Tag: farmer

  • ಅನ್ನಭಾಗ್ಯ ಜಾಹೀರಾತಿನ ಅನ್ನದಾತನೊಂದಿಗೆ ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ವರ್ತನೆ

    ಅನ್ನಭಾಗ್ಯ ಜಾಹೀರಾತಿನ ಅನ್ನದಾತನೊಂದಿಗೆ ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ವರ್ತನೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಅನ್ನಭಾಗ್ಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅನ್ನದಾತನನ್ನು ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಪಶುವಿನಂತೆ ನೋಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಎಂ.ಸಿ.ರಾಜು ಆಸ್ಪತ್ರೆ ಸಿಬ್ಬಂದಿಯಿಂದ ಅವಮಾನಕ್ಕೊಳದ ರೈತ. ಇವರು ಮೂಲತಃ ಬೆಂಗಳೂರು ಗ್ರಾಮಂತರ ಜಿಲ್ಲೆಯ ಮಾರಹಳ್ಳಿ ನಿವಾಸಿಯಾಗಿದ್ದಾರೆ. ಇವರು ಮಾಜಿ ಸಿಎಂ ಸಿದ್ದರಾಮಯ್ಯನ ಕನಸಿನ ಯೋಜನೆಯಾಗಿದ್ದ ಅನ್ನಭಾಗ್ಯ ಜಾಹೀರಾತಿನಲ್ಲಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು.

    ರೈತ ರಾಜು ತನ್ನ ಮಗನನ್ನು ಕಿಡ್ನಿ ತೊಂದರೆಯ ಕಾರಣದಿಂದ ನಗರದ ವಾಣಿವಿಲಾಸ ಆಸ್ಪತ್ರೆಗೆ ಕರೆತಂದಿದ್ದರು. ಮಗ ನಂದರಾಜು ಕಿಡ್ನಿ ತೊಂದರೆಯಿಂದಾಗಿ ಅವನ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ಜೂನ್ 11ಕ್ಕೆ ಮಗನನ್ನು ವಾಣಿವಿಲಾಸ ಆಸ್ಪತ್ರೆಗೆ ಕರೆತಂದಿದ್ದರು. ಮಗನ ಅವಸ್ಥೆ ಕಂಡರೂ ಆಸ್ಪತ್ರೆಯ ಸಿಬ್ಬಂದಿಗಳು ಕ್ಯಾರೇ ಎನ್ನದೇ ಅಲ್ಲಿಂದ ಇಲ್ಲಿಗೆ ಓಡಾಡಿಸಿ ಕೊನೆಗೆ ದಾಖಲು ಮಾಡಿಕೊಂಡಿದ್ದಾರೆ.

    ವಾಣಿವಿಲಾಸ ಆಸ್ಪತ್ರೆಯಲ್ಲಿ ದಾಖಲಾಗಿಸಿದ್ದರೂ ಸಹ ಮಗ ನಂದರಾಜುವಿನ ತೊಂದರೆ ಕಡಿಮೆಯಾಗಿಲ್ಲ. ಹೀಗಾಗಿ ರೈತ ರಾಜಪ್ಪ ವಾಣಿವಿಲಾಸ ಆಸ್ಪತ್ರೆಯ ವೈದ್ಯರಾದ ಮೂರ್ತಿ ಹಾಗೂ ರಘುರವರನ್ನು ವಿಚಾರಿಸಿದಾಗ, ಬೇಜವಾಬ್ದಾರಿತನದಿಂದ ನಿಮಗೇನು ಹೊಟ್ಟೆ ಕೊಯ್ಯಬೇಕಾ, ಇಲ್ಲಿಂದ ಹೊರಡಿ ಎಂದು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡದಿಂದ ಬೇಸತ್ತ ರೈತ ತನ್ನ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡಿ ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

  • ಮಳೆಗಾಗಿ ಹಾವೇರಿ ರೈತರಿಂದ ಹೋಳಿಗೆ ಪೂಜೆ

    ಮಳೆಗಾಗಿ ಹಾವೇರಿ ರೈತರಿಂದ ಹೋಳಿಗೆ ಪೂಜೆ

    ಹಾವೇರಿ: ಬಿಟ್ಟು ಬಿಡದೇ ಸುರಿಯುವ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಮಳೆರಾಯ ಕೃಪೆ ತೋರದ ಪರಿಣಾಮ ರೈತರು ಮಳೆಗಾಗಿ ಹೋಳಿಗೆ ಪೂಜೆ ನೆರವೇರಿಸಿದ್ದಾರೆ.

    ರಾಜ್ಯದ ಹಲವು ಕಡೆ ಮಳೆ ನಿರಂತರವಾಗಿ ಸುರಿದ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳ, ಜಲಾಶಯಗಳು ತುಂಬಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಜಿಲ್ಲೆಯ ರೈತರು ಮಳೆಗಾಗಿ ಕುಂತ್ರೂ, ನಿಂತ್ರೂ ಮಳೆರಾಯನನ್ನೇ ನೆನೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಪ್ಯಾಟಿಬಸವೇಶ್ವರ ದೇವಸ್ಥಾನಕ್ಕೆ ವಿಭಿನ್ನ ರೀತಿಯಲ್ಲಿ ಬಸವೇಶ್ವರನಿಗೆ ಹೋಳಿಗೆ ಪೂಜೆ ಮಾಡುವ ಮೂಲಕ ವರುಣನಿಗಾಗಿ ಪ್ರಾರ್ಥಿಸಿದ್ದಾರೆ.

    ಪ್ಯಾಟಿ ಬಸವೇಶ್ವರನಿಗೆ 150 ಹೋಳಿಗೆಗಳನ್ನ ಮೂರ್ತಿಗೆ ಮೆತ್ತಿ ಪೂಜೆ ಸಲ್ಲಿಸಿದ್ದಾರೆ. ಈ ಹೋಳಿಗೆ ಅಭಿಷೇಕಕ್ಕೆ 25 ಕೆ.ಜಿ ಬೆಲ್ಲ, 15 ಕೆ.ಜಿ ಮೈದಾಹಿಟ್ಟು, 15 ಕೆ.ಜಿ ಕಡಲೆ ಬೇಳೆ ಮತ್ತು 5 ಕೆ.ಜಿ ಎಣ್ಣೆಯಿಂದ ಹೋಳಿಗೆ ತಯಾರಿಸಿ ದೇವರಿಗೆ ಅರ್ಪಿಸಿದ್ದಾರೆ.

    ಮಳೆ ಬಾರದೇ ಇದ್ದಾಗ ಪ್ಯಾಟಿ ಬಸವೇಶ್ವರನಿಗೆ ಹೋಳಿಗೆ ಪೂಜೆ ಮಾಡಿದರೆ ಮಳೆ ಬರುತ್ತದೆ ಎಂದು ನಂಬಿಕೆ ಇದೆ. ಹೀಗಾಗಿ ಪೂಜೆಯನ್ನು ಹಾವೇರಿ ರೈತರು ಕೈಗೊಂಡಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ವರುಣನ ಅವಕೃಪೆಯಾದಾಗ ರೈತರು ಹೋಳಿಗೆ ಪೂಜೆ ಮಾಡಿದ್ದರಿಂದ ಮಳೆ ಬಂದು ರೈತರ ಬದುಕು ಹಸನಾಗಿತ್ತು. ಹೀಗಾಗಿ ರೈತರು ಮತ್ತೆ ಬಸವೇಶ್ವರನಿಗೆ ಹೋಳಿಗೆ ಪೂಜೆ ಮಾಡೋ ಮೂಲಕ ವರುಣನ ಮೊರೆ ಹೋಗಿದ್ದಾರೆ.

  • ರೇಷ್ಮೆ ಬೆಲೆ ಕುಸಿತ, ಮನನೊಂದು ರೈತ ಆತ್ಮಹತ್ಯೆ!

    ರೇಷ್ಮೆ ಬೆಲೆ ಕುಸಿತ, ಮನನೊಂದು ರೈತ ಆತ್ಮಹತ್ಯೆ!

    ಕೋಲಾರ: ರೇಷ್ಮೆ ಬೆಲೆ ಕುಸಿತ ಹಾಗೂ ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲೂಕಿನ ಮಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಟ್ನಹಳ್ಳಿ ಗ್ರಾಮದ ವೆಂಕಟಪ್ಪ(55) ಆತ್ಮಹತ್ಯೆಗೆ ಶರಣಾದ ರೈತ. ವೆಂಕಟಪ್ಪ ಮಟ್ನಹಳ್ಳಿ ಗ್ರಾಮದಲ್ಲಿ 4 ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದರು. ಅಲ್ಲದೇ ಇತ್ತೀಚೆಗೆ ಬೆಳೆದ ರೇಷ್ಮೆಯನ್ನ ಮಾರುಕಟ್ಟೆಗೆ ಹಾಕಿದ್ದರು. ಮಾರುಕಟ್ಟೆಯಲ್ಲಿ ರೇಷ್ಮೆಗೆ ಪ್ರತಿ ಕೆಜಿಗೆ 200 ರಿಂದ 300 ರೂಪಾಯಿಗೆ ಮಾರಾಟವಾಗಿದ್ದರಿಂದ  ಬೇಸತ್ತ ರೈತ ವೆಂಕಟಪ್ಪ ಇಂದು ಮುಂಜಾನೆ ರೇಷ್ಮೆ ಬೆಳೆಯುವ ಮನೆ ಬಳಿ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ವೆಂಕಟಪ್ಪ ಕೆನರಾ ಬ್ಯಾಂಕ್, ಪ್ರಗತಿ ಗ್ರಾಮೀಣ ಬ್ಯಾಂಕ್ ಹಾಗೂ ಕೈ ಸಾಲ ಸೇರಿದಂತೆ ಸುಮಾರು 20 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು. ಬೆಳೆದ ರೇಷ್ಮೆ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲ ತೀರಿಸಲು ಭಯಪಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

    ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=Ak9d50WwJAY

  • ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ಬೆಂಗಳೂರು: ರಾಜ್ಯಾದ್ಯಂತ ಮಳೆರಾಯನ ಅಬ್ಬರ ಮತ್ತಷ್ಟು ಜೋರಾಗಿದೆ. ಕರಾವಳಿ, ಮಲೆನಾಡು ಜನರಿಗೆ ಸಾಕು ಅನ್ನಿಸುವಷ್ಟು ಮಳೆಯಾಗುತ್ತಿದ್ದರೆ, ಬಯಲು ಸೀಮೆಯ ಜನರಲ್ಲಿ ಖುಷಿಯೋ ಖುಷಿ. ಯಾಕಂದ್ರೆ ಎಲ್ಲಾ ಡ್ಯಾಮ್‍ಗಳಿಗೂ ಜೀವಕಳೆ ಬಂದಿದೆ.

    124.80 ಅಡಿ ಸಾಮರ್ಥ್ಯದ ಕೆಆರ್ ಎಸ್‍ನಲ್ಲೀಗ 121.40 ಅಡಿ ನೀರು ಬಂದಿದ್ದು, ಭರ್ತಿಗೆ ಮೂರು ಅಡಿ ಬಾಕಿ ಇದೆ. ಹೇಮಾವತಿಗೂ 3 ಅಡಿ ಬಾಕಿಯಿದ್ದು, ಎರಡು ಜಲಾಶಯಗಳು ಇವತ್ತೇ ಬಹುತೇಕ ತುಂಬಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನದಿ ತಟದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

    ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ನಂಜನಗೂಡಲ್ಲಿರುವ ಕಪಿಲಾ ನದಿ ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಮನೆಗಳು ಜಲಾವೃತಗೊಂಡಿದ್ದು, ಸ್ಥಳೀಯರು ಮನೆ ತೊರೆದು ಸಾಮಾನು ಸರಂಜಾಮುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅತ್ತ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಆಗುತ್ತಿರೋ ಕಾರಣ ಕೃಷ್ಣಾನದಿಗೆ ಮತ್ತಷ್ಟು ನೀರು ಹರಿದು ಬಂದಿದೆ. ಚಿಕ್ಕೋಡಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಮಾಲತಿ ನದಿ ತುಂಬಿ ಹರಿಯುತ್ತಿದೆ. ಗುಡ್ಡೇಕೇರಿ- ಬಿದರಗೋಡು ರಸ್ತೆ ಮೇಲೆ ಮೂರು ಅಡಿ ನೀರು ನಿಂತಿದ್ದು, ಶೃಂಗೇರಿ-ತೀರ್ಥಹಳ್ಳಿ ಸಂಪರ್ಕ ಬಂದ್ ಆಗಿದೆ. ಗ್ರಾಮೀಣ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಆಗುಂಬೆ ಘಾಟ್‍ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಆಗುಂಬೆ ಸನ್ ಸೆಟ್ ಪಾಯಿಂಟ್ ಬಳಿ ರಸ್ತೆ ಪಕ್ಕದಲ್ಲಿ ಭೂ ಕುಸಿದಿದ್ದು, ಸೂರ್ಯಾಸ್ತ ವೀಕ್ಷಣೆಗೆ ಸಾರ್ವಜನಿಕರಿಗೆ ನಿಷೇಧ ಹೇರಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿಕ್ಕ ಆಣೆಕಟ್ಟುಗಳೆಲ್ಲಾ ಭರ್ತಿ ಆಗಿದ್ದು, ರಸ್ತೆ, ಸೇತುವೆ, ಮನೆ ಗೋಡೆ, ಗುಡ್ಡಗಳೆಲ್ಲಾ ಕುಸಿಯುತ್ತಿವೆ.

    ರಾಮನಗರದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಚನ್ನಪಟ್ಟಣ, ಕನಕಪುರದಲ್ಲಿ ಸೇರಿ ಹಲವೆಡೆ ಮಳೆಯಾಗಿದ್ದು ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

    ಮಲೆನಾಡಿನಲ್ಲಿ ಸಾಕು ಅನ್ನುವಷ್ಟು ಮಳೆಯಾಗ್ತಿದ್ರೆ, ಬಿಸಿಲನಾಡು ರಾಯಚೂರು, ಧಾರವಾಡ, ಹಾವೇರಿಯಲ್ಲಿ ಮಾತ್ರ ವರುಣದೇವ ತನ್ನ ಕೃಪೆ ತೋರಿಲ್ಲ. ಉದ್ದು, ಹೆಸರು, ಎಳ್ಳು ಬಿತ್ತನೆ ಮಾಡಿದ್ದ ರೈತರು ಮೊಳಕೆ ಬಾರದೆ ನಷ್ಟ ಅನುಭವಿಸಿದ್ದಾರೆ. ಮೋಡಕವಿದ ವಾತಾವರಣವಿದ್ದರೂ ದೊಡ್ಡ ಮಳೆ ಬಾರದೆ ಕಂಗಾಲಾಗಿ ವಿಶೇಷ ಪೂಜೆಗಳನ್ನ ಮಾಡುತ್ತಿದ್ದಾರೆ. ಇತ್ತ ನವಲಗುಂದ ಪಟ್ಟಣದ ಬಿರಲಿಂಗೇಶ್ವರ ಯುವಕ ಮಂಡಳಿಯವರು ಮಳೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭಾರೀ ಮಳೆಯಾಗಿದೆ. ಮಳೆ ರುದ್ರನರ್ತನಕ್ಕೆ ನಗರದ ರಸ್ತೆಗಳು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ. ಮಿಂಟೋ ಸೇತುವೆಯ ಅಡಿ ಮಳೆ ನೀರು ತುಂಬಿ ಹೋಗಿದೆ. ರಸ್ತೆಗಳು ಕೆರೆಯಂತಾಗಿದ್ದು, ಹಲವಾರು ಬಸ್‍ಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ಯಗೊಂಡಿದೆ.

  • ರೈತ ಸಂಘದ ಮಧ್ಯೆ ಮಹಾ ಬಿರುಕು- ಕೋಡಿಹಳ್ಳಿ ಬೆಂಗ್ಳೂರಲ್ಲಿ ಕೂತು ರಾಜಕೀಯ ಮಾಡ್ತಿದ್ದಾರೆ ಅಂದ್ರು ರೈತರು!

    ರೈತ ಸಂಘದ ಮಧ್ಯೆ ಮಹಾ ಬಿರುಕು- ಕೋಡಿಹಳ್ಳಿ ಬೆಂಗ್ಳೂರಲ್ಲಿ ಕೂತು ರಾಜಕೀಯ ಮಾಡ್ತಿದ್ದಾರೆ ಅಂದ್ರು ರೈತರು!

    ಬೆಂಗಳೂರು: ರೈತ ಸಂಘದ ಮಧ್ಯೆ ಮಹಾ ಬಿರುಕು ಉಂಟಾಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಳಸಾ ಬಂಡೂರಿ ರೈತರು ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ ಬಂದಿಳಿದ ಮಹದಾಯಿ, ಕಳಸಬಂಡೂರಿ ರೈತರು ಸಂಪೂರ್ಣ ಸಾಲಮನ್ನಾ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಬೆಂಗಳೂರು ಚಲೋ ನಡೆಸಿದ್ದಾರೆ.

    ಈ ವೇಳೆ ಕೋಡಿಹಳ್ಳಿ ರೈತ ಮುಖಂಡರೇ ಅಲ್ಲ, ಕೋಡಿಹಳ್ಳಿ ಬೆಂಗಳೂರಿನಲ್ಲಿ ಕೂತು ರಾಜಕೀಯ ಮಾಡ್ತಾರೆ. ಕೋಡಿಹಳ್ಳಿ ಒಂದು ಸಂಘಟನೆ ಮಾಡಲಿ, ಅದು ಬಿಟ್ಟು ರಾಜಕೀಯ ಬಿಟ್ಟು ಬಿಡಲಿ. ಮೊನ್ನೆ ನಡೆದ ಹೋರಾಟಕ್ಕೂ ಕರೆದಿಲ್ಲ. ರಾಷ್ಟ್ರಪತಿಗಳ ಭೇಟಿ ಸಂದರ್ಭದಲ್ಲಿ ಈ ಹಿಂದೆ ರೈತರಿಂದ ದುಡ್ಡು ಕಲೆಕ್ಟ್ ಮಾಡಿದ್ರು. ಅವರ್ಯಾಕೆ ದುಡ್ಡು ವಸೂಲಿ ಮಾಡಬೇಕು? ಕೋಡಿಹಳ್ಳಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಹೋರಾಟಗಾರರ ಅವಶ್ಯಕತೆ ನಮಗಿಲ್ಲ ಅಂತ ಕೋಡಿಹಳ್ಳಿ ವಿರುದ್ಧ ರೈತರು ಕಿಡಿಕಾರಿದ್ದಾರೆ.

    ಚಳಿಗಾಲ ಅಧಿವೇಶನ ಸಮಯದಲ್ಲೂ ಪ್ರತಿ ರೈತರಿಂದ ಆರುನೂರು ರೂ. ತೆಗೆದುಕೊಂಡು ಒಂದು ದಿನ ಚಳಿಗಾಲ ಅಧಿವೇಶನ ನಡೆದಾಗ ಪ್ರತಿಭಟನೆ ಮಾಡಿ ಆರೆಸ್ಟ್ ಆಗಿ ನಾಟಕ ಮಾಡ್ತಾರೆ. ಇನ್ನು 21 ರಂದು ಹಾವೇರಿಯಲ್ಲಿ ನಡೆಯುವ ಸಮಾವೇಶ ಘೇರಾವ್ ಹಾಕುವ ಎಚ್ಚರಿಕೆಯನ್ನು ರೈತ ಸಂಘ ನೀಡಿದೆ. ಒಟ್ಟಿನಲ್ಲಿ ಸಾಲಮನ್ನಾದ ಹೋರಾಟದ ಮಧ್ಯೆಯೇ ರೈತರ ಮಧ್ಯೆ ಬಿರುಕು ಮೂಡಿದ್ದು, ಕೋಡಿಹಳ್ಳಿ ವಿರುದ್ಧ ಆಕ್ರೋಶ ಸ್ಫೋಟಗೊಂಡಿರುವುದು ಅಚ್ಚರಿ ಮೂಡಿಸಿದೆ.

    ಮೂರು ಪಕ್ಷದ ನಾಯಕರನ್ನ ಭೇಟೆ ಮಾಡ್ತೆವೆ ನಮಗೆ ನ್ಯಾಯ ದೊರಕಿಸಿ ಕೊಡಲಿ. ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರನ್ನ ಭೇಟಿ ಮಾಡ್ತೆವೆ. ಕುಮಾರಸ್ವಾಮಿ ಸಂಪೂರ್ಣ ಸಾಲಮನ್ನಾ ಮಾಡ್ತೀವಿ ಅಂತಾ ಹೇಳಿದ್ರು ಅದರಂತೆ ಮಾಡಲಿ. ಸಾಲಮನ್ನಾ, ಮಹಾದಾಯಿ ಯೋಜನೆ ಜಾರಿ ಮಾಡೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಕೇಂದ್ರಸರ್ಕಾರದ ಫಸಲ ಭೀಮ ಯೋಜನೆಯಿಂದ ಸರಿಯಾಗಿ ದುಡ್ಡು ಬರ್ತಿಲ್ಲ. ಹಣ ಬಂದಿದ್ದರು ಅಧಿಕಾರಿಗಳು ಹಣ ನುಂಗುತ್ತಿದ್ದಾರೆ. ನಮ್ಮ ರೈತರು ಸಾಕಷ್ಟು ಜನ ಬರುತ್ತಿದ್ದಾರೆ ನಮ್ಮ ಬೇಡಿಕೆ ಈಡೇರುವರೆಗೂ ಹೊರಾಟ ಮಾಡ್ತಿವಿ ಅಂತ ರೈತರು ಧಿಕ್ಕಾರ ಕೂಗುತ್ತಿದ್ದಾರೆ.

  • ಕಲಾಪಕ್ಕೆ ಇಂದಿನಿಂದ ಬಜೆಟ್ ಬಿಸಿ – ದೋಸ್ತಿ ಸರ್ಕಾರವನ್ನು ಹಣಿಯಲು ಬಿಜೆಪಿ ಸಜ್ಜು

    ಕಲಾಪಕ್ಕೆ ಇಂದಿನಿಂದ ಬಜೆಟ್ ಬಿಸಿ – ದೋಸ್ತಿ ಸರ್ಕಾರವನ್ನು ಹಣಿಯಲು ಬಿಜೆಪಿ ಸಜ್ಜು

    ಬೆಂಗಳೂರು: ಬಜೆಟ್ ಅಧಿವೇಶನದ 5ನೇ ದಿನವಾದ ಇಂದು ವಿಧಾನಸಭೆಯಲ್ಲಿ ಕದನ ಕುತೂಹಲ ಇದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಹೆಚ್‍ಡಿಕೆ ಉತ್ತರ ನೀಡಲಿದ್ದು, ವಿರೋಧ ಪಕ್ಷದ ನಾಯಕ ಬಿಎಸ್‍ವೈಗೆ ಟಾಂಗ್ ಕೊಡಲಿದ್ದಾರೆ.

    ಬೆಳಗ್ಗೆ 10.30ಕ್ಕೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ಆರಂಭದಲ್ಲೇ ಹೆಚ್‍ಡಿಕೆ ಉತ್ತರ ನೀಡಲಿದ್ದಾರೆ. ಅಪ್ಪ ಮಕ್ಕಳು, ಅಣ್ಣ ತಮ್ಮಂದಿರ ಸರ್ಕಾರ ಎಂಬ ಬಿಎಸ್‍ವೈ ಅಬ್ಬರಕ್ಕೆ ಮುಯ್ಯಿ ತೀರಿಸಲು ಹೆಚ್‍ಡಿಕೆ ಸಿದ್ಧವಾಗಿದ್ದಾರೆ ಎನ್ನಲಾಗಿದೆ.

    ಇಂದಿನ ವಿಧಾನ ಕಲಾಪ ಕದನ ಕುತೂಹಲ ಮೂಡಿಸಿದ್ದು, ಕುಮಾರಣ್ಣನ ವಾಗ್ಬಾಣದತ್ತ ಎಲ್ಲರ ಚಿತ್ತ ಇದೆ. ಆದ್ರೆ ಇದೇ ವೇಳೆ ಸಂಪೂರ್ಣ ಸಾಲಮನ್ನಾ ಸುಳಿಯಲ್ಲಿ ಹೆಚ್‍ಡಿಕೆ ಸಿಲುಕಿಸಲು ಬಿಎಸ್‍ವೈ ಆಂಡ್ ಬಿಜೆಪಿ ಪ್ಲ್ಯಾನ್ ಮಾಡಿದ್ದು, ಸದನದೊಳಗೆ ಹೋರಾಟ ನಡೆಸುವ ಸಾಧ್ಯತೆ ಹೆಚ್ಚಿದೆ.


    ಸದನದೊಳಗೆ ಬಿಜೆಪಿ ಪ್ರತಿಭಟನೆಗೆ ಸಜ್ಜಾಗಿದ್ರೆ, ಸದನದ ಹೊರಗೆ ರೈತರು ಬೀದಿಗಿಳಿಯಲಿದ್ದಾರೆ. ಸಂಪೂರ್ಣ ಸಾಲ ಮನ್ನಾಗೆ ಆಗ್ರಹಿಸಿ ಮೈತ್ರಿ ಸರ್ಕಾರದ ವಿರುದ್ಧ ಸಾವಿರಾರು ರೈತರು ಇಂದು ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ನಾಯಕತ್ವದಲ್ಲಿ ರಾಜ್ಯದ್ಯಾಂತ ರೈತರು ಬೆಂಗಳೂರಿಗೆ ಬಂದು ಬೆಳಗ್ಗೆ 10 ಗಂಟೆಗೆ ಫ್ರೀಡಂಪಾರ್ಕ್‍ನಿಂದ ಆನಂದ್ ರಾವ್ ವೃತ್ತದವರೆಗೆ ಜಾಥಾ ಬಂದು, ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಿದ್ದಾರೆ.

    ಕೇವಲ ಸುಸ್ತಿ ಬೆಳೆಸಾಲ ಮನ್ನಾ ಅನ್ನುವ ಪ್ರಸ್ತಾಪಕ್ಕೆ ರೈತರು ತೀವ್ರ ವಿರೋಧ ವಿರೋಧ ವ್ಯಕ್ತಪಡಿಸಿದ್ದಾರೆ. ಸುಸ್ತಿ ಬೆಳೆ ಸಾಲ ಹೆಚ್ಚು ಪ್ರಮಾಣದಲ್ಲಿ ಇಲ್ಲ, ಕೆಲವರಿಗಷ್ಟೇ ಅನುಕೂಲವಾಗಲಿದೆ. ಟ್ರಾಕ್ಟರ್ ಸಾಲ, ಬೋರ್‍ವೆಲ್ ಸಾಲ, ಕೃಷಿಗಾಗಿ ಬಂಗಾರ ಇಟ್ಟು ಪಡೆದ ಸಾಲ ಪರಿಗಣಿಸಿಲ್ಲ. ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಸಂಪೂರ್ಣ ಸಾಲ ಮನ್ನಾ ಮಾಡಲು ಆಗ್ರಹ ಹಾಗೂ ಸಾಲ ಮನ್ನಾ ಮಾಡುವ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಇದು ಸರಿಪಡಿಸಬೇಕು ಎಂಬ ಬೇಡಿಕೆಗಳನ್ನಿಟ್ಟು ರೈತರು ಇಂದು ಬೀದಿಗಿಳಿಯಲಿದ್ದಾರೆ.

  • ಸಾಲ ಮನ್ನಾ ಖುಷಿಯಲ್ಲಿದ್ದ ರೈತರಿಗೆ ಶಾಕ್

    ಸಾಲ ಮನ್ನಾ ಖುಷಿಯಲ್ಲಿದ್ದ ರೈತರಿಗೆ ಶಾಕ್

    ಬೆಂಗಳೂರು: ರೈತರ ಸಾಲಮನ್ನಾ ಸದ್ಯಕ್ಕೆ ಕಷ್ಟವಾಗಿದ್ದು, ಸಾಲ ನವೀಕರಣ ಮಾಡಿಲ್ಲದಿದ್ದರೆ ಹೊಸ ಸಾಲ ಇಲ್ಲ ಎಂದು ಸಾಲ ಮನ್ನಾದ ಖುಷಿಯಲ್ಲಿದ್ದ ರೈತರಿಗೆ ಸಮ್ಮಿಶ್ರ ಸರ್ಕಾರ ಶಾಕ್ ನೀಡಿದೆ.

    ಸದ್ಯಕ್ಕೆ ಸಾಲಮನ್ನಾ ಘೋಷಿಸಿದ್ದರೂ ಅದು ವಿಳಂಬವಾಗಲಿದೆ, ರೈತರ ಸಾಲಮನ್ನಾ ಆಗಲು ಕನಿಷ್ಠ 3 ತಿಂಗಳು ಬೇಕೇ ಬೇಕು. ಸಾಲಮನ್ನಾ ಪ್ರಕ್ರಿಯೆ ಆರಂಭ ಆಗೋದಕ್ಕೆ ಇನ್ನೂ ಒಂದು ತಿಂಗಳು ಬೇಕು. ಬ್ಯಾಂಕ್‍ ಗಳ ಜೊತೆ ಇನ್ನೂ ಸರ್ಕಾರ ಒಪ್ಪಂದ ಮಾಡಿಕೊಂಡಿಯೇ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಇನ್ನೂ ಸಾಲಮನ್ನಾದ ವಿವರಗಳನ್ನು ಬ್ಯಾಂಕಿನಿಂದ ಸರ್ಕಾರ ಪಡೆಯಬೇಕು. ಬ್ಯಾಂಕ್‍ ಗಳ ದಾಖಲಾತಿ ಕಂಪ್ಯೂಟರ್ ಗೆ ಅಪ್ಲೋಡ್ ಆಗಬೇಕು. ಅಂಕಿ ಅಂಶ ಪರಿಶೀಲನೆ ಬಳಿಕ ಅವುಗಳನ್ನು ವಿಶೇಷ ಘಟಕಕ್ಕೆ ರವಾನಿಸಬೇಕು. ಇನ್ನು ಆಧಾರ್ ಸಂಖ್ಯೆ, ರೈತರ ಜಮೀನಿನ ದಾಖಲೆಗಳನ್ನು ಪರಿಶೀಲಿಸಬೇಕು. ಖಾತೆಗಳಲ್ಲಿ ಭಿನ್ನತೆ ಕಂಡುಬಂದರೆ ಅದು ತಿರಸ್ಕೃತ ಆಗಲಿದೆ. ನಿಖರ ಖಾತೆ ಹೊಂದಿರುವವರಿಗೆ ಮಾತ್ರ ಸಾಲಮನ್ನಾ ಆಗಲಿದೆ.

    ಇದೇ ವೇಳೆ ಹಳೆ ಸಾಲ ಮನ್ನಾ ಆಗುವವರೆಗೂ ಹೊಸ ಸಾಲ ಸಿಕ್ಕಲ್ಲ. ಜೊತೆಗೆ ಹಳೆ ಸಾಲದ ಋಣಮುಕ್ತ ಪತ್ರ ಬ್ಯಾಂಕಿಂದ ಸಿಗಬೇಕು. ಸಾಲಮನ್ನಾ ಪ್ರಕ್ರಿಯೆ ವಿಳಂಬದಿಂದ ಹೊಸ ಸಾಲ ಕೂಡ ಅನುಮಾನ. ಹೊಸ ಸಾಲ ಪಡೆಯಲು ಕನಿಷ್ಠ 4-5 ತಿಂಗಳಾದರೂ ಬೇಕು ಎನ್ನಲಾಗುತ್ತಿದೆ. ಇದರಿಂದ ಸಂಪೂರ್ಣ ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತವಾಗಿದೆ.

  • ಸಾಲಮನ್ನಾ ಬೆನ್ನಲ್ಲೇ ರೈತ ಆತ್ಮಹತ್ಯೆ!

    ಸಾಲಮನ್ನಾ ಬೆನ್ನಲ್ಲೇ ರೈತ ಆತ್ಮಹತ್ಯೆ!

    ವಿಜಯಪುರ: ಸಮ್ಮಿಶ್ರ ಸರ್ಕಾರದ ನೂತನ ಬಜೆಟ್ ನಲ್ಲಿ ರೈತರ ಸಾಲಮನ್ನಾ ಘೋಷಣೆ ನಂತರವೂ ಮುದ್ದೇಬಿಹಾಳ ತಾಲೂಕಿನ ಆಲೂರು ಗ್ರಾಮದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಂಗಣ್ಣ(56) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲಬಾಧೆ ತಾಳಲಾರದೆ ಗುರುವಾರ ಸಂಜೆ ತಮ್ಮ ಜಮೀನಿನಲ್ಲೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತೊಗರಿ ಬೆಳೆ ಬೆಳೆಯಲು ರೈತ ಸಂಗಣ್ಣ, ಕೈಗಡ ರೂಪದಲ್ಲಿ 2 ಲಕ್ಷ ರೂಪಾಯಿ ಹಾಗೂ ವಿವಿಧ ಬ್ಯಾಂಕ್‍ಗಳಲ್ಲಿ 1.50 ಲಕ್ಷ್ಮ ರೂಪಾಯಿ ಸೇರಿದಂತೆ ಒಟ್ಟು 3.50 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಆದ್ರೆ ಇದೀಗ ಏಕಾಏಕಿ ತೊಗರಿ ಬೆಳೆ ಕೈಕೊಟ್ಟಿದ್ದರಿಂದ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹಾವೇರಿಯಲ್ಲಿ ರೈತರಿಗೆ ಕಾರಹುಣ್ಣಿಮೆ ಬಳಿಕ ಬಂಡಿ ಓಟದ ಖುಷಿ

    ಹಾವೇರಿಯಲ್ಲಿ ರೈತರಿಗೆ ಕಾರಹುಣ್ಣಿಮೆ ಬಳಿಕ ಬಂಡಿ ಓಟದ ಖುಷಿ

    ಹಾವೇರಿ: ಕಾರಹುಣ್ಣಿಮೆ ಹಬ್ಬ ಅಂದ್ರೆ, ಉತ್ತರ ಕರ್ನಾಟಕ ಭಾಗದ ರೈತರಿಗೆ ಖುಷಿ. ಎಂಥಾ ಕಷ್ಟಕಾಲ, ಬರಗಾಲ ಬಂದ್ರೂ ಸಹ ರೈತರು ಈ ಹಬ್ಬವನ್ನ ಮಾತ್ರ ಮರೆಯೋದಿಲ್ಲ. ಅದ್ರಲ್ಲೂ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆಯ ಬಂಡಿ ಓಟವನ್ನ ನಡೆಸ್ತಾರೆ.

    ಎರಡು ದಿನಗಳ ಕಾಲ ಬಂಡಿಗಳನ್ನ ಓಡಿಸಿ ಕಾರಹುಣ್ಣಿಮೆ ಸಂಭ್ರಮ ಆಚರಿಸ್ತಾರೆ. ಒಂಬತ್ತು ದಿನಗಳ ಉಪವಾಸ ವೃತ ಮಾಡುವ ವೀರಗಾರರು ರೈತರ ಬದಲಾಗಿ ಬಂಡಿಗಳನ್ನ ಓಡಿಸೋದು ಇಲ್ಲಿನ ವಿಶೇಷ. ಗ್ರಾಮದಲ್ಲಿ ಕಾರಹುಣ್ಣಿಮೆ ಹಬ್ಬದ ನಂತರ ಎತ್ತಿನ ಬಂಡಿ ಓಡಿಸಿ ಕರಿಹರಿಯೋ ಹಬ್ಬ ಆಚರಿಸ್ತಾರೆ.

    ಗ್ರಾಮದ ಭರಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎರಡು ದಿನಗಳ ಕಾಲ ಬಂಡಿಗಳನ್ನ ಓಡಿಸಲಾಗುತ್ತೆ. ಬಂಡಿಗಳನ್ನ ಓಡಿಸೋಕೆ ರೈತರ ಬದಲಾಗಿ ವೀರಗಾರ ಮನೆತನದವರು ತಯಾರಾಗಿರ್ತಾರೆ. ಕಾರಹುಣ್ಣಿಮೆ ಬಂಡಿ ಓಟದ ಮುಂಚಿನ ಒಂಬತ್ತು ದಿನಗಳ ಕಾಲ ಬಂಡಿ ಓಡಿಸೋ ವೀರಗಾರರು ಕಠಿಣ ಉಪವಾಸ ವೃತವನ್ನ ಕೈಗೊಳ್ತಾರೆ. ಕಠಿಣ ಉಪವಾಸ ಕೈಗೊಳ್ಳುವ ವೀರಗಾರರು ಕಾರಹುಣ್ಣಿಮೆಯ ಎರಡು ದಿನಗಳ ನಂತರ ಬಂಡಿ ಓಟಕ್ಕೆ ಅಣಿಯಾಗ್ತಾರೆ. ಅಲಂಕಾರಗೊಂಡಿರೋ ಬಂಡಿಯಲ್ಲಿ ಕೂತು ಬಂಡಿಯನ್ನ ಓಡಿಸಿ ಸಂಭ್ರಮಿಸ್ತಾರೆ.

    ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಬಂಡಿ ಓಡಿಸೋದು ನಡೆದುಕೊಂಡು ಬಂದಿದೆ. ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಆರಂಭವಾಗುವ ಪೂರ್ವದಲ್ಲಿ ರೈತರು ತಮ್ಮ ಸಂಗಾತಿಗಳಾದ ಎತ್ತುಗಳಿಗೆ ಖುಷಿ ಪಡಿಸೋಕೆ ಅಂತಾ ಬಂಡಿ ಓಟ ಮಾಡ್ತಾರೆ. ಎರಡು ದಿನಗಳ ಕಾಲ ನಡೆಯೋ ಬಂಡಿ ಓಟವನ್ನ ನೋಡಲು ಸುತ್ತ ಮುತ್ತಲಿನ ಗ್ರಾಮಗಳ ಜನರ ದಂಡೇ ಗ್ರಾಮಕ್ಕೆ ಆಗಮಿಸುತ್ತೆ. ಯಾವುದೇ ಜಾತಿ ಬೇಧವೆನಿಸದೆ ಎಲ್ಲ ಜನಾಂಗದ ಜನರೂ ಸಹ ಒಂದಾಗಿ ಭಾವೈಕ್ಯತೆಯಿಂದ ಬಂಡಿ ಉತ್ಸವ ನಡೆಸಿಕೊಂಡು ಬರ್ತಿದ್ದಾರೆ. ತಂಡೋಪತಂಡವಾಗಿ ಬಂಡಿ ಉತ್ಸವ ನೋಡಲು ಬರೋ ಜನರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಂಡಿ ಉತ್ಸವವನ್ನ ಕಣ್ತುಂಬಿಕೊಂಡು ಮನೆಗೆ ವಾಪಸ್ಸಾಗ್ತಾರೆ. ಜನರು ಯಾವುದೇ ರೀತಿಯ ಅಂಜಿಕೆ ಅಳುಕಿಲ್ಲದೇ ಬಂಡಿ ಓಟ ನೋಡಿ ಸಂಭ್ರಮಿಸ್ತಾರೆ.

    ಉತ್ತರ ಕರ್ನಾಟಕ ಭಾಗದಲ್ಲಿ ಕರ್ಜಗಿ ಬಂಡಿ ಉತ್ಸವಕ್ಕೆ ವಿಶೇಷವಾದ ಪ್ರಾಧಾನ್ಯತೆ ಇದೆ. ಕರ್ಜಗಿ ಬಂಡಿ ಉತ್ಸವ ನೋಡಲು ಜಿಲ್ಲೆ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುತ್ತಾರೆ. ರೈತರಂತೂ ಫುಲ್ ಖುಷಿ ಖುಷಿಯಿಂದಲೇ ಬಂಡಿ ಉತ್ಸವದಲ್ಲಿ ಪಾಲ್ಗೊಂಡು ಕಾರಹುಣ್ಣಿಮೆ ಸಂಭ್ರಮ ಆಚರಿಸ್ತಾರೆ.

  • ದುಂದುವೆಚ್ಚಕ್ಕೆ ಕಡಿವಾಣ ಹಾಕ್ತೀನಿ ಅಂದಿದ್ದ ಸಿಎಂ ಪ್ರಮಾಣವಚನಕ್ಕೆ ಖರ್ಚಾಗಿರೋದು ಬರೋಬ್ಬರಿ 42ಲಕ್ಷ ರೂ.!

    ದುಂದುವೆಚ್ಚಕ್ಕೆ ಕಡಿವಾಣ ಹಾಕ್ತೀನಿ ಅಂದಿದ್ದ ಸಿಎಂ ಪ್ರಮಾಣವಚನಕ್ಕೆ ಖರ್ಚಾಗಿರೋದು ಬರೋಬ್ಬರಿ 42ಲಕ್ಷ ರೂ.!

    ಬೆಂಗಳೂರು: ದುಂದು ವೆಚ್ಚಕ್ಕೆ ಕಡಿವಾಣ ಹಾಕ್ತೀನಿ ಅಂತ ಹೇಳಿದ್ದ ಸಿಎಂ ಕುಮಾರಸ್ವಾಮಿ ಪ್ರಮಾಣ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ. ಮೋದಿ ವಿರುದ್ಧ ಶಕ್ತಿ ಪ್ರದರ್ಶನಕ್ಕಾಗಿ ನಡೆದ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರೋಬ್ಬರಿ 42 ಲಕ್ಷ ರೂ. ಖರ್ಚಾಗಿದೆ ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಮೇ 23 ರಂದು ವಿಧಾನಸೌಧ ಮುಂಭಾಗ ನಡೆದಿದ್ದ ಕೇವಲ ಐದು ನಿಮಿಷ ಕಾರ್ಯಕ್ರಮಕ್ಕಾಗಿ ಖರ್ಚಾಗಿದ್ದು 42,89,940 ರೂಪಾಯಿಯಂತೆ. ಅದರಲ್ಲಿ ಕೇವಲ ಹೂಗುಚ್ಛಕ್ಕಾಗಿ 65,100 ರೂಪಾಯಿ ಖರ್ಚಾಗಿರುವುದಾಗಿ ತಿಳಿದುಬಂದಿದೆ.

    ಪ್ರಮಾಣ ವಚನಕಾರ್ಯಕ್ರಮದಲ್ಲಿ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಯಾವತಿ ಭಾಗಿಯಾಗಿದ್ರು. ಇವರೆಲ್ಲರ ಖರ್ಚು ವೆಚ್ಚವೂ ಸೇರಿ ಒಟ್ಟು 42,89,940 ರೂಪಾಯಿ ವ್ಯಯವಾಗಿದೆ. ಆದ್ರೆ ಈ ಖರ್ಚಿನಲ್ಲಿ ಊಟ ತಿಂಡಿಗೆ ಆದ ವೆಚ್ಚವನ್ನ ಸೇರಿಸಿಲ್ಲ. ಹೀಗಾಗಿ ಊಟ ತಿಂಡಿ ವೆಚ್ಚ ಸಪರೇಟ್ ಇದೆ ಅಂತ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲಿಪಾಟೀಲ್ ಆರ್ ಟಿಐ ಮೂಲಕ ಮಾಹಿತಿ ಸಂಗ್ರಹಿಸಿದ್ದಾರೆ.

    ಒಟ್ಟಿನಲ್ಲಿ ದುಂದುವೆಚ್ಚ ಮಾಡಲ್ಲ ಅಂದಿದ್ದ ಸಿಎಂ ಕುಮಾರಸ್ವಾಮಿ ಸ್ವಂತ ದುಡ್ಡನ್ನ ಭರಿಸಲಿ. ಈ ಹಣದಲ್ಲಿ ರೈತರ ಸಾಲಮನ್ನಾ ಮಾಡಲಿ ಎಂದು ಮರಿಲಿಂಗೇಗೌಡ ಆಗ್ರಹಿಸಿದ್ದಾರೆ.