Tag: farmer women

  • 75 ವರ್ಷವಾದರೂ ಕೃಷಿಯಲ್ಲಿ ಸಾಧನೆ – ಪುಟ್ಟಮ್ಮಗೆ ನಾರಿ ನಾರಾಯಣಿ ಪ್ರಶಸ್ತಿ

    75 ವರ್ಷವಾದರೂ ಕೃಷಿಯಲ್ಲಿ ಸಾಧನೆ – ಪುಟ್ಟಮ್ಮಗೆ ನಾರಿ ನಾರಾಯಣಿ ಪ್ರಶಸ್ತಿ

    ಜಮೀನಿನ ಕೃಷಿ ಕೆಲಸ ಎಂದರೆ ದೂರ ಸರಿಯುವ ಜನರ ಮಧ್ಯೆ ನೆಲಮಂಗಲ ಬಳಿಯ ಬೊಮ್ಮಶೆಟ್ಟಿಹಳ್ಳಿಯ 75 ವರ್ಷದ ಪುಟ್ಟಮ್ಮ ವಿಭಿನ್ನವಾಗಿ ನಿಲ್ಲುತ್ತಾರೆ. ಈ ವಯಸಿನಲ್ಲಿಯೂ ಬತ್ತದ ಉತ್ಸಾಹದೊಂದಿಗೆ ಕೆಲಸ ಮಾಡಿ ಕೃಷಿ, ತೋಟಗಾರಿಕೆ, ಸಮಗ್ರ ಕೃಷಿ ಮಾಡಿ ಲಕ್ಷ ಲಕ್ಷ ಆದಾಯ ಸಂಪಾದಿಸುತ್ತಿದ್ದಾರೆ.

    30 ಎಕ್ರೆ ಜಮೀನಿನನಲ್ಲಿ ವ್ಯವಸಾಯ ಹೈನುಗಾರಿಕೆ ಮೀನು ಸಾಕಾಣಿಕೆ ಮಾಡಿ ಪ್ರಗತಿಪರ ರೈತ ಮಹಿಳೆಯಾಗಿ ಇತರಿಗೂ ಸ್ಫೂರ್ತಿಯಾಗಿದ್ದಾರೆ.

    ಇವರ ತೋಟಕ್ಕೆ ಭೇಟಿ ನೀಡುವ ಯುವ ರೈತರಿಗೆ ಹಿಂದಿನ ಕೃಷಿ ಉಪಕರಣಗಳಾದ ಮರದ ಎತ್ತಿನ ಗಾಡಿ, ಕೂರಿಗೆ, ನೇಗಿಲು, ಸೇರಿದಂತೆ ಹತ್ತಾರು ಕೃಷಿ ಯಂತ್ರಗಳ ಸಂಗ್ರಹಣೆ ಮಾಡಿ ಪ್ರದರ್ಶನ ಮೂಲಕ ಕೃಷಿಯ ಮಾಹಿತಿ ನೀಡುತ್ತಾರೆ. ಸುಮಾರು ಕುಟುಂಬಗಳಿಗೆ ಕೆಲಸದ ಮೂಲಕ ಆಸರೆಯಾಗಿದ್ದಾರೆ. ಜೊತೆಗೆ ಅವರ ಮಕ್ಕಳಿಗೆ ವಿದ್ಯಾಭ್ಯಾಸ, ಅವರ ಜೀವನ ನಿರ್ವಹಣೆ, ಬಡವರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ.

    ಕೃಷಿಯೇ ದೇವರು ಭೂಮಿಯೇ ತಾಯಿ ಅಂತಾ ನಂಬಿಕೊಂಡ ಈ ಹಿರಿ ಜೀವಕ್ಕೆ ಪಬ್ಲಿಕ್ ಟಿವಿ ನಾರಿನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಹೆಮ್ಮೆ ಪಡುತ್ತಿದೆ.

  • ಹೇಮಾವತಿ ಡ್ಯಾಮ್‍ನಿಂದ ನೀರು ಬಿಡದಿದ್ದಕ್ಕೆ ಜೀವಬಿಟ್ಟ ರೈತ ಮಹಿಳೆ

    ಹೇಮಾವತಿ ಡ್ಯಾಮ್‍ನಿಂದ ನೀರು ಬಿಡದಿದ್ದಕ್ಕೆ ಜೀವಬಿಟ್ಟ ರೈತ ಮಹಿಳೆ

    ಮಂಡ್ಯ: ರಾಜೀನಾಮೆ ನೀಡಿ ನಾಪತ್ತೆಯಾಗಿರುವ ಶಾಸಕ ನಾರಾಯಣಗೌಡರ ಕ್ಷೇತ್ರದಲ್ಲಿ ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಹೇಮಾವತಿ ಡ್ಯಾಮ್‍ನಿಂದ ನಾಲೆಯಲ್ಲಿ ನೀರು ಬರದ ಕಾರಣ ನೊಂದ ರೈತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಆಲಂಬಾಡಿ ಕಾವಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಲಂಬಾಡಿ ಕಾವಲು ಗ್ರಾಮದ ನಿವಾಸಿ ಜಯಮ್ಮ(63) ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ.

    ಜಯಮ್ಮ ಸುಮಾರು ಎರಡು ಎಕರೆ ಜಮೀನು ಹೊಂದಿದ್ದರು. ಕೃಷಿಗಾಗಿ ಬ್ಯಾಂಕ್ ಮತ್ತು ಖಾಸಗಿಯಾಗಿ ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಅಲ್ಲದೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಆದರೆ ಅದರಲ್ಲಿ ನೀರು ಕಡಿಮೆಯಾಗಿತ್ತು. ಇತ್ತ ಹೇಮಾವತಿ ಅಣೆಕಟ್ಟೆಯಿಂದಲೂ ನಾಲೆಗೆ ನೀರು ಬಾರದ ಕಾರಣ, ಬೆಳೆ ಹಾಕಲಾಗದೇ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದರು.

    ಇತ್ತ ನೀರಿಲ್ಲದೆ ಬೆಳೆಯಿಲ್ಲದೆ, ಅತ್ತ ಸಾಲ ಕಟ್ಟಲು ಹಣವಿಲ್ಲದೆ ಮಹಿಳೆ ನೊಂದಿದ್ದರು. ಈ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಜಯಮ್ಮ ಯತ್ನಿಸಿದ್ದರಿಂದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಮ್ಮ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಬದಿಗಿಟ್ಟು ಶಾಸಕರು, ಸಚಿವರು ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ನೀಡಿದರೆ ಹೀಗೆ ಸಾಲಬಾಧೆಗೆ ಬಲಿಯಾಗುವ ಜೀವಗಳು ಉಳಿಯುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.