Tag: farmer

  • ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಕಾಡಾನೆ ದಾಳಿ- ರೈತ ಸಾವು

    ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಕಾಡಾನೆ ದಾಳಿ- ರೈತ ಸಾವು

    ರಾಮನಗರ: ರೇಷ್ಮೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಕಾಡಾನೆವೊಂದು ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಕನಕಪುರ ತಾಲೂಕಿನ ಹೊರಳಗಲ್ಲು ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಹೊರಳಗಲ್ಲು ಗ್ರಾಮದ ನಿವಾಸಿ ಕರೀಗೌಡ ಎಂಬವರೇ ಆನೆ ದಾಳಿಯಿಂದ ಸಾವನ್ನಪ್ಪಿದ ರೈತ. ಕಳೆದ ರಾತ್ರಿ ಮೃತ ರೈತ ಕರೀಗೌಡ ರೇಷ್ಮೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಈ ವೇಳೆ ದಾಳಿ ನಡೆಸಿರುವ ಕಾಡಾನೆ ತೋಟದಲ್ಲಿಯೇ ಸೊಂಡಿಲಿನಿಂದ ಕರೀಗೌಡರನ್ನು ಹಿಡಿದು ಬಡಿದು ಸಾಯಿಸಿದೆ.

    ಘಟನೆಗೆ ಸಂಬಂಧಿಸಿದಂತೆ ಕನಕಪುರ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪದೆ ಪದೇ ಆನೆ ದಾಳಿಯಿಂದ ಬೆಳೆ ನಾಶದ ಜೊತೆಗೆ ಪ್ರಾಣ ಹಾನಿಗಳಾಗುತ್ತಿದ್ದು, ಅರಣ್ಯ ಇಲಾಖೆ ಆನೆ ದಾಳಿ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಉಳುಮೆ ಮಾಡಲು ಬಂದಿದ್ದ ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ!

    ಉಳುಮೆ ಮಾಡಲು ಬಂದಿದ್ದ ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ!

    ದಾವಣಗೆರೆ: ಬಡ ರೈತರೊಬ್ಬರ ಮೇಲೆ ಅರಣ್ಯ ಇಲಾಖೆಯ ಅಧಿಕಾರಗಳು ದೌರ್ಜನ್ಯ ನಡೆಸಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚಕಾರಕ್ಕಿ ಕಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಬಗರ್ ಹುಕುಂ ಜಮೀನಿನಲ್ಲಿ ಜಯ್ಯಪ್ಪ ಎಂಬ ರೈತರ ಮೇಲೆ ಹಲ್ಲೆ ನಡೆದಿದೆ.

    ಜಯ್ಯಪ್ಪ ಅರಣ್ಯ ಪ್ರದೇಶದ ಪಕ್ಕದಲ್ಲಿ ಇದ್ದ ತಮ್ಮ 2 ಎಕರೆ ಭೂಮಿಯಲ್ಲಿ ಉಳುಮೆ ಮಾಡಲು ಮುಂದಾದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಜಯ್ಯಪ್ಪ 30 ವರ್ಷ ದಿಂದ ಉಳುಮೆ ಮಾಡುತ್ತಾ ಬಂದಿದ್ದರು. ಆದ್ರೆ ಇದೀಗ ತನ್ನ ಜಮೀನಿನಲ್ಲಿ ಉಳುಮೆ ಮಾಡಲು ಬಂದಿದ್ದ ವೇಳೆ ನಾಲ್ವರು ಅಧಿಕಾರಿಗಳಾದ ಷಡಕ್ಷರಪ್ಪ, ಶ್ರೀ ಶೈಲ, ಭೀಮಪ್ಪ ಹಾಗೂ ರವಿ ಎಂಬವರಿಂದ ಹಲ್ಲೆ ನಡೆದಿದೆ.

    ಸದ್ಯ ಜಯ್ಯಪ್ಪ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿ ರೈತ ಸಾವು

    ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿ ರೈತ ಸಾವು

    ವಿಜಯಪುರ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ರೈತರೊಬ್ಬರು ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕರವಿನಾಳ ಗ್ರಾಮದಲ್ಲಿ ನಡೆದಿದೆ.

    ಸಾಯಬಣ್ಣ ನಾಯ್ಕೋಡಿ (65) ಮೃತ ರೈತ. ಗುರುವಾರ ಸಂಜೆ ಭಾರೀ ಮಳೆಯಾಗಿತ್ತು. ಇದ್ರಿಂದಾಗಿ ಗ್ರಾಮದ ಹಳ್ಳ ತುಂಬಿ ಹರಿತ್ತಿತ್ತು. ಗುರುವಾರ ಸಂಜೆ ಜಮೀನಿನಿಂದ ಹೊರ ಬರುತ್ತಿದ್ದ ವೇಳೆ ಸಾಯಬಣ್ಣ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಇಂದು ಬೆಳಗ್ಗೆ ಸಾಯಬಣ್ಣರ ಮೃತದೇಹದ ಹಳ್ಳದ ಮುಳ್ಳುಗಳ ಮಧ್ಯೆ ಪತ್ತೆಯಾಗಿದೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

    ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

    ಹುಬ್ಬಳ್ಳಿ: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ನಡೆದಿದೆ.

    ರಾಯನಗೌಡ ಪಾಟೀಲ್(45) ಎಂಬುವರು ಆರು ಏಕರೆ ಜಮೀನು ಹೊಂದಿದ್ದರು. ಹಾಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಅಲ್ಲದೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬೆಳದ ಬೆಳೆಯೂ ಬಾರದ ಕಾರಣ ಜಮೀನಿನಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಿದ್ದರೂ ಪ್ರತಿದಿನ ಒಂದೇ ಬೆಲೆಯಲ್ಲಿ ಮಾರಾಟ: ಬಂಕ್ ವಿರುದ್ಧ ರೈತರ ಆಕ್ರೋಶ

    ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಿದ್ದರೂ ಪ್ರತಿದಿನ ಒಂದೇ ಬೆಲೆಯಲ್ಲಿ ಮಾರಾಟ: ಬಂಕ್ ವಿರುದ್ಧ ರೈತರ ಆಕ್ರೋಶ

    ದಾವಣಗೆರೆ: ದಿನ ನಿತ್ಯದ ಬೆಲೆ ಪರಿಷ್ಕರಣೆ ಮಾಡದೆ ಒಂದೇ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಕಲಾಗುತ್ತಿರುವ ಬಂಕ್ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆ ತಾಲೂಕಿನ ಅಣಜಿ ಕ್ರಾಸ್‍ನಲ್ಲಿ ನಡೆದಿದೆ.

    ಕೇಂದ್ರ ಸರ್ಕಾರ ಜೂನ್ 1ರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿದಿನ ಪರಿಷ್ಕರಣೆ ಮಾಡಬೇಕು ಎನ್ನುವ ಅದೇಶವನ್ನು ಜಾರಿಮಾಡಿತ್ತು. ಈ ಆದೇಶದ ಅನ್ವಯ ಎಲ್ಲಾ ಪೆಟ್ರೋಲ್ ಬಂಕ್‍ಗಳ ಪ್ರತಿನಿತ್ಯ ದರ ಬದಲಾವಣೆ ಮಾಡುತ್ತಿವೆ.

    ಆದ್ರೆ ಅಣಜಿ ಕ್ರಾಸ್ ಬಳಿ ಇರುವ ಕಿಸಾನ್ ಸೇವಾ ಬಂಕ್‍ನಲ್ಲಿ ದರ ಪರಿಷ್ಕರಣೆ ಮಾಡದೇ ಪ್ರತಿದಿನ ಒಂದೇ ದರದಲ್ಲಿ ತೈಲವನ್ನು ವಿತರಿಸುತಿತ್ತು. ಬೆಲೆ ಹೆಚ್ಚಾಗಿದ್ದರೆ ದರವನ್ನು ಏರಿಕೆ ಮಾಡಿದ್ದರೆ, ಕಡಿಮೆಯಾಗಿದ್ದರೆ ದರ ಇಳಿಕೆ ಆಗುತ್ತಿರಲಿಲ್ಲ.

    ಪ್ರತಿ ಲೀಟರ್ ಡಿಸೇಲ್ ಬೆಲೆ ಪ್ರಸ್ತುತ 58 ರೂ. ಇದ್ದರೂ 61 ರೂ. ನಿಗದಿಯಾಗಿದ್ದರೆ, ಲೀಟರ್ ಪೆಟ್ರೋಲ್ ಬೆಲೆ 68 ರೂ. ಇದ್ದರೂ 71 ರೂ. ಮಾರಾಟ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಮಾಲೀಕರು ವಿರುದ್ಧ ಜಗಳ ನಡೆಸಿದ್ದಾರೆ.

     

  • ಸೆಲ್ಫೀಗಾಗಿ ಬರೋರಿಂದ ಸೂರ್ಯಕಾಂತಿ ಬೆಳೆ ಹಾನಿ- ರೈತ ಮಾಡಿದ ಉಪಾಯದಿಂದ ಈಗ ಪ್ರತಿದಿನ ಸಾವಿರಾರು ರೂ. ಸಂಪಾದನೆ

    ಸೆಲ್ಫೀಗಾಗಿ ಬರೋರಿಂದ ಸೂರ್ಯಕಾಂತಿ ಬೆಳೆ ಹಾನಿ- ರೈತ ಮಾಡಿದ ಉಪಾಯದಿಂದ ಈಗ ಪ್ರತಿದಿನ ಸಾವಿರಾರು ರೂ. ಸಂಪಾದನೆ

    ಚಾಮರಾಜನಗರ: ಸೂರ್ಯಕಾಂತಿ ಹೂ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ? ಆದರಲ್ಲೂ ಈ ಸೆಲ್ಫೀ ಯುಗದಲ್ಲಿ ಇಂತಹ ಆಕರ್ಷಣೆಯ ಹೂ ಕಂಡ್ರೆ ಮುಗಿದೇ ಹೋಯಿತು. ಯುವಕ ಯುವತಿಯರು ಹುಚ್ಚೆದ್ದು ಹೂವಿನ ಮುಂದೆ ಸೆಲ್ಫಿಗಳ ಸುರಿಮಳೆಯನ್ನೆ ಸುರಿಸಿ ಬಿಡುತ್ತಾರೆ. ಯುವ ಜನಾಂಗದ ಈ ಸೆಲ್ಫೀ ಕ್ರೇಜ್ ಬಳಸಿಕೊಂಡು ರೈತರೊಬ್ಬರು ಮಳೆ ಇಲ್ಲದಿದ್ದರೂ ಸಹ ಕೃಷಿಯಲ್ಲಿ ಸಾಕಷ್ಟು ಹಣ ಗಳಿಕೆ ಮಾಡ್ತಾ ಇದ್ದಾರೆ.

    ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕುಮಾರ್ ಎಂಬ ರೈತ ಬೆಳೆದಿರುವ ಸೂರ್ಯಕಾಂತಿ ಬೆಳೆಯಿಂದ ದಿನನಿತ್ಯ 3 ರಿಂದ 4 ಸಾವಿರ ರೂ. ಹಣ ಸಂಪಾದನೆಯಾಗುತ್ತಿದೆ. ಅದು ಯುವ ಜನಾಂಗದ ಸೆಲ್ಫೀ ಕ್ರೇಜ್ ಬಳಕೆ ಮಾಡಿಕೊಂಡು. ದೃಶ್ಯದಲ್ಲಿ ಸೂರ್ಯಕಾಂತಿ ಹೂವಿನ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಾ ಇರುವ ಯುವಕರಿಗೆ ತಲಾ ಒಬ್ಬರಿಗೆ ಹತ್ತರಿಂದ ಇಪ್ಪತ್ತು ರೂಪಾಯಿ ಹಣವನ್ನು ನಿಗದಿ ಮಾಡಲಾಗಿದೆ.

    ಈ ರಸ್ತೆಯಲ್ಲಿ ಅತಿಯಾಗಿ ಕೇರಳ ಭಾಗದವರು ಸಂಚರಿಸುವುದರಿಂದ ಅವರು ಸೂರ್ಯಕಾಂತಿಗೆ ಮಾರು ಹೋಗಿ ಪ್ರತಿನಿತ್ಯ ಯಾರೂ ಇಲ್ಲದ ವೇಳೆ ಫೋಟೋ ತೆಗೆದುಕೊಳ್ಳಲು ಬಂದು ಬೆಳೆಯನ್ನು ಮುರಿದು ಹಾಕುತ್ತಿದ್ದರು. ಹೀಗಾಗಿ ಕುಮಾರ್ ಇದನ್ನು ತಡೆಯಬೇಕು ಎಂದು ಇಲ್ಲಿ ಫೋಟೋ ತೆಗೆದುಕೊಳ್ಳುವವರು ಹಣ ನೀಡಬೇಕು ಎಂದು ಬೋರ್ಡ್ ಹಾಕಿದ್ದಾರೆ. ಹೀಗಿದ್ದರೂ ಸಹ ಫೋಟೋ ತೆಗೆದುಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

    ಪ್ರತಿನಿತ್ಯ ನೂರಾರು ಮಂದಿ ಬಂದು ಹಣ ನೀಡಿ ಸೂರ್ಯಕಾಂತಿಯ ಮಧ್ಯೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಬೆಳೆಯ ಸಂರಕ್ಷಣೆ ಜೊತೆಗೆ ಆದಾಯವು ಕೂಡ ದೊರಕುತ್ತಿರುವುದು ಕುಮಾರ್ ಮುಖದಲ್ಲಿ ಮಂದಹಾಸ ಮೂಡಿದೆ.

  • ಬರಗಾಲದಿಂದ ಕಂಗಾಲಾದ ಬಡ ರೈತರಿಗೆ ಅನ್ನದಾತರಾದ್ರು- ಗೋಶಾಲೆಯಲ್ಲಿ ನಿತ್ಯ 400 ರೈತರಿಗೆ ಅನ್ನ ದಾಸೋಹ

    ಬರಗಾಲದಿಂದ ಕಂಗಾಲಾದ ಬಡ ರೈತರಿಗೆ ಅನ್ನದಾತರಾದ್ರು- ಗೋಶಾಲೆಯಲ್ಲಿ ನಿತ್ಯ 400 ರೈತರಿಗೆ ಅನ್ನ ದಾಸೋಹ

    ತುಮಕೂರು: ಅನ್ನದಾತರಿಗೆ ಅನ್ನದಾನ ಮಾಡುವ ಮಹಾನುಭಾವರು. ಬರಗಾಲದಿಂದ ಕಂಗಾಲಾದ ಬಡ ರೈತರ ಹೊಟ್ಟೆ ತಣಿಸಿದ್ದಾರೆ. ತೂಮಕೂರಿನ ರಕ್ಷಿತ್ ಜೈ ಗಿರೀಶ್, ಗೋ ಶಾಲೆಯಲ್ಲಿ ಪ್ರತಿದಿನ 400ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಅನ್ನದಾಸೋಹ ಮಾಡುತ್ತಿದ್ದಾರೆ.

    ಹೌದು, ಈ ಮಹಾನುಭಾವರಿಗೆ ರೈತರೆಂದರೆ ಎಲ್ಲಿಲ್ಲದ ಕರುಣೆ. ಬರಗಾಲದಿಂದ ಬೇಸತ್ತ ರೈತರು ಗೋ ಶಾಲೆಗಳಲ್ಲಿ ತಮ್ಮ ಜಾನುವಾರುಗಳೊಂದಿಗೆ ಹಸಿವಿನಿಂದ ಮಲಗುತ್ತಿದ್ದುದನ್ನ ಕಂಡು ಇವರ ಕರುಳು ಚುರ್ರ್ ಎನ್ನುತಿತ್ತು. ನಮಗೆ ಅನ್ನ ನೀಡೋ ಅನ್ನದಾತರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂದು ಸಂಕಲ್ಪಿಸಿದ್ದರು. ಹಾಗಾಗಿ ಪ್ರತಿದಿನ ಸುಮಾರು 400 ಕ್ಕೂ ಹೆಚ್ಚು ರೈತರಿಗೆ ಇವರು ಉಚಿತವಾಗಿ ಅನ್ನದಾಸೋಹ ಮಾಡುತಿದ್ದಾರೆ.

    ಕಲ್ಪತರು ನಾಡು ತುಮಕೂರು ಜಿಲ್ಲೆ ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗಿದೆ. ಮಳೆ ಇಲ್ಲದೆ ಬೆಳೆಗಳು ಕೈ ಕೊಟ್ಟು ರೈತರನ್ನು ಸಂಕಷ್ಟಕ್ಕೆ ನೂಕಿವೆ. ಅತ್ತ ಜಾನುವಾರುಗಳಿಗೂ ಮೇವಿಲ್ಲದೆ ದನ-ಕರುಗಳು ಸಾಯುವಂತಾಗಿದೆ. ಅದಕ್ಕಾಗಿಯೇ ಜಿಲ್ಲಾಡಳಿತದಿಂದ ಗೋ ಶಾಲೆಗಳನ್ನು ತೆರೆಯಲಾಗಿತ್ತು. ಈ ಗೋ ಶಾಲೆಗಳಲ್ಲಿ ಜಾನುವಾರುಗಳಿಗೇನೋ ಮೇವು- ನೀರು ಸಿಗುತಿತ್ತು. ಆದ್ರೆ ತಮ್ಮ ಹಸುಗಳೊಂದಿಗೆ ಬಂದ ನೂರಾರು ರೈತರು ಹಸಿವಿನಿಂದಲೇ ದಿನ ದೂಡುತಿದ್ದರು. ಮಧ್ಯಾಹ್ನ ಊಟ ಮಾಡಿದ್ದರೂ ರಾತ್ರಿಹೊತ್ತು ಉಪವಾಸ ಮಲಗುವುದು ಖಚಿತವಾಗಿತ್ತು. ರೈತರ ಈ ಸ್ಥಿತಿ ಕಂಡು ನಿವೃತ್ತ ಬ್ಯಾಂಕ್ ಉದ್ಯೋಗಿ ರಕ್ಷಿತ್ ಜೈ ಗಿರೀಶ್ ರ ಕರುಳು ಚುರ್ರ್ ಅಂದಿತ್ತು.

    ನಮಗೆ ಅನ್ನ ನೀಡೋ ಅನ್ನದಾತರೇ ಉಪವಾಸ ಮಲಗೋದನ್ನು ನೋಡಿ ರಕ್ಷಿತ್ ಜೈ ಗಿರೀಶ್‍ರ ಮನಸ್ಸು ಮರುಗಿತ್ತು. ಆ ಕ್ಷಣದಿಂದಲೇ ರೈತರಿಗೆ ತಮ್ಮಿಂದಾದ ಅಳಿಲು ಸೇವೆ ಮಾಡೋಣ ಎಂದು ಸಂಕಲ್ಪಿಸಿದ್ದರು. ಅದರ ಪರಿಣಾಮವಾಗಿ ಎರಡು ಗೋ ಶಾಲೆಗಳನ್ನು ಅವರು ಆಯ್ಕೆ ಮಾಡಿಕೊಂಡು ರಾತ್ರಿ ಹೊತ್ತು ರೈತರಿಗೆ ಉಚಿತವಾಗಿ ಊಟ ನೀಡುತ್ತಿದ್ದಾರೆ.

    ಶಿರಾ ತಾಲೂಕಿನ ಗಂಡಿಹಳ್ಳಿ ಹಾಗೂ ಉಲ್ಲಾಸಿನ ತೋಪು ಎಂಬ ಎರಡು ಗೋ ಶಾಲೆಗಳನ್ನು ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿದಿನ ರಾತ್ರಿ ಹೊತ್ತು ಈ ಗೋಶಾಲೆಯಲ್ಲಿದ್ದ 400 ಕ್ಕೂ ಹೆಚ್ಚು ರೈತರಿಗೆ ಅನ್ನದಾಸೋಹ ನಡೆಸುತಿದ್ದಾರೆ.

    ಕಳೆದ ಜನವರಿಯಿಂದ ನಿರಂತರವಾಗಿ ರಕ್ಷಿತ್ ಜೈ ಗಿರೀಶ್ ಈ ಸೇವೆ ಮಾಡಿಕೊಂಡು ಬಂದಿದ್ದಾರೆ. ಗಂಡಿಹಳ್ಳಿ ಹಾಗೂ ಉಲ್ಲಾಸಿನ ತೋಪಿನಲ್ಲಿರುವ ಗೋ ಶಾಲೆಗಳು ಪಟ್ಟಣದಿಂದ ದೂರ ಇದೆ. ಬಸ್ ವ್ಯವಸ್ಥೆ ಕೂಡಾ ಇಲ್ಲಿ ಇರೋದಿಲ್ಲ. ಹಾಗಾಗಿ ರೈತರು ಹೊಟೇಲ್‍ನಿಂದ ಪಾರ್ಸೆಲ್ ತಂದು ಊಟ ಮಾಡೋಕಾಗಲ್ಲ. ಪರಿಣಾಮ ಈ ಭಾಗದಲ್ಲಿ ಹೆಚ್ಚಿನ ರೈತರು ಉಪವಾಸ ಮಲಗುತಿದ್ದರು.

    ಹಾಗಾಗಿ ರಕ್ಷಿತ್ ಜೈ ಗಿರೀಶ್ ಇಲ್ಲಿಯ ರೈತರಿಗೆ ಉಚಿತವಾಗಿ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಅನ್ನದೊಂದಿಗೆ ದಿನಕ್ಕೊಂದು ರೀತಿಯ ಸಾಂಬಾರ್, ಪಲ್ಯ, ಕೊಟ್ಟು ರುಚಿ ರುಚಿಯಾದ ಊಟ ಬಡಿಸುತ್ತಿದ್ದಾರೆ. ರಕ್ಷಿತ್ ಜೈ ಗಿರೀಶ್ ತುಮಕೂರಿನವರಾದ್ರೂ ಬೆಂಗಳೂರಲ್ಲಿ ಸೆಟಲ್ ಆಗಿದ್ದಾರೆ. ಐಎನ್‍ಜಿ ವೈಶ್ಯ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದ ಇವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಮಾಜ ಸೇವೆ ಮಾಡುವ ಮನೋಭಾವದಿಂದ ಕೃಷ್ಣ ಗ್ಲೋಬಲ್ ಫೌಂಡೇಷನ್ ಎಂಬ ಸಂಸ್ಥೆ ಕಟ್ಟಿಕೊಂಡು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

    ರಕ್ಷಿತ್ ಜೈ ಗಿರೀಶ್ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ರೈತರಿಗಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಬಡ ರೈತ ಸಮುದಾಯ ಕೂಡಾ ಇವರ ಸೇವೆಗೆ ಋಣಿಯಾಗಿದೆ.

    https://youtu.be/aL9eHc85M8g

  • ಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ನಾಗರಹಾವಿನ ಜೊತೆ 17 ಮರಿಹಾವುಗಳನ್ನು ಕೊಂದ್ರು!

    ಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ನಾಗರಹಾವಿನ ಜೊತೆ 17 ಮರಿಹಾವುಗಳನ್ನು ಕೊಂದ್ರು!

    ಕೋಲಾರ: ನಾಗರಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಹಾವು ಮತ್ತು ಅದರ ಜೊತೆಗಿದ್ದ 17 ಮರಿ ಹಾವುಗಳನ್ನ ಕೊಂದಿರುವ ಮನಕಲಕುವ ಘಟನೆ ಕೋಲಾರದ ಗಡಿ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದಿನ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾವು ಕೊಂದ ಸ್ಥಳದಲ್ಲಿ 17 ಮರಿ ಹಾವುಗಳು ಪತ್ತೆಯಾಗಿದ್ದು, ಆ ಮರಿಗಳನ್ನು ಸಹ ಗ್ರಾಮಸ್ಥರು ಕೊಚ್ಚಿ ಕೊಂದಿದ್ದಾರೆ.

    ಆಗಿದ್ದೇನು? ಬುಧವಾರ ಹೊಲದಲ್ಲಿ ಕೆಲಸ ಮಾಡುವ ವೇಳೆ ರೈತ ಗೊವಿಂದಪ್ಪನನ್ನ ನಾಗರಾಹಾವು ಕಚ್ಚಿ ಮೃತಪಟ್ಟಿದ್ದರು. ಗೋವಿಂದಪ್ಪ ಸಾವಿನಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಹಾವನ್ನ ಹುಡುಕಿ ಕೊಂದಿದ್ದಾರೆ. ಅದೇ ಸ್ಥಳದಲ್ಲಿ 17 ಮರಿ ಹಾವುಗಳು ಕಂಡುಬಂದ ಹಿನ್ನಲೆಯಲ್ಲಿ 17 ಮರಿ ಹಾವುಗಳನ್ನು ಸಹ ಕೊಂದಿದ್ದಾರೆ.

    ಇನ್ನೂ ಹಾವು ಹಾಗೂ ಮರಿಗಳನ್ನ ಕೊಂದಿರುವ ಗ್ರಾಮಸ್ಥರು ಮೊಬೈಲ್‍ಗಳಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಸದ್ಯ ಗ್ರಾಮದಲ್ಲಿ ಹಾವು ಕೊಂದ ವಿಚಾರದಲ್ಲಿ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಹಾವುಗಳನ್ನು ಕೊಂದಿದ್ದಕ್ಕೆ ನಾಗಹತ್ಯಾ ಶಾಪ ಬರಬಹುದು ಎಂದು ಗ್ರಾಮದ ಹಿರಿಯರು ಮಾತನಾಡಿಕೊಳ್ಳುತ್ತಿದ್ದಾರೆ.

     

  • ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕು

    ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕು

    ಬೆಂಗಳೂರು: ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ತೇವಾಂಶ ಕೊರತೆ ಹಾಗೂ ಗಾಳಿಯು ದುರ್ಬಲವಾಗಿರುವ ಹಿನ್ನಲೆಯಲ್ಲಿ ಮುಂಗಾರು ಮಳೆ ದುರ್ಬಲವಾಗಿದೆ. ರಾಜ್ಯದ 30 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊರತೆ ಇದೆ. ದಕ್ಷಿಣ ಒಳನಾಡಿನ 8 ಜಿಲ್ಲೆಗಳಲ್ಲಿ, ಹಾಗೂ ಉತ್ತರ ಒಳನಾಡಿನ ಮೂರು ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕ ಏಳು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂದು ತಿಳಿಸಿದರು.

    ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಶೇ.42 ರಷ್ಟು ಮಳೆ ಕೊರತೆ ಇದೆ. ಹಾಗೆ ಕಾವೇರಿ ಭಾಗದಲ್ಲಿ ಶೇಕಡಾ 36ರಷ್ಟು ಮಳೆ ಕೊರತೆ ಇದೆ. ಇನ್ನೂ ನಾಲ್ಕು ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದರು.

  • ಬ್ಯಾಂಕಿನಲ್ಲಿ 1.5 ಲಕ್ಷ, ಸಹಕಾರ ಸಂಘದಲ್ಲಿ 2.5ಲಕ್ಷ, 5 ಲಕ್ಷ ರೂ. ಕೈ ಸಾಲ: ರೈತ ಆತ್ಮಹತ್ಯೆ

    ಬ್ಯಾಂಕಿನಲ್ಲಿ 1.5 ಲಕ್ಷ, ಸಹಕಾರ ಸಂಘದಲ್ಲಿ 2.5ಲಕ್ಷ, 5 ಲಕ್ಷ ರೂ. ಕೈ ಸಾಲ: ರೈತ ಆತ್ಮಹತ್ಯೆ

    ಮಂಡ್ಯ: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಸಾಲಬಾಧೆ ತಾಳಲಾರದೇ ಇಂದು ರೈತರೊಬ್ರು ಜಮೀನಿನ ಬಳಿ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿರೋ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಪುಟ್ಟಸ್ವಾಮಿ(50) ಆತ್ಮಹತ್ಯೆ ಮಾಡಿಕೊಂಡವರು. ಇವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆದಿದ್ರು. ಬೇಸಾಯಕ್ಕೆಂದು ಕ್ಯಾತನಹಳ್ಳಿ ಎಸ್ ಬಿಎಂ ಬ್ಯಾಂಕಿನಲ್ಲಿ 1.5 ಲಕ್ಷ ರೂಪಾಯಿ ಸಾಲ, ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2.5 ಲಕ್ಷ ಬೆಳೆ ಸಾಲ ಸೇರಿದಂತೆ ಐದು ಲಕ್ಷ ರೂಪಾಯಿ ಕೈ ಸಾಲ ಮಾಡಿಕೊಂಡಿದ್ರು.

    ಸರಿಯಾಗಿ ಮಳೆಯಾಗದೇ ಬೆಳೆ ಒಣಗಿತ್ತು. ಜೊತೆಗೆ ಮಕ್ಕಳ ಶಾಲಾ ಶುಲ್ಕ ಪಾವತಿ ಮಾಡಿರಲಿಲ್ಲ. ಇದ್ರಿಂದ ಮನನೊಂದು ತಮ್ಮ ಜಮೀನಿನ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.