Tag: farmer

  • ಅಳುತ್ತಾ ಕುಳಿತ್ರೆ ಆಗಲ್ಲ, ಕೆಲ್ಸ ಮಾಡಿ- ಸಿಎಂಗೆ ರಾಜ್ಯರೈತ ಸಂಘದ ಗೌರವಾಧ್ಯಕ್ಷ ಚಾಟಿ

    ಅಳುತ್ತಾ ಕುಳಿತ್ರೆ ಆಗಲ್ಲ, ಕೆಲ್ಸ ಮಾಡಿ- ಸಿಎಂಗೆ ರಾಜ್ಯರೈತ ಸಂಘದ ಗೌರವಾಧ್ಯಕ್ಷ ಚಾಟಿ

    ರಾಯಚೂರು: ಅಳುತ್ತಾ ಕುಳಿತರೆ ಆಗಲ್ಲ. ಇಲ್ಲಿ ಕೆಲಸ ಮಾಡಬೇಕು. ಕೇವಲ ಭಾವನಾತ್ಮಕತೆಯಿಂದ ರಾಜ್ಯ ಉದ್ಧಾರವಾಗಲ್ಲ ಅಂತ ರಾಜ್ಯರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಚಾಟಿ ಬೀಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಂಪೂರ್ಣ ಸಾಲಮನ್ನಾ ಮಾಡಲು ಆಗದಿದ್ದರೆ ಕುರ್ಚಿಯಿಂದ ಕೆಳಗೆ ಇಳಿಯಿರಿ. ಆದ್ರೆ ಬೇಜವಾಬ್ದಾರಿತನದ ಹೇಳಿಕೆ ನೀಡಬೇಡಿ ಅಂತ ಎಚ್ಚರಿಕೆ ನೀಡಿದ್ರು. ರೈತರಿಗೆ ಸಾಲಮನ್ನಾ ಕೇಳಲು ನೈತಿಕತೆಯಿಲ್ಲ ಅಂತ ಜಾತಿ ವ್ಯಾಮೋಹಕ್ಕೆ ಮತಹಾಕಿದ್ದಾರೆ ಎಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಚುನಾವಣಾ ಪೂರ್ವದಲ್ಲಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿ, 2 ಲಕ್ಷ ಮನ್ನಾ ಮಾಡಿದ ನಿಮಗೆ ಯಾವ ನೈತಿಕತೆಯಿದೆ. ರೈತರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅಳುತ್ತಾ ಕುಳಿತರೆ ಏನೂ ಆಗಲ್ಲ. ಇಲ್ಲಿ ಕೆಲಸ ಮಾಡಿ ತೋರಿಸಬೇಕು. ಕೇವಲ ಭಾವನಾತ್ಮಕತೆಯಿಂದ ರಾಜ್ಯದ ಜನರ ಉದ್ಧಾರವಾಗುವುದಿಲ್ಲ ಅಂದ್ರು.

    ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಬೇಜವಾಬ್ದಾರಿ ಹೇಳಿಕೆಗಳನ್ನ ನೀಡಬೇಡಿ ಅಂತ ಚಾಮರಸ ಮಾಲೀಪಾಟೀಲ್ ಅವರು ಇದೇ ಸಂದರ್ಭದಲ್ಲಿ ಸಿಎಂ ಅವರನ್ನು ಎಚ್ಚರಿಸಿದ್ದಾರೆ.

  • ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಯೇ ಹೊರತು, ಸಾಲದಿಂದಲ್ಲ: ಆತ್ಮಹತ್ಯೆಗೆ ಡಿಕೆಶಿ ವ್ಯಾಖ್ಯಾನ

    ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಯೇ ಹೊರತು, ಸಾಲದಿಂದಲ್ಲ: ಆತ್ಮಹತ್ಯೆಗೆ ಡಿಕೆಶಿ ವ್ಯಾಖ್ಯಾನ

    ಬೆಂಗಳೂರು: ರೈತರು ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ಸಾಲದ ಸುಳಿಯಿಂದಲ್ಲ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೊಸ ವ್ಯಾಖ್ಯಾನ ನೀಡಿದ್ದಾರೆ.

    ಸಿಎಂ ಕುಮಾರಸ್ವಾಮಿಯವರ ರೈತರ ಸಾಲಮನ್ನಾ ಬಳಿಕವೂ ರಾಜ್ಯದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ರೈತರು ಕೇವಲ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಸಾಲದ ಸುಳಿಯಿಂದಲ್ಲ. ಸರ್ಕಾರ ಸಾಲಮನ್ನಾ ಮಾಡಿದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಿದರು.

    ಯಾವುದೇ ವೈಯಕ್ತಿಕ ಸಮಸ್ಯೆಯಿಂದ ರೈತ ಸಾವನ್ನಪ್ಪಿದ್ದರೂ ಅದನ್ನು ಸಾಲದಿಂದಾಗಿ ಆತ್ಮಹತ್ಯೆ ಅಂತ ಬಿಂಬಿಸುತ್ತಿದ್ದಾರೆ. ಹೀಗಾಗಿ ಎಲ್ಲವೂ ಬೆಳೆ ಸಮಸ್ಯೆಯಿಂದಲೇ ರೈತರ ಆತ್ಮಹತ್ಯೆ ಎಂದು ಹೇಳಲು ಸಾಧ್ಯವಿಲ್ಲ. ನಾವು ವಾಹನಗಳಲ್ಲಿ ಹೋಗುತ್ತಿರುವಾಗ, ನಾವೇ ಅಪಘಾತ ಮಾಡಬೇಕಾಗಿಲ್ಲ, ಎದುರುಗಡೆಯವನು ಬಂದು ಅಪಘಾತ ಮಾಡಿದರೂ ಸಾವು ಸಂಭವಿಸುತ್ತೆ. ಎಲ್ಲದರ ಬಗ್ಗೆ ವರದಿ ನೋಡಿದ್ದೇನೆ, ಆದ್ದರಿಂದಲೇ ಮಾತನಾಡುತ್ತಿರುವುದು ಎಂದು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು.

    ಈ ವೇಳೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗಿದ್ದ ಸಾಲಮನ್ನಾ ಕುರಿತು ಅನುಮಾನಗಳಿಗೆ ಮಂಗಳವಾರ ಬ್ಯಾಂಕ್ ಅಧಿಕಾರಿಗಳು ಸಭೆ ನಡೆಸಿ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

  • ಬಯಲು ಸೀಮೆಯಲ್ಲಿ ಅಪರೂಪದ ಖರ್ಜೂರ ಬೆಳೆ- ತೋಟವನ್ನೇ ಮಾರುಕಟ್ಟೆಯಾಗಿ ಪರಿವರ್ತಿಸಿದ ವಿಭಿನ್ನ ರೈತ

    ಬಯಲು ಸೀಮೆಯಲ್ಲಿ ಅಪರೂಪದ ಖರ್ಜೂರ ಬೆಳೆ- ತೋಟವನ್ನೇ ಮಾರುಕಟ್ಟೆಯಾಗಿ ಪರಿವರ್ತಿಸಿದ ವಿಭಿನ್ನ ರೈತ

    ಚಿಕ್ಕಬಳ್ಳಾಪುರ: ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿ ಗ್ರಾಮದ ಬಳಿ ಭರ್ಜರಿಯಾಗಿ ಖರ್ಜೂರ ಬೆಳೆಯಲಾಗಿದೆ. ಬೆಂಗಳೂರು ಮೂಲದ ಕೃಷಿ ಪದವೀಧರ ದಿವಾಕರ್ ಚೆನ್ನಪ್ಪ ಖರ್ಜೂರವನ್ನ ಬೆಳೆದು ಸಾಧನೆ ಮಾಡಿದ್ದಾರೆ.

    ಹೆಚ್ಚಾಗಿ ಮರುಭೂಮಿ ಪ್ರದೇಶಗಳಲ್ಲಿ ಬೆಳೆಯುವ ಖರ್ಜೂರದ ಹಣ್ಣುಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗಿದೆ. ಈಚಲು ಹಣ್ಣುಗಳಂತೆ ಹಳದಿ ಬಣ್ಣದ ಈ ಖರ್ಜೂರದ ಹಣ್ಣುಗಳು ಒಣ ಖರ್ಜೂರಕ್ಕಿಂತ ತಿನ್ನಲು ಬಲು ರುಚಿಕರ ಹಾಗೂ ಆರೋಗ್ಯಕರ ಕೂಡ. ದಿವಾಕರ್ ಚೆನ್ನಪ್ಪ ಅವರು ತನ್ನ ತೋಟಕ್ಕೆ ಗ್ರಾಹಕರನ್ನ ಬರ ಮಾಡಿಕೊಂಡು ತಾವು ಬೆಳೆದ ಖರ್ಜೂರವನ್ನ ಮಾರಾಟ ಮಾಡಿ ಕೈ ತುಂಬಾ ಹಣ ಕೂಡ ಗಳಿಸಿದ್ದಾರೆ.

    ಕಳೆದ 4 ವರ್ಷಗಳಿಂದ ಖರ್ಜೂರದ ಫಸಲನ್ನ ಮಾರುಕಟ್ಟೆಗೆ ತರೆದೆ ತನ್ನದೇ ತೋಟಕ್ಕೆ ತನ್ನ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರನ್ನು ಕರೆದೊಯ್ದು ಖರ್ಜೂರವನ್ನ ಮಾರಾಟ ಮಾಡುತ್ತಿದ್ದಾರೆ. ಪ್ರತಿ ವರ್ಷ ಫಸಲು ಬಂದಾಗಲೆಲ್ಲಾ ಖರ್ಜೂರದ ಕೊಯ್ಲು ಹಬ್ಬ ಆಚರಿಸುತ್ತಾರೆ. ಹಬ್ಬದ ಅಂಗವಾಗಿ ತನ್ನ ಸ್ನೇಹಿತರು, ಸಂಬಂಧಿಕರು, ಪರಿಚಯಸ್ಥರಿಗೆಲ್ಲಾ ಆಹ್ವಾನ ನೀಡಿ, ಅವರಿಗೆ ಬೇಕಾದ ಖರ್ಜೂರ ಕಟಾವು ಮಾಡಿಕೊಳ್ಳೋಕೆ ಅವಕಾಶ ಮಾಡಿಕೊಡುತ್ತಾರೆ. ಇನ್ನೂ ತೋಟಕ್ಕೆ ಬಂದ ಗ್ರಾಹಕರು ತಮಗೆ ಬೇಕಾದಷ್ಟು ಖರ್ಜೂರ ಕಟಾವು ಮಾಡಿಕೊಂಡು ಹಣ ಪಾವತಿ ಮಾಡುತ್ತಾರೆ.

    ಈ ಬಾರಿಯೂ ಸಹ ಬೆಂಗಳೂರು ಸೇರಿದಂತೆ ನೆರೆಯ ಆಂಧ್ರ ಹಾಗೂ ಜಿಲ್ಲೆಯ ಹಲವು ಮಂದಿ ತೋಟಕ್ಕೆ ಭೇಟಿ ಕೊಟ್ಟು ಖರ್ಜೂರ ಕಟಾವು ಮಾಡಿಕೊಂಡರು. ಈ ಬಾರಿ ಪ್ರತಿ ಕೆಜಿ ಖರ್ಜೂರಕ್ಕೆ 300 ರೂಪಾಯಿ ನಿಗದಿ ಮಾಡಿದ್ದು, ಒಂದೇ ದಿನ ತೋಟಕ್ಕೆ ಬಂದ ಗ್ರಾಹಕರು 300 ಕೆಜಿ ಖರ್ಜೂರ ಖರೀದಿಸಿದ್ದಾರೆ. ವಿಶೇಷ ಅಂದ್ರೆ ಖರ್ಜೂರದ ಮರಗಳಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನ ಬಳಸಿಲ್ಲ. ಸಾವಯುವ ಗೊಬ್ಬರ ಬಳಸಲಾಗಿದೆ. ಹೀಗಾಗಿ ರೈತ ದಿವಾಕರ್ ಚೆನ್ನಪ್ಪರ ಸಾಧನೆ ಇತರರಿಗೆ ಮಾದರಿ ಅಂತ ಖುಷಿಪಟ್ಟರು.

    ಒಟ್ಟಿನಲ್ಲಿ ಬೆಲೆ ಇಲ್ಲ, ಮಾರುಕಟ್ಟೆ ವ್ಯವಸ್ಥೆ ಇಲ್ಲ, ಬೆಳೆದ ಬೆಳೆಗೆ ಹಣ ಸಿಗದೆ, ಆತಂಕಕ್ಕೆ ಒಳಗಾಗಿ ದಿಕ್ಕು ತೋಚದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ರೈತ ದಿವಾಕರ್ ಚೆನ್ನಪ್ಪರಂತೆ ಭಿನ್ನ-ವಿಭಿನ್ನ ಯೋಚನೆ ಮಾಡಿ ಬೆಳೆ ಬೆಳೆದು ಮಾರಾಟ ಮಾಡಬೇಕಿದೆ.

  • ಸಾಲಬಾಧೆ ತಾಳಲಾರದೆ ಬೇಸತ್ತು ರೈತ ಆತ್ಮಹತ್ಯೆ

    ಸಾಲಬಾಧೆ ತಾಳಲಾರದೆ ಬೇಸತ್ತು ರೈತ ಆತ್ಮಹತ್ಯೆ

    ಹಾವೇರಿ: ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಟ್ಟೀಹಳ್ಳಿ ಕುಂಚೂರು ಗ್ರಾಮದದಲ್ಲಿ ನಡೆದಿದೆ.

    ಶ್ರೀನಿವಾಸ್ ಚಕ್ರಸಾಲಿ (36) ಮೃತ ರೈತ. ಈತ ಆರು ಎಕೆರೆ ಜಮೀನನ್ನು ಹೊಂದಿದ್ದಾರೆ. ಶ್ರೀನಿವಾಸ್ ಬ್ಯಾಂಕ್‍ನಿಂದ ಹಾಗೂ ಕೈಸಾಲ ಅಂತಾ ಏಳು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಈ ಬಾರಿ ಹತ್ತಿ ಮತ್ತು ಮೆಕ್ಕೆಜೋಳದ ಬೆಳೆ ಕೈಕೊಟ್ಟಿದ್ದರಿಂದ ನಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಘಟನೆ ಕುರಿತು ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಯುವತಿಯೊಂದಿಗೆ ಜಮೀನಿನಲ್ಲಿದ್ದ ಯುವಕರನ್ನು ಪ್ರಶ್ನಿಸಿದಕ್ಕೆ ಎರಡು ಗ್ರಾಮಗಳ ನಡುವೆ ಗಲಾಟೆ!

    ಯುವತಿಯೊಂದಿಗೆ ಜಮೀನಿನಲ್ಲಿದ್ದ ಯುವಕರನ್ನು ಪ್ರಶ್ನಿಸಿದಕ್ಕೆ ಎರಡು ಗ್ರಾಮಗಳ ನಡುವೆ ಗಲಾಟೆ!

    ಮೈಸೂರು: ಇಬ್ಬರು ಯುವಕರೊಂದಿಗೆ ಯುವತಿಯೊಬ್ಬಳು ರೈತನ ಜಮೀನಿನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ವೇಳೆ ಯುವಕರನ್ನು ಪ್ರಶ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ಜನರ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹಂಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹಂಡುವಿನಹಳ್ಳಿ ಗ್ರಾಮದ ಬಳಿ ಯುವಕರಿಬ್ಬರು ಯುವತಿಯೊಬ್ಬಳನ್ನು ಜಮೀನಿಗೆ ಕರೆತಂದಿದ್ದರು. ಇದನ್ನು ಕಂಡ ಜಮೀನಿನ ಮಾಲೀಕ ದೇವಣ್ಣ ಯುವಕರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಯುವಕರು ತಮ್ಮ ಸ್ನೇಹಿತರನ್ನು ಕರೆಸಿಕೊಂಡು ಹಂಡುವಿನಹಳ್ಳಿ ಗ್ರಾಮಕ್ಕೆ ನುಗ್ಗಿ, ಜಮೀನಿನ ಮಾಲೀಕ ದೇವಣ್ಣನ ಪುತ್ರ ನಾಗರಾಜು ಮೇಲೆ ಹಲ್ಲೆ ಮಾಡಿದ್ದಾರೆ.

    ಯುವಕರ ಗುಂಪಿನ ವರ್ತನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಯುವಕರನ್ನು ಹಿಡಿದು ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ನಂಜನಗೂಡು ಗ್ರಾಮಾಂತರ ಪೊಲೀಸರು, ಹಂಡುವಿನಹಳ್ಳಿ ಗ್ರಾಮದ ರಾಮಮಂದಿರದಲ್ಲಿ ಕೂಡಿಹಾಕಿದ್ದ ಇಬ್ಬರು ಯುವಕರನ್ನು ತಮ್ಮ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕಾಡಾನೆ ದಾಳಿಗೆ ರೈತ ಬಲಿ- ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

    ಕಾಡಾನೆ ದಾಳಿಗೆ ರೈತ ಬಲಿ- ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

    ಬೆಂಗಳೂರು: ಕಾಡಾನೆ ದಾಳಿಯಿಂದಾಗಿ ರೈತನೋರ್ವ ಮೃತಪಟ್ಟ ಘಟನೆ ಕರ್ನಾಟಕ ತಮಿಳುನಾಡು ಗಡಿ ಪ್ರದೇಶದ ಹೊಸೂರಿನ ಸುಳಗಿರಿ ಬಳಿ ನಡೆದಿದೆ.

    ಮಧು ಅಲಿಯಾಸ್ ಚಿಕ್ಕಮಲ್ಲಪ್ಪ ಆನೆ ದಾಳಿಗೆ ಮೃತಪಟ್ಟ ರೈತ. ಇಂದು ಬೆಳಗ್ಗೆ ರೈತ ಮಧು ಮನೆಯಿಂದ ಹೊಲದತ್ತ ಹೊರಟಿದ್ದ ಸಂದರ್ಭದಲ್ಲಿ ಆನೆ ದಾಳಿ ಮಾಡಿದ್ದು, ಸ್ಥಳದಲ್ಲೇ ರೈತ ಮೃತಪಟ್ಟಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ, ಘಟನೆ ಸಂಬಂಧ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಈ ಭಾಗಗಳಲ್ಲಿ ಆನೆ ದಾಳಿ ಮಿತಿಮೀರಿದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೋಡಿ ಬೀಳುವ ಹಂತಕ್ಕೆ ತಲುಪಿದೆ ಪ್ರಸಿದ್ಧ ಮದಗದ ಕೆರೆ!

    ಕೋಡಿ ಬೀಳುವ ಹಂತಕ್ಕೆ ತಲುಪಿದೆ ಪ್ರಸಿದ್ಧ ಮದಗದ ಕೆರೆ!

    ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಪ್ರಸಿದ್ಧ ಕೆರೆಯಾದ ಮದಗದ ಕೆರೆಯು ಸಂಪೂರ್ಣ ತುಂಬಿದ್ದು, ಕೆರೆ ಕೋಡಿ ಬೀಳಲು ಕೆಲವೇ ಅಡಿಗಳು ಬಾಕಿ ಇದೆ.

    ಜಿಲ್ಲೆಯ ಗಿರಿ ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಸುಮಾರು 2,036 ಎಕರೆ ವಿಸ್ತಿರ್ಣದ ಕಡೂರಿನ ಪ್ರಸಿದ್ಧ ಮದಗದ ಕೆರೆ ಸಂಪೂರ್ಣ ತುಂಬಿಹೋಗಿದೆ. ಈ ಹಿನ್ನೆಲೆಯಲ್ಲಿ ಕೆರೆ ಕೋಡಿ ಬೀಳಲು ಕೆಲವೇ ಅಡಿಗಳು ಬಾಕಿ ಇವೆ.

    ಮದಗದ ಕೆರೆಯು ಎಂತಹುದೇ ಬರಗಾಲ ಬಂದರೂ, ಬತ್ತದೆ ಇರುವುದು ಇದರ ಇತಿಹಾಸವಾಗಿದೆ. ಕಳೆದೆರಡು ವರ್ಷಗಳ ಹಿಂದಿನ ಭೀಕರ ಬರಗಾಲದಲ್ಲೂ ಈ ಕೆರೆ ಕೋಡಿ ಬಿದ್ದಿತ್ತು. ಮದಗದ ಕೆರೆಗೆ ಬರೋದೆ ಮಾಯದಂತ ಮಳೆ ಎಂಬ ಜಾನಪದ ಗೀತೆ ಕೂಡ ಇದೆ.

    ಕಳೆದ ವರ್ಷ ನೀರಿನ ಪ್ರಮಾಣ ಕಡಿಮೆಯಾಗಿದ್ದ ಈ ಕೆರೆಯಲ್ಲಿ, ಈ ವರ್ಷ ನೀರು ತುಂಬಿರುವುದರಿಂದ ಕಡೂರು ಹಾಗೂ ಬೀರೂರಿನ ರೈತರಿಗೆ ಕುಡಿಯಲು ಹಾಗೂ ಬೆಳೆಗೆ ನೀರಿನ ಸೌಲಭ್ಯ ಸಿಕ್ಕಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಜಿಂಕೆಗಳ ಕಾಟದಿಂದ ಬೇಸತ್ತಿದ್ದಾರೆ ಬೀದರ್ ರೈತರು!

    ಜಿಂಕೆಗಳ ಕಾಟದಿಂದ ಬೇಸತ್ತಿದ್ದಾರೆ ಬೀದರ್ ರೈತರು!

    ಬೀದರ್: ಜಿಂಕೆಗಳ ಕಾಟದಿಂದಾಗಿ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಾಳ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.

    ಸಾಲ ಮಾಡಿ ಬೆಳೆದ ಬೆಳೆಗಳನ್ನು ಹಿಂಡು ಹಿಂಡಾಗಿ ಬರುವ ಜಿಂಕೆಗಳು ತಿಂದು ಹಾಕುತ್ತಾ ರೈತರ ಪಾಲಿನ ಶತ್ರುಗಳಾಗಿವೆ. ಅಲ್ಲದೇ ಚಟ್ನಾಳ್ ಗ್ರಾಮದ ಗ್ರಾಮಸ್ಥರು ಜಿಂಕೆಗಳ ಉಪಟಳಕ್ಕೆ ತೀವ್ರವಾಗಿ ಬೇಸತ್ತು ಹೋಗಿದ್ದಾರೆ.

    ಗದ್ದೆಯಲ್ಲಿ ಬೆಳೆದ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಗದ್ದೆಗಳಿಗೆ ಬರುವ ಜಿಂಕೆಗಳನ್ನು ಓಡಿಸುವುದು ಕಷ್ಟವಾಗಿದ್ದು, ಜಿಂಕೆಗಳು ಬರದಂತೆ ಬೇಲಿ ಹಾಕಲು ಸಾಧ್ಯವಾಗುತ್ತಿಲ್ಲ. ಮುಂಗಾರು ಹಂಗಾಮಿನ ಬೆಳೆಗಳಾದ ತೊಗರಿ, ಉದ್ದು, ಹೆಸರು, ಜೋಳ, ಸೋಯಾಬಿನ್ ಸಸಿಗಳನ್ನು ತಿಂದು ಹಾಳು ಮಾಡಿತ್ತಿವೆ. ಜಿಂಕೆಯ ದಾಳಿಯಿಂದಾಗಿ ಅಪಾರ ಪ್ರಮಾಣ ಬೆಳೆ ಹಾಳಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಕಬ್ಬಿನ ಗದ್ದೆಗಳಿಗೆ ಲಗ್ಗೆ ಇಡುವ ಜಿಂಕೆಗಳ ಹಿಂಡು ಫಲವತ್ತಾದ ಬೆಳೆಯನ್ನು ತಿಂದು ಹಾಕುತ್ತಿವೆ. ಇದರಿಂದ ಬೇಸತ್ತ ರೈತರು ಅರಣ್ಯ ಇಲಾಖೆಗೆ ಹಲವು ಬಾರಿ ದೂರನ್ನು ನೀಡಿದ್ದಾರೆ. ಆದರೆ ಈ ಕುರಿತು ಯಾವುದೇ ಪ್ರಯೋಜನವಾಗಿಲ್ಲ ಎಂದು ಅರಣ್ಯ ಇಲಾಖೆಯ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

  • ಭೂಕುಸಿತದಿಂದಾಗಿ ನದಿಯಲ್ಲಿ ಕೊಚ್ಚಿ ಹೋದ ಅಡಿಕೆ ಬೆಳೆ

    ಭೂಕುಸಿತದಿಂದಾಗಿ ನದಿಯಲ್ಲಿ ಕೊಚ್ಚಿ ಹೋದ ಅಡಿಕೆ ಬೆಳೆ

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

    ಪಶ್ಚಿಮ ಘಟ್ಟಗಳ ಸಾಲಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜಿಲ್ಲೆಯ ಕೊಪ್ಪ, ಕಳಸ, ಹೊರನಾಡು ಹಾಗೂ ಕುದುರೆಮುಖದ ಗುಡ್ಡಗಾಡು ಪ್ರದೇಶಗಳಿಂದ ನೀರು ಹರಿದು ಬರುತ್ತಿವೆ. ಮಳೆ ನೀರಿನಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

    ಮೂಡಿಗೆರೆ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ನಾಲ್ಕು ವರ್ಷಗಳ ಬಳಿಕ ಹೇಮಾವತಿ ಕಳೆದೊಂದು ತಿಂಗಳಿಂದಲೂ ಮೈದುಂಬಿ ಹರಿಯುತ್ತಿದ್ದಾಳೆ. ನೀರಿನ ಹರಿವಿನ ಪ್ರಮಾಣ ಯಥೇಚ್ಛವಾಗಿರುವುದರಿಂದ ನದಿಪಾತ್ರದ ಜಮೀನಿನಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದಾಗಿ 30 ಕ್ಕೂ ಹೆಚ್ಚು ಅಡಿಕೆ ಮರಗಳು ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿವೆ.

    ನೀರು ತೋಟದ ದಡದ ಮಣ್ಣನ್ನ ಕೊರೆಯುತ್ತಿರುವುದರಿಂದ ಅಡಿಕೆ, ಕಾಫಿ ಹಾಗೂ ಮೆಣಸು ಬೆಳೆಗಳು ನಾಶಹೊಂದಿ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಇನ್ನು ಅಪಾಯದಮಟ್ಟ ಮೀರಿ ಹರಿಯುತ್ತಿರುವ ಹೇಮಾವತಿ ನದಿಯಿಂದಾಗಿ ತೋಟದ ಮಾಲೀಕರು ಹಾಗೂ ಸ್ಥಳಿಯರಲ್ಲಿ ಆತಂಕ ಹೆಚ್ಚಾಗಿದೆ.

  • ರೈತರಿಗೆ ಒಂದೆಡೆ ಸಂತಸ- ಮತ್ತೊಂದೆಡೆ ಪ್ರವಾಹದ ಭೀತಿ!

    ರೈತರಿಗೆ ಒಂದೆಡೆ ಸಂತಸ- ಮತ್ತೊಂದೆಡೆ ಪ್ರವಾಹದ ಭೀತಿ!

    ರಾಯಚೂರು: ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ರೈತ ಒಂದೆಡೆ ಸಂತಸ ಪಡುತ್ತಿದ್ದರೆ, ಮತ್ತೊಂದೆಡೆ ಪ್ರವಾಹದ ಭೀತಿ ಎದುರಿಸುತ್ತಿದ್ದಾನೆ.

    ಹೌದು, ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಸಿರುವುದು ಒಂದೆಡೆ ರೈತರಿಗೆ ಸಂತಸ ತಂದರೆ, ಇನ್ನೊಂದೆಡೆ ಪ್ರವಾಹ ಭೀತಿ ಎದುರಾಗಿದೆ. ಜಲಾಶಯದಿಂದ 1 ಲಕ್ಷ ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆ ಜಿಲ್ಲೆಯ ನಡುಗಡ್ಡೆ ಗ್ರಾಮಗಳು ಜಲಾವೃತವಾಗಿವೆ.

    ಲಿಂಗಸುಗೂರಿನ ಮ್ಯಾದರಗಡ್ಡಿ, ಕಡದರ ಗಡ್ಡಿ ಸೇರಿದಂತೆ ಮೂರು ಗಡ್ಡೆಗಳ ಸುತ್ತಲೂ ನೀರು ಆವರಿಸಿಕೊಂಡಿದೆ. ಸಂಚಾರ, ವಿದ್ಯುತ್ ಸೇರಿದಂತೆ ಎಲ್ಲವೂ ಕಡಿತಗೊಂಡಿದೆ. ಜಾನುವಾರುಗಳನ್ನ ಕಟ್ಟಿಕೊಂಡು ಗಡ್ಡೆಯಲ್ಲೇ ಕುಟುಂಬಗಳು ಉಳಿದುಕೊಂಡಿವೆ. ಶೀಲಹಳ್ಳಿ ಸೇತುವೆ ಈಗಾಗಲೇ ಮುಳುಗಿದ್ದು, ಐದಾರು ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಂಡಿದೆ.

    ರಾಯಚೂರು ತಾಲೂಕಿನ ಕುರ್ವಕುಲಾ, ಕುರ್ವಾಕುರ್ದಾ ಗ್ರಾಮಗಳು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಹೆಚ್ಚಿನ ಪ್ರಮಾಣ ನೀರು ನದಿಗೆ ಹರಿದು ಬಂದಿದ್ದರಿಂದ ರೈತರ ಪಂಪ್ ಸೆಟ್ ಗಳು ಸಹ ನೀರಿನಲ್ಲಿ ಮುಳುಗಿಹೋಗಿವೆ.

    ಈಗಾಗಲೇ ಜಿಲ್ಲಾಡಳಿತವು ನೀರಿನಲ್ಲಿ ಈಜುವುದು, ತೆಪ್ಪ ಬಳಸುವುದನ್ನೂ ನಿಷೇಧಿಸಿದೆ. ಅಲ್ಲದೇ ನದಿ ತಟದ ಬಳಿ ಯಾರೂ ಹೋಗಬಾರದು ಎಂದು ಮುನ್ನೆಚ್ಚರಿಕೆ ನೀಡಿದೆ. ಅಗತ್ಯವಿದ್ದಲ್ಲಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.