ಬೆಳಗಾವಿ: ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದ್ದು, ಇದರಿಂದ ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರಿಟ್ಟಿದ್ದಾರೆ.
ಇಂದು ಮತ್ತೆ ಬೆಳಗಾವಿ ಡಿಸಿ ಕಚೇರಿ ಎದುರು ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ರೈತರು ಇಂದಿನಿಂದ ಆಹೋ ರಾತ್ರಿ ಧರಣಿ ಆರಂಭಿಸಿದ್ದಾರೆ. ಈ ವೇಳೆ ಜಯಶ್ರೀ ಹೆಸರಿಗೆ ಒಂದು ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದೆ. ಪತ್ರ ನೋಡುತ್ತಿದ್ದಂತೆ ಜಯಶ್ರೀ ಕಣ್ಣೀರಿಟ್ಟಿದ್ದಾರೆ.
ಪತ್ರ ನಾಲ್ಕು ಪುಟಗಳಲ್ಲಿದ್ದು, ರೈತ ಮಹಿಳೆ ಜಯಶ್ರೀಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತರೇ ಇದನ್ನ ಮಾಡಿರುವದಾಗಿ ಜಯಶ್ರೀ ಆರೋಪಿಸಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬುದ್ಧಿವಾದ ಹೇಳುವಂತೆ ಜಯಶ್ರೀ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ತಣ್ಣಗಾಗಿದ್ದ ಕಬ್ಬು ಬೆಳೆಗಾರರ ಹೋರಾಟ ಮತ್ತೆ ಆರಂಭಾವಾಗಿದೆ. ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಮನೆಯಿಂದ ಊಟ ತಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕಳಸಾ ಬಂಡೂರಿ ಹೋರಾಟಗಾರರು ಸಾಥ್ ನೀಡಿದ್ದು, ತಕ್ಷಣವೇ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿ ಆರಂಭವಾಗಬೇಕು ಹಾಗೂ ರೈತರ ಸಮಸ್ಯೆ ಬಗೆ ಹರಿಸಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ.
ಈ ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಕುಮಾರಸ್ವಾಮಿ ಅವರು, ಇಷ್ಟು ದಿನ ಎಲ್ಲಿ ಮಲಗಿದ್ದೆ? ಎಂದು ರೈತ ಮಹಿಳೆ ಜಯಶ್ರೀಗೆ ಪ್ರಶ್ನಿಸಿದ್ದರು. ಇದರಿಂದ ಜಯಶ್ರೀ ತನ್ನ ವ್ಯಕ್ತಿತ್ವಕ್ಕೆ ಚ್ಯುತಿ ತಂದಿದೆ ಎಂದು ಕಣ್ಣೀರಿಟ್ಟಿದ್ದರು.
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂಗೆ ಎಂದು ನೊಂದ ಮಹಿಳೆ ಕಣ್ಣೀರು ಹಾಕಿದ್ದಾರೆ.
ಕಬ್ಬು ಬಾಕಿ ಪಾವತಿ, ಸೂಕ್ತ ಬೆಂಬಲ ಬೆಲೆ ನಿಗದಿಗಾಗಿ ಹೋರಾಡುತ್ತಿದ್ದ ರೈತ ಮಹಿಳೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅವಮಾನ ಮಾಡಿದ್ದರು. ಇದರಿಂದ ರೈತರು ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಮಹಿಳೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತಿನಿಂದ ನನಗೆ ಬಹಳ ನೋವು, ಬೇಸರವಾಗಿದೆ. ನನ್ನ ಸ್ವಾಭಿಮಾನಕ್ಕೆ ಚ್ಯುತಿ ತಂದಿದ್ದಾರೆ. ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ಎಂದು ಕೇಳುವುದು ಮುಖ್ಯಮಂತ್ರಿಗೆ ಶೋಭೆ ತರುವಂತಹದಲ್ಲ. ನಾವು ರೈತರು ಆಕ್ರೋಶದಲ್ಲಿ ಏನೋ ಮಾತನಾಡಿರಬಹುದು. ಆದರೆ ಅವರು ಈ ರೀತಿ ಮಾತನಾಡಬಾರದು. ನನಗೆ ಎಷ್ಟು ನೋವಾಗಿದೆ ಎಂದು ನನಗೆ ಗೊತ್ತಿದೆ ಎಂದು ಗಳಗಳನೇ ಅಳುತ್ತಾ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಕುಮಾರಸ್ವಾಮಿ ಮಾತನಾಡಿದ್ದು ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂಗೆ. ಅವರು ಅವಮಾನ ಮಾಡಿದ ಬಳಿಕ ರಾತ್ರಿಯೆಲ್ಲಾ ಫೋನ್ ಮಾಡಿ ಕೆಲ ಮಹಿಳೆಯರು ನಾವಿದ್ದೀವಿ ಚಿಂತೆ ಮಾಡಬೇಡ ಎಂದು ಸಮಾಧಾನ ಮಾಡಿದ್ದಾರೆ. ಆದರೂ ನನ್ನ ಆತ್ಮ ಗೌರವಕ್ಕೆ ಧಕ್ಕೆತರುವಂತಹ ಮಾತನ್ನು ಕೇಳಿ ರಾತ್ರಿಯೆಲ್ಲಾ ನಿದ್ದೆ ಬಂದಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಸಿಎಂ ಕ್ಷಮೆ ಕೇಳಲೇಬೇಕು:
ನಿಮ್ಮ ಬಗ್ಗೆ ಬಹಳ ಗೌರವ ಇಟ್ಟಿದ್ದೆವು. ಆದ್ರೆ ನಿಮ್ಮ ಮಾತಿನಿಂದ ನನ್ನ ಆತ್ಮಗೌರವಕ್ಕೆ ಚ್ಯುತಿ ತಂದಿದ್ದೀರಿ. ಇದು ಸರಿನಾ ಹೇಳಿ ಎಂದು ಸಿಎಂಗೆ ಪ್ರಶ್ನೆ ಮಾಡಿದ್ದಾರೆ. ನೀವೇ ಬರುತ್ತೇನೆ ಎಂದು ಮಾತು ಕೊಟ್ರಿ, ಆದರೆ ನೀವೇ ಹಿಂದೆ ಸರಿದ್ರಿ. ನಮಗೆ ಕುತ್ತಿಗೆಗೆ ಬರುವ ತನಕ ತಡೆದುಕೊಳ್ಳುತ್ತೇವೆ. ಆದರೆ ಅಲ್ಲಿಗೆ ಬಂದ ಮೇಲೆ ನಮ್ಮ ಸಹನೆಯ ಕಟ್ಟೆ ಒಡೆಯುತ್ತದೆ. ಆದ್ದರಿಂದ ಆಕ್ರೋಶ ವ್ಯಕ್ತಪಡಿಸುತ್ತೇವೆ. ಇಂದು ನನ್ನ ಆತ್ಮ ಗೌರವಕ್ಕೆ ಧಕ್ಕೆ ತಂದಿದ್ದೀರಿ. ಆದ್ದರಿಂದ ನೀವು ಕ್ಷಮೆ ಕೇಳಲೇಬೇಕು ಎಂದು ನೊಂದ ಮಹಿಳೆ ಕಣ್ಣೀರಿಡುತ್ತಾ ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಇದು ರೈತರ ವಾಸ್ತವವಾಗಿದೆ. ಯಾಕೆಂದರೆ ದುಡಿದ ರೈತನಿಗೆ ನ್ಯಾಯೋಚಿತವಾಗಿ ಕೊಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಗುಜರಾತಿನಲ್ಲಿ ಒಂದು ಟನ್ ಗೆ 4,500 ಸಾವಿರ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ 3500 ರೂ ಕೊಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಕರ್ನಾಟಕದೊಳಗೆ ಕಾರ್ಖಾನೆ ದರನೇ ನಿಗದಿಯಾಗಿಲ್ಲ. ಕಾರ್ಖಾನೆ ಪ್ರಾರಂಭವಾಗುತ್ತವೆ. ಮೂರು ವರ್ಷಗಳ ಬಾಕಿ ಇನ್ನೂ ಕೊಟ್ಟಿಲ್ಲ. ಇದನ್ನು ಕೇಳಿದರೆ ಸರ್ಕಾರ ಸಿಡಿಮಿಡಿಗೊಳ್ಳುತ್ತದೆ. ಇದಕ್ಕೂ ಒಂದು ಮಾರ್ಗ ಇರುತ್ತದೆ. ರೈತರಿಗೆ ಕಷ್ಟ ಇದೆ ಆದ್ದರಿಂದ ಅವರಿಗೆ ಕೊಡಬೇಕಾದ ದುಡ್ಡು ಕೊಡಬೇಕು. ಅದು ಬಿಟ್ಟು ಅವರ ದುಡ್ಡಿನಲ್ಲಿ ಮಜಾ ಮಾಡಬಾರದು ಎಂದು ಗರಂ ಆಗಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಅಂತ ಇರುತ್ತದೆ. ತಾನು ಖಾಸಗಿ ವ್ಯಕ್ತಿಯಾಗಿ ನಡೆದುಕೊಳ್ಳುವುದು ಬೇರೆ ವಿಚಾರ. ಸಿಎಂ ಸ್ಥಾನದ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ನಡೆದುಕೊಳ್ಳುವುದು ಬೇರೆಯಾಗಿದೆ. ಹಾಗಾಗಿ ಹೆಣ್ಣು ಮಗಳು ಯಾರೇ ಆಗಿರಲಿ. ನಮ್ಮ ಸಮಾಜದಲ್ಲಿ ಯಾವ ರೀತಿ ಗೌರವಿಸುತ್ತೇವೆಯೋ ಅದೇ ರೀತಿ ಗೌರವ ಕೊಡಬೇಕು. ಓರ್ವ ಸಿಎಂ ಆಗಿ ಈ ರೀತಿ ಪದವನ್ನು ಬಳಸಬಾದರು. ಈ ರೀತಿ ಮಾತನಾಡಿದರೆ ಅವರ ಗೌರವಕ್ಕೆ ಧಕ್ಕೆ ತರುತ್ತದೆ ಇದರಿಂದ ಸರ್ಕಾರಕ್ಕೂ ಒಳ್ಳೆಯದಾಗಲ್ಲ ಎಂದು ಹೇಳಿದ್ದಾರೆ.
ಮಹಿಳೆ ಇವತ್ತು ಚಳವಳಿಗೆ ಬಂದವಳಲ್ಲ. ಅನೇಕ ವರ್ಷಗಳ ಹಿಂದೆ ಚಳವಳಿ, ಹೋರಾಟದಲ್ಲಿ ಭಾಗವಹಿಸಿದ್ದಾಳೆ. ಆದ್ದರಿಂದ ಕನಿಷ್ಠ ಮಹಿಳೆಗೂ ಗೌರವ ಕೊಡಬೇಕು. ಸಿಎಂ ಮಾತನನ್ನು ಒಪ್ಪುವಂತದಲ್ಲ. ಇದನ್ನು ರೈತರು ಸಹಿಸಲ್ಲ, ಆದ್ದರಿಂದ ಅವರೇ ವಾಪಸ್ ಪಡೆಯಬೇಕು. ಮೊದಲು ರೈತರ ಬಾಕಿ ಕೊಡಿ. ಬಳಿಕ ಆ ಹೆಣ್ಣು ಮಗಳ ಬಳಿ ಕ್ಷಮೆ ಕೇಳಬೇಕು ಎಂದು ಅವರು ಆಕ್ರೋಶದಿಂದ ಹೇಳಿದ್ದಾರೆ.
ಮಂಡ್ಯ: ನಾಡಿನಾದ್ಯಂತ ಗುರುವಾರ ಗಣೇಶ ಹಬ್ಬ ಆಚರಿಸುತ್ತಿದ್ದು, ಮಂಡ್ಯದಲ್ಲಿ ಮಹಿಳೆಯೊಬ್ಬರು ಗಣಪತಿಗೆ ಪೂಜೆ ಸಲ್ಲಿಸಿ ಬಳಿಕ ನೇಣಿಗೆ ಶರಣಾದ ಘಟನೆ ನಡೆದಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ದೇವಿರಹಳ್ಳಿ ಗ್ರಾಮದ ಗೌರಮ್ಮ (55) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಇವರು ಗುರುವಾರ ಹಬ್ಬವಾದ ಕಾರಣ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲಬಾಧೆಯಿಂದ ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗೌರಮ್ಮ ಪತಿ ಈಗಾಗಲೇ ನಿಧನ ಹೊಂದಿದ್ದರು. ಹೀಗಾಗಿ ಕುಟುಂಬದ ಜವಬ್ದಾರಿ ಗೌರಮ್ಮ ಮೇಲಿತ್ತು. ಗೌರಮ್ಮ ಅವರಿಗೆ ಓರ್ವ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಹೆಣ್ಣು ಮಕ್ಕಳ ಮದುವೆಯಾಗಿತ್ತು. ಆದರೆ ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು ಒಂಬತ್ತು ಲಕ್ಷ ಸಾಲವಿತ್ತು. ಹೀಗಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.