Tag: farmer

  • ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಮನೆಯನ್ನೇ ತೊರೆದ ರೈತ!

    ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಮನೆಯನ್ನೇ ತೊರೆದ ರೈತ!

    ಕೊಪ್ಪಳ: ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದಾರೆ. ಆದ್ರೂ ರೈತರಿಗೆ ಬ್ಯಾಂಕ್ ಅಧಿಕಾರಿಗಳ ಕಿರುಕುಳ ಮಾತ್ರ ತಪ್ಪಿಲ್ಲ. ದಿನಕ್ಕೊಂದು ಕಿರುಕುಳ ಪ್ರಕರಣ ಬೆಳಕಿಗೆ ಬರ್ತಿದ್ದು, ಕೊಪ್ಪಳದ ದಾಳಿಂಬೆ ಬೆಳೆಗಾರರೊಬ್ಬರು ಮನೆಯನ್ನೇ ತೊರೆದು ಹೋಗಿದ್ದಾರೆ.

    ಮೂಲತಃ ಕೊಪ್ಪಳ ತಾಲೂಕಿನ ಕೊಡದಾಳ ನಿವಾಸಿಯಾಗಿರೋ ಬಸವರಾಜ್, ತಂದೆ ನಾಗಪ್ಪ ದ್ಯಾಮಣ್ಣ ಮಡಿವಾಳರ ಕಳೆದ ಏಳೆಂಟು ವರ್ಷಗಳ ಹಿಂದೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆರು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಗಾಗಿ ಆರು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು ಆದ್ರೆ ದಾಳಿಂಬೆ ಬೆಳೆಗೆ ದುಂಡಾಣು ರೋಗ ಬಿದ್ದು ಬೆಳೆ ಸಂಪೂರ್ಣ ಹಾಳಾಗಿ ಹೋಗಿತ್ತು. ಹೀಗಾಗಿ ನಾಗಪ್ಪ ದ್ಯಾಮಣ್ಣರಿಗೆ ಸಾಲ ಮರುಪಾವತಿ ಮಾಡಲಾಗಿರಲಿಲ್ಲ. ಇದೀಗ ಸಾಲ ಸುಮಾರು 12 ಲಕ್ಷದಷ್ಟಾಗಿದ್ದು, ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದರಂತೆ. ಜೊತೆಗೆ ವಸೂಲಾತಿ ನ್ಯಾಯಾಧೀಕರಣದ ಮೂಲಕ ಮುಂದಿನ ತಿಂಗಳು ಜಮೀನು ಹರಾಜು ಮಾಡುವುದಾಗಿ ನೋಟಿಸ್ ನೀಡಿದ್ದಾರೆ. ಇದರಿಂದ ಮನನೊಂದು ಸಾಲಗಾರ ನಾಗಪ್ಪ ದ್ಯಾಮಣ್ಣ ಮಡಿವಾಳರ ಮನೆ ಬಿಟ್ಟು ಹೋಗಿದ್ದಾರೆ.

    ಜಿಲ್ಲೆಯ ಸುಮಾರು ಹದಿನೈದಕ್ಕೂ ಹೆಚ್ಚು ದಾಳಿಂಬೆ ಬೆಳೆಗಾರರಿಗೆ ವಸೂಲಾತಿ ನ್ಯಾಯಾಧೀಕರಣದ ಮೂಲಕ ನೋಟಿಸ್ ನೀಡಿದ್ದಾರಂತೆ. ದಾಳಿಂಬೆ ಬೆಳೆಗಾರರು ಸಾಲ ಮನ್ನಾಗಾಗಿ ಕಳೆದ 9 ವರ್ಷದಿಂದ ಹೋರಾಟ ಮಾಡ್ತಿದ್ರು, ಇದುವರೆಗೂ ಯಾರೊಬ್ಬರು ಸ್ಪಂದಿಸಿಲ್ಲ, ಜೊತೆಗೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿರೋದರಿಂದ ರೈತರ ಗೋಳು ಹೇಳತೀರದ್ದಾಗಿದೆ ಅಂತ ದಾಳಿಂಬೆ ಬೆಳೆಗಾರರ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಮುಖ್ಯಮಂತ್ರಿ ಕುಮಾಸ್ವಾಮಿ ಅವರು ಸಾಲಮನ್ನಾ ಆದೇಶ ಮಾಡಿದ್ರು ರೈತರಿಗೆ ಕಿರುಕುಳ ನಿಂತಿಲ್ಲ. ಇದ್ರಿಂದ ಬೇಸತ್ತಿರೋ ರೈತರು ನಮಗಿರೋದು ಆತ್ಮಹತ್ಯೆ ಒಂದೇ ದಾರಿ ಅಂತ ಹೇಳುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಇನ್ನಾದ್ರೂ ಇತ್ತ ಗಮನ ಹರಿಸಿ ರೈತರ ಸಂಕಷ್ಟ ಬಗೆಹರಿಸ್ತಾರಾ ಕಾದು ನೋಡಬೇಕಷ್ಟೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ರೇಷ್ಮೆ ಬೆಳೆ ಮೊತ್ತವನ್ನು ಕೊಡಗು ಸಂತ್ರಸ್ತರಿಗೆ ನೀಡಿದ ಮಂಡ್ಯದ ರೈತ

    ರೇಷ್ಮೆ ಬೆಳೆ ಮೊತ್ತವನ್ನು ಕೊಡಗು ಸಂತ್ರಸ್ತರಿಗೆ ನೀಡಿದ ಮಂಡ್ಯದ ರೈತ

    ಮಂಡ್ಯ: ತಾವು ಬೆಳೆದ ರೇಷ್ಮೆಯನ್ನು ತಮ್ಮ ತೋಟದ ಮನೆಯಲ್ಲಿಯೇ ಹರಾಜು ಹಾಕಿ, ಅದರಿಂದ ಬಂದ ಸಂಪೂರ್ಣ ಹಣವನ್ನು ಕೊಡಗಿನ ಸಂತ್ರಸ್ತರ ನಿಧಿಗೆ ನೀಡುವ ಮೂಲಕ ಜಿಲ್ಲೆಯ ಮಳವಳ್ಳಿಯ ರೈತರೊಬ್ಬರು ಮಾನವೀಯತೆ ಮೆರೆದಿದ್ದಾರೆ.

    ಮಳವಳ್ಳಿ ಪಟ್ಟಣದ ರೈತ ಬಸವರಾಜು ಎಂಬವರು ಒಂದೂವರೆ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಈ ಬಾರಿ ಸುಮಾರು 150 ಚಂದ್ರಿಕೆಯಲ್ಲಿ 140 ಕೆಜಿ ರೇಷ್ಮೆ ಗೂಡು ಬೆಳೆ ಬಂದಿತ್ತು. ಇದರಿಂದ ಬರುವ ಹಣ ಕೊಡಗು ಸಂತ್ರಸ್ತರಿಗೆ ಆಸರೆಯಾಗಲಿ ಅಂತಾ ಬಸವರಾಜು ಬಯಸಿದ್ದರು. ಹೀಗಾಗಿ ಇಂದು ರೇಷ್ಮೆ ಗೂಡು ಖರೀದಿದಾರರನ್ನು ತಮ್ಮ ತೋಟಕ್ಕೆ ಕರೆಸಿದ್ದರು.

    ರೇಷ್ಮೆ ಖರೀದಿಗೆ ಬಂದಿದ್ದ ವ್ಯಾಪಾರಿಗಳು ಬಸವರಾಜು ಉದಾರತೆ ಮಚ್ಚಿ, ಕೊಡಗು ಸಂತ್ರಸ್ತರಿಗೆ ತಮ್ಮ ಪಾಲು ಕೂಡ ಅಂತಾ ಮಾರುಕಟ್ಟೆ ಬೆಲೆಗಿಂತ 40 ರೂ. ಹೆಚ್ಚುವರಿ ಹಣ ನೀಡಿ ರೇಷ್ಮೆ ಗೂಡು ಖರೀದಿಸಿದ್ದಾರೆ. ಇದರಿಂದಾಗಿ 30 ಸಾವಿರ ರೂ.ಗಿಂತಲೂ ಹೆಚ್ಚು ಹಣ ಸೇರಿದ್ದು, ಅದನ್ನು ಕೊಡಗು ಸಂತ್ರಸ್ತರ ನಿಧಿಗೆ ದಾನ ಮಾಡಿದ್ದಾರೆ.

    ಬಸವರಾಜು ನಿರ್ಧಾರಕ್ಕೆ ಕುಟುಂಬದವರೂ ಸಂತಸ ವ್ಯಕ್ತಪಡಿಸಿದ್ದಾರೆ. ಹೀಗೆ ಎಲ್ಲರೂ ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಬಸವರಾಜು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈತರು ಅಡವಿಟ್ಟ ಒಡವೆ ಹರಾಜು – ಕೆನರಾ ಬ್ಯಾಂಕ್‍ನಿಂದ ಬಹಿರಂಗ ನೋಟಿಸ್

    ರೈತರು ಅಡವಿಟ್ಟ ಒಡವೆ ಹರಾಜು – ಕೆನರಾ ಬ್ಯಾಂಕ್‍ನಿಂದ ಬಹಿರಂಗ ನೋಟಿಸ್

    ಮಂಡ್ಯ: ಜಿಲ್ಲೆಯ ತಳಗವಾದಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ನಿಂದ ರೈತರಿಗೆ ಅಡವಿಟ್ಟ ಒಡವೆಗಳನ್ನು ಹರಾಜು ಹಾಕಲಾಗುವುದು ಎಂದು ನೋಟಿಸ್ ಕಳುಹಿಸಲಾಗಿದೆ.

    2011 ರಿಂದ 2016 ರವರೆಗೆ ಒಡವೆ ಅಡವಿಟ್ಟ ಗ್ರಾಹಕರು ಅಸಲು, ಬಡ್ಡಿ ಪಾವತಿಸದೆ ಸುಸ್ತಿದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 28-08-18 ರಂದು ಒಡವೆಗಳನ್ನು ಹರಾಜು ಹಾಕಲಾಗುತ್ತದೆ ಎಂದು ಕೆನರಾ ಬ್ಯಾಂಕ್ ತನ್ನ ನೋಟಿಸ್ ನಲ್ಲಿ ತಿಳಿಸಿದೆ. ಈ ಸಂಬಂಧ ತಳಗವಾದಿ ಗ್ರಾಮದ ಹಲವೆಡೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ.

    ಸತತ ಬರಗಾಲದಿಂದ ಬಿತ್ತನೆ ಕಾರ್ಯಕ್ಕಾಗಿ ಒಡವೆಗಳನ್ನು ಅಡವಿಟ್ಟು ಸಾಲ ಪಡೆಯಲಾಗಿತ್ತು. ಈ ವರ್ಷ ಚೆನ್ನಾಗಿ ಮಳೆಯಾಗಿದ್ದು, ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳೋಣ ಎಂದು ಯೋಚಿಸಲಾಗಿತ್ತು. ಒಂದು ಬ್ಯಾಂಕ್ ನಮ್ಮ ಒಡವೆಗಳನ್ನು ಹರಾಜು ಹಾಕಿದ್ರೆ ವಿಷ ಕುಡಿಯದೇ ಬೇರೆ ಮಾರ್ಗ ನಮ್ಮ ಮುಂದಿಲ್ಲ ಎಂದು ನೋಟಿಸ್ ಪಡೆದಿರುವ ರೈತರು ಅಳಲು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಆದೇಶ ಹೊರಡಿಸಿ 12 ದಿನವಾದ್ರೂ ಕೊಪ್ಪಳದಲ್ಲಿ ರೈತರ ಸಾಲಮನ್ನಾ ಆಗಿಲ್ಲ!

    ಸಿಎಂ ಆದೇಶ ಹೊರಡಿಸಿ 12 ದಿನವಾದ್ರೂ ಕೊಪ್ಪಳದಲ್ಲಿ ರೈತರ ಸಾಲಮನ್ನಾ ಆಗಿಲ್ಲ!

    ಕೊಪ್ಪಳ: ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಪದೇ ಪದೇ ಈ ಬಗ್ಗೆ ಚರ್ಚೆಯಾಗ್ತಿದೆ. ಆದ್ರೆ, ಈವರೆಗೂ ರಾಜ್ಯದ ಯಾವೊಬ್ಬ ರೈತನ ಸಾಲವೂ ಮನ್ನಾ ಆಗಿಲ್ಲ.

    ಸತತ ಹೋರಾಟದ ನಂತರ ಸಿಎಂ ಕುಮಾರಸ್ವಾಮಿ ಇತ್ತೀಚೆಗಷ್ಟೇ ಸಹಕಾರಿ ಬ್ಯಾಂಕ್ ನಲ್ಲಿನ ಬೆಳೆ ಸಾಲ ಮನ್ನಾ ಆದೇಶ ಮಾಡಿದ್ರು. ಶುಕ್ರವಾರ ಸಿಎಂ ಕುಮಾರಸ್ವಾಮಿ ರಾಷ್ಟ್ರೀಕೃತ ಬ್ಯಾಂಕ್ ನ ಸಾಲವನ್ನೂ ಮನ್ನಾ ಮಾಡುವ ಬಗ್ಗೆಯೂ ಆದೇಶ ಮಾಡಿದ್ದಾರೆ. ಆದ್ರೆ, ಸರ್ಕಾರ ಸಹಕಾರಿ ಬ್ಯಾಂಕ್‍ನ ಸಾಲ ಮನ್ನಾದ ಆದೇಶ ಹೊರಡಿಸಿ ಬರೋಬ್ಬರಿ 12 ದಿನ ಕಳೆದರೂ ಬ್ಯಾಂಕ್ ಅಧಿಕಾರಿಗಳು ಮಾತ್ರ ನಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ.

    ಹೌದು. ಕೊಪ್ಪಳದ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ರೈತರು ಇದೀಗ ಬ್ಯಾಂಕ್ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಳ್ತಿದ್ದಾರೆ. ಅನ್ನದಾತರು ತಮ್ಮ ಸಾಲದ ದಾಖಲಾತಿ ಪ್ರದರ್ಶಿಸಿದ್ರೂ, ಇದ್ಯಾವುದೂ ನಮಗೆ ಸಂಬಂಧವಿಲ್ಲ ಎನ್ನುವಂತೆ ಬ್ಯಾಂಕ್ ಅಧಿಕಾರಿಗಳು ಕುಳಿತಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಗಿಫ್ಟ್!

    ಇದೇ ತಿಂಗಳ 14 ರಂದು, ಮೊದಲ ಹಂತದಲ್ಲಿ ಕೃಷಿಪತ್ತಿನ ಸಹಕಾರಿ ಬ್ಯಾಂಕ್‍ನಲ್ಲಿನ ಅಲ್ಪಾವಧಿ ಬೆಳೆ ಸಾಲಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ರು. ಒಂದೇ ವಾರದಲ್ಲಿ ಎಲ್ಲ ಸಹಕಾರಿ ಬ್ಯಾಂಕ್ ಅಧಿಕೃತ ಆದೇಶ ಪತ್ರ ತಲುಪಿಸಿ, ರೈತರಿಗೆ ಋಣಮುಕ್ತ ಪತ್ರ ನೀಡುವ ಭರವಸೆ ನೀಡಿದ್ರು. ಆದ್ರೆ, ಸಿಎಂ ಆದೇಶ ಮಾಡಿ 12 ದಿನ ಕಳೆದರೂ, ನಮಗೆ ಈ ಬಗ್ಗೆ ಯಾವುದೇ ಆದೇಶ ಬಂದಿಲ್ಲ ಅಂತ ಕೃಷಿಪತ್ತಿನ ಸಹಕಾರಿ ಬ್ಯಾಂಕ್ ಸಿಇಒ ರಾಘವೇಂದ್ರ ಹೇಳಿದ್ದಾರೆ.

    ಸಹಕಾರಿ ಬ್ಯಾಂಕ್‍ನಲ್ಲಿನ ಸಾಲಮನ್ನಾಕ್ಕೆ ಸರ್ಕಾರ ಹಲವು ಷರತ್ತು ವಿಧಿಸಿದ್ದು, ಇದರಿಂದ ರೈತರು ಸಾಲ ಮರುಪಾವತಿ ಮತ್ತು ರಿನಿವಲ್ ಮಾಡಿಕೊಳ್ಳುವ ಗೊಂದಲದಲ್ಲಿದ್ದಾರೆ. ಇತ್ತ ಅಧಿಕಾರಿಗಳ ಮಾತಿನಿಂದಲೂ ಅನ್ನದಾತರು ಸಂಕಷ್ಟಕ್ಕೀಡಾಗಿದ್ದಾರೆ.

    ರಾಜ್ಯಾದ್ಯಂತ ಒಟ್ಟು 21 ಡಿಸಿಸಿ ಬ್ಯಾಂಕ್ ವ್ಯಾಪ್ತಿಯ 5312 ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‍ಗಳಿದ್ದು, ಸುಮಾರು 22 ಲಕ್ಷಕ್ಕೂ ಹೆಚ್ಚು ರೈತರು ಸಾಲಮನ್ನಾ ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಗದಗ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಮುಂದೆಯೂ ಅನ್ಯಾಯ ಆಗಲಿದೆ. ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಿ ಶ್ರೀರಾಮುಲು ಮತ್ತೊಮ್ಮೆ ಆರೋಪಿಸಿದ್ದಾರೆ.

    ಕೊಡಗು ನೆರೆ ಹಾವಳಿ ಪ್ರಕರಣ ಹಿನ್ನಲೆ ಕುರಿತು ಮಾತನಾಡಿದ ಅವರು ಸರ್ಕಾರ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಲಿಲ್ಲ. ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಜನರ ಪ್ರಾಣಹಾನಿಯನ್ನು ತಡೆಯಬಹುದಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ದಿಂದ ಪ್ರಾಣ ಹಾನಿ, ಪ್ರಾಣಿಗಳ ಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಇಷ್ಟೆಲ್ಲಾ ಘಟನೆ ನಡೆದರೂ ಸಿಎಂ ತಡವಾಗಿ ಭೇಟಿ ನೀಡಿರುವುದು ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.

    ಸಚಿವ ಎಚ್.ಡಿ ರೇವಣ್ಣ ಬಿಸ್ಕೆಟ್ ಎಸೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಮಕ್ಕಳಾದ ರೇವಣ್ಣಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಇರಬೇಕಿತ್ತು. ಸರ್ಕಾರ ಮತ್ತು ಸಚಿವ ಸ್ಥಾನ ಅಹಂಕಾರ ಅವರಲ್ಲಿ ತುಂಬಿಕೊಂಡಿದೆ. ಇದು ಅಧಿಕಾರ ಅಹಂ ಬಹಳ ದಿನ ಉಳಿಯುವುದಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿದ್ದು, ಪ್ರಧಾನಿಗಳು ಕೇರಳ ಹಾಗೂ ಕರ್ನಾಟಕಕ್ಕೆ ಸೂಕ್ತ ಪರಿಹಾರ ನೀಡುತ್ತಾರೆ ಎಂದರು.

    ಸರ್ಕಾರ ಮನಸ್ಸು ಮಾಡಿದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬಹುದು. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಅಧಿಕೃತ ಆದೇಶ ಹೊರಡಿಸಲಿ. ರೈತರ ಸಾಲಮನ್ನಾ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

    ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

    ಮಂಡ್ಯ: ತಾನು ಬದುಕಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಲು ರೈತರೊಬ್ಬರು ಕಳೆದ ಮೂರು ವರ್ಷಗಳಿಂದ ಹರಸಾಹಸ ಪಡುತ್ತಿರುವ ಶೋಚನಿಯ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕಹಾರೋಹಳ್ಳಿ ಗ್ರಾಮದ ರಾಮೇಗೌಡ ದಾಖಲೆಗಳಲ್ಲಿ ಮೃತಪಟ್ಟು ನಿಜ ಜೀವನದಲ್ಲಿ ಬದುಕಿರುವ ರೈತನಾಗಿದ್ದಾರೆ. ಸರ್ಕಾರಿ ಅಧಿಕಾರಿಯ ಬೇಜವಾಬ್ದಾರಿತನದಿಂದ ಬದುಕಿರುವಾಗಲೇ ರೈತನಿಗೆ ಮರಣ ಪತ್ರ ನೀಡಿ, ರೈತನ ಬದುಕಿಗೆ  ಕೊಳ್ಳಿ ಇಟ್ಟಿದ್ದಾರೆ. ಹೀಗಾಗಿ ರಾಮೇಗೌಡರವರು ನಿಜವಾಗಿಯೂ ಸತ್ತೇ ಹೋಗಿದ್ದಾರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿ, ಮತದಾರರ ಪಟ್ಟಿಯಿಂದಲೂ ಹೆಸರನ್ನು ತೆಗೆದುಹಾಕಿದ್ದಾರೆ. ಇದರಿಂದಾಗಿ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಮತ್ತು ಅಧಿಕೃತವಾಗಿ ವ್ಯವಹಾರ ನಡೆಸಲು ಸಾಧ್ಯವಾಗದೇ ರೈತ ಕಂಗಾಲಾಗಿ ಹೋಗಿದ್ದಾರೆ.

    ತನಗಾಗುತ್ತಿರುವ ಕಷ್ಟವನ್ನು ಪರಿಹರಿಸಿಕೊಡಿ ಎಂದು ಸತತ ಮೂರು ವರ್ಷಗಳಿಂದಲೂ ರಾಮೇಗೌಡ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನೀನು ಈಗಾಗಲೇ ಸತ್ತು ಹೋಗಿದ್ದೀಯ, ಇನ್ನೇನು ಸರಿಪಡಿಸೋದು ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಅಧಿಕಾರಿಗಳ ಹೇಳಿಕೆಯಿಂದ ತೀವ್ರವಾಗಿ ಮನನೊಂದ ಅವರು ದಾಖಲೆಗಳಲ್ಲಿ ಮಾತ್ರ ಸತ್ತಿರುವ ನಾನು ನಿಜವಾಗಿಯೂ ಸತ್ತೇ ಹೋಗುತ್ತೇನೆ ಎಂದು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.

    ಆತ್ಮಹತ್ಯೆಗೆ ಯತ್ನಸಿದ ರಾಮೇಗೌಡರವರನ್ನು ಕುಟುಂಬಸ್ಥರು ಕಾಪಾಡಿಕೊಳ್ಳುವಲ್ಲಿ ಸಫಲರಾಗಿದರು. ಆದರೆ ಇನ್ನಾದರೂ ಸರ್ಕಾರಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಮಾತನಾಡದೇ, ಆಗಿರುವ ತಪ್ಪನ್ನು ಸರಿಪಡಿಸಕೊಡಬೇಕೆಂದು ಕುಟುಂಬಸ್ಥರು ಮನವಿಮಾಡಿಕೊಂಡಿದ್ದಾರೆ.

    ಏನದು ಘಟನೆ?
    2015ರಲ್ಲಿ ರಾಮೇಗೌಡರ ತಂದೆ ತಿಮ್ಮೇಗೌಡರು ಮೃತಪಟ್ಟ ಹಿನ್ನೆಲೆಯಲ್ಲಿ ಅರಕೆರೆ ಗ್ರಾಮದ ನಾಡಕಚೇರಿಯಲ್ಲಿ ಅವರು ಮರಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ವಿಲೇಜ್ ಅಕೌಂಟೆಂಟ್ ಲಿಂಗಪ್ಪಾಜಿ ಎಂಬವರ ಬೇಜವಾಬ್ದಾರಿತನದಿಂದಾಗಿ ಇಬ್ಬರ ಹೆಸರಲ್ಲೂ ಮರಣಪತ್ರ ನೋಂದಣಿಯಾಗಿದೆ. ಖುದ್ದು ತಲಶೀಲ್ದಾರರೇ ಸಹಿ ಹಾಕಿದ ಮರಣಪತ್ರಗಳನ್ನು ನಾಡಕಚೇರಿಯಿಂದ ರೈತ ಪಡೆದುಕೊಂಡು, ಆಘಾತಕ್ಕೆ ಒಳಗಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಳೆ ಕೊರತೆ: ಮೊಳಕೆ ಬಾರದ ಬಿತ್ತನೆ ಬೀಜ-ಸಂಕಷ್ಟದಲ್ಲಿ ರೈತ

    ಮಳೆ ಕೊರತೆ: ಮೊಳಕೆ ಬಾರದ ಬಿತ್ತನೆ ಬೀಜ-ಸಂಕಷ್ಟದಲ್ಲಿ ರೈತ

    ತುಮಕೂರು: ಕೊಡಗು, ಕರಾವಳಿ ಪ್ರದೇಶದಲ್ಲಿ ಮಹಾಮಳೆಗೆ ಜನರು ತತ್ತರಿಸಿದ್ದರೆ, ಇತ್ತ ತುಮಕೂರು ಜಿಲ್ಲೆಯಲ್ಲಿ ನಿಯಮಿತ ಮಳೆ ಬೀಳದೆ ಮತ್ತೆ ಬರ ಆವರಿಸುವ ಆತಂಕ ಜನರಲ್ಲಿ ಎದುರಾಗಿದೆ.

    ಮಳೆಯನ್ನೇ ನಂಬಿ ರೈತರು ಈಗಾಗಲೇ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದು, ಮಳೆ ಕೈಕೊಟ್ಟ ಕಾರಣದಿಂದ ಬಿತ್ತನೆ ಮಾಡಿದ್ದ ಬೆಳೆ ನೆಲಕಚ್ಚಿವೆ. ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ರಾಗಿ, ಭತ್ತ, ಶೇಂಗಾ ಮಳೆ ಇಲ್ಲದೆ ಕಮರಿ ಹೋಗಿವೆ.

    ಈಗಾಗಲೇ ಜಿಲ್ಲೆಯಲ್ಲಿ ಮುಂಗಾಯ ಕೈಕೊಟ್ಟಿದ್ದು, ಈ ವರ್ಷವಾದರು ಉತ್ತಮ ಬೆಳೆ ನಿರೀಕ್ಷೆ ಇದ್ದ ರೈತರು ನಿರಾಸೆ ಅನುಭವಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಯೊಂದಿಗೆ ತಮ್ಮ ಅಳಲು ತೊಡಿಕೊಂಡಿರುವ ರೈತರು, ಕಳೆದ ಬಾರಿಯೂ ಮಳೆ ಕೈಕೊಟ್ಟು ನಷ್ಟ ಅನುಭವಿಸಿದ್ದೆವು. ಈ ಬಾರಿಯೂ ಬರ ಪರಿಸ್ಥಿತಿ ಮುಂದುವರಿದಿದ್ದು, ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾದರು ಕೂಡ ನಮ್ಮಲ್ಲಿ ಮೋಡಗಳು ಮಾತ್ರ ಕಾಣಿಸಿಕೊಳ್ಳುತ್ತಿದೆ. ಆದರೆ ಇದುವರೆಗೂ ಒಂದು ಹನಿ ಮಳೆ ಬಂದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಬಹುತೇಕ ಸಣ್ಣ ಭೂ ಇಳುವರಿದಾರರೆ ಇರುವ ಕಾರಣ ಅಲ್ಪ ಸ್ವಲ್ಪ ಪ್ರದೇಶದಲ್ಲಿ ವೆಚ್ಚ ಮಾಡಿ ಬಿತ್ತನೆ ಮಾಡಿದ್ದ ರೈತರು ಕೈ ಚೆಲ್ಲಿ ಕೂರುವ ಪರಿಸ್ಥಿತಿ ಎದುರಾಗಿದೆ. ಇನ್ನು ಮಳೆಯ ಕೊರತೆ ಕಾರಣದಿಂದ ಜಾನುವಾರುಗಳ ಮೇವಿಗೂ ಸಮಸ್ಯೆ ಎದುರಾಗಿದ್ದು, ಹೈನುಗಾರಿಕೆಯನ್ನು ಉಪಕಸುಬಾಗಿ ಸ್ವೀಕರಿಸಿದ್ದ ರೈತ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ರೈತರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದು, ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಸಂಕಷ್ಟಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ರಾಜ್ಯದ ಒಂದು ಭಾಗದಲ್ಲಿ ಭಾರೀ ಮಳೆಗೆ ಜನ ತತ್ತರಿಸಿ ಮನೆ, ಜಮೀನು ಕಳೆದು ಕೊಂಡು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ. ಆದರೆ ಜಿಲ್ಲೆಯ ರೈತರು ಮಾತ್ರ ತಲೆ ಮೇಲೆ ಕೈ ಇಟ್ಟು ಮಳೆಗಾಗಿ ಆಕಾಶದತ್ತ ಮುಖ ಮಾಡಿ ನಿಂತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಚಾಯೆ ಕಾಣಿಸಿಕೊಂಡಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ಬಳ್ಳಾರಿ, ಕಲಬುರಗಿ ಜಿಲ್ಲೆಗಳ ಹಲವು ತಾಲೂಕು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಮಗ್ಳೂರಿನಲ್ಲಿ ಮುಂದುವರಿದ ಭೂಕುಸಿತ- 4 ಗ್ರಾಮಗಳ ಸಂಪರ್ಕ ಕಡಿತ

    ಚಿಕ್ಕಮಗ್ಳೂರಿನಲ್ಲಿ ಮುಂದುವರಿದ ಭೂಕುಸಿತ- 4 ಗ್ರಾಮಗಳ ಸಂಪರ್ಕ ಕಡಿತ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭೂ ಕುಸಿತ ಮುಂದುವರಿದಿದ್ದು, ಮಂಗಳವಾರವೂ ಸಹ ಎನ್.ಆರ್.ಪುರ ತಾಲೂಕಿನ ಖಾಂಡ್ಯ ಬಳಿಯ ಬಿದರೆ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದೆ.

    ಜಿಲ್ಲೆಯಾದ್ಯಂತ ವರುಣನ ಆರ್ಭಟ ಸದ್ಯಕ್ಕೆ ತಗ್ಗಿದೆ. ಆದರೆ ಮಳೆಯ ನಂತರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗುತ್ತಲೇ ಇದೆ. ಇದರಿಂದಾಗಿ ಜನ ಯಾವಾಗಾ ಏನಾಗುತ್ತೋ ಅನ್ನೋ ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಮಂಗಳವಾರವೂ ಸಹ ಸಂಜೆ ಸುಮಾರು 4.30ರ ವೇಳೆಗೆ ಬಿದಿರೆ ಗ್ರಾಮದ ಸತೀಶ್ ಭಟ್ ಎಂಬವರ ಕಾಫಿ ತೋಟದಲ್ಲಿ ಏಕಾಏಕಿ ಭೂ ಕುಸಿತವುಂಟಾಗಿದ್ದು, ಸುಮಾರು ಒಂದು ಎಕರೆಯಲ್ಲಿ ಬೆಳೆದಿದ್ದ ಅಡಿಕೆ, ಕಾಫಿ ಹಾಗೂ ಮೆಣಸು ಬೆಳೆಗಳು ಸಂಪೂರ್ಣ ನಾಶವಾಗಿ ಹೋಗಿದೆ. ಭೂ ಕುಸಿತದಿಂದಾಗಿ ರೈತ ಕಂಗಾಲಾಗಿ ಹೋಗಿದ್ದು, ಮತ್ತೆ ಎಲ್ಲಿ ಭೂ ಕುಸಿತವಾಗುತ್ತದೆಯೋ ಎನ್ನುವ ಭೀತಿಯಲ್ಲಿದ್ದಾರೆ.

    ಬುಧವಾರವು ಸಹ ಮಲೆನಾಡು ಭಾಗದಲ್ಲಿ ಮತ್ತೆ ರಸ್ತೆಗಳು ಕುಸಿತಗೊಂಡಿವೆ. ಇದರಿಂದಾಗಿ ಕಡವಂತಿ ಗ್ರಾಮ ಪಂಚಾಯಿತಿಗೆ ಸೇರುವ ನಾಲ್ಕು ಗ್ರಾಮಗಳು ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಳೆದುಕೊಂಡಿವೆ. ಅಲ್ಲದೇ ಬೊಗಸೆ ವಡ್ಡಿ ಗ್ರಾಮದ ಪ್ರಮುಖ ರಸ್ತೆ ಒಂದು ಕಡೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಇದರಿಂದಾಗಿ ವಾಹನಗಳು ಸಂಚರಿಸಲಾಗಿದೆ. ಗ್ರಾಮಸ್ಥರು ಕಾಲುನಡಿಗೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೇಸಾಯಕ್ಕಾಗಿ ಗೋವುಗಳಂತೆ ಪತ್ನಿ ಮತ್ತು ಮಗನನ್ನು ಬಳಸಿಕೊಂಡ ರೈತ!

    ಬೇಸಾಯಕ್ಕಾಗಿ ಗೋವುಗಳಂತೆ ಪತ್ನಿ ಮತ್ತು ಮಗನನ್ನು ಬಳಸಿಕೊಂಡ ರೈತ!

    ನೆಲಮಂಗಲ: ಜಾನುವಾರುಗಳು ಇಲ್ಲದ ಕಾರಣ ರೈತರೊಬ್ಬರು ಬೇಸಾಯಕ್ಕಾಗಿ ಗೋವುಗಳಂತೆ ಪತ್ನಿ ಮತ್ತು ಮಗನನ್ನು ಬಳಸಿಕೊಂಡಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನ ರೈತ ಆನಂದ್ ಅವರಿಗೆ ರಾಗಿ ಬೆಳೆಯನ್ನು ಬೆಳೆಯಲು, ಹಾಗೂ ಕುಂಟೆ ಹೊಡೆಯಲು ಗೋವುಗಳಿಲ್ಲದೇ ಕಂಗಾಲಾಗಿದ್ದಾರೆ. ಹಾಗಾಗಿ ತನ್ನ ಪತ್ನಿ ಹಾಗೂ ಮಗನ ಸಹಾಯದಿಂದ ನೇಗಿಲಿಗೆ ಹೆಗಲು ಬಳಸಿ ಬೇಸಾಯ ಮಾಡಲು ಆರಂಭಿಸಿದ್ದಾರೆ.

    ಸುಮಾರು 8 ರಿಂದ 10 ಎಕರೆ ಭೂಮಿ ಇರುವ ರೈತರಿಗೆ ಬೆಳೆ ಸಾಲ ನೀಡಿದರೆ, ಹಣ ಹೆಚ್ಚು ಪೋಲಾಗುತ್ತದೆ. ಅಲ್ಲದೇ ಅಧಿಕ ಸಾಲಮನ್ನಾ ಪಡೆಯುವ ಶ್ರೀಮಂತ ರೈತರು ಹಣವನ್ನು ಬಡ್ಡಿಗೆ ನೀಡಿ, ಗ್ರಾಮಗಳಲ್ಲಿ ಅನಧಿಕೃತ ಲೇವಾದೇವಿ ವ್ಯವಹಾರ ಮಾಡುತ್ತಿದ್ದಾರೆ. ಆದ್ದರಿಂದ 2-3 ಎಕರೆ ಜಮೀನು ಇರುವ ಸಣ್ಣ ರೈತರಿಗೆ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು ಎಂದು ರೈತ ಶಿವಕುಮಾರ್ ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತುಂಬಿ ಹರಿಯುತ್ತಿರುವ ಘಟಪ್ರಭೆ- ನೂರಾರು ಎಕರೆ ಬೆಳೆ ಜಲಾವೃತ

    ತುಂಬಿ ಹರಿಯುತ್ತಿರುವ ಘಟಪ್ರಭೆ- ನೂರಾರು ಎಕರೆ ಬೆಳೆ ಜಲಾವೃತ

    ಬಾಗಲಕೋಟೆ: ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಾದ ಪರಿಣಾಮ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ನೂರಾರು ಎಕರೆ ಬೆಳೆ ಸಂಪೂರ್ಣ ಜಲಾವೃತವಾಗಿದೆ.

    ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ, ಘಟಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮವಾಗಿ ಮುಧೋಳ ತಾಲೂಕಿನ ಮಿರ್ಜಿ ಗ್ರಾಮಕ್ಕೆ ಸೇರುವ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ.

    ಜಮೀನಿನಲ್ಲಿ ಬೆಳೆದಿದ್ದ ಕಬ್ಬು, ಈರುಳ್ಳಿ ಹಾಗೂ ಗೋವಿನಜೋಳ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿಯು ಜಿಲ್ಲೆಯ ಹಲವು ಭಾಗಗಳಲ್ಲಿ ಅಪಾರ ಪ್ರಮಾಣದ ನಷ್ಟವನ್ನು ಉಂಟುಮಾಡುತ್ತಿದೆ. ಜಮೀನುಗಳಿಗೆ ನೀರು ನುಗ್ಗಿದ್ದರಿಂದ ರೈತರು ಬೆಳೆದ ಬೆಳೆಗಳು ಕಣ್ಣಮುಂದೆಯೇ ಹಾಳಾಗಿರುವುದನ್ನು ಕಂಡು ಅಸಾಹಯಕ ಸ್ಥಿತಿಯಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv