Tag: farmer

  • ಬ್ಯಾಂಕಿನಲ್ಲಿ 3.50 ಲಕ್ಷ, 2.50 ಲಕ್ಷ ಕೈ ಸಾಲ: ರೈತ ನೇಣಿಗೆ ಶರಣು!

    ಬ್ಯಾಂಕಿನಲ್ಲಿ 3.50 ಲಕ್ಷ, 2.50 ಲಕ್ಷ ಕೈ ಸಾಲ: ರೈತ ನೇಣಿಗೆ ಶರಣು!

    ವಿಜಯಪುರ: ಸಾಲಬಾಧೆಯಿಂದ ಮನನೊಂದು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ರೈತ ಮಡ್ಡೆಪ್ಪ ಪೂಜಾರಿ(40) ಆತ್ಮಹತ್ಯೆಗೆ ಶರಣಾಗಿದ್ದಾರೆ. ತೊಗರಿ ಮತ್ತು ಹತ್ತಿ ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಮಡ್ಡೆಪ್ಪ, ಮಾನಸಿಕವಾಗಿ ನೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅಲ್ಲದೇ ಮಡ್ಡೆಪ್ಪ ಅವರು ಗಬಸಾವಳಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ರೂ. 3.50 ಲಕ್ಷ ಹಾಗೂ 2.50 ಲಕ್ಷ ರೂ. ಕೈ ಸಾಲ ಮಾಡಿದ್ದರು. ಹೀಗಾಗಿ ಬೆಳೆಯೂ ಕೈಕೊಟ್ಟಿದ್ದರಿಂದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾನಸಿಕವಾಗಿ ನೊಂದು ಈ ನಿರ್ಧಾರ ತಗೆದುಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.

    ಘಟನೆ ಸಂಬಂಧ ಸಿಂದಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಯಲುಸೀಮೆಯಲ್ಲಿ ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ಭತ್ತದ ಬೆಳೆ ನಾಶ

    ಬಯಲುಸೀಮೆಯಲ್ಲಿ ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ಭತ್ತದ ಬೆಳೆ ನಾಶ

    ಚಿಕ್ಕಬಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹಲವೆಡೆ ಅಲಿಕಲ್ಲು ಮಳೆ ಸುರಿದಿದೆ. ಅಕಾಲಿಕ ಮಳೆಗೆ ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ನಾಶವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

    ರೈತರಾದ ಕೆ.ಕೆ.ವೆಂಕಟೇಶ್, ರಂಗಪ್ಪ, ಮಧುಸೂದನರೆಡ್ಡಿ, ಕೃಷ್ಣಾರೆಡ್ಡಿ, ಮುರಳಿ, ವೇಣುಗೋಪಾಲ, ಬಾಸ್ಕರ ಹಾಗೂ ಮತ್ತಿತರೆ ಕೃಷಿ ರೈತರ 150 ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನನಲ್ಲಿ ಬೆಳೆದ ಭತ್ತವೆಲ್ಲ ತೆನೆಯಿಂದ ಕಳಚಿಕೊಂಡಿದೆ. ಮತ್ತೊಂದೆಡೆ ಕಟಾವು ಮಾಡಿದ್ದ ಭತ್ತದ ಬೆಳೆ ಮಳೆಪಾಲಾಗಿದೆ.

    ತಾಲೂಕಿನ ತೊಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಿಪಲ್ಲಿ, ಸುಜ್ಞಾನಂಪಲ್ಲಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರಕಾರ ಅಲಿಕಲ್ಲು ಮಳೆಯಾಗಿದೆ.

  • ಸಾಲಬಾಧೆ ತಾಳಲಾರದೆ ಮಗನೊಂದಿಗೆ ರೈತ ಆತ್ಮಹತ್ಯೆ!

    ಸಾಲಬಾಧೆ ತಾಳಲಾರದೆ ಮಗನೊಂದಿಗೆ ರೈತ ಆತ್ಮಹತ್ಯೆ!

    ಹಾವೇರಿ: ಸಾಲಬಾಧೆ ತಾಳಲಾರದೆ ಆರು ವರ್ಷದ ಮಗನೊಂದಿಗೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡಗಿ ತಾಲೂಕಿನ ಶಂಕರಿಪುರ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ರೈತ ಮಂಜಪ್ಪ ಕಲ್ಲಮ್ಮನವರ (40)ಮತ್ತು ಮಗ ಲಿಂಗರಾಜ್(6) ಗುರುತಿಸಲಾಗಿದೆ. ಮಂಜಪ್ಪ ಇಪ್ಪತ್ತೈದು ಎಕರೆ ಜಮೀನು ಹೊಂದಿದ್ದರು. ಬ್ಯಾಂಕ್ ಮತ್ತು ಕೈ ಸಾಲ ಅಂತಾ ಇಪ್ಪತ್ತು ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದರು. ಕಳೆದ ಎರಡು ಮೂರು ವರ್ಷಗಳಿಂದ ಬೆಳೆದ ಬೆಳೆ ಕೈಗೆ ಬಂದಿರಲಿಲ್ಲ.

    ಕಳೆದೆರಡು ವರ್ಷಗಳಿಂದ ಕ್ಯಾಬೇಜ್ ಬೆಳೆ ಕೈ ಕೊಟ್ಟಿದ್ದರಿಂದ ಬೇಸತ್ತು ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕರುವಿಗಾಗಿ ಹಸುವಿನ ಕೆಚ್ಚಲಿಗೆ ಬ್ರಾ ತೊಡಿಸ್ದ!

    ಕರುವಿಗಾಗಿ ಹಸುವಿನ ಕೆಚ್ಚಲಿಗೆ ಬ್ರಾ ತೊಡಿಸ್ದ!

    ಲಂಡನ್: ಹಸುವಿನ ಕೆಚ್ಚಲಿಗೆ ಬ್ರಾ ತೊಡಿಸಿದ್ದು, ಅಲ್ಲಿ ಕರು ಹಾಲು ಕುಡಿಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕರುವೊಂದು ತನ್ನ ತಾಯಿಯ ಬಳಿ ಹಾಲು ಕುಡಿಯದೆ ಇದ್ದುದ್ದರಿಂದ ಹಸುವಿಗೆ ಈ ರೀತಿ ಬ್ರಾ ತೊಡಿಸಲಾಗಿದೆ. ಹೌದು ಬ್ರಿಟೀಷ್ ರೈತನೊಬ್ಬನ ಕರು ಹಸುವಿನ ಬಳಿ ಹಾಲು ಕುಡಿಯತ್ತಿರಲಿಲ್ಲ. ಇದರಿಂದ ಕಂಗಾಲಾದ ರೈತನಿಗೆ ಉಪಾಯ ಹೊಳೆದಿದ್ದು ತನ್ನ ಪತ್ನಿಯ ಬ್ರಾ ವನ್ನು ತೆಗೆದುಕೊಂಡು ಹಸುವಿನ ಕೆಚ್ಚಲಿಗೆ ತೊಡಿಸಿದ್ದಾನೆ. ನಂತರ ಆಶ್ಚರ್ಯವೆಂಬಂತೆ ಕರು ಹಸುವಿನ ಬಳಿ ಹಾಲು ಕುಡಿಯಲು ಆರಂಭಿಸಿದೆ.

    ರೈತ ತನ್ನ ಪತ್ನಿಯ ಬ್ರಾ ತೆಗೆದುಕೊಂಡು ಅದಕ್ಕೆ ದಾರ ಕಟ್ಟಿ ಅದನ್ನು ಹಸುವಿನ ಕೆಚ್ಚಲಿಗೆ ತೊಡಿಸಿದ್ದಾನೆ. ನಂತರ ಕರು ಹಾಲು ಕುಡಿದಿದೆ. ರೈತ ತಾನು ಮಾಡಿದ ಪ್ಲ್ಯಾನ್ ನಿಂದ ಕರು ಹಾಲು ಕುಡಿದ್ದರಿಂದ ಸಂತಸ ಪಟ್ಟಿದ್ದು, ಆ ಫೋಟೋವನ್ನು ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ “ಪ್ರಯೋಗ ಯಶಸ್ವಿ” ಎಂದು ಬರೆದುಕೊಂಡಿದ್ದಾನೆ.

    ರೈತ ಹಾಕಿದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಉಪಾಯಕ್ಕೆ ವಿವಿಧ ರೀತಿಯ ಕಮೆಂಟ್ ಗಳು ಬಂದಿವೆ.

  • ಸಾಲ ಕೊಡ್ತೀವಿ ಕಾಂಗ್ರೆಸ್ ಗೆ ಓಟ್ ಹಾಕಿ – ಮತದಾರರಿಗೆ ಅಮಿಷ

    ಸಾಲ ಕೊಡ್ತೀವಿ ಕಾಂಗ್ರೆಸ್ ಗೆ ಓಟ್ ಹಾಕಿ – ಮತದಾರರಿಗೆ ಅಮಿಷ

    ತುಮಕೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರೈತರಿಗೆ ಸಾಲ ವಿತರಣೆ ಮಾಡಿರುವ ಘಟನೆ ಮಧುಗಿರಿ ತಾಲೂಕಿನ ಕಡಗತ್ತೂರು ವಿಎಸ್‍ಎಸ್‍ಎನ್ ಬ್ಯಾಂಕಿನಲ್ಲಿ ನಡೆದಿದೆ. ಸಾಲ ವಿತರಣೆ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಕಾರ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಸದ್ಯ ಘಟನೆಯ ಕುರಿತು ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣನ ಕ್ಷೇತ್ರದಲ್ಲಿ ಮತದಾರರಿಗೆ ಸಾಲದ ರೂಪದಲ್ಲಿ ಆಮಿಷ ಒಡ್ಡುತ್ತಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಶಾಸಕ ರಾಜಣ್ಣ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಕಾರಣ ಈ ಕೃತ್ಯಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎನ್ನಲಾಗಿದೆ.

    ಮಧುಗಿರಿ ತಾಲೂಕಿನ ಕಡಗತ್ತೂರು ವಿಎಸ್‍ಎಸ್‍ಎನ್ ಬ್ಯಾಂಕ್ ನಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಚೆಕ್ ಅಥವಾ ಆರ್ ಟಿಜಿಎಸ್ ಮೂಲಕ ನೀಡಬೇಕಿದ್ದ ಸಾಲವನ್ನು ನಗದು ರೂಪದಲ್ಲಿ ಕೊಟ್ಟು ಕಾಂಗ್ರೆಸ್ ಗೆ ಮತಹಾಕುವಂತೆ ಹೇಳಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.

    ಜಮೀನಿನ ಪಹಣಿ ಹೊಂದಿರುವ ಕಾಂಗ್ರೆಸ್ ಬೆಂಬಲಿತ ರೈತರಿಗೆ ಮಾತ್ರ ಹಳೇ ದಿನಾಂಕ ನಮೂದಿಸಿ ಸಾಲ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಕಾನೂನಿನ ಕ್ರಮದಿಂದ ತಪ್ಪಿಸಿಕೊಳ್ಳಲು ವಿಎಸ್‍ಎಸ್‍ಎನ್ ಅಧಿಕಾರಿಗಳ ಜಾಣ ನಡೆಗೆ ಮುಂದಾಗಿದ್ದಾರೆ. ರೈತರಿಗೆ ಸಾಲ ನೀಡುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಪೋಲಿಯೋ ಬಾಧಿಸಿದರೂ ಎದೆಗುಂದಲಿಲ್ಲ – ಛಲದಲ್ಲಿ ಬದುಕು ಕಟ್ಟಿಕೊಂಡ ವಿಕಲಚೇತನ

    ಪೋಲಿಯೋ ಬಾಧಿಸಿದರೂ ಎದೆಗುಂದಲಿಲ್ಲ – ಛಲದಲ್ಲಿ ಬದುಕು ಕಟ್ಟಿಕೊಂಡ ವಿಕಲಚೇತನ

    ದಾವಣಗೆರೆ: ಹುಟ್ಟಿದ 9 ತಿಂಗಳಿಗೆ ಪೊಲೀಯೋಗೆ ತುತ್ತಾಗಿದ್ದರೂ ಇಂದು 14 ಎಕರೆ ಹೊಲದಲ್ಲಿ ವಿವಿಧ ಬೆಳೆ ಬೆಳೆದು ದಾವಣಗೆರೆಯ ರೈತ ಎಲ್ಲರಿಗೂ ಆದರ್ಶವಾಗಿದ್ದಾರೆ.

    ದಾವಣಗೆರೆ ಜಿಲ್ಲೆಯ ಕುಕ್ಕವಾಡ ಗ್ರಾಮದ ನಿವಾಸಿ ಚಂದ್ರಶೇಖರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಚಂದ್ರಶೇಖರ್ ಕೋಲಿನ ಸಹಾಯದಿಂದ ತೋಟದಲ್ಲಿ ಕೆಲಸ ಮಾಡುತ್ತಾರೆ. ಪೊಲೀಯೋದಿಂದ ಬಳಲುತ್ತಿದ್ದರೂ, ಯಾವುದನ್ನೂ ಲೆಕ್ಕಿಸದೆ, ಯಾರ ಹಂಗಿಗೂ ಒಳಗಾಗದೆ ತನಗಿದ್ದ 14 ಎಕರೆ ಹೊಲದಲ್ಲಿ ವಿವಿಧ ಬೆಳೆ ಬೆಳೆದು ಜಿಲ್ಲೆಗೆ ಆದರ್ಶ ರೈತರಾಗಿದ್ದಾರೆ.

    ಇವರು ಬೆಳೆದ ಅಡಿಕೆ, ಮೆಣಸು, ಸೇರಿದಂತೆ ವಿವಿಧ ಬೆಳೆಗಳಿಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಿಂದ ಪ್ರಶಂಸೆ ಸಂದಿದೆ. ಸಂಘ ಸಂಸ್ಥೆಗಳು ಚಂದ್ರಶೇಖರ್ ಅವರಿಗೆ ಸನ್ಮಾನ ಮಾಡಿವೆ. ಕಾಳು ಮೆಣಸು ಬೆಳೆಗಾರರ ಸಂಘ ಕಟ್ಟಿ ಮಾರುಕಟ್ಟೆಯಲ್ಲಿ ಹೇಗೆ ಲಾಭಗಳಿಸಬೇಕು ಎಂದು ರೈತರಿಗೆ ಅರಿವು ಮೂಡಿಸುತ್ತಿದ್ದಾರೆ.

    ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ ತಮ್ಮಂದಿರು ಬೇರೆಯಾದರೂ, ಹೆತ್ತವರನ್ನ ಚಂದ್ರಶೇಖರ್ ಅವರೇ ನೋಡಿಕೊಳ್ಳುತ್ತಿದ್ದಾರೆ. ಮಡದಿ ಮತ್ತು ಮಕ್ಕಳು ಚಂದ್ರಶೇಖರ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

    https://www.youtube.com/watch?v=hf8JpkAo49w

  • ಅಮಾಯಕ ರೈತನ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ

    ಅಮಾಯಕ ರೈತನ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ

    ಹಾವೇರಿ: ಅಮಾಯಕ ರೈತರೊಬ್ಬರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದಲ್ಲಿ ನಡೆದಿದೆ.

    ಸುಲೇಮಾನ್ ಹೊಂಬರಡಿ ಹಲ್ಲೆಗೊಳಗಾದ ರೈತ. ರಾಣೇಬೆನ್ನೂರು ನಗರ ಠಾಣೆಯ ಶ್ರೀಕಾಂತ್ ಲಮಾಣಿ ಮತ್ತು ಸಚಿನ್ ಧರ್ಮರ್ ಎಂಬ ಇಬ್ಬರು ಕಾನ್ ಸ್ಟೇಬಲ್‍ಗಳು ರೈತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಬಲವಂತವಾಗಿ ಠಾಣೆಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಅಂತಾ ಸುಲೇಮಾನ್ ಹೇಳ್ತಾರೆ.

    ಹಲ್ಲೆಯ ಬಳಿಕ ಸುಲೇಮಾನ್ ಅವರ ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಪರಿಣಾಮ ವೃದ್ಧ ತಂದೆ-ತಾಯಿ, ಪತ್ನಿ, ಮಕ್ಕಳಿಗೆ ಆಸರೆಯಾಗಬೇಕಾಗಿದ್ದ ರೈತ, ಈಗ ನಡೆದಾಡಲು ಅನ್ಯರ ಸಹಾಯಕ್ಕೆ ಕೈ ಚಾಚುತ್ತಿದ್ದಾರೆ.

  • ವಾಯುಭಾರ ಕುಸಿತ – ರಾಜ್ಯದ ಹಲವೆಡೆ ತಂಪೆರೆದ ವರುಣ

    ವಾಯುಭಾರ ಕುಸಿತ – ರಾಜ್ಯದ ಹಲವೆಡೆ ತಂಪೆರೆದ ವರುಣ

    ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಬಾರ ಕುಸಿತ ಪ್ರಭಾವದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ಹಲವೆಡೆ ಮಳೆಯಾಗಿದೆ.

    ನಗರದ ಹೊರವಲಯದ ಯಶವಂತಪುರ, ರಾಜಾಜಿನಗರ, ಕತ್ರಿಗುಪ್ಪೆ, ಬನಶಂಕರಿ, ಶ್ರೀನಗರ, ಕೆಂಗೇರಿ ಸುತ್ತಮುತ್ತಲ ಭಾಗಗಳಲ್ಲಿ ಸಂಜೆ ವೇಳೆ ಮಳೆಯಾಗಿದ್ದು, ನಗರದ ಹೊರವಲಯ ಅನೇಕಲ್ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ.

    ಕಳೆದ ಕೆಲ ದಿನಗಳಿಂದ ಬೇಸಿಗೆ ಆರಂಭದ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪು ನೀಡಿದರೆ, ನಗರದಲ್ಲಿ ಏಕಾಏಕಿ ಮಳೆ ಬಿದ್ದಿದ್ದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಟ ನಡೆಸಿದರು. ಮತ್ತೆ ಕೆಲವರು ಮಳೆಯಿಂದ ತಪ್ಪಿಸಿಕೊಳ್ಳಲು ಫ್ಲೈ ಓವರ್ ಕೆಳಗೆ ನಿಂತು ರಕ್ಷಣೆ ಪಡೆದರು.

    ರಾಜ್ಯದ ಪ್ರಮುಖ ಪ್ರದೇಶಗಳಾದ ಮಂಡ್ಯದ ಕೆಆರ್ ಪೇಟೆ, ಚನ್ನಪಟ್ಟಣ, ಕನಕಪುರ, ಧಾರವಾಡ, ಮೈಸೂರು, ಚಾಮರಾಜನಗರದ ಭಾಗದಲ್ಲಿ ತುಂತುರು ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದ ಹಲವೆಡೆ ಇನ್ನೂ ಎರಡು ದಿನ ಮಳೆಯಾಗುವ ಸಂಭವವಿದೆ.

    ಇನ್ನೂ ರಾಜ್ಯದ ಕರಾವಳಿಯಲ್ಲಿ ಎರಡನೇ ದಿನವೂ ವರುಣನ ಅಬ್ಬರ ಮುಂದುವರೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಮಳೆಯಾಗಿದ್ದು, ಮೋಡ ಮುಸುಕಿದ ವಾತಾವರಣ ಮುಂದುವರೆದಿದೆ. ಕಾಫಿನಾಡಿನಲ್ಲಿ ವರ್ಷದ ಮೊದಲ ಮಳೆ ಸಿಂಚನ ತಂದಿದ್ದು, ಮಳೆಗಾಗಿ ಆಕಾಶ ನೋಡ್ತಿದ್ದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಸಾಲ ತೀರಿಸಲಿಲ್ಲವೆಂದು ರೈತನ ಮನೆಯಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಗೂಂಡಾಗಿರಿ!

    ಸಾಲ ತೀರಿಸಲಿಲ್ಲವೆಂದು ರೈತನ ಮನೆಯಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಗೂಂಡಾಗಿರಿ!

    ಕೊಪ್ಪಳ: ಹತ್ತಾರು ಬ್ಯಾಂಕಿನಲ್ಲಿ ಸಾವಿರಾರು ಕೋಟಿ ಸಾಲ ಮಾಡಿರೋ ಉದ್ಯಮಿಗಳ ವಿರುದ್ಧ ಕ್ರಮಕ್ಕೆ ಬ್ಯಾಂಕ್‍ಗಳು ಮುಂದಾಗುತ್ತಿಲ್ಲ. ಆದರೆ ಇಲ್ಲೊಂದು ಸಹಕಾರಿ ಬ್ಯಾಂಕ್ ರೈತನಿಗೆ ಕೊಟ್ಟ 3 ಲಕ್ಷ ರೂ. ಸಾಲಕ್ಕೆ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಳ್ಳಿ ಕ್ರಾಸ್‍ನಲ್ಲಿನ ರೈತ ಸುಕೊ ಸಹಕಾರಿ ಬ್ಯಾಂಕ್ ನಲ್ಲಿ ಹೈನುಗಾರಿಕೆಗಾಗಿ ಸಾಲ ಮಾಡಿದ್ದರು. ಚಿನ್ನ ಮತ್ತು ಭೂಮಿಯನ್ನು ಅಡವಿಟ್ಟುಕೊಂಡು ಬ್ಯಾಂಕ್ ಸಾಲ ನೀಡಿತ್ತು. ಆದ್ರೆ ಪ್ರಕೃತಿ ವಿಕೋಪದಿಂದ ಹೈನುಗಾರಿಕೆಯಲ್ಲಿ ನಷ್ಟ ಉಂಟಾಗಿದ್ದರಿಂದ ರೈತ ವಿಷ್ಟುವರ್ಧನ ರೆಡ್ಡಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಬ್ಯಾಂಕ್ ಸಿಬ್ಬಂದಿ ರೈತನ ಮನೆಗೆ ನುಗ್ಗಿ ಗೂಂಡಾಗಿರಿ ಮಾಡಿದ್ದಾರೆ.

    ಒಂದು ವಾರದ ಹಿಂದೆ ಪೊಲೀಸರ ಸಮೇತ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿ, ಮನೆಯಲ್ಲಿನ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ರೈತನ ಮನೆ ಬೀಗ ಮುರಿದು, ಗೃಹ ಉಪಯೋಗಿ ವಸ್ತುಗಳನ್ನು ಎತ್ತೊಯ್ಯುವ ಮೂಲಕ ಅಕ್ಷರಶಃ ಗೂಂಡಾಗಿರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಗೆ ಬೀಗ ಮುದ್ರೆ ಹಾಕಿದ್ದಾರೆ. ಆಗ ಬ್ಯಾಂಕ್ ಗೆ ಹೋಗಿರೋ ರೈತ, ಯಾವ ಕಾನೂನಿನಡಿ ನಮ್ಮ ಮನೆಗೆ ನುಗ್ಗಿ ಹೀಗೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬ್ಯಾಂಕ್ ಮ್ಯಾನೇಜರ್ ನಮಗೂ ಮತ್ತು ಮನೆಗೆ ನುಗ್ಗಿ ವಸ್ತು ತೆಗದುಕೊಂಡು ಹೋಗಿದ್ದಕ್ಕೂ ಸಂಬಂಧವಿಲ್ಲ ಎಂದು ಹಿಂಬರಹ ನೀಡಿದ್ದಾರೆ.

    ಇದರ ವಿರುದ್ಧ ರೈತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಕೃತ್ಯಕ್ಕೆ ರೈತನ ಕುಟುಂಬ ಕಂಗಾಲಾಗಿದೆ.

  • ಪೇದೆ ನಿಂದಿಸಿ ಥಳಿಸಿದಕ್ಕೆ ಮನನೊಂದು ರೈತ ಆತ್ಮಹತ್ಯೆಗೆ ಯತ್ನ!

    ಪೇದೆ ನಿಂದಿಸಿ ಥಳಿಸಿದಕ್ಕೆ ಮನನೊಂದು ರೈತ ಆತ್ಮಹತ್ಯೆಗೆ ಯತ್ನ!

    ಯಾದಗಿರಿ: ಮುಖ್ಯ ಪೇದೆಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದಕ್ಕೆ ಮನನೊಂದು ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಿ ಗ್ರಾಮದಲ್ಲಿ ನಡೆದಿದೆ.

    ಶನಿವಾರ ರಾತ್ರಿ ಹಾಲಗೇರಿ ಗ್ರಾಮದಲ್ಲಿ ಜಮೀನು ಪಕ್ಕದಲ್ಲಿ ಮರಳು ಸಂಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಡಗೇರಾ ಠಾಣೆಯ ಮುಖ್ಯ ಪೇದೆ ರೈತರಾದ ಯಂಕಯ್ಯ ಅವರನ್ನು ನಿಂದಿಸಿ ಥಳಿಸಿದ್ದರು.

    ಇದರಿಂದ ಮನನೊಂದಿದ್ದ ಯಂಕಯ್ಯ ಅವರು ರಾತ್ರಿ ಜಮೀನಿನಲ್ಲಿ ಉಳಿದುಕೊಂಡು ಬೆಳಗ್ಗೆ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಪರಿಣಾಮ ಜಿಲ್ಲಾಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಈಗ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ರವಾನಿಸಲಾಗಿದೆ. ವಡಗೇರಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

    ನಾವು ಯಂಕಯ್ಯನವರಿಗೆ ಯಾವುದೇ ನಿಂದನೆ ಹಾಗೂ ಥಳಿಸುವ ಕೆಲಸ ಮಾಡಿಲ್ಲವೆಂದು ಎಂದು ಹೇಳಿ ಪೊಲೀಸರು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.