Tag: farmer

  • ಅರಣ್ಯ ಪ್ರದೇಶ ಗಡಿ ಭಾಗದಲ್ಲಿ ಆನೆಗಳು ಪ್ರತ್ಯಕ್ಷ- ಅಪಾರ ಬೆಳೆ ನಾಶ

    ಅರಣ್ಯ ಪ್ರದೇಶ ಗಡಿ ಭಾಗದಲ್ಲಿ ಆನೆಗಳು ಪ್ರತ್ಯಕ್ಷ- ಅಪಾರ ಬೆಳೆ ನಾಶ

    ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಪ್ರದೇಶದಲ್ಲಿ ಮತ್ತೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಟೊಮಾಟೋ, ಪಪ್ಪಾಯ, ಬೀನ್ಸ್, ಭತ್ತ ಸೇರಿದಂತೆ ರೈತರ ಪಂಪು ಮೋಟಾರ್, ಗುಡಿಸಲುಗಳನ್ನು ಧ್ವಂಸ ಮಾಡಿವೆ.

    ಶುಕ್ರವಾರ ರಾತ್ರಿ ರೈತರ ತೋಟಗಳ ಮೇಲೆ ದಾಳಿ ಮಾಡಿರುವ 6 ಆನೆಗಳ ಹಿಂಡು ನೂರಾರು ಎಕರೆ ಪ್ರದೇಶದ ವಿವಿಧ ಬೆಳೆಗಳನ್ನು ನಾಶ ಮಾಡಿವೆ. ಪ್ರತಿ ವರ್ಷ ಕಾಡಾನೆ ಹಾವಳಿ ಹೆಚ್ಚಾಗುತ್ತಲಿದ್ದು, ಆಹಾರ-ನೀರು ಹರಸಿ ನಾಡಿನತ್ತ ಆನೆಗಳ ಹಿಂಡು ಹೆಜ್ಜೆ ಹಾಕುತ್ತಲಿವೆ. ಇದರಿಂದ ಅರಣ್ಯ ಪ್ರದೇಶದ ಗಡಿಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಜೊತೆಗೆ ಲಕ್ಷಾಂತರ ರೂಪಾಯಿ ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದ ರೈತರಿಗೆ ಪರಿಹಾರವೂ ಸಿಗದೆ, ರಕ್ಷಣೆಯೂ ಇಲ್ಲದಾಗಿದೆ.

    ಪ್ರಮುಖವಾಗಿ ಜಿಲ್ಲೆಯ ಗಡಿ ಪ್ರದೇಶವಾದ ಬಂಗಾರಪೇಟೆ ತಾಲೂಕಿನ ಆಂಧ್ರ ಗಡಿಯ ಚಿಕ್ಕಕಳವಂಚಿ, ತೊಪ್ಪನಹಳ್ಳಿ, ಕದರಿನತ್ತ ಗ್ರಾಮಗಳ ಬಳಿ ಸುಮಾರು ಆರು ಆನೆಗಳ ಹಿಂಡು ಕಳೆದ 15 ದಿನಗಳಿಂದ ಬೀಡು ಬಿಟ್ಟಿವೆ. ರಾಮಕುಪ್ಪಂ ಹಾಗೂ ಕೃಷ್ಣಗಿರಿ ಅರಣ್ಯ ಪ್ರದೇಶದಿಂದ ಬಂದಿರುವ ಈ ಆನೆಗಳ ಹಿಂಡು ಕರ್ನಾಟಕದ ಗಡಿ ಭಾಗದ ಜನರ ನಿದ್ದೆಗೆಡಿಸಿವೆ.

    ಜಿಲ್ಲೆಯ ಗಡಿಭಾಗವಾದ ಕಾಮಸಮುದ್ರಂ ಪ್ರದೇಶ ಸುತ್ತಮುತ್ತ ಸಾವಿರಾರು ಹೆಕ್ಟೇರು ಅರಣ್ಯ ಪ್ರದೇಶವಿದೆ. ಈ ಅರಣ್ಯ ಪ್ರದೇಶ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯಕ್ಕೆ ಸಂಪರ್ಕ ಹೊಂದಿದೆ. ಹೀಗಾಗಿ ಈ ಭಾಗದಲ್ಲಿ ಇದೀಗ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪ್ರತಿ ವರ್ಷ ನೂರಾರು ಆನೆಗಳು ಇಲ್ಲಿಗೆ ಆಹಾರ ನೀರಿಗಾಗಿ ವಲಸೆ ಬರುತ್ತಿದ್ದು, ಆನೆಗಳಿಂದಾಗಿ ರೈತರು ಬೆಳೆದ ಬೆಳೆಗಳ ಜೊತೆಗೆ ರೈತರು ಸಾವನ್ನಪ್ಪಿರುವ ಘಟನೆಗಳು ಸಂಭವಿಸಿದೆ.

    ಆನೆ ಹಿಂಡನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಪಟಾಕಿ, ಸಿಡಿ ಮದ್ದುಗಳನ್ನು ಬಳಸಿಕೊಂಡು ಹಗಲು ರಾತ್ರಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಾಡಾನೆಗಳ ದಾಳಿಯಿಂದ ರೈತರು ಕಳೆದುಕೊಂಡ ನೂರಾರು ಎಕರೆ ಬೆಳೆಗೆ ಪರಿಹಾರ ನೀಡಿ, ಸರ್ಕಾರ ಸಹಾಯಹಸ್ತವನ್ನು ಚಾಚಬೇಕು. ಅಲ್ಲದೇ ಆನೆ ಕಾರಿಡಾರ್ ನಿರ್ಮಾಣ ಮಾಡಿ, ಈ ಭಾಗದ ಜನರಿಗೆ ನೆಮ್ಮದಿ ಕಲ್ಪಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

  • ರೈತರ ಪ್ರೋತ್ಸಾಹ ಹಣ ಮಹಾರಾಷ್ಟ್ರದ ಪಾಲು – ಕಲಬುರಗಿಯ ಕೆಎಂಎಫ್‍ನಿಂದ ವಂಚನೆ

    ರೈತರ ಪ್ರೋತ್ಸಾಹ ಹಣ ಮಹಾರಾಷ್ಟ್ರದ ಪಾಲು – ಕಲಬುರಗಿಯ ಕೆಎಂಎಫ್‍ನಿಂದ ವಂಚನೆ

    ಕಲಬುರಗಿ: ರಾಜ್ಯ ಸರ್ಕಾರ ರೈತರು ಉತ್ಪಾದಿಸಿದ ಹಾಲಿಗೆ ಪ್ರೋತ್ಸಾಹ ಹಣ ನೀಡುತ್ತಿದೆ. ಆದ್ರೆ ಕಲಬುರಗಿ ನಗರದ ಕೆಎಂಎಫ್ ಕೇಂದ್ರ ಕಚೇರಿ, ರಾಜ್ಯ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ 2012 ರಿಂದ 15ರವರೆಗೆ ಮಹಾರಾಷ್ಟ್ರದಿಂದ ಅನಧಿಕೃತವಾಗಿ ಕಳಪೆ ಹಾಲು ಖರೀದಿಸ್ತಿದೆ.

    ಅಲ್ಲದೇ ರೈತರ ಹೆಸರಿನಲ್ಲಿ ಕೋಟಿಗಟ್ಟಲೆ ಪ್ರೋತ್ಸಾಹ ಹಣ ಲಪಟಾಯಿಸಿದೆ. ಈ ಬಗ್ಗೆ ತನಿಖೆ ನಡೆಸಿದ ಇಲಾಖೆ ಹಗರಣದಲ್ಲಿ ಮಂಡಳಿಯ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದೆ. ಭ್ರಷ್ಟ ಅಧಿಕಾರಿಗಳ ಪರ ನಿಂತ ಕಲಬುರಗಿ-ಬೀದರ್ ಮತ್ತು ಯಾದಗಿರಿ ಮಂಡಳಿಯನ್ನು ವಜಾ ಮಾಡುವಂತೆ ತಿಳಿಸಿದೆ.

    ಸದ್ಯ ಹಾಲು ಒಕ್ಕೂಟ ಮಂಡಳಿಯಲ್ಲಿ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಸಂಬಂಧಿ ರೇವಣ್ಣಸಿದ್ದಪ್ಪ ಅಧ್ಯಕ್ಷರಾಗಿದ್ದು, ಅಧಿಕಾರ ಬಳಸಿಕೊಂಡು ವರದಿಯನ್ನು ಜಾರಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಹೀಗಾಗಿ ರೈತರ ಹೆಸರಲ್ಲಿ ಬರ್ತಿರೋ ಪ್ರೋತ್ಸಾಹ ಹಣ ಮಹಾರಾಷ್ಟ್ರದ ದಲ್ಲಾಳಿಗಳ ಪಾಲಾಗುತ್ತಿದೆ.

     

  • ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಈರುಳ್ಳಿ ಲಾರಿ ಪಲ್ಟಿ- 7 ರೈತರಿಗೆ ಗಾಯ

    ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಈರುಳ್ಳಿ ಲಾರಿ ಪಲ್ಟಿ- 7 ರೈತರಿಗೆ ಗಾಯ

    ಹಾವೇರಿ: ಈರುಳ್ಳಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾಗಿ ಏಳು ರೈತರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಹಾವೇರಿ ತಾಲೂಕಿನ ನೆಲೋಗಲ್ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.

    ಗಾಯಗೊಂಡ ರೈತರನ್ನ ಶಿವಲಿಂಗಗೌಡ ಪಾಟೀಲ(45), ಶಿವಣಪ್ಪ ವಾಲ್ಮೀಕಿ(38), ಮಲ್ಲಪ್ಪ ಟಕ್ಕೇದ(49), ಶಶಿಧರ ಟಕ್ಕೇದ(36), ಶಿವನಗೌಡ ಪಾಟೀಲ(50), ಬಸನಗೌಡ ಪಾಟೀಲ(46) ಮತ್ತು ನಿಂಗಪ್ಪ ಬಳಗೋಡ(39) ಎಂದು ಗುರುತಿಸಲಾಗಿದೆ. ಗಾಯಾಳುಗಳು ಗದಗ ಜಿಲ್ಲೆ ರೋಣ ತಾಲೂಕಿನ ಸಂದಿಗವಾಡ ಗ್ರಾಮದ ರೈತರು ಎನ್ನಲಾಗಿದೆ.

    ತಮ್ಮ ಗ್ರಾಮದಿಂದ ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಲು ತೆರಳುತ್ತಿದ್ದ ವೇಳೆ ಲಾರಿ ಚಾಲಕ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಲಾರಿ ಉರುಳಿ ಬಿದ್ದಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಅವಘಡದ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಕೂಡಲೇ ಬೇರೆ ಲಾರಿ ಮೂಲಕ ಈರುಳ್ಳಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಲಾರಿ ಏಜೆನ್ಸಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ.

    ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮುಗೀತಿಲ್ಲ ಮಹದಾಯಿ ಹೋರಾಟಗಾರರ ಅಲೆದಾಟ- ಕೇಸ್ ಗಳಿಂದಾಗಿ ಕೋರ್ಟ್ ಕಚೇರಿಗೆ ಅಲೆದು ಅಲೆದು ಸುಸ್ತಾದ ರೈತರು

    ಮುಗೀತಿಲ್ಲ ಮಹದಾಯಿ ಹೋರಾಟಗಾರರ ಅಲೆದಾಟ- ಕೇಸ್ ಗಳಿಂದಾಗಿ ಕೋರ್ಟ್ ಕಚೇರಿಗೆ ಅಲೆದು ಅಲೆದು ಸುಸ್ತಾದ ರೈತರು

    ಹುಬ್ಬಳಿ: ಅವರು ನೀರಿಗಾಗಿ ನಿರಂತರವಾಗಿ ಹೋರಾಟ ಮಾಡಿದ್ದರು. ಹಾಗಾಗಿಯೇ ಪೊಲೀಸರಿಂದ ಲಾಠಿ ರುಚಿ ಕಂಡಿದ್ದರು. ಆದರೆ ಆಗ ಸರ್ಕಾರ ಅವರ ಮೇಲೆ ಹಾಕಿದ ಕೇಸ್ ಗಳಿಂದಾಗಿ ಕೋರ್ಟ್ ಕಚೇರಿ ಎಂದು ಅಲೆದು ಅಲೆದು ಸುಸ್ತಾಗಿದ್ದಾರೆ. ಈಗ ಮತ್ತೇ ಪೊಲೀಸರ ಮೇಲೆ ದಾಖಲಾದ ಕೇಸ್ ಗಳ ವಿಚಾರಣೆಗೆ ಸಾಕ್ಷಿ ಹೇಳಲು ಅಲೆದಾಡುತ್ತಿದ್ದಾರೆ. ಹೀಗಾಗಿ ಇದರಿಂದ ನಮಗೆ ಯಾವಾಗ ಮುಕ್ತಿ ಆ ಜನ ಹೇಳುತ್ತಿದ್ದಾರೆ.

    ಮಹದಾಯಿ ಹೋರಾಟ ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ನಡೆದ ಬಹು ದೊಡ್ಡ ಹೋರಾಟ ಎನಿಸಿಕೊಂಡಿದೆ. ಆದರೆ ಹೋರಾಟ ಮಾಡಿದ ರೈತರು ಪೊಲೀಸರ ಲಾಠಿ ರುಚಿಯನ್ನು ಕಂಡಿದ್ದರು. ಕಳೆದ ವರ್ಷ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಹಾಗೂ ಅರೇಕುರಟ್ಟಿ ಗ್ರಾಮದಲ್ಲಿ ರೈತರು ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದರು. ಅಂದು ಲಾಠಿ ಏಟು ತಿಂದಿದ್ದ ರೈತರು, ಪೊಲೀಸರು ಹಾಕಿದ ವಿವಿಧ ಪ್ರಕರಣಗಳಿಂದ ಕೋರ್ಟ್ ಗೆ ಅಲೆದು ಸುಸ್ತಾಗಿದ್ದಾರೆ. ಇವಾಗ ಪೊಲೀಸ್ ಮುಂದೆ ಸಾಕ್ಷಿ ಹೇಳಲು ಕೆಲಸ ಬಿಟ್ಟು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.

    ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಕೇಂದ್ರದಿಂದ ಮಹಾಮೋಸ- ಸುಳ್ಳು ವರದಿ ಆಧರಿಸಿ ಕರ್ನಾಟಕಕ್ಕೆ ಸುಪ್ರೀಂ ಎಚ್ಚರಿಕೆ

    ಕಳೆದ ವರ್ಷ ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಯಮನೂರು ಹಾಗೂ ಅರೇಕುರಟ್ಟಿ ಗ್ರಾಮದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಮನ ಬಂದಂತೆ ಹಲ್ಲೆ ಮಾಡಿದ್ದರು. ಹಲ್ಲೆಯಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ವಯೋವೃದ್ಧರು ಗಂಭೀರವಾಗಿ ಗಾಯ ಗೊಂಡಿದ್ದರು.

    ಇದನ್ನೂ ಓದಿ: ಮಹದಾಯಿ ಹೋರಾಟಗಾರರಿಗೆ ಸಮನ್ಸ್- ಅಂಬ್ಯುಲೆನ್ಸ್ ಸಿಬ್ಬಂದಿ, ಸೈನಿಕ, ಎಂಜಿನೀಯರ್‍ಗೂ ನೋಟಿಸ್

    ಈ ಸಂಬಂಧ ಸರ್ಕಾರ ಎಡಿಜಿಪಿ ಕಮಲ್ ಪಂತ್ ನೇತ್ರತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಿತ್ತು. ಕಾರಣ ಇಂದು ಪ್ರಕರಣದ ವಿಚಾರಣಾ ಅಧಿಕಾರಿ ಎನ್ ಶಿವಪ್ರಸಾದ ಅವರು ಹುಬ್ಬಳ್ಳಿಯ ಸಿ ಆರ್ ಮೈದಾನದಲ್ಲಿ 15 ಕ್ಕೂ ಹೆಚ್ಚು ಜನ ರೈತ ಮಹಿಳೆಯರು ವಯೋವೃದ್ದರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಹಾಗಾಗಿ ಪದೇ ಪದೇ ಅಲೆದಾಡುವದರಿಂದ ಬಹಳ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ.

    ಕೆಲಸ ಬಗಸೆ ಬಿಟ್ಟು ಕೋರ್ಟ್ ಕಚೇರಿ ಎಂದು ಅಲೆದಾಡುವಂತಾಗಿದೆ ರೈತಾಪಿ ವರ್ಗದ ಜನರ ಸ್ಥಿತಿ ಏನಾದರೂ ಸರ್ಕಾರ ಇವರ ಅಲೆದಾಟ ತಪ್ಪಿಸಬೇಕಾಗಿದೆ. ಒಟ್ಟಿನಲ್ಲಿ ಮಹದಾಯಿ, ಕಳಸಾ ಬಂಡೂರಿ ಸಮಸ್ಯೆಯನ್ನು ಇತ್ಯರ್ಥ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಶ್ರಮಿಸಿ, ಸುದೀರ್ಘ ಹೋರಾಟಕ್ಕೆ ನ್ಯಾಯ ನೀಡಬೇಕಾಗಿದೆ.

     

     

     

     

  • ಕಷ್ಟ ಬಗೆಹರಿಸಿಕೊಳ್ಳಲು ಚಿನ್ನ ಅಡವಿಟ್ರು – ಎಸ್‍ಬಿಐ ಬ್ಯಾಂಕ್ ನವರು ಒಡವೆಗಳನ್ನ ಹರಾಜು ಹಾಕಿದ್ರು

    ಕಷ್ಟ ಬಗೆಹರಿಸಿಕೊಳ್ಳಲು ಚಿನ್ನ ಅಡವಿಟ್ರು – ಎಸ್‍ಬಿಐ ಬ್ಯಾಂಕ್ ನವರು ಒಡವೆಗಳನ್ನ ಹರಾಜು ಹಾಕಿದ್ರು

    – ಕಣ್ಣೀರಲ್ಲಿ ಕೈತೊಳೀತಿದೆ ಕೋಲಾರದ ರೈತ ಕುಟುಂಬ

    ಕೋಲಾರ: ಈ ರೈತ ಕಷ್ಟ ಎಂದು ಹತ್ತಾರು ವರ್ಷಗಳ ಕಾಲ ಕೂಡಿಟ್ಟಿದ್ದ ಚಿನ್ನದ ಒಡವೆಗಳನ್ನು ತಂದು ಬ್ಯಾಂಕ್ ನಲ್ಲಿ ಅಡವಿಟ್ಟಿದ್ದರು. ಬಡ್ಡಿಯನ್ನು ಕೂಡ ಸಮಯಕ್ಕೆ ಸರಿಯಾಗೇ ಕಟ್ಟಿದ್ದಾರೆ. ಆದರೆ ಬ್ಯಾಂಕ್ ಅಧಿಕಾರಿಗಳ ಯಡವಟ್ಟಿನಿಂದ ರೈತ ಕುಟುಂಬ ಕಂಗಾಲಾಗಿದೆ.

    2014ರಲ್ಲಿ ಕೋಲಾರದ ಚಲಪತಿ ಎಂಬವರು 62 ಗ್ರಾಂ. ಚಿನ್ನದ ಒಡವೆ ಅಡವಿಟ್ಟು ಎಸ್‍ಬಿಐ ಬ್ಯಾಂಕ್ ನ ಶಾಖೆಯಲ್ಲಿ 90,000 ರೂ. ಸಾಲ ಪಡೆದಿದ್ದರು. ಟೈಮ್ ಗೆ ಸರಿಯಾಗಿ ಬಡ್ಡಿ ಕೂಡ ಕಟ್ಟಿದ್ದರು. ಕೇವಲ 2,511 ರೂ. ಬಡ್ಡಿ ಮಾತ್ರ ಬಾಕಿ ಇದೆ ಎಂದು ಬ್ಯಾಂಕ್ ನವರು ಹೇಳಿದ್ದರು. ಹೀಗಿರುವಾಗಲೇ ಏಕಾಏಕಿ ಚಲಪತಿ ಅವರಿಗೆ ನೋಟಿಸ್ ಕೊಟ್ಟು ಅವರ ಒಡವೆಯನ್ನು ಹರಾಜ್ ಹಾಕಿದ್ದಾರೆ. ಏನ್ರಿ ಇದೆಲ್ಲಾ ಎಂದು ಬ್ಯಾಂಕ್ ಅಧಿಕಾರಿಗಳನ್ನು ಕೇಳಿದ್ದರೆ ಬೆದರಿಸುತ್ತಾರೆ ಎಂದು ಚಲಪತಿ ಹೇಳುತ್ತಾರೆ.

    ಇಷ್ಟೇ ಅಲ್ಲ. ಬ್ಯಾಂಕ್ ನವರು ಹರಾಜು ಪ್ರಕ್ರಿಯೆಯನ್ನು ಕಾನೂನಿನ ಪ್ರಕಾರ ನಡೆಸಿಲ್ಲ. ಎಲ್ಲಾ ರೂಲ್ಸ್ ಬ್ರೇಕ್ ಮಾಡಿ ಎಸ್‍ಬಿಐ ಬ್ಯಾಂಕ್ ಸಿಬ್ಬಂದಿ ಚಲಪತಿಯವರಿಂದ ಬರಬೇಕಿದ್ದ 1.05 ಲಕ್ಷ ರೂಪಾಯಿಗೆ 2 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ಹರಾಜು ಹಾಕಿದ್ದಾರೆ. ಈ ವೇಳೆ ವಿಚಾರಣೆ ಮಾಡಿದಾಗ ಬ್ಯಾಂಕ್ ಸಿಬ್ಬಂದಿಯೇ ಯಡವಟ್ಟು ಮಾಡಿರೋದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇನ್ನು ಈ ಬಗ್ಗೆ ಪರಿಶೀಲನೆ ಮಾಡುತ್ತೀವಿ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಬ್ಯಾಂಕ್ ನ ಯಡವಟ್ಟಿನಿಂದ ರೈತನ ಕುಟುಂಬ ಮೋಸ ಹೋಗಿದೆ. ಕೂಡಲೇ ಬ್ಯಾಂಕ್ ಅಧಿಕಾರಿಗಳು ರೈತನ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕಿದೆ.

  • ರಾಗಿ ಕಟಾವು ಮಾಡುತ್ತಿದ್ದ ರೈತನ ಮೇಲೆ ಆನೆ ದಾಳಿ- ಗಂಭೀರ ಗಾಯ

    ರಾಗಿ ಕಟಾವು ಮಾಡುತ್ತಿದ್ದ ರೈತನ ಮೇಲೆ ಆನೆ ದಾಳಿ- ಗಂಭೀರ ಗಾಯ

    ಮಂಡ್ಯ: ರಾಗಿ ಕಟಾವು ಮಾಡುತ್ತಿದ್ದ ರೈತನ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ನಾಗೇಗೌಡ ಎಂಬವರೇ ಆನೆ ದಾಳಿಗೊಳಗಾಗಿ ಗಾಯಗೊಂಡಿರುವ ರೈತ. ತನ್ನ ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಆನೆ ನಾಗೇಗೌಡರನ್ನ ಜೋರಾಗಿ ಗುದ್ದಿ ಬೀಳಿಸಿದೆ.

    ಆನೆ ದಾಳಿಗೆ ಒಳಗಾದ ರೈತ ಭಯದಿಂದ ಜೋರಾಗಿ ಕೂಗಿಗೊಂಡಿದ್ದಾರೆ. ಇದನ್ನು ನೋಡಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಜೋರಾಗಿ ಸದ್ದು ಮಾಡಿ ಆನೆಯನ್ನು ಓಡಿಸಿದ್ದಾರೆ. ತಕ್ಷಣ ಆನೆ ದಾಳಿಯಿಂದ ಗಾಯಗೊಂಡ ರೈತ ನಾಗೇಗೌಡರನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗ್ರಾಮದ ಸಮೀಪವಿರುವ ಕಾಡಿನಿಂದ ಆನೆ ಬಂದಿದ್ದು, ಹಲವಾರು ದಿನಗಳಿಂದ ರಸ್ತೆ ಬದಿ ಆರಾಮವಾಗಿ ಆನೆ ಓಡಾಡಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಆನೆ ದಾಳಿಗೊಳಗಾದ ರೈತ ನಾಗೇಗೌಡರಿಗೆ ಪರಿಹಾರ ನೀಡಿ, ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ಹೃದಯಾಘಾತವಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರೈತ ಸಾವು

    ಹೃದಯಾಘಾತವಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರೈತ ಸಾವು

    ಬಳ್ಳಾರಿ: ಹೃದಯಾಘಾತಕ್ಕೆ ಒಳಗಾಗಿದ್ದ ರೈತರೊಬ್ಬರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೊಸಪೇಟೆ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ 48 ವರ್ಷದ ರೈತ ಸುಣಗಾರ ನಾಗರಾಜ ಎಂಬವರು ಜಮೀನಿನಲ್ಲಿ ನೀರು ಹಾಯಿಸುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಸ್ಥಳೀಯರು ಅವರನ್ನು ಮರಿಯಮ್ಮನಹಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.

    ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಿಲ್ಲ. ಹೀಗಾಗಿ ಅವರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ರೈತ ಮೃತಪಟ್ಟಿದ್ದಾರೆ.

    ಇದೀಗ ರೈತನ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರೇ ಹೊಣೆಯೆಂದು ಸಂಬಂಧಿಕರು ಹಿಡಿಶಾಪ ಹಾಕುತ್ತಿದ್ದಾರೆ.

  • ರಾವಣನಿಗಿಂತ ಸಿದ್ದರಾಮಯ್ಯ ದುಷ್ಟ- ಸಂಸದ ನಳೀನ್ ಕುಮಾರ್ ಕಟೀಲ್

    ರಾವಣನಿಗಿಂತ ಸಿದ್ದರಾಮಯ್ಯ ದುಷ್ಟ- ಸಂಸದ ನಳೀನ್ ಕುಮಾರ್ ಕಟೀಲ್

    ಉಡುಪಿ: ಲಂಕಾಧಿಪತಿ ರಾವಣನಿಗಿಂತ ಸಿಎಂ ಸಿದ್ದರಾಮಯ್ಯ ದುಷ್ಟ. ರಾವಣ ಸೀತೆಯ ಅಪಹರಣ ಮಾತ್ರ ಮಾಡಿದ್ದ, ಸಿದ್ದರಾಮಯ್ಯ ಹಿಂದೂ ಸಮಾಜ ಒಡೆದು ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದ್ದಾನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳೀನ್ ಕುಮಾರ್ ಕಟೀಲ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯ ಕಾಪು ತಾಲೂಕಿನಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಸಿಎಂ ಗೋವು ಹತ್ಯೆಗೆ ಬೆಂಬಲವಾಗಿ ನಿಲ್ಲುತ್ತಿದ್ದಾನೆ. ಹಿಂದೂ ಸಂಸ್ಕೃತಿ ನಾಶ ಮಾಡಲು ಸಿದ್ದರಾಮಯ್ಯ ಹೊರಟಿದ್ದಾನೆ ಎಂದು ತನ್ನ ಬೈಗುಳವನ್ನು ಮುಂದುವರೆಸಿದರು.

    ಸಿದ್ದರಾಮಯ್ಯ ಅವರ ಅಧಿಕಾರಾವಧಿ ಮೂರು ತಿಂಗಳಿಗೆ ಮುಗಿಯುತ್ತದೆ. ಯಡಿಯೂರಪ್ಪ ರಾಮಭಕ್ತನಾಗಿ ಬರುತ್ತಾನೆ. ಬಿಎಸ್ ವೈ ರಾಜ್ಯದಲ್ಲಿ ಸವಾರಿ ಮಾಡುತ್ತಾನೆ ಎಂದು ನಳೀನ್ ಕುಮಾರ್ ಕಟೀಲ್ ಪುರಾಣದ ಕಥೆಯನ್ನು ಹೋಲಿಕೆ ಮಾಡಿದರು.

    ಅಧಿಕಾರದಲ್ಲಿರುವ ಸಿದ್ದರಾಮಯ್ಯನನ್ನು ಯಡಿಯೂರಪ್ಪ ನಾಶ ಮಾಡಿಬಿಡುತ್ತಾನೆ. ಸಿದ್ದರಾಮಯ್ಯನಿಗೆ ಯಡಿಯೂರಪ್ಪನಿಂದ ಮುಕ್ತಿ ಸಿಗುತ್ತದೆ ಎಂದು ಹೇಳಿದರು. ಇದೀಗ ಏಕವಚನದಲ್ಲಿ ಸಿಎಂ ಮೇಲೆ ವಾಗ್ದಾಳಿ ನಡೆಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಂಸದ ನಳೀನ್ ಕುಮಾರ್ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

    ಉಡುಪಿಯ ಕಾಪುವಿನಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ಮುಂದುವರೆಸಿ, ನಿದ್ರಾದೇವಿ ಕುಂಭಕರ್ಣನ ಮಡದಿ. ಕುಂಭಕರ್ಣ ಸತ್ತ ನಂತರ ನಿದ್ರಾದೇವಿ ಸಿಎಂ ಸಿದ್ದರಾಮಯ್ಯರನ್ನು ಅಪ್ಪಿಕೊಂಡಿದ್ದಾಳೆ ಎಂದು ವ್ಯಂಗ್ಯವಾಡಿದರು. ಕುಂಭಕರ್ಣನ ಹತ್ಯೆಯ ನಂತರ ಸಿದ್ದರಾಮಯ್ಯನನ್ನು ನಿದ್ರಾದೇವಿ ಆಶ್ರಯಿಸಿದ್ದಾಳೆ ಎಂದು ನಳೀನ್ ಕುಮಾರ್ ವ್ಯಂಗ್ಯವಾಡಿದ್ದಾರೆ.

  • ಸಮಗ್ರ ಬೇಸಾಯದಿಂದ ಬಂಗಾರದ ಬದುಕು – ಒಂದು ಎಕರೆಯಲ್ಲಿ ಹಲವು ಬೆಳೆ

    ಸಮಗ್ರ ಬೇಸಾಯದಿಂದ ಬಂಗಾರದ ಬದುಕು – ಒಂದು ಎಕರೆಯಲ್ಲಿ ಹಲವು ಬೆಳೆ

    ಬಾಗಲಕೋಟೆ: ಕೃಷಿ ನಂಬಿ ಬದುಕು ಕಟ್ಟಿಕೊಂಡವರು ಹಲವು ಮಂದಿ. ಅದೇ ರೀತಿ, ಬಾಗಲಕೋಟೆಯಿಂದ ಬಂದಿರುವ ಇಂದಿನ ನಮ್ಮ ಪಬ್ಲಿಕ್ ಹೀರೋ ಕೂಡ ಸಮಗ್ರ ಬೇಸಾಯ ಪದ್ಧತಿಯಲ್ಲಿ ಮಾದರಿ ರೈತಯಾಗಿದ್ದಾರೆ.

    ಹೌದು. ಬಾಗಲಕೋಟೆಯ ಬಾದಾಮಿ ತಾಲೂಕಿನ ಆಡಗಲ್ ಗ್ರಾಮದಲ್ಲಿ ಹಚ್ಚ ಹಸಿರನ್ನ ಹೊದ್ದಿರುವ ರೈತ ಯಲ್ಲನಗೌಡ ಪಾಟೀಲ್ ಅವರ ತೋಟದಲ್ಲಿ ಸುಗಂಧ, ಸೂಜಿಮಲ್ಲಿಗೆ, ದುಂಡು ಮಲ್ಲಿಗೆ ಮತ್ತು ಚೆಂಡು ಹೂಗಳು ಪೈಪೋಟಿಗೆ ಬಿದ್ದಂತೆ ಬೆಳೀತಿವೆ.

    ಒಂದು ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತಿಂಗಳಿಗೆ ಎರಡು ಲಕ್ಷದವರೆಗೆ ಲಾಭ ಪಡೆಯುತ್ತಿದ್ದಾರೆ. ಮೊದಮೊದಲು ಕೇವಲ ಸಾಂಪ್ರದಾಯಿಕ ಬೆಳೆಗಳಾದ ಜೋಳ, ಸಜ್ಜೆ, ಗೋವಿನ ಜೋಳ ಬೆಳೆಯುತ್ತಿದ್ದರು. ಆದ್ರೆ, ಆ ಬಳಿಕ ಕೈಸುಟ್ಟುಕೊಂಡ ಯಲ್ಲನಗೌಡ, ಮೂರು ವರ್ಷದಿಂದ ಸಮಗ್ರ ಕೃಷಿ ಆಧಾರಿತ ಅಂತರ ಬೇಸಾಯ ಪದ್ಧತಿ ಹೂ ಕೃಷಿ ಮಾಡಿ ಹಸನ್ಮುಖಿಯಾಗಿದ್ದಾರೆ.

    ಬೋರ್ ವೆಲ್‍ನಲ್ಲಿ ಸಿಕ್ಕಿರೋ ಒಂದೂವರೆ ಇಂಚು ನೀರನ್ನ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಯಲ್ಲನಗೌಡ ಅವರ ಕೃಷಿ ಪದ್ಧತಿಯಿಂದ ಆಕರ್ಷಿತರಾಗಿರೋ ಜಿಲ್ಲೆಯ ಜನ ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ. ಹೂವಿನ ಜೊತೆಗೆ ನೂರು ತೆಂಗಿನ ಗಿಡ, 80 ನಿಂಬೆ ಹಾಗೂ 70 ಮಾವಿನ ಗಿಡಗಳನ್ನ ನೆಟ್ಟು ತೋಟವನ್ನು ಸಂಪೂರ್ಣ ಹಸಿರಾಗಿಸಿದ್ದಾರೆ.

  • ರೈತರಿಗೆ ಸಿಗಬೇಕಾದ ಪರಿಹಾರದ ಹಣವನ್ನು ಹಂಚಿಕೊಂಡ ಅಧಿಕಾರಿಗಳು!

    ರೈತರಿಗೆ ಸಿಗಬೇಕಾದ ಪರಿಹಾರದ ಹಣವನ್ನು ಹಂಚಿಕೊಂಡ ಅಧಿಕಾರಿಗಳು!

    ರಾಯಚೂರು: ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸೋದು ಅಷ್ಟರಲ್ಲೇ ಇದೆ. ಆದರೆ ಹಾಗೂ ಹೀಗೂ ಕೊಡುವ ಪರಿಹಾರವೂ ಕೂಡ ರೈತರಿಗೆ ತಲುಪುತ್ತಿಲ್ಲ. ಒಂದೆಡೆ ಅಧಿಕಾರಿಗಳು ವಿಲನ್ ಆದರೆ ಮತ್ತೊಂದೆಡೆ ಪರಿಹಾರದ ಮೊತ್ತದಲ್ಲೂ ರಾಜಕೀಯ ಆರೋಪ ಕೇಳಿ ಬಂದಿದೆ.

    ರಾಯಚೂರು ನಗರದ ಶಾಸಕ ಡಾ. ಶಿವರಾಜ್ ಪಾಟೀಲ್ ಅವರ ನಿಸಹಾಯಕತೆಯ ಮಾತುಗಳಿವು. ಇಲ್ಲಿ ಶಾಸಕರ ಹೆಸರನ್ನು ಶಿವರಾಜ್ ಎಂದು ಬದಲಾಯಿಸಿ 32 ಎಕರೆ ಜಮೀನಿನ ಪರಿಹಾರದ ಮೊತ್ತವನ್ನು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ. ಶಾಸಕರನ್ನೇ ಶಿವರಾಜ್ ಮಾಡಿ ಜಮೀನಿನ ಮೇಲೆ ದುಡ್ಡು ಹೊಡೆದ ಅಧಿಕಾರಿಗಳ ಕಥೆ ಇಲ್ಲಿಗೆ ನಿಲ್ಲುವುದಿಲ್ಲ.

    110 ರೈತರಿಗೆ ಬೆಳೆ ಹಾನಿ ಪರಿಹಾರ ಬಂದರೆ 10 ಜನರಿಗೆ ಮಾತ್ರ ಪರಿಹಾರ ವಿತರಣೆ ಆಗುತ್ತಂತೆ. ಉಳಿದ ಹಣವನ್ನು ಅಧಿಕಾರಿಗಳೇ ಹಂಚಿಕೊಳ್ಳುತ್ತಾರೆ. ಇದು ಇಂದು ನಿನ್ನೆಯ ಮಾತಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವುದೇ ಹೀಗೆ ಎಂದು ಶಾಸಕರೇ ಅಸಹಾಯಕತೆ ತೋಡಿಕೊಳ್ಳುತ್ತಾರೆ. ಆ ಮೂಲಕ ಲಂಚ ಕೊಟ್ಟರೆ ಮಾತ್ರ ಪರಿಹಾರ ಎಂಬ ಸ್ಥಿತಿ ರಾಯಚೂರಿನಲ್ಲಿದೆ ಎನ್ನುವುದು ನಿಜವಾಗಿದೆ.

    ರಾಯಚೂರಿನಲ್ಲಿ ಬೆಳೆ ಪರಿಹಾರದ ಹಣವನ್ನು ಅಧಿಕಾರಿಗಳು ನುಂಗಿದರೆ, ಇತ್ತ ದಾವಣಗೆರೆಯಲ್ಲಿ ಪರಿಹಾರದ ಮೊತ್ತ ವಿತರಣೆಯಲ್ಲಿ ರಾಜಕೀಯ ಮೇಲಾಟ ನಡೆದಿದೆಯಂತೆ. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತದ ಮೇಲೆ ಪ್ರ್ರಭಾವ ಬೀರಿ ತಮಗೆ ಬೇಕಾದವರಿಗೆ ಹೆಚ್ಚು ಪರಿಹಾರ, ಉಳಿದವರಿಗೆ ಕನಿಷ್ಟ ಪರಿಹಾರ ಮೊತ್ತ ವಿತರಿಸುತ್ತಿದ್ದಾರೆ ಎಂದು ಕೆಲ ಸಂತ್ರಸ್ಥರು ಆರೋಪಿಸುತ್ತಿದ್ದಾರೆ.

    ಮಳೆ ಬಂದರೂ ಕಷ್ಟ, ಬಾರದಿದ್ದರೂ ನಷ್ಟ. ಪರಿಹಾರ ಕೊಟ್ಟರು ಅದು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎನ್ನುವುದೇ ಡೌಟ್. ಏನೇ ಆದರೂ ಯಾವ ಸರ್ಕಾರ ಇದ್ದರೂ ನಮ್ಮ ಅನ್ನದಾತರ ಸ್ಥಿತಿ ಮಾತ್ರ ಸುಧಾರಿಸುವ ಲಕ್ಷಣವೇ ಕಾಣಿಸುತ್ತಿಲ್ಲ.