Tag: farmer

  • ಮಲೆನಾಡಲ್ಲಿ ವರ್ಷಧಾರೆ – ಲಕ್ಷಾಂತರ ರೂಪಾಯಿ ಹಣ ಉಳಿಸಿದ ಮಳೆರಾಯ

    ಮಲೆನಾಡಲ್ಲಿ ವರ್ಷಧಾರೆ – ಲಕ್ಷಾಂತರ ರೂಪಾಯಿ ಹಣ ಉಳಿಸಿದ ಮಳೆರಾಯ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದು ಬೆಂದಿದ್ದ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದಾನೆ.

    ಇಂದು ಬೆಳಗ್ಗೆಯಿಂದಲೂ ಮಲೆನಾಡು ಭಾಗವಾದ ಕಳಸ, ಮೂಡಿಗೆರೆ ಹಾಗೂ ಕೊಪ್ಪ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಮೋಡದ ಮಧ್ಯೆಯೂ ಸಿಕ್ಕಾಪಟ್ಟೆ ಸೆಕೆ ಕೂಡ ಇತ್ತು. ಜನ ಸಂಜೆ ವೇಳೆಗೆ ಮಳೆ ಬರಬಹುದು ಎಂದು ಭಾವಿಸಿದ್ದರು. ಅದರಂತೆ ಜಿಲ್ಲೆಯ ಕಳಸ ತಾಲೂಕಿನ ಕಳಸ, ಹೊರನಾಡು, ಹಿರೇಬೈಲು, ಹುಳುವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಮೂರು ಗಂಟೆಯ ನಂತರ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ.

    ಭಾರೀ ಬಿಸಿಲಿನಿಂದ ಬಳಲುತ್ತಿದ್ದ ಕಾಫಿ ಗಿಡಗಳಿಗೆ ಬೆಳೆಗಾರರು ಕೂಡ ನಾನಾ ರೀತಿಯಲ್ಲಿ ನೀರಾಯಿಸುತ್ತಿದ್ದರು. ಸ್ಪ್ರಿಂಕ್ಲರ್ ಸಾವಿರಾರು ಹಣ ನೀಡಿ ಕಾಫಿಗಿಡವನ್ನು ತಣ್ಣಗೆ ಇಡಲು ಪ್ರಯತ್ನಿಸುತ್ತಿದ್ದರು. ಸದ್ಯಕ್ಕೆ ಮಲೆನಾಡಲ್ಲಿ ಕಾಫಿ-ಮೆಣಸು-ಅಡಿಕೆಗೆ ನೀರು ಬೇಕಿತ್ತು. ಆದರೆ ಸಂಜೆ ವೇಳೆಗೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆಯಾಗಿದ್ದು, ಕಾಫಿ-ಅಡಿಕೆ ಬೆಳೆಗಾರರಿಗೆ ವರವಾಗಿದೆ ಹಾಗೂ ಮಳೆರಾಯ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಹಣ ಉಳಿಸಿದ್ದಾನೆ.

    ಧಾರಾಕಾರವಾಗಿ ಸುರಿದ ಮಳೆಯಿಂದ ಸುಮಾರು ಇನ್ನೊಂದು ವಾರಗಳ ಕಾಲ ನೀರಾಯಿಸದಿದ್ದರೂ ಯಾವುದೇ ತೊಂದರೆ ಇಲ್ಲ. ಈ ಅಕಾಲಿಕ ಮಳೆಯಿಂದ ಮಲೆನಾಡಿಗರು ಸಂತಸಗೊಂಡಿದ್ದಾರೆ. ಆದರೆ ಈ ಸಂತೋಷದ ಮಧ್ಯೆಯೂ ಮಳೆ ಅಂದರೆ ಮಲೆನಾಡಿಗರಿಗೆ ಭಯ- ಆತಂಕ ಕೂಡ ಇದೆ. ಯಾಕೆಂದರೆ ಕಳೆದೆರಡು ವರ್ಷ ಮಳೆಯ ಅವಾಂತರಗಳನ್ನು ನೆನೆದು ಮಲೆನಾಡಿಗರು ಈ ಮಳೆಯಿಂದ ಸಂತಸಗೊಂಡರೂ ಕೂಡ ಭವಿಷ್ಯದ ಮಳೆ ಬಗ್ಗೆ ಭಯ ಹಾಗೆಯೇ ಇದೆ.

  • ಬೆಲೆ ಇಲ್ಲದೆ ಕಂಗಾಲು- ಕೋಸ್ ಬೆಳೆ ನಾಶ ಮಾಡಿದ ರೈತ

    ಬೆಲೆ ಇಲ್ಲದೆ ಕಂಗಾಲು- ಕೋಸ್ ಬೆಳೆ ನಾಶ ಮಾಡಿದ ರೈತ

    ಚಿಕ್ಕಮಗಳೂರು: ಕಳೆದ ಒಂದು ವರ್ಷದಿಂದ ಮೂರು ಬಾರಿ ಎಲೆ ಕೋಸ್ ಬೆಳೆದಿದ್ದು, ಒಂದು ಬಾರಿಯೂ ಲಾಭವಿಲ್ಲ, ಹಾಕಿದ ಬಂಡವಳವೂ ಬಂದಿಲ್ಲ. ಬರೀ ನಷ್ಟವಾಗಿದೆ ಎಂದು ಮನನೊಂದ ರೈತ ಎರಡು ಎಕರೆಯಲ್ಲಿ ಬೆಳೆದ ಕೋಸಿಗೆ ಟ್ರ್ಯಾಕ್ಟರ್ ಹರಿಸಿ ಗೊಬ್ಬರವಾಗಿಸಿದ್ದಾನೆ.

    ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ರೈತ ಬಸವರಾಜ್ ಎರಡು ಎಕರೆ ಹೊಲದಲ್ಲಿ ಕೋಸ್ ಬೆಳೆದಿದ್ದರು. ಕೋಸಿನ ಫಸಲು ಉತ್ತಮವಾಗಿದೆ, ಆದರೆ ಬೆಲೆ ಇಲ್ಲ. ಮಾರ್ಕೆಟ್‍ಗೆ ತಂದರೆ 10 ಕೆಜಿಯ ಚೀಲಕ್ಕೆ 30-40 ರೂಪಾಯಿಗೆ ಕೇಳುತ್ತಾರೆ. ಕೋಸ್ ಕೊಯ್ದ ಕೂಲಿ ಕೊಡೋದಕ್ಕೂ ಆಗಲ್ಲ, ಮತ್ತೆ ಸಾಲ ಮಾಡಬೇಕು. ಹೀಗಾಗಿ ರೈತ ಬಸವರಾಜ್ ಎರಡು ಎಕರೆ ಹೊಲಕ್ಕೂ ಟ್ರ್ಯಾಕ್ಟರ್ ಹೊಡೆದು ಕೋಸ್ ಬೆಳೆ ನಾಶಪಡಿಸಿದ್ದಾರೆ.

    ಬಸವರಾಜ್ ಇದೇ ಮೊದಲ ಬಾರಿ ಕೋಸ್ ಬೆಳೆದಿಲ್ಲ. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಕೋಸ್ ಬೆಳೆದಿದ್ದಾರೆ. ಪ್ರತಿ ಸಲವೂ ಇದೇ ರೀತಿಯಾಗುತ್ತಿದ್ದು, ಲಾಭವಿರಲಿ, ಹಾಕಿದ ಬಂಡವಾಳ ಕೂಡ ಬಂದಿಲ್ಲ. ಪ್ರತಿ ಸಲ ಎಕರೆಗೆ 2-30 ಸಾವಿರದಂತೆ ಖರ್ಚು ಮಾಡಿ ಬೆಳೆದ ರೈತ ನಷ್ಟದಿಂದ ಕೈ ಸುಟ್ಟುಕೊಂಡಿದ್ದಾರೆ. ಕೆಲ ಬಾರಿ ಮಧ್ಯವರ್ತಿಗಳೇ ಹೊಲಗದ್ದೆಗಳಿಗೆ ಬಂದು ಹಣ ನೀಡಿ ಖರೀದಿಸಿ ಹೋಗುತ್ತಿದ್ದರು. ಈಗ ಮಧ್ಯವರ್ತಿಗಳೂ ಬರುತ್ತಿಲ್ಲ. ರೈತರೇ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮನ ಬಂದಂತೆ ದರ ನಿಗದಿಪಡಿಸುತ್ತಾರೆ. ಒಂದು ಚೀಲಕ್ಕೆ 30-40 ರೂಪಾಯಿ ನೀಡಿದರೆ ಹೇಗೆ ಎಂಬುದು ರೈತರ ಆತಂಕವಾಗಿದೆ.

    ಮೂರು-ನಾಲ್ಕು ತಿಂಗಳಿಂದ ನೀರು ಹಾಯಿಸಿ ಹಗಲಿರುಳು ಕಾದು ಬೆಳೆದ ಬೆಳೆಗೆ ಬೆಲೆ ಇಲ್ಲ, ಹಾಕಿದ ಬಂಡವಾಳವೂ ಬಂದಿಲ್ಲ. ಹಣ ಬರದಿದ್ದರೂ ಪರವಾಗಿಲ್ಲ ಭೂಮಿಗೆ ಗೊಬ್ಬರವಾದರೂ ಆಗಲಿ ಎಂದು ಇಡೀ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಹೊಲದ ತುಂಬ ಉತ್ತಮ ಸೈಜಿನ ಕೋಸು ನಳನಳಿಸುತ್ತಿದೆ. ಆದರೆ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ.

    ಲಾಕ್‍ಡೌನ್ ವೇಳೆ ಕೆಲಸವಿಲ್ಲದೆ, ಹಣವಿಲ್ಲದೆ ಸಾಲ ಮಾಡಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ, ಮತ್ತೆ ಸಾಲದ ಭಯ ಕಾಡಿದೆ. ಈ ಮಧ್ಯೆ ಗಗನ ಮುಟ್ಟಿರೊ ಬೀಜ ಹಾಗೂ ಗೊಬ್ಬರದ ದರ ರೈತರನ್ನ ಮತ್ತಷ್ಟು ಕಂಗಾಲಾಗಿಸಿದೆ.

  • ಬೆಲೆ ಕುಸಿತದಿಂದ ಕಂಗೆಟ್ಟು ಚೆಂಡು ಹೂ ತೋಟ ನಾಶ ಮಾಡಿದ ರೈತ

    ಬೆಲೆ ಕುಸಿತದಿಂದ ಕಂಗೆಟ್ಟು ಚೆಂಡು ಹೂ ತೋಟ ನಾಶ ಮಾಡಿದ ರೈತ

    ಚಿಕ್ಕಬಳ್ಳಾಪುರ: ಮಾರುಕಟ್ಟೆಯಲ್ಲಿ ಚೆಂಡು ಹೂ ಪ್ರತಿ ಕೆ.ಜಿಗೆ 5 ರಿಂದ 10 ರೂಪಾಯಿ ಗೆ ಬಿಕರಿಯಾಗುತ್ತಿದ್ದು, ಇದರಿಂದ ಬೇಸತ್ತ ರೈತ ಚೆಂಡು ಹೂವಿನ ತೋಟವನ್ನೇ ನಾಶ ಮಾಡಿದ್ದಾನೆ.

    ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇನಹಳ್ಳಿ ಗ್ರಾಮದ ರೈತ ರವಿಕುಮಾರ್ ಅವರು 4 ಎಕರೆ ಪ್ರದೇಶದಲ್ಲಿ ಚೆಂಡು ಹೂ ಬೆಳೆದಿದ್ದರು. ಹೂಗಳು ಸಹ ಬಹಳ ಸೊಂಪಾಗಿ ಬೆಳೆದಿದ್ದವು. ಆದರೆ ಹೂ ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಪ್ರತಿ ಕೆ.ಜಿಗೆ 05 ರೂಪಾಯಿಗೆ ಬಿಕರಿಯಾಗಿದೆ. ಇದರಿಂದ ರೋಸಿಹೋದ ರೈತ ರವಿಕುಮಾರ್ ಅವರು ಟ್ರ್ಯಾಕ್ಟರ್ ಮೂಲಕ ಇಡೀ ತೋಟವನ್ನು ಉಳುಮೆ ಮಾಡಿ ಸಂಪೂರ್ಣ ನಾಶ ಮಾಡಿದ್ದಾರೆ.

    ಒಟ್ಟು 4 ಎಕೆರೆಗೆ 4 ಲಕ್ಷ ಬಂಡವಾಳ ಹಾಕಿ ಚೆಂಡು ಹೂವು ಬೆಳೆದಿದ್ದು, ಕೇವಲ 40 ರಿಂದ 50 ಸಾವಿರ ಆದಾಯ ಸಿಕ್ಕಿದೆ. ಇದರಿಂದ ಹೂವು ಕಟಾವು ಮಾಡುವ ಕೂಲಿ ಕಾರ್ಮಿಕರಿಗೆ ನೀಡುವಷ್ಟು ಸಹ ಹಣ ಸಿಗಲ್ಲ. ಅಲ್ಲದೆ ಮುಂದೆ ಬೆಳೆ ಕಾಪಾಡಿಕೊಳ್ಳಲು ಕ್ರೀಮಿನಾಶಕಗಳನ್ನು ಸಿಂಪಡಿಸಲು ಹಣ ಹೆಚ್ಚು ಬೇಕಾಗುತ್ತದೆ. ಹೀಗಾಗಿ ತೋಟ ನಾಶ ಮಾಡುತ್ತಿರುವುದಾಗಿ ರವಿಕುಮಾರ್ ತಿಳಿಸಿದ್ದಾರೆ.

  • ಪಕ್ಕಾ ಪ್ಲಾನ್ ಮರ್ಡರ್ – ಪತ್ನಿ, ಮಗ ಸೇರಿ ಆ್ಯಕ್ಸಿಡೆಂಟ್ ರೀತಿ ರೈತನ ಹತ್ಯೆ

    ಪಕ್ಕಾ ಪ್ಲಾನ್ ಮರ್ಡರ್ – ಪತ್ನಿ, ಮಗ ಸೇರಿ ಆ್ಯಕ್ಸಿಡೆಂಟ್ ರೀತಿ ರೈತನ ಹತ್ಯೆ

    – ಮರ್ಡರ್ ಮಿಸ್ಟರಿಯನ್ನು ಬೇಧಿಸಿದ ಪೊಲೀಸರು

    ಬೆಂಗಳೂರು: ಪತ್ನಿ ಹಾಗೂ ಮಗ ಸೇರಿ ಸುಪಾರಿ ಕೊಟ್ಟು ರೈತನನ್ನು ಕೊಲೆ ಮಾಡಿಸಿದ್ದಾರೆ. ಅಚ್ಚರಿ ವಿಚಾರ ಎಂಬಂತೆ ಕೊಲೆ ಬಗ್ಗೆ ಯಾರಿಗೂ ಸುಳಿವು ಸಿಗಬಾರದು, ಅಪಘಾತದ ರೀತಿ ಕೊಲೆಯಾಗಬೇಕು. ಇದಕ್ಕೆ ಆಯ್ಕೆ ಮಾಡಿಕೊಂಡಿದ್ದು ಸಿಸಿಟಿವಿ ಕ್ಯಾಮೆರಾಗಳಿಲ್ಲದ ರಸ್ತೆ. ಭಯಾನಕ ಕೊಲೆ ಪ್ರಕರಣವನ್ನು ವೈಟ್ ಫೀಲ್ಡ್ ಪೊಲೀಸರು ಬೇಧಿಸಿದ್ದಾರೆ.

    ಜನವರಿ 21ರಂದು 58 ವರ್ಷದ ರೈತ ಸುಬ್ಬರಾಯಪ್ಪ ಕೊಲೆಯಾಗಿದ್ದು, ವ್ಯಕ್ತಿಯೊಬ್ಬರನ್ನು ಭೇಟಿಯಾಗಲು ತೆರಳುವಾಗ ಕಾರ್ ಗುದ್ದಿಸಿ ಕೊಲೆ ಮಾಡಲಾಗಿದೆ. ಆದರೆ ಸುಬ್ಬರಾಯಪ್ಪ ಅವರ ಮಗ ದೇವರಾಜ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಸಹ ಬೈಕ್‍ನಿಂದ ಬಿದ್ದು ಗಾಯಗೊಂಡು ಸುಬ್ಬರಾಯಪ್ಪ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬಳಿಕ ಪೊಲೀಸರು ಅಪಘಾತ ನಡೆದ ಸ್ಥಳ ಪರೀಕ್ಷೆಗೆ ತೆರಳಿದ್ದು, ಈ ವೇಳೆ ಅವರಿಗೆ ಅನುಮಾನ ಬಂದಿದೆ. ರಸ್ತೆಯಲ್ಲಿ ತುಂಬಾ ಪ್ಯಾಚ್‍ಗಳಿವೆ, ಅಲ್ಲದೆ ರೋಡ್ ಹಂಪ್ಸ್ ಗಳಿವೆ. ಅಲ್ಲದೆ ಈ ರಸ್ತೆಯಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮರಾಗಳಿಲ್ಲ ಎಂಬುದನ್ನು ಪೊಲೀಸರು ಅರಿತಿದ್ದಾರೆ. ಬಳಿಕ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಳವಾದ ತನಿಖೆ ನಡೆಸಿದ್ದು, ಪ್ರಕರಣದ ಸತ್ಯವನ್ನು ಪತ್ತೆಹಚ್ಚಿದ್ದಾರೆ.

    ಅದೇ ರಸ್ತೆಯ ಇನ್ನೊಂದು ಬದಿಯಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಗಮನಿಸಿದ್ದು, ಈ ವೇಳೆ ಅಪಘಾತ ನಡೆದ ಸ್ಥಳಕ್ಕೆ ರಿಜಿಸ್ಟ್ರೇಶನ್ ನಂಬರ್ ಇಲ್ಲದ ಎಸ್‍ಯುವಿ ಕಾರ್ ಹೋಗಿರುವುದನ್ನು ಗಮನಿಸಿದ್ದಾರೆ. ಬಳಿಕ ಪೊಲೀಸರು ಕಾರ್ ಮಾಲೀಕನನ್ನು ಟ್ರೇಸ್ ಮಾಡಿದ್ದು, ಬಾಡಿಗೆ ಕಂಪನಿಯ ಸ್ಟಿಕ್ಕರ್ ಆಧಾರದ ಮೇಲೆ ಅನಿಲ್ ಕುಮಾರ್ ಹಾಗೂ ಕಾರನ್ನು ಪತ್ತೆ ಹಚ್ಚಿದ್ದಾರೆ.

    ಬಳಿಕ ಕಾಲ್ ರೆಕಾರ್ಡ್ ದಾಖಲೆಗಳನ್ನು ಪರಿಶೀಲಿಸಿದ್ದು, ಅನಿಲ್ ಕುಮಾರ್ ಸಂತ್ರಸ್ತ ಸುಬ್ಬರಾಯಪ್ಪ ಅವರಿಗೆ ಕರೆ ಮಾಡಿ, ಕೃಷಿ ಪರಿಕರಗಳನ್ನು ಖರೀದಿಸುವ ನೆಪದಲ್ಲಿ ಆ ರಸ್ತೆಗೆ ಕರೆಸಿರುವುದು ಬೆಳಕಿಗೆ ಬಂದಿದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಅನಿಲ್ ಕುಮಾರ್ ಕರೆ ಮಾಡಿದ ಫೋನ್‍ನ್ನು ಸುಬ್ಬರಾಯಪ್ಪ ಪತ್ನಿ ಯಶೋಧಮ್ಮ ಅವರಿಂದ ಪಡೆದಿದ್ದ. ಬಳಿಕ ಅನಿಲ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಯಶೋಧಮ್ಮ ಹಾಗೂ ಮಗ ದೇವರಾಜ್ 6 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು ಎಂದು ಅನಿಲ್ ತಪ್ಪೊಪ್ಪಿಕೊಂಡಿದ್ದಾನೆ.

    ಸುಬ್ಬರಾಯಪ್ಪ ಅನೈತಿಕ ಸಂಬಂಧ ಹೊಂದಿದ್ದು, ಇದರಿಂದಾಗಿ ಆಸ್ತಿ ಕಡಿಮೆ ಸಿಗುತ್ತದೆ ಎಂಬ ಉದ್ದೇಶದಿಂದ ಯಶೋಧಮ್ಮ ಹಾಗೂ ಮಗ ದೇವರಾಜ್ ಕೊಲೆ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಅನಿಲ್‍ಗೆ 6 ಲಕ್ಷ ರೂ.ಗೆ ಸುಪಾರಿ ನೀಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.

  • ವೀಡಿಯೋ: ಟಿಲ್ಲರ್ ಹಿಡಿದು ಉಳುಮೆ ಮಾಡಿದ ರಶ್ಮಿಕಾ

    ವೀಡಿಯೋ: ಟಿಲ್ಲರ್ ಹಿಡಿದು ಉಳುಮೆ ಮಾಡಿದ ರಶ್ಮಿಕಾ

    ಬೆಂಗಳೂರು: ಗದ್ದೆ ಉಳುಮೆ ಮಾಡುವ ವೀಡಿಯೋವನ್ನು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದ್ದು, ರೈತರ ಲುಕ್‍ನಲ್ಲಿ ರಶ್ಮಿಕಾ ಸಖತ್ ಆಗಿ ಕಾಣುತ್ತಿದ್ದಾರೆ.

    ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಯಾದಲ್ಲಿ ಸಖತ್ ಸುದ್ದಿಯಲ್ಲಿರುವ ನಟಿ. ಒಂದಲ್ಲೊಂದು ವಿಚಾರವಾಗಿ ನೆಟ್ಟಿಗರ ಬಾಯಿಗೆ ಆಹಾರವಾಗುತ್ತಿರುತ್ತಾರೆ. ಆದರೆ ಇದೀಗ ಗದ್ದೆ ಉಳುಮೆ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದು ಎಲ್ಲಡೆಯಿಂದಲೂ ಮೆಚ್ಚುಗೆ ಹಾಗೂ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಪವರ್ ಟಿಲ್ಲರ್ ಹಿಡಿದು ಗದ್ದೆ ಉಳುಮೆ ಮಾಡುತ್ತಾ ಇರುವ ವಿಡೀಯೋ ನೋಡಿದ ಅಭಿಮಾನಿಗಳು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ರಶ್ಮಿಕಾ ಮಂದಣ್ಣ ಉಳುಮೆ ಮಾಡುತ್ತಿರುವುದು ತಮಿಳಿನ ಸುಲ್ತಾನ್ ಎಂಬ ಚಿತ್ರಕ್ಕಾಗಿ. ಈ ಸಿನಿಮಾದಲ್ಲಿ ಇವರ ಪಾತ್ರ ರೈತ ಮಹಿಳೆಯಾಗಿದ್ದು, ಪಾತ್ರಕ್ಕೆ ಬೇಕಾದ ರೀತಿಯಲ್ಲಿ ವೇಷತೊಟ್ಟು ರಶ್ಮಿಕಾ ಪಕ್ಕಾ ರೈತ ಕುಟುಂಬದವರಂತೆ ಕಾಣುತ್ತಿದ್ದಾರೆ.

    ಈ ದೃಶ್ಯವನ್ನು ಚಿತ್ರೀಕರಿಸುವಾಗ ನಾನು ಈ ಪಾತ್ರವನ್ನು ಎಷ್ಟೊಂದು ಆನಂದಿಸಿದ್ದೇನೆ ಎಂದು ನೀವು ನೋಡಬಹುದು ಅಂತ ಬರೆದುಕೊಂಡು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ತಮಿಳಿನ ಸುಲ್ತಾನ್ ಸಿನಿಮಾದಲ್ಲಿ ಕಾರ್ತಿ, ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ‘ಎಪ್ಪಡಿ ಇರುತ್ತಾ ನಾಂಗ’ ಸಾಂಗ್ ಶೂಟಿಂಗ್‍ನಲ್ಲಿನ ಒಂದು ದೃಶ್ಯವನ್ನು ಹಂಚಿಕೊಂಡಿದ್ದಾರೆ.

  • ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ರೈತ ಸಾವು

    ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ರೈತ ಸಾವು

    ಹಾವೇರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ರೈತ ಸಾವನ್ನಪ್ಪಿರುವ ದುರ್ಘಟನೆ ಹಾವೇರಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ರೈತನನ್ನು 45 ವರ್ಷದ ಹಾಲಪ್ಪ ಕಲ್ಯಾಣಪ್ಪ ಬಂಕಾಪುರ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಜಮೀನಿನಲ್ಲಿ ಮೆಕ್ಕೆಜೋಳದ ಮೇವು ತೆಗೆಯುತ್ತಿದ್ದ ವೇಳೆ ಹಾವು ಕಚ್ಚಿದೆ. ಹಾವು ಕಚ್ಚಿದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಚಿಕಿತ್ಸೆ ಫಲಕಾರಿಯಾಗದೆ ಹಾಲಪ್ಪ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಹಾರ ಅರಸಿ ಬಂದಿದ್ದ ಬೃಹದಾಕಾರ ಮೊಸಳೆ ರಕ್ಷಣೆ

    ಆಹಾರ ಅರಸಿ ಬಂದಿದ್ದ ಬೃಹದಾಕಾರ ಮೊಸಳೆ ರಕ್ಷಣೆ

    ಚಿಕ್ಕೋಡಿ: ಆಹಾರ ಹುಡುಕುತ್ತಾ ಬಂದು ಬಾವಿಯಲ್ಲಿ ಸಿಲುಕಿದ್ದ ಬೃಹತ್ ಆಕಾರದ ಮೊಸಳೆಯನ್ನು ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

    ಕೋಚರಿ ಗ್ರಾಮದ ರೈತ ರಾವಸಾಹೇಬ ಮಗದುಮ್ಮ ಎಂಬುವವರ ಹೊಲದಲ್ಲಿನ ಬಾವಿಯಲ್ಲಿ ಕಳೆದ ಒಂದು ವಾರದ ಹಿಂದೆ ಮೊಸಳೆಯೊಂದು ಬಂದು ಸೇರಿಕೊಂಡಿತ್ತು. ಆಹಾರ ಅರಸಿ ಹಿರಣ್ಯಕೇಶಿ ನದಿಯಿಂದ ಬಂದ ಮೊಸಳೆ ಬಾವಿಯಲ್ಲಿ ಸೇರಿಕೊಂಡಿತ್ತು. ಇದನ್ನ ಕಂಡ ಇಲ್ಲಿನ ರೈತರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು.

    ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಯಲ್ಲಿರುವ ಬೃಹತ್ ಗಾತ್ರದ ಮೊಸಳೆಯನ್ನ ಸೆರೆ ಹಿಡಿಯಲು ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಚಾಲಾಕಿ ಮೊಸಳೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆಗೆ ಬೀಳದೆ ತಪ್ಪಿಸಿಕೊಂಡು ಬಾವಿಯಲ್ಲಿ ಅವಿತು ಕುಳಿತಿತ್ತು. ಮೊಸಳೆ ಸೆರೆ ಸಿಗದೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

    ಸತತ ಒಂದು ವಾರಗಳ ಕಾಲ ಕಾರ್ಯಾಚರಣೆ ಬಳಿಕ ಮೊಸಳೆಯನ್ನ ಸೆರೆ ಹಿಡಿದು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಯಶಸ್ವಿಯಾಗಿದ್ದಾರೆ. ಸುಮಾರು 10 ಅಡಿ ಉದ್ದದ ಬೃಹತ್ ಮೊಸಳೆ ಇದಾಗಿದೆ.

  • ಕಿಡಿಗೇಡಿಗಳಿಂದ ಬೆಂಕಿ- 5 ಎಕರೆ ಬಾಳೆ ತೋಟ ಸುಟ್ಟು ಭಸ್ಮ

    ಕಿಡಿಗೇಡಿಗಳಿಂದ ಬೆಂಕಿ- 5 ಎಕರೆ ಬಾಳೆ ತೋಟ ಸುಟ್ಟು ಭಸ್ಮ

    ಕೋಲಾರ: ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ, ಫಸಲಿಗೆ ಬಂದಿದ್ದ ಬಾಳೆ ತೋಟ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ರೈತ ಕೃಷ್ಣಪ್ಪ ಅವರಿಗೆ ಸೇರಿದ 5 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಳೆದ ರಾತ್ರಿ ಕಿಡಿಗೇಡಿಗಳು ಪಕ್ಕದ ಜಮೀನಿನಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿಸಿರುವ ಅನುಮಾನವಿದೆ. ಇದರಿಂದ ಬಾಳೆ ತೋಟಕ್ಕೂ ಬೆಂಕಿ ಆವರಿಸಿದ ಪರಿಣಾಮ 5 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟ ಬೆಂಕಿಗಾಹುತಿಯಾಗಿದೆ ಎಂದು ಶಂಕಿಸಲಾಗಿದೆ.

    ಸಾಲ ಮಾಡಿ ಬೆಳಿದಿದ್ದ ಬಾಳೆಯನ್ನು ಇನ್ನೇನು ಕಿತ್ತು ಮಾರುಕಟ್ಟೆಗೆ ಮಾರಬೇಕಿತ್ತು, ಈ ಮಧ್ಯೆ ಫಸಲು ಬಂದು ತಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗುತ್ತೆ ಎಂದು ರೈತ ಕನಸು ಕಂಡಿದ್ದ. ಆದರೆ ಬೆಂಕಿ ಹೊತ್ತಿಕೊಂಡಿದ್ದರಿಂದ ಇದೀಗ ಕಂಗಾಲಾಗಿದ್ದಾರೆ. ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬಾಳೆ ತೋಟ ಮಾತ್ರವಲ್ಲದೆ ಬಾಳೆ ತೋಟದಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಿಪ್ ಹಾಗೂ ಸ್ಪಿಂಕ್ಲರ್ ಗಳು ಸಹ ಬೆಂಕಿಗಾಹುತಿಯಾಗಿವೆ.

    ವಿಷಯ ತಿಳಿದ ಸ್ಥಳೀಯರು ಹಾಗೂ ಕೃಷ್ಣಪ್ಪ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೂ ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿಯ ಕೆನ್ನಾಲಿಗೆಯಿಂದ ಸುಮಾರು 90 ಟನ್ ಇಳುವರಿ ನಷ್ಟವಾಗಿದೆ. ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

  • ಒಂದು ಬಾರಿ ಚಾರ್ಜ್ ಮಾಡಿದ್ರೆ 300 ಕಿ.ಮೀ – ಸೋಲಾರ್‌ ಕಾರ್ ಕಂಡು ಹಿಡಿದ ರೈತ

    ಒಂದು ಬಾರಿ ಚಾರ್ಜ್ ಮಾಡಿದ್ರೆ 300 ಕಿ.ಮೀ – ಸೋಲಾರ್‌ ಕಾರ್ ಕಂಡು ಹಿಡಿದ ರೈತ

    ಭುವನೇಶ್ವರ: ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ರೈತನೋರ್ವ ಸೋಲಾರ್ ಬ್ಯಾಟರಿ ಮೂಲಕ ಚಲಿಸುವ ನಾಲ್ಕು ಚಕ್ರದ ವಾಹನವನ್ನು ತಯಾರಿಸಿದ್ದಾರೆ.

    ಮಯೂರ್ ಭಂಜ್‍ನ ಕಾರಂಜಿಯಾ ಉಪವಿಭಾಗದ ಸುಶೀಲ್ ಅಗರ್‍ವಾಲ್ ಎಂಬವರು 850 ವ್ಯಾಟ್ಸ್ ಮೋಟಾರ್ ಹಾಗೂ 100 ಎಎಚ್/54 ವೋಲ್ಟ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಕಾರನ್ನು ತಯಾರಿಸಿದ್ದಾರೆ. ಅಲ್ಲದೆ ಒಂದು ಬಾರಿ ಚಾರ್ಜ್ ಮಾಡಿದರೆ ಈ ವಾಹನ 300 ಕಿ.ಮೀವರೆಗೂ ಚಲಿಸುತ್ತದೆ.

    ಪುಸ್ತಕಗಳನ್ನು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ನೋಡುವ ಮೂಲಕ ಲಾಕ್‍ಡೌನ್ ಸಮಯದಲ್ಲಿ ಸುಶೀಲ್ ಅಗರ್‍ವಾಲ್ ಈ ಕಾರನ್ನು ಮನೆಯಲ್ಲಿಯೇ ತಯಾರಿಸಿದ್ದಾರೆ. ಜೊತೆಗೆ ಕಾರಿನ ಬ್ಯಾಟರಿಯನ್ನು ಎಂಟೂವರೆ ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ತಿಳಿಸಿದ್ದಾರೆ.

    ನಾನು ಮನೆಯಲ್ಲಿಯೇ ವರ್ಕ್ ಶಾಪ್ ಹೊಂದಿದ್ದು, ಕೋವಿಡ್-19 ಲಾಕ್‍ಡೌನ್ ಸಮಯದಲ್ಲಿ ಕಾರನ್ನು ತಯಾರಿಸಲು ಆರಂಭಿಸಿದೆ. ಇದು 300 ಕಿಮೀ ವರೆಗೂ ಚಲಿಸುತ್ತದೆ. ಅಲ್ಲದೆ ಈ ವಾಹನದ ಬ್ಯಾಟರಿಯು ನಿಧಾನವಾಗಿ ಚಾರ್ಜ್ ಆಗುತ್ತದೆ. ಅಲ್ಲದೆ ಈ ಬ್ಯಾಟರಿ ಹತ್ತು ವರ್ಷ ಗ್ಯಾರಂಟಿ ಹೊಂದಿದೆ ಎಂದು ಸುಶೀಲ್ ಅಗರ್‍ವಾಲ್ ಹೇಳಿದ್ದಾರೆ. ಅಲ್ಲದೆ ತಮ್ಮ ಮನೆಯಲ್ಲಿರುವ ವರ್ಕ್‍ಶಾಪ್‍ನಲ್ಲಿ ಮೋಟಾರ್ ವಿಂಡಿಂಗ್, ಎಲೆಕ್ಟ್ರಿಕಲ್ ಫಿಟ್ಟಿಂಗ್ ಮತ್ತು ಚಾಸಿಸ್ ಎಲ್ಲ ಕೆಲಸಗಳನ್ನು ಇಬ್ಬರು ಮೆಕಾನಿಕ್ಸ್ ಮತ್ತು ಸ್ನೇಹಿತರೊಬ್ಬರ ಸಹಾಯದಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಲಾಕ್‍ಡೌನ್ ವೇಳೆ ನಾನು ಮನೆಯಲ್ಲೇ ಇದ್ದಿದ್ದರಿಂದ ಬೇಸರವಾಗುತ್ತಿತ್ತು ಈ ವೇಳೆ ಕಾರನ್ನು ನಿರ್ಮಿಸಲು ಯೋಚಿಸಿದೆ. ಲಾಕ್‍ಡೌನ್ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿಕ ಇಂಧನ ಬೆಲೆ ಹೆಚ್ಚಾಗುತ್ತದೆ ಎಂದು ನನಗೆ ತಿಳಿದಿತ್ತು. ಹಾಗಾಗಿ ನಾನು ಸೋಲಾರ್ ಬ್ಯಾಟರಿ ಮೂಲಕ ಚಲಿಸುವ ಕಾರನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ನುಡಿದರು.

  • ಹೊತ್ತಿ ಉರಿದ ಗುಡಿಸಲು – 60 ಕ್ಕೂ ಹೆಚ್ಚು ಕುರಿ, ಮೇಕೆ ಬೆಂಕಿಗೆ ಬಲಿ

    ಹೊತ್ತಿ ಉರಿದ ಗುಡಿಸಲು – 60 ಕ್ಕೂ ಹೆಚ್ಚು ಕುರಿ, ಮೇಕೆ ಬೆಂಕಿಗೆ ಬಲಿ

    ಮನಕಲುಕುವಂತಿದೆ ಮೂಕಪ್ರಾಣಿಗಳ ಸಾವಿನ ದೃಶ್ಯ.

    ಚಿಕ್ಕಬಳ್ಳಾಪುರ: 60 ಕ್ಕೂ ಹೆಚ್ಚು ಕುರಿ-ಮೇಕೆ ಜಾನುವಾರುಗಳು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಪೂಲಮಾಕಲಹಳ್ಳಿ ನಡೆದಿದೆ.

    ಗ್ರಾಮದ ಗಂಗಾಧರಪ್ಪ ಹಾಗೂ ತುಳಸಮ್ಮ ದಂಪತಿಗೆ ಕುರಿ, ಮೇಕೆ, ಹಸುಗಳೇ ಜೀವನಾಧಾರವಾಗಿದ್ದವು. ಕಾಡು ಮೇಡುಗಳಲ್ಲಿ ಅಲೆದು ಮೂಕ ಜೀವಿಗಳ ಜೊತೆಗೆ ಬದುಕು ಕಟ್ಟಿಕೊಂಡಿದ್ದ ಗಂಗಾಧರಪ್ಪ ನಿನ್ನೆ ಸಂಜೆ ಹುಲ್ಲಿನ ಮನೆಯಲ್ಲಿ ಜಾನುವಾರುಗಳನ್ನ ಕೂಡಿಹಾಕಿ ಮನೆಗೆ ಹೋಗಿದ್ದಾರೆ.

    ಆಕಸ್ಮಿಕ ಬೆಂಕಿಯೋ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಕರಿಗಳಿದ್ದ ಗುಡಿಸಲಿಗೆ ಬೆಂಕಿ ತಗುಲಿದೆ. 60ಕ್ಕೂ ಹೆಚ್ಚು ಕುರಿ, ಮೇಕೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆಯಿಂದ ಹಸುಗಳು ತಪ್ಪಿಸಿಕೊಂಡು ಪರಾರಿಯಾಗಿವೆ. ಗಂಗಾಧರಪ್ಪ ಕುಟುಂಬಕ್ಕೆ ಜಾನುವಾರುಗಳೇ ಬದುಕಾಗಿದ್ದು, ಸಾಲ ಸೋಲ ಮಾಡಿ ತಮ್ಮ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಜಾನುವಾರುಗಳ ಪೆÇೀಷಣೆಯಲ್ಲಿ ತೊಡಗಿದ್ದರು.

    ಕಳೆದ ರಾತ್ರಿ ಸಂಭವಿಸಿದ ದುರಂತದಲ್ಲಿ ಬದುಕನ್ನ ಬೆಂಕಿ ಬಲಿ ಪಡೆದಂತಿದೆ. ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾದ ರೈತ ಗಂಗಾಧರಪ್ಪ ಕುಟುಂಬಕ್ಕೆ ಶಾಸಕ ಶಿವಶಂಕರರೆಡ್ಡಿ ಸಾಂತ್ವಾನದ ಮಾತುಗಳನ್ನು ಹೇಳಿದ್ದಾರೆ. ಸರ್ಕಾರದಿಂದ ಬರುವ ಪರಿಹಾರದ ಜೊತೆಗೆ ಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ.