Tag: farmer

  • ಮೂರು ಎಕರೆ ಕಲ್ಲಂಗಡಿ ಬೆಳೆಯನ್ನು ನಾಶಗೊಳಿಸಿದ ರೈತ

    ಮೂರು ಎಕರೆ ಕಲ್ಲಂಗಡಿ ಬೆಳೆಯನ್ನು ನಾಶಗೊಳಿಸಿದ ರೈತ

    ಕಲಬುರಗಿ: ಲಾಕ್‍ಡೌನ್‍ನಿಂದ ಕಲ್ಲಂಗಡಿ ಹಣ್ಣು ಮಾರಾಟವಾಗದ ಹಿನ್ನಲೆ, ಟ್ರ್ಯಾಕ್ಟರ್ ಹೊಡೆದು ತಾನೇ ಬೆಳೆದ ಕಲ್ಲಂಗಡಿ ಹಣ್ಣನ್ನು ರೈತ ಹಾಳು ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದುಗನೂರು ಗ್ರಾಮದಲ್ಲಿ ನಡೆದಿದೆ.

    ರಾಮಲಿಂಗಯ್ಯ ಕಲಾಲ್ ಎಂಬ ರೈತ ಮೂರು ಎಕರೆಯಲ್ಲಿ ಎರಡು ಲಕ್ಷ ಹಣ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಆದರೆ ಲಾಕ್‍ಡೌನ್‍ನಿಂದ ಹಣ್ಣು ಮಾರಾಟವಾಗದೇ ಹೊಲದಲ್ಲಿಯೇ ಹಾಳಾಗಿ ಹೋಗಿದೆ. ಹೀಗಾಗಿ ಕಲ್ಲಂಗಡಿ ಕಿತ್ತು ಬೇರೆ ಬೆಳೆಯಲು ರಾಮಲಿಂಗಯ್ಯ ಮುಂದಾಗಿದ್ದಾರೆ. ಇದನ್ನು ಓದಿ:ಕಠಿಣ ಲಾಕ್‍ಡೌನ್ ಮಧ್ಯೆ ಹೊರ ರಾಜ್ಯಗಳಿಂದ ಕಳ್ಳ ದಾರಿಗಳ ಮೂಲಕ ಎಂಟ್ರಿ- ಕೊರೊನಾ ಹೊತ್ತು ತರುವ ಆತಂಕ

    ಕಳೆದ ವರ್ಷ ಸಹ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಕೈ ಸುಟ್ಟುಕೊಂಡಿದ್ದರು. ಈ ಬಾರಿ ಸಹ ಕೊರೊನಾ ಲಾಕ್ ಡೌನ್ ಹಿನ್ನಲೆ ಅದೇ ಪರಿಸ್ಥಿತಿ ಬಂದಿದೆ. ಮಾರುಕಟ್ಟೆಗೆ ಹಣ್ಣು ತೆಗೆದುಕೊಂಡು ಹೋಗಬೇಕು ಅಂದರೂ, ಗೂಡ್ಸ್ ವಾಹನದವರು ಯಾರು ಮುಂದೆ ಬರುತ್ತಿಲ್ಲ. ನಾವಾದರೂ ಹೋಗಿ ಮಾರಾಟ ಮಾಡಬೇಕು ಅಂದರೂ ಖರೀದಿ ಮಾಡುವವರಿಲ್ಲ. ಹೀಗಾಗಿ ಕಲ್ಲಂಗಡಿ ಹಣ್ಣು ಬೆಳೆದು ಕೈ ಸುಟ್ಟಾಗಿದೆ. ಹೀಗಾಗಿ ಸರ್ಕಾರ ಕಲ್ಲಂಗಡಿ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

  • ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ- ರೈತನ ಬೆನ್ನಿಗೆ ನಿಂತ ಉಪೇಂದ್ರ

    ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ- ರೈತನ ಬೆನ್ನಿಗೆ ನಿಂತ ಉಪೇಂದ್ರ

    ಬೀದರ್: ಕೊರೊನಾ ಮಹಾಮಾರಿ ಅದೆಷ್ಟೋ ರೈತರ ಬದುಕನ್ನೇ ಕಿತ್ತುಕೊಂಡಿದೆ. ಸಾಲ ಮಾಡಿ ಬೆಳೆದ ಬೆಳೆಗೆ ಪ್ರತಿಫಲ ಸಿಗದೆ ಹಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ರೀತಿ ರೈತರೊಬ್ಬರು ಕಲ್ಲಂಗಡಿ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಇವರ ನೆರವಿಗೆ ಇದೀಗ ನಟ ಉಪೇಂದ್ರ ಧಾವಿಸಿದ್ದಾರೆ.

    ಜಿಲ್ಲೆಯ ಔರಾದ್ ತಾಲೂಕಿನ ತೇಗಂಪೂರ ಗ್ರಾಮದ ರೈತ ಶಿವು ಮೊಕ್ತೆದಾರ್ ಗೆ ನಟ ಉಪೇಂದ್ರ ಆರ್ಥಿಕ ವೆಚ್ಚದ ಭರವಸೆ ನೀಡಿದ್ದಾರೆ. ಒಟ್ಟು 2 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಕಲ್ಲಂಗಡಿ ಮಾರಾಟ ಮಾಡಲಾಗಿದೆ ರೈತ ಕಂಗಾಲಾಗಿದ್ದರು. ರೈತನ ಆರ್ಥಿಕ ಸಂಕಷ್ಟದ ಬಗ್ಗೆ ಮಾಹಿತಿ ಪಡೆದ ನಟ ಉಪೇಂದ್ರ, ಆಪ್ತ ಸ್ನೇಹಿತ ರಾಜಾರಾಮ ಮೂಲಕ ಮಾತನಾಡಿಸಿ ಆರ್ಥಿಕ ಭರವಸೆ ನೀಡಿದ್ದಾರೆ. ನೀವು ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಕಲ್ಲಂಗಡಿ ಹಣ್ಣು ಖರೀದಿ ಮಾಡಿ ನಿರ್ಗತಿಕರಿಗೆ, ಬಡವರಿಗೆ ಉಚಿತವಾಗಿ ಹಂಚಿಕೆ ಮಾಡುತ್ತೇವೆ ಎಂದು ಉಪೇಂದ್ರ ನೊಂದ ರೈತನ ಬೆನ್ನಿಗೆ ನಿಂತಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ನಾನು ಬೆಳೆದ ಕಲ್ಲಂಗಡಿ ಮಾರಾಟ ಮಾಡಲಾಗದೆ ಕಂಗಾಲಾಗಿದ್ದೆ. ಈ ಸಮಯದಲ್ಲಿ ನಟ ಉಪೇಂದ್ರ ನನ್ನ ಖರ್ಚು ವೆಚ್ಚಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ನೊಂದ ರೈತ ಶಿವು ಮೊಕ್ತೆದಾರ್ ಉಪೇಂದ್ರ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

  • ವಿದ್ಯುತ್ ತಂತಿ ತುಳಿದು ರೈತ ಸಾವು

    ವಿದ್ಯುತ್ ತಂತಿ ತುಳಿದು ರೈತ ಸಾವು

    ಮಂಡ್ಯ: ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿದರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೆಂಚಭೋವಿದೊಡ್ಡಿ ಗ್ರಾಮದಲ್ಲಿ ಜರುಗಿದೆ.

    ಕೆಂಚಭೋವಿದೊಡ್ಡಿ ಗ್ರಾಮದ ರೈತ ಪುಟ್ಟೇಗೌಡ ಮೃತ ದುರ್ದೈವಿ. ಪುಟ್ಟೇಗೌಡ ಅವರು ಎಂದಿನಂತೆ ಬೆಳಗ್ಗೆ ಜಮೀನಿಗೆ ನೀರು ಹಾಯಿಸಲು ತೆರಳಿದ್ದಾರೆ. ಈ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ, ಪರಿಹಾರ ನೀಡಬೇಕೆಂದು ಆಗ್ರಹಪಡಿಸಿದ್ದಾರೆ. ಹಲಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

  • ಲಾಕ್‍ಡೌನ್ ಹೊಡೆತಕ್ಕೆ ನೆಲಕಚ್ಚಿದ ಸೀಬೆ ಬೆಳೆ – ರೈತನ ಸಂಕಷ್ಟಕ್ಕೆ ಮರುಗಿದ ರಿಯಲ್ ಸ್ಟಾರ್

    ಲಾಕ್‍ಡೌನ್ ಹೊಡೆತಕ್ಕೆ ನೆಲಕಚ್ಚಿದ ಸೀಬೆ ಬೆಳೆ – ರೈತನ ಸಂಕಷ್ಟಕ್ಕೆ ಮರುಗಿದ ರಿಯಲ್ ಸ್ಟಾರ್

    ದಾವಣಗೆರೆ: ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರವರು ಹತ್ತು ಬಾಕ್ಸ್ ಸೀಬೆ ಹಣ್ಣು ಖರೀದಿಸುವ ಮೂಲಕ ರೈತರೊಬ್ಬರ ಕಷ್ಟಕ್ಕೆ ಆಸರೆಯಾಗಿದ್ದಾರೆ.

    ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟಿ ಗ್ರಾಮದ ರೈತ ಜಯವರ್ಧನ್ ಎಂಬವರು ಮೂರು ಎಕರೆಯಲ್ಲಿ ಸೀಬೆ ಹಣ್ಣನ್ನು ಬೆಳೆದಿದ್ದರು. ಆದರೆ ಲಾಕ್‍ಡೌನ್‍ನಿಂದ ನೂರಾರು ಕ್ವಿಂಟಲ್ ಪೇರಲೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗದೆ ನಷ್ಟ ಅನುಭವಿಸುವಂತಾಗಿತ್ತು.

    25 ಕೆಜಿ ಹಣ್ಣಿನ ಒಂದು ಬಾಕ್ಸ್ ಗೆ ಮಾಮೂಲಿ ದಿನಗಳಲ್ಲಿ 700 ರಿಂದ 800 ರವರೆಗೆ ಬೆಲೆ ಸಿಗುತ್ತಿತ್ತು. ಇದೀಗ ಲಾಕ್‍ಡೌನ್‍ನಿಂದ ಕೇವಲ 150 ರೂಪಾಯಿಗೆ ದಲ್ಲಾಳಿಗಳು ಕೇಳುತ್ತಿದ್ದು, ರೈತ ಜಯವರ್ಧನ್ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ ಕೊಯ್ದ ಕೂಲಿ ಹಾಗೂ ಮಾರುಕಟ್ಟೆಗೆ ಸಾಗಿಸುವ ವಾಹನದ ಖರ್ಚು ಕೂಡ ಅವರ ಮೇಲೆ ಬೀಳುತ್ತಿತ್ತು.

    ಫೇಸ್ ಬುಕ್‍ನಲ್ಲಿ ರೈತ ಜಯವರ್ಧನ್ ಹಾಗೂ ದೇವರಾಜ್‍ರವರು ತಾವು ಬೆಳೆದ ಸೀಬೆ ಹಣ್ಣಿನ ಬೆಳೆಯ ಬಗ್ಗೆ ವೀಡಿಯೋ ಮಾಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಲಕ್ಷಾಂತರ ರೂಪಾಯಿ ಹಣ ವ್ಯಯ ಮಾಡಿ ಸೀಬೆ ಬೆಳೆ ಬೆಳೆದ ರೈತ ಜಯವರ್ಧನ್ ಅವರ ನೆರವಿಗೆ ನಟ ಉಪೇಂದ್ರರವರು ಮುಂದಾಗಿದ್ದಾರೆ.

    ಈ ವೀಡಿಯೋ ನೋಡಿ ಉಪೇಂದ್ರರವರು ರೈತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು, ಬಳಿಕ ಸ್ಥಳೀಯ ಅಭಿಮಾನಿಗಳನ್ನು ಸಂಪರ್ಕಿಸಿ 25 ಕೆಜಿಯಂತೆ ಹತ್ತು ಬಾಕ್ಸ್ ಸೀಬೆ ಹಣ್ಣನ್ನಯ ಒಂದು ಬಾಕ್ಸ್‍ಗೆ 300 ರೂಪಾಯಿಯಂತೆ ಮೂರು ಸಾವಿರ ಹಣ ನೀಡಿ ಖರೀದಿ ಮಾಡಿದ್ದಾರೆ. ಅಲ್ಲದೆ ಉಚಿತವಾಗಿ ದಾವಣಗೆರೆಯಲ್ಲಿ ಬಡ ಜನರಿಗೆ ಹಂಚಿಕೆ ಮಾಡಿದ್ದಾರೆ. ಇದೇ ರೀತಿ ಜನಪ್ರತಿನಿಧಿಗಳು ಕೆಲಸ ಮಾಡಿದರೆ ರೈತರು ಸಂಕಷ್ಟದಿಂದ ಪಾರಗಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.

  • ಹೂವಿಗೆ ಕೊರೊನಾ ಕರಿನೆರಳು- ಬೆಳೆ ನಾಶ ಮಾಡಿದ ರೈತರು

    ಹೂವಿಗೆ ಕೊರೊನಾ ಕರಿನೆರಳು- ಬೆಳೆ ನಾಶ ಮಾಡಿದ ರೈತರು

    ಹಾವೇರಿ: ಕೊರೊನಾ ಅರ್ಭಟದಿಂದ ಅನ್ನದಾತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೇವಂತಿಗೆ ಹೂವು ಮಾರಾಟವಾಗದೆ ಹಾಗೆ ಉಳಿದಿದ್ದರಿಂದ ರೈತರು ಟ್ರ್ಯಾಕ್ಟರ್​ನಿಂದ  ಹೂವಿನ ಬೆಳೆ ನಾಶ ಮಾಡಿದ ಘಟನೆ ಹಾವೇರಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಚಂದ್ರಪ್ಪ ಅವರು ಒಂದು ಎಕರೆ ಜಮೀನಿನಲ್ಲಿ ಸೇವಂತಿಗೆ ಹೂವನ್ನು ಬೆಳೆದಿದ್ದರು. ಲಾಕ್‍ಡೌನ್ ನಿಂದ ಹೂವು ಮಾರಾಟವಾಗದೆ ಜಮೀನಿನಲ್ಲಿ ಹಾಗೆ ಉಳಿದಿದ್ದಕ್ಕೆ ಬೇಸತ್ತ ರೈತ ಇವತ್ತು ಬೆಳೆ ನಾಶ ಮಾಡಿದ್ದಾರೆ. ಇಪ್ಪತ್ತೈದು ಸಾವಿರ ರುಪಾಯಿಗಿಂತಲೂ ಅಧಿಕ ಹಣವನ್ನು ಖರ್ಚು ಮಾಡಿ ಸೇವಂತಿಗೆ ಹೂವನ್ನು ಬೆಳೆದಿದ್ದರು.

    ಮಾರುಕಟ್ಟೆಯಲ್ಲಿ ಖರೀದಿ ಮಾಡುವ ವ್ಯಾಪಾರಸ್ಥರು ಕಡಿಮೆ ಬೆಲೆ ಕೇಳುತ್ತಿದ್ದಾರೆ. ಅದನ್ನ ಬೆಳೆದ ಹಾಗೂ ಖರ್ಚು ಮಾಡಿದ ಹಣವೂ ಬರುವುದಿಲ್ಲ. ಹೀಗಾಗಿ ಟ್ಯಾಕ್ಟರ್ ನಿಂದ ನಾಶ ಮಾಡಿದ್ದೇನೆ ಎಂದು ರೈತ ಹೇಳುತ್ತಾ ಕಣ್ಣಿರು ಹಾಕಿದ್ದಾರೆ.

  • ಉಚಿತವಾಗಿ ಬೆಳೆ ನೀಡಿ ಉಪ್ಪಿ ಸಮಾಜ ಸೇವೆಗೆ ಸಾಥ್ ನೀಡಿದ ರೈತ

    ಉಚಿತವಾಗಿ ಬೆಳೆ ನೀಡಿ ಉಪ್ಪಿ ಸಮಾಜ ಸೇವೆಗೆ ಸಾಥ್ ನೀಡಿದ ರೈತ

    ಬೆಂಗಳೂರು: ಉಪೇಂದ್ರ ಅವರು ಮಾಡುತ್ತಿರುವ ಸಮಾಜ ಸೇವೆಗೆ ಉಚಿತವಾಗಿ ಟೊಮೇಟೋ ನೀಡುವ ಮೂಲಕವಾಗಿ ರೈತರೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸಿದ್ದರಾಜು ಬ್ಯಾಲಾಳು ಗ್ರಾಮದ ರೈತರು ಇಂದು 15 ಕ್ರೇಟ್ ಟೊಮೇಟೋ ಉಚಿತವಾಗಿ ಕೊಟ್ಟು ಬೇಕಾದವರಿಗೆ ಹಂಚಿ ಎಂದು ನಮಗೆಲ್ಲರಿಗೂ ಮಾದರಿಯಾದರು. ಟೊಮೇಟೋಗೆ ಹಣ ಪಡೆಯಲು ನಿರಾಕರಿಸಿದ ಬ್ಯಾಲಾಳು ಸಿದ್ದರಾಜು ತನ್ನ ಗ್ರಾಮದಲ್ಲಿ ಸಂಕಷ್ಟದಲ್ಲಿರುವ ಇಪ್ಪತ್ತು ಕುಟುಂಬಕ್ಕೆ ದಿನಸಿ ಕಿಟ್ ವಿತರಿಸುವ ಜವಾಬ್ಧಾರಿಯನ್ನು ತಾನೇ ವಹಿಸಿಕೊಂಡು ಕಿಟ್ ಕೊಂಡೊಯ್ಯುತ್ತಿದ್ದಾರೆ ಎಂದು ಉಪೇಂದ್ರ ಅವರು ಮಾದರಿ ರೈತರ ಕುರಿತಾಗಿ ಟ್ವೀಟ್ ಮಾಡುವಮೂಲಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಲಾಕ್‍ಡೌನ್ ಕಾರಣ ಸಂಪಾದನೆ ಇಲ್ಲದೇ ಕೂತಿರುವ ರೈತರು ಹಾಗೂ ಬಡವರ ಪಾಲಿಗೆ ನಟ ಉಪೇಂದ್ರ ಅವರು ನೆರವಿಗೆ ನಿಂತಿದ್ದಾರೆ. ಇದೀಗ ಉಪೇಂದ್ರ ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಬ್ಯಾಲಾಳು ಗ್ರಾಮದ ರೈತರೊಬ್ಬರು ಸಾಥ್ ನೀಡಿದ್ದಾರೆ. ತಾವು ಬೆಳೆದಿರುವ ಫಸಲನ್ನು ಉಚಿತವಾಗಿ ಉಪೇಂದ್ರ ಅವರ ಕೈಗೊಪ್ಪಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಸಿನಿಕಾರ್ಮಿಕರಿಗೆ, ಬಡವರಿಗೆ ದಿನಸಿ ಕಿಟ್‍ಗಳನ್ನು ನೀಡುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಈಗ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ. ಬೆಳೆಯನ್ನು ಖರೀದಿ ಮಾಡಿ ಅಗತ್ಯ ಇರುವವರಿಗೆ ಹಂಚಿಕೆ ಮಾಡುತ್ತಿರುವ ಉಪೇಂದ್ರ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಕೊರೊನಾಗೆ ಹೂವು ಬೆಳೆಗಾರರು ಕಂಗಾಲು – ಬೆಳೆ ನಾಶ ಮಾಡಿದ ರೈತ

    ಕೊರೊನಾಗೆ ಹೂವು ಬೆಳೆಗಾರರು ಕಂಗಾಲು – ಬೆಳೆ ನಾಶ ಮಾಡಿದ ರೈತ

    ಹಾವೇರಿ: ಕೊರೊನಾ ಅರ್ಭಟದಿಂದ ರಾಜ್ಯದ ಅನ್ನದಾತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾವೇರಿ ತಾಲ್ಲೂಕು ನಾಗನೂರು ಗ್ರಾಮದ ರೈತನೋರ್ವ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಸೇವಂತಿಗೆ ಹೂವಿನ ಬೆಳೆ ನಾಶ ಮಾಡಿದ್ದಾರೆ.

    ನಾಗನೂರು ಗ್ರಾಮದ ರೈತ ಹೋಳಿಯಪ್ಪ ಸಂಗಾಪುರ ಎಂಬುವರು ಒಂದು ಎರಕೆಯಲ್ಲಿ ಸೇವಂತಿಗೆ ಹೂವು ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ, ಕಡಿಮೆ ದರ ಕೇಳುತ್ತಿದ್ದಾರೆ. ಇದರಿಂದ ಕಂಗಾಲಾದ ರೈತ ಟ್ಯಾಕ್ಟರ್ ನಿಂದ ರೂಟರ್ ಹೊಡೆದು ಸೇವಂತಿಗೆ ಹೂವಿನ ಬೆಳೆಯನ್ನ ಸಂಪೂರ್ಣವಾಗಿ ನಾಶ ಮಾಡಿದ್ದಾರೆ.

    ಸುಮಾರು 20 ರಿಂದ 30 ಸಾವಿರ ಖರ್ಚು ಮಾಡಿ ಸೇವಂತಿಗೆ ಹೂವು ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗುತ್ತಿಲ್ಲ. ಕಡಿಮೆ ಬೆಲೆ ಕೇಳುತ್ತಿದ್ದಾರೆ. ಕೆಲವು ಭಾರಿ ಸರಿಯಾದ ಬೆಲೆ ಸಿಗದೆ ಸೇವಂತಿಗೆ ಹೂವುವನ್ನು ಮಾರುಕಟ್ಟೆಯಲ್ಲಿ ಸುರಿದು ಬಂದಿದ್ದೇನೆ. ಅದಕ್ಕೆ ಟ್ಯಾಕ್ಟರ್ ನಿಂದ ರೂಟರ್ ಹೊಡೆದು ಬೆಳೆ ನಾಶ ಮಾಡುತ್ತಿದ್ದೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

  • ಬದನೆಕಾಯಿ, ಟೊಮೆಟೊ ಬೆಳೆದಿದ್ದ ಅನ್ನದಾತ ಕಂಗಾಲು

    ಬದನೆಕಾಯಿ, ಟೊಮೆಟೊ ಬೆಳೆದಿದ್ದ ಅನ್ನದಾತ ಕಂಗಾಲು

    ಹಾವೇರಿ: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ರೈತರೂ ಕೂಡ ಕಂಗಾಲಾಗಿದ್ದಾರೆ. ತಾವು ಬೆಳೆದಿದ್ದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಿದ್ದಾರೆ.

    ಹಾವೇರಿಯ ಕನಕಾಪುರ ಗ್ರಾಮದ ರೈತ ಪಕ್ಕೀರಗೌಡ ಅವರು ತಾವು ಬೆಳೆದಿದ್ದ ಬದನೆಕಾಯಿ, ಟೊಮೆಟೊಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಬೇಸರ ವ್ಯಕ್ತಪಡಿಸಿದ್ದಾರೆ.

    ಫಕೀರಪ್ಪ ಅವರು ತಮ್ಮ ಒಂದು ಎಕರೆಯಲ್ಲಿ ಬೆಳೆದ ಬದನೆಕಾಯಿ ಬೆಳೆ ಫಸಲಿಗೆ ಬರುತ್ತಿದ್ದಂತೆ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಾಗಿ ಸದ್ಯ ಬದನೆಕಾಯಿ ಹಾಗೂ ಟೊಮೆಟೊ ಗಿಡದಲ್ಲಿ ಹಣ್ಣಾಗಿ ಹಾಳಾಗುತ್ತಿದ್ದು, ಬದನೆಕಾಯಿ ಕಿತ್ತು ಬೀದಿಗೆ ಹಾಕೋ ಪರಿಸ್ಥಿತಿಗೆ ಬಂದಿದೆ. ಇತ್ತ ದಲ್ಲಾಳಿಗಳು ನೂರು ರೂಪಾಯಿಗೆ ನಾಲ್ಕು ಟ್ರೇ ಬದನೆಕಾಯಿ ಕೇಳುತ್ತಿದ್ದಾರೆ. ಆದರೆ ಈ ಹಣ ವಾಹನದ ಬಾಡಿಗೆಯೂ ಬಾರದ ಹಿನ್ನೆಲೆಯಲ್ಲಿ ರೈತ ಕಣ್ಣೀರು ಹಾಕುತ್ತಿದ್ದಾರೆ.

    ಸುಮಾರು ಮೂರು ಎಕರೆ ಜಮೀನು ಹೊಂದಿರುವ ರೈತ, 20 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಅಂದಾಜು ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಲಾಕ್ ಡೌನ್ ನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಮದುವೆ, ಸಭೆ ಸಮಾರಂಭಗಳು ನಡೆಯದ ಕಾರಣ ಬೇಡಿಕೆ ಕೂಡ ಕಡಿಮೆಯಾಗಿದೆ. ಹೀಗಾಗಿ ಫಕೀರಪ್ಪ ಕಣ್ಣೀರು ಹಾಕುತ್ತಿದ್ದಾರೆ.

  • ರೈತನ ಮಗ ಈಗ ಕೆಪಿಎಸ್‍ಸಿ ಸದಸ್ಯ

    ರೈತನ ಮಗ ಈಗ ಕೆಪಿಎಸ್‍ಸಿ ಸದಸ್ಯ

    ಬೆಂಗಳೂರು: ರೈತ ಕುಟುಂಬದಲ್ಲಿ ಹುಟ್ಟಿ, ಉತ್ತಮ ಶಿಕ್ಷಣ ಪಡೆದು, ವಿದೇಶದಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ ಪಿಹೆಚ್‍ಡಿ ಪದವೀಧರ, ಪ್ರಸ್ತುತ ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾ. ಬಿ. ಪ್ರಭುದೇವ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.

    ಡಾ. ಬಿ. ಪ್ರಭುದೇವ್ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದವರು. ದಿ. ಬಸವೇಗೌಡ ಹಾಗೂ ದಿ. ಕೆಂಪಮ್ಮ ಅವರ ಪುತ್ರ ಡಾ. ಪ್ರಭುದೇವ್ ಪಾಂಡವಪುರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ.

    ಮಂಡ್ಯ ಜಿಲ್ಲೆಯ ಪಿಇಎಸ್ ಕಾಲೇಜಿನಲ್ಲಿ ಬಿ.ಇ. ಪದವಿ, ಮೈಸೂರಿನ ವಿವಿಯಲ್ಲಿ ವ್ಯವಹಾರ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪಿಹೆಚ್‍ಡಿ ಪದವಿ ಪಡೆದರು.

    ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ಕನ್ನಡ ಮಾಧ್ಯಮದಲ್ಲಿ ಕರ್ನಾಟಕ ಆಡಳಿತ ಸೇವೆ ಪರೀಕ್ಷೆ ಬರೆದಿರುವ ಇವರು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ, ಕರಕುಶಲ ಅಭಿವೃದ್ಧಿ ನಿಗಮ, ಹಟ್ಟಿ ಚಿನ್ನದ ಗಣಿ, ಪರಿಸರ ಪ್ರವಾಸೋದ್ಯಮ ನಿಗಮಗಳಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

    ಅಮೆರಿಕದ ಡೆಟ್ರಾಯಿಟ್ ನಲ್ಲಿರುವ ಫೋರ್ಡ್ ಮೋಟಾರ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ, ಶ್ಲಾಘನಾ ಪತ್ರವನ್ನೂ ಪಡೆದಿದ್ದಾರೆ. ಎ.ಎಸ್.ಕ್ಯೂ. ಸಂಸ್ಥೆಯಿಂದ ಸರ್ಟಿಫೈಡ್ ಕ್ವಾಲಿಟಿ ಇಂಜಿನಿಯರ್ ವಿಷಯದಲ್ಲಿ ಪರಿಣಿತಿಯನ್ನೂ ಹೊಂದಿದ್ದಾರೆ. ಅಮೆರಿಕದ ಕನ್ನಡ ಕೂಟಗಳ ಆಗರ, ಒಕ್ಕಲಿಗ ಪರಿಷತ್ ಆಗರ, ಉತ್ತರ ಅಮೇರಿಕದ ವೀರಶೈವ ಸಮಾಜ ಆಗರ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

    ಪ್ರಸ್ತುತ ಕೌಶಲ್ಯಾಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ. ಪ್ರಭುದೇವ್ ಅವರನ್ನು ರಾಜ್ಯ ಸರ್ಕಾರ ಕೆಪಿಎಸ್‍ಸಿ ಸದಸ್ಯರನ್ನಾಗಿ ನೇಮಿಸಿದೆ.

  • ತೀರುವಳಿ ಪತ್ರ ನೀಡಿ, ಸಾಲ ಕಟ್ಟುವಂತೆ ರೈತಗೆ ಎಸ್‍ಬಿಐ ಮತ್ತೆ ನೋಟಿಸ್

    ತೀರುವಳಿ ಪತ್ರ ನೀಡಿ, ಸಾಲ ಕಟ್ಟುವಂತೆ ರೈತಗೆ ಎಸ್‍ಬಿಐ ಮತ್ತೆ ನೋಟಿಸ್

    ಚಾಮರಾಜನಗರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ರೈತನಿಗೆ ತೀರುವಳಿ ಪತ್ರ ನೀಡಿದೆ. ಆದರೆ ಮೂರು ತಿಂಗಳ ನಂತರ ಸಾಲ ಕಟ್ಟುವಂತೆ ರೈತನಿಗೆ ಮತ್ತೆ ನೋಟಿಸ್ ನೀಡಿ ಎಡವಟ್ಟು ಮಾಡಿದೆ.

    ತಾಲೂಕಿನ ಬೇಡರಪುರದ ರೈತ ಶಿವಸ್ವಾಮಿ ಅವರಿಗೆ ಎಸ್‍ಬಿಐ ನೋಟಿಸ್ ನೀಡಿದೆ. 10 ಲಕ್ಷ ರೂಪಾಯಿ ಬೆಳೆ ಸಾಲ ಬಾಕಿ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ. ಮೂರು ತಿಂಗಳ ಹಿಂದಷ್ಟೇ ಯಾವುದೇ ಬಾಕಿ ಇಲ್ಲ ಎಂದು ರೈತನಿಗೆ ಬ್ಯಾಂಕ್ ಸಾಲ ತೀರುವಳಿ ಪತ್ರ ನೀಡಿದೆ. ಸಾಲ ಮನ್ನಾ ಆಗಿದೆ ಎಂದು ರೈತ ಶಿವಸ್ವಾಮಿ ಖುಷಿಯಾಗಿದ್ದರು. ಆದರೆ ಇದೀಗ ದಿಢೀರನೆ ಬಂದ ನೋಟಿಸ್ ನೋಡಿ ಕಂಗಾಲಾಗಿದ್ದಾರೆ.

    ವಿಷಯ ತಿಳಿದು ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ನೋಟಿಸ್ ಹಿಂಪಡೆದು ನೋ ಡ್ಯೂ ಸರ್ಟಿಫಿಕೇಟ್ ನೀಡುವುದಾಗಿ ಬ್ಯಾಂಕ್ ವ್ಯವಸ್ಥಾಪಕ ಲಿಖಿತ್ ತಿಳಿಸಿದರು. ಬಳಿಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು.