Tag: farmer

  • ಹಸು ಸಾವಿನಿಂದ ಮನನೊಂದು ಮಂಡ್ಯದಲ್ಲಿ ರೈತ ಆತ್ಮಹತ್ಯೆ

    ಹಸು ಸಾವಿನಿಂದ ಮನನೊಂದು ಮಂಡ್ಯದಲ್ಲಿ ರೈತ ಆತ್ಮಹತ್ಯೆ

    ಮಂಡ್ಯ: ಮೊದಲೇ ಸಾಲಬಾಧೆಯಿಂದ ಕಂಗಾಲಾಗಿದ್ದ ರೈತ ಜೀವನಾಧಾರವಾಗಿದ್ದ ಹಸು ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 55 ವರ್ಷದ ರೈತ ವೆಂಕಟಾಚಲ ಆತ್ಮಹತ್ಯೆಗೆ ಶರಣಾದವರು. ವೆಂಕಟಾಚಲ ಅವರಿಗೆ 15 ಗುಂಟೆ ಜಮೀನಿತ್ತು. ಒಂದೂವರೆ ಎಕರೆ ಜಮೀನನ್ನು ಬೇರೆ ರೈತರಿಂದ ಭೋಗ್ಯಕ್ಕೆ ಪಡೆದು ಭತ್ತ ಬೆಳೆದಿದ್ರು. ಆದ್ರೆ ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆ ಒಣಗಿತ್ತು. ಇದರ ನಡುವೆ ಜೀವನಾಧಾರವಾಗಿದ್ದ ಹಸುವೂ ಕೂಡ ಕಳೆದ ವಾರ ಮೃತಪಟ್ಟಿತ್ತು.

    ರೈತ ವೆಂಕಟಾಚಲ ಅವರು ಸುಮಾರು ಎರಡು ಲಕ್ಷ ರೂ. ಕೈಸಾಲ ಮಾಡಿದ್ರು. ಒಡವೆ ಅಡವಿಟ್ಟು 15 ಸಾವಿರ ರೂ. ಸಾಲ ಪಡೆದಿದ್ರು. ಸ್ವಸಹಾಯ ಸಂಘಗಳಿಂದಲೂ 50 ಸಾವಿರ ರೂ. ಸಾಲ ಮಾಡಿದ್ರು. ಇವೆಲ್ಲದ್ದರಿಂದ ಮನನೊಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

    ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಡ್ಯದಲ್ಲಿ ಕುರಿಗಳ ನಿರಂತರ ಸಾವು- 500ಕ್ಕೂ ಹೆಚ್ಚು ಕುರಿಗಳಿಗೆ ಅನಾರೋಗ್ಯ

    ಮಂಡ್ಯದಲ್ಲಿ ಕುರಿಗಳ ನಿರಂತರ ಸಾವು- 500ಕ್ಕೂ ಹೆಚ್ಚು ಕುರಿಗಳಿಗೆ ಅನಾರೋಗ್ಯ

    ಮಂಡ್ಯ: ಕಳೆದ ಒಂದು ವಾರದಿಂದ ನಿರಂತರವಾಗಿ ಕುರಿಗಳು ಸಾಯುತ್ತಿದ್ದು, ರೈತಾಪಿ ವರ್ಗದಲ್ಲಿ ಆತಂಕ ಸೃಷ್ಟಿಯಾಗಿರುವ ಘಟನೆ ಮಂಡ್ಯದ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಹುತೇಕ ರೈತರು ಕುರಿ ಸಾಕುತ್ತಿದ್ದು, ಕಳೆದೊಂದು ವಾರದಲ್ಲಿ ಸುಮಾರು 25 ಕುರಿಗಳು ಸಾವನ್ನಪ್ಪಿವೆ. 500ಕ್ಕೂ ಹೆಚ್ಚು ಕುರಿಗಳು ಅನಾರೋಗ್ಯ ಪೀಡಿತವಾಗಿವೆ. ಕುರಿಗಳ ಬಾಯಲ್ಲಿ ಹುಣ್ಣಾಗಿವೆ. ಜೊಲ್ಲು ಸುರಿಸುತ್ತಾ ಮೇವು ತಿನ್ನದೇ ಸಪ್ಪಗೆ ನಿಲ್ಲುವ ಕುರಿಗಳು ಸಾವನ್ನಪ್ಪುತ್ತಿವೆ.

    ವೈದ್ಯರು ಬಂದು ಚಿಕಿತ್ಸೆ ನೀಡಿದ್ರೂ ಪ್ರಯೋಜನವಾಗುತ್ತಿಲ್ಲ. ಈ ರೋಗ ಅಕ್ಕಪಕ್ಕದ ಗ್ರಾಮಕ್ಕೂ ಹರಡುವ ಭೀತಿ ಶುರುವಾಗಿದೆ. ಇಷ್ಟು ದಿನ ಮಳೆಯಿಲ್ಲದೇ ಬರಗಾಲದಿಂದ ತತ್ತರಿಸಿದ್ದ ಮಂಡ್ಯ ರೈತಾಪಿ ವರ್ಗ, ಇದೀಗ ಕುರಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಆದಷ್ಟು ಬೇಗ ಪಶು ವೈದ್ಯಾಧಿಕಾರಿಗಳು ಕುರಿಗಳ ರೋಗದ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು. ಸರ್ಕಾರ ಸಾವನ್ನಪ್ಪಿರುವ ಕುರಿಗಳಿಗೆ ಶೀಘ್ರ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

  • ಕಂಪನಿಗಳಿಂದ ನಕಲಿ ಬೀಜ ವಿತರಣೆ- ಹತಾಶೆಯ ತಂದೆಗೆ ಧೈರ್ಯ ತುಂಬಿದ ಪುತ್ರಿ – ಮನ ಮುಟ್ಟಿದ ಬಾಲಕಿ ಸಂದೇಶ

    ಕಂಪನಿಗಳಿಂದ ನಕಲಿ ಬೀಜ ವಿತರಣೆ- ಹತಾಶೆಯ ತಂದೆಗೆ ಧೈರ್ಯ ತುಂಬಿದ ಪುತ್ರಿ – ಮನ ಮುಟ್ಟಿದ ಬಾಲಕಿ ಸಂದೇಶ

    ಮಂಡ್ಯ: ಅಪ್ಪ ನೀನು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ನಾನೂ ಸಾಯುತ್ತೇನೆ. ನಿಮಗೆ ಬೀಜ ಕಂಪನಿಯಿಂದ ಆಗಿರುವ ಅನ್ಯಾಯವನ್ನು ನಾನು ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗಿ ಸರಿಪಡಿಸುತ್ತೇನೆ ಎಂದು ರೈತನ ಮಗಳು ತಂದೆಯನ್ನು ಸಮಾಧಾನಿಸಿದ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ, ಚಿನ್ನೇನಹಳ್ಳಿ ಗ್ರಾಮದ ರೈತರಾದ ಶ್ರೀನಿವಾಸ್, ಚನ್ನೇಗೌಡ, ಶಿವರಾಮು, ಲೋಕೇಶ್ ಎಂಬವರು ನೇರಳೆ ಬಣ್ಣದ ಉದ್ದನೆ ಬದನೆಕಾಯಿ ಬಿಡುವ ಬೀಜವನ್ನು ಬಿತ್ತನೆ ಮಾಡಿದ್ದರು. ಹೆಬ್ಬಾಳದಲ್ಲಿರುವ ಶ್ರೀವೆಂಕಟೇಶ್ವರ ಹೈಬ್ರಿಡ್ ಸೀಡ್ಸ್ ಅಂಗಡಿಯವರು, ಚಿನ್ನೇನಹಳ್ಳಿ ಗ್ರಾಮಕ್ಕೆ ಬಂದು ಕಿಯೋನಿಕ್ಸ್ ಬ್ರಿಂಜಾಲ್ ಪಿಪಿಎಲ್ ಕಂಪೆನಿಗೆ ಸೇರಿದ ಉದ್ದನೆಯ ನೇರಳೆ ಬಣ್ಣದ ಬದನೆ ಬೀಜ ನೀಡಿದ್ದರು. ಆದರೆ ಬೀಜ ನೀಡಿದವರು ಮೋಸ ಮಾಡಿದ್ದು ಗಿಡದಲ್ಲಿ ಕಾಯಿಯೇ ಬಿಡುತ್ತಿಲ್ಲ.

    ಒಂದೆರೆಡು ಕಾಯಿಯೂ ಕೂಡ ದುಂಡನೇ ಬದನೆಯಾಗಿದ್ದು, ಕಾಯಿಗಳು ಸಂಪೂರ್ಣ ಮುಳ್ಳಿನಿಂದ ಕೂಡಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಬೀಜ ಕೊಟ್ಟವರಿಗೆ ಫೋನ್ ಮಾಡಿ ಕೇಳಿದ್ರೆ ಬೇಜವಬ್ದಾರಿ ಉತ್ತರ ನೀಡುತ್ತಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ನೇರಳೆ ಬಣ್ಣದ ಬದನೆಗೆ ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿ ಬೆಲೆಯಿದೆ. ಈಗ ಕಾಯಿ ಬಿಡಲು ಆರಂಭಿಸಿದ್ದರೆ ಲಕ್ಷಾಂತರ ರೂಪಾಯಿ ಲಾಭ ನೋಡಬಹುದಿತ್ತು. ಆದರೆ ಬೀಜ ಕಂಪನಿಯವರ ಮೋಸಕ್ಕೆ ಬಲಿಯಾಗಿದ್ದೇವೆ ಎಂದು ರೈತರು ಹೇಳುತ್ತಾರೆ.

    ನಮಗೆ ನ್ಯಾಯ ಕೊಡಿಸಿ ಎಂದು ಮುಖ್ಯಮಂತ್ರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ ಪತ್ರ ಮೂಲಕ ಮನವಿ ಮಾಡಿದ್ದೇವೆ. ದಯಾಮರಣವನ್ನೂ ಕೋರಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನಮಗೆ ಆತ್ಮಹತ್ಯೆಯೊಂದೆ ದಾರಿ ಎಂದು ರೈತರು ಜಮೀನಿನ ಬಳಿ ಕಣ್ಣೀರು ಹಾಕುತ್ತಿದ್ದಾರೆ.

    ರೈತ ಶ್ರೀನಿವಾಸ್ ಅವರ ಮಗಳು 11 ವರ್ಷದ ಕೀರ್ತನ, ಅಪ್ಪ ನೀನು ಸತ್ತರೆ ನಾನೂ ಸಾಯುತ್ತೇನೆ. ನಾನು ಮುಂದೆ ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗುತ್ತೇನೆ. ಆಗ ನಿಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುತ್ತೇವೆ ಎಂದು ಅಮಾಯಕವಾಗಿ ಮಾತನಾಡಿದ್ದು ಎಲ್ಲರ ಕಣ್ಣಲ್ಲೂ ನೀರು ತರಿಸಿತ್ತು.

     

     

  • ಮೀನುಮರಿ ಸಾಕಾಣಿಕೆ ಮಾಡುವ ಹೊಂಡದಲ್ಲಿ ಮೊಸಳೆ ಮರಿ ಸಿಕ್ತು!

    ಮೀನುಮರಿ ಸಾಕಾಣಿಕೆ ಮಾಡುವ ಹೊಂಡದಲ್ಲಿ ಮೊಸಳೆ ಮರಿ ಸಿಕ್ತು!

    ಮಂಡ್ಯ: ಮೀನುಮರಿ ಸಾಕಾಣಿಕೆ ಮಾಡುವ ಹೊಂಡದಲ್ಲಿ ಮೊಸಳೆ ಮರಿಯೊಂದು ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದ ಸುರೇಶ್ ಎಂಬವರ ಜಮೀನಿನಲ್ಲಿರುವ ಹೊಂಡದಲ್ಲಿ ಮೊಸಳೆ ಮರಿ ಪತ್ತೆಯಾಗಿದೆ. ಎಂದಿನಂತೆ ಮೀನುಮರಿ ವೀಕ್ಷಣೆ ಮಾಡಲು ಬಂದಾಗ ಮೊಸಳೆ ಮರಿ ಮಲಗಿರೋದನ್ನು ಸುರೇಶ್ ಗಮನಿಸಿದ್ದಾರೆ. ನಂತರ ಅವರನ್ನು ಕಂಡ ಮೊಸಳೆ ಹೊಂಡದೊಳಗೆ ಹೋಗಿ ಅವಿತುಕೊಂಡಿದೆ.

    ಬಲೆಯ ಸಹಾಯದಿಂದ ಮೊಸಳೆ ಮರಿಯನ್ನು ಹೊರತೆಗೆದಿದ್ದು, ಸುಮಾರು ಎರಡು ಅಡಿ ಉದ್ದ, ಒಂದೂವರೆ ಕೆಜಿ ತೂಕವಿದೆ. ಜಮೀನಿನ ಸ್ವಲ್ಪ ದೂರದಲ್ಲೇ ಕಾವೇರಿ ನದಿ ಹರಿಯುವದರಿಂದ ಮೊಸಳೆ ಮರಿ ಬಂದಿರಬಹುದು ಎನ್ನಲಾಗಿದೆ.

    ಸೆರೆ ಸಿಕ್ಕ ಮೊಸಳೆಮರಿಯನ್ನು ರಂಗನತಿಟ್ಟು ಪಕ್ಷಿಧಾಮಕ್ಕೆ ಹಸ್ತಾಂತರ ಮಾಡೋದಾಗಿ ರೈತ ತಿಳಿದ್ದಾರೆ.

  • ರೈತನ ಮೇಲೆ ಕಾಡು ಹಂದಿಯ ಭಯಾನಕ ಅಟ್ಯಾಕ್: ವಿಡಿಯೋ ವೈರಲ್

    ರೈತನ ಮೇಲೆ ಕಾಡು ಹಂದಿಯ ಭಯಾನಕ ಅಟ್ಯಾಕ್: ವಿಡಿಯೋ ವೈರಲ್

    ಕಲಬುರಗಿ: ಜಿಲ್ಲೆಯಲ್ಲಿ ಕಾಡು ಹಂದಿಯೊಂದು ರೈತನ ಮೇಲೆ ಭಯಾನಕವಾಗಿ ಅಟ್ಯಾಕ್ ಮಾಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚಿಂಚೋಳಿ ತಾಲೂಕಿನ ಸಿರೋಳಿ ತಾಂಡಾದಲ್ಲಿ ಈ ಘಟನೆ ಒಂದು ವರ್ಷದ ಹಿಂದೆ ನಡೆದಿದೆ. ತಾರಾಸಿಂಗ್ ಎಂಬ ರೈತ ಸುಮಾರು 10 ರಿಂದ 15 ನಿಮಿಷ ಕಾಡು ಹಂದಿಯೊಂದಿಗೆ ಸೆಣಿಸಿದ್ದಾರೆ. ರೈತ ಸಹಾಯಕ್ಕಾಗಿ ಅಂಗಲಾಚಿದ್ದರು ಯಾರು ಮುಂದೆ ಬಂದಿರಲಿಲ್ಲ. ಆದರೆ ರೈತನನ್ನು ಅಲ್ಲಿರುವ ಶ್ವಾನಗಳ ಗುಂಪು ರಕ್ಷಣೆ ಮಾಡಿದೆ.

    ಈ ದೃಶ್ಯವನ್ನು ಪಕ್ಕದ ಜಮೀನಿನಲ್ಲಿದ್ದ ರೈತರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    https://www.youtube.com/watch?v=fpq3b7wCTWk

  • ಶರ್ಟ್ ಗೆ ಇಂಕ್ ಚೆಲ್ಲಿ ರೈತರ ದುಡ್ಡನ್ನು ಎಗರಿಸಿದ್ರು ಕಳ್ಳರು! ವಿಡಿಯೋ

    ಶರ್ಟ್ ಗೆ ಇಂಕ್ ಚೆಲ್ಲಿ ರೈತರ ದುಡ್ಡನ್ನು ಎಗರಿಸಿದ್ರು ಕಳ್ಳರು! ವಿಡಿಯೋ

    ಮಂಡ್ಯ: ಕಳ್ಳರು ಹಾಡಹಗಲೇ ರೈತರೊಬ್ಬರ 15 ಸಾವಿರ ರೂ. ಹಣವನ್ನು ದೋಚಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.

    ರೈತ ನಿಂಗೇಗೌಡ ಎಂಬುವವರು ವಿಜಯ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುತ್ತಿದ್ದರು. ಈ ವೇಳೆ ನಿಂಗೇಗೌಡರನ್ನು ಹಿಂಬಾಲಿಸಿದ ಕಳ್ಳರು ಶರ್ಟ್ ಮೇಲೆ ಉಪಾಯವಾಗಿ ಇಂಕ್ ಚೆಲ್ಲಿದ್ದಾರೆ. ನಂತರ ಬಟ್ಟೆಯನ್ನು ಕ್ಲೀನ್ ಮಾಡುವ ನೆಪದಲ್ಲಿ ಬಂದು ನಿಂಗೇಗೌಡರ ಶರ್ಟ್ ನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

    ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,  ಮಂಗಳವಾರ ಬೆಳಗ್ಗೆ 11:30ರ ಸುಮಾರಿಗೆ ಕೆಆರ್ ಪೇಟೆ ಪಟ್ಟಣದ ಲೋಕೇಶ್ ಬುಕ್ ಹೌಸ್ ಎದುರು ಘಟನೆ ನಡೆದಿದೆ. ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=UT32WNCGirk

  • ಕ್ಯಾಂಟರ್ ಪಲ್ಟಿಯಾಗಿ 5 ಸಾವಿರ ಕೆ.ಜಿ ಟೊಮೆಟೋ ರಸ್ತೆಪಾಲು- ಟೋಲ್ ಸಿಬ್ಬಂದಿ ವಿರುದ್ಧ ರೈತರ ಆಕ್ರೋಶ

    ಕ್ಯಾಂಟರ್ ಪಲ್ಟಿಯಾಗಿ 5 ಸಾವಿರ ಕೆ.ಜಿ ಟೊಮೆಟೋ ರಸ್ತೆಪಾಲು- ಟೋಲ್ ಸಿಬ್ಬಂದಿ ವಿರುದ್ಧ ರೈತರ ಆಕ್ರೋಶ

    ಮಂಡ್ಯ: ಟೊಮೆಟೋ ತುಂಬಿಕೊಂಡು ಸಾಗಿಸುತ್ತಿದ್ದ ಕ್ಯಾಂಟರ್ ಹೆದ್ದಾರಿಯಲ್ಲಿ ಉರುಳಿ ಬಿದ್ದು ಸುಮಾರು 5 ಸಾವಿರ ಕೆ.ಜಿ ಟೊಮೆಟೋ ರಸ್ತೆ ಪಾಲಾದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ, ಬೆಳ್ಳೂರು ಕ್ರಾಸ್ ಬಳಿ ಸಂಭವಿಸಿದೆ.

     

    ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಚನ್ನರಾಯಪಟ್ಟಣದಿಂದ ಬೆಂಗಳೂರಿಗೆ ಕ್ಯಾಂಟರ್‍ನಲ್ಲಿ ಟೊಮೆಟೋ ಸಾಗಿಸಲಾಗುತ್ತಿತ್ತು. ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಉರುಳಿ ಬಿದ್ದಿದೆ. ಇದರಿಂದ ಸುಮಾರು ಐದು ಸಾವಿರ ಕೆ.ಜಿ ಯಷ್ಟು ಟೊಮೆಟೋ ರಸ್ತೆಯಲ್ಲಿ ಚೆಲ್ಲಿದೆ. ಅಷ್ಟೇ ಅಲ್ಲದೇ ಹೆದ್ದಾರಿಗೆ ಕ್ಯಾಂಟರ್ ಅಡ್ಡಲಾಗಿ ಬಿದ್ದಿರುವ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ.

     

    ತಡರಾತ್ರಿ ಕ್ಯಾಂಟರ್ ಹೆದ್ದಾರಿಯಲ್ಲಿ ಬಿದ್ದಿದ್ದರೂ ಅದನ್ನು ತೆರವುಗೊಳಿಸಲು ಟೋಲ್ ಸಿಬ್ಬಂದಿ ಯಾವುದೇ ಸಹಾಯ ಮಾಡಲು ಮುಂದಾಗಿಲ್ಲ. ಅಪಘಡದ ವಿಷಯ ತಿಳಿದು ಸ್ಥಳಕ್ಕೆ ಬಂದ ಟೋಲ್ ಸಿಬ್ಬಂದಿ ನಮ್ಮಲ್ಲಿ ಕ್ರೇನ್ ವ್ಯವಸ್ಥೆಯಿಲ್ಲ. ಹೀಗಾಗಿ ನೀವೇ ಕ್ರೇನ್ ತರಿಸಿ ನಿಮ್ಮ ವಾಹನವನ್ನು ಹೆದ್ದಾರಿಯಿಂದ ತೆರವುಗೊಳಿಸಿ ಎಂದು ಕ್ಯಾಂಟರ್ ಮಾಲೀಕರಿಗೆ ತಿಳಿಸಿದ್ದಾರೆ.

    ಒಂದು ಕಡೆ ಟೊಮೆಟೋ ನಾಶವಾದ ಸಂಕಷ್ಟ ಮತ್ತೊಂದೆಡೆ ಟೋಲ್ ಕಟ್ಟಿಸಿಕೊಂಡರೂ ಕೂಡ ಅವಘಡ ಸಂಭವಿಸಿದಾಗ ಕನಿಷ್ಟ ಸೌಲಭ್ಯ ಒದಗಿಸದ ಟೋಲ್ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

  • ಕೊಡಗಿನಲ್ಲಿ ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹೊಸ ಉಪಾಯ

    ಕೊಡಗಿನಲ್ಲಿ ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹೊಸ ಉಪಾಯ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಕೃಷಿ ನಾಶ ಮಾಡುವ ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹೊಸ ಉಪಾಯ ಮಾಡಿದೆ. ಆನೆಗಳ ನಿಯಂತ್ರಣಕ್ಕೆ ಹೊಸದಾದ ಆ್ಯಂಟಿ ಪೋಚಿಂಗ್ ಕ್ಯಾಂಪ್ ಈಗಾಗಲೇ ಪ್ರಾರಂಭವಾಗಿದೆ.

    ನಿತ್ಯ ಆನೆಗಳು ಓಡಾಡುವ ಜಾಗದಲ್ಲಿ ಮರದ ಮೇಲೆ ದಿಮ್ಮಿ ಮತ್ತು ಹಲಗೆಗಳ ಮೇಲ್ಛಾವಣಿಯಲ್ಲಿ ಹುಲ್ಲು ಹಾಕಿ ಅಟ್ಟಣಿಗೆಯನ್ನು ಮಾಡಲಾಗಿದೆ. ರಾತ್ರಿ ವೇಳೆ ಅರಣ್ಯ ಸಿಬ್ಬಂದಿ ಅಟ್ಟಣಿಗೆಯ ಮೇಲೇರಿ ಬೆಳಗಿನವರೆಗೆ ಕಾವಲು ಕಾಯುತ್ತಿದ್ದಾರೆ.

    ಆನೆಗಳು ಬರುವ ಜಾಗದಲ್ಲಿ ತಂತಿಯಲ್ಲಿ ಬಾಟಲ್‍ಗಳನ್ನು ನೇತಾಡಿಸಿದ್ದಾರೆ. ಅನೆಗಳು ಬರುವ ರಭಸಕ್ಕೆ ತಂತಿಗೆ ತಾಗಿದಾಗ ಬಾಟಲ್ ಸದ್ದು ಕೇಳುತ್ತದೆ. ಸದ್ದು ಕೇಳಿದ ಕೂಡಲೇ ಆನೆಗಳನ್ನು ಮಾರ್ಗ ಮಧ್ಯೆಯೇ ವಾಪಸ್ ಕಾಡಿಗೆ ಓಡಿಸಲು ಸಹಾಯವಾಗುತ್ತಿದೆ.

  • ಮಾಫಿಯಾಗಳಿಗೆ ಬ್ರೇಕ್ ಹಾಕಿ ಮಫ್ತಿಯಲ್ಲೇ ರೇಡ್ ಮಾಡೋ ಕೊಪ್ಪಳದ ಸೂಪರ್ ಕಾಪ್

    ಮಾಫಿಯಾಗಳಿಗೆ ಬ್ರೇಕ್ ಹಾಕಿ ಮಫ್ತಿಯಲ್ಲೇ ರೇಡ್ ಮಾಡೋ ಕೊಪ್ಪಳದ ಸೂಪರ್ ಕಾಪ್

    ಕೊಪ್ಪಳ: ತಾನು ರೈತ ಆಗಬೇಕು ಅಂದುಕೊಂಡಿದ್ದ ಇವರು ಎಂಎಸ್ಸಿ ಮಾಡಿದ ಬಳಿಕ ಹೈಬ್ರಿಡ್ ಟೊಮೆಟೋ ಬಗ್ಗೆ ಪಿಹೆಚ್‍ಡಿ ಮಾಡಿದ್ದರು. ಆದರೆ ಬದುಕಿನ ಮಗ್ಗಲು ವಾಲಿದ್ದು ಪೊಲೀಸ್ ವೃತ್ತಿ ಕಡೆಗೆ.

    ಹೌದು. ಕಾನೂನು ಸುವ್ಯವಸ್ಥೆ ಕಾಪಾಡಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿರೋ ಕೊಪ್ಪಳದ ಎಸ್‍ಪಿ ಆಗಿರೋ ಡಾ. ಅನೂಪ್ ಶೆಟ್ಟಿ ಇಂದಿನ ನಮ್ಮ ಪಬ್ಲಿಕ್ ಹೀರೋ. ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ. ಕೃಷಿ ಕುಟುಂಬದಲ್ಲಿ ಹುಟ್ಟಿದ ಕಾರಣದಿಂದ ಕೃಷಿ ಕಡೆ ಒಲವಿತ್ತು. ಎಂಎಸ್ಸಿ ಓದಿದ ಬಳಿಕ 2013 ರಲ್ಲಿ `ಹೈಬ್ರೀಡ್ ಡೆವಲಪ್ ಮೆಂಟ್ ಇನ್ ಟಮೋಟೋ’ ಎನ್ನುವ ವಿಷಯದಲ್ಲಿ ಪಿಹೆಚ್‍ಡಿ ಪಡೆದರು. ಇದೇ ಸಮಯದಲ್ಲಿ ಐಪಿಎಸ್ ಪಾಸ್ ಮಾಡಿ ಪೊಲೀಸ್ ವೃತ್ತಿಗೆ ಸೇರಿದರು.

    6 ತಿಂಗಳು ದಾವಣಗೆರೆ, ಭಟ್ಕಳದಲ್ಲಿ 1 ವರ್ಷ, ತೀರ್ಥಹಳ್ಳಿಯಲ್ಲಿ ಮೂರು ತಿಂಗಳು ಕೆಲಸ ಮಾಡಿದ ಬಳಿಕ ಕೊಪ್ಪಳ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೊಪ್ಪಳಕ್ಕೆ ಎಸ್ಪಿಯಾಗಿ ಬಂದಾಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ಅಕ್ರಮ ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಜೋರಾಗಿತ್ತು. ಮಫ್ತಿಯಲ್ಲೇ ಕೆಲಸ ಮಾಡಿ ಎಲ್ಲವನ್ನೂ ಮಟ್ಟ ಹಾಕಿದ್ದಾರೆ.

    ಅನೂಪ್ ಶೆಟ್ಟಿ ಅವರ ಸೇವೆ ನೋಡಿದ ತಿಗರಿ ಗ್ರಾಮದ ಗಂಗಾಧರ ಮತ್ತು ಶ್ರೀದೇವಿ ದಂಪತಿ ತಮ್ಮ ಮಗುವಿಗೆ ಅನೂಪ್ ಶೆಟ್ಟಿ ಅಂತ ನಾಮಕರಣ ಮಾಡಿದ್ದಾರೆ. ಇವರ ಅಭಿಮಾನಿಗಳು ಅನೂಪ್ ಶೆಟ್ಟಿ ಅವರ ಫೇಸ್ ಬುಕ್ ಪೇಜ್ ಕೂಡಾ ತೆರೆದಿದ್ದಾರೆ.

    ವಿಶೇಷ ಏನೆಂದರೆ ಡಾ.ಅನೂಪ್ ಶೆಟ್ಟಿ ಅವರ ಪತ್ನಿ ನಿಶಾ ಜೇಮ್ಸ್ ರಾಯಚೂರು ಜಿಲ್ಲೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡ್ತಿದ್ದಾರೆ.

  • ಚುರುಕುಗೊಂಡ ಮುಂಗಾರು ಮಳೆ-ತುಂಬಿದ ಡ್ಯಾಂ ನೋಡಿ ರೈತರ ಮೊಗದಲ್ಲಿ ಮಂದಹಾಸ-ಕೆಲವೆಡೆ ಪ್ರವಾಹ ಭೀತಿ

    ಚುರುಕುಗೊಂಡ ಮುಂಗಾರು ಮಳೆ-ತುಂಬಿದ ಡ್ಯಾಂ ನೋಡಿ ರೈತರ ಮೊಗದಲ್ಲಿ ಮಂದಹಾಸ-ಕೆಲವೆಡೆ ಪ್ರವಾಹ ಭೀತಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದೆ. ಮಳೆರಾಯನ ಆರ್ಭಟ ಜೋರಾಗಿದೆ. ಒಂದೆರೆಡು ನದಿಗಳಲ್ಲಿ ನೀರು ತುಂಬಿ ಡ್ಯಾಂಗಳು ತುಂಬಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮತ್ತೆ ಕೆಲವಡೆ ಭಾರೀ ಮಳೆ ಪ್ರವಾಹದ ಭೀತಿ ಜೊತೆ ಅವಾಂತರವನ್ನೇ ಸೃಷ್ಟಿಸಿದೆ.

    ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕೃಷ್ಣಾ ನದಿಗೆ ಸುರಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ. ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ತಮಟೆ ಬಾರಿಸಿ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

    ಕಲಬುರಗಿಯ ಜೇವರ್ಗಿ ಮತ್ತು ಅಫಜಲಪುರದಲ್ಲಿ ಭೀಮಾ ನದಿ ಆರ್ಭಟಿಸುತ್ತಿದ್ದು, ತಗ್ಗು ಪ್ರದೇಶದಲ್ಲಿನ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಜೇವರ್ಗಿ ತಾಲೂಕಿನ ನೇಲೋಗಿ ರಸ್ತೆ ಕಡಿತಗೊಂಡಿದೆ. ಕಾವೇರಿಕೊಳ್ಳದಲ್ಲಿ ಬರುವ ಕಬಿನಿ ಜಲಾಶಯ ಭರ್ತಿಯಾಗೋದಕ್ಕೆ ಕೇವಲ ನಾಲ್ಕಡಿಯಷ್ಟೇ ಬಾಕಿ. ಸದ್ಯ ನೀರಿನ ಮಟ್ಟ 2280 ಅಡಿಯಷ್ಟಿದೆ. ಡ್ಯಾಂನಿಂದ ಕಪಿಲ ನದಿಗೆ ಹೆಚ್ಚು ನೀರು ಬಿಡುಗಡೆಯಾಗೋ ಸಾಧ್ಯತೆ ಇದೆ.

    ಬರಗಾಲದ ನಾಡೇ ಅಂತಾ ಕರೆಸಿಕೊಳ್ಳುವ ಚಾಮರಾಜನಗರದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಐದು ವರ್ಷಗಳ ಬಳಿಕ ಭರ್ತಿಯಾಗಿವೆ. ಇನ್ನೂ ಎರಡು ದಿನಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.