Tag: farmer

  • 2 ವರ್ಷಗಳ ಹಿಂದೆ ಮಾರಿದ್ದ ಎತ್ತು, ವಧಾಲಯದಲ್ಲಿ ನೋಡಿದ ರೈತ

    2 ವರ್ಷಗಳ ಹಿಂದೆ ಮಾರಿದ್ದ ಎತ್ತು, ವಧಾಲಯದಲ್ಲಿ ನೋಡಿದ ರೈತ

    – ವಾಪಸ್ ತಂದು ಎತ್ತಿನ ಬರ್ತ್ ಡೇ ಆಚರಿಸಿ ಸಂಭ್ರಮ

    ಧಾರವಾಡ: ಎತ್ತುಗಳು ಅಂದ್ರೆ ರೈತರ ಕೃಷಿಯ ಮೂಲ ಆಧಾರ. ಆದರೆ ಬರಗಾಲದಂತಹ ಪರಿಸ್ಥಿತಿಗಳು ಬಂದಾಗ ಅನೇಕ ರೈತರು ತಮ್ಮ ಎತ್ತುಗಳನ್ನು ಸಾಕಲು ಆಗದೇ ಬಂದಷ್ಟು ಬೆಲೆಗೆ ಮಾರಾಟ ಮಾಡಿ ಬಿಡ್ತಾರೆ. ಇಲ್ಲೊಬ್ಬ ರೈತ ಹಾಗೆಯೇ ಎರಡು ವರ್ಷಗಳ ಹಿಂದೆ ತನ್ನ ಎತ್ತನ್ನ ಮಾರಿದ್ದರು. ಅದಾದ ಕೆಲವೇ ದಿನಕ್ಕೆ ಆ ಎತ್ತು ವಧಾಲಯದ ಬಳಿ ಸಿಕ್ಕಿದೆ. ಇನ್ನೇನು ಬಲಿಯಾಗುತ್ತಿದ್ದ ಎತ್ತನ್ನು ರಕ್ಷಿಸಿದ ರೈತ, ಅದಕ್ಕೆ ದುಪ್ಪಟ್ಟು ಬೆಲೆ ನೀಡಿ ಮನೆಗೆ ಕರೆ ತಂದಿದ್ದಾರೆ. ಎತ್ತನ್ನು ಮರಳಿ ತಂದ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿ ಸಂಭ್ರಮಿಸಿದ್ದಾರೆ.

    ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದ ನಾಗಪ್ಪ ಓಮಗಣ್ಣವರ್ ಎತ್ತು ವಾಪಸ್ ತಂದ ರೈತ. ಎರಡು ವರ್ಷದ ಹಿಂದೆ ಭೀಕರ ಬರಗಾಲ ಬಂದಾಗ, ಎತ್ತನ್ನು ಸಾಕಲು ಕಷ್ಟವಾಗಿತ್ತು. ಎತ್ತನ್ನು ಪಕ್ಕದ ಊರಿನ ರೈತನಿಗೆ ಮಾರಿದ್ದರು. ಆದರೆ ಮಾರಾಟವಾದ ಎರಡು ವರ್ಷದ ಬಳಿಕ ಧಾರವಾಡ ಕಸಾಯಿ ಖಾನೆ ಪಕ್ಕ ಹಾದು ಹೋಗುವಾಗ ಎತ್ತೊಂದರ ಧ್ವನಿ ಕೇಳಿಸಿದೆ. ಹತ್ತಿರ ಹೋಗಿ ನೋಡಿದರೆ ಅದು ತಮ್ಮದೇ ಎತ್ತು ಎಂದು ಗುರುತಿಸಿದ್ದಾರೆ.

    ನಾಗಪ್ಪ 52 ಸಾವಿರ ರೂಪಾಯಿ ನೀಡಿ ಎತ್ತನ್ನು ಖರೀದಿ ಮಾಡಿದ್ದಾರೆ. ಸದ್ಯ ಮೈಲಾರಿ ಎಂಬ ಈ ಎತ್ತಿನ 19ನೇ ವರ್ಷದ ಜನ್ಮದಿನ ಆಚರಿಸಿ ಇಡೀ ಊರಿಗೆ ಊಟ ಹಾಕಿಸಿದ್ದಾರೆ.

  • ಲಾಕ್‍ಡೌನ್ ಸಂಕಷ್ಟ – ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ

    ಲಾಕ್‍ಡೌನ್ ಸಂಕಷ್ಟ – ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ

    ಯಾದಗಿರಿ: ಕೊರೊನಾ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿ, ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಆರು ಸದಸ್ಯರು, ಕೃಷಿ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಇಂದು ನಡೆದಿದೆ.

    ಗ್ರಾಮದ ಭೀಮರಾಯ್ ಎಂಬಾತ ತನ್ನ ಹೆಂಡತಿ ಶಾಂತಮ್ಮ ಜೊತೆಗೆ ತನ್ನ ನಾಲ್ವರು ಮಕ್ಕಳಾದ ಸುಮಿತ್ರಾ, ಶ್ರೀದೇವಿ, ಲಕ್ಷ್ಮೀ, ಶಿವರಾಜ್ ಜೊತೆ ತನ್ನದೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮೃತ ಭೀಮರಾಯ್ ಕೃಷಿ ಮತ್ತು ವೈಯಕ್ತಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಇಂದು ತನ್ನ ಕುಟುಂಬದ ಜೊತೆಗೆ ಜಮೀನಿಗೆ ತೆರಳಿದ್ದ ಭೀಮರಾಯ್, ಮೊದಲಿಗೆ ಮಕ್ಕಳ ಕಾಲಿಗೆ ಕಲ್ಲು ಕಟ್ಟಿ ಹೊಂಡಕ್ಕೆ ಹಾಕಿದ್ದಾನೆ. ಬಳಿಕ ತನ್ನ ಹೆಂಡತಿ ಜೊತೆಗೆ ತಾನು ಸಹ ಹಾರಿದ್ದಾನೆ.

    ಶಹಾಪುರ ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸದ್ಯ ನಾಲ್ವರ ಶವಗಳನ್ನ ಹೊರತೆಗೆದಿದ್ದು, ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ವೇದಮೂರ್ತಿ, ಎಸಿ ಪ್ರಶಾಂತ್ ಹನಗಂಡಿ, ತಹಶೀಲ್ದಾರ ಜಗನ್ನಾಥ್ ರೆಡ್ಡಿ, ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

    ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

    ಮಂಡ್ಯ: ಕೆಆರ್‌ಎಸ್‌ ಜಲಾಶಯ ಭರ್ತಿಗೂ ಮುನ್ನ ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಮಂಡ್ಯ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ ಕೆಳ ಭಾಗ ನಿಂತು ಮಂಡ್ಯ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ. ಕೆಆರ್‌ಎಸ್‌ ಜಲಾಶಯ ಭರ್ತಿಯಾಗುವ ಮೊದಲೇ ಅಧಿಕಾರಿಗಳು ತಮಿಳುನಾಡಿಗೆ ಐದು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿಸುತ್ತಿರುವುದು ಖಂಡನೀಯ. ಈಗಾಗಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯೂ ಕಡಿಮೆಯಾಗಿದೆ. ಹೀಗಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಬರುವ ಒಳಹರಿವು ಸಹ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೀರು ಹರಿಸಬಾರದು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೆಆರ್‌ಎಸ್‌ ಭರ್ತಿಗೂ ಮುನ್ನ ತಮಿಳುನಾಡಿಗೆ ನೀರು – ರೈತರಿಂದ ಆಕ್ರೋಶ

    ಅಧಿಕಾರಿಗಳು ನಿನ್ನೆಯಿಂದ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದು ಈ ಭಾಗದ ಜನರಿಗೆ ಹಾಗೂ ರೈತರಿಗೆ ಮಾಡುವ ದ್ರೋಹವಾಗಿದೆ. ಈ ಕೂಡಲೇ ಅಧಿಕಾರಿಗಳು ನೀರು ಬಿಡುವುದನ್ನು ನಿಲ್ಲಸಬೇಕೆಂದು ಒತ್ತಾಯಿಸಿದರು.

    ನೀರಿನ ಮಟ್ಟ ಎಷ್ಟಿದೆ?

    ನೀರಿನ ಇಂದಿನ ಮಟ್ಟ- 93.60 ಅಡಿ
    ಡ್ಯಾಂ ನ ಗರಿಷ್ಠ ಮಟ್ಟ 124.80 ಅಡಿ
    ಒಳಹರಿವು – 19,714 ಕ್ಯೂಸೆಕ್
    ಹೊರ ಹರಿವು- 5401 ಕ್ಯೂಸೆಕ್
    ನೀರಿನ ಸಂಗ್ರಹ – 18.199 ಟಿಎಂಸಿ
    ಗರಿಷ್ಟ ಸಂಗ್ರಹ – 49.452 ಟಿಎಂಸಿ

  • 2.5 ಲಕ್ಷಕ್ಕೆ ಒಂದು ಕೆಜಿ ಮಾವು – ತೋಟದ ಕಾವಲಿಗೆ 3 ಗಾರ್ಡ್ ನೇಮಕ

    2.5 ಲಕ್ಷಕ್ಕೆ ಒಂದು ಕೆಜಿ ಮಾವು – ತೋಟದ ಕಾವಲಿಗೆ 3 ಗಾರ್ಡ್ ನೇಮಕ

    – ಮಾವುಗಳ ರಕ್ಷಣೆಗಾಗಿ ವಿಶೇಷ ತಳಿಯ 9 ನಾಯಿ ಸಾಕಿದ ರೈತ

    ಭೋಪಾಲ್: ಮಧ್ಯಪ್ರದೇಶದ ಜಬಲ್‍ಪುರನಲ್ಲಿ ಮಾವಿನ ತೋಟದ ರಕ್ಷಣೆಗಾಗಿ ರೈತನೋರ್ವ, ಮೂರು ಜನ ಗಾರ್ಡ್ ನೇಮಿಸಿದ್ದಾರೆ. ಜೊತೆಗೆ ವಿಶೇಷ ತಳಿಯ 9 ನಾಯಿಗಳನ್ನು ಸಹ ಸಾಕಿದ್ದಾರೆ. 2.5 ಲಕ್ಷ ರೂ.ಗೆ ಒಂದು ಕೆಜಿಯಂತೆ ಈ ಮಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಟವಾಗುತ್ತದೆ. ಈ ಹಿನ್ನೆಲೆ ಮಾವಿನ ತೋಟದ ರಕ್ಷಣೆಗಾಗಿ ರೈತ ಈ ಎಲ್ಲ ಮುಂಜಾಗ್ರತೆ ತೆಗೆದುಕೊಂಡಿದ್ದಾರೆ.

    ಸಂಕಲ್ಪ್ ವಿಶೇಷ ಮಾವು ಬೆಳೆದ ರೈತ. ಈ ಮಾವಿನ ಹಣ್ಣುಗಳನ್ನು ಟಾಯಿಯೋ ನೋ ಟಮೈಂಗೋ ಮತ್ತು ಎಗ್ ಆಫ್ ಸನ್ ಎಂದು ಕರೆಯಲಾಗುತ್ತದೆ. ಕಳೆದ ವರ್ಷ ಈ ಮಾವಿನ ಬಗ್ಗೆ ವಿಶೇಷ ಚರ್ಚೆಗಳು ನಡೆದಿದ್ದವು. ಹಾಗಾಗಿ ಈ ಬಾರಿ ಮಾವುಗಳ ರಕ್ಷಣೆಗಾಗಿ ಈ ಕ್ರಮ ತೆಗೆದುಕೊಂಡಿರೋದಾಗಿ ಸಂಕಲ್ಪ್ ಹೇಳಿದ್ದಾರೆ.

    ಈ ಮಾವು ಪೂರ್ಣ ಹಣ್ಣು ಆದ್ಮೇಲೆ ತಿಳಿ ಕೆಂಪು ಮಿಶ್ರಿತ ಹಳದಿ ಬಣ್ಣಕ್ಕೆ ಬದಲಾಗುತ್ತದೆ. ಒಂದು ಮಾವು ಸುಮಾರು 900 ಗ್ರಾಂ ತೂಕ ಬರುತ್ತೆ. ಇದರಲ್ಲಿ ನಾರಿನಾಂಶ ಇರಲ್ಲ, ತುಂಬಾನೇ ರುಚಿಯಾಗಿರುತ್ತೆ. ಜಪಾನಿನಲ್ಲಿ ವಿಶೇಷ ಮತ್ತು ಸಂರಕ್ಷಿತ ವಾತಾವರಣದಲ್ಲಿ ಈ ಮಾವು ಬೆಳೆಯುತ್ತಾರೆ. ಆದ್ರೆ ಸಂಕಲ್ಪ್ ತಮ್ಮ ಬಂಜರು ಭೂಮಿಯಲ್ಲಿ ಈ ಮಾವು ಬೆಳೆದು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಜಸ್ಟ್ 1 ಮಾವಿನ ಹಣ್ಣಿನ ಬೆಲೆ 1 ಸಾವಿರ – ಈಗಲೇ ಮುಂಗಡ ಬುಕ್ಕಿಂಗ್

    2017ರಲ್ಲಿ ಜಪಾನ್ ಈ ಮಾವುಗಳನ್ನ 3600 ಡಾಲರ್ ನೀಡಿ ಖರೀದಿಸಿತ್ತು. ಒಟ್ಟು ನಾಲ್ಕು ಎಕರೆಯಲ್ಲಿ ಮಾವಿನ ಸಸಿ ನಡೆಲಾಗಿತ್ತು. ಆದ್ರೆ ಕೆಲವು ಸಸಿ ಮಟ್ಟದಲ್ಲಿಯೇ ನಾಶವಾದವು. ಸದ್ಯ 14 ಹೈಬ್ರಿಡ್ ಮತ್ತು 6 ವಿದೇಶಿ ತಳಿಯ ಮಾವು ನಮ್ಮತೋಟದಲ್ಲಿವೆ ಎಂದು ಸಂಕಲ್ಪ್ ಹೇಳುತ್ತಾರೆ. ಇದನ್ನೂ ಓದಿ: ವಿಶ್ವದ ಅತಿ ದುಬಾರಿ ದ್ರಾಕ್ಷಿ-ಒಂದು ಗುಚ್ಛಕ್ಕೆ 7.5 ಲಕ್ಷ ರೂಪಾಯಿ

  • ವೈಯಕ್ತಿಕ ದ್ವೇಷಕ್ಕೆ ಬಲಿಯಾದ ತೆಂಗು, ಅಡಿಕೆ ಸಸಿಗಳು

    ವೈಯಕ್ತಿಕ ದ್ವೇಷಕ್ಕೆ ಬಲಿಯಾದ ತೆಂಗು, ಅಡಿಕೆ ಸಸಿಗಳು

    ಮಂಡ್ಯ: ವೈಯಕ್ತಿಕ ದ್ವೇಷಕ್ಕಾಗಿ ಜಮೀನಲ್ಲಿ ಬೆಳೆದಿದ್ದ ತೆಂಗು ಹಾಗೂ ಅಡಿಕೆ ಸಸಿಗಳನ್ನು ಕಿತ್ತು ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ರಾಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ರಾಮನಕೊಪ್ಪಲು ಗ್ರಾಮದ ಚಂದ್ರಪ್ಪ ಅವರು ತಮ್ಮ ಜಮೀನಿನಲ್ಲಿ 100 ಅಡಿಕೆ ಹಾಗೂ 100 ತೆಂಗಿನ ಸಸಿಗಳನ್ನು ಕಿತ್ತುಹಾಕಲಾಗಿದೆ. ಇದಲ್ಲದೇ ಎಲೆಕ್ಟ್ರಿಕ್ ಕೇಬಲ್‍ನ್ನು ಸಹ ಕಟ್ ಮಾಡಲಾಗಿದೆ. ಇದೇ ಗ್ರಾಮದ ಮೋಹಿತ್ ಎಂಬಾತ ವೈಯಕ್ತಿಕ ದ್ವೇಷಕ್ಕಾಗಿ ಈ ಕೃತ್ಯ ನಡೆಸಿದ್ದಾನೆ ಎಂದು ರೈತರು ಆರೋಪ ಮಾಡಿದ್ದಾರೆ.

    ಈ ಸಂಬಂಧ ಜೂನ್ 13 ರಂದು ಚಂದ್ರಪ್ಪ ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೋಹಿತ್ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ದೂರಿನಲ್ಲಿ ಹೇಳಿದ್ದರು. ದೂರು ನೀಡಿ ಇಷ್ಟು ದಿನಗಳು ಆದರು ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡ ಇರುವುದರಿಂದ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ರೈತನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

  • ನೀರು ಕುಡಿಯಲು ಹೋದ ಹಸು ಮೊಸಳೆ ದಾಳಿಗೆ ಬಲಿ

    ನೀರು ಕುಡಿಯಲು ಹೋದ ಹಸು ಮೊಸಳೆ ದಾಳಿಗೆ ಬಲಿ

    ರಾಯಚೂರು: ತಾಲೂಕಿನ ಡೊಂಗರಾಂಪೂರ ಬಳಿ ಕೃಷ್ಣಾ ನದಿ ದಡದಲ್ಲಿ ಮೊಸಳೆ ದಾಳಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ.

    ನೀರು ಕುಡಿಯಲು ಹೋದ ಹಸುವನ್ನು ಎಳೆದೊಯ್ದು ಮೊಸಳೆ ತಿಂದು ಹಾಕಿದೆ. ರೈತ ಆಂಜನೇಯ ಎಂಬವರಿಗೆ ಸೇರಿದ ಹಸು ಮೊಸಳೆ ದಾಳಿಗೆ ಬಲಿಯಾಗಿದೆ. ನದಿ ಪಕ್ಕದಲ್ಲೇ ಜಮೀನು ಇದ್ದಿದ್ದರಿಂದ ರೈತ ಆಂಜನೇಯ ನಿನ್ನೆ ಸಂಜೆ ಹಸುವನ್ನ ನೀರು ಕುಡಿಯಲು ಬಿಟ್ಟಿದ್ದ, ಮೊಸಳೆ ದಾಳಿಗೆ ಹಸು ಬಲಿಯಾಗಿದ್ದು, ಇಂದು ಬೆಳಗ್ಗೆ ನದಿಯಲ್ಲಿ ತೇಲಾಡುತ್ತಿದ್ದಾಗ ರೈತರು ಗಮನಿಸಿದ್ದಾರೆ. ತೆಪ್ಪದ ಮೂಲಕ ಹೋಗಿ ತೇಲಾಡುತ್ತಿದ್ದ ಹಸು ಎಳೆದು ತಂದಿದ್ದಾರೆ. ಹಸುವಿನ ಮೈಮೇಲಿನ ಗಾಯಗಳಿಂದ ಮೊಸಳೆ ದಾಳಿ ಮಾಡಿರುವುದು ಖಚಿತವಾಗಿದೆ.

    ಈ ಹಿಂದೆ ಇದೇ ಸ್ಥಳದಲ್ಲಿ ಐದು ವರ್ಷದ ಬಾಲಕನನ್ನ ಮೊಸಳೆ ಎಳೆದುಕೊಂಡು ಹೋಗಿತ್ತು. ಹೀಗಾಗಿ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನ ಮೊಸಳೆ ದಾಳಿಗೆ ಹೆದರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ- ಶಿರಸಿಯಲ್ಲಿ ಮತ್ತೆ ಭೂ ಕುಸಿತ

  • ತೋಟಕ್ಕೆ ನೀರು ಹಾಯಿಸಲು ಹೋದ ರೈತನ ಬರ್ಬರ ಕೊಲೆ

    ತೋಟಕ್ಕೆ ನೀರು ಹಾಯಿಸಲು ಹೋದ ರೈತನ ಬರ್ಬರ ಕೊಲೆ

    ಚಿಕ್ಕಬಳ್ಳಾಪುರ: ತೋಟಕ್ಕೆ ನೀರು ಹಾಯಿಸಲು ಹೋದ ರೈತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರೈತ ಶ್ರೀನಿವಾಸ್(65) ಕೊಲೆಯಾದವರು. ಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ಇಟ್ಟುಕೊಂಡಿರುವ ಇಳಿವಯಸ್ಸಿನ ಶ್ರೀನಿವಾಸ್, ಕಳೆದ ರಾತ್ರಿ ತೋಟದಲ್ಲಿ ಬೆಳೆಗೆ ನೀರು ಹಾಯಿಸಲು ಹೋದಾಗ ಯಾರೋ ಕೊಲೆ ಮಾಡಿದ್ದಾರೆ.

    65 ವರ್ಷದ ಶ್ರೀನಿವಾಸ್, ದಶಕದ ಹಿಂದೆಯೇ ಪತ್ನಿಯನ್ನು ಕಳೆದುಕೊಂಡಿದ್ದ. ಇದರ ಮಧ್ಯೆ ಹದಿಹರೆಯದ ಮಹಿಳೆಯ ಜೊತೆ ಅಕ್ರಮ ಸಂಬಂಧವೂ ಇತ್ತು ಎಂಬ ಮಾತುಗಳು ಕೇಳಿಬಂದಿವೆ. ಹಣದ ವ್ಯವಹಾರಗಳೂ ಇದ್ದವು, ಆದರೆ ಕೊಲೆ ಮಾಡುವಷ್ಟು ದ್ವೇಷ ಕಟ್ಟಿಕೊಂಡಿರಲಿಲ್ಲ. ಕಳೆದ ರಾತ್ರಿ ಶ್ರೀನಿವಾಸ್ ಮನೆಗೆ ಬರಲಿಲ್ಲ ಎಂದು ಬೆಳಗ್ಗೆ ತೋಟದ ಕಡೆ ಹೋಗಿ ನೋಡಿದರೆ ಶ್ರೀನಿವಾಸ್ ಕೊಲೆಯಾಗಿ ಬಿದ್ದಿರೋದು ಕಂಡು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ಜಾಡು ಹಿಡಿದ್ದಾರೆ.

  • ಬಾಳೆಹಣ್ಣಿನ ಗದ್ದೆಗೆ ಬೆಂಕಿ ಹಚ್ಚಿದ ಅನ್ನದಾತ

    ಬಾಳೆಹಣ್ಣಿನ ಗದ್ದೆಗೆ ಬೆಂಕಿ ಹಚ್ಚಿದ ಅನ್ನದಾತ

    ವಿಜಯಪುರ: ಸೂಕ್ತ ಬೆಲೆ ಸಿಗದ ಕಾರಣ ಅನ್ನದಾತ ತನ್ನ ಬಾಳೆಹಣ್ಣಿನ ಗದ್ದೆಗೆ ತಾನೇ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ.

    ರೈತ ಉಸ್ಮಾನಸಾಬ್ ಬಾಳೆ ಹಣ್ಣಿಗೆ ಸೂಕ್ತ ಬೆಲೆ ಸಿಗದ ಕಾರಣ ಹಾಗೂ ಲಾಕ್‍ಡೌನ್ ಪರಿಣಾಮದಿಂದ ಬಾಳೆ ಹಣ್ಣು ಮಾರಾಟವಾಗದ್ದಕ್ಕೆ ಮನನೊಂದು ಈ ರೀತಿ ಮಾಡಿದ್ದಾರೆ. ತಮ್ಮ ತೋಟದಲ್ಲಿನ 1,200 ಬಾಳೆ ಗಿಡಗಳಿಗೆ ಬೆಂಕಿ ಹಚ್ಚಿ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಕಷ್ಟ ಪಟ್ಟು ಮೂರು ವರ್ಷಗಳಿಂದ ಮಕ್ಕಳಂತೆ ಜೋಪಾನ ಮಾಡಿದ್ದ ಬೆಳೆದ ಬಾಳೆಗೆ ಬೆಲೆಯಿಲ್ಲದ್ದಕ್ಕೆ ದಾನ ಮಾಡಿದ್ದಾರೆ. ಉಳಿದ ಬಾಳೆಗಿಡಗಳನ್ನೆಲ್ಲ ಸದ್ಯ ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಹೆದರಿ ಊರು ಬಿಟ್ಟು ಗುಡಿಸಲಲ್ಲಿ ಕುಟುಂಬ ಜೀವನ

    ಸಂಕಷ್ಟದ ಮೇಲೆ ಸಂಕಷ್ಟ ನೀಡುತ್ತಿರುವ ಕೊರೊನಾ ಮಹಾಮಾರಿಯಿಂದ ರೈತರ ಗೋಳು ಇಮ್ಮಡಿಯಾದಂತಾಗಿದೆ. ರೈತರು ಬಳೆ ಹಾನಿಗೊಳಿಸುತ್ತಿರುವ ನೂರಾರು ಘಟನೆಗಳು ನಡೆಯುತ್ತಿದ್ದು, ರೈತರ ಗೋಳು ಕೇಳೋರು ಯಾರು ಎನ್ನುವಂತಾಗಿದೆ.

  • ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ- ಲಾಕ್‍ಡೌನ್ ಎಫೆಕ್ಟ್‌ಗೆ ಸಿಕ್ಕು ನಲುಗಿದ ಶುಂಠಿ, ಕಲ್ಲಂಗಡಿ

    ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ- ಲಾಕ್‍ಡೌನ್ ಎಫೆಕ್ಟ್‌ಗೆ ಸಿಕ್ಕು ನಲುಗಿದ ಶುಂಠಿ, ಕಲ್ಲಂಗಡಿ

    ಬೀದರ್: ಕೊರೊನಾ ಭಯದಲ್ಲಿ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಎಲ್ಲ ವ್ಯಾಪಾರ, ವಹಿವಾಟು ಸೇರಿದಂತೆ ಜನಜೀವನ ಅಸ್ಥವ್ಯಸ್ಥವಾಗಿದೆ. ಹೀಗಿರುವಾಗ ಶುಂಠಿ, ಕಲ್ಲಂಗಡಿ ಬೆಳೆದ ರೈತರು ಕಂಗಾಲಾಗಿದ್ದಾರೆ.

    ರೈತರು ಸಾಲ ಮಾಡಿ ಕಷ್ಟಪಟ್ಟು ಬೆಳೆದ ವಿವಿಧ ರೀತಿಯ ಬೆಳೆಗಳು ಮಾರಾಟ ಮಾಡಲಾಗದೆ ಮತ್ತಷ್ಟು ಸಾಲದ ಸುಳಿಯಲ್ಲಿ ರೈತರು ಸಿಲುಕುವಂತಾಗಿದೆ. ಬೀದರ್ ತಾಲೂಕಿನ ಔರಾದ್ ಎಸ್ ಗ್ರಾಮದ ರೈತ ರಂಗಾರೆಡ್ಡಿ ತಂದೆ ವಿಠಲ್‍ರೆಡ್ಡಿ 2 ಎಕರೆ 17 ಗುಂಟೆಯಲ್ಲಿ 1 ಲಕ್ಷ 40ಸಾವಿರ ಖರ್ಚುಮಾಡಿ ಕಲ್ಲಂಗಡಿ, 2 ಎಕರೆ 30 ಗುಂಟೆಯಲ್ಲಿ 3 ಲಕ್ಷ ಖರ್ಚುಮಾಡಿ ಶುಂಠಿ ಬೆಳೆದು ಉತ್ತಮ ಲಾಭಗಳಿಸಬೇಕು ಎಂದರೆ ಲಾಕ್‍ಡೌನ್ ಎಫೆಕ್ಟ್ ಹಿನ್ನಲೆಯಲ್ಲಿ ಬೆಳೆದ ಬೆಳೆ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುತ್ತಾ? ಅಲರ್ಜಿ ಹೊಂದಿರುವವರು ಲಸಿಕೆ ಪಡೆಯಬಹುದೇ? – ಅನುಮಾನಗಳಿಗೆ ಇಲ್ಲಿದೆ ಉತ್ತರ

    ರೈತ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಸ್ಥಿತಿಗೆ ಕೊರೊನಾ ರೂಪದಲ್ಲಿ ಬಂದ ಮಹಾಮಾರಿ ಅಡ್ಡಿಯಾಗಿದೆ. ತಮ್ಮ ಜಮೀನಿನಲ್ಲಿ ಕಲ್ಲಂಗಡಿ ಮತ್ತು ಶುಂಠಿ ಬೆಳೆದ ರೈತ ಎರಡು ಮೂರು ತಿಂಗಳ ಕಾಲ ನೀರುಣಿಸಿ ಪೋಷಣೆ ಮಾಡಿದ್ದು, ಈಗ ಕೊರೊನಾ ಮಹಾಮಾರಿ ದುಡಿದು ತಿನ್ನುವ ಅನ್ನದಾತನ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವಂತೆ ಮಾಡಿದೆ. ಇದನ್ನೂ ಓದಿ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪ್ರತಿಭಟನೆ

    ರೈತರು ಬೆಳೆದ ಬೆಳೆಗಳು ಮಾರಾಟವಾಗದೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಹಿಗಾಗೀ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತರು ಆಗ್ರಹ ಮಾಡುತ್ತಿದ್ದಾರೆ.

  • ನರೇಗಾ ಯೋಜನೆಯಡಿ ಬಾಳೆ ಬೆಳೆದು ಬಾಳು ಹಸನಾಗಿಸಿಕೊಂಡ ಕೊಪ್ಪಳದ ರೈತ

    ನರೇಗಾ ಯೋಜನೆಯಡಿ ಬಾಳೆ ಬೆಳೆದು ಬಾಳು ಹಸನಾಗಿಸಿಕೊಂಡ ಕೊಪ್ಪಳದ ರೈತ

    ಕೊಪ್ಪಳ: ತಾಲೂಕಿನ ಹ್ಯಾಟಿ ಗ್ರಾಮ ಬಾಳೆ ಬೆಳೆಗೆ ಖ್ಯಾತಿ ಪಡೆದಿದ್ದು, ಇಲ್ಲಿಯ ಮಸಾರಿ ಮಣ್ಣು ಹಾಗೂ ನೀರು ಬಾಳೆ ಬೆಳೆಗೆ ಉತ್ತಮವಾಗಿದೆ. ಈ ಗ್ರಾಮದ ವಿರೂಪಾಕ್ಷಪ್ಪ ಇಲ್ಲಿy ನೈಸರ್ಗಿಕ ಸಂಪತ್ತಿನ ಜತೆಗೆ 2020-21ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡು ಹಾಗೂ ತೋಟಗಾರಿಕೆ ಇಲಾಖೆ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಒಂದು ಹೆಕ್ಟರ್ ಪ್ರದೇಶದಲ್ಲಿ ಬಾಳೆ ಬೆಳೆದಿದ್ದಾರೆ. ಕೋವಿಡ್ ಸಂಕಷ್ಟದಲ್ಲೂ ಸಹ ತೋಟಗಾರಿಕೆ ಅಧಿಕಾರಿಗಳ ಸಹಾಯ ಪಡೆದು ಆರ್ಥಿಕ ಪ್ರಗತಿ ಸಾಧಿಸಿದ್ದಾರೆ.

    ವಿರೂಪಾಕ್ಷಪ್ಪ ಅವರಿಗೆ ಹೋಬಳಿ ಅಧಿಕಾರಿ ಕೃಷ್ಣಮೂರ್ತಿ ಪಾಟೀಲ್ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ 2020ರ ಜೂನ್ ನಲ್ಲಿ ಬೆಂಗಳೂರಿನ ಖಾಸಗಿ ಕಂಪನಿಯಿಂದ ಬಾಳೆ ಸಸಿಗಳನ್ನು 13 ರೂ. ಗೆ ಒಂದರಂತೆ ತಂದು 6*6 ಅಡಿ ಅಂತರದಲ್ಲಿ 2 ಎಕರೆಯಲ್ಲಿ 3,000 ಗಿಡಗಳನ್ನು ನಾಟಿ ಮಾಡಿದ್ದಾರೆ. ಬಾಳೆ ನಾಟಿ, ಸಸ್ಯ ಸಂರಕ್ಷಣೆ, ನೀರು ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರಿಂದ ಸಲಹೆ ಪಡೆದಿದ್ದಾರೆ. ಜೂನ್‍ನಲ್ಲಿ ನಾಟಿ ಮಾಡಿದ ಬಾಳೆ ಈಗ ಕೊಯ್ಲಿಗೆ ಬಂದಿದ್ದು, ಸುಮಾರು 5 ಕ್ವಿಂಟಲ್ ಕಾಯಿಗಳನ್ನು 5 ರೂ. ಗೆ ಒಂದು ಕಿ.ಗ್ರಾಂ. ನಂತೆ ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಬೆಲೆ ಕಡಿಮೆ ಆಗಿ ಹಾಗೂ ಖರೀದಿದಾರರೇ ಇಲ್ಲದ ಸಮಯದಲ್ಲಿ ತೋಟಗಾರಿಕೆ ಇಲಾಖೆ ಮಧ್ಯ ಪ್ರವೇಶಿಸಿ, ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಮಾರಾಟ ಮಾಡುವುದೊಂದೇ ಸವಾಲಾಗಿದೆ. ಮಾರಾಟವಾಗದಿದ್ದಲ್ಲಿ ಹಣ್ಣುಗಳು ಹಾಳಾಗುತ್ತವೆ. ಮೊದಲೇ ಗಾಳಿಯಿಂದಾಗಿ ನೂರಾರು ಗಿಡಗಳು ಬಿದ್ದು ನಷ್ಟವಾಗಿವೆ, ಈಗ ಮತ್ತಷ್ಟು ನಷ್ಟವಾಗುವುದು ಬೇಡ ಎಂದು ಅಧಿಕಾರಿಗಳ ಸಲಹೆ ನೀಡಿದ್ದಾರೆ. ತೋಟಗಾರಿಕೆ ಅಧಿಕಾರಿಗಳ ಸಲಹೆಯಂತೆ ಬೆಳೆದ ಬಾಳೆ ಉತ್ತಮವಾಗಿದೆ, ಮುಂದಿನ ದಿನಗಳಲ್ಲಿ ಉತ್ತಮ ದರ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ.

    ಇಲಾಖೆಯ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಅಧಿಕಾರಿಗಳ ಸಲಹೆ ಪಡೆದ ವಿರೂಪಾಕ್ಷ ಅವರು ಉತ್ತಮ ಬೆಳೆ ಬೆಳೆದಿದ್ದಾರೆ. ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಇವರಿಗೆ ಮಾರುಕಟ್ಟೆ ತೊಂದರೆ ಆಗಿತ್ತು. ಸದ್ಯ ಕಡಿಮೆ ದರ ಇದ್ದರೂ ಸ್ಥಳೀಯ ವ್ಯಾಪಾರಸ್ಥರು ತಾವೇ ಕೊಯ್ಲು ಮಾಡಿ ಕಾಯಿಗಳನ್ನು ಒಯ್ಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ದರ ಸಿಗಬಹುದು. ರೈತರು ಎದೆಗುಂದಬಾರದು. ತೋಟಗಾರಿಕೆ ಇಲಾಖೆ ಸದಾ ರೈತರ ನೆರವಿಗೆ ಇರುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಗೆ ನಿರ್ದೇಶಕರಾದ (ಹಿ.ಸ.ತೋ.ನಿ) ಜಗನ್ನಾಥರೆಡ್ಡಿ ಹೇಳುತ್ತಾರೆ.