Tag: farmer

  • ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣದ ಮೆಣಸಿನಕಾಯಿ ಸುಟ್ಟು ಕರಕಲು

    ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣದ ಮೆಣಸಿನಕಾಯಿ ಸುಟ್ಟು ಕರಕಲು

    ಬಳ್ಳಾರಿ: ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣ ಕೆಂಪು ಮೆಣಸಿನಕಾಯಿ ಸುಟ್ಟು ಕರಕಲಾದ ಘಟನೆ ಬಳ್ಳಾರಿ ಹಾಗೂ ಆಂಧ್ರ ಗಡಿ ಭಾಗದಲ್ಲಿ ನಡೆದಿದೆ.

     

    ಇಂದು ಮಧ್ಯಾಹ್ನದ ಸಮಯದಲ್ಲಿ ಆಂದ್ರಪ್ರದೇಶದ ಅನಂತಪುರದಿಂದ ರಾಜ್ಯದ ಹಾವೇರಿ ಜಿಲ್ಲೆಯ ಬ್ಯಾಡಗಿಗೆ ಲಾರಿಯಲ್ಲಿ ಕಪು ಮಣಸಿನಾಕಾಯಿ ಸಾಗಿಸಲಾಗುತಿತ್ತು. ರಸ್ತೆ ದಾಟುವಾಗ ವಿದ್ಯುತ್ ತಂತಿ ತಗುಲಿದ ಪರಿಣಾಮವಾಗಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಲಾರಿಯಲ್ಲಿ ಇದ್ದ ಮೆಣಸಿನಕಾಯಿ ಮೂಟೆಗೆ ಬೆಂಕಿ ತಗುಲಿದೆ. ಬೆಂಕಿ ತಗುಲಿದ ಪರಿಣಾಮ ಲಾರಿಯಲ್ಲಿ ಇದ್ದ ಮೆಣಸಿನಕಾಯಿ ಬಹುತೇಕ ಸುಟ್ಟು ಕರಕಲಾಗಿವೆ.

    ಲಾರಿ ಚಾಲಕ ಸೇರಿದಂತೆ ಸ್ಥಳೀಯರ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಲಾರಿಯಲ್ಲಿ ಇದ್ದ ಬಹುಪಾಲು ಮೆಣಸಿನಕಾಯಿ ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ರಾಜ್ಯದಲ್ಲಿ ಮೆಣಸಿನಕಾಯಿಗೆ ಒಳ್ಳೆಯ ಬೆಲೆ ಇದ್ದ ಕಾರಣ ಅಕ್ಕಪಕ್ಕದ ರಾಜ್ಯದ ರೈತರು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತಮ್ಮ ಮೆಣಸಿನಕಾಯಿ ಮಾರಲು ಬರುತ್ತಿದ್ದಾರೆ.

  • ಅಜಯ್ ದೇವಗನ್ ಕಾರು ತಡೆದು ಯುವಕ ರಂಪಾಟ – ವೀಡಿಯೋ ವೈರಲ್

    ಅಜಯ್ ದೇವಗನ್ ಕಾರು ತಡೆದು ಯುವಕ ರಂಪಾಟ – ವೀಡಿಯೋ ವೈರಲ್

    ಮುಂಬೈ: ಯುವಕನೊಬ್ಬ ಬಾಲಿವುಡ್ ನಟ ಅಜಯ್ ದೇವಗನ್ ಕಾರು ತಡೆದು ಕೃಷಿ ಕಾನೂನುಗಳ ವಿರುದ್ಧ ನೀವೇಕೆ ಪ್ರಶ್ನಿಸಿಲ್ಲ ಎಂದು ರಸ್ತೆ ಮಧ್ಯೆ ರಂಪಾಟ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ರೈತರ ಪ್ರತಿಭಟನೆಯ ಕುರಿತು ಟ್ವೀಟ್ ಮಾಡುವ ಮೂಲಕವಾಗಿ ಹಲವು ತಾರೆಯರು ಗಮನ ಸೆಳೆದಿದ್ದರು. ರೈತರನ್ನು ಬೆಂಬಲಿಸಿ ಟ್ವೀಟ್ ಮಾಡಿದ ಪಾಪ್ ತಾರೆ ರಿಯಾನ್ ಅವರಿಗೆ ಅಜಯ್ ನಮ್ಮ ದೇಶದ ಆಂತರಿಕ ವಿಚಾರದಲ್ಲಿ ನೀವು ಮೂಗು ತೋರಿಸಬೇಡಿ ಎಂದಿದ್ದರು.

    ಈ ವಿಚಾರವಾಗಿ ನೊಂದ ಯುವಕ ಅಜಯ್ ದೇವಗನ್ ಗೊರಗಾಂವ್ ಫಿಲ್ಮ್‍ಸಿಟಿ ಬಳಿ ಹೋಗುತ್ತಿರುವಾಗ ಕಾರ್ ತಡೆದು ನೀವು ರೈತ ಪ್ರತಿಭಟನೆಗೆ ಬೆಂಬಲ ನೀಡಿ. ನೀವು ನನ್ನೊಂದಿಗೆ ರೈತ ಪ್ರತಿಭಟನೆ ಕುರಿತಾಗಿ ಮಾತನಾಡಿ ಎಂದು ಒತ್ತಾಯಿಸಿದ್ದಾನೆ.

    ಅಜಯ್ ಅವರ ಬಾಡಿಗಾರ್ಡ್ ಅತನನ್ನು ಪಕ್ಕಕ್ಕೆ ಸರಿಸಲು ಮುಂದಾದಾಗ ಯುವಕ ನೀವೆಲ್ಲಾ ಪಂಜಾಬ್ ವಿರೋಧಿಗಳು, ನಿಮ್ಮ ಬಗ್ಗೆ ನಾವು ನಾಚಿಕೆ ಪಡಬೇಕು. ಪಂಜಾಬ್ ಅನ್ನ ತಿಂದಿದ್ದೀರ ಈಗ ಹೀಗೆ ಅರಗಿಸಿಕೊಳ್ಳುತ್ತಿರಾ. ಸಿನಿಮಾದಲ್ಲಿ ಹೆಮ್ಮೆಯಿಂದ ಪೇಟ ಹಾಕುತ್ತೀರಾ ನಾಚಿಕೆಯಾಗಲ್ವ ನಿಮಗೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಯಾಕೆ ನೀವು ಟ್ವೀಟ್ ಮಾಡಿಲ್ಲ. ನನ್ನ ಮೇಲೆ ಕಾರ್ ಹತ್ತಿಸುತ್ತೀರಾ? ಇಳಿದು ಬಂದು ಮಾತನಾಡಿ ಎಂದು ರಂಪಾಟ ಮಾಡಿದ್ದಾನೆ.

    ಈ ವಿಚಾರವಾಗಿ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ತಡೆದಿದ್ದಾರೆ. ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಬಿ.ಸಿ ಪಾಟೀಲ್ ಭಾಗಿ

    ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಬಿ.ಸಿ ಪಾಟೀಲ್ ಭಾಗಿ

    ವಿಜಯಪುರ: ಕೃಷಿ ಸಚಿವ ಬಿ.ಸಿ ಪಾಟೀಲ್ ನೇತೃತ್ವದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ನಡೆಯಿತು. ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ರೈತರೊಂದಿಗೆ ಸಚಿವ ಬಿ.ಸಿ ಪಾಟೀಲ್ ಸಭೆ ನಡೆಸಿದರು.

    ಪ್ರಗತಿಪರ ರೈತರಾದ ಪವಾಡೆಪ್ಪ ವಡ್ಡರ್ ಅವರ ಜಮೀನಿಗೆ ಭೇಟಿ ನೀಡಿ ಜಮೀನಿನಲ್ಲಿರುವ ದೇಶಿ ಕುರಿ, ಕೋಳಿ, ಎಮ್ಮೆ ಸಾಕಾಣಿಕೆ ಕೇಂದ್ರ ವೀಕ್ಷಿಸಿದರು. ದೇಶಿ ಕುರಿ-ಕೋಳಿ ಹಾಗೂ ಎಮ್ಮೆ ಹಾಕುವುದರ ಮೂಲಕ ಸ್ವಾವಲಂಬಿಯಾದ ರೈತ ಪವಾಡೆಪ್ಪನನ್ನು ಹಾಡಿ ಹೊಗಳಿದ್ದಾರೆ.

    ಸ್ವತಃ ರಾಶಿ ಯಂತ್ರ ಚಲಾಯಿಸಿ ಗೋಧಿ ಕಟಾವು ಮಾಡಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಶಶಿಕಲಾ ಜೊಲ್ಲೆ ಸ್ಥಳಿಯ ಶಾಸಕ ನಡಹಳ್ಳಿ ಸಾಥ್ ನೀಡಿದರು.

    ಈ ಸಂದರ್ಭದಲ್ಲಿ ಕೃಷಿಯಲ್ಲಿ ವಿವಿಧ ಸಾಧನೆ ಮಾಡಿದ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು. ಇದೆ ವೇಳೆ ಮಾತನಾಡಿದ ಸಚಿವ ಬಿ ಸಿ ಪಾಟೀಲ್ ರೈತರಿಗಾಗಿ 90% ಸಬ್ಸಿಡಿಯಲ್ಲಿ ಯೋಜನೆಗಳಿವೆ ಅದನ್ನ ರೈತರು ಸದುಪಯೋಗ ಪಡೆದುಕೊಳ್ಳ ಬೇಕು. ಕೃಷಿಕರು ಸ್ವಾವಲಂಬಿಯಾಗ ಬೇಕೆಂದು ಕರೆ ನೀಡಿದರು.

  • ಕೋಲಾರದ ಗಡಿಯಲ್ಲಿ ಆನೆ ಹಿಂಡು ದಾಳಿ ರೈತ ಬಲಿ

    ಕೋಲಾರದ ಗಡಿಯಲ್ಲಿ ಆನೆ ಹಿಂಡು ದಾಳಿ ರೈತ ಬಲಿ

    – 6 ತಿಂಗಳಲ್ಲಿ 3 ಬಲಿ ಪಡೆದ ಗಜಪಡೆ

    ಕೋಲಾರ: ರಾತ್ರಿ ವೇಳೆ ಸಂಚರಿಸುತ್ತಿದ್ದ ಆನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಭತ್ತಲಹಳ್ಳಿ ಬಳಿ ಕಳೆದ ರಾತ್ರಿ ಘಟನೆ ನಡೆದಿದ್ದು, 53 ವರ್ಷದ ರೈತ ವೆಂಕಟೇಶಪ್ಪ ಆನೆ ದಾಳಿಯಿಂದ ಜೀವ ಕಳೆದುಕೊಂಡವರಾಗಿದ್ದಾರೆ.

    ರಾತ್ರಿ ಊಟ ಮಾಡಿ ತೋಟದ ಬಳಿ ಕಾವಲಿಗೆಂದು ತೆರಳುತ್ತಿದ್ದ ವೇಳೆ ಆನೆ ಹಿಂಡು ದಾಳಿ ಮಾಡಿದ್ದರಿಂದ ವೆಂಕಟೇಶಪ್ಪ ಸಾವನ್ನಪ್ಪಿದ್ದಾರೆ. ಆನೆ ದಾಳಿ ಮಾಡಿದ ಪರಿಣಾಮ ತಲೆ ಸಂಪೂರ್ಣವಾಗಿ ನಜ್ಜಗುಜ್ಜಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಳೆದ 6 ತಿಂಗಳಲ್ಲಿ ಆನೆ ಹಿಂಡು ದಾಳಿಗೆ ಜಿಲ್ಲೆಯ ಮೂವರು ಬಲಿಯಾಗಿದ್ದಾರೆ. ಅನೆ ಹಿಂಡು ದಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಆನೆ ದಾಳಿಗೆ ಪರಿಹಾರ ಕಂಡುಕೊಳ್ಳದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.

  • ಆಕಸ್ಮಿಕವಾಗಿ ಬೆಂಕಿ ಬಿದ್ದು 5 ಲಕ್ಷ ರೂ.ಮೌಲ್ಯದ ಮೆಕ್ಕೆಜೋಳ ಭಸ್ಮ

    ಆಕಸ್ಮಿಕವಾಗಿ ಬೆಂಕಿ ಬಿದ್ದು 5 ಲಕ್ಷ ರೂ.ಮೌಲ್ಯದ ಮೆಕ್ಕೆಜೋಳ ಭಸ್ಮ

    ಹಾವೇರಿ: ಆಕಸ್ಮಿಕವಾಗಿ ಬೆಂಕಿ ಬಿದ್ದು ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಣಕೂರು ಗ್ರಾಮದಲ್ಲಿ ನಡೆದಿದೆ.

    ರೈತ ರಂಗಪ್ಪ ಕಂಬಳಿಯವರ ಎಂಬವರಿಗೆ ಸೇರಿದ ಮೆಕ್ಕಜೋಳ ರಾಶಿ ಬೆಂಕಿಗೆ ಆಹುತಿಯಾಗಿದೆ. ಕಟಾವು ಮಾಡಿ ರಾಶಿ ಮಾಡಲು ಹಾಕಿದ್ದ ತೆನೆಗಳು ಸುಟ್ಟು ಕರಕಲಾಗಿವೆ. ಫಸಲುನ್ನು ಕಳೆದುಕೊಂಡ ರೈತ ರಂಗಪ್ಪ ಕಣ್ಣೀರು ಹಾಕುತ್ತಿದ್ದಾರೆ.

    ಇಪ್ಪತ್ತು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಸುಟ್ಟ ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಸುಟ್ಟು ಹೋಗಿವೆ. ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಹಾನಿಗೊಳಗಾಗಿದೆ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಮದುವೆಯಾಗಲು ಹೆಣ್ಣು ಸಿಕ್ತಿಲ್ಲ – ಯೋಗೇಶ್ವರ್ ಬಳಿ ಅಳಲು ತೋಡಿಕೊಂಡ ರೈತ

    ಮದುವೆಯಾಗಲು ಹೆಣ್ಣು ಸಿಕ್ತಿಲ್ಲ – ಯೋಗೇಶ್ವರ್ ಬಳಿ ಅಳಲು ತೋಡಿಕೊಂಡ ರೈತ

    – ನನ್ನದು ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆಯಿದು
    – ರೈತನನ್ನು ಮದುವೆಯಾದರೆ ಪ್ರೋತ್ಸಾಹ ಧನ ನೀಡಿ

    ಮಂಡ್ಯ: ಮದುವೆಯಾಗಲು ಹೆಣ್ಣು ನೀಡುತ್ತಿಲ್ಲ ಎಂದು ಸಚಿವ ಪಿ ಯೋಗೇಶ್ವರ್ ಬಳಿ ಯುವ ರೈತರೊಬ್ಬರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

    ಲಾಕ್‍ಡೌನ್ ಸಂದರ್ಭದಲ್ಲಿ ಪಟ್ಟಣ ಪ್ರದೇಶದಲ್ಲಿ ವಾಸ ಮಾಡಲು ಸಾಧ್ಯವಾಗದೇ ಶೇ.75 ಜನರು ಹಳ್ಳಿಗಳಿಗೆ ವಾಪಸ್ ಬಂದಿದ್ದರು. ಈ ವೇಳೆ ಜನರು ಹಳ್ಳಿ ಲೈಫ್ ಸೂಪರ್, ರೈತನೇ ಗ್ರೇಟ್ ಎಂದು ಹೇಳುತ್ತಿದ್ದರು. ಆದರೆ ಲಾಕ್‍ಡೌನ್ ಮುಗಿದ ಬಳಿಕ ಹಳ್ಳಿ ಲೈಫ್‍ನ ಅನುಭವಿಸಲು ಇಷ್ಟ ಪಡುತ್ತಿಲ್ಲ ಹಾಗೂ ರೈತನಿಗೆ ಹೆಣ್ಣು ಕೊಡಲು ಹೆಣ್ಣೆತ್ತವರು ಮೂಗು ಮುರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರೈತ ಪ್ರವೀಣ್ ಅವರು ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಸಚಿವ ಯೋಗೇಶ್ವರ್ ಹತ್ತಿರ ತನ್ನ ಕಣ್ಣೀರಿನ ಕಹಾನಿಯನ್ನು ಹೇಳಿಕೊಂಡಿದ್ದಾರೆ. ಸರ್ ನಾನೊಬ್ಬ 28 ವರ್ಷದ ಯುವಕ, ನಾನು ರೇಷ್ಮೆ ಕೃಷಿಯನ್ನು ಮಾಡುತ್ತೇನೆ. ಅದರಿಂದ ಒಳ್ಳೆಯ ಸಂಪಾದನೆಯನ್ನು ಮಾಡುತ್ತಿದ್ದೇನೆ. ಆದರೆ ನಾನು ಮದುವೆಯಾಗಲು ಹುಡುಗಿ ಕೇಳಲು ಹೋದರೆ, ನನಗೆ ಹುಡುಗಿ ಕೊಡುತ್ತಿಲ್ಲ. ನಾವು ರೈತರಿಗೆ ಕೊಡಲ್ಲ. ಸಿಟಿಯಲ್ಲಿ ಇದ್ದವರಿಗೆ ಹೆಣ್ಣು ಕೊಡುತ್ತೇವೆ ಎಂದು ಹೆಣ್ಣೆತ್ತವರು ಹೇಳುತ್ತಿದ್ದಾರೆ. ಇದು ನನ್ನೊಬ್ಬನ ಸಮಸ್ಯೆ ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆ ಎಂದು ಹೇಳಿದ್ದಾರೆ.

    ಈ ಸಮಸ್ಯೆ ಹೋಗಲಾಡಿಸಲು ಒಂದು ಕಾಯ್ದೆ ತನ್ನಿ. ಅಂತರ್ಜಾತಿ ಮದುವೆಯಾದವರಿಗೆ 2 ಲಕ್ಷ, 3 ಲಕ್ಷ ಎಂದು ಕೊಡುತ್ತೀರಾ. ಅದೇ ರೀತಿ ರೈತನನ್ನು ಮದುವೆಯಾದರೆ ಅವರಿಗೆ ಹುಟ್ಟಿಗೆ ಹುಟ್ಟಿದ ಮಕ್ಕಳಿಗೆ ವಿಮೆ ಅಥವಾ ಪ್ರೋತ್ಸಾಹ ಧನ ನೀಡುವಂತಹ ಯೋಜನೆಗಳನ್ನು ತನ್ನಿ. ಈ ಬಗ್ಗೆ ಸಿಎಂ ಸರ್‍ಗೂ ಹೇಳಿ ಸರ್, ಇದೊಂದು ಒಳ್ಳೆಯ ಕೆಲಸ ಮಾಡಿ ಎಂದು ಪ್ರವೀಣ್ ಅವರು ಮನವಿ ಮಾಡಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಪಿ.ಯೋಗೇಶ್ವರ್, ಹೌದು ಅಣ್ಣ ನೀನು ಹೇಳುತ್ತಿರುವುದು ಸರಿ ಇದೆ. ಯೋಚನೆ ಮಾಡೋಣಾ ಇದು ಬಹಳ ಗಂಭೀರ ಸಮಸ್ಯೆ. ಈ ಬಗ್ಗೆ ನಾನು ಮಾತನಾಡುತ್ತೇನೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

  • ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ – ಗ್ರಾಮಸ್ಥರು ಕಂಗಾಲು

    ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ – ಗ್ರಾಮಸ್ಥರು ಕಂಗಾಲು

    ರಾಯಚೂರು: ಜಮೀನಿನಲ್ಲಿ ಬೃಹದಾಕಾರದ ಮೊಸಳೆ ಕಂಡು ಜನ ಬೆಚ್ಚಿಬಿದ್ದಿರುವ ಘಟನೆ ಲಿಂಗಸಗೂರು ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.

    ಆಹಾರ ಅರಸಿ ಗ್ರಾಮದತ್ತ ಮೊಸಳೆ ಬಂದಿದೆ. ಗೋವಿನ ಜೋಳದ ಜಮೀನಿನಲ್ಲಿ ರಾತ್ರಿ ಕಾಣಿಸಿಕೊಂಡಿದೆ. ಮುಂಜಾವಿನಲ್ಲಿ ನೀರು ಹಾಯಿಸಲು ಹೋದ ರೈತರ ಬೃಹತ್ ಗಾತ್ರದ ಮೊಸಳೆಯನ್ನು ನೋಡಿ ಹೆದರಿದ್ದಾರೆ. ಗ್ರಾಮಸ್ಥರಿಗೆ ತಕ್ಷಣ ಈ ವಿಚಾರವನ್ನು ಹೇಳಿದ್ದಾರೆ. ಗ್ರಾಮದ ಪಕ್ಕದ ಬೋಗಾಪುರ ಕೆರೆಯಿಂದ ಆಹಾರ ಅರಸಿ ಮೊಸಳೆ ಬಂದಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನ ಹಿಡಿದಿದ್ದು, ಸುರಕ್ಷಿತವಾಗಿ ಕೃಷ್ಣಾ ನದಿಗೆ ಬಿಟ್ಟು ಬಂದಿದ್ದಾರೆ. ಮೊಸಳೆ ಕಾಟದಿಂದ ಈಗ ರಾತ್ರಿ ವೇಳೆ ಓಡಾಡಲು ಜನ ಹೆದರಿಕೊಳ್ಳುವಂತಾಗಿದೆ. ಇತ್ತೀಚೆಗೆ ರಾಯಚೂರು ತಾಲೂಕಿನ ಯಾಪಲದಿನ್ನಿಯಲ್ಲೂ ಮೊಸಳೆ ಪ್ರತ್ಯಕ್ಷವಾಗಿತ್ತು. ಬೇಸಿಗೆ ಆರಂಭವಾದ ಹಿನ್ನೆಲೆ ಕೆರೆ, ಹಳ್ಳಗಳಿಂದ ಆಹಾರ ಹುಡುಕಿಕೊಂಡು ಮೊಸಳೆಗಳು ಹೊರಬರುತ್ತಿವೆ.

  • ಜಮೀನಿನಲ್ಲಿದ್ದ ಕಡಲೆ ಬೆಂಕಿಗಾಹುತಿ – 80 ಕ್ವಿಂಟಲ್ ನಷ್ಟ

    ಜಮೀನಿನಲ್ಲಿದ್ದ ಕಡಲೆ ಬೆಂಕಿಗಾಹುತಿ – 80 ಕ್ವಿಂಟಲ್ ನಷ್ಟ

    ವಿಜಯಪುರ: ಜಮೀನಿನಲ್ಲಿದ್ದ 80 ಕ್ವಿಂಟಲ್ ನಷ್ಟು ಕಡಲೆ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದಲ್ಲಿ ನಡೆದಿದೆ.

    ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ರೈತ ಸಂಗಪ್ಪ ತೋಟದ ಅವರಿಗೆ ಸೇರಿದ ಕಡಲೆ ಇದಾಗಿದ್ದು, ಸುಮಾರು 12 ಎಕರೆಯಲ್ಲಿನ ಅಂದಾಜು 5 ಲಕ್ಷ ಮೌಲ್ಯದ ಕಡಲೆ ಬೆಳೆ ಅಗ್ನಿಗಾಹುತಿಯಾಗಿದೆ. ಇದರಿಂದ ರೈತ ಸಂಗಪ್ಪ ಅವರು ಕಂಗಾಲಾಗಿದ್ದಾರೆ.

    ಸಾಲ ಮಾಡಿ ಕಡಲೆ ಬೆಳೆ ಬೆಳೆದಿದ್ದ ರೈತ ಸಂಗಪ್ಪ ರಾಶಿ ಮಾಡಲೆಂದು ಕಡಲೆ ಕೂಡಿಟ್ಟಿದ್ದರು. ಇದನ್ನ ಸಹಿಸದ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕಡಲೆ ಬೆಳೆಗೆ ಬೆಂಕಿ ಹಚ್ಚಿದ್ದಾರೆಂದು ರೈತ ಸಂಗಪ್ಪ ಆರೋಪಿಸುತ್ತಿದ್ದಾರೆ.

    ನಾಲ್ಕೈದು ವರ್ಷಗಳಿಂದ ತನ್ನ ಬೆಳೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಲ್ಲದೇ, ಜಮೀನಿನಲ್ಲಿದ್ದ ಕೃಷಿ ಉಪಕರಣಗಳನ್ನು ಸಹ ಕಳ್ಳತನ ಮಾಡಿದ್ದಾರೆ. ಆದ್ದರಿಂದ ಈ ಖದೀಮರನ್ನ ಆದಷ್ಟು ಬೇಗ ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

  • ಜಮೀನಿನ ಲೀಸ್ ಹಣ ಕೊಡಲಾಗದೇ ರೈತ ಅತ್ಮಹತ್ಯೆಗೆ ಶರಣು

    ಜಮೀನಿನ ಲೀಸ್ ಹಣ ಕೊಡಲಾಗದೇ ರೈತ ಅತ್ಮಹತ್ಯೆಗೆ ಶರಣು

    ವಿಜಯಪುರ : ಜಮೀನಿನ ಲೀಸ್ ಹಣ ಕೊಡಲಾಗದೇ ರೈತರೊಬ್ಬರು ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಅಲಮೇಲ ತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ.

    ಪುಂಡಲಿಂಗ ಜೀರಟಗಿ (22) ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರಾಗಿದ್ದಾರೆ. ಸಾಲಬಾಧೆಯಿಂದ ಮನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಜಮೀನಿನಲ್ಲಿದ್ದ ಬೆಳೆ ಹಾಳಾದ ಕಾರಣ, ಜಮೀನಿನ ಲೀಸ್ ಹಣ ಕೊಡಲಾಗದೇ ಪರದಾಡುತ್ತಿದ್ದರಂತೆ. ಈ ಎಲ್ಲಾ ವಿಚಾರವಾಗಿ ಮನನೊಂದಿರುವ ಪುಂಡಲಿಂಗ ಜಮೀನಿನಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕೃಷಿ ಮಾತ್ರವಲ್ಲದೇ ಖಾಸಗಿಯಾಗಿ ಕೂಡ ಪಡೆದ ಸಾಲವನ್ನು ಮರು ಪಾವತಿ ಮಾಡಲಾರದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

  • ಕಡಲೆ ರಾಶಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ – ಕಂಗಾಲದ ರೈತ

    ಕಡಲೆ ರಾಶಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ – ಕಂಗಾಲದ ರೈತ

    ಗದಗ: ರೈತರು ಕೆಲಸ ಮುಗಿಸಿ ಜಮೀನಿನಿಂದ ಹೋಗುವುದನ್ನು ನೋಡಿದ ದುಷ್ಕರ್ಮಿಗಳು ಕಡಲೆ ರಾಶಿಗೆ ಯಾರೋ ಬೆಂಕಿ ಹಚ್ಚಿ ಪರಾರಿಯಾಗಿರವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದ ಜಮೀನಿನಲ್ಲಿ ಕಂಡುಬಂದಿದೆ.

    ತೋಟಗಂಟಿ ಗ್ರಾಮದ ಕಳಕನಗೌಡ ಸಣ್ಣಮಲ್ಲನಗೌಡ್ರ ರೈತರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಕಡಲೆ ಗೂಡಿಗೆ ಬೆಂಕಿಬಿದ್ದಿದೆ. ಈ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಕಡಲೆ ಬೆಳೆ ಸುಟ್ಟು ಕರಕಲಾಗಿದೆ. ಕಳೆದ 3 ದಿನದಿಂದ ಹತ್ತಾರು ಆಳುಗಳೊಂದಿಗೆ ಕಿತ್ತು ಒಂದೆಡೆ ಹಾಕಲಾಗಿತ್ತು. ರೈತರು ಮನೆಗೆ ಹೋಗುವುದನ್ನು ಕಂಡ ದುಷ್ಕರ್ಮಿಗಳು ಕಡಲೆ ಗೂಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ವಿಷಯ ತಿಳಿದ ರೈತರು ಜಮೀನಿಗೆ ಹೋಗಿ ನೋಡುವಷ್ಟರಲ್ಲಿ ಬೆಳೆ ಸುಟ್ಟು ಕಣ್ಮುಂದೆ ಭಸ್ಮವಾಗಿದೆ.

    ಸಾಲ-ಸೂಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯಲ್ಲಾ ಬೆಂಕಿಗಾಹುತಿಯಾಗಿದೆ. ಮೊದಲೇ ಕೊರೋನಾ, ಮುಂಗಾರು ಅತಿವೃಷ್ಟಿ ಹಿಂಗಾರು ಅನಾವೃಷ್ಟಿ ಸಂಕಷ್ಟದಲ್ಲಿರುವ ರೈತನ ಕಡಲೆ ಗೂಡಿಗೆ ಬೆಂಕಿ ತಗುಲಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನೋವಿನಲ್ಲಿರುವ ರೈತನಿಗೆ ಸಂಬಂಧಿಸಿದ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.

     

    ಸ್ಥಳಕ್ಕೆ ಅಬ್ಬಿಗೇರಿ ಗ್ರಾಮಲೆಕ್ಕಾಧಿಕಾರಿ ಜಿ.ಎ. ಜಂತ್ಲಿ , ನರೇಗಲ್ ಠಾಣೆಯ ಪಿಎಸ್‍ಐ ರಾಘವೇಂದ್ರ ಭೇಟಿ ನೀಡಿದರು ಪರಿಶೀಲನೆ ನಡೆಸಿದರು. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.