Tag: farmer

  • ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು-ಸಂಕಷ್ಟದಲ್ಲಿ ರೈತ

    ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು-ಸಂಕಷ್ಟದಲ್ಲಿ ರೈತ

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮುಂಗಾರು ಮಳೆಯ ಆರ್ಭಟಕ್ಕೆ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ.

    ರಮೇಶ್ ಗಂಗನಗೌಡ, ಅಮರಪ್ಪ ಗಂಗನಗೌಡ, ತಿಪ್ಪಣ ಕೆಂಬಾವಿ, ರೇವಣಪ್ಪ ಕೆಂಬಾವಿ ಎಂಬವರ ಹೊಲಗಳಲ್ಲಿ ಮಳೆಯ ಹೊಡೆತಕ್ಕೆ ಒಟ್ಟು ನಾಲ್ಕು ಎಕರೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಭಾರೀ ಮಳೆ ಬಂದಿದ್ದರಿಂದ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ.

    ರೈತರು ಸಾಲ ಮಾಡಿ ಬಾಳೆ ಬೆಳೆದಿದ್ದರು. ಭಾನುವಾರ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಬಾಳೆ ಗಿಡಗಳು ಮುರಿದು ಬಿದ್ದಿವೆ. ಗಿಡಗಳು ಬೀಳದಂತೆ ಮರದ ಕೋಲುಗಳನ್ನು ಕೊಟ್ಟಿದ್ದರು ಗಾಳಿ ಬೀಸಿದ್ದರಿಂದ ಬಿದ್ದಿವೆ. ಬಿದ್ದಿರುವ ಗಿಡಗಳಲ್ಲಿ ಇರುವ ಗೊನೆಗಳ ಕಾಯಿಗಳು ಇನ್ನೂ ಬಲಿತಿಲ್ಲ. ಸುಮಾರು 100 ಗಿಡಗಳು ಮುರಿದು ಬಿದ್ದಿವೆ ಎಂದು ರೈತ ಬಸಪ್ಪ ಹೇಳ್ತಾರೆ.

    ರೈತರು ಲಕ್ಷಾಂತರ ರೂಪಾಯಿ ಬೆಲೆಯ ಬಾಳೆ ನೆಲಕ್ಕಚ್ಚಿದ್ದರಿಂದ ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.

  • ಬಿತ್ತನೆಗೆ ತೊಗರಿ ಖರೀದಿಸಲು ಹಣ ಜಮೆ ಮಾಡಿ- ಸರ್ಕಾರಕ್ಕೆ ರೈತರ ಆಗ್ರಹ

    ಬಿತ್ತನೆಗೆ ತೊಗರಿ ಖರೀದಿಸಲು ಹಣ ಜಮೆ ಮಾಡಿ- ಸರ್ಕಾರಕ್ಕೆ ರೈತರ ಆಗ್ರಹ

    ಗದಗ: ತೊಗರಿ ಕಣಜ ಅಂತಾ ಖ್ಯಾತಿ ಪಡೆದಿರುವ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ರೈತರು ತೊಗರಿ ಬೆಳೆಯುತ್ತಾರೆ.

    ತೊಗರಿ ಬೆಳೆಗಾರರಿಗೆ ಸೂಕ್ತ ಬೆಲೆ ಕೊಡ್ತಿವಿ ಅಂತಾ ಸರ್ಕಾರ, ಸ್ವಸಹಾಯ ಸಂಘಗಳಿಂದ ಲಕ್ಷಾಂತರ ರೈತರ ತೊಗರಿ ಖರೀದಿಸಿತ್ತು. ಹೀಗೆ ಖರೀದಿಸಿದ ತೊಗರಿ ಹಣ ರೈತರ ಖಾತೆಗೆ ಹಾಕುವುದಾಗಿ ಹೇಳಿ 6 ತಿಂಗಳಾದ್ರು ಹಣ ಮಾತ್ರ ಜಮೆಯಾಗಿಲ್ಲ.

    80 ಸಾವಿರ ರೈತರ 500 ಕೋಟಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದೀಗ ಮತ್ತೆ ಮುಂಗಾರು ಆರಂಭವಾಗಿದ್ದು, ರೈತರಿಗೆ ಬಿತ್ತನೆ ಬೀಜಕ್ಕೂ ಹಣವಿಲ್ಲ. ಹೀಗಾಗಿ ಇದೀಗ ಮತ್ತೆ ಅನಿವಾರ್ಯವಾಗಿ ಖಾಸಗಿಯವರ ಬಳಿ ಸಾಲ ಸೂಲ ಮಾಡಿ ಬಿತ್ತನೆ ಬೀಜ ಖರೀದಿಸುವ ಪರಿಸ್ಥಿತಿ ಎದುರಾಗಿದೆ.

    ಆದ್ದರಿಂದ ಸರ್ಕಾರ ಕೂಡಲೇ ತೊಗರಿ ಖರೀದಿ ಹಣ ಜಮೆ ಮಾಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.

  • ಕರ್ನಾಟಕ ಸೇರಿದಂತೆ 7 ರಾಜ್ಯಗಳಿಂದ 10 ದಿನಗಳ ಪ್ರತಿಭಟನೆ- ಜೂನ್ 6ರಂದು ಬೀದಿಗಿಳಿಯಲಿರುವ ರೈತರು

    ಕರ್ನಾಟಕ ಸೇರಿದಂತೆ 7 ರಾಜ್ಯಗಳಿಂದ 10 ದಿನಗಳ ಪ್ರತಿಭಟನೆ- ಜೂನ್ 6ರಂದು ಬೀದಿಗಿಳಿಯಲಿರುವ ರೈತರು

    ಬೆಂಗಳೂರು: ಬೆಳೆದ ಬೆಳೆಗೆ ಸೂಕ್ತ ಬೆಲೆ, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಗಾಂಧಿಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಅಂತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

    ಈ ಕುರಿತು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೇಶದಾದ್ಯಂತ 10 ದಿನಗಳ 7 ರಾಜ್ಯಗಳ ರೈತರು ಶುಕ್ರವಾರ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಹೀಗಾಗಿ ಜೂನ್ 6ರಂದು ಕರ್ನಾಟಕ ರೈತರು ಬೀದಿಗೆ ಇಳಿಯಲಿದ್ದಾರೆ. ಇದನ್ನೂ ಓದಿ: ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು

    ಜೂನ್ 6ರಂದು ಕರ್ನಾಟಕದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ. ರಾಷ್ಟ್ರೀಯ ಕಿಸಾನ್ ಮಹಾಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕರ್ನಾಟಕ ರೈತರ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ದೇಶದ್ಯಾಂತ 130ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ ಅಂದ್ರು. ಇದನ್ನೂ ಓದಿ: ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

    ರೈತರು ಬೆಳೆದ ತರಕಾರಿ ಹಾಗೂ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರದಿರಲು ನಿರ್ಧರಿಸಿದ್ದಾರೆ. ಆದ್ರೆ ಕರ್ನಾಟಕದ ರೈತರು ಉತ್ಪನ್ನ ಮಾಡುತ್ತಾರೆ. ಸಾಂಕೇತಿಕ ಧರಣಿಗೆ ಬೆಂಬಲ ನೀಡಲಿದ್ದಾರೆ. ಸಾವಿರಾರು ರೈತರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಅಂತ ಅವರು ಹೇಳಿದ್ರು.

  • ಜಮೀನು ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿ – ರೈತ ಸ್ಥಳದಲ್ಲೇ ಸಾವು

    ಜಮೀನು ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿ – ರೈತ ಸ್ಥಳದಲ್ಲೇ ಸಾವು

    ಹಾವೇರಿ: ಜಮೀನು ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ಚಲಾಯಿಸುತ್ತಿದ್ದ ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಶ್ರೀರಾಮನಕೊಪ್ಪ ಗ್ರಾಮದಲ್ಲಿ ನಡೆದಿದೆ.

    ನಿಂಗಪ್ಪ ಆರಿಕಟ್ಟಿ (60) ಮೃತ ರೈತ. ಇಂದು ಬೆಳಗ್ಗೆ ಟ್ರ್ಯಾಕ್ಟರ್ ತೆಗೆದುಕೊಂಡು ಜಮೀನು ಉಳಿಮೆ ಮಾಡಲು ಹೋಗಿದ್ದರು. ಆದರೆ ಉಳುಮೆ ಮಾಡುವ ವೇಳೆ ನಿಯಂತ್ರಣಕ್ಕೆ ಸಿಗದೇ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ ಅಡಿಗೆ ಸಿಕ್ಕಿ ರೈತ ನಿಂಗಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಹಂಸಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಜಿಲ್ಲೆಯ ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

     

  • ರೈತರ ಸಾಲಮನ್ನಾಕ್ಕೆ ಸಿಎಂ ಎಚ್‍ಡಿಕೆ ಸೂತ್ರ

    ರೈತರ ಸಾಲಮನ್ನಾಕ್ಕೆ ಸಿಎಂ ಎಚ್‍ಡಿಕೆ ಸೂತ್ರ

    ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಸಿಎಂ ಆದ 24 ಗಂಟೆಗಳಲ್ಲಿ ನಾಡಿನ ರೈತರ ಸಾಲಮನ್ನಾ ಮಾಡ್ತೀನಿ ಅಂತಾ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದು, ಇದೀಗ ಬಿಜೆಪಿ ಸಾಲಮನ್ನಾ ಮಾಡುವಂತೆ ಸಿಎಂ ಕುಮಾರಸ್ವಾಮಿ ಮೇಲೆ ಒತ್ತಡ ಹಾಕುತ್ತಿದೆ.

    ನಾನು ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ. ಆದ್ರೆ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದ್ದರಿಂದ ಎಲ್ಲರ ವಿಶ್ವಾಸ ಪಡೆದುಕೊಂಡು ಸಾಲಮನ್ನಾ ಮಾಡಲು ಅವಕಾಶ ಬೇಕೆಂದು ನಾಡಿನ ರೈತರಲ್ಲಿ ಮುಖ್ಯಮಂತ್ರಿ ಹೇಳಿಕೊಂಡಿದ್ರು. ಆದ್ರೆ ಇಂದು ಸಿಎಂ ಇದೇ ವಿಷಯವಾಗಿ ಸಭೆ ಕರೆದಿದ್ದು, ಯಾವ ನಿರ್ಧಾರ ಕೈಗೊಳ್ಳತ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಹುಟ್ಟುಹಾಕಿದೆ. ಇದನ್ನೂ ಓದಿ: ರೈತರ ಸಂಪೂರ್ಣ ಸಾಲಮನ್ನಾ: 150 ರೈತರು, ರಾಜಕೀಯ ನಾಯಕರೊಂದಿಗೆ ಸಿಎಂ ಸಭೆ -ಸಾಲಮನ್ನಾ ವಿಚಾರದಲ್ಲಿ ಉಳಿದ ರಾಜ್ಯಗಳು ಏನು ಮಾಡಿವೆ..?-ಕರ್ನಾಟಕದ ಸ್ಥಿತಿ ಏನು?

    ರೈತರ ಸಾಲಮನ್ನಾಕ್ಕೆ ಸಿಎಂ ಸೂತ್ರ ಏನು..?
    ರಾಷ್ಟ್ರೀಕೃತ ಬ್ಯಾಂಕ್‍ಗಳ ಜೊತೆ ಸಮಾಲೋಚನೆ ನಡೆಸಿ ರೈತರ ಸಾಲಗಳನ್ನ ಸರ್ಕಾರ ವಹಿಸಿಕೊಳ್ಳುವ ಬಗ್ಗೆ ಪ್ರಸ್ತಾಪ ಮಾಡೋದು. ಬ್ಯಾಂಕ್‍ಗಳನ್ನು ಒಪ್ಪಿಸಿ ರೈತರ ಸಾಲಗಳನ್ನ ಸರ್ಕಾರವೇ ವಹಿಸಿಕೊಳ್ಳೊದು. ಒಂದು ವೇಳೆ ಬ್ಯಾಂಕ್‍ಗಳು ಒಪ್ಪಿದ್ರೆ 4 ಕಂತುಗಳಲ್ಲಿ ಸರ್ಕಾರವೇ ಸಾಲ ಭರಿಸೋದು. ಈ ಮೂಲಕ ಕೃಷಿ ಸಾಲದಿಂದ ಎಲ್ಲಾ ರೈತರನ್ನ ಮುಕ್ತಿಗೊಳಿಸೋದು.

    ಸಹಕಾರಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್‍ಗಳ ಸಾಲಗಳ ಬಗ್ಗೆ ಪ್ರತ್ಯೇಕ ನಿರ್ಧಾರ ತೆಗೆದುಕೊಂಡು ಸಂಪನ್ಮೂಲ ಹೊಂದಿಸಿಕೊಳ್ಳುವ ಹಾಗೂ ಕಾರ್ಯಸೂಚಿ ರೂಪಿಸುವ ಬಗ್ಗೆ ಚಿಂತನೆ ನಡೆಸುವುದು. ಜಿಎಸ್‍ಟಿಯಿಂದ ಬರುವ ಹೆಚ್ಚುವರಿ ಆದಾಯವನ್ನ ತೋರಿಸಿ ಕೇಂದ್ರದಿಂದ ಸಾಲ ತರುವ ಪ್ಲಾನ್ ಮಾಡೋದು. ರಾಜ್ಯ ಸರ್ಕಾರ ಕೆಲ ಯೋಜನೆಗಳಿಗೆ ಅನುದಾನ ಕಡಿತಗೊಳಿಸುವ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಬ್ಯಾಲೆನ್ಸ್ ಮಾಡುವುದು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಪರಿಸ್ಥಿತಿ ಅನುಗುಣವಾಗಿ ರೈತರ ಕೃಷಿ ಸಾಲಮನ್ನಾ ನಿರ್ವಹಣೆಗೆ ಮಾರ್ಗಸೂಚಿ ರೂಪಿಸುವುದು.

  • ರೈತರ ಸಂಪೂರ್ಣ ಸಾಲಮನ್ನಾ: 150 ರೈತರು, ರಾಜಕೀಯ ನಾಯಕರೊಂದಿಗೆ ಸಿಎಂ ಸಭೆ

    ರೈತರ ಸಂಪೂರ್ಣ ಸಾಲಮನ್ನಾ: 150 ರೈತರು, ರಾಜಕೀಯ ನಾಯಕರೊಂದಿಗೆ ಸಿಎಂ ಸಭೆ

    ಬೆಂಗಳೂರು: ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮಹತ್ವದ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.

    ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಪಕ್ಷ ನಾಯಕರೂ ಆಗಿರುವ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಈಶ್ವರಪ್ಪ, ಉಪ ಮುಖ್ಯಮಂತ್ರಿ ಪರಮೇಶ್ವರ್‍ರನ್ನು ಆಹ್ವಾನಿಸಲಾಗಿದೆ. ಆದ್ರೆ ಯಡಿಯೂರಪ್ಪ ಇವತ್ತು ಮಂಗಳೂರಿಗೆ ಭೇಟಿ ನೀಡ್ತಿದ್ದು, ಅವರ ಬದಲಿಗೆ ವಿಧಾನಸಭೆಯಲ್ಲಿ ವಿಪಕ್ಷ ಉಪ ನಾಯಕ ಗೋವಿಂದ ಕಾರಜೋಳ ಭಾಗವಹಿಸ್ತಾರೆ. ಪ್ರತಿ ಜಿಲ್ಲೆಯಿಂದಲೂ ನಾಲ್ಕು ಪ್ರಗತಿಪರ ರೈತರು ಅಂದ್ರೆ ಒಟ್ಟು 150 ಮಂದಿ ರೈತರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಹಣಕಾಸು, ತೋಟಗಾರಿಕೆ, ಕೃಷಿ, ಸಹಕಾರ ಇಲಾಖೆಗಳ ಅಧಿಕಾರಿಗಳು ಸಭೆಗೆ ಭಾಗಿಯಾಗಲಿದ್ದಾರೆ.

    ಪ್ರಮುಖವಾಗಿ ಸಾಲಮನ್ನಾ ವಿಷಯ ಚರ್ಚೆ ಆಗಲಿದ್ದು, ರೈತರ ಸಂಪೂರ್ಣ ಸಾಲಮನ್ನಾ ಒಂದೇ ಬಾರಿ ಮನ್ನಾ ಮಾಡಬೇಕಾ ಅಥವಾ 5 ವರ್ಷಗಳಲ್ಲಿ ಕಂತಿನ ಆಧಾರದಲ್ಲಿ ಸಾಲಮನ್ನಾ ಮಾಡಬೇಕಾ ಅನ್ನೋ ಕೆಲ ಮಾನದಂಡದ ಕುರಿತು ರೈತ ಸಂಘಟನೆಗಳೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ.

    ಸರ್ಕಾರದ ಮುಂದಿರುವ ಪ್ರಶ್ನೆಗಳು:
    1. ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಹೀಗೆ ಎಲ್ಲ ಸ್ವರೂಪದ ಸಾಲ ಮನ್ನಾ ಮಾಡಬೇಕಾ..?
    2. ಕೇವಲ ಬೆಳೆ ಸಾಲವನ್ನಷ್ಟೇ ಮನ್ನಾ ಮಾಡಬೇಕಾ..?
    3. ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲವನ್ನು ಮಾತ್ರ ಮನ್ನಾ ಮಾಡಬೇಕಾ..?

    ಮಾರ್ಗಗಳು:
    1. ಹಂತ-ಹಂತವಾಗಿ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ.
    2. ಹಂತವಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸಾಲ ಮನ್ನಾದ ಮೊತ್ತ ಪಾವತಿ.
    2. ಆರ್‍ಬಿಐ ಮೂಲಕ ಬಾಂಡ್‍ಗಳನ್ನು ಘೋಷಿಸಿ ಆ ಮೂಲಕ ಸಂಪನ್ಮೂಲ ಕ್ರೋಡಿಕರಣ.
    3. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಕೃಷಿ ಸಾಲ ಮನ್ನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನೆರವಿಗೆ ಒತ್ತಡ.

    ಉಳಿದ ರಾಜ್ಯಗಳು ಏನು ಮಾಡಿವೆ..?
    1. ಮಹಾರಾಷ್ಟ್ರ – 1.5 ಲಕ್ಷ ರೂಪಾಯಿವರೆಗೆ ರೈತ ಬೆಳೆ ಸಾಲ ಮನ್ನಾ – ಹೊರೆ 34 ಸಾವಿರ ಕೋಟಿ
    2. ಉತ್ತರಪ್ರದೇಶ – 1 ಲಕ್ಷ ರೂಪಾಯಿವರೆಗೆ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲ ಮನ್ನಾ – ಹೊರೆ 36 ಸಾವಿರ ಕೋಟಿ
    3. ಪಂಜಾಬ್ – ಸಣ್ಣ ಮತ್ತು ಮಧ್ಯಮ ವರ್ಗದ ರೈತರ 2 ಲಕ್ಷ ರೂಪಾಯಿವರೆಗಿನ ಬೆಳೆ ಸಾಲ, 2 ಲಕ್ಷಕ್ಕಿಂತ ಮೇಲ್ಪಟ್ಟ ಸಾಲವಿದ್ದಲ್ಲಿ 2 ಲಕ್ಷ ರೂಪಾಯಿ ಮನ್ನಾ – ಹೊರೆ 10 ಸಾವಿರ ಕೋಟಿ
    4. ತೆಲಂಗಾಣ – 1 ಲಕ್ಷ ರೂಪಾಯಿವರೆಗೆ ರೈತರ ಬೆಳೆ ಸಾಲ ಮನ್ನಾ – ಹೊರೆ 17 ಸಾವಿರ ಕೋಟಿ ರೂಪಾಯಿ

    ಕರ್ನಾಟಕದ ಸ್ಥಿತಿ ಏನು..?
    * ಮಾರ್ಚ್ 2016ರ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಕೃಷಿ ಸಾಲದ ಮೊತ್ತ – 34,637 ಕೋಟಿ ರೂ.
    * ಇದರದಲ್ಲಿ ಬೆಳೆ ಸಾಲದ ಮೊತ್ತ 21,486 ಕೋಟಿ ರೂಪಾಯಿ
    * ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲದ ಮೊತ್ತ – 14, 703 ಕೋಟಿ ರೂ.
    * ಇದರಲ್ಲಿ ಬೆಳೆ ಸಾಲದ ಮೊತ್ತ – 10,270 ಕೋಟಿ ರೂಪಾಯಿ

    ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿರುವ ಸಾಲಮನ್ನಾ ಕುರಿತು ಮುಖ್ಯಮಂತ್ರಿಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುವುದುಮ ಇಂದು ತಿಳಿಯಲಿದೆ. ಇತ್ತ ಒಂದು ವಾರದೊಳಗೆ ರೈತರ ಸಾಲಮನ್ನಾ ಮಾಡೆದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಯಡಿಯೂರಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ನಾಳೆ ಕರ್ನಾಟಕ ಬಂದ್- ಬೆಂಗ್ಳೂರು ನಗರ ಪೊಲೀಸ್ ಆಯುಕ್ತರಿಂದ ಖಡಕ್ ಎಚ್ಚರಿಕೆ

    ನಾಳೆ ಕರ್ನಾಟಕ ಬಂದ್- ಬೆಂಗ್ಳೂರು ನಗರ ಪೊಲೀಸ್ ಆಯುಕ್ತರಿಂದ ಖಡಕ್ ಎಚ್ಚರಿಕೆ

    ಬೆಂಗಳೂರು: ರೈತರ ಸಾಲಮನ್ನಾ ಕುರಿತಂತೆ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನಾಳೆ ಯಾವುದೇ ಬಂದ್ ಗೆ ಅವಕಾಶವಿಲ್ಲ. ಒಂದು ವೇಳೆ ಬಂದ್ ಗೆ ಮುಂದಾದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಬಂದ್ ಮಾಡುವವರಿಗೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇಂದು ಸಂಜೆಯೊಳಗಡೆ ಸಾಲಮನ್ನಾ ಆಗದಿದ್ರೆ ಬಿಜೆಪಿಯಿಂದ ಸೋಮವಾರ ಕರ್ನಾಟಕ ಬಂದ್

    ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಬಂದ್ ಮಾಡದಂತೆ ಮನವಿ ಮಾಡಲಾಗಿದ್ದು, ನಗರದ ಎಲ್ಲಾ ಡಿಸಿಪಿಗಳಿಗೆ ಬಂದ್ ಮಾಡುವವರ ವಿರುದ್ಧ ಸೂಕ್ತ ಕ್ರಮ ವಹಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    ಫಿಲಂ ಚೇಂಬರ್ ನಿಂದ ಬೆಂಬಲವಿಲ್ಲ: ನಾಳೆ ನಡೆಯಲಿರುವ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಹಕಾರ ಇಲ್ಲ. ಎಂದಿನಂತೆ ಚಲನಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಇಲ್ಲ. ಸ್ವಯಂ ಪ್ರೇರಿತರಾಗಿ ಯಾರಾದರೂ ಬೆಂಬಲ ಸೂಚಿಸಿದರೆ ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಅಂತ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಬಂದ್ ಎನ್ನುವುದಕ್ಕಿಂತ ರೈತರೇ ಬಂದ್ ಮಾಡ್ತಾರೆ- ಬಿಎಸ್‍ವೈ

    ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶುಕ್ರವಾರ ಬಹುಮತ ಸಾಬೀತುಪಡಿಸಿದ್ದು, ಈ ಮೊದಲು ನಡೆದ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಅಂದೇ ಸಂಜೆಯೊಳಗೆ ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿದ್ರು. ಒಂದು ವೇಳೆ ರೈತರ ಸಾಲಮನ್ನಾ ಮಾಡದಿದ್ದಲ್ಲಿ ಸೋಮವಾರ ಕರ್ನಾಟಕ ಬಂದ್ ಮಾಡುವುದಾಗಿ ಹೇಳಿ ತಮ್ಮ ಮುಖಂಡರೊಂದಿಗೆ ಸಭಾತ್ಯಾಗ ಮಾಡಿದ್ದರು. ಇದನ್ನೂ ಓದಿ: ಸಾಲ ಮನ್ನಾ ಮಾಡುತ್ತೇವೆ ಅಂತಾ ಹೇಳಲಿ ಬಂದ್ ಹಿಂಪಡೆಯುತ್ತೇವೆ: ಕೆ.ಎಸ್.ಈಶ್ವರಪ್ಪ

  • ಬಹುಮತ ಸಾಬೀತು ಬಳಿಕ ಸಾಲಮನ್ನಾ ಸಂಕಟ- ಅಧಿಕಾರಿಗಳೊಂದಿಗೆ ಸಿಎಂ ಎಚ್‍ಡಿಕೆ ಸಭೆ

    ಬಹುಮತ ಸಾಬೀತು ಬಳಿಕ ಸಾಲಮನ್ನಾ ಸಂಕಟ- ಅಧಿಕಾರಿಗಳೊಂದಿಗೆ ಸಿಎಂ ಎಚ್‍ಡಿಕೆ ಸಭೆ

    – ಇತ್ತ ಬಿಜೆಪಿ ಪ್ರತಿಭಟನೆಗೆ ನಿರ್ಧಾರ

    ಬೆಂಗಳೂರು: ಈಗಾಗಲೇ ವಿಶ್ವಾಸಮತ ಯಾಚಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಕುಮಾರಸ್ವಾಮಿಗೆ ಸಾಲಮನ್ನಾ ಸಂಕಟ ಎದುರಾಗಿದೆ. ಈ ಬಗ್ಗೆ ಶುಕ್ರವಾರ ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ರು.

    ಈ ವೇಳೆ ಅಧಿಕಾರಿಗಳು ಸಾಲಮನ್ನಾಗೆ ಇರುವ ಎಲ್ಲಾ ಅವಕಾಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಜ್ಯದ ಆರ್ಥಿಕ ಸ್ಥಿತಿ ಹೀನಾಯವಾಗಿಲ್ಲ. ಹಾಗಾಗಿ ಸಾಲಮನ್ನಾ ಘೋಷಣೆ ಕುರಿತು ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಸದ್ಯದಲ್ಲೇ ಎಚ್‍ಡಿಕೆ ನಿರ್ಧಾರ ಕೈಗೊಳ್ಳವ ಸಾಧ್ಯತೆ ಇದೆ ಅಂತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯಡಿಯೂರಪ್ಪರ ಮಾನಸಿಕ ಅಸ್ಥಿರತೆಯ ಭಾಷಣ ನೋಡಿ ಅಯ್ಯೋ ಅನ್ನಿಸಿತು: ಹೆಚ್‍ಡಿಕೆ

    ರೈತರ ಸಾಲಮನ್ನಾ ವಿಚಾರವಾಗಿ ಬಿಜೆಪಿಯೂ ಹೋರಾಟಕ್ಕೆ ಮುಂದಾಗಿದೆ. ನಿನ್ನೆ ಸದನದಲ್ಲಿ ಗುಡುಗಿದ್ದ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಸೋಮವಾರದಿಂದ ಹೋರಾಟದ ಅಖಾಡಕ್ಕೆ ಇಳಿಯಲಿದ್ದಾರೆ. ರೈತರ ಸಾಲಮನ್ನಾಗೆ ಆಗ್ರಹಿಸಿ, ಪ್ರತಿಭಟನೆ ತೀವ್ರಗೊಳಿಸಲು ಬಿಜೆಪಿ ನಿರ್ಧರಿಸಿದೆ.

    ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಇರೋದ್ರಿಂದ ಬೆಂಗಳೂರು ನಗರ ಹೊರತುಪಡಿಸಿ, ಸೋಮವಾರ ಕರ್ನಾಟಕದ ಉಳಿದೆಡೆಗಳಲ್ಲಿ ಬಿಜೆಪಿ ಸ್ವಯಂಪ್ರೇರಿತ ಬಂದ್‍ಗೆ ಕರೆ ನೀಡಲಿದೆ. ಈ ನಡುವೆ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ನಿರ್ಧರಿಸಿದ್ದು, ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಜನರ ಸ್ವಯಂ ಪ್ರೇರಿತ ಬಂದ್‍ಗೆ ಬಿಜೆಪಿ ಬೆಂಬಲ ನೀಡುತ್ತಿದೆ : ಸಿಟಿ ರವಿ

  • ಕಾಂಗ್ರೆಸ್ – ಜೆಡಿಎಸ್‍ನದ್ದು ಅಪವಿತ್ರ ಮೈತ್ರಿ, ಕಿಚಡಿ ಸರ್ಕಾರ: ಶೆಟ್ಟರ್

    ಕಾಂಗ್ರೆಸ್ – ಜೆಡಿಎಸ್‍ನದ್ದು ಅಪವಿತ್ರ ಮೈತ್ರಿ, ಕಿಚಡಿ ಸರ್ಕಾರ: ಶೆಟ್ಟರ್

    ಹುಬ್ಬಳ್ಳಿ: ಕಾಂಗ್ರೆಸ್ ಜೆಡಿಎಸ್ ನದ್ದು ಅಪವಿತ್ರ ಮೈತ್ರಿ ಅನೈತಿಕವಾಗಿ ಮಾಡಿರುವ ಕಿಚಡಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

    ಜನಾದೇಶದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ನಡೆದುಕೊಂಡಿರುವುದು ಖಂಡನೀಯ. ಇವತ್ತು ಕರ್ನಾಟಕಕ್ಕೆ ಕರಾಳ ದಿನ. ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಮಂಡಿಯೂರಿದ್ದು ಜನರ ಆಕ್ರೋಶಕ್ಕೆ ಈ ಸರ್ಕಾರ ತುತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದರು.

    ಅಧಿಕಾರ ಹಂಚಿಕೆ ವಿಚಾರದಲ್ಲಿ ಗೊಂದಲ ಆಗಿದೆ. ಕೆಲವೇ ತಿಂಗಳಲ್ಲಿ ಸರ್ಕಾರದ ಪತನ ಪ್ರಾರಂಭವಾಗುತ್ತದೆ. ಅಪವಿತ್ರ ಮೈತ್ರಿಯಿಂದಾದ ಸರ್ಕಾರ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

    ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಮಾತು ಕೊಟ್ಟಂತೆ ನಡೆದುಕೊಳ್ಳಲಿ. ನಿಜವಾದ ಗಟ್ಸ್ ಇದ್ರೆ ರೈತರ ಸಾಲಮನ್ನಾ ಮಾಡಲಿ. ಈಗ ಸಬೂಬು ಹೇಳುತ್ತಿರುವುದು ಬೇಜವಾಬ್ದಾರಿಯ ಲಕ್ಷಣ. ಭರವಸೆ ಕೊಟ್ಟಂತೆ ನಡೆದುಕೊಳ್ಳದಿದ್ದರೆ ಜನರ ಕ್ಷಮಾಪಣೆ ಕೇಳಲಿ ಎಂದು ಆಗ್ರಹಿಸಿದರು.

    ಕುಮಾರಸ್ವಾಮಿಯವರಿಗೆ ರೈತರ ಬಗ್ಗೆ ಕಳಕಳಿಯಿಲ್ಲ, ಮುಖ್ಯಮಂತ್ರಿ ಆಗುವ ಹಪಾಹಪಿ ಮಾತ್ರ ಇದೆ. ರೈತರ ಸಾಲಮನ್ನಾ ಮಾಡದಿದ್ದರೆ ಕುಮಾರಸ್ವಾಮಿಯವರಿಗೆ ಪ್ರಮಾಣವಚನ ತೆಗೆದುಕೊಳ್ಳುವ ನೈತಿಕ ಹಕ್ಕಿಲ್ಲ. ಈ ಸರ್ಕಾರದ ಅಸ್ತಿತ್ವದ ಬಗ್ಗೆ ಪ್ರಶ್ನಾರ್ಹ ಚಿಹ್ನೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಉತ್ತರ ಕರ್ನಾಟಕಕ್ಕೂ ಪ್ರಾತಿನಿಧ್ಯ ಸಿಗುವ ಲಕ್ಷಣವಿಲ್ಲ. ಸಿಎಂ, ಡಿಸಿಎಂ ಇಬ್ಬರೂ ದಕ್ಷಿಣ ಕರ್ನಾಟಕದವರು. ಉತ್ತರ ಕರ್ನಾಟಕಕ್ಕೆ ಮೊದಲಿನಿಂದ ನಡೆದು ಬಂದ ಅನ್ಯಾಯ ಈಗಲೂ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಹಿಂದೆಯೂ ನಮ್ಮ ಸಂಪರ್ಕದಲ್ಲಿದ್ದರು, ಆದರೆ ಧೈರ್ಯವಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮ ಶಾಸಕರನ್ನು ಗೃಹಬಂಧನದಲ್ಲಿ ಇಟ್ಟಿದ್ದಾರೆ. ಅವರೆಲ್ಲಾ ರೆಸಾರ್ಟ್‍ನಿಂದ ಹೊರಗಡೆ ಬರಲಿ, ಆಮೇಲೆ ಚಿತ್ರಣ ಬದಲಾಗಲಿದೆ. ನಮ್ಮನ್ನು ಆಪರೇಷನ್ ಮಾಡಿ ಎಂದು ಅವರೇ ಬರುತ್ತಾರೆ. ಬಹುತೇಕ ಶಾಸಕರಿಗೆ ಕಾಂಗ್ರೆಸ್‍ನಲ್ಲಿರಲು ಮನಸ್ಸಿಲ್ಲ ಎಂದು ಗಂಭೀರ ಆರೋಪ ಮಾಡಿದರು.

  • ಸಮ್ಮಿಶ್ರ ಸರ್ಕಾರದಿಂದ ರೈತರ ಸಂಪೂರ್ಣ ಸಾಲ ಮನ್ನಾ ಡೌಟ್!

    ಸಮ್ಮಿಶ್ರ ಸರ್ಕಾರದಿಂದ ರೈತರ ಸಂಪೂರ್ಣ ಸಾಲ ಮನ್ನಾ ಡೌಟ್!

    ಮಂಗಳೂರು: ರೈತರ ಸಾಲಮನ್ನಾ ಕುರಿತು ಭಾವಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಗೊಂದಲದ ಹೇಳಿಕೆಯನ್ನು ಕೊಟ್ಟಿದ್ದಾರೆ.

    ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೂರ್ಣ ಬಹುಮತ ಬಂದ್ರೆ ರೈತರ ಸಾಲಮನ್ನಾ ಎಂದಿದ್ದೆ. ಆದರೆ ರಾಜ್ಯದ ಜನತೆ ಸಂಪೂರ್ಣ ಬಹುಮತ ಕೊಟ್ಟಿಲ್ಲ. ಆದರೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡುತ್ತೇನೆ ಅಂತ ಹೇಳಿದ್ದಾರೆ.

    ರೈತರ ಸಾಲಮನ್ನಾ ವಿಚಾರದಲ್ಲಿ ಯಾರೂ ಗಾಬರಿಯಾಗಬೇಕಾಗಿಲ್ಲ. ರಾಜ್ಯದ ರೈತರಿಗೆ ಸಂಪೂರ್ಣವಾದ ಸಹಕಾರ ಕೊಟ್ಟಾಗ ಸಾಲಮನ್ನಾ ಮಾಡುತ್ತೇನೆ ಅನ್ನೋ ಘೋಷಣೆ ಮಾಡಿದ್ದೆ. ಆದ್ರೆ ನನಗೆ ಸಂಪೂರ್ಣ ಸಹಕಾರ ಕೊಡದೇ ಇದ್ದರೂ, ಈ ಸಮ್ಮಿಶ್ರ ಸರ್ಕಾರದಲ್ಲಿ ನನ್ನ ರೈತ ಉಳಿಯಬೇಕು. ಹೀಗಾಗಿ ನನ್ನ ರೈತ ಉಳಿಯಲು ನಾನು ಏನ್ ಕಾರ್ಯಕ್ರಮ ಕೊಡುತ್ತೇನೆ ಹಾಗೂ ಘೋಷಣೆ ಮಾಡಿರುವುದೆಲ್ಲವನ್ನು ವಿಶ್ವಾಸ ಮತ ಸಾಬೀತು ಮಾಡಿದ ಬಳಿಕ ಹೇಳುತ್ತೇನೆ ಎಂದರು.

    ಇದೇ ವೇಳೆ ನಾಡಿನಲ್ಲಿ ಉತ್ತಮವಾದ ಮಳೆ ಹಾಗೂ ನನ್ನ ರೈತ ಉತ್ತಮವಾದ ಬೆಳೆಯನ್ನು ಬೆಳೆಯಬೇಕು ಅಂತ ನಾನು ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಅಂದ್ರು.

    ಪ್ರಚಾರದ ಸಂದರ್ಭದಲ್ಲಿ ನನ್ನ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು.