Tag: farmer

  • ತೋಟದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು

    ತೋಟದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು

    ಕಾರವಾರ: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ನೆಡೆದಿದೆ.

    ಕೆರೆಕೋಣ ನಿವಾಸಿ ಗಣಪತಿ ಪರಮೇಶ್ವರ ಭಟ್ಟ ಉಂಚುಟ್ಟೆ (55) ಮೃತ ರೈತ. ತಮ್ಮ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವು ಕಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಶವ ಹೊರತೆಗೆದಿದ್ದಾರೆ.

    ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಬೂಲ್‍ನಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿ – 24 ಸಾವು, 40 ಮಂದಿಗೆ ಗಾಯ

    ಕಾಬೂಲ್‍ನಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿ – 24 ಸಾವು, 40 ಮಂದಿಗೆ ಗಾಯ

    ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನಲ್ಲಿ ಇಂದು ಬೆಳಿಗ್ಗೆ ಆತ್ಮಾಹುತಿ ದಾಳಿಕೋರನೊಬ್ಬ ಕಾರ್‍ನಲ್ಲಿ ಬಾಂಬ್ ಸ್ಫೋಟಿಸಿದ್ದಾನೆ. ಘಟನೆಯಲ್ಲಿ 24 ಮಂದಿ ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗೋ ಸಾಧ್ಯತೆಯಿದೆ ಎಂದು ಇಲ್ಲಿನ ಇಂಟೀರಿಯರ್ ಮಿನಿಸ್ಟ್ರಿ ವಕ್ತಾರರು ತಿಳಿಸಿದ್ದಾರೆ.

    ಇಲ್ಲಿನ ಉಪ ಸರ್ಕಾರಿ ಮುಖ್ಯ ಕಾರ್ಯನಿರ್ವಾಹಕ ಮೊಹಮ್ಮದ್ ಮೊಹಾಖಿಕ್ ಅವರ ಮನೆಯ ಬಳಿಯೇ ದಾಳಿ ನಡೆದಿದೆ. ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಈ ಪ್ರದೇಶದಲ್ಲಿ ಪ್ರಮುಖವಾಗಿ ಶಿಯೈಟ್ ಹಜಾರಾ ಸಮುದಾಯದವರು ವಾಸವಿದ್ದಾರೆ. ಆದ್ರೆ ದಾಳಿಯ ಉದ್ದೇಶ ಏನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಗಣಿ ಇಲಾಖೆಗೆ ಸೇರಿದ ಚಿಕ್ಕ ಬಸ್‍ವೊಂದನ್ನು ಧ್ವಂಸ ಮಾಡಲಾಗಿದೆ ಎಂದು ವರದಿಯಾಗಿದೆ.

    ಎರಡು ವಾರಗಳ ಹಿಂದೆ ಇಲ್ಲಿನ ಮಸೀದಿಯೊಂದರಲ್ಲಿ ದಾಳಿ ನಡೆದು 4 ಜನ ಹತ್ಯೆಯಾಗಿದ್ದರು. ಐಸಿಸ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಇದೀಗ ಎರಡು ವಾರಗಳ ನಂತರ ಮತ್ತೆ ಬಾಂಬ್ ದಾಳಿ ನಡೆದಿದೆ.

  • ಕೆಲಸ ಕೊಡ್ತೀವೆಂದು ಭೂಮಿ ಪಡೆದ್ರು- ಬಳ್ಳಾರಿಯಲ್ಲಿ ಮಿತ್ತಲ್ ಕಂಪೆನಿಯಿಂದ ರೈತರಿಗೆ ಮೋಸ

    ಕೆಲಸ ಕೊಡ್ತೀವೆಂದು ಭೂಮಿ ಪಡೆದ್ರು- ಬಳ್ಳಾರಿಯಲ್ಲಿ ಮಿತ್ತಲ್ ಕಂಪೆನಿಯಿಂದ ರೈತರಿಗೆ ಮೋಸ

    ಬಳ್ಳಾರಿ: ಅದು ಚಿನ್ನದಂಥ ಭೂಮಿ. ಬಂಗಾರದಂತಹ ಬೆಳೆ ಬೆಳೆಯೋ ಆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ದಶಕವೇ ಕಳೆದಿದೆ. ಆದ್ರೆ ಸ್ಟೀಲ್ ಕಾರ್ಖಾನೆ ಸ್ಥಾಪನೆ ಮಾಡೋದಾಗಿ ಭೂಮಿ ಪಡೆದ ಮಿತ್ತಲ್ ಕಂಪನಿ ಮತ್ತು ಬ್ರಾಹ್ಮಣಿ ಸ್ಟೀಲ್ ಕಂಪನಿ ಇದೀಗ ಸೋಲಾರ್ ಪ್ಲಾಂಟ್ ಸ್ಥಾಪನೆ ಮಾಡಲು ಹೊರಟಿದೆ. ಹೀಗಾಗಿ ರೈತರಿಗೆ ಉದ್ಯೋಗ ಆಸೆ ತೋರಿಸಿ ಭೂಮಿ ವಶಪಡಿಸಿಕೊಂಡ ಮಿತ್ತಲ್ ಕಂಪನಿ ವಿರುದ್ಧ ರೈತರು ಹೋರಾಟಕ್ಕೆ ಇಳಿದಿದ್ದಾರೆ.

    ಬಳ್ಳಾರಿ ಜಿಲ್ಲೆಯ ಕುಡತಿನಿ, ಹರಗಿನಿಡೋಣಿ, ವೇಣಿವೀರಾಪುರ, ಕೊಳಗಲ್ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ. ಯಾಕಂದ್ರೆ ಈ ಹಿಂದೆ ಈ ಗ್ರಾಮಗಳ ಸುತ್ತಮುತ್ತಲಿನ ನಾಲ್ಕುವರೆ ಸಾವಿರ ರೈತರಿಂದ 10,500 ಎಕರೆ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡು ಮಿತ್ತಲ್ ಹಾಗೂ ಬ್ರಾಹ್ಮಣಿ ಕಂಪೆನಿಗಳಿಗೆ ನೀಡಿತ್ತು. ಆ ಕಂಪೆನಿಗಳು ಸ್ಟೀಲ್ ಕಾರ್ಖಾನೆ ಸ್ಥಾಪನೆ ಮಾಡಿ ಭೂಮಿ ನೀಡಿದ ರೈತರಿಗೆ ಉದ್ಯೋಗ ಕೊಡ್ತೀವಿ ಅಂತಾ ಭರವಸೆ ನೀಡಿದ್ವು. ಆದ್ರೆ ಇದೀಗ ಸ್ಟೀಲ್ ಕಾರ್ಖಾನೆ ಬದಲಾಗಿ ಸೋಲಾರ್ ಕಾರ್ಖಾನೆ ಸ್ಥಾಪನೆ ಮಾಡಲು ಹೊರಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಭೂಮಿ ಕೊಟ್ಟ 4,500 ರೈತರಿಗೆ ಪರಿಹಾರವನ್ನೂ ಕೊಟ್ಟಿಲ್ಲ. ರೈತರು ಇಂದಿಗೂ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ. ಇಂದು ಬೃಹತ್ ಹೋರಾಟಕ್ಕೆ ರೈತರು ಕೂಡಾ ಸಜ್ಜಾಗಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ.

  • ಎರಡೆಕರೆ ಬಿತ್ತನೆಗೆ ಕೇವಲ 200 ರೂ. ಖರ್ಚು – ಕೋಲಾರ ರೈತನ ಹೈಟೆಕ್ ಐಡಿಯಾ

    ಎರಡೆಕರೆ ಬಿತ್ತನೆಗೆ ಕೇವಲ 200 ರೂ. ಖರ್ಚು – ಕೋಲಾರ ರೈತನ ಹೈಟೆಕ್ ಐಡಿಯಾ

    ಕೋಲಾರ: ಗ್ರಾಮೀಣ ಪ್ರದೇಶದಲ್ಲಿ ಎದುರಾದ ಎತ್ತುಗಳ ಕೊರತೆ ನೀಗಿಸಲು ಕೋಲಾರದ ರೈತರು ಕಾಳು ಬಿತ್ತನೆಗೆ ತಮ್ಮ ದ್ವಿಚಕ್ರ ವಾಹನಗಳನ್ನೆ ಬಳಸಿಕೊಂಡು ಹೊಸ ಆವಿಷ್ಕಾರಕ್ಕೆ ಮುಂದಾಗಿದ್ದಾರೆ.

    ತಂತ್ರಜ್ಞಾನ ಬಳಸಿ ಕೃಷಿಯಲ್ಲಿನ ವೆಚ್ಚ ತಗ್ಗಿಸಲು ಕೋಲಾರ ತಾಲೂಕು ತೊಟ್ಲಿ ರೈತ ರಮೇಶ್ ಎಂಬವರು ತನ್ನ ದ್ವಿಚಕ್ರ ವಾಹನ ಬಳಸಿ ಮಾಡಿರುವ ಬಿತ್ತನೆ ಹಾಗೂ ಕೃಷಿ ಚಟುವಟಿಕೆ ಅವರ ಶ್ರಮ ಹಾಗೂ ಹೋರಾಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಹಾಗೂ ಬಿತ್ತನೆ ನಂತರದ ಚಟುವಟಿಕೆಗಳಿಗೆ ತನ್ನ ಹೀರೋ ಸ್ಪ್ಲೆಂಡರ್ ಬೈಕ್‍ನ್ನು ಬಳಕೆ ಮಾಡಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಕಡಿಮೆ ಸಮಯ, ಕಡಿಮೆ ಖರ್ಚು ಹಿನ್ನೆಲೆ ಹೊಸ ಪ್ರಯೋಗಕ್ಕೆ ಮುಂದಾಗಿ ಯಶಸ್ವಿಯಾಗಿರುವ ಕೋಲಾರದ ರೈತ ರಮೇಶ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಾಳು ಬಿತ್ತನೆ ಹಾಗೂ ಬಿತ್ತನೆ ನಂತರ ಮಣ್ಣು ಹಸನು ಮಾಡಲು ತನ್ನ ದ್ವಿಚಕ್ರ ವಾಹನ ಬಳಸಿಕೊಂಡು ಯಶಸ್ವಿಯಾಗಿದ್ದಾರೆ.

    ಕೇವಲ 100 ರೂಪಾಯಿಗೆ ಎರಡು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡುವ ಸುಲಭ ವಿಧಾನವನ್ನ ಕಂಡುಕೊಂಡಿದ್ದಾರೆ. ತೀವ್ರ ಮಳೆ ಕೊರತೆ, ಸತತ ಬರಗಾಲ, ಜಾನುವಾರುಗಳ ಪಾಲನೆ ಕಷ್ಟವಾಗಿರುವುದರಿಂದ ರೈತರು ಈ ನೂತನ ಆವಿಷ್ಕಾರಕ್ಕೆ ಮುಂದಾಗಿದ್ದಾರೆ. ದ್ವಿದಳ ಧಾನ್ಯಗಳಾದ ರಾಗಿ, ಜೋಳ, ಅವರೆ ತೊಗರಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ಜಿಲ್ಲೆಯ ರೈತರು ಕೂಡ ಇದೆ ವಿಧಾನವನ್ನ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

    ಒಟ್ಟಿನಲ್ಲಿ ಸತತ ಬರಗಾಲ, ಮಳೆ ಕೊರತೆಯಿಂದ ಕೃಷಿಯನ್ನೇ ಬಿಡುವ ಹಂತಕ್ಕೆ ತಲುಪಿರುವ ಜಿಲ್ಲೆಯ ರೈತರಿಗೆ ರೈತ ರಮೇಶ್ ಮಾಡಿರುವ ಬೈಕ್ ಉಳುಮೆ ಕಾರ್ಯ ಉತ್ತೇಜನ ನೀಡಿದೆ. ಈ ಹೊಸ ಪ್ರಯೋಗಕ್ಕೆ ಸದ್ಯ ಜಿಲ್ಲೆಯ ರೈತರು ಫಿದಾ ಆಗಿದ್ದಾರೆ.

  • ಸ್ಟೀಲ್ ಕಂಪನಿ ಬಿಟ್ಟು ಸೋಲಾರ್ ಪ್ಲಾಂಟ್ ಸ್ಥಾಪನೆ- ಅನ್ನದಾತರಿಗೆ ಮಿತ್ತಲ್ ಕಂಪನಿ ಟೋಪಿ

    ಸ್ಟೀಲ್ ಕಂಪನಿ ಬಿಟ್ಟು ಸೋಲಾರ್ ಪ್ಲಾಂಟ್ ಸ್ಥಾಪನೆ- ಅನ್ನದಾತರಿಗೆ ಮಿತ್ತಲ್ ಕಂಪನಿ ಟೋಪಿ

    ಬಳ್ಳಾರಿ: ರೈತರ ಭೂಮಿಯನ್ನು ವಶಪಡಿಸಿಕೊಂಡ ಕೆಐಎಡಿಬಿ ಮಿತ್ತಲ್ ಕಂಪನಿಗೆ ಸ್ಟೀಲ್ ಕಾರ್ಖಾನೆ ಸ್ಪಾಪನೆಗಾಗಿ ನೀಡಿತ್ತು. ಆದ್ರೆ ಸ್ಟೀಲ್ ಕಾರ್ಖಾನೆಗೆ ಜಾಗ ಪಡೆದು ಮಿತ್ತಲ್ ಮತ್ತು ಬ್ರಾಹ್ಮಣಿ ಸ್ಟೀಲ್ ಕಂಪನಿ ಇದೀಗ ಸೋಲಾರ್ ಪ್ಲಾಂಟ್ ಸ್ಥಾಪಿಸಲು ಹೊರಟಿವೆ. ಉದ್ಯೋಗದ ಆಸೆ ತೋರಿಸಿ ಭೂಮಿ ಕಿತ್ಕೊಂಡ ಮಿತ್ತಲ್ ಕಂಪನಿ ವಿರುದ್ಧ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ.

    ಬಳ್ಳಾರಿ ಜಿಲ್ಲೆಯ ಕುಡತಿನಿ, ಹರಗಿನಿಡೋಣಿ, ವೇಣಿವೀರಾಪುರ, ಕೊಳಗಲ್ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಮತ್ತೆ ಹೋರಾಟಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಬಳ್ಳಾರಿ ತಾಲೂಕಿನ 4500 ಹೆಚ್ಚು ರೈತರಿಂದ ಹತ್ತು ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ವಶಪಡಿಸಿಕೊಂಡಿದ್ದ ಕೆಐಎಡಿಬಿ ಆ ಭೂಮಿಯನ್ನು ಮಿತ್ತಲ್ ಹಾಗೂ ಬ್ರಾಹ್ಮಿಣಿ ಕಂಪನಿಗಳಿಗೆ ಸ್ಟೀಲ್ ಕಾರ್ಖಾನೆ ಸ್ಥಾಪನೆ ಮಾಡಲು ಭೂಮಿ ನೀಡಿತ್ತು. ಅಲ್ಲದೇ ಭೂಮಿ ನೀಡಿದ ರೈತರಿಗೆ ಉದ್ಯೋಗದ ಭರವಸೆ ಸಹ ನೀಡಿತ್ತು. ಆದ್ರೆ ಈಗ ಮಿತ್ತಲ್ ಕಂಪನಿ ಸ್ಟೀಲ್ ಕಾರ್ಖಾನೆ ಬದಲಾಗಿ ಸೋಲಾರ ಕಾರ್ಖಾನೆ ಸ್ಥಾಪಿಸ್ತಿದೆ.

    ರೈತರಿಂದ 10,500 ಎಕರೆ ಭೂಮಿ ಪಡೆದ ಮಿತ್ತಲ್ ಮತ್ತು ಬ್ರಾಹ್ಮಣಿ ಕಾರ್ಖಾನೆಗಳು ಸಾಕಷ್ಟು ರೈತರಿಗೆ ಸರಿಯಾಗಿ ಪರಿಹಾರವನ್ನೆ ನೀಡಿಲ್ಲ. ನೂರಾರು ರೈತರು ಇಂದಿಗೂ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅಂದು ಭೂಮಿ ಪಡೆದ ಕಾರ್ಖಾನೆಗಳು ರೈತರ ಕುಟುಂಬಗಳಿಗೆ ಸ್ಟೀಲ್ ಕಾರ್ಖಾನೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿತ್ತು, ಆದ್ರೆ ಸೋಲಾರ್ ಪ್ಲಾಂಟ್ ನಿರ್ಮಿಸೋದ್ರಿಂದ ಉದ್ಯೋಗವೇ ಸಿಗಲ್ಲ. ಹೀಗಾಗಿ ಸೋಮವಾರ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.

  • ರೈತನ ಹೆಸ್ರಲ್ಲಿ ಸಾಲ ಪಡೆದು ಮೋಸ- ಶಾಸಕ ಸಿದ್ದು ನ್ಯಾಮಗೌಡರ ಜಮಖಂಡಿ ಶುಗರ್ಸ್‍ನಿಂದ ಅಕ್ರಮ

    ರೈತನ ಹೆಸ್ರಲ್ಲಿ ಸಾಲ ಪಡೆದು ಮೋಸ- ಶಾಸಕ ಸಿದ್ದು ನ್ಯಾಮಗೌಡರ ಜಮಖಂಡಿ ಶುಗರ್ಸ್‍ನಿಂದ ಅಕ್ರಮ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡರ ಕಾರ್ಖಾನೆ ರೈತರೊಬ್ಬರಿಗೆ ನಾಮ ಹಾಕಿರೋದು ಗೊತ್ತಾಗಿದೆ.

    ಬ್ಯಾಂಕ್ ಅಕೌಂಟ್ ಮಾಡಿಕೊಡ್ತೀವಿ ಅಂತ ರೈತನಿಂದ ದಾಖಲೆ ಪಡೆದು ರೈತನ ಹೆಸರಲ್ಲೇ ಸಾಲ ತೆಗೆದುಕೊಂಡಿದ್ದಾರೆ. ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಕಬ್ಬಿನ ಬಾಕಿ ಹಣ ನೀಡದೆ ಶಾಸಕರು ಸತಾಯಿಸುತ್ತಿದ್ದು, ರೈತನಿಗೆ ಗೊತ್ತಾಗದಂತೆ ಲಕ್ಷಾಂತರ ರೂಪಾಯಿ ಸಾಲ ಪಡೆಯಲಾಗಿದೆ. ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ಸೇರಿದ ಜಮಖಂಡಿ ಶುಗರ್ಸ್ ಕಾರ್ಖಾನೆ ಈ ರೀತಿ ರೈತನಿಗೆ ಮಕ್ಮಲ್ ಟೋಪಿ ಹಾಕಿದೆ.

    2012-13ರಲ್ಲಿ ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ನಿವಾಸಿ ಪರಗೌಡ ಶೇಗುಣಶಿ ಹೆಸರಿನಲ್ಲಿ 10 ಲಕ್ಷ 95 ಸಾವಿರದ 63 ರೂಪಾಯಿ ಸಾಲ ಪಡೆಯಲಾಗಿದೆ. ಎರಡು ದಿನದ ಹಿಂದೆ ಬೆಳೆ ಸಾಲ ಪಡೆಯಲು ಸಿಂಡಿಕೇಟ್ ಬ್ಯಾಂಕ್‍ಗೆ ಹೋದಾಗ ಪರಗೌಡ ಅವರ ಹೆಸರಲ್ಲಿ ಸಾಲ ಇರುವ ವಿಷಯ ಗೊತ್ತಾಗಿದೆ. ಓರ್ವ ಶಾಸಕರಿಗೆ ಸೇರಿದ ಫ್ಯಾಕ್ಟರಿಯಿಂದಲೇ ಇಂತಹ ವಂಚನೆಯಾಗಿದೆ ಅಂದ್ರೆ ಬೇರೆಯವರ ಮಾಲೀಕತ್ವದ ಕಂಪನಿಗಳಲ್ಲಿ ಕಥೆ ಏನು ಅನ್ನೋದು ಪ್ರಶ್ನೆಯಾಗಿದೆ.

  • ತನ್ನ ರಕ್ತದಲ್ಲಿ ಪ್ರಧಾನಿಗೆ 2 ಪತ್ರ ಬರೆದ ಯುವಕ

    ತನ್ನ ರಕ್ತದಲ್ಲಿ ಪ್ರಧಾನಿಗೆ 2 ಪತ್ರ ಬರೆದ ಯುವಕ

    ರಾಯಚೂರು: ರೈತರು ಎದುರಿಸುತ್ತಿರುವ ಕಷ್ಟಗಳನ್ನ ಪ್ರಧಾನಿ ಮಂತ್ರಿ ಅವರಿಗೆ ಮನವರಿಕೆ ಮಾಡಲು ಜಿಲ್ಲೆಯ ಯುವಕರೊಬ್ಬರು ತನ್ನ ರಕ್ತದಲ್ಲಿ ಎರಡು ಪತ್ರಗಳನ್ನ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

    ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ವೀರಭದ್ರಪ್ಪ ಅನ್ನೋ ರೈತನ ಮಗನಾದ ರವಿ ಗೌಡ ತುಂಗಭದ್ರ ಎಡದಂಡೆ ಕಾಲುವೆ ನೀರು ರೈತರಿಗೆ ಸಮರ್ಪಕವಾಗಿ ತಲುಪದ ಹಿನ್ನೆಲೆಯಲ್ಲಿ ರೈತರು ಹೇಗೆ ಕಷ್ಟ ಅನುಭವಿಸುತ್ತಿದ್ದಾರೆ ಅಂತ ಮೂರು ಪುಟದ ಒಂದು ಪತ್ರ ಬರೆದಿದ್ದಾರೆ. ಜೊತೆಗೆ ಪ್ರಾಥಮಿಕ ಪ್ರೌಢ ಶಾಲಾ ಪಠ್ಯಕ್ರಮದಲ್ಲಿ ಇತರೆ ವಿಷಯಗಳಂತೆ ವ್ಯವಸಾಯ ಶಾಸ್ತ್ರವನ್ನು ಅಳವಡಿಸಬೇಕು. ಇದರಿಂದ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲದೆ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ ಅಂತ ಮೂರು ಪುಟಗಳ ಎರಡನೇ ಪತ್ರವನ್ನೂ ಬರೆದಿದ್ದಾರೆ.

    ಮಲ್ಲದಗುಡ್ಡ ಗ್ರಾಮದ ನಾನು ರೈತನ ಮಗನಾಗಿ ಇತರ ರೈತರ ಒಳಿತಿಗಾಗಿ ಪ್ರಧಾನಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ ಅಂತ ರವಿ ಗೌಡ ಹೇಳಿದ್ದಾರೆ.

     

  • ರಾಜ್ಯದಲ್ಲಿ ಮಳೆಯ ಸಿಂಚನ-ರೈತರ ಮೊಗದಲ್ಲಿ ಮಂದಹಾಸ

    ರಾಜ್ಯದಲ್ಲಿ ಮಳೆಯ ಸಿಂಚನ-ರೈತರ ಮೊಗದಲ್ಲಿ ಮಂದಹಾಸ

    ಬೆಂಗಳೂರು: ರಾಜ್ಯದಲ್ಲಿ ಮಳೆಯ ಸಿಂಚನ ಆರಂಭವಾಗಿದ್ದು, ಮಳೆಗೆ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮೋಡ ಕವಿದ ವಾತವಾರಣವಿದ್ದು ಮಳೆ ಆರಂಭವಾಗಿದೆ.

    ಬೆಳಗಾವಿ, ಬೀದರ್, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ವರುಣದೇವ ಕೃಪೆ ತೋರಿದ್ದಾನೆ. ಬಿತ್ತನೆ ಮಾಡಿಕೊಂಡಿದ್ದ ರೈತರು ಮುಂಗಾರು ಆರಂಭವಾದ್ರೂ ಮಳೆಯ ಬರದೇ ಇದ್ದಿದ್ದರಿಂದ ಆತಂಕಗೊಂಡಿದ್ದರು. ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿಯಲ್ಲಿ ಭಾರೀ ಮಳೆಯಾಗಿದ್ದು, ಮಾವುಲಿ ಗ್ರಾಮದ ದೇವಸ್ಥಾನದ ಎದುರಿನ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದೇ ವೇಳೆ ಟ್ರ್ಯಾಕ್ಸ್ ವಾಹನವೊಂದು ಕೊಚ್ಚಿ ಹೋಗಿದೆ.

    ಹಾಸನ ಜಿಲ್ಲೆಯಲ್ಲೂ ಮಳೆಯ ಅಬ್ಬರ ಬಿರುಸುಗೊಂಡಿದ್ದು, ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಗೆ ಡ್ಯಾಂ ಅರ್ಧದಷ್ಟು ತುಂಬಿಕೊಂಡಿತ್ತು. ಆದ್ರೆ ಈ ವರ್ಷ ಕಾಲು ಭಾಗ ಸಹ ಭರ್ತಿಯಾಗಿಲ್ಲ. ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ತಾಲೂಕು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್‍ಆರ್ ಪುರ ತಾಲೂಕುಗಳಲ್ಲಿ ಧಾರಕಾರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ತಡ ರಾತ್ರಿ ಸುರಿದ ಮಳೆ ಹಿನ್ನೆಲೆಯಲ್ಲಿ ಹಳೆ ಮನೆ ಕುಸಿದು ಯುವಕನೋರ್ವ ಸಾವನ್ನಪ್ಪಿದ್ದಾನೆ. ಮಲ್ಲಿಕಾರ್ಜುನ ಉರ್ಫ್ ಸಂತೋಷ ಮುದಕಪ್ಪ ಮಸ್ಕಿ (31) ಮೃತ ಯುವಕ. ಈ ಸಂಬಂಧ ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ಭತ್ತ ಬೆಳೆಯೋಕೆ ಸಿದ್ಧರಾದ ರೈತರಿಗೆ ರಾಗಿ ಬೆಳೆಯಿರಿ ಎಂದ ಸರ್ಕಾರ

    ಭತ್ತ ಬೆಳೆಯೋಕೆ ಸಿದ್ಧರಾದ ರೈತರಿಗೆ ರಾಗಿ ಬೆಳೆಯಿರಿ ಎಂದ ಸರ್ಕಾರ

    ಮೈಸೂರು: ಭತ್ತ ಬೆಳಯೋಕೆ ಸಿದ್ಧವಾಗಿದ್ದವರಿಗೆ ಸರ್ಕಾರ ರಾಗಿ ಬೆಳೆಯಿರಿ ಎಂದು ಹೇಳಿದ್ದರಿಂದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಜಿಲ್ಲೆಯ ಕೆ.ಆರ್. ನಗರ ತಾಲೂಕು ಭತ್ತದ ಕಣಜ. ಇಲ್ಲಿ ಬರೋಬ್ಬರಿ 17 ಸಾವಿರ ಹೆಕ್ಟೇರ್‍ನಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಭತ್ತದ ಕೃಷಿಗಾಗಿ ರೈತರು ಭೂಮಿಯನ್ನು ಹದ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದಿಢೀರನೆ ರೈತರಿಗೆ ಈ ಬಾರಿ ಭತ್ತ ಬೆಳೆಯಬೇಡಿ ಬದಲಾಗಿ ರಾಗಿ ದ್ವಿಧಳ ಧಾನ್ಯಗಳನ್ನು ಬೆಳೆಯಿರಿ ಎಂದು ಆದೇಶ ನೀಡಿದೆ.

    ಒಂದು ವೇಳೆ ಭತ್ತ ಬೆಳೆದು ನೀರಿನ ಅಭಾವದಿಂದ ಬೆಳೆ ನಷ್ಟವಾದರೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ವಾಸ್ತವಾವಾಗಿ ಅಣೆಕಟ್ಟು ಸಮೀಪ ಇರುವ ಜಮೀನಿನಲ್ಲಿ ತೇವಾಂಶದ ಕಾರಣ ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಆಗದು. ಹಾಗಂತ ಭತ್ತ ಬೆಳೆದು ಅದು ನಷ್ಟವಾದರೆ ಪರಿಹಾರ ಕೊಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳ ಈ ಹೇಳಿಕೆಯಿಂದ ರೈತರು ಏನು ಮಾಡಬೇಕು ಎಂದು ತಿಳಿಯದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಇದನ್ನೂ ಓದಿ: ರೈತರೇ ಈಗಲೇ ಬಿತ್ತನೆ ಮಾಡಿ ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

     

  • ಬೋರ್‍ವೆಲ್ ಮೋಟಾರ್ ವಿದ್ಯುತ್ ಹಿಡಿದು ರೈತ ಆತ್ಮಹತ್ಯೆ

    ಬೋರ್‍ವೆಲ್ ಮೋಟಾರ್ ವಿದ್ಯುತ್ ಹಿಡಿದು ರೈತ ಆತ್ಮಹತ್ಯೆ

    ಕೊಪ್ಪಳ: ಹೊಲದಲ್ಲಿರೋ ಬೋರ್‍ವೆಲ್ ಮೋಟಾರ್ ವಿದ್ಯುತ್ ಹಿಡಿದು ರೈತ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. 40 ವರ್ಷದ ಭರಮಪ್ಪ ಅನಬಿ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಇತ್ತೀಚೆಗೆ ಇವರು ಕುರಿ ಮಾರಾಟ ಮಾಡಿ 1 ಲಕ್ಷ 20 ಸಾವಿರ ಕೈಸಾಲವನ್ನ ವಾಪಾಸ್ಸು ಮಾಡಿದ್ದರು. ಕುರಿ ಮಾರಾಟ ಮಾಡಿ ಸಾಲ ತೀರಿಸಿದ ಬಳಿಕ ಮಾನಸಿಕವಾಗಿನೊಂದಿದ್ದರು ಎಂದು ತಿಳಿದುಬಂದಿದೆ.

    ಅಲ್ಲದೇ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 3 ಲಕ್ಷ ರೂಪಾಯಿ ಸಾಲಮಾಡಿದ್ದ ರೈತ ಅದನ್ನು ತೀರಿಸೋದು ಹೇಗೆ ಅಂತ ಮಾನಸಿಕವಾಗಿ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.

    ಅಳವಂಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.