Tag: farmer

  • ಬಡರೈತರಿಗೆ ಉಚಿತ ವಕಾಲತ್ತು- 25 ವರ್ಷಗಳಿಂದ ಕಾನೂನು ಸೇವೆ ಮಾಡ್ತಿರೋ ತುಮಕೂರಿನ ಬಸವರಾಜ್

    ಬಡರೈತರಿಗೆ ಉಚಿತ ವಕಾಲತ್ತು- 25 ವರ್ಷಗಳಿಂದ ಕಾನೂನು ಸೇವೆ ಮಾಡ್ತಿರೋ ತುಮಕೂರಿನ ಬಸವರಾಜ್

    ತುಮಕೂರು: ದುಡ್ಡಿದವರು ಮಾತ್ರ ಕೋರ್ಟ್ ಕಚೇರಿ ಅಂತ ಸುತ್ತಾಡಬೇಕು. ಏಕೆಂದರೆ ವಕೀಲರ ಫೀಸು, ದೀರ್ಘಕಾಲದ ಅಲೆದಾಟ-ಸುತ್ತಾಟ ಇವುಗಳಿಗೆಲ್ಲಾ ದುಡ್ಡು ಬೇಕೇ ಬೇಕು. ಹಾಗಾಗಿ ಬಡ ಜನರು, ರೈತರು ತಮಗೆ ಅನ್ಯಾಯವಾದರೂ ಕೋರ್ಟು-ಕಚೇರಿಂದ ದೂರ ಇರುತ್ತಾರೆ. ಆದರೆ ಇಂತ ರೈತರ ಪಾಲಿನ ಆಶಾಕಿರಣರಾಗಿದ್ದಾರೆ ತುಮಕೂರಿನ ವಕೀಲರಾದ ಬಸವರಾಜ್.

    ಬಸವರಾಜ್ ವೃತ್ತಿಯಲ್ಲಿ ವಕೀಲರಾದರು ಸಮಾಜ ಸೇವೆ ಮಾಡುತ್ತಿದ್ದಾರೆ. ಬಡವರು ಅದರಲ್ಲೂ ಬಡ ರೈತರು ಎಂದರೆ ಇವರಿಗೆ ತುಂಬಾ ಮುತುವರ್ಜಿ. ಕಳೆದ 25 ವರ್ಷಗಳಿಂದ ಈ ವರ್ಗದ ಜಮೀನು ವ್ಯಾಜ್ಯಗಳಿಗೆ ಉಚಿತವಾಗಿ ವಕಾಲತ್ತು ವಹಿಸುತ್ತಿದ್ದಾರೆ. ಅದರಲ್ಲೂ ರೈತರ ಜಮೀನು ಭೂಭಕಾಸುರರ ಕೈ ಸೇರಿದರೆ ಅಂಥದಕ್ಕೆ ವಿಶೇಷವಾಗಿ ಆಸ್ಥೆವಹಿಸ್ತಾರೆ. ಇಲ್ಲಿವರೆಗೆ ಸುಮಾರು 200ಕ್ಕೂ ಹೆಚ್ಚು ರೈತರಿಗೆ, ಬಡಜನರಿಗೆ ಉಚಿತ ಕಾನೂನು ಸೇವೆ ಒದಗಿಸಿದ್ದು ಒಂದು ಕಪ್ ಚಹಾ ಸಹ ಸ್ವೀಕರಿಸಿಲ್ಲ.

    55 ವರ್ಷದ ಬಸವರಾಜು ಅವರು ತುಮಕೂರು ನಗರದ ಗಾರ್ಡನ್ ರಸ್ತೆಯ ನಿವಾಸಿ. 1993ರಲ್ಲಿ ವಕೀಲಿಕೆ ಆರಂಭಿಸಿದ ಇವರು ಅಂದಿನಿಂದಲೂ ನೊಂದವರ ಕಷ್ಟಕ್ಕೆ ಮರುಗುತ್ತಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿವರೆಗೂ ಕೋರ್ಟ್‍ಗೆ ನಡೆದುಕೊಂಡೇ ಹೋಗುವ ಬಸವರಾಜು ಅವರು ಕನಿಷ್ಟ ಪಕ್ಷ ಬೈಕನ್ನೂ ಖರೀದಿಸಿಲ್ಲ. ಅಷ್ಟರ ಮಟ್ಟಿಗೆ ಸರಳಜೀವಿ.

    ಶಾಂತ ಸ್ವರೂಪಿಯಾಗಿರೋ ಬಸವರಾಜು ಅವರು ರೈತರ ಜೊತೆಗೆ ತಮ್ಮ ಕಿರಿಯ ವಕೀಲರಿಗೂ ಗಂಟೆಗಟ್ಟಲೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೆ ಬಡವರಿಗೆ, ರೈತರಿಗೆ ಉಚಿತವಾಗಿ ವಕಲಾತ್ತು ವಹಿಸುವಂತೆ ಕಿರಿಯ ವಕೀಲರಿಗೆ ಸಲಹೆ ನೀಡುತ್ತಾರೆ.

    https://www.youtube.com/watch?v=5J9F3jItnWo

  • ರೈತರ ಬಳಿ ಸುಲಿಗೆಗೆ ಇಳಿದ ವೆಟರ್ನರಿ ಸಹಾಯಕ ವೈದ್ಯ- ಲಂಚ ಕೊಡದಿದ್ರೆ ಇಲ್ಲ ಚಿಕಿತ್ಸೆ

    ರೈತರ ಬಳಿ ಸುಲಿಗೆಗೆ ಇಳಿದ ವೆಟರ್ನರಿ ಸಹಾಯಕ ವೈದ್ಯ- ಲಂಚ ಕೊಡದಿದ್ರೆ ಇಲ್ಲ ಚಿಕಿತ್ಸೆ

    ಕೊಪ್ಪಳ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳುತ್ತಾರೆ. ಆದರೆ ಕೆಲವು ಅಧಿಕಾರಿಗಳು ಸರ್ಕಾರಿ ಕೆಲಸ ಎಂದರೆ ಸುಲಿಗೆ ಮಾಡುವುದು ಎಂದು ತಿಳಿದಿದ್ದಾರೆ. ರೈತರ ಹಸುಗಳಿಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ನೇಮಕವಾದವ ವೈದ್ಯರ ಸಹಾಯಕ ವಿರುದ್ಧ ಹಣ ಸುಲಿಗೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

    ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಪಶುಚಿಕಿತ್ಸಾಲಯದ ವೈದ್ಯಕೀಯ ಸಹಾಯಕ ಲೋಕೇಶ್ ಎಂಬವರ ವಿರುದ್ಧ ಲಂಚದ ಆರೋಪ ಕೇಳಿ ಬಂದಿದೆ. ತಾಲೂಕಿನ ಟಣಕನಕಲ್ ಗ್ರಾಮದ ರೈತ ಯಮನೂರಪ್ಪ ನಾಯಕ್ 22 ಹಸುಗಳ ಡೈರಿ ಹೊಂದಿದ್ದಾರೆ. ನನ್ನ ಹಸುಗಳಿಗೆ ಚಿಕಿತ್ಸೆ ನೀಡಬೇಕಾದರೆ ಪತ್ರಿ ಹಸುವಿಗೆ 500 ರೂಪಾಯಿಯಂತೆ ಲಂಚ ಕೇಳಿದ್ದಾನೆ. 8 ಸಾವಿರ ರೂ. ಕೊಡೋದಾಗಿ ಹೇಳಿದ್ರೂ ಒಪ್ಪದ ಲೋಕೇಶ್ 10 ಸಾವಿರ ನೀಡುವಂತೆ ಕೇಳಿದ್ದಾನೆ ಎಂದು ರೈತ ಯಮನೂರಪ್ಪ ಹೇಳುತ್ತಾರೆ.

    ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ಹೇಳಬಾರದು ಅಂತಲೂ ಲೋಕೇಶ್ ಹೇಳಿದ್ದು, ಅಲ್ಲದೆ ಕಮಿಷನ್ ಆಸೆಗೆ ಬಿದ್ದು ವಿನಾಕಾರಣ 10 ಸಾವಿರ ಮೌಲ್ಯದ ಔಷಧಿ ತರಿಸಲಾಗಿದೆ. ಈ ವಿಚಾರ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಲೋಕೇಶ್ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವರಾಜ್ ಶೆಟ್ಟರ್ ತಿಳಿಸಿದ್ದಾರೆ.

  • ಭತ್ತದ ನಾಡು ಕೊಪ್ಪಳದಲ್ಲಿ ವ್ಯಾಪಾರಿಗಳಿಗೆ ಜಿಎಸ್‍ಟಿ ಬಿಸಿ- ಬ್ರಾಂಡ್ ರಹಿತವಾಗಿ ಅಕ್ಕಿ ಮಾರಾಟ

    ಭತ್ತದ ನಾಡು ಕೊಪ್ಪಳದಲ್ಲಿ ವ್ಯಾಪಾರಿಗಳಿಗೆ ಜಿಎಸ್‍ಟಿ ಬಿಸಿ- ಬ್ರಾಂಡ್ ರಹಿತವಾಗಿ ಅಕ್ಕಿ ಮಾರಾಟ

    ಕೊಪ್ಪಳ: ಜಿಎಸ್‍ಟಿ ತೆರಿಗೆ ಬಿಸಿ ಕೇವಲ ಶ್ರೀಮಂತರಿಗೆ ಮಾತ್ರವಲ್ಲ ಬದಲಿಗೆ ರೈತರಿಗೆ, ಸಣ್ಣ ವ್ಯಾಪಾರಸ್ಥರಿಗೂ ತಟ್ಟಿದೆ.

    ಭತ್ತದ ನಾಡು ಕೊಪ್ಪಳದ ಗಂಗಾವತಿಯಲ್ಲಿ ಬ್ರಾಂಡೆಂಡ್ ಅಕ್ಕಿ ಮಾರಾಟಗಾರರಿಗೆ ಜಿಎಸ್‍ಟಿ ಸರಿಯಾಗಿ ಹೊಡೆತ ಕೊಟ್ಟಿದೆ. ಶೇಕಡಾ 5ರಷ್ಟು ಜಿಎಸ್‍ಟಿ ತೆರಿಗೆಯಿಂದ ಬ್ರಾಂಡೆಡ್ ಅಕ್ಕಿ ಬೆಲೆ ಹೆಚ್ಚಾಗಿದ್ದು, ಗ್ರಾಹಕರು ಅಕ್ಕಿ ಖರೀದಿಗೆ ಮುಂದಾಗುತ್ತಿಲ್ಲ.

    ಜಿಎಸ್‍ಟಿಯಿಂದ ರೋಸಿ ಹೋಗಿರುವ ವ್ಯಾಪಾರಿಗಳು ಈಗ ಟ್ರೇಡ್ ಮಾರ್ಕ್ ರದ್ಧತಿಗೆ ಕೋರಿದ್ದು, ಬ್ರಾಂಡ್ ರಹಿತವಾಗಿ ಅಕ್ಕಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಬ್ರಾಂಡೆಡ್ ಅಕ್ಕಿಯ ಮಾರಾಟ ಶೇಕಡಾ 50 ರಷ್ಟು ಕುಂಠಿತಗೊಂಡಿದ್ದರೆ, ಬ್ರಾಂಡ್ ರಹಿತ ಅಕ್ಕಿಯ ವ್ಯಾಪಾರ ಶೇಕಡಾ 90ಕ್ಕೆ ಏರಿಕೆಯಾಗಿದೆ.

    ಒಟ್ಟಿನಲ್ಲಿ ಭತ್ತದ ನಾಡಿನ ವ್ಯಾಪಾರಸ್ಥರನ್ನು ಜಿಎಸ್‍ಟಿ ಹೈರಾಣಾಗಿಸಿದೆ. ಗಂಗಾವತಿಯಿಂದಲೇ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಅತೀ ಹೆಚ್ಚು ಭತ್ತ ಹಾಗೂ ಅಕ್ಕಿ ರಫ್ತಾಗುತ್ತೆ. ಆದರೆ ಜಿಎಸ್‍ಟಿ ಜಾರಿಯಿಂದ ಭತ್ತ ಬೆಳೆಗಾರರು ಹಾಗೂ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

  • ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದನೆ

    ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದನೆ

    ಬೆಳಗಾವಿ: ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ನಡೆದಿದೆ.

    ಅಧಿಕಾರಿಗಳಿಗೆ, ಜನರಿಗೆ ಅವಾಜ್ ಹಾಕಿ ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ಕುಡಚಿ ಮತಕ್ಷೇತ್ರದ ಶಾಸಕ ಪಿ ರಾಜೀವ್ ಈಗ ಮತ್ತೊಮ್ಮೆ ರೈತರೊಬ್ಬರಿಗೆ ಆವಾಜ್ ಹಾಕಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

    ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮ ಪಂಚಾಯ್ತಿಯಲ್ಲಿ ಆಶ್ರಯ ಮನೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಶ್ರಯ ಮನೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿಯನ್ನು ಅವ್ಯಾಚ ಶಬ್ಧಗಳಿಂದ ನಿಂದಿಸಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

    ನಮ್ಮ ಮನೆ ನೋಡೋಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದ ರೈತನಿಗೆ, “ಕಿಮ್ಮತ್ತು ಕೊಡ್ತೀನಿ ಅಷ್ಟೇ. ನಾನು ಎಂಎಲ್‍ಎ ನನ್ನನ್ನು ನೀನು ಮನೆಗೆ ಕರೆದುಕೊಂಡು ಹೋಗಬೇಕು. ಇಲ್ಲಿಂದ ನಡಿ… ನೀನು ಹೊಟ್ಟೆಗೆ ಏನು ತಿನ್ನುತ್ತೀಯ” ಎಂದು ನಿಂದಿಸಿದ್ದಾರೆ. “ಇಷ್ಟು ದಿನ ನಿಮ್ಮನ್ನು ನಾಯಿ ಇಟ್ಟ ಹಾಗೆ ಇಟ್ಟಿದ್ದರು. ನಿಮ್ಮ ಬಳಿ ಬರುತ್ತೇನೆ ಎಂದರೆ ಋಣ ಇಟ್ಟುಕೊ ನೀಚ ನನ್ನ ಮಗನೆ. ನನ್ನ ವಿರುದ್ಧ ಬಂದರೆ ಸೆಡ್ಡು ಹೊಡೆಯೋಕೆ ರೆಡಿ ಇದ್ದೀನಿ. ಪಿ ರಾಜೀವ್ ನನ್ನು ಹೆದರಿಸುವರು ಯಾರೂ ಇಲ್ಲ ಈ ತಾಲೂಕಿನಲ್ಲಿ” ಎಂದು ಆವಾಜ್ ಹಾಕಿದ್ದಾರೆ.

    ಶಾಸಕರು ಬಡವರಿಗಾಗಿ ಶ್ರಮಿಸಿ ಸರಿಯಾದ ಫಲಾನುಭವಿಗಳಿಗೆ ಮನೆ ಸಿಗಲಿ ಎಂದು ಕಷ್ಟಪಡುತ್ತಿದ್ದಾರೆ ಎಂದು ಜನರು ಅಂದುಕೊಂಡರೂ ಶಾಸಕರು ಈ ರೀತಿಯಾಗಿ ಆವಾಜ್ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

  • ನಕ್ಸಲ್ ಮಾಹಿತಿದಾರ ಎಂದು ಶಂಕಿಸಿ ಪೊಲೀಸರಿಂದ ಎಫ್‍ಐಆರ್ -ಮನನೊಂದ ರೈತ ಆತ್ಮಹತ್ಯೆ

    ನಕ್ಸಲ್ ಮಾಹಿತಿದಾರ ಎಂದು ಶಂಕಿಸಿ ಪೊಲೀಸರಿಂದ ಎಫ್‍ಐಆರ್ -ಮನನೊಂದ ರೈತ ಆತ್ಮಹತ್ಯೆ

    ಚಿಕ್ಕಮಗಳೂರು: ನಕ್ಸಲರ ಮಾಹಿತಿದಾರ ಎಂದು ಶಂಕಿಸಿ ಪೊಲೀಸರು ಎಫ್‍ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಮನನೊಂದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

    62 ವರ್ಷದ ಮಾತೊಳ್ಳಿ ಸತೀಶ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಇವರು ಶೃಂಗೇರಿಯ ನಕ್ಸಲ್ ಪೀಡಿತ ಪ್ರದೇಶದ ನಿವಾಸಿಯಾಗಿದ್ದರು. ಈ ಪ್ರದೇಶದಲ್ಲಿ ಹಲವು ಬಾರಿ ನಕ್ಸಲ್ ಪರ ಘೋಷಣೆಗಳನ್ನು ಹೊಂದಿರುವ ಕರಪತ್ರಗಳು ಪತ್ತೆಯಾಗಿದ್ದವು.

    ಸತೀಶ್ ನಕ್ಸಲರಿಗೆ ಮಾಹಿತಿ ನೀಡಿವ ವ್ಯಕ್ತಿ ಎಂದು ಶಂಕಿಸಿ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಅಲ್ಲದೇ ಹಲವು ಬಾರಿ ಅವರನ್ನ ಠಾಣೆಗೆ ಕರೆಸಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿದ್ದರು ಎಂದು ಸ್ಥಳೀಯ ರೈತ ಮುಖಂಡರು ಆರೋಪಿಸಿದ್ದಾರೆ.

    ಪೊಲೀಸರ ಕಿರುಕುಳದಿಂದ ಬೇಸತ್ತ ಸತೀಶ್ ಕಳೆದ ಎರಡು ತಿಂಗಳಿನಿಂದ ಮನೆ ಬಿಟ್ಟು ಹೋಗಿದ್ದರು. ಆದರೆ ಗುರುವಾರ ಸಂಜೆ ಮನೆಗೆ ಆಗಮಿಸಿದ ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸತೀಶ್ ಅವರ ಆತ್ಮಹತ್ಯೆಗೆ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ಕಾರಣವೆಂದು ಶೃಂಗೇರಿ ರೈತ ಮುಖಂಡರು ಹಾಗೂ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ. ಅಲ್ಲದೇ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ರನ್ನು ಅಮಾನತುಗೊಳಿಸಿ, ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಅಗ್ರಹಿಸಿದ್ದಾರೆ.

    ಈ ಕುರಿತು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಗೃಹಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ವಿರುದ್ಧ ದೂರು ನೀಡಿದ್ದು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.

  • ದಯಾಮರಣ ಕೊಡುವಂತೆ ಮಂಡ್ಯದ ರೈತ ಪ್ರತಿಭಟನೆ

    ದಯಾಮರಣ ಕೊಡುವಂತೆ ಮಂಡ್ಯದ ರೈತ ಪ್ರತಿಭಟನೆ

    ಮಂಡ್ಯ: ಜಿಲ್ಲೆಯಲ್ಲಿ ರೈತನೊಬ್ಬ ದಯಾಮರಣ ಕೊಡುವಂತೆ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

    ಕಳೆದ 13 ವರ್ಷದಿಂದ ಹೋರಾಟ ನಡೆಸಿದರೂ ನ್ಯಾಯ ಸಿಗದೆ ಬೇಸತ್ತಿರುವ ರೈತ ಪ್ರಭಾಕರ್, ದಯಾಮರಣಕ್ಕಾಗಿ ರಾಜ್ಯಪಾಲರಿಗೂ ಪತ್ರ ಬರೆದಿದ್ದಾರೆ.

    ಶ್ರೀರಂಗಪಟ್ಟಣ ತಾಲೂಕಿನ ದಸರಗುಪ್ಪೆ ಗ್ರಾಮದವರಾದ ಪ್ರಭಾಕರ್, ಕಿರಂಗೂರು ಮೂಲಕ ಹಾದು ಹೋಗಿರುವ ಪಿಕಪ್ ನಾಲೆ ಒತ್ತುವರಿ ಬಗ್ಗೆ ಮುಖ್ಯಮಂತ್ರಿ, ಕಂದಾಯ ಸಚಿವರು, ಅಧಿಕಾರಿಗಳು ಸೇರಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಡ್ಯಾಂನಲ್ಲಿ ನೀರಿದ್ದರೂ ಕಾಲುವೆ ಒತ್ತುವರಿಯಿಂದ ಜಮೀನಿಗೆ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗ್ತಿಲ್ಲ.

    ಹೀಗಾಗಿ ಕಟ್ಟ ಕಡೆಯ ಹೋರಾಟ ಎಂಬಂತೆ ಶ್ರೀರಂಗಪಟ್ಟಣದ ಮಿನಿವಿಧಾನಸೌಧ ಎದುರು ಅಕ್ಟೋಬರ್ 23, ಅಂದ್ರೆ ಸೋಮವಾರದಿಂದ ಸತ್ಯಾಗ್ರಹ ಶುರು ಮಾಡ್ತಿರೋ ಪ್ರಭಾಕರ್, ಸಮಸ್ಯೆ ಬಗೆಹರಿಸಿ ಇಲ್ಲಾಂದ್ರೆ ದಯಾಮರಣಕ್ಕೆ ಅವಕಾಶ ಕೊಡಿ ಅಂತಾ ಪಟ್ಟು ಹಿಡಿದಿದ್ದಾರೆ.

  • ಮಂಡ್ಯ: ಏಕಕಾಲಕ್ಕೆ 3 ಮರಿಗಳಿಗೆ ಜನ್ಮ ನೀಡಿದ ಕುರಿ- ರೈತರಿಗೆ ಅಚ್ಚರಿ

    ಮಂಡ್ಯ: ಏಕಕಾಲಕ್ಕೆ 3 ಮರಿಗಳಿಗೆ ಜನ್ಮ ನೀಡಿದ ಕುರಿ- ರೈತರಿಗೆ ಅಚ್ಚರಿ

    ಮಂಡ್ಯ: ಕುರಿಗಳು ಒಮ್ಮೆಗೆ ಒಂದು ಮರಿ ಹಾಕೋದು ಸಾಮಾನ್ಯ. ಕೆಲವೊಮ್ಮೆ ಎರಡು ಮರಿಗೆ ಜನ್ಮ ನೀಡುತ್ತವೆ. ಆದರೆ ಮಂಡ್ಯದಲ್ಲಿ ಕುರಿಯೊಂದು ಏಕಕಾಲಕ್ಕೆ ಮೂರು ಮರಿಗಳಿಗೆ ಜನ್ಮ ನೀಡಿದ್ದು, ರೈತರ ಅಚ್ಚರಿಗೆ ಕಾರಣವಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ರೈತ ಸ್ವಾಮೀಗೌಡ ಸುಮಾರು 30 ವರ್ಷಗಳಿಂದ ಕುರಿ ಸಾಕುತ್ತಿದ್ದಾರೆ. ಇವರ ಬಳಿ 60 ಕ್ಕೂ ಹೆಚ್ಚು ಕುರಿಗಳಿವೆ. ಕಳೆದ ಮೂವತ್ತು ವರ್ಷಗಳಲ್ಲಿ ಇವರ ಬಳಿಯಿದ್ದ ಕುರಿಗಳು ಒಮ್ಮೆಗೆ ಹೆಚ್ಚು ಅಂದರೆ ಎರಡು ಮರಿಗೆ ಜನ್ಮ ನೀಡಿವೆ.

    ಎರಡು ದಿನಗಳ ಹಿಂದೆ ಕುರಿಯೊಂದು ಒಮ್ಮೆಗೆ ಬರೋಬ್ಬರಿ ಮೂರು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ. ಮೂರು ಮರಿಗಳೂ ಆರೋಗ್ಯವಾಗಿವೆ. ಕುರಿ ಮೂರು ಮರಿಗಳಿಗೆ ಜನ್ಮ ನೀಡಿರೋದು ರೈತರಿಗೆ ಅಚ್ಚರಿ ಜೊತೆಗೆ ಖುಷಿಗೆ ಕಾರಣವಾಗಿದೆ. ಗ್ರಾಮದ ರೈತರು ಸ್ವಾಮಿಗೌಡ ಅವರ ಮನೆಗೆ ಬಂದು ಕುರಿ ಹಾಗೂ ಮರಿಗಳನ್ನು ಕುತೂಹಲದಿಂದ ನೋಡಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.

  • ದೀಪಾವಳಿಗೆ ಕಬ್ಬು ಮಾರಾಟ ಮಾಡಲು ಬಂದ ರೈತನಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

    ದೀಪಾವಳಿಗೆ ಕಬ್ಬು ಮಾರಾಟ ಮಾಡಲು ಬಂದ ರೈತನಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

    ಗದಗ: ದೀಪಾವಳಿ ಹಬ್ಬಕ್ಕೆ ಕಬ್ಬು ಮಾರಾಟ ಮಾಡಲು ಬಂದ ರೈತನಿಗೆ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

    ಜೂಲಕಟ್ಟಿ ಗ್ರಾಮದ ಶ್ರೀಕಾಂತ ಗುಳದಾಳಿ ಎಂಬ ರೈತ ಗಜೇಂದ್ರಗಡ ಪಟ್ಟಣದ ಡಬಲ್ ರೋಡ್ ಪಕ್ಕ ಕಬ್ಬು ಮಾರಾಟ ಮಾಡುತ್ತಿದ್ದರು. ಸಾಕಷ್ಟು ಜನರು ಸೇರಿರುವುದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಏಕಾಏಕಿ ಬಂದ ಪೊಲೀಸರು ಕಬ್ಬನ್ನು ರಸ್ತೆಗೆ ಎಸೆದು ರೈತನ ತೊಡೆ, ಬೆನ್ನು, ಹಾಗೂ ಕೈಗೆ ಬಾಸುಂಡೆ ಬರುವ ಹಾಗೆ ಹೊಡೆಯುವ ಮೂಲಕ ರೈತನ ಮೇಲೆ ದರ್ಪ ತೋರಿದ್ದಾರೆ.

    ನಿಂಗಪ್ಪ ಹಲವಾಗಲಿ ಹಾಗೂ ಸಿ.ಎಸ್ ಹಾದಿಮನಿ ರೈತನಿಗೆ ಹಿಗ್ಗಾಮುಗ್ಗಾ ಹೊಡೆದ ಪೊಲೀಸ್ ಸಿಬ್ಬಂದಿ ಎಂದು ಹೇಳಲಾಗಿದ್ದು, ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಹೊಲದಲ್ಲಿ ಬೆಳೆದಿದ್ದ ಗಾಂಜಾದೊಂದಿಗೆ ರೈತ ಅರೆಸ್ಟ್

    ಹೊಲದಲ್ಲಿ ಬೆಳೆದಿದ್ದ ಗಾಂಜಾದೊಂದಿಗೆ ರೈತ ಅರೆಸ್ಟ್

    ಕಾರವಾರ: ಹೊಲದಲ್ಲಿ ಬೆಳೆದಿದ್ದ ಗಾಂಜಾ ವಶಪಡಿಸಿಕೊಂಡು ರೈತನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಇಲ್ಲಿನ ಮುಂಡಗೋಡಿನ ಮೈನಳ್ಳಿ ಗ್ರಾಮದ ರಾಮು ಬಾಬು (42) ಬಂಧಿತ ರೈತ. ಈತ ತನ್ನ ಹೊಲದಲ್ಲಿ ಭತ್ತದ ಸಸಿಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದನು.

    ಈ ಬಗ್ಗೆ ಖಚಿತ ಮಾಹಿತಿ ಪಡೆದ ಮುಂಡಗೋಡಿನ ತಹಶೀಲ್ದಾರ್ ಅಶೋಕ್ ಗುರಾಣಿ, ಪಿ.ಐ ಕಿರಣ್ ಕುಮಾರ್ ನಾಯಕ್ ನೇತ್ರತ್ವದಲ್ಲಿ ದಾಳಿ ನೆಡೆಸಿ 5 ಸಾವಿರ ರೂ. ಮೌಲ್ಯದ ಸುಮಾರು 33 ಗಾಂಜಾ ಸಸಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತೀಚೆಗಷ್ಟೇ ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ಕಮಲಾಬಾಯಿ (33), ಅಂಬಾಬಾಯಿ (35), ರಮಾಬಾಯಿ (36) ಹಾಗೂ ರೇಖಾಬಾಯಿ (31) ಎಂಬ ನಾಲ್ವರು ಮಹಿಳೆಯರನ್ನು ಬೀದರ್ ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಇಂದು ಪೊಲೀಸರು ಬಂಧಿಸಿದ್ದರು.

  • ಅಂತರ್ ತಾಲೂಕು ಜಲವಿವಾದ-8 ವರ್ಷಗಳ ನಂತ್ರ ತುಂಬಿದ ಕೆರೆ ನೀರಿಗಾಗಿ ಗ್ರಾಮಗಳ ಮಧ್ಯೆ ಕಾದಾಟ

    ಅಂತರ್ ತಾಲೂಕು ಜಲವಿವಾದ-8 ವರ್ಷಗಳ ನಂತ್ರ ತುಂಬಿದ ಕೆರೆ ನೀರಿಗಾಗಿ ಗ್ರಾಮಗಳ ಮಧ್ಯೆ ಕಾದಾಟ

    ಚಿಕ್ಕಬಳ್ಳಾಪುರ: ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಿಗೆ ಸೀಮಿತವಾಗಿದ್ದ ಜಲವಿವಾದಗಳು ಈಗ ಅಂತರ್ ತಾಲೂಕು ವ್ಯಾಪ್ತಿಗೂ ವ್ಯಾಪಿಸಿದೆ. ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಭಾರೀ ಉತ್ತಮ ಮಳೆಯಾಗಿದ್ದೇ ತಡ ಜಿಲ್ಲೆಯ ಗೌರಿಬಿದನೂರು ತಾಲೂಕು ಹಾಗೂ ಗುಡಿಬಂಡೆ ತಾಲೂಕಿನ ಜನರ ನಡುವೆ ಒಂದು ಕೆರೆಯ ನೀರಿಗಾಗಿ ಕಾದಾಟ ನಡೆದಿದೆ.

    ಬ್ರಿಟಿಷರ ಆಡಳಿತ ಕಾಲದಲ್ಲಿ ನಿರ್ಮಾಣವಾಗಿದ್ದ ಗುಡಿಬಂಡೆ ಪಟ್ಟಣದಲ್ಲಿ ಅಮಾನಿ ಬೈರ ಸಾಗರ ಎಂಬ ಕೆರೆ ಇದೆ. ಕೆರೆ ತುಂಬಿದ ಮೇಲೆ ಹೆಚ್ಚುವರಿ ನೀರನ್ನ ಗೌರಿಬಿದನೂರು ತಾಲೂಕು ವಾಟದಹೊಸಹಳ್ಳಿ ಕೆರೆಗೆ ಬಿಡಬೇಕು ಎಂಬ ಕರಾರು ಮಾಡಿಕೊಳ್ಳಲಾಗಿತ್ತು ಎಂದು ಹೇಳಲಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಗುಡಿಬಂಡೆಯ ಅಮಾನಿ ಬೈರಸಾಗರ ಕೆರೆ ಕೋಡಿನ ಹರಿದಿದೆ.

    ಕರಾರು ಏನು: ಕೆರೆ ನಿರ್ಮಾಣವಾದ ಸಮಯದಲ್ಲಿ ಎರಡು ಗ್ರಾಮಗಳ ಒಪ್ಪಂದ ಏರ್ಪಟ್ಟಿತ್ತು. ಅಮಾನಿ ಬೈರ ಸಾಗರದಲ್ಲಿ 18 ಅಡಿ ನೀರು ಸಂಗ್ರಹವಾದ ಮೇಲೆ, ಹೆಚ್ಚಿನ ನೀರನ್ನು ವಾಟದಹೊಸಹಳ್ಳಿ ಕೆರೆಗೆ ಬಿಡಬೇಕು ಎಂದು ಒಪ್ಪಂದವಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಕೆರೆಯ ನೀರಿನ ಸಂಗ್ರಹವನ್ನು 23 ಅಡಿಗೆ ಹೆಚ್ಚಿಸಲಾಗಿತ್ತು. ಹೊಸ ಒಪ್ಪಂದ ಬಳಿಕ 8 ವರ್ಷಗಳ ಹಿಂದೆ ಒಮ್ಮೆ ಕೆರೆ ತುಂಬಿತ್ತು.

    ಕೆರೆ ತುಂಬಿದ್ದು ತಮ್ಮ ನೀರಿನ ಭಾಗವನ್ನ ತಮಗೆ ಕೊಡಿ ಎಂದು ವಾಟದಹೊಸಹಳ್ಳಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇತ್ತ ಇಲ್ಲ ನಾವೂ ನೀರು ಬಿಡಲು ಆಗುವುದಿಲ್ಲ. ಇನ್ನೂ ಗುಡಿಬಂಡೆ ಗ್ರಾಮದ ಇನ್ನೂ ಹಲವು ಕೆರೆಗಳು ತುಂಬಿಲ್ಲ. ಇದೇ ಕೆರೆಯ ನೀರಿನಿಂದ ಉಳಿದ ಕೆರೆಗಳು ತುಂಬುತ್ತವೆ, ನಾವು ಈ ನೀರನ್ನು ಕುಡಿಯುವದಕ್ಕಾಗಿ ಬಳಸುತ್ತೇವೆ. ಒಂದು ವೇಳೆ ನಿಮಗೆ ನೀಡಿದರೆ ನೀವು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತೀರಿ ಎಂದು ಗುಡಿಬಂಡೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸದ್ಯ ಈ ಜಲವಿವಾದ ವಾಟದಹೊಸಹಳ್ಳಿ ಹಾಗೂ ಗುಡಿಬಂಡೆ ತಾಲೂಕಿನ ಜನರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದು, ಸಮಸ್ಯೆ ಕ್ಷೇತ್ರದ ಶಾಸಕರ ನಡುವೆ ಕೂಡ ಹೋರಾಟಕ್ಕೆ ನಾಂದಿ ಹಾಡಿದೆ. ಈ ಹಿಂದೆ ಬರಗಾಲದಲ್ಲಿ ಜಿಲ್ಲಾಧಿಕಾರಿಗಳು ಕೆರೆಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ನೀರು ಬಿಡಲಿಲ್ಲ ಅಂದ್ರೆ ರಾಜಕೀಯವಾಗಿ ಹೋರಾಟ ಮಾಡುವುದಗಿ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಎಚ್ ಶಿವಶಂಕರರೆಡ್ಡಿ ಹೇಳಿದ್ದಾರೆ.