Tag: farmer

  • ಹಾಲಿನ ಡೈರಿಯಿಂದ ಮೋಸ- ಸಚಿವ ರೇವಣ್ಣ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ರೈತ ಮಹಿಳೆಯರಿಂದ ಪ್ರತಿಭಟನೆ

    ಹಾಲಿನ ಡೈರಿಯಿಂದ ಮೋಸ- ಸಚಿವ ರೇವಣ್ಣ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ರೈತ ಮಹಿಳೆಯರಿಂದ ಪ್ರತಿಭಟನೆ

     

    ಹಾಸನ: ಹಾಲಿನ ಹಣ ಸಂದಾಯ ಮಾಡದ ಕಾರಣ ಗ್ರಾಮದ ಡೈರಿ ಕಾರ್ಯದರ್ಶಿ ವಿರುದ್ಧ ಹಾಸನ ತಾಲೂಕಿನ ಎಜಿ ಕೊಪ್ಪಲದ ಬಂಡಿಹಳ್ಳಿ ರೈತರು ಪ್ರತಿಭಟನೆ ಕೈಗೊಂಡಿದ್ದಾರೆ.

    ಹಾಲಿನೊಂದಿಗೆ ಡೈರಿ ಮುಂದೆ ಧರಣಿ ಕುಳಿತ ರೈತ ಮಹಿಳೆಯರು, 18 ವರ್ಷಗಳಿಂದಲೂ ಡೈರಿಗೆ ಹಾಲು ಹಾಕುತ್ತಿದ್ದೇವೆ. ಆದ್ರೆ ಇದ್ರಿಂದ ನಮಗೆ ಒಂದು ರೂಪಾಯಿಯೂ ಲಾಭವಿಲ್ಲ. ಎರಡು ತಿಂಗಳಿಂದ ಹಾಲಿನ ಹಣ ಸಂದಾಯ ಮಾಡದೆ ಬಾಕಿ ಇದೆ. ಅಷ್ಟೇ ಅಲ್ಲದೇ ಹಾಲು ಅಳೆಯಲು ಕಂಪ್ಯೂಟರ್ ವ್ಯವಸ್ಥೆಗಳಿದ್ದು, ಅದರಿಂದ ಅಳತೆ ಮಾಡದೇ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಡೈರಿಯ ಬಳಿ ಸೆಕ್ರೆಟರಿ ಮತ್ತು ಹಾಲು ಅಳತೆ ಮಾಡುವವರು ಯಾರೂ ಬಂದಿಲ್ಲ. ಹಾಗೇ ಒಂದು ಚೀಲ ಬೂಸ ಕೊಟ್ರೆ, ಎರಡು ಚೀಲ ಬೂಸ ಎಂದು ಬರೆದುಕೊಳುತ್ತಾರೆ. ಹೀಗೆ ಮಾಡಿದರೆ ನಾವು ಏನು ಮಾಡೋದು ಎಂದು ಡೈರಿ ಕಾರ್ಯದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಸ್ಥಳಕ್ಕೆ ಸಚಿವ ರೇವಣ್ಣ ಬಂದು ಸಮಸ್ಯೆ ಬಗೆಹರಿಸಬೇಕೆಂದು ಮಹಿಳೆಯರು ಆಗ್ರಹಿಸುತ್ತಿದ್ದಾರೆ.

  • ರೈತನ ಪರಿಹಾರ ನೀಡದ ಎಸಿ ಕಚೇರಿ ಪೀಠೋಪಕರಣ ಜಪ್ತಿಗೆ ನ್ಯಾಯಾಲಯ ಆದೇಶ

    ರೈತನ ಪರಿಹಾರ ನೀಡದ ಎಸಿ ಕಚೇರಿ ಪೀಠೋಪಕರಣ ಜಪ್ತಿಗೆ ನ್ಯಾಯಾಲಯ ಆದೇಶ

    ಚಿತ್ರದುರ್ಗ: ನಾಲೆ ಕಾಮಗಾರಿಗೆ ರೈತನ ಜಮೀನು ವಶಪಡಿಸಿಕೊಂಡು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದಕ್ಕೆ ಕಂದಾಯ ಇಲಾಖೆ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಚಿತ್ರದುರ್ಗ ಜಿಲ್ಲಾ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.

    ಚೆಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರೈತ ಪಾಲಣ್ಣ ಅವರ ಎರಡೂವರೇ ಎಕರೆ ಜಮೀನಿನಲ್ಲಿ ನಾಲೆ ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ 30 ವರ್ಷಗಳಿಂದ 40 ಸಾವಿರ ರೂ. ಪರಿಹಾರದ ಹಣ ನೀಡದೆ ಕಂದಾಯ ಇಲಾಖೆ ಅಧಿಕಾರಿಗಳು ಸತಾಯಿಸುತ್ತಿದ್ರು.

    ಅಧಿಕಾರಿಗಳ ವರ್ತನೆಗೆ ಬೇಸತ್ತ ರೈತ ಪಾಲಣ್ಣ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ 30 ವರ್ಷದಿಂದ ವಿಳಂಬ ಮಾಡುತ್ತ ಬಂದಿದ್ದರಿಂದ ಬಡ್ಡಿ, ಅಸಲು ಸೇರಿ 2.29 ಲಕ್ಷ ರೂ. ನೀಡುವಂತೆ ಜಿಲ್ಲಾ ಸಿವಿಲ್ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಇದನ್ನು ಲೆಕ್ಕಿಸದ ಅಧಿಕಾರಿಗಳು ಪಾಲಣ್ಣ ಅವರಿಗೆ ಹಣ ನೀಡದೇ ಕಾಲ ದೂಡುತ್ತಿದ್ದರು. ಕೋರ್ಟ್ ಆದೇಶವನ್ನು ಪರಿಗಣಿಸದ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ಹಿಡಿದ ಜಿಲ್ಲಾ ಸಿವಿಲ್ ನ್ಯಾಯಾಲಯ ಚಿತ್ರದುರ್ಗ ಉಪವಿಭಾಗಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ.

  • ಸಕ್ಕರೆ ಕಾರ್ಖಾನೆ ಎದುರೇ ರೈತ ನೇಣಿಗೆ ಶರಣು!

    ಸಕ್ಕರೆ ಕಾರ್ಖಾನೆ ಎದುರೇ ರೈತ ನೇಣಿಗೆ ಶರಣು!

    ಬಾಗಲಕೋಟೆ: ಕಬ್ಬಿನ ಬಾಕಿ ಹಣ ನೀಡದಕ್ಕೆ ಬೇಸತ್ತು ಸಾಲಬಾಧೆ ತಾಳಲಾರದೇ ಮನನೊಂದು ರೈತನೋರ್ವ ಸಕ್ಕರೆ ಕಾರ್ಖಾನೆ ಎದುರಿಗೆ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಶೇಗುಣಸಿ ಗ್ರಾಮದ 42 ವರ್ಷದ ಹನುಮಂತ ಕಾಡಪ್ಪನವರ್ ಎಂಬವರೇ ಆತ್ಮಹತ್ಯೆಗೆ ಶರಣಾದ ರೈತ. ತೇರದಾಳ ಸಮೀಪದ ಸಾವರಿನ್ ಸಕ್ಕರೆ ಕಾರ್ಖಾನೆಗೆ 200 ಟನ್ ಕಬ್ಬು ಕಳಿಸಿ 5 ತಿಂಗಳಾಗಿತ್ತು. ಆದ್ರೆ ಈವರೆಗೂ ಕಾರ್ಖಾನೆ ಬಿಲ್ ಪಾವತಿಯಾಗಿರಲಿಲ್ಲ, ಬಿಲ್ ಗಾಗಿ ಹಲವು ಬಾರಿ ರೈತ ಹನುಮಂತ ಸಾಕಷ್ಟು ಸಕ್ಕರೆ ಕಾರ್ಖಾನೆಗೆ ಅಲೆದಾಡಿದ್ರು. ಆದ್ರೆ ಯಾವುದೇ ಪ್ರಯೋಜನೆ ಸಹ ಆಗಿರಲಿಲ್ಲ.

    ಈ ನಡುವೆ ಹನುಮಂತ್ ಬ್ಯಾಂಕ್ ಗಳಲ್ಲಿ ಸಾಲ ಸಹ ಮಾಡಿಕೊಂಡಿದ್ದರು. ಹೀಗಾಗಿ ಒಂದೆಡೆ ಸಾಲಬಾಧೆ, ಮತ್ತೊಂದೆಡೆ ಕಬ್ಬಿನ ಬಿಲ್ ಬಾರದೇ ಇದ್ದದ್ರಿಂದ ಹತಾಶೆಗೊಂಡ ಹನುಮಂತ ಕಾಡಪ್ಪನವರ, ರಾತ್ರಿ ಕಾರ್ಖಾನೆ ಮುಂದಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಾವರಿನ್ ಶುಗರ್ ಕಂಪನಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ ಅವ್ರಿಗೆ ಸೇರಿದ್ದಾಗಿದೆ.

    ಸ್ಥಳಕ್ಕೆ ತೇರದಾಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೆ.ಸಿ.ವ್ಯಾಲಿ ಯೋಜನೆಗೆ  ನೊರೆ ಮಿಶ್ರಿತ ನೀರು ಹರಿಸುವುದನ್ನ ನಿಲ್ಲಿಸಿ-ರೈತರಿಂದ ಪ್ರತಿಭಟನೆ

    ಕೆ.ಸಿ.ವ್ಯಾಲಿ ಯೋಜನೆಗೆ ನೊರೆ ಮಿಶ್ರಿತ ನೀರು ಹರಿಸುವುದನ್ನ ನಿಲ್ಲಿಸಿ-ರೈತರಿಂದ ಪ್ರತಿಭಟನೆ

    ಕೋಲಾರ: ಕೆ.ಸಿ.ವ್ಯಾಲಿ ಯೋಜನೆಗೆ ನೊರೆ ಮಿಶ್ರಿತ ಮಾರಕ ನೀರನ್ನು ಹರಿಸುವುದನ್ನು ನಿಲ್ಲಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.

    ಬುಧವಾರ ಯೋಜನೆ ಮೂಲಕ ಕಲುಷಿತ ನೊರೆ ನೀರು ಬಂದ ಹಿನ್ನೆಲೆ ಕೆಸಿ ವ್ಯಾಲಿ ಯೋಜನೆಗೆ ಜಿಲ್ಲೆಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಶುದ್ಧೀಕರಣ ಖಾತ್ರಿ ಇಲ್ಲದ ನೀರನ್ನ ಕೂಡಲೇ ನಿಲ್ಲಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ಮೂಲಕ ಒತ್ತಾಯ ಮಾಡಿದ್ರು. ಬೆಂಗಳೂರಿನ ತ್ಯಾಜ್ಯ ನೀರನ್ನ ಎರಡು ಹಂತದಲ್ಲಿ ಸಂಸ್ಕರಣ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಹರಿಸಿದ ಪರಿಣಾಮ ಕೋಲಾರ ಜಿಲ್ಲೆಯ ಕೆರೆಗಳನ್ನ ಕೊಳಕು ಮಾಡಲು ಮುಂದಾಗಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

    ಲಕ್ಷ್ಮಿಸಾಗರ ಕೆರೆಯ ಸುತ್ತಮುತ್ತಲ ಗಾಳಿಯಲ್ಲಿ ವಿಷಕಾರಕ ನೊರೆ ಹಾರಾಡಿದೆ. ಮಲೀನವಾದ ನೊರೆ ನೀರನ್ನು ಹರಿಸಿ ಅಂತರ್ಜಲ ಹಾಗೂ ಕೆರೆಯ ನೀರು ಹಾಳಾಗುತ್ತಿದೆ ಎಂಬ ಆತಂಕದಲ್ಲಿ ಜಿಲ್ಲೆಯ ರೈತರಿದ್ದಾರೆ. ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ಹಿನ್ನೆಲೆಯಲ್ಲಿ 126 ಕೆರೆಗಳನ್ನು ತುಂಬಿಸುವ 1,400 ಕೋಟಿ ವೆಚ್ಚದಲ್ಲಿ ಕೆ.ಸಿ.ವ್ಯಾಲಿ ಯೋಜನೆಯನ್ನ ರಾಜ್ಯ ಸರ್ಕಾರ ರೂಪಿಸಿದೆ.

    ಶುದ್ಧತೆಯ ಖಾತ್ರಿ ನೀಡದೆ ಹಲವು ಆರೋಪ-ಪ್ರತ್ಯಾರೋಪಗಳ ಮಧ್ಯೆ ನೀರು ಹರಿಸುತ್ತಿರುವ ಹಿನ್ನೆಲೆ ಜಿಲ್ಲೆಯ ಜಿನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

  • ಬಾದಾಮಿ ಪ್ರವಾಸದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮೌನಕ್ಕೆ ಶರಣು

    ಬಾದಾಮಿ ಪ್ರವಾಸದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮೌನಕ್ಕೆ ಶರಣು

    ಬಾಗಲಕೋಟೆ: ಬಾದಾಮಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು ಮೌನಕ್ಕೆ ಶರಣಾಗಿದ್ದು, ಮಾಧ್ಯಮಗಳು ಮಾತನಾಡಿಸಲು ಪ್ರಯತ್ನಿಸಿದಾಗ ನನಗೆ ಟೈಂ ಇಲ್ಲ ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.

    ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ನನಗೆ ಟೈಂ ಇಲ್ಲ ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.

    ಬಾದಾಮಿ ತಾಲೂಕಿನ ಬಿ.ಎನ್.ಜಾಲಿಹಾಳ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದ ರೈತ ಸಣ್ಣಪ್ಪ ಹಾದಿಮನಿ ಮನೆಗೆ ಇಂದು ಭೇಟಿ ನೀಡಿದ್ದಾರೆ. ಮೃತ ರೈತನ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ರೂಪಾಯಿಗಳ ಪರಿಹಾರದ ಚೆಕ್ ಅನ್ನು ವಿತರಿಸಿದ್ದಾರೆ.

    ಭೇಟಿ ವೇಳೆ ಬಿ.ಎನ್.ಜಾಲಿಹಾಳ ಗ್ರಾಮದಲ್ಲಿ ತುಂಬಿ ತುಳಕುತ್ತಿರುವ ಗಲೀಜನ್ನು ಕಂಡು, ಚರಂಡಿ ಸ್ವಚ್ಛ ಮಾಡದ್ದಕ್ಕೆ ಪಟ್ಟದಕಲ್ಲು ಪಂಚಾಯತ್ ಪಿಡಿಒಗೆ ತರಾಟೆ ತೆಗೆದುಕೊಂಡಿದ್ದಾರೆ. ಮೊದಲು ಸ್ವಚ್ಛತೆಗೆ ಆದ್ಯತೆ ಕೊಡಬೇಕು, ಇಲ್ಲದಿದ್ದರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಪ್ರತ್ಯೇಕ ಕಡೆ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಕಾರ್ಮಿಕ ಹಾಗೂ ಇಬ್ಬರು ರೈತರ ಸಾವು

    ಪ್ರತ್ಯೇಕ ಕಡೆ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಕಾರ್ಮಿಕ ಹಾಗೂ ಇಬ್ಬರು ರೈತರ ಸಾವು

    ಕಾರವಾರ: ವಿದ್ಯುತ್ ತಂತಿ ತಗುಲಿ ಪ್ರತ್ಯೇಕ ಕಡೆ ಮೂವರು ಸಾವನ್ನಪ್ಪಿದ ಘಟನೆ ಯಲ್ಲಾಪುರ ನಗರ ಹಾಗೂ ದುಂಡ್ಯಾನಕೊಪ್ಪ ಗ್ರಾಮದಲ್ಲಿ ನಡೆದಿದೆ.

    ನಾಗರಾಜ್ ಚನ್ನಪ್ಪ ಕಲಸೂರು(35) ಮೃತಪಟ್ಟ ಕಾರ್ಮಿಕ. ನಾಗರಾಜ್ ಮೂಲತಃ ಕಲಘಟಗಿ ತಾಲೂಕಿನ ತಂಬೂರು ಗ್ರಾಮದವರಾಗಿದ್ದಾರೆ ಎಂದು ತಿಳಿದು ಬಂದಿದೆ.  ಕಾರ್ಮಿಕ ಯಲ್ಲಾಪುರ ನಗರದ ಅರಣ್ಯ ಇಲಾಖೆ ಕಟ್ಟಡ ನಿರ್ಮಾಣದ ವೇಳೆ ಕಟ್ಟಡದ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಗೋಪಾಲ ಭಟ್ (60) ಹಾಗೂ ಗೋಪಾಲಕೃಷ್ಣ ರಾಮಚಂದ್ರ ಹೆಗಡೆ (50) ಮೃತ ರೈತರಾಗಿದ್ದಾರೆ.ಇವರು ಯಲ್ಲಾಪುರ ತಾಲೂಕಿನ ಡುಂಡ್ಯಾನಕೊಪ್ಪ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡಿ ಬರುತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಯಲ್ಲಾಪುರದಲ್ಲಿ ಪ್ರತ್ಯೇಕ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದು, ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

  • ಭತ್ತದ ಗದ್ದೆಯಲ್ಲಿ ಮೋದಿ, ಅಮಿತ್ ಶಾ, ಯಡಿಯೂರಪ್ಪ!

    ಭತ್ತದ ಗದ್ದೆಯಲ್ಲಿ ಮೋದಿ, ಅಮಿತ್ ಶಾ, ಯಡಿಯೂರಪ್ಪ!

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೊಲಗದ್ದೆಗಳಲ್ಲಿ ಕಟೌಟ್ ಗಳಾಗುವ ಮೂಲಕ ರೈತ ಸ್ನೇಹಿಯಾಗಿದ್ದಾರೆ.

    ಹೌದು. ಚಿಕ್ಕಮಗಳೂರು ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಭತ್ತದ ಗದ್ದೆಯಲ್ಲಿ ಈ ಮೂವರು ಬಿಜೆಪಿ ನಾಯಕರ ಕಟೌಟ್ ಗಳನ್ನು ಕಾವಲು ಕಾಯಲು ಬಳಕೆ ಮಾಡಲಾಗಿದೆ.

    ಚುನಾವಣೆಯಲ್ಲಿ ಬಳಸಿದ ಕಟೌಟ್ ಗಳನ್ನು ಇದೀಗ ರೈತರು ತಮ್ಮ ಜಮೀನಿನಲ್ಲಿ ಬೆಳೆ ಹಾಳು ಮಾಡುವ ಪ್ರಾಣಿ, ಪಕ್ಷಿಗಳನ್ನು ಬೆದರಿಸಲು ಬಳಸಿದ್ದಾರೆ. ರೈತರ ಜಮೀನಿನಲ್ಲಿ ಮೋದಿ, ಶಾ ಮತ್ತು ಬಿಎಸ್‍ವೈ ಕಟೌಟುಗಳು ರಾರಾಜಿಸುತ್ತಿದ್ದು, ನೋಡುಗರಿಗೆ ಮನರಂಜನೆ ನೀಡುತ್ತಿವೆ.

  • ನೀರು ಬದಲು ಹಾಲು ಬಳಸಿ ಸ್ನಾನ – ವಿನೂತನ ಪ್ರತಿಭಟನೆಗಿಳಿದ ಹೈನುಗಾರರು

    ನೀರು ಬದಲು ಹಾಲು ಬಳಸಿ ಸ್ನಾನ – ವಿನೂತನ ಪ್ರತಿಭಟನೆಗಿಳಿದ ಹೈನುಗಾರರು

    ಬೆಳಗಾವಿ: ಮಹಾರಾಷ್ಟ್ರದಲ್ಲಿ ಹಾಲಿನ ದರ ಕುಸಿತ ಹಿನ್ನೆಲೆಯಲ್ಲಿ ಅಲ್ಲಿನ ರೈತರು ಸ್ನಾನಕ್ಕೆ ಹಾಲನ್ನು ಬಳಸಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

    ಚಿಕ್ಕೋಡಿ ಸಮೀಪದ ಮಹಾರಾಷ್ಟ್ರದ ಕಾಗಲ ಗ್ರಾಮದಲ್ಲಿ ಕಡಿಮೆ ದರದ ಹಿನ್ನೆಲೆಯಲ್ಲಿ ಉತ್ಪಾದಕರು ಹಾಲನ್ನು ಸರಬರಾಜು ಮಾಡುತ್ತಿಲ್ಲ. ಬದಲಾಗಿ ಮನೆಯಲ್ಲಿ ಹಾಲನ್ನು ಬಕೆಟ್ ನಲ್ಲಿ ಸಂಗ್ರಹ ಮಾಡಿ ಸ್ನಾನ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

    ಪ್ರತಿಭಟನೆಯಲ್ಲಿ ವೇಳೆ ರೈತರು ಹಾಲಿನ ದರ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಹಾಲಿನ ದರ ಕುಸಿತ ಹಿನ್ನೆಲೆಯಲ್ಲಿ ಸೋಮವಾರ ಕರ್ನಾಟಕದಿಂದ ಸರಬರಾಜು ಮಾಡುತ್ತಿದ್ದ ಕೆಎಂಎಫ್ ವಾಹನಗಳನ್ನ ತಡೆದು ಹಾಲನ್ನು ರಸ್ತೆಗೆ ಚೆಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

  • ಸಾಲದ ಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ!

    ಸಾಲದ ಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ!

    ವಿಜಯಪುರ: ರೈತರೊಬ್ಬರು ಸಾಲದ ಬಾಧೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ಬಸವನಬಾಗೇವಾಡಿ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.

    60 ವರ್ಷ ವಯಸ್ಸಿನ ಬಸಪ್ಪ ಚಂದ್ರಪ್ಪ ಮುದಕವಿ ಆತ್ಮಹತ್ಯೆ ಮಾಡಿಕೊಂಡ ರೈತ. ಇವರು 3.50 ಎಕರೆ ಜಮೀನನ್ನು ಹೊಂದಿದ್ದು, ಬಿತ್ತನೆ ಮಾಡಲು 1 ಲಕ್ಷ ಸಾಲ ಪಡೆದಿದ್ದರು. ಬಾವಿ ಕೊರೆಸಲು ತೆಲಗಿ ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ ಸಾಲ ಮಾಡಿದ್ದರು. ಸಾಲವನ್ನು ತೀರಿಸಲಾಗದ ಹಿನ್ನೆಲೆಯಲ್ಲಿ ತಾನೇ ಕೊರೆಸಿದ್ದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರೇಷ್ಮೆಗೆ ಬೆಂಬಲ ಬೆಲೆ ಬಗ್ಗೆ ಎಚ್‍ಡಿಕೆ ಚರ್ಚೆಯ ಬೆನ್ನಲ್ಲೇ ರೈತ ಆತ್ಮಹತ್ಯೆ!

    ರೇಷ್ಮೆಗೆ ಬೆಂಬಲ ಬೆಲೆ ಬಗ್ಗೆ ಎಚ್‍ಡಿಕೆ ಚರ್ಚೆಯ ಬೆನ್ನಲ್ಲೇ ರೈತ ಆತ್ಮಹತ್ಯೆ!

    ರಾಮನಗರ: ರೇಷ್ಮೆ ಬೆಳೆ ಬೆಲೆ ಕುಸಿತ ಹಿನ್ನೆಲೆಯಲ್ಲಿ ರೈತನೋರ್ವ ಕ್ರಿಮಿನಾಶಕ ಸೇವಿಸಿ, ನೇಣುಬಿಗಿದುಕೊಂಡು ಸಾವನ್ನಪ್ಪಿದ ಘಟನೆ ರಾಮನಗರ ತಾಲೂಕಿನ ಕಟಮಾನದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ಕಟುಮಾನದೊಡ್ಡಿಯ ನಿವಾಸಿ ರೇಷ್ಮೆ ಬೆಳೆಗಾರ ಕೆಂಪಯ್ಯ ಮೃತ ದುರ್ದೈವಿ. ವಿವಿಧ ಬ್ಯಾಂಕ್ ಗಳಲ್ಲಿ 5 ಲಕ್ಷ ಸಾಲ ಮಾಡಿಕೊಂಡಿದ್ದ ಕೆಂಪಯ್ಯ ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಸೋಮವಾರ ರೇಷ್ಮೆ ಬೆಳೆಯ ಬೆಂಬಲ ಬೆಲೆಯ ಬಗ್ಗೆ ರಾಮನಗರದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಭೆ ನಡೆಸಿ ಚರ್ಚೆ ನಡೆಸಲಾಗಿತ್ತು. ಇಂದು ಮತ್ತೆ ಬೆಂಗಳೂರಿನಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ರೈತರ ಜೊತೆ ಚರ್ಚೆ ನಡೆಸಲು ಮುಂದಾಗಿರುವ ಬೆನ್ನಲ್ಲೇ ರೈತ ಸಾವನ್ನಪ್ಪಿದ್ದಾರೆ.

    ಮೃತ ರೈತ ಕೆಂಪಯ್ಯ ನಿನ್ನೆ ತನ್ನ ಪತ್ನಿಯ ಬಳಿ ರೇಷ್ಮೆಗೂಡಿನ ಬೆಲೆ ಹೆಚ್ಚಳವಾಗುತ್ತೆ ಎಂದು ಹೇಳಿದ್ದರು. ಆದ್ರೆ ಬೆಲೆ ಹೆಚ್ಚಳ, ಬೆಂಬಲ ಬೆಲೆ ಯಾವುದು ಆಗಿರಲಿಲ್ಲ. 125 ಮೊಟ್ಟೆಯ ರೇಷ್ಮೆ ಬೆಳೆ ಬೆಳೆದಿರುವ ಮೃತ ಕೆಂಪಯ್ಯ ಇಂದು ರೇಷ್ಮೆಹುಳುಗಳನ್ನು ಚಂದ್ರಿಕೆಗೆ ಬಿಟ್ಟು ಗೂಡು ಮಾಡಿ ಮಾರಾಟಕ್ಕೆ ಮುಂದಾಗಬೇಕಿತ್ತು. ಆದ್ರೆ ರೇಷ್ಮೆ ಬೆಳೆಗೆ ಬೆಲೆ ನಿಗದಿ, ಬೆಂಬಲ ಬೆಲೆ ಘೋಷಣೆಯಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.