Tag: farmer

  • ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆ: ರೈತರಿಗೆ ಸಂತಸ

    ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆ: ರೈತರಿಗೆ ಸಂತಸ

    ಕೊಪ್ಪಳ: ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಕೆಲ ಕಡೆ ಉತ್ತಮ ಮಳೆಯಾಗಿದ್ದು, ರೈತರು ಸಂತೋಷಗೊಂಡಿದ್ದಾರೆ.

    ಮಳೆಯ ಅವಾಂತರದಿಂದ ಹಳ್ಳಕೊಳ್ಳ ತುಂಬಿ ಹರಿಯುತ್ತಿದ್ದರಿಂದ ಸಂಪರ್ಕ ಕಳೆದುಕೊಂಡು ಮೂರು ಗ್ರಾಮಗಳ ಜನರು ಪರದಾಡಿದ್ದಾರೆ. ಯಲಬುರ್ಗಾ ತಾಲೂಕಿನ ಕೋಮಲಾಪುರ, ಅಡವಿಹಳ್ಳಿ, ಚಿತ್ತಾಪುರ ಗ್ರಾಮದ ಶಾಲೆಯ ಮಕ್ಕಳು ಮತ್ತು ಗ್ರಾಮಸ್ಥರು ಹಳ್ಳದ ನೀರು ಕಡಿಮೆಯಾಗುವರೆಗೆ ಐದು ಗಂಟೆಗಳ ಕಾಲ ಕಾದು ಕಾದು ಸುಸ್ತಾಗಿ ರಾತ್ರಿ 8ಕ್ಕೆ ಮನೆ ಸೇರಿದ್ದಾರೆ.

    ಹಳ್ಳದ ನೀರಿನ ರಭಸಕ್ಕೆ ಲಾರಿ, ಆಟೋ, ಟಾಂ ಟಾಂ ಚಾಲಕರು ಹಳ್ಳದ ದಂಡೆಯಲ್ಲಿ ವಾಹನ ನಿಲ್ಲಿಸಿ ಅಧಿಕಾರಿಗಳನ್ನ ಶಪಿಸಿದ್ದಾರೆ. ಅಡವಿಹಳ್ಳಿ, ಕೋಮಲಾಪೂರ ಚಿತ್ತಾಪೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಎತ್ತರದ ಸೇತುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಇತ್ತ ಕಡೆ ಗಮನ ಹರಿಸಿಲ್ಲ.

    ಉನ್ನತ ಶಿಕ್ಷಣ ಸಚಿವರು ಮತ್ತು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರ ತವರು ಗ್ರಾಮ ತಳಕಲ್ ದಿಂದ ಕೇವಲ 2 ಕಿ.ಮೀ ದೂರವಿದೆ. ಈ ಎರೇಹಳ್ಳ ಸೇತುವೆ ನಿರ್ಮಿಸಲು ಇಚ್ಛಾಶಕ್ತಿ ಇಲ್ಲ. ನಮ್ಮ ಹಳ್ಳಿಗಳನ್ನು ಸಚಿವರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸ್ಥಳೀಯರ ಆರೋಪಿಸಿದ್ದಾರೆ.

  • ಪಂಪ್‍ಸೆಟ್‍ಗಳನ್ನು ಕೊಡಲಿಯಿಂದ ಕಡಿದು ರೈತರ ಮೇಲೆ ಕೇಸ್ ಹಾಕಿದ ಆಂಧ್ರ ಅಧಿಕಾರಿಗಳು!

    ಪಂಪ್‍ಸೆಟ್‍ಗಳನ್ನು ಕೊಡಲಿಯಿಂದ ಕಡಿದು ರೈತರ ಮೇಲೆ ಕೇಸ್ ಹಾಕಿದ ಆಂಧ್ರ ಅಧಿಕಾರಿಗಳು!

    ಬಳ್ಳಾರಿ: ಕಾವೇರಿ ನೀರು ತಮಿಳುನಾಡು ಪಾಲಾಯ್ತು. ಇದೀಗ ತುಂಗಭದ್ರಾ ಜಲಾಶಯದ ನೀರು ಸದ್ದಿಲ್ಲದೇ ಆಂಧ್ರದ ಪಾಲಾಗುತ್ತಿದೆ. ಅಷ್ಟೇ ಅಲ್ಲ ರಾಜ್ಯದ ರೈತರ ಮೇಲೆ ಆಂಧ್ರದ ಅಧಿಕಾರಿಗಳು ದಬ್ಬಾಳಿಕೆ ಮಾಡಿ ರೈತರ ಮೇಲೆ ಕೇಸ್ ಹಾಕಿ ನೀರು ತೆಗೆದುಕೊಂಡಿದ್ದಾರೆ.

    ಬಳ್ಳಾರಿ ತಾಲೂಕಿನ ಗೋನಾಳ ಮೋಕಾ ಭಾಗದ ರೈತರ ಮೇಲೆ ಟಿಬಿ ಬೋರ್ಡ್ ಅಧಿಕಾರಿಗಳು ದರ್ಪ ತೋರಿದ್ದಾರೆ . ಪಂಪ್‍ಸೆಟ್‍ಗಳನ್ನು ಕೊಡಲಿಯಿಂದ ಕಡಿದು ಹಾಕಿ ನಾಶಪಡಿಸಿದ್ದಾರೆ.

    ವಿಪರ್ಯಾಸವೆಂದರೆ ಎಲ್‍ಎಲ್‍ಸಿ ಕಾಲುವೆಯಲ್ಲಿ ನಿಂತ ನೀರನ್ನೂ ಜಮೀನುಗಳಿಗೆ ಬಳಸಿಕೊಳ್ಳುವ ರೈತರ ಪಂಪ್‍ಸೆಟ್‍ಗಳನ್ನು ಟಿಬಿ ಬೋರ್ಡ್ ಅಧಿಕಾರಿಗಳು ಕೊಡಲಿಯಿಂದ ಕಡಿದು ಹಾಕಿ ನಾಶಪಡಿಸಿದ್ದಾರೆ. ಈ ವೇಳೆ ರೈತರು ಎಷ್ಟೇ ಬೇಡಿಕೊಂಡರೂ ರೈತರ ಮೇಲೆ ದಬ್ಬಾಳಿಕೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಪಂಪ್‍ಸೆಟ್‍ಗಳನ್ನು ಕಿತ್ತು ಹಾಕಿದ್ದಾರೆ.

    ಅಷ್ಟೇ ಅಲ್ಲ ಟಿಬಿ ಬೋರ್ಡ್ ಅಧಿಕಾರಿಗಳು ಅಲ್ಲಿಯ ರೈತರ ಮೇಲೆ ಕೇಸ್ ಸಹ ದಾಖಲಿಸಿದ್ದಾರೆ. ಮೋಕಾ ಪೊಲೀಸ್ ಠಾಣೆಯಲ್ಲಿ 14 ರೈತರ ಮೇಲೆ ದೂರು ದಾಖಲಾಗಿದೆ. ಹೀಗಾಗಿ ನಮ್ಮ ನೀರೂ ನಮಗಿಲ್ವಾ? ನಿಂತ ನೀರನ್ನೂ ಬಳಸಿಕೊಳ್ಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಾ ಅಂತ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಯಾದಗಿರಿಯಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಸಂತಸ

    ಯಾದಗಿರಿಯಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಸಂತಸ

    ಯಾದಗಿರಿ: ಬಿಸಿಲ ನಾಡು ಯಾದಗಿರಿಯಲ್ಲಿ ಇಂದು ಬೆಳಗ್ಗೆ ಅರ್ಧಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದ್ದು ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿಸಿದೆ.

    ಮುಂಗಾರು ಬೆಳೆಗೆ ವಾಡಿಕೆ ಮಳೆ ಆಗಿಲ್ಲ. ಹೀಗಾಗಿ ಯಾದಗಿರಿ, ಶಾಹಪೂರ, ಸೂರಪೂರ ಹಾಗೂ ಗುರಮಿಟ್ಕಲ್ ಭಾಗದಲ್ಲಿ ಬಿತ್ತನೆ ಮಾಡಿದ ರೈತರ ಬೆಳೆಗೆ ಮಳೆ ಬಂದು ಕೊಂಚನೆಮ್ಮದಿ ನೀಡಿದೆ.

    ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು.

  • ದಿನಕ್ಕೆ ಏಳು ಎಕ್ರೆ ಜಾಗದಲ್ಲಿ ನಾಟಿ ಮಾಡುತ್ತೆ ಈ ಹೈಟೆಕ್ ಕೃಷಿ ಯಂತ್ರ!

    ದಿನಕ್ಕೆ ಏಳು ಎಕ್ರೆ ಜಾಗದಲ್ಲಿ ನಾಟಿ ಮಾಡುತ್ತೆ ಈ ಹೈಟೆಕ್ ಕೃಷಿ ಯಂತ್ರ!

    ಉಡುಪಿ: ತಂತ್ರಜ್ಞಾನ ಬೆಳೆದಂತೆ ಕೃಷಿ-ಬೇಸಾಯ ನಾಶವಾಗಿ ಹೋಯ್ತು ಅನ್ನೋ ವಾದವೊಂದಿದೆ. ಜನ ಬೇಸಾಯ ಮಾಡೋದನ್ನು ಬಿಟ್ಟೇ ಬಿಟ್ಟರು ಅಂತಾರೆ. ಆದ್ರೆ ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ಕಾಲಿಟ್ಮೇಲೆ ಜನಕ್ಕೆ ಬೇಸಾಯದ ಮೇಲೆ ಮತ್ತೆ ಮನಸ್ಸಾಗಿದೆ.

    ಬೇಸಾಯ ಮಾಡೋದಕ್ಕೆ ಆಳುಗಳೇ ಸಿಗಲ್ಲ. ಕೆಲಸದಾಳು ಸಿಕ್ಕರೂ ಅವರಿಗೆ ಸಂಬಳ ಕೊಟ್ಟು ಪೂರೈಸಲ್ಲ. ಸಂಬಳ-ಖರ್ಚು ವೆಚ್ಚ ಕಳೆದ್ರೆ ನಮಗೇನೂ ಉಳಿಯಲ್ಲ. ಕರಾವಳಿಯಲ್ಲಿ ಬೇಸಾಯ ಮಾಡುವ ಮಂದಿಯ ಬಾಯಲ್ಲಿ ಬರುವ ಮಾತುಗಳಿವು. ಈ ಎಲ್ಲಾ ಕಾರಣಕ್ಕಾಗಿ ಜನ ಕೃಷಿ ಮಾಡೋದನ್ನೇ ಬಿಟ್ಟು ಬಿಟ್ಟಿದ್ದಾರೆ. ಆದರೆ ಇದೀಗ ಹೊಸ ತಂತ್ರಜ್ಞಾನ ಗದ್ದೆಗೆ ಇಳಿದಿರೋದ್ರಿಂದ ಮತ್ತೆ ಬೇಸಾಯ ಮಾಡೋ ಮನಸ್ಸು ರೈತರಿಗಾಗಿದೆ. ಜಪಾನ್ ದೇಶದ ನಾಟಿ ಮಾಡುವ ಅತ್ಯಾಧುನಿಕ ಯಂತ್ರ ಕರಾವಳಿ ಜಿಲ್ಲೆ ಉಡುಪಿಗೆ ಕಾಲಿಟ್ಟಿದೆ.

    ಹಿರಿಯಡ್ಕದ ಆನಂದ ಶೆಟ್ಟಿ ಅವರು ಈ ಬಾಡಿಗೆ ಯಂತ್ರವನ್ನು ಪಡೆದು ಸಸಿ ನೆಡುತ್ತಿದ್ದಾರೆ. ಮನುಷ್ಯ ಶಕ್ತಿಯಿಂದ ಉಳುಮೆ ಮಾಡೋದು-ನಾಟಿ ಮಾಡೋದು ಕಷ್ಟ. ಆದ್ರೆ ಈ ಯಂತ್ರ ಉತ್ತು-ನಾಟಿ ಮಾಡುತ್ತದೆ. ಕೃಷಿ ಏನಾದ್ರು ಮುಂದಿನ ದಿನಗಳಲ್ಲಿ ಉಳಿದ್ರೆ ಇಂತಹ ಯಂತ್ರಗಳಿಂದ ಮಾತ್ರ. ಈಗಿನ ಯುವಕರು ಇಂತಹ ತಂತ್ರಜ್ಞಾನ ನೋಡಿದ್ರೆ ಮತ್ತೆ ಕೃಷಿಯತ್ತ ಮುಖ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದು ಅವರು ಹೇಳುತ್ತಾರೆ.

    ದಿನವೊಂದಕ್ಕೆ ಕಡಿಮೆ ಅಂದ್ರೂ ಏಳೆಂಟು ಎಕರೆ ಜಮೀನಿನಲ್ಲಿ ನಾಟಿ ಕಾರ್ಯ ಮಾಡುವ ಸಾಮಥ್ರ್ಯವನ್ನು ಈ ಯಂತ್ರ ಹೊಂದಿದೆ. ಮನುಷ್ಯ ನೆಡುವುದಕ್ಕಿಂತ ಚೆನ್ನಾಗಿ ಪೈರನ್ನು ನಾಟಿ ಮಾಡುತ್ತದೆ. ಈ ಹಿಂದೆ ಬಂದ ಎಲ್ಲಾ ಮಷೀನ್‍ಗಳಿಗಿಂತ ಜಪಾನ್ ಮಷೀನ್ ನಡುವೆ ಅಂತರಗಳಿಲ್ಲದೆ ನಾಟಿ ಮಾಡುತ್ತದೆ. ನಾಟಿ ಯಂತ್ರದಲ್ಲೇ ಪೈರನ್ನು ಇಡೋದಕ್ಕೆ ಸ್ಥಳಾವಕಾಶ ಕೂಡಾ ಇದೆ.

    ಈ ಹೊಸ ಮಷೀನ್ ಬಂದಿರೋದ್ರಿಂದ ಉಡುಪಿಯ ಹಿರಿಯಡ್ಕದ ಯುವಕರೆಲ್ಲಾ ಸೇರಿ ನೂರು ಎಕ್ರೆ ಪಾಳುಬಿದ್ದ ಗದ್ದೆಯಲ್ಲಿ ಕೃಷಿ ಮಾಡೋದಕ್ಕೆ ಹೊರಟಿದ್ದಾರೆ. ಬಂದ ಆದಾಯವನ್ನು ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ದೇವಸ್ಥಾನ ಈ ಬಾರಿ ಜೀರ್ಣೋದ್ಧಾರ ಆಗಿದ್ದು ಕೊಯ್ಲು ಆಗುವ ಸಂದರ್ಭ ಬಂದ ಲಾಭಾಂಶದಲ್ಲಿ ಮುಂದಿನ ಬೆಳೆ ಮಾಡಲು ಹಣವನ್ನು ತೆಗೆದಿಟ್ಟು ಎಲ್ಲವನ್ನೂ ದೇವರಿಗೆ ಒಪ್ಪಿಸುವ ಹರಕೆಯನ್ನು ಹೇಳಿ ಉಳುಮೆ ಮಾಡಿಸಲಾಗಿದೆ.

    ತಂತ್ರಜ್ಞಾನ ಬಂದಮೇಲೆ ಜನ ಬೇಸಾಯ ಮರೆತ್ರು ಅನ್ನೋ ದೂರಿತ್ತು. ಆದ್ರೆ ಇದು ಆ ದೂರಿಗೊಂದು ಅಪವಾದ. ಕೃಷಿ ಕ್ಷೇತ್ರದಲ್ಲಿದು ಉತ್ತಮ ಬೆಳವಣಿಗೆ ಇಂತಹ ಬೆಳವಣಿಗೆ ಮತ್ತಷ್ಟು ಆದ್ರೆ ಒಳ್ಳೇದು.

  • ಕೋತಿ ಓಡಿಸಿ ಬೆಳೆ ಕಾಯುತ್ತಿದ್ದಾರೆ ಧಾರವಾಡ ರೈತರು!

    ಕೋತಿ ಓಡಿಸಿ ಬೆಳೆ ಕಾಯುತ್ತಿದ್ದಾರೆ ಧಾರವಾಡ ರೈತರು!

    ಧಾರವಾಡ: ಧಾರವಾಡ ತಾಲೂಕಿನ ಯಾಡವಾಡ, ಯರಿಕೊಪ್ಪ, ಲಕಮಾಪೂರ, ಬೇಟಗೇರಿ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಕೋತಿಗಳು ತಿಂದು ಹಾಳು ಮಾಡುತ್ತಿವೆ.

    ಬರಗಾಲದಿಂದ ಬೇಸತ್ತಿರುವ ರೈತರು ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆಯೂ ಕೈಗೆ ಸಿಗದಂತಾಗಿದೆ. ಹಿಂಡು ಹಿಂಡಾಗಿ ಬರುವ ಮಂಗಗಳು ಬೆಳೆಯನ್ನು ನಾಶಪಡಿಸುತ್ತಿವೆ. ಹೀಗಾಗಿ ರೈತರು ಕೋತಿಗಳನ್ನ ಕಾಯುವ ಸ್ಥಿತಿ ಬಂದಿದೆ.

    ರೈತರು ಶೇಂಗಾ, ಬಟಾಣಿ, ಹೆಸರು ಬೆಳೆ, ಸೌತೇಕಾಯಿ ಹಾಗೂ ಹತ್ತಿ ಸೇರಿದಂತೆ ತರಕಾರಿ ಬೆಳೆಯನ್ನು ಬೆಳೆದಿದ್ದಾರೆ. ಈಗಾಗಲೇ ರೈತರು ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದು, ಅಧಿಕಾರಿಗಳು ಮಂಗಗಳ ಕಾಟದಿಂದ ಅನ್ನದಾತರನ್ನು ತಪ್ಪಿಸಬೇಕಿದೆ.

     

  • ಆಲಮಟ್ಟಿ ಡ್ಯಾಂ ಭರ್ತಿ: ರೈತರ ಮೊಗದಲ್ಲಿ ಸಂತಸ

    ಆಲಮಟ್ಟಿ ಡ್ಯಾಂ ಭರ್ತಿ: ರೈತರ ಮೊಗದಲ್ಲಿ ಸಂತಸ

    ವಿಜಯಪುರ: ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆ ತುಂಬಿ ಹರಿಯುತ್ತಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಲಾಲ್‍ಬಹದ್ದೂರ್ ಶಾಸ್ತ್ರಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

    ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಲಾಶಯ ತುಂಬಿದ್ದು, ಜನರಲ್ಲಿ ಹರ್ಷ ತಂದಿದೆ. ಗರಿಷ್ಠ 519.60 ಮೀಟರ್ ಎತ್ತರದ ಡ್ಯಾಂನಲ್ಲಿ 519.60 ಮೀಟರ್ ನೀರು ಸಂಗ್ರಹವಾಗಿದೆ.

    ಇನ್ನು ಒಳ ಹರಿವು 35,672 ಕ್ಯೂಸೆಕ್ ಇದ್ದು, 12 ಕ್ರೆಸ್ಟ್ ಗೇಟ್‍ಗಳಿಂದ 35,672 ಕ್ಯೂಸೆಕ್ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಜಲಾಶಯ ಭರ್ತಿಯಾಗಿದ್ದು, ರೈತರಲ್ಲಿ ಮತ್ತು ಜನರಲ್ಲಿ ಕೊಂಚ ಸಂತಸ ಮೂಡಿಸಿದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ನಗರಕ್ಕೆ ನೀರು ಕೊಡಲು ರೈತರ ಬೆಳೆಗಳಿಗೆ ವಿಷವಿಟ್ಟ ಅಧಿಕಾರಿಗಳು- ಮುಖ್ಯಮಂತ್ರಿಗಳೇ ಇದು ನಿಮ್ಮ ಕ್ಷೇತ್ರದ ಕಥೆ!

    ನಗರಕ್ಕೆ ನೀರು ಕೊಡಲು ರೈತರ ಬೆಳೆಗಳಿಗೆ ವಿಷವಿಟ್ಟ ಅಧಿಕಾರಿಗಳು- ಮುಖ್ಯಮಂತ್ರಿಗಳೇ ಇದು ನಿಮ್ಮ ಕ್ಷೇತ್ರದ ಕಥೆ!

    ಮೈಸೂರು: ಹೊಲಕ್ಕೆ, ತೋಟಕ್ಕೆ ನೀರಿಲ್ಲ ಅಂತಾ ರೈತರು ಕಂಗಾಲಾಗಿರುವುದನ್ನು ನೋಡಿದ್ವೀವಿ. ಆದರೆ ಇಲ್ಲಿ ತೋಟಕ್ಕೆ ನೀರು ಹರಿಯುತ್ತಿರುವುದೇ ರೈತರ ಪಾಲಿಗೆ ಕಂಟಕವಾಗಿದೆ. ನೀರು ಒಂದರ್ಥದಲ್ಲಿ ರೈತರ ಪಾಲಿಗೆ ಮರಣ ಶಾಸನ ಬರೆಯುತ್ತಿದೆ. ಯಾಕಂದ್ರೆ ನೀರುನೀರಾಗಿ ಉಳಿದಿಲ್ಲ ವಿಷವಾಗಿ ಮಾರ್ಪಟ್ಟಿದೆ.

    ಈ ಘಟನೆ ನಡೆದಿರೋದು ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾ ವ್ಯಾಪ್ತಿಯ ಬಿದರಗೂಡು ಗ್ರಾಮದಲ್ಲಿ. ಮೈಸೂರು ನಗರಕ್ಕೆ ಕಬಿನಿ ನದಿಯಿಂದ ಕುಡಿಯುವ ನೀರು ಹರಿಸಲು ಬಿದರಗೂಡು ಸಮೀಪ ನೀರು ಶುದ್ಧೀಕರಣ ಘಟಕವನ್ನು ಕರ್ನಾಟಕ ಕುಡಿಯುವ ನೀರು ಸರಬರಾಜು ಇಲಾಖೆ ಸ್ಥಾಪಿಸಿದೆ. ಈ ಘಟಕದಲ್ಲಿ ನೀರು ಶುದ್ಧೀಕರಿಸಿ ಉಳಿಯುವ ಅನುಪಯುಕ್ತ ನೀರನ್ನು ವ್ಯವಸ್ಥಿತವಾಗಿ ವಿಸರ್ಜಿಸದೆ ಆ ನೀರನ್ನು ಅಕ್ಕಪಕ್ಕದ ಜಮೀನುಗಳಿಗೆ ಹರಿಸಲಾಗುತ್ತಿದೆ. ಇದರಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ.

    ಕಳೆದ ಐದಾರು ವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಿದೆ. ಅಡಕೆ, ತೆಂಗು, ಶುಂಠಿ, ಬಾಳೆ ಬೆಳೆಯುತ್ತಿದ್ದ ರೈತರು, ಹೀಗೆ ತೋಟಕ್ಕೆ ನೀರು ತುಂಬುತ್ತಿರುವ ಕಾರಣ ಬೆಳೆ ಬೆಳೆಯಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ರೈತರು ನೂರು ಬಾರಿ ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ.

    ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಇತ್ತ ಗಮನ ಹರಿಸಿ ರೈತರ ನೆರವಿಗೆ ಧಾವಿಸಬೇಕಿದೆ. ವಿಷದ ನೀರನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕಿದೆ.

  • ಅಂದು ತೆಗಳಿಕೆ, ಇಂದು ಹೊಗಳಿಕೆ- ಸಾಫ್ಟ್ ವೇರ್ ಉದ್ಯೋಗ ಬಿಟ್ಟು ಕೃಷಿಕನಾದ ಬಳ್ಳಾರಿ ಹೈದ

    ಅಂದು ತೆಗಳಿಕೆ, ಇಂದು ಹೊಗಳಿಕೆ- ಸಾಫ್ಟ್ ವೇರ್ ಉದ್ಯೋಗ ಬಿಟ್ಟು ಕೃಷಿಕನಾದ ಬಳ್ಳಾರಿ ಹೈದ

    ಬಳ್ಳಾರಿ: ಕಂಪೆನಿಯಲ್ಲಿ ಲಕ್ಷ ಲಕ್ಷ ಸಂಬಳ ಸಿಗ್ತಿದ್ರೂ ಕೆಲಸ ಬಿಟ್ಟು ಕೃಷಿಕರಾದವರು ನಮ್ಮ ಪಬ್ಲಿಕ್ ಹೀರೋ. ಕೃಷಿ ಅಂದಾಗ ತೆಗಳಿದ್ದ ಸ್ನೇಹಿತರು ಸಂಬಂಧಿಕರು, ಈಗ ಹೊಗಳ್ತಿದ್ದಾರೆ.

    ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್‍ನ ನಿವಾಸಿ ನವೀನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. 2010ರಲ್ಲಿ ಬಳ್ಳಾರಿಯ ಬಿಐಟಿಎಂ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿ, ಹೈದ್ರಾಬಾದ್‍ನ ಸಾಫ್ಟ್ ವೇರ್ ಕಂಪೆನಿಯಲ್ಲಿ 40 ಸಾವಿರ ರೂಪಾಯಿ ಸಂಬಳದ ಒಳ್ಳೆಯ ಕೆಲಸವನ್ನು ಮಾಡ್ತಿದ್ದರು. ಕೆಲಸಕ್ಕೆ ಹೋದ ಕೆಲವೇ ದಿನಗಳಲ್ಲಿ ಅದ್ಯಾಕೋ ಕೃಷಿ ಇವರನ್ನ ಕೈಬೀಸಿ ಕರೀತು. ಕೆಲಸ ಬಿಟ್ಟು ಮಣ್ಣನ್ನ ಕಣ್ಣಿಗೊತ್ತಿಕೊಂಡು ಹತ್ತು ಎಕರೆ ಸ್ವಂತ ಜಮೀನಿನಲ್ಲಿ ಹೆಬ್ಬೇವು ಬೆಳೆದಿದ್ದಾರೆ.

    ಹೆಬ್ಬೇವು ಗಿಡಗಳನ್ನ ಕಾರ್ಡ್‍ಬೋರ್ಡ್ ತಯಾರಿಕೆಗೆ ಬಳಸ್ತಾರೆ. 6 ರಿಂದ 8 ವರ್ಷ ಆರೈಕೆ ಮಾಡಿದ್ರೆ ಲಕ್ಷ ಲಕ್ಷ ರುಪಾಯಿ ಆದಾಯ ನಿಶ್ಚಿತ. ಹೀಗಾಗಿ ನವೀನ್ 10 ಅಡಿಗಳ ಅಂತರದಲ್ಲಿ ಹನಿ ನೀರಾವರಿ ಮೂಲಕ 4 ಸಾವಿರ ಹೆಬ್ಬೇವು ಗಿಡಗಳನ್ನು ಬೆಳೆಸಿದ್ದಾರೆ. ಹೆಬ್ಬೇವು ಗಿಡಗಳ ಮಧ್ಯೆ ಕಡಲೆ, ಅಜವಾನ್ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬೆಳೆದು ಬದುಕು ಸಾಗಿಸ್ತಿದ್ದಾರೆ. ನವೀನ್ ಕೃಷಿ ಮಾಡ್ತೀನಿ ಅಂದಾಗ ತೆಗಳಿದ್ದ ಸ್ನೇಹಿತರು, ಕುಟುಂಬದವರು ಇಂದು ಹಾಡಿ ಹೊಗಳುತ್ತಿದ್ದಾರೆ.

    https://www.youtube.com/watch?v=vkC9Wv-pvxM

  • ಬರಗಾಲದ ಕರಿನೆರಳು: ಮರೀಚಿಕೆಯಾದ ಮುಂಗಾರು, ಮಳೆಗಾಗಿ ರೈತರಿಂದ ಸಪ್ತಭಜನೆ

    ಬರಗಾಲದ ಕರಿನೆರಳು: ಮರೀಚಿಕೆಯಾದ ಮುಂಗಾರು, ಮಳೆಗಾಗಿ ರೈತರಿಂದ ಸಪ್ತಭಜನೆ

    ರಾಯಚೂರು: ಮುಂಗಾರು ಮಳೆಯ ಆರಂಭದ ಅಬ್ಬರಕ್ಕೆ ಖುಷಿಯಾಗಿದ್ದ ರಾಯಚೂರು ಜಿಲ್ಲೆಯ ರೈತರು ಈಗ ಬರೀ ಮೋಡಗಳನ್ನ ನೋಡುತ್ತ ಮಳೆಗಾಗಿ ಕಾಯುತ್ತ ಕುಳಿತಿದ್ದಾರೆ. ಈ ಬಾರಿಯು ಬರಗಾಲದ ಹೆದರಿಕೆ ಶುರುವಾಗುತ್ತಿದೆ. ಬಿತ್ತನೆ ಮಾಡಿದ ರೈತರದ್ದು ಒಂದು ಚಿಂತೆಯಾದ್ರೆ, ಬಿತ್ತನೆ ಮಾಡದೇ ಖಾಲಿ ಕುಳಿತ ರೈತರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ರೈತರೆಲ್ಲಾ ದೇವರ ಮೊರೆ ಹೋಗುತ್ತಿದ್ದು ಭಜನೆ, ಪ್ರಾರ್ಥನೆಗಳ ಮೂಲಕ ಮಳೆ ತರಿಸಲು ಮುಂದಾಗಿದ್ದಾರೆ.

    ಜೂನ್ ತಿಂಗಳ ಆರಂಭದಲ್ಲಿ ಇಡೀ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಮಳೆ ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆಯನ್ನ ಹುಟ್ಟಿಸಿತ್ತು. ಜಿಲ್ಲೆಯ ಶೇಕಡ 60 ರಷ್ಟು ರೈತರು ಸಹ ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನ ಬಿತ್ತನೆ ಮಾಡಿದ್ದಾರೆ. ಆಷಾಡ ಗಾಳಿ ಹಿನ್ನೆಲೆ ಶೇಕಡಾ 40 ರಷ್ಟು ರೈತರು ಇನ್ನೊಂದು ಮಳೆಗೆ ಕಾಯುತ್ತಿದ್ದರು.

    ಮಳೆ ಮಾತ್ರ ಒಂದು ತಿಂಗಳಾದ್ರೂ ಇನ್ನೂ ಸುಳಿದಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ 80.7 ಮಿಮೀ ಇದ್ರೆ, 121.8 ಮಿಮೀ ಮಳೆ ಬಂದಿತ್ತು. ಆದ್ರೆ ಜುಲೈ ತಿಂಗಳಲ್ಲಿ ಈವರೆಗೆ ವಾಡಿಕೆ ಮಳೆ ಪ್ರಮಾಣ 72.4 ಮಿಮೀ ಇದ್ದರೆ, ಮಳೆಯಾಗಿರೋದು ಮಾತ್ರ ಕೇವಲ 17.6 ಮಿಮೀ. ಅಂದ್ರೆ ಶೇಕಡಾ 76 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ರೈತರು ಭಜನೆ ಮೂಲಕ ದೇವರ ಮೊರೆ ಹೋಗಿದ್ದಾರೆ.

    ಜಿಲ್ಲೆಯ ಉಡಮಗಲ್ ಖಾನಾಪುರ ಗ್ರಾಮದಲ್ಲಿ ಮಳೆಗಾಗಿ ಗ್ರಾಮದ ಭೀಮೇಶ್ವರ ದೇವಾಲಯದಲ್ಲಿ ರೈತರು ಸಪ್ತಭಜನೆ ಆರಂಭಿಸಿದ್ದಾರೆ. ಸತತ ಏಳು ದಿನಕಾಲ ಮಡಿ ಬಟ್ಟೆ ಒಣಗದಂತೆ 49 ಜನರ 7 ತಂಡ ನಿರಂತರ ಭಜನೆ ಆರಂಭಿಸಿದೆ. 2015 ರಿಂದ ಸಪ್ತಭಜನೆ ಆರಂಭಿಸಿದ್ದು ಈ ಹಿಂದೆ ಮಳೆ ಬಂದಿದೆ ಅನ್ನೋ ನಂಬಿಕೆಯಲ್ಲಿ ಭಜನೆ ಮುಂದುವರೆಸಿದ್ದಾರೆ.

    ಒಟ್ನಲ್ಲಿ, ಈ ಬಾರಿ ಬಹು ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ರೈತರ ಜೊತೆ ಆಟವಾಡಲು ಶುರುಮಾಡಿದೆ. ಬಿತ್ತನೆಯಾದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಬೀಜ, ಗೊಬ್ಬರ ಅಂತೆಲ್ಲಾ ಸಾವಿರಾರು ರೂಪಾಯಿ ಖರ್ಚುಮಾಡಿದ ರೈತರು ಪುನಃ ಸಾಲಗಾರರಾಗುತ್ತಿದ್ದಾರೆ. ಈಗಲಾದ್ರೂ ವರುಣದೇವ ಕೃಪೆ ತೋರಬೇಕಿದೆ.

  • 3 ವರ್ಷಗಳಿಂದ ಕಬ್ಬಿನ ಬಾಕಿಯೇ ಕೊಟ್ಟಿಲ್ಲ- ಆಗಸ್ಟ್ 1ರಿಂದ ರೈತರ ಉಗ್ರ ಹೋರಾಟ

    3 ವರ್ಷಗಳಿಂದ ಕಬ್ಬಿನ ಬಾಕಿಯೇ ಕೊಟ್ಟಿಲ್ಲ- ಆಗಸ್ಟ್ 1ರಿಂದ ರೈತರ ಉಗ್ರ ಹೋರಾಟ

    ಧಾರವಾಡ: ಸಚಿವರೊಬ್ಬರ ಕಾರ್ಖಾನೆಗೆ ತಾವು ಕಷ್ಟ ಪಟ್ಟು ಬೆಳೆದಿದ್ದ ಕಬ್ಬನ್ನು ಕೊಟ್ಟರೆ ಕಳೆದ ಮೂರು ವರ್ಷಗಳಿಂದ ರೈತರಿಗೆ ಕಬ್ಬಿನ ಬಾಕಿಯನ್ನೇ ನೀಡದೇ ಸತಾಯಿಸುತ್ತಿದ್ದಾರೆ.

    ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಅವರ ಮಾಲೀಕತ್ವದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ರೈತರಿಂದ ಸುಮಾರು 80 ಕೋಟಿ ರೂಪಾಯಿ ಕಬ್ಬು ಖರೀದಿ ಮಾಡಿದೆ. ಆದರೆ ಕಳೆದ 3 ವರ್ಷಗಳಿಂದ ಬಾಕಿ ಹಣವನ್ನೇ ಕೊಟ್ಟಿಲ್ಲ. ಜಿಲ್ಲಾಡಳಿತಕ್ಕೂ ಸಚಿವರು ಸುಳ್ಳು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಚಿವರು ಬಾಕಿ ಬಿಲ್ ಪಾವತಿ ಮಾಡದೇ ಇದ್ರೆ ಆಗಸ್ಟ್ 1ರಿಂದ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿರುವ ಚನ್ನಮ್ಮನ ಪ್ರತಿಮೆ ಎದುರು ಕುಟುಂಬ ಸಮೇತರಾಗಿ ಧರಣಿ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.