Tag: farmer

  • ಜಪಾನ್ ನ ರೈಸ್ ಆರ್ಟ್ ಕಲೆಯ ಮಾದರಿಯಲ್ಲಿ ಭತ್ತದಲ್ಲಿ ಸ್ವಚ್ಛ ಭಾರತ ಲಾಂಛನ ರಚಿಸಿದ ದಾವಣಗೆರೆಯ ರೈತ

    ಜಪಾನ್ ನ ರೈಸ್ ಆರ್ಟ್ ಕಲೆಯ ಮಾದರಿಯಲ್ಲಿ ಭತ್ತದಲ್ಲಿ ಸ್ವಚ್ಛ ಭಾರತ ಲಾಂಛನ ರಚಿಸಿದ ದಾವಣಗೆರೆಯ ರೈತ

    ದಾವಣಗೆರೆ: ಜಪಾನ್ ನಲ್ಲಿ ಪ್ರವಾಸಿಗರನ್ನು ಸೆಳೆಯಲು ಮಾಡುವ ರೈಸ್ ಆರ್ಟ್ ಕಲೆಯ ಮಾದರಿಯಲ್ಲಿ ಭಾರತದ ದೇಶಿ ಭತ್ತದ ತಳಿ ಬಳಸಿ ಜನರಿಗೆ ಸ್ವಚ್ಛತೆ ಹಾಗೂ ಶೌಚಾಲಯದ ಮಹತ್ವ ಸಾರುವ ಸ್ವಚ್ಛ ಭಾರತ ಮಿಷನ್ ನ ಲಾಂಛನ ರಚಿಸುವ ಮೂಲಕ ಜಿಲ್ಲೆಯ ಪ್ರಗತಿಪರ ರೈತ ಈಗ ಎಲ್ಲರ ಗಮನ ಸೆಳೆದಿದ್ದಾರೆ.

    ಜಿಲ್ಲೆಯ ಕುಂಬಳೂರು ಗ್ರಾಮದಲ್ಲಿ ರೈತ ಅಂಜನೇಯ ರಚಿಸಿರುವ ಪ್ಯಾಡಿ ಆರ್ಟ್‍ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಚ್ಛತೆಯ ಬಗ್ಗೆ ಹೀಗೆ ಭತ್ತದ ಗದ್ದೆಯಲ್ಲೂ ಜಾಗೃತಿ ಮೂಡಿಸಬಹುದು ಎಂಬುದನ್ನ ರೈತ ಅಂಜನೇಯ ತೋರಿಸಿಕೊಡುವ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.

    ಅಂಜನೇಯ ಅವರು ಸಿದ್ದಸಣ್ಣ ಹಾಗೂ ಡಾಂಬರ ಸಾಳಿ ಎಂಬ ಎರಡು ದೇಶಿ ತಳಿಯ ಭತ್ತವನ್ನ ಬಳಸಿ ಸ್ವಚ್ಛ ಭಾರತ ಮಿಷನ್ ಲಾಂಛನವನ್ನ ಮಾಡಿದ್ದಾರೆ. ಗಾಂಧೀಜಿ ಕನ್ನಡಕವಿರುವ ಸ್ವಚ್ಛ ಭಾರತ ಮಿಷನ್ ಲೋಗೋ ಮಾಡಿದ್ದು, ಅದೇ ರೀತಿ ಸಿದ್ದ ತಳಿಯ ಹಸಿರು ಹಾಸಿನ ಮಧ್ಯೆ ಡಾಂಬರ್ ಸಾಳಿ ಬತ್ತದ ತಳಿ ಬಳಸಿ ಕಪ್ಪು ಬಣ್ಣದ ಕನ್ನಡಕದ ಚಿತ್ರ ಕಾಣುವಂತೆ ಮಾಡಿದ್ದಾರೆ. ಈ ವಿಚಾರ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಕೂತುಹಲ ಮೂಡಿಸಿದೆ. ಅಷ್ಟೇ ಅಲ್ಲದೆ ರೈತ ಆಂಜನೇಯ ಕಾರ್ಯಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವಥಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಾವಯವ ಕೃಷಿ ಮಾಡುವಲ್ಲಿ ನನಗೆ ತಂದೆ, ತಾಯಿ, ಪತ್ನಿ ಹಾಗೂ ಮಕ್ಕಳು ಕೈ ಜೋಡಿಸಿದ್ದಾರೆ. 2006 ರಿಂದಲೂ ಮೂರು ಮುಕ್ಕಾಲು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದೆ. ಇಂದಿಗೂ ಇಲ್ಲಿ ಯಾವುದೇ ರಾಸಯನಿಕ ಗೊಬ್ಬರ ಬಳಸದೆ ಸ್ವಾವಲಂಬಿ ರೈತನಾಗಿದ್ದೇನೆ. ಅಲ್ಲದೇ ಜಪಾನ್ ನಲ್ಲಿ ಟೂರಿಂಗ್ ಗಾಗಿ ಭತ್ತದ ಗದ್ದೆಯಲ್ಲಿ ಚಿತ್ರಗಳನ್ನು ಮೂಡಿಸುತ್ತಾರೆ. ಆದರೆ ಅಲ್ಲಿ ಕೇವಲ 8 ಬಣ್ಣದ ಭತ್ತದ ತಳಿಗಳು ಮಾತ್ರ ಇವೆ. ನಮ್ಮ ದೇಶದಲ್ಲಿ 13 ಬಣ್ಣದ ವಿವಿಧ ತಳಿಯ ಭತ್ತದ ತಳಿಗಳಿವೆ ಎಂದು ಅಂಜನೇಯ ತಿಳಿಸಿದ್ದಾರೆ.

    ಅಂಜನೇಯ ನಶಿಸಿ ಹೋಗುತ್ತಿರುವ ದೇಶಿ ಭತ್ತದ ತಳಿಗಳ ಶೋಧಕರಾಗಿದ್ದು, ಅಪರೂಪದ ತಳಿಗಳನ್ನ ಹುಡುಕಿ ಅಭಿವೃಧ್ದಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಸಾವಯವ ರೈತ ಸ್ವಚ್ಛ ಭಾರತ ಮಿಷನ್ ಲೋಗೋ ಬಳಸಿ ಸ್ವಚ್ಛತೆಗೆ ಮಾದರಿಯಾಗಿ ತಮ್ಮ ಹೊಲದಲ್ಲಿ ಗಾಂಧೀಜಿ ಕನ್ನಡಕದ ಚಿತ್ರ ಮೂಡುವಂತೆ ಮಾಡಿ ಎಲ್ಲರ ಮನಗೆದ್ದಿದ್ದಾರೆ. ಯುವ ರೈತನ ಕಾರ್ಯಕ್ಕೆ ಜಿಲ್ಲೆಯ ರೈತರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

  • ನಾನು ಸತ್ತ ಮೇಲೆ ಪತ್ನಿಯ ತಾಳಿ, ಕುಂಕುಮ ತೆಗೆಯಬೇಡಿ ಎಂದು ಪತ್ರ ಬರೆದು ರೈತ ಆತ್ಮಹತ್ಯೆ

    ನಾನು ಸತ್ತ ಮೇಲೆ ಪತ್ನಿಯ ತಾಳಿ, ಕುಂಕುಮ ತೆಗೆಯಬೇಡಿ ಎಂದು ಪತ್ರ ಬರೆದು ರೈತ ಆತ್ಮಹತ್ಯೆ

    ಹುಬ್ಬಳ್ಳಿ: ರೈತರ ಆತ್ಮಹತ್ಯೆ ತಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿ ಡೆತ್ ನೋಟ್ ಬರೆದಿಟ್ಟು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದಲ್ಲಿ ನಡೆದಿದೆ.

    ಕಿರೆಸೂರು ಗ್ರಾಮದ ವೀರಪ್ಪ ಸವದತ್ತಿ(38) ಆತ್ಮಹತ್ಯೆ ಮಾಡಿಕೊಂಡ ರೈತ. ನನ್ನ ಸಾವಿಗೆ ನನ್ನ ವಾಹನ ಸಾಲ ಕಾರಣ. ಸಾಲ ಮರುಪಾವತಿ ಮಾಡುವುದು ಬಹಳ ಕಷ್ಟವಾಗಿದ್ದು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಹೆಂಡತಿ ಹಾಗೂ ಮಕ್ಕಳನ್ನು ಬಿಟ್ಟು ಹೋಗಲು ಬಹಳ ನೋವಾಗುತ್ತದೆ. ನಾನು ಸತ್ತ ಮೇಲೆ ನನ್ನ ಪತ್ನಿಯ ತಾಳಿ, ಕುಂಕುಮ ತೆಗೆಯಬೇಡಿ ಎಂದು ವೀರಪ್ಪ ಮನವಿ ಮಾಡಿದ್ದಾರೆ. ಅದರ ಜೊತೆಗೆ ಪತ್ನಿಯನ್ನ ಹೊಲಕ್ಕೆ ಕಳಿಸಬೇಡಿ. ಆಸ್ತಿಯನ್ನ ಹೆಂಡತಿ ಹೆಸರಿಗೆ ಮಾಡಿ. ಅವಳಿಗೆ ವಿಧವೆಯರ ರೀತಿಯಲ್ಲಿ ಮಾಡಬೇಡಿ ಎಂದು ಮನವಿ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ರೈತರ ಆತ್ಮಹತ್ಯೆ ತಪ್ಪಿಸಲು ಉತ್ತಮ ಸರ್ಕಾರ ಅಧಿಕಾರಕ್ಕೆ ಬರಬೇಕು. ರೈತರ ಆತ್ಮಹತ್ಯೆ ತಡೆಯಿರಿ ಎಂದು ಕೂಡ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರೈತರ ಆತ್ಮಹತ್ಯೆಗೆ ಕುಡಿತ, ಜೂಜು ಕಾರಣ ಎಂದಿದ್ದ ಖೇಣಿ ಕಾಂಗ್ರೆಸ್ ಸೇರ್ಪಡೆ

    ರೈತರ ಆತ್ಮಹತ್ಯೆಗೆ ಕುಡಿತ, ಜೂಜು ಕಾರಣ ಎಂದಿದ್ದ ಖೇಣಿ ಕಾಂಗ್ರೆಸ್ ಸೇರ್ಪಡೆ

    ಬೆಂಗಳೂರು: ರೈತರ ಆತ್ಮಹತ್ಯೆಗೆ ಕುಡಿತ, ಜೂಜು ಕಾರಣ ಎಂದಿದ್ದ ನೈಸ್ ಸಂಸ್ಥೆಯ ಮಾಲೀಕ, ಕರ್ನಾಟಕ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪರಮೇಶ್ವರ್ ಅವರು ಶಾಲು ಹಾಕಿ ಖೇಣಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

    ಈ ವೇಳೆ ಮಾತನಾಡಿದ ಖೇಣಿ, ನಾನು ಸ್ವತಂತ್ರವಾಗಿ ನಿಂತರೂ ಗೆಲ್ಲುತ್ತೇನೆ ಬೇರೆ ಪಕ್ಷದಿಂದ ನಿಂತರೂ ಗೆಲ್ಲುತ್ತೇನೆ. ನನ್ನ ಕ್ಷೇತ್ರಕ್ಕೆ ಸಿಎಂ 2 ಸಾವಿರ ಕೋಟಿ ನೀಡಿದ್ದಾರೆ. ರಾಜ್ಯದ ನಂಬರ್ ಒನ್ ಕ್ಷೇತ್ರವಾಗಿ ಅಭಿವೃದ್ದಿ ಪಡಿಸಿದ್ದೇನೆ. ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರ ಕೈ ಬಲ ಪಡಿಸೋಕೆ ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.

    ಈ ವೇಳೆ ನೈಸ್ ವಿವಾದದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗರಂ ಆದ ಖೇಣಿ ಸುಮ್ಮನೆ ಏನೇನೋ ಕೇಳಬೇಡಿ, ನ್ಯಾಯಾಲಯದಲ್ಲಿ ಎಲ್ಲವೂ ತೀರ್ಮಾನ ಆಗುತ್ತದೆ ಎಂದು ಹೇಳಿದರು.

    ಅಶೋಕ್ ಖೇಣಿ ಈ ಹಿಂದೆ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕುಡಿತ, ಜೂಜು, ಮಕ್ಕಳ ಮದುವೆಯಾಗದೇ ಇರುವುದು ಕಾರಣ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

    ಕಳೆದ ವರ್ಷ ಏಕಾಏಕಿ ನೈಸ್ ರಸ್ತೆಯ ಟೋಲ್ ದರವನ್ನು ಏರಿಸಲಾಗಿತ್ತು. ಈ ವಿಚಾರದ ಬಗ್ಗೆ ಅಂದು ಪಬ್ಲಿಕ್ ಟಿವಿಗೆ ಲೋಕೋಪಯೋಗಿ ಇಲಾಖೆಯ ಸಚಿವ ಮಹಾದೇವಪ್ಪ ಪ್ರತಿಕ್ರಿಯಿಸಿ ನೈಸ್ ಕಂಪೆನಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ನಿರ್ಮಿಸಿದೆ ಎಂದು ಹೇಳಿದ್ದರು.

    2013ರ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಖೇಣಿ 15,788 ಮತಗಳ ಅಂತರದಿಂದ ಜಯಗಳಿಸಿದ್ದರು. ಖೇಣಿಗೆ 47,763 ಮತಗಳು ಬಿದ್ದಿದ್ದರೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಂಡೆಪ್ಪ ಕಾಶಂಪೂರ್ ಅವರಿಗೆ 31,975 ಮತಗಳು ಬಿದ್ದಿತ್ತು.

     

    https://www.youtube.com/watch?v=Zl-hLyqVbiM

    https://www.youtube.com/watch?v=9z4q6ugGYEQ

  • ಉದ್ಯೋಗ ಸೃಷ್ಟಿ ಬಗ್ಗೆ ಏನ್ ಮಾಡಿದ್ದೀರಿ- ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಶಾಗೆ ರೈತ ಪ್ರಶ್ನೆ

    ಉದ್ಯೋಗ ಸೃಷ್ಟಿ ಬಗ್ಗೆ ಏನ್ ಮಾಡಿದ್ದೀರಿ- ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಶಾಗೆ ರೈತ ಪ್ರಶ್ನೆ

    ಬೀದರ್: ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಹೊಂದಿರುವ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ರೈತರೊಬ್ಬರು ಪ್ರಶ್ನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

    ಕಾಂಗ್ರೆಸ್ ನ ಭದ್ರಕೋಟೆ ಎಂದು ಕರೆಯಲ್ಪಡುವ ಹುಮ್ನಾಬಾದ್ ಗೆ ಭಾನುವಾರ ತೆರಳಿ ಪ್ರಸಿದ್ಧ ವಿರಭದ್ರೇಶ್ವರ್ ದೇವರ ದರ್ಶನ ಪಡೆದ ಶಾ, ಬಳಿಕ ಆವರಣದಲ್ಲಿ ಆಯೋಜನೆ ಮಾಡಿದ್ದ ಕಬ್ಬು ಬೆಳೆಗಾರರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದರು.

    ಈ ವೇಳೆ ಉದ್ಯೋಗ ಸೃಷ್ಟಿ ಬಗ್ಗೆ ಏನ್ ಮಾಡಿದ್ದೀರಿ ಅಂತ ರೈತರೊಬ್ಬರು ಅಮಿತ್ ಶಾ ಅವರಿಗೆ ನೇರ ಪ್ರಶ್ನೆ ಹಾಕಿದ್ದಾರೆ. ಪ್ರಶ್ನೆ ಕೇಳುತ್ತಿದ್ದಂತೆ ರೈತನ ಕೈಯಲ್ಲಿದ್ದ ಮೈಕ್ ನ್ನು ಬಿಜೆಪಿ ಮುಖಂಡ ಕಿತ್ತುಕೊಂಡಿದ್ದಾರೆ. ರೈತನ ಕೈಯಿಂದ ಮೈಕ್ ಕಿತ್ಕೊಂಡ ಬೆನ್ನಲ್ಲೇ ಅಮಿತ್ ಶಾ ಸಂವಾದ ಕಾರ್ಯಕ್ರಮದಲ್ಲಿ ಗದ್ದಲವೇ ಉಂಟಾಯಿತು.

    ಈ ಸಂದರ್ಭ ಅಮಿತ್ ಶಾ ಅವರು, ಹೀಗೆಲ್ಲಾ ಮಾತಾಡ್ಬೇಡಿ, ಎಲ್ಲರೂ ದಯವಿಟ್ಟು ಕುಳಿತುಕೊಳ್ಳಿ ಎಂದು ವಿನಂತಿಸಿಕೊಂಡ್ರು. ಪರಿಸ್ಥಿತಿ ತಿಳಿಗೊಳಿಸಲು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಹೈರಾಣರಾಗಿದ್ರು ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಬಳಿಕ ಭಾಷಣ ಮಾಡಿದ ಅಮಿತ್ ಶಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಹುಲ್ ಉದ್ಯಮಿಗಳ ಸಾಲವನ್ನು ಮೋದಿ ಸರ್ಕಾರ ಮನ್ನಾ ಮಾಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಹಾಗೇನಾದ್ರು ದಾಖಲೆಗಳು ಇದ್ರೆ ಪ್ರೂವ್ ಮಾಡಲಿ. ನಾನು ರೈತರ ಮುಂದೆ ತಲೆ ಬಾಗುತ್ತೆನೆ ಎಂದು ವಾಗ್ದಾಳಿ ನಡೆಸಿದ್ರು. 2018ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ, 90 ದಿನಗಳಲ್ಲಿ ಕಬ್ಬಿನ ಬಾಕಿ ಹಣ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ರು.

    ಬೀದರ್ ನಗರದ ಸಿಖ್ಖರ ಪವಿತ್ರ ದೇವಸ್ಥಾನಕ್ಕೆ ಅಮಿತ್ ಶಾ ಹಾಗೂ ಪತ್ನಿ ಭೇಟಿ ನೀಡಿ ಗುರುನಾನಕರ ದರ್ಶನ ಪಡೆದ ಸಿಖ್ ಧರ್ಮಿಯರ ಮನಸ್ಸು ಗೆಲುವ ಯತ್ನ ಮಾಡಿದ್ರು. ನಂತರ ಮನ್ನಾಏಖೇಳ್ಳಿಯಲ್ಲಿರುವ ಬೌದ್ಧ ವಿಹಾರಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಇನ್ನು ಒಂದೇ ಗ್ರಾಮದಲ್ಲಿ ಮೂರು ಜನ ರೈತರು ಅತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ವೇಳೆ ಚಂದ್ರಪ್ಪ ಧನ್ನಕರ್ ರೈತನ ಪತ್ನಿ ಭಾಗಮ್ಮ ಶಾ ಮುಂದೆ ಕಣ್ಣೀರು ಹಾಕಿದ ಪ್ರಸಂಗ ಕೂಡಾ ನಡೆಯಿತು.

    ಸಂಸದ ಭಗವಂತ್ ಖೂಬಾ, ಶಾಸಕ ಪ್ರಭು ಚವ್ಹಾಣ್, ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ ಸೇರಿದಂತೆ ಪಕ್ಷದ ಕೆಲವು ಮುಖಂಡರು ಭಾಗಿಯಾಗಿದ್ದರು.

    https://twitter.com/KtakaCongress/status/967765129155698688

  • ನಾನಾಗಿದ್ರೆ ನೀರವ್ ಮೋದಿಯನ್ನ ಖಂಡಿತ ಬಿಡ್ತಿರಲಿಲ್ಲ: ಮೋದಿ ವಿರುದ್ಧ ಸಿಎಂ ವಾಗ್ದಾಳಿ

    ನಾನಾಗಿದ್ರೆ ನೀರವ್ ಮೋದಿಯನ್ನ ಖಂಡಿತ ಬಿಡ್ತಿರಲಿಲ್ಲ: ಮೋದಿ ವಿರುದ್ಧ ಸಿಎಂ ವಾಗ್ದಾಳಿ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಆರೋಪಗಳೆಲ್ಲ ಬೇಸ್ ಲೆಸ್ ಆಗಿದೆ. ನಾನಾಗಿದ್ರೆ ನೀರವ್ ಮೋದಿಯನ್ನು ದೇಶ ಬಿಟ್ಟು ಹೋಗಲು ಖಂಡಿತ ಬಿಡ್ತಿರಲಿಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೀ ಭ್ರಷ್ಟ ಪ್ರಧಾನಿಯಾಗಿದ್ದು, ಹಿಂದಿನ ಸರ್ಕಾರದಲ್ಲಿ ಲೂಟಿ ಮಾಡಿ ಜೈಲಿಗೆ ಹೋದವರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಇವರ ಸರ್ಕಾರ ಇರುವಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ನೀರವ್ ಮೋದಿ 11,000 ಕೋಟಿ ಟೋಪಿ ಹಾಕಿ ಹೋಗಿದ್ದಾನೆ. ಏನ್ ಮಾಡಿದ್ರು ಇವರು, ಇವರ ಕುಮ್ಮಕ್ಕಿಲ್ಲದೇ ಓಡಿ ಹೋಗಿದ್ದಾರಾ? ನಾನಾಗಿದ್ದರೆ ಖಂಡಿತ ಬಿಡ್ತಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೈಸೂರಿಗ ಆಗಿದ್ರೆ ಬ್ಯಾಂಕ್ ಲೂಟಿಕೋರ ಓಡಿಹೋಗ್ತಿರಲಿಲ್ಲ- ಪ್ರಧಾನಿಗೆ ಸಿಎಂ ತಿರುಗೇಟು

    ಪ್ರಧಾನಿ ಮೋದಿ ಅವರಿಗೆ ದೇಶದ, ರಾಜ್ಯದ ಸಮಸ್ಯೆಗಳು ಕಾಣಿಸುತ್ತಿಲ್ಲ. ಸಾಲ ಮನ್ನಾ, ರೈತರ ಸಮಸ್ಯೆ, ವಿವಿಧ ಸಮಸ್ಯೆಗಳ ಬಗ್ಗೆ ಮಾತನಾಡದೇ ಕೇವಲ ಕಮೀಷನ್ ವಿಚಾರ ಮಾತ್ರ ಪ್ರಸ್ತಾಪ ಮಾಡಿದ್ದಾರೆ. ಅವರದ್ದೇ ಸರ್ಕಾರ ಇದೆ, ಕಮೀಷನ್ ಬಗ್ಗೆ ಮಾಹಿತಿ ಇದ್ರೆ ನೀಡಲಿ ಅಂತ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಜೈಲಿಗೆ ಹೋದ ಯಡಿಯೂರಪ್ಪನನ್ನು ಪಕ್ಕದಲ್ಲಿ ಕೂಡಿಸಿಕೊಂಡು ಆರೋಪ ಮಾಡುತ್ತಾರೆ. ಯಡಿಯೂರಪ್ಪ ಅವಧಿಯಲ್ಲೇ ಅತಿ ಹೆಚ್ಚು ಕಮೀಷನ್ ವ್ಯವಹಾರ ನಡೆದಿರೋದು. 100% ಕಮೀಷನ್ ಯಡಿಯೂರಪ್ಪ ಕಾಲದಲ್ಲಿ ನಡೆದಿದೆ. ನಮ್ಮದು ಕಮೀಷನ್ ವ್ಯವಹಾರ ನಡೆದಿರೋದಕ್ಕೆ ಯಾವುದಾದರೂ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಇಷ್ಟೊಂದು ಬೇಜಾವಾಬ್ದಾರಿ ಹಾಗೂ ಕೀಳು ಮಟ್ಟದ ರಾಜಕಾರಣವನ್ನು ಮೋದಿಯವರು ಮಾಡುತ್ತಿದ್ದಾರೆ. ಕಮೀಷನ್ ಏಜೆಂಟ್ ಮೋದಿ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: Commission ಸರ್ಕಾರವನ್ನು ತೊಲಗಿಸಿ Mission ಸರ್ಕಾರವನ್ನು ತನ್ನಿ: ಪ್ರಧಾನಿ ಮೋದಿ

    ಇದೇ ವೇಳೆ ಮಾಧ್ಯಮದವರ ಮೇಲೆ ಶಾಸಕ ಹ್ಯಾರಿಸ್ ಮಗ ನಲಪಾಡ್ ಗ್ಯಾಂಗ್ ಹಲ್ಲೆ ಹಾಗೂ ನಾರಾಯಣ ಸ್ವಾಮಿ ಬೆಂಬಲಿಗನ ಗೂಂಡಾ ವರ್ತನೆಯ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

  • ಬ್ಯಾಂಕ್ ಎದುರೇ ಪತ್ನಿ, ಮಗ, 3 ಹೆಣ್ಣು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

    ಬ್ಯಾಂಕ್ ಎದುರೇ ಪತ್ನಿ, ಮಗ, 3 ಹೆಣ್ಣು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

    ಮೈಸೂರು: ಬ್ಯಾಂಕ್ ಅಧಿಕಾರಿಗಳ ನೊಟೀಸ್ ಗೆ ಹೆದರಿ ರೈತ ಕುಟುಂಬವೊಂದು ವಿಷ ಸೇವಿಸಲು ಮುಂದಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

    ಹಾಡ್ಯ ಗ್ರಾಮದ ರೈತ ಶಿವಣ್ಣ ಕುಟುಂಬದಿಂದ ಆತ್ಮಹತ್ಯೆಗೆ ಯತ್ನ ನಡೆದಿದೆ. ಮೂರು ಹೆಣ್ಣುಮಕ್ಕಳು, ಪತ್ನಿ ಹಾಗೂ ಮಗನ ಜೊತೆ ಬ್ಯಾಂಕಿನ ಮುಂಭಾಗದಲ್ಲಿ ವಿಷ ಕುಡಿಯಲು ಮುಂದಾಗಿದ್ದ ಶಿವಣ್ಣ ಅವರನ್ನು ಮನವೊಲಿಸುವಲ್ಲಿ ರೈತ ಮುಖಂಡರು ಯಶಸ್ವಿಯಾಗಿದ್ದಾರೆ.

    2011 ರಲ್ಲಿ ಶಿವಣ್ಣ ನಂಜನಗೂಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಮೀನಿನ ಪತ್ರಗಳನ್ನು ಅಡವಿಟ್ಟು ಟ್ರ್ಯಾಕ್ಟರ್ ಖರೀದಿಗಾಗಿ 7 ಲಕ್ಷ ರೂ. ಸಾಲ ಪಡೆದಿದ್ದರು. ಅಲ್ಪ-ಸ್ವಲ್ಪ ಸಾಲ ತೀರಿಸಿದ ಶಿವಣ್ಣ ಪೂರ್ತಿ ಹಣ ಮರುಪಾವತಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಬ್ಯಾಂಕಿನ ಅಧಿಕಾರಿಗಳು ಏಕಾಏಕಿ ಕ್ರಮ ತೆಗೆದುಕೊಳ್ಳಲು ಮುಂದಾಗಿ, ನೋಟಿಸ್ ನೀಡದೆ ಟಾಂಟಾಂ ಹೊಡೆಸುವುದಾಗಿ ಬೆದರಿಕೆ ಹಾಕಿದ್ದರು.

    ಗೌರವಕ್ಕೆ ಅಂಜಿದ ಶಿವಣ್ಣ, ಕುಟುಂಬ ಸಮೇತ ನಂಜನಗೂಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮುಂದೆ ವಿಷ ಸೇವಿಸಲು ಬಾಟಲಿ ಸಮೇತ ಹಾಜರಾಗಿದ್ದರು. ಈ ವೇಳೆ ಬ್ಯಾಂಕಿಗೆ ಧಾವಿಸಿದ ರೈತ ಮುಖಂಡರು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ ಶಿವಣ್ಣ ಕುಟುಂಬದ ನೆರವಿಗೆ ನಿಂತಿದ್ದಾರೆ.

  • ರಾಜ್ಯ ಬಜೆಟ್ 2018- ಸಾಲ ಮನ್ನಾ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

    ರಾಜ್ಯ ಬಜೆಟ್ 2018- ಸಾಲ ಮನ್ನಾ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಸಾಲದಿಂದ ಬೇಸತ್ತ ರೈತರಿಗೆ ಸಿಹಿ ¸ಸುದ್ದಿ ನೀಡಿದ್ದಾರೆ. ಕೃಷಿ ಸಾಲ ಮನ್ನಾ ಘೋಷಣೆ ಮಾಡಲಾಗಿದ್ದು, ಹಲವು ಹೊಸ ಯೋಜನೆಗಳನ್ನ ಘೋಷಿಸಿದ್ದಾರೆ. 2018-19ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ಒಟ್ಟು 5,849 ಕೋಟಿ ರೂ. ಒದಗಿಸಲಾಗಿದೆ.

    ಸತತ ಬರಗಾಲದಿಂದ ಕಂಗೆಟ್ಟ ರೈತರಿಗೆ ಸಾಲದ ಹೊರೆಯನ್ನು ಕೂಡಲೇ ಕಡಿಮೆಗೊಳಿಸಲು ಪ್ರಸಕ್ತ ವರ್ಷದಲ್ಲಿ ಸರ್ಕಾರ 8165 ಕೋಟಿ ರೂ. ವೆಚ್ಚದಲ್ಲಿ ಸಾಲ ಮನ್ನಾ ಯೋಜನೆ ಘೋಷಿಸಿದೆ.

    ಇದರಿಂದ ರಾಜ್ಯದಲ್ಲಿ 22,27,506 ರೈತರಿಗೆ ಅನುಕೂಲವಾಗಿದೆ. ಈ ಮೊತ್ತದ ಒಂದು ಭಾಗವನ್ನು ಈಗಾಗಲೇ ಪ್ರಸಕ್ತ ವರ್ಷದ ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಒದಗಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.

    ಸಾಲ ಮನ್ನಾ ಪ್ರಮುಖ ಅಂಶಗಳು ಹೀಗಿವೆ:
    2015ರ ಸೆಪ್ಟೆಂಬರ್ 30ಕ್ಕೆ ಸುಸ್ತಿಯಾಗಿರುವ ಎಲ್ಲಾ ಬಗೆಯ ಕೃಷಿ ಸಾಲಗಳ ಅಸಲನ್ನು 2017ರ ಮಾರ್ಚ್ 31ರೊಳಗೆ ಪಾವತಿಸದ ರೈತರ 124.70 ಕೋಟಿ ರೂ. ಮೊತ್ತದ ಪೂರ್ಣ ಬಡ್ಡಿ ಮನ್ನಾ.
    ಕಳೆದ 4 ವರ್ಷಗಳ ಅವಧಿಯಲ್ಲಿ 10.7 ಲಕ್ಷ ರೈತರ 2359 ಕೋಟಿ ರೂ. ಬಡ್ಡಿ ಮನ್ನಾ
    2017ರ ಜೂನ್ 20ಕ್ಕೆ ಅನ್ವಯವಾಗುವಂತೆ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ. ವರೆಗಿನ ಸಾಲ ಮನ್ನಾ.
    ಇದರಿಂದ ರಾಜ್ಯದ 22,27,506 ರೈತರ ಒಟ್ಟು 8165 ಕೋಟಿ ರೂ. ಸಾಲ ಮನ್ನಾ ಆಗಿದೆ.

    ಹೊಸ ಯೋಜನೆಗಳು:
    ಕೃಷಿ ಹೊಂಡಗಳು ಮತ್ತು ಪಾಲಿ ಹೌಸ್ ಗಳ ನಿರ್ಮಾಣ, ಮಣ್ಣು ಕಾರ್ಡ್ ವಿತರಣೆ.
    ಹನಿ ನೀರಾವರಿಗೆ ಎಲ್ಲಾ ವರ್ಗದ ರೈತರಿಗೂ 90% ಸಹಾಯಧನ, ರೈತರಿಗೆ ಕೃಷಿ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಬಾಡಿಗೆಗೆ ನೀಡಿಕೆ, ಹಾಲು ಉತ್ಪಾದನಾ ಸಹಾಯಧನ.
    ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಸ್ಥಾಪನೆ.
    ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಾಣ.
    ದೇಶದಲ್ಲೇ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ನೀಡಲಾಗ್ತಿದೆ. ಇದರ ಜೊತೆ 3% ಬಡ್ಡಿ ದರದಲ್ಲಿ 3 ರಿಂದ 10 ಲಕ್ಷದವರೆಗೆ ಸಾಲ.

    ಖುಷ್ಕಿ ಭೂಮಿಯ ಸಂಕಷ್ಟಗಳನ್ನ ನೇರವಾಗಿ ಪರಿಹರಿಸಲು ರೈತರಿಗೆ ನೇರ ಆದಾಯ ನೆರವು ನೀಡುವ ‘ರೈತ ಬೆಳಕು’ ಎಂಬ ವಿಶಿಷ್ಟ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾರಂಭ.
    2018-19ರಿಂದ ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಪ್ರತಿ ವರ್ಷ ಪ್ರತಿ ರೈತನಿಗೆ ಗರಿಷ್ಠ 10 ಸಾವಿರ ರೂ.
    ಪ್ರತಿ ಹೆಕ್ಟೇರ್‍ಗೆ 5 ಸಾವಿರ ರೂ. ರೈತರ ಬ್ಯಾಂಕ್ ಖಾತೆಗಳ ಮೂಲಕ ನೇರವಾಗಿ ವರ್ಗಾವಣೆ.
    ಯೋಜನೆಗೆ ಪ್ರತಿ ವರ್ಷ 3500 ಕೋಟಿ ರೂ. ಖರ್ಚು, ಅಂದಾಜು 70 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನ.

    ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2018-19ನೇ ಸಾಲಿಗೆ ರಾಜ್ಯದ ಪಾಲು ಭರಿಸಲು 845 ಕೋಟಿ ರೂ. ಅನುದಾನ.
    2018-19ನೇ ಸಾಲಿನಲ್ಲಿ ಸಿರಿಧಾನ್ಯಗಳ ವಿಸ್ತೀರ್ಣ 60 ಸಾವಿರ ಹೆಕ್ಟೇರ್‍ಗೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮ- 24 ಕೋಟಿ ರೂ. ಅನುದಾನ.
    ನೆಲಗಡಲೆ ಬೆಳೆಯುವ ರೈತರಿಗೆ 50 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್.
    ಕಬ್ಬು ಕಟಾವು ಯಂತ್ರಗಳಿಗೆ ಸಹಾಯಧನ ನೀಡಲು 20 ಕೋಟಿ ರೂ.
    ಕೃಷಿ ಚಟುವಟಿಕೆ ಸಮಯದಲ್ಲಿ ಹಾವು ಕಡಿತದಿಂದ ಆಕಸ್ಮಿಕ ಮರಣ ಹೊಂದಿದ ರೈತರ ಹಾಗೂ ಕೃಷಿ ಕಾರ್ಮಿಕರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ 2 ಲಕ್ಷ ರೂ.ಗೆ ದ್ವಿಗುಣ
    ಹುಲ್ಲು ಮೆದೆ/ಬಣವೆಗಳು ಆಕಸ್ಮಿಕ ಬೆಂಕಿಯಿಂದ ನಷ್ಟವಾಗುವ ಪ್ರಕರಣಗಳಲ್ಲಿ ನೀಡಲಾಗುವ ಪರಿಹಾರ ದ್ವುಗುಣ- ಗರಿಷ್ಠ 20 ಸಾವಿರ ರೂ.
    ಚಾಮರಾಜನಗರದಲ್ಲಿ ನೂತನ ಕರಷಿ ಕಾಲೇಜು ಸ್ಥಾಪನೆ.

  • ಕಾವೇರಿ ತೀರ್ಪು ನಡುವೆಯೇ ಇಂದು ರಾಜ್ಯ ಬಜೆಟ್ – ಎಲೆಕ್ಷನ್ ಹಳಿ ಮೇಲೆ ಸಾಗುತ್ತಾ ಅಯವ್ಯಯ

    ಕಾವೇರಿ ತೀರ್ಪು ನಡುವೆಯೇ ಇಂದು ರಾಜ್ಯ ಬಜೆಟ್ – ಎಲೆಕ್ಷನ್ ಹಳಿ ಮೇಲೆ ಸಾಗುತ್ತಾ ಅಯವ್ಯಯ

    ಬೆಂಗಳೂರು: ಚುನಾವಣೆಯ ಹೊಸ್ತಿಲಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 13ನೇ ಬಜೆಟ್ ಮಂಡಿಸಲಿದ್ದಾರೆ.

    ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿ 13ನೇ ಬಾರಿ ಹಾಗೂ ಮುಖ್ಯಮಂತ್ರಿಯಾದ ಬಳಿಕ 6ನೇ ಬಜೆಟ್ ಮಂಡಿಸುತ್ತಿದ್ದು, 13 ಬಾರಿ ದಾಖಲೆ ಬಜೆಟ್ ಮಂಡಿಸಿದ್ದ ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸಮ ಮಾಡಲಿದ್ದಾರೆ.

    ಸಾಲದ ಹೊರೆ, ಲೇಖಾನುಧಾನಕ್ಕೆ ಪ್ರತಿಪಕ್ಷಗಳ ಆಗ್ರಹದ ನಡುವೆಯೇ ಸಿದ್ದರಾಮಯ್ಯ ಜನಪ್ರಿಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಯುವ ಸಮೂಹ, ರೈತರ ಸಬಲೀಕರಣವನ್ನ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ವರ್ಗಗಳನ್ನು ತೃಪ್ತಿಪಡಿಸುವ ಜನಪ್ರಿಯ ಬಜೆಟ್ ಮಂಡಿಸುವ ಸಾಧ್ಯತೆ ಹೆಚ್ಚಾಗಿದೆ. ಸಹಕಾರಿ ಸಂಘಗಳಲ್ಲಿನ ರೈತರ ಸಾಲವನ್ನ ಸಂಪೂರ್ಣ ಮನ್ನಾ ಮಾಡುವುದು, ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ತಂದು ಬಂಪರ್ ಕೊಡುಗೆ ನೀಡಲಿದ್ದಾರೆ ಎನ್ನಲಾಗಿದೆ.

    ಇಂದು ಬೆಳಗ್ಗೆ 11.30ಕ್ಕೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು, ಚುನಾವಣೆಗೆ ಇನ್ನೆರಡು ತಿಂಗಳು ಇರುವಾಗ ಮಂಡಿಸುತ್ತಿರುವ ಬಜೆಟ್ ಕುತೂಹಲ ಮೂಡಿಸಿದೆ.

     

    ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ಏನಿರಬಹುದು..?

    * ರೈತರ ಸಂಪೂರ್ಣ ಸಾಲ ಮನ್ನಾ (2571 ಕೋಟಿ)
    * ಸರ್ಕಾರಿ ನೌಕರರ ವೇತನ ಹೆಚ್ಚಳ (6ನೇ ವೇತನ ಆಯೋಗದ ಶಿಫಾರಸು)
    * ಆರೋಗ್ಯ ಭಾಗ್ಯಕ್ಕೆ ಹೆಚ್ಚಿನ ಒತ್ತು
    * ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ಕಾರ್ಯಕ್ರಮ
    * ಪಟ್ಟಣಗಳಿಗೆ ಇಂದಿರಾ ಕ್ಯಾಂಟೀನ್ ವಿಸ್ತರಣೆ
    * ಮಹಿಳೆಯರು, ವೃದ್ಧರು, ಅಂಗವಿಕಲರ ಮಾಶಾಸನ ದುಪ್ಪಟ್ಟು
    * ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್
    * ಬಗರ್‍ಹುಕುಂ ಯೋಜನೆಯ ಅನುಷ್ಠಾನ
    * ಉದ್ಯೋಗ ಸೃಷ್ಟಿಯ ಘೋಷಣೆ (ಶಿಕ್ಷಕರ ನೇಮಕ)
    * ಬೆಂಗಳೂರಿಗೆ 17 ಸಾವಿರ ಕೋಟಿಗಿಂತಲೂ ಹೆಚ್ಚಿನ ಅನುದಾನ

  • ಬೆಳೆ ಕಾಯಲು ಹೊಲಕ್ಕೆ ಸನ್ನಿ ಲಿಯೋನ್ ಫೋಟೋ!

    ಬೆಳೆ ಕಾಯಲು ಹೊಲಕ್ಕೆ ಸನ್ನಿ ಲಿಯೋನ್ ಫೋಟೋ!

    ಹೈದರಾಬಾದ್: ತಮ್ಮ ಹೊಲದ ಮೇಲೆ ಯಾರ ಕಣ್ಣು ಬೀಳಬಾರದು ಎಂದು ಬೆದರು ಬೊಂಬೆ ಹಾಕುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ತನ್ನ ಹೊಲದ ಮೇಲೆ ಯಾರ ಕಣ್ಣು ಬೀಳಬಾರದು ಎಂದು ಸನ್ನಿ ಲಿಯೋನ್ ಪೋಸ್ಟರ್ ಹಾಕಿ ಸುದ್ದಿಯಾಗಿದ್ದಾರೆ.

    ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಚೆಂಚಿ ರೆಡ್ಡಿ ಎಂಬ ರೈತರೊಬ್ಬರು ಸನ್ನಿ ಲಿಯೋನ್ ಪೋಸ್ಟರ್ ನನ್ನು ಹಾಕಿದ್ದಾರೆ. ಸನ್ನಿ ಕೆಂಪು ಬಿಕಿನಿ ಹಾಕಿರುವ ಫೋಟೋವೊಂದಕ್ಕೆ ‘ಹೇ, ನನ್ನನ್ನು ಕಂಡು ಮರುಗಬೇಡ ಹಾಗೂ ಅಳಬೇಡ’ ಎಂದು ತೆಲುಗುವಿನಲ್ಲಿ ಬರೆದು ಪೋಸ್ಟರ್ ಹಾಕಿದ್ದಾರೆ.

    ನನ್ನ 10 ಎಕರೆ ಜಮೀನಿನಲ್ಲಿ ಈ ವರ್ಷ ಅತ್ಯುತ್ತಮ ಬೆಳೆ ಬೆಳೆದಿದೆ. ಗ್ರಾಮಸ್ಥರು ನನ್ನ ಜಮೀನಿನ ಮೇಲೆ ಕಣ್ಣು ಹಾಕುತ್ತಿದ್ದಾರೆ. ಅವರ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ನಾನು ಸನ್ನಿ ಲಿಯೋನ್ ಪೋಸ್ಟರ್ ಗಳನ್ನು ಹಾಕಲು ನಿರ್ಧರಿಸಿದೆ. ಈಗ ನನ್ನ ಈ ಉಪಾಯ ಯಶಸ್ವಿಯಾಗಿದ್ದು, ನನ್ನ ಜಮೀನಿನ ಮೇಲೆ ಈಗ ಯಾರು ಕಣ್ಣು ಹಾಕುವುದಿಲ್ಲ ಎಂದು ರೈತ ಚೆಂಚಿ ರೆಡ್ಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಚೆಂಚಿ ರೆಡ್ಡಿ ತನ್ನ ಹೊಲದಲ್ಲಿ ಎಲೆಕೋಸು, ಹೂಕೋಸು ಹಾಗೂ ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷ ನನ್ನ ಬೆಳೆಗಳೆಲ್ಲ ಹಾನಿಯಾಗಿತ್ತು. ಕೆಲವು ಬಾರಿ ಬೆಳೆಗಳು ಚೆನ್ನಾಗಿದ್ದರೆ, ಇನ್ನೂ ಕೆಲವು ಬಾರಿ ಅದು ಹಾನಿಯಾಗುತ್ತಿತ್ತು ಎಂದು ಚೆಂಚಿ ರೆಡ್ಡಿ ಹೇಳಿದ್ದಾರೆ. ಸದ್ಯ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಹಿಂದೆ 2016ರಲ್ಲಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಶ್ರೀ ನಾರಾಯಣ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹೊಸ ಬ್ಯಾಚ್ ವಿದ್ಯಾರ್ಥಿಗಳನ್ನು ಸ್ವಾಗತ ಮಾಡಲು ಸನ್ನಿ ಲಿಯೋನ್ ಹಾಗೂ ಮಿಯಾ ಕಲೀಫಾ ಪೋಸ್ಟರ್ ನನ್ನು ಹಾಕಿ ಅದಕ್ಕೆ ‘ವೆಲ್‍ಕಮ್ ಫ್ರೆಶರ್’ ಎಂದು ಮಲೆಯಾಳಂನಲ್ಲಿ ಬರೆದು ಹಾಕಿದ್ದರು.

  • ನನ್ನ ಜಮೀನು ವಶಪಡಿಸಿಕೊಂಡು ಸಾಲ ತೀರಿಸಿ: ಸಿಎಂ, ಮೋದಿ, ರಾಹುಲ್ ಗಾಂಧಿಗೆ ಮಂಡ್ಯ ರೈತ ಮನವಿ

    ನನ್ನ ಜಮೀನು ವಶಪಡಿಸಿಕೊಂಡು ಸಾಲ ತೀರಿಸಿ: ಸಿಎಂ, ಮೋದಿ, ರಾಹುಲ್ ಗಾಂಧಿಗೆ ಮಂಡ್ಯ ರೈತ ಮನವಿ

    ಮಂಡ್ಯ: ನನ್ನ ಜಮೀನನ್ನು ವಶಪಡಿಸಿಕೊಂಡು ಸಾಲವನ್ನು ತೀರಿಸಿ ಎಂದು ರೈತರೊಬ್ಬರು ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಹಲವರಿಗೆ ಕಳೆದೊಂದು ವರ್ಷದಿಂದ ಮನವಿ ಮಾಡುತ್ತಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೋಳಾರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಬಿ. ಜವರೇಗೌಡ ಅವರಿಗೆ ಸುಮಾರು ಎರಡು ಎಕರೆ ಹತ್ತು ಗುಂಟೆ ಜಮೀನಿದೆ. ಇವರು ವ್ಯವಸಾಯದ ಜೊತೆಗೆ ತೃತೀಯ ದರ್ಜೆ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಉದ್ಯೋಗ ಖಾತರಿ ಯೋಜನೆಯಡಿ ಮಾಡಿಸಿದ ಕೆಲಸಕ್ಕೆ ಹಣ ಸಂದಾಯವಾಗಿಲ್ಲವಂತೆ. ಅಲ್ಲದೆ ಬರದಿಂದಾಗಿ ಕಳೆದ ಮೂರು ನಾಲ್ಕು ವರ್ಷದಿಂದ ಸರಿಯಾಗಿ ಬೆಳೆಯೂ ಕೈ ಸೇರಿಲ್ಲ. ಇವೆಲ್ಲದರ ನಡುವೆ ಸಾಲ ಮಾಡಿ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದಾರೆ. ಇದರಿಂದಾಗಿ ಅಸಲು ಬಡ್ಡಿ ಎಲ್ಲ ಸೇರಿ ಸುಮಾರು 30 ಲಕ್ಷದಷ್ಟು ಸಾಲವಾಗಿದೆ.

    ಇದನ್ನು ತೀರಿಸಲು ದಾರಿ ಕಾಣದ ರೈತ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಹಲವರಿಗೆ ಪತ್ರ ಬರೆದು ನನ್ನ ಜಮೀನನ್ನು ವಶಕ್ಕೆ ಪಡೆದು ಸಾಲ ತೀರಿಸಿ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಮನವಿ ಮಾಡುತ್ತಿದ್ದರೂ, ಯಾರೊಬ್ಬರೂ ಸಹಾಯಕ್ಕೆ ಬರುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.