದಿದೆ. ಆದ್ರೆ ರೈತರಿಗೆ ಮುಕ್ತವಾಗಿ ಸಿಗಬೇಕಿದೆ ಅಷ್ಟೆ.

  • ಹೊಲದಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

    ಹೊಲದಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

    ಹುಬ್ಬಳ್ಳಿ: ಹೊಲದ ಬಳಿ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೈಗೈದ ಘಟನೆ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ಬಳಿ ನಡೆದಿದೆ.

    ಮೃತ ವ್ಯಕ್ತಿಯ ಬಗ್ಗೆ ಗುರುತು ಪತ್ತೆಯಾಗಿಲ್ಲ. ಆದ್ರೆ ಪೊಲೀಸರು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ರೈತನ ಕೊಲೆಯಾಗಿರಬಹುದು ಅಂತಾ ಶಂಕಿಸಿದ್ದಾರೆ.

    ಬಸವರಾಜ ಸತ್ತೂರ ಎಂಬುವರ ಜಮೀನಿನಲ್ಲಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೊಲದ ಬಳಿ ಕರೆತಂದು ಕುತ್ತಿಗೆಗೆ ಮಚ್ಚಿನಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸುಮಾರು 45ವರ್ಷ ವಯಸ್ಸಿನ ವ್ಯಕ್ತಿಯ ಶವವಾಗಿದೆ. ಕೊಲೆಯಾದ ವ್ಯಕ್ತಿ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಮೃತ ವ್ಯಕ್ತಿ ರೈತನಿರಬೇಕು ಎಂಬುದು ಆತನ ಬಟ್ಟೆಗಳಿಂದ ಗೊತ್ತಾಗುತ್ತಿದ್ದು, ಹಳೇ ವೈಷಮ್ಯವೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಬೆಂಡಿಗೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀನೆ ನಡೆಸಿದ್ದಾರೆ.