ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಶ್ರೀ ಬುಧವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇವರು ಉತ್ತರ ಕರ್ನಾಟಕ ಭಾಗದಲ್ಲಿ ರೈತ ಪರ ಹೋರಾಟ ಮಾಡುತ್ತಾ ಸಂಘಟನೆ ಮಾಡಿದ್ದರು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಕಬ್ಬಿನ ಬಾಕಿ ಬಿಲ್ ಗಾಗಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗಿ ಪ್ರತಿಭಟನೆ ನಡೆಸುವ ಮೂಲಕ ಗಮನಸೆಳೆದಿದ್ದರು.
ಹಾಸನ: ಅಡಿಕೆ ಗಿಡಗಳನ್ನು ಯಾರೋ ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ಮಹಿಳೆ ತಾಯಮ್ಮ ಅವರಿಗೆ ಸೇರಿದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ತಾಯಮ್ಮ ಕಳೆದ ಎರಡು ವರ್ಷದಿಂದ ತುಂಬಾ ಶ್ರಮವಹಿಸಿ ಅಡಿಕೆ ಗಿಡ ಬೆಳೆಸಿದ್ದರು. ಎಲ್ಲ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರು. ಆದರೆ ಕಳೆದ ರಾತ್ರಿ ಸುಮಾರು 60ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಾಶ ಮಾಡಿದ್ದಾರೆ. ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದನ್ನು ಕಂಡು ತಾಯಮ್ಮ ಕಣ್ಣೀರಿಟ್ಟಿದ್ದಾರೆ.
ಯಾದಗಿರಿ: ಲೇಡಿ ಪಿಎಸ್‍ಐ ರೈತ ಮಹಿಳೆ ಮೇಲೆ ದರ್ಪ ತೋರಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
56 ವರ್ಷದ ರೈತ ಮಹಿಳೆ ಮಣೆಮ್ಮ ಮೇಲೆ ಲೇಡಿ ಪಿಎಸ್‍ಐ ಜಾಡಿಸಿ ತಳ್ಳಿದ್ದು, ತನ್ನ ದರ್ಪ ತೋರಿಸಿದ್ದಾರೆ. ಇದರಿಂದ ಮಹಿಳೆಗೆ ಕೈ ಮತ್ತು ಬೆನ್ನಿಗೆ ಒಳಪೆಟ್ಟಾಗಿದೆ. ಈ ಪರಿಣಾಮ ಮಣೆಮ್ಮ ಗುರಮಿಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕ್ಯಾಂಟರ್ ಪಲ್ಟಿ- ಸ್ಥಳದಲ್ಲೇ ಇಬ್ಬರು ಸಾವು
ಮಣೆಮ್ಮ ಅವರು ಗುರಮಿಠಕಲ್ ತಾಲೂಕಿನ ಸಿದ್ದಾಪುರ ಗ್ರಾಮದವರು ಎಂದು ತಿಳಿದಿದೆ. ಈ ನಡುವೆ ಮಹಿಳಾ ಪಿಎಸ್‍ಐ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು: ನಟ ಅನಿರುದ್ಧ್ ಕಿರುತೆರೆಯ ಧಾರಾವಾಹಿ ಮೂಲಕ ಮನೆ ಮಾತಾಗಿದ್ದು, ಜೊತೆ ಜೊತೆಯಲಿ ಸೀರಿಯಲ್‍ನಿಂದ ಕನ್ನಡಿಗರ ಮನ ಗೆದ್ದಿದ್ದಾರೆ. ಹೀಗಾಗಿ ಅವರಿಗೆ ಫ್ಯಾನ್ ಫಾಲೋವರ್ಸ್ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಧಾರಾವಾಹಿ ಹವಾ ಹೆಚ್ಚಾಗಿದೆ. ನಟ ಅನಿರುದ್ಧ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದ್ದಾರೆ.
ನಟ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ತಮ್ಮ ವೃತ್ತಿ ಜೀವನದ ಕುರಿತು ಅಪ್‍ಡೇಟ್ ನೀಡುವುದರ ಜೊತೆಗೆ, ವೈಯಕ್ತಿಕ ವಿಚಾರಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ತಮ್ಮ ಬರಹದ ಮೂಲಕ ಮೂಲಕ ಸಮಾಜದ ಆಗುಹೋಗುಗಳನ್ನು ಚಿತ್ರೀಸುತ್ತಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿರುವ ಚಿತ್ರದುರ್ಗದ ರೈತ ಮಹಿಳೆಯ ನೆರವಿಗೆ ನಿಂತಿದ್ದು, ಸಚಿವರು, ಸಂಸದರು ಹಾಗೂ ಶಾಸಕರಿಗೆ ಕರೆ ಮಾಡಿ ರೈತರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಅವರು ಪೋಸ್ಟ್ ಮಾಡಿದ್ದು, ರೈತ ಮಹಿಳೆಯ ಹೃದಯವಿದ್ರಾವಕ ವಿಡಿಯೋ ನೋಡಿದೆ. ನಮ್ಮೆಲ್ಲರಿಗೂ ಸಮಾಜಕ್ಕೆ ಕೊಡುಗೆ ನೀಡಬೇಕು, ನೆರವಾಗಬೇಕು ಎಂಬ ಇಚ್ಛಾಶಕ್ತಿ ಹಾಗೂ ಸಾಮಥ್ರ್ಯ ಇದೆ ಎಂದು ನಾನು ನಂಬಿದ್ದೇನೆ. ಈಗಾಗಲೇ ಹಲವರು ಇದನ್ನು ಮಾಡಿದ್ದಾರೆ, ರೈತ ಮಹಿಳೆಯ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ನಿಮ್ಮದೇಯಾದ ಕೊಡುಗೆ ನೀಡಿದ್ದೀರಿ. ಮಾಧ್ಯಮದವರೂ ಸಹ ಈ ಕುರಿತು ಅಗತ್ಯ ಪ್ರಾಮುಖ್ಯತೆ ನೀಡಿ ಬೆಳಕು ಚೆಲ್ಲಿದ್ದೀರಿ. ಅದೇ ರೀತಿ ನಾನೂ ಸಹ ನ್ನದೇಯಾದ ದಾರಿಯಲ್ಲಿ ಕೆಲಸ ಮಾಡಿದ್ದೇನೆ. ಸಂಸದ ತೇಜಸ್ವಿಸೂರ್ಯ, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ನಾರಾಯಣ ಗೌಡರಿಗೆ ಕರೆ ಮಾಡಿ ಈ ಕುರಿತು ಮನವರಿಕೆ ಮಾಡಿದ್ದೇನೆ ಎಂದಿದ್ದಾರೆ.
ರೈತ ಮಹಿಳೆಯ ವಿಡಿಯೋ ವಿಚಾರವಾಗಿ ಈ ಜನಪ್ರತಿನಿಧಿಗಳು ಹಾಗೂ ಅವರ ಕಾರ್ಯದರ್ಶಿಗಳು ಸ್ಪಂದಿಸಿದ ರೀತಿ ನನ್ನನ್ನು ಮಂತ್ರಮುಗ್ದನ್ನಾಗಿಸಿದೆ. ಅಲ್ಲದೆ ಸರ್ಕಾರವೇ ಈ ಕುರಿತು ಮುತುವರ್ಜಿ ವಹಿಸಿರುವುದು ಇನ್ನೂ ಸಂತಸ ತಂದಿದೆ. ಅಲ್ಲದೆ ಈರುಳ್ಳಿ ಬೆಳೆ ಖರೀದಿಗೆ ಮುಂದಾಗಿದೆ. ಇದೆಲ್ಲ ನನ್ನ ನಂಬಿಕೆಗೆ ಬಲ ತುಂಬಿದಂತಾಗಿದ್ದು, ನಮ್ಮ ಜನ ಹೃದಯ ಶ್ರೀಮಂತಿಕೆ ಉಳ್ಳವರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದೊಂದೇ ಪ್ರಕರಣವಲ್ಲ ಇದೇ ರೀತಿ ಅನೇಕ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ನಮ್ಮಲ್ಲಿ ಕೃಷಿ ಕ್ರಾಂತಿಯಾಗಬೇಕಿದೆ. ಆ ಶಕ್ತಿ ನಮ್ಮಲ್ಲಿದೆ ಅದನ್ನು ಬಳಕೆ ಮಾಡಿಕೊಳ್ಳಬೇಕಷ್ಟೇ ಎಂದು ಹೇಳಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿಮ್ಮ ರೈತ ಪರ, ಸಾಮಾಜಿಕ ಕಳಕಳಿಗೆ ಧನ್ಯವಾದಗಳು ಎಂದು ಕಮೆಂಟ್ ಮಾಡಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ಧಾರಾವಾಹಿಯ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದ್ದು, ಬಹುತೇಕ ವಾಹಿನಿಗಳು ಮರುಪ್ರಸಾರ ಆರಂಭಿಸಿವೆ. ಹೀಗಾಗಿ ಎಲ್ಲ ನಟ, ನಟಿಯರು ತಮ್ಮ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಚಿತ್ರದುರ್ಗ: ಕೊರೊನಾ ಹರಡದಂತೆ ಭಾರತ ಲಾಕ್‍ಡೌನ್ ಆಗಿದೆ. ಇದರಿಂದ ಅನೇಕರು ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತ ಮಹಿಳೆ ಸರಿಯಾಗಿ ಬೆಲೆ ಸಿಗುತ್ತಿಲ್ಲ ಎಂದು ವಿಡಿಯೋ ಮಾಡಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಇದೀಗ ರೈತ ಮಹಿಳೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಧೈರ್ಯ ಹೇಳಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯನಕನಹಳ್ಳಿ ರೈತ ಮಹಿಳೆ ವಸಂತಕುಮಾರಿ ವಿಡಿಯೋ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ. ಇಡೀ ದೇಶವೇ ಲಾಕ್‍ಡೌನ್ ಆದರೂ ರೈತ ಮಾತ್ರ ಕೆಲಸ ಮಾಡುತ್ತಿದ್ದಾನೆ. ದೇಶ ಆಳುವ ಪ್ರಧಾನಿಯಿಂದ, ದೇಶ ಕಾಯೋ ಸೈನಿಕ ಕೂಡ ತಿನ್ನೋದು ರೈತ ಬೆಳೆದ ಬೆಳೆಯನ್ನೇ. ಆದರೆ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಲೆ ಇಲ್ಲ ಎಂದು ರೈತರ ಕಷ್ಟದ ಬಗ್ಗೆ ತಿಳಿಸಿದ್ದಾರೆ.
ಈರುಳ್ಳಿ ಬೆಳೆಗೆ ಬೆಲೆ ಇಲ್ಲ. ಚೀಲ ಈರುಳ್ಳಿಗೆ 250-300 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ಆದರೆ ಈರುಳ್ಳಿ ಬಿತ್ತನೆ, ಕೊಯ್ಯೋದಕ್ಕೆ ಮತ್ತು ಕೂಲಿ ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಹೀಗಾಗಿ ಒಂದು ಚೀಲ ಈರುಳ್ಳಿ ಬೆಳೆಯೋದಕ್ಕೆ ಕನಿಷ್ಠ 500-600 ರೂಪಾಯಿ ಖರ್ಚಾಗತ್ತೆ. ಆದರೆ ಮಾರುಕಟ್ಟೆಯಲ್ಲಿ ನಮ್ಮ ಬೆಳೆಗೆ ಬೆಲೆಯೇ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಸರ್ಕಾರಕ್ಕೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಸಿಎಂ ಯಡಿಯೂರಪ್ಪ ಚಿತ್ರದುರ್ಗ ಜಿಲ್ಲೆಯ ರೈತ ಮಹಿಳೆಗೆ ಅಭಯ ನೀಡಿದ್ದಾರೆ. ರೈತ ಮಹಿಳೆಗೆ ಫೋನ್ ಮಾಡಿ ಆಕೆಯ ಜಾಣತನಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿಕೊಡುತ್ತೇನೆ ಸಿಎಂ ಧೈರ್ಯ ತುಂಬಿದ್ದಾರೆ.
ಸಿಎಂ ಫೋನ್ ಮಾಡಿದ್ದಾಗ ರೈತ ಮಹಿಳೆ, ಸುಮಾರು ರೈತರು ಈರುಳ್ಳಿ ಬೆಳೆದಿದ್ದೇವೆ. ಗ್ರೀನ್ ಪಾಸ್ ಕೊಡಿಸಿದ್ದೀರಿ. ಆದರೆ ಹೆಚ್ಚು ಅಂದರೂ 1 ಚೀಲಕ್ಕೆ 400 ರೂ. ಕೊಡುತ್ತಾರೆ ಅಷ್ಟೆ. ಸರ್ಕಾರದ ಸೌಲಭ್ಯ ಯಾವುದು ರೈತರಿಗೆ ತಲುಪುತ್ತಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿಎಂ, ಬೆಲೆ ಕಡಿಮೆ ಇದೆ ಅಲ್ವಾ? ಡಿಸಿ ಜೊತೆ ಮಾತನಾಡುತ್ತೀನಿ. ಏನು ವ್ಯವಸ್ಥೆ ಮಾಡಬೇಕು ಮಾಡಿಸುತ್ತೀನಿ. ಬಹಳ ಬುದ್ಧಿವಂತೆ ಇದ್ದೀಯಾ ಕಣ್ಣಮ್ಮ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಸಿಎಂ ಯಡಿಯೂರಪ್ಪ ಕೂಡಲೇ ಡಿಸಿಗೆ ಕರೆ ಮಾಡಿ, ಆ ಹಳ್ಳಿಗೆ ಭೇಟಿ ನೀಡಿ ಮಹಿಳೆಯ ಕಷ್ಟ ಆಲಿಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಮಹಿಳೆ ಬೆಳೆದ ಈರುಳ್ಳಿ ಮತ್ತು ಇತರ ರೈತರು ಅಲ್ಲಿ ಈರುಳ್ಳಿ ಬೆಳೆದು ತೊಂದರೆಗೀಡಾಗಿದ್ದರೆ ಕೂಡಲೇ ಸರ್ಕಾರದ ವತಿಯಿಂದ ಖರೀದಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಹೂವುಗಳ ದರ ಮಾರುಕಟ್ಟೆಯಲ್ಲಿ ಕುಸಿತವಾಗಿದ್ದು, ಬಟಾನ್ಸ್ ಹೂವುಗಳನ್ನು ಬೆಳೆದ ರೈತ ಮಹಿಳೆಯೊಬ್ಬರು ತೋಟದಲ್ಲಿ ಬಾಡಿಹೋಗುತ್ತಿರುವ ಹೂವುಗಳನ್ನು ಕಂಡು ಕಂಗಾಲಾಗಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬಸವಪಟ್ಟಣ ಗ್ರಾಮದ ರೈತ ಮಹಿಳೆಯೊಬ್ಬರು ನಷ್ಟ ಅನುಭವಿಸುತ್ತಿದ್ದಾರೆ. ಅತ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಇತ್ತ ತೋಟದಲ್ಲಿಯೇ ಹೂವುಗಳು ಒಣಗುತ್ತಿರೋದನ್ನ ಕಂಡು ರೈತ ಮಹಿಳೆ ಲಕ್ಷ್ಮೀದೇವಮ್ಮ ಕಂಗಾಲಾಗಿದ್ದಾರೆ. ತಮ್ಮ ಜಮೀನಿನಲ್ಲಿ ಬಟಾನ್ಸ್ ಹೂವುಗಳನ್ನು ಲಕ್ಷ್ಮೀದೇವಮ್ಮ ಬೆಳೆದಿದ್ದರು. ಐದು ಲಕ್ಷ ರೂ. ಸಾಲ ಮಾಡಿ ಕಷ್ಟ ಪಟ್ಟು ಹೂವುಗಳನ್ನು ಬೆಳೆದಿದ್ದರು. ಹೂವುಗಳು ಕೂಡ ಸಮೃದ್ಧಿಯಾಗಿ ಬೆಳೆದು ನಿಂತಿದೆ. ಆದರೆ ಲಾಕ್‍ಡೌನ್ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂವಿನ ದರ ಕುಸಿತಕಂಡಿದ್ದು, ಹೂವುಗಳನ್ನು ಮಾರಾಟ ಮಾಡಿದರೆ ಹಾಕಿದ ಅರ್ಧದಷ್ಟು ಹಣ ಸಿಗೋದಿಲ್ಲ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
ಒಂದೆಡೆ ಬೆಳೆ ನಷ್ಟವಾದರೆ, ಇನ್ನೊಂದೆಡೆ ಸಾಲಗಾರನ ಕಾಟದಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಕುಟುಂಬ ಕಾಲ ಕಳೆಯುತ್ತಿದೆ. ಮಾರುಕಟ್ಟೆಗೆ ಸಾಗಿಸಲು ಪೊಲೀಸರ ಭಯ, ಬಾಡಿಗೆ ವಾಹನಗಳು ಸಿಗುತ್ತಿಲ್ಲ. ಇತ್ತ ಹೂವು ಕಟಾವು ಮಾಡಲು ಕೂಲಿ ಆಳುಗಳು ಕೆಲಸಕ್ಕೆ ಬರದಿರೋದು ತೊಂದರೆಯಾಗಿದೆ ಎಂದು ರೈತ ಮಹಿಳೆ ಕಣ್ಣೀರಿಡುತ್ತಿದ್ದು, ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಹಾವೇರಿ: ಕೃಷಿ ಕೆಲಸ ಅಂದ್ರೆ ಇತ್ತೀಚಿನ ದಿನಗಳಲ್ಲಿ ಪುರುಷರು ಸಾಕಪ್ಪ ಸಾಕು ಅಂತಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ತಂದೆಯ ಹೆಗಲಿಗೆ ಹೆಗಲು ಕೊಟ್ಟು, ಪುರುಷರನ್ನೂ ನಾಚಿಸುವಂತೆ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾರೆ. ಜಮೀನಿನಲ್ಲಿ ಬಂಪರ್ ಬೆಳೆ ತೆಗೆಯುತ್ತಿದ್ದಾರೆ. ಮದುವೆ ಆಗದೆ ತಂದೆ-ತಾಯಿ ಹಾಗೂ ತನ್ನ ಸಹೋದರಿಯನ್ನ ಸಾಕುತ್ತಿರೋ ಗಟ್ಟಿಗಿತ್ತಿ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.
ಹೌದು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕು ಕೆರವಡಿ ಗ್ರಾಮದಲ್ಲಿ ಪುರುಷರನ್ನೇ ಮೀರಿಸುವ ಹಾಗೆ ಕೆಲಸ ಮಾಡೋ ಮಹಿಳೆಯ ಹೆಸರು ಮಹಾದೇವಕ್ಕ ಲಿಂಗದಹಳ್ಳಿ. 51 ವರ್ಷ ವಯಸ್ಸಾಗಿರೋ ಇವದ್ದು, ಮಹಿಳಾ ಪ್ರಧಾನ ಕುಟುಂಬ. ತಂದೆ ಬಸಪ್ಪನಿಗೆ ಐದು ಜನ ಹೆಣ್ಣುಮಕ್ಕಳು. ಐವರಲ್ಲಿ ಮಹಾದೇವಕ್ಕನೇ ಹಿರಿಯ ಮಗಳು. 12ನೇ ವಯಸ್ಸಿನಲ್ಲಿಯೇ ತಂದೆ ಜೊತೆಗೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದರು. ತಂದೆಗೆ ಮಾತು ಬರಲ್ಲ. ತಾಯಿಗೆ ಸ್ವಲ್ಪ ಕಾಲಿನ ಸಮಸ್ಯೆ ಇತ್ತು. ಹೀಗಾಗಿ ಮಹಾದೇವಕ್ಕ ಮನೆಯ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ. ಮೊದಲು ತಂದೆಯ ಜೊತೆಗೆ ಸೇರಿ ಎತ್ತು ಕಟ್ಟಿ ಕೃಷಿ ಮಾಡುತ್ತಾ ಬಂದರು. ಕಾಲಕ್ರಮೇಣ ತಂದೆಗೆ ವಯಸ್ಸಾದ ನಂತರ ಟ್ರ್ಯಾಕ್ಟರ್ ಖರೀದಿಸಿ ಅದರಲ್ಲಿಯೇ ಕೃಷಿ ಮಾಡುತ್ತಿದ್ದಾರೆ. ಮೊದಮೊದಲು ಟ್ರ್ಯಾಕ್ಟರ್ ಓಡಿಸಲು ಡ್ರೈವರ್ ಹುಡುಕಿ ಕೆಲಸ ಮಾಡಿಸುತ್ತಿದ್ದ ಮಹಾದೇವಕ್ಕ, ಡ್ರೈವರ್ ಸರಿಯಾದ ಸಮಯಕ್ಕೆ ಸಿಗದಿದ್ದಾಗ ತಾನೇ ಚಾಲನೆ ಮಾಡೋದನ್ನ ಕರಗತ ಮಾಡಿಕೊಂಡರು. ಅಲ್ಲದೆ ತನ್ನ ಜಮೀನಿನ ಕೆಲಸವನ್ನು ಟ್ರ್ಯಾಕ್ಟರ್ ಮೂಲಕವೇ ಮಾಡುತ್ತೇನೆ ಎಂದು ರೈತ ಮಹಿಳೆ ಹೇಳುತ್ತಾರೆ.
ಕಳೆದ 15 ವರ್ಷಗಳಿಂದ ಮನೆಯ ಹಿರಿಯ ಮಗಳಾಗಿ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ. ಐದು ಎಕರೆ ಕೃಷಿ ಜಮೀನು ಹೊಂದಿರೋ ಮಹಾದೇವಕ್ಕ ತನ್ನ ಜಮೀನಿನಲ್ಲಿ ಭರ್ಜರಿ ಬೆಳೆಯನ್ನ ತೆಗೆಯುತ್ತಿದ್ದಾರೆ. ಪ್ರಸ್ತಕವರ್ಷ ನಿರಂತರ ಮಳೆಗೆ ಎಲ್ಲಾ ರೈತರ ಬೆಳೆ ಹಾನಿ ಸ್ವಲ್ಪ ಪ್ರಮಾಣದ ಇಳುವರಿ ಪಡೆದರೆ, ಮಹಾದೇವಕ್ಕ ಮೆಕ್ಕೆಜೋಳವನ್ನ ಉತ್ತಮ ಇಳುವರಿ ಪಡೆದುಕೊಂಡಿದ್ದಾರೆ. ತನ್ನ ಜಮೀನಿನಲ್ಲಿ ಮೂರು ಬೋರ್‍ವೆಲ್ ಹಾಕಿಸಿದ್ದು, ಜಮೀನಿನಲ್ಲಿ ಮೆಕ್ಕೆಜೋಳ, ಹತ್ತಿ, ರಾಗಿ, ನವಣಿ, ಅವರೆ, ಗೋಧಿ, ಕಡ್ಲಲೆ ಸೇರಿದಂತೆ ಸಿರಿಧ್ಯಾನಗಳನ್ನ ಬೆಳೆಯುತ್ತಿದ್ದಾರೆ. ತನ್ನ ಕುಟುಂಬದ ಸಂಬಂಧ ಮದುವೆಯನ್ನ ನಿರಾಕರಿಸಿ, ತಂದೆ-ತಾಯಿ ಹಾಗೂ ಎರಡು ಜನ ಸಹೋದರಿ ಮದುವೆ ಮಾಡಿದ್ದಾರೆ. ಮಹಾದೇವಕ್ಕ ಕೃಷಿನೋಡಿದ ಗ್ರಾಮದ ಹಿರಿಯರು, ಪುರುಷರನ್ನೇ ನಾಚಿಸುವಂತೆ ಕೃಷಿ ಮಾಡುತ್ತಿದ್ದಾಳೆ ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 15 ವರ್ಷಗಳಿಂದ ಕೃಷಿ ಮಾಡುತ್ತಿರೋ ಮಹಾದೇವಕ್ಕ ಜಮೀನಿನಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಕೃಷಿ ಮಾಡುತ್ತಾ ಹೊಸಮನೆ ನಿರ್ಮಾಣ, ಜಾಗ ಖರೀದಿ ಹಾಗೂ ಇಬ್ಬರು ಸಹೋದರಿಯರ ಮದುವೆ ಮಾಡಿ ಸೈ ಅನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅನ್ನೋದನ್ನ ಮಹಾದೇವಕ್ಕ ಸಾಧಿಸಿ ತೋರಿಸಿದ್ದಾರೆ.
ಚಾಮರಾಜನಗರ: ಜಮೀನಿನಲ್ಲಿ ಮೋಟಾರ್ ಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಕೆಂಪನಪುರದಲ್ಲಿ ನಡೆದಿದೆ.
ಗೂಳಿಪುರ ಗ್ರಾಮದ 50 ವರ್ಷದ ಕೆಂಪಮ್ಮ ಮೃತಪಟ್ಟ ಮಹಿಳೆ. ಇವರು ಕಟ್ಟಿಗೆ ತರಲು ತೆರಳಿದ್ದಾಗ ಬೋರ್‍ವೆಲ್ ಮೋಟಾರ್ ಗೆ ಅಳವಡಿಸಿದ್ದ ತಂತಿ ಸ್ಪರ್ಶಿಸಿದೆ. ಪರಿಣಾಮ ಕೆಂಪಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೋಹನ್ ಎಂಬವರಿಗೆ ಸೇರಿದ ಬಾಳೆ ತೋಟದಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಸಂತೇಮರಹಳ್ಳಿ ಪಿಎಸ್‍ಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ರಾಯಚೂರು/ಬಾಗಲಕೋಟೆ : ಕಾಲೇಜು ಕಲಿಯುವ ವೇಳೆ ಪಂಚೆಯುಟ್ಟ ವ್ಯಕ್ತಿಯನ್ನು ನೋಡಿ ಓಡಿ ಹೋಗುತ್ತಿದ್ದ ಮಹಿಳೆ ಇಂದು ಎಂಟು ಎಕರೆ ಪ್ರದೇಶದಲ್ಲಿ ಕೃಷಿ ಮಾಡಿ ಲಕ್ಷಾಂತರ ರೂ. ಸಂಪಾದಿಸುತ್ತಿರುವ ಪ್ರಗತಿ ಪರ ರೈತ ಮಹಿಳೆ, ಪಬ್ಲಿಕ್ ಹೀರೋ ಕವಿತಾ ಮಿಶ್ರಾ ಯುವ ಹಾಗೂ ಮಹಿಳಾ ರೈತರಿಗೆ ಕಿವಿಮಾತು ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳದ ನಿವಾಸಿಯಾಗಿರುವ ಕವಿತಾ ಮಿಶ್ರಾರ ಸಾಹಸಗಾಥೆಯನ್ನು ಪಬ್ಲಿಕ್ ಟಿವಿ 2017ರಲ್ಲಿ ಬಿತ್ತರಿಸಿತ್ತು. ಪಬ್ಲಿಕ್ ಹೀರೋ ಸಂಚಿಕೆಯಲ್ಲಿ ಕವಿತಾ ಮಿಶ್ರಾ ಅವರ ವಿಶೇಷ ಕಾರ್ಯಕ್ರಮ ಫೆಬ್ರವರಿ 27, 2017ರಂದು ಪ್ರಸಾರ ಮಾಡಿತ್ತು. ಇದೀಗ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಕವಿತಾ ಮಿಶ್ರಾರ ಸ್ಫೂರ್ತಿದಾಯಕ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಪಾದರಸದಂತೆ ಹರಿದಾಡುತ್ತಿದ್ದು, ಮನಸೋತ ನೆಟ್ಟಿಗರು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಕೃಷಿ ರತ್ನ ಮಹಿಳೆ:
ಪ್ರವಚನಕಾರ ಈಶ್ವರ ಮಂಟೂರ್ ಆಯೋಜಿಸಿದ್ದ ಸಾಧಕರ ಸಸ್ಮಾನ ಕಾರ್ಯಕ್ರಮದಲ್ಲಿ ಕೃಷಿ ರತ್ನ ಪ್ರಶಸ್ತಿ ನೀಡಿ ಕವಿತಾ ಮಿಶ್ರಾ ಅವರನ್ನು ಸನ್ಮಾನಿಸಲಾಯತ್ತು. ಈ ವೇಳೆ ಕಾರ್ಯಕ್ರಮದಲ್ಲಿ ನೆರದಿದ್ದ ರೈತರೊಂದಿಗೆ ಕೃಷಿ ಅನುಭವವನ್ನು ಹಂಚಿಕೊಂಡರು.
ವಿಡಿಯೋದಲ್ಲಿ ಏನಿದೆ?
ಓದಿದ್ದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಗಂಡನ ಮನೆಯಲ್ಲಿ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಲು ಅವಕಾಶವಿರಲಿಲ್ಲ. ತವರು ಮನೆಯಲ್ಲಿ ಚೆನ್ನಾಗಿ ಓದಿಸಿದ್ದರು. ಹೀಗಾಗಿ ಹೊಲದಲ್ಲಿ ದುಡಿದು ಗೊತ್ತಿರಲಿಲ್ಲ. ಏಕೆಂದರೆ ಕೃಷಿ ಎಸಿ ರೂಂನಲ್ಲಿ ಕುಳಿತು ಲಕ್ಷಗಟ್ಟಲೇ ಹಣ ಎಣಿಸುವ ವೃತ್ತಿಯಲ್ಲ. ಮೈದಾ ಹಿಟ್ಟಿನಂತಿದ್ದ ಬಣ್ಣವನ್ನು ಮಣ್ಣಿಗೆ ನೀಡಿ ಮಣ್ಣಿನ ಬಣ್ಣವನ್ನು ನಾನು ಪಡೆದಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಕೆಲಸದ ಪರಿಯನ್ನು ವಿವರಿಸಿದ್ದಾರೆ.
ಇನ್ಫೋಸಿಸ್‍ನಲ್ಲಿ ಕೆಲಸ ಸಿಕ್ಕಿತ್ತು, ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರೆ ಕರಿಬೇವು, ಕೊತ್ತಂಬರಿ ರೀತಿಯಲ್ಲಿ ಆಗುತ್ತಿದೆ. ಮಣ್ಣನ್ನು ನಂಬಿ ಕೃಷಿ ಪ್ರಾರಂಭಿಸಿದೆ ಇಂದು ಆ ಮಣ್ಣು ರಾಜ್ಯ ಮಟ್ಟ, ರಾಷ್ಟ್ರ ಮಟ್ಟ, ಅಂತರಾಷ್ಟ್ರೀಯ ಮಟ್ಟಕ್ಕೆ ನನ್ನನ್ನು ಕರೆದುಕೊಂಡು ಹೋಗಿದೆ. ನಾವೆಲ್ಲರೂ (ಮಹಿಳೆಯರು) ನದಿ ಇದ್ದ ಹಾಗೆ ನದಿ ಹರಿದು ಬರಬೇಕಾದರೆ, ಸಮತಟ್ಟಾದ ನೆಲ ಸಿಗುವುದಿಲ್ಲ. ಹಾಗೆಯೇ ನಮ್ಮ ಜೀವನದಲ್ಲೂ ನಾವು ಅಂದುಕೊಂಡದ್ದು ಆಗುವುದಿಲ್ಲ. ನದಿಯು ನೆಲ ಸಮತಟ್ಟಾಗಿಲ್ಲ ಎಂದು ಮರಳಿ ಹರಿಯುವುದಿಲ್ಲ. ನದಿ ಪ್ರಾರಂಭವಾಗುವುದೇ ಸಮುದ್ರ ಸೇರಲು, ಹರಿಯುವುದೇ ಅದರ ಕೆಲಸ. ಕಂದಕ, ಗುಡ್ಡಗಳು ಎದುರಾಗುತ್ತವೆ ಎಂದು ಹಿಂದಿರುಗುವುದಿಲ್ಲ. ಅವೆಲ್ಲವನ್ನು ಸೀಳಿಕೊಂಡು ಮುನ್ನುಗ್ಗುತ್ತದೆ. ಮಹಿಳೆಯರೂ ಸಹ ಹಾಗೆಯೇ ಎಂತಹ ಕಷ್ಟಗಳನ್ನೂ ಎದುರಿಸಲು ಸಿದ್ಧರಾಗಿರಬೇಕು. ಒಂದು ಮನೆತನದ ಮಾನ, ಮರ್ಯಾದೆ, ಸಾಮಾಜಿಕ ಸಂಸ್ಕೃತಿ ಹಾಗೂ ಆರ್ಥಿಕ ಮಟ್ಟಕ್ಕೆ ಮಹಿಳೆಯರೇ ರೂವಾರಿಗಳು ಎಂದರು.
ಯಾವತ್ತೂ ಹೆಂಡಿ, ಕಸ ಬಳಿದಿರಲಿಲ್ಲ, ಹೊಲದಲ್ಲಿ ಕೆಲಸ ಮಾಡಿ ತಿಳಿದಿರಲಿಲ್ಲ. ಮೊದಲು ಹಾಲು ಹಿಂಡಬೇಕಾದರೆ ಎಮ್ಮೆ ನನ್ನ ಕಾಲ ಮೇಲೆ ಕಾಲಿಟ್ಟಿತ್ತು. ನಾಲ್ಕು ಬಾರಿ ಒದ್ದಿತ್ತು. ಆದರೆ ಇಂದು ನಾನು 15 ಲೀಟರ್ ಹಾಲು ಕರೆಯುತ್ತೇನೆ. ಕಾಲೇಜಿನಲ್ಲಿ ಓದಬೇಕಾದರೆ ಪಂಚೆಯವರು ಬಂದರೆ ಓಡಿ ಹೋಗುತ್ತಿದ್ದೆ ಅಷ್ಟು ಸೊಕ್ಕಿತ್ತು. ಆದರೆ ಪಂಚೆ ಉಟ್ಟವರು ಕೆಲಸ ಮಾಡಿದ್ದರಿಂದಲೇ ಸಾಧನೆ ಮಾಡಿದ್ದೇನೆ ಎಂದು ಯುವ ರೈತರಿಗೆ ರೋಮಾಂಚನಕಾರಿ ಮಾತುಗಳನ್ನಾಡಿದ್ದಾರೆ.
ನಾನೂ ಸಹ ಸಾವಿರ ಬಾರಿ ಜೀವನದಲ್ಲಿ ಬಿದ್ದಿದ್ದೇನೆ. ಆದರೆ ಒಂದೇ ಬಾರಿ ಎದ್ದಿದ್ದೇನೆ. ಬಿತ್ತಾಗ ದೃತಿಗೆಡಬೇಕಿಲ್ಲ. ಗಂಡ ಎಂದರೆ ಗುಡ್ಡ ಇದ್ದ ಹಾಗೆ. ಹೀಗಾಗಿ ಪತಿ-ಪತ್ನಿಯರು ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಜತೆಯಾಗಿದ್ದರೆ ಯಾವುದೇ ಕಷ್ಟವನ್ನು ಎದುರಿಸಬಹುದು.
ಒಂಟಿ ಬೆಳೆ ಮಾರಕ, ಬಹುಬೆಳೆ ಪೂರಕ:
ರೈತರ ಬದುಕು ಕಷ್ಟದ ಜೀವನ, ಎಲ್ಲವನ್ನೂ ಹಾಕುತ್ತೇವೆ, ಜತೆಗೆ ನಮ್ಮನ್ನು ನಾವೇ ಹಾಕುತ್ತೇವೆ. ಒಂದು ಎಕರೆಗೆ 10-15 ಕ್ವಿಂಟಲ್ ಧಾನ್ಯ ಬೆಳೆಯುತ್ತೇವೆ. ಅದಕ್ಕೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಹೀಗಾಗಿ ರೈತರ ಪ್ರಯತ್ನಕ್ಕೆ ಅರ್ಥವಿರುವುದಿಲ್ಲ. ಹೀಗಾಗಿ ರೈತನಿಗೆ ಬೆಲೆ ಸಿಗುತ್ತಿಲ್ಲ. ಅವನ ಹೆಂಡತಿ, ಮಕ್ಕಳಿಗೂ ಗೌರವ ಸಿಗುತ್ತಿಲ್ಲ. ಎಲ್ಲದಕ್ಕಿಂತ ಸ್ವಾಭಿಮಾನದ ಜೀವನ ರೈತನದ್ದು. ರೈತ ಅನ್ನದಾತ, ಅವರು ಕೊಡುವವನೇ ಹೊರತು ಬೇಡುವವನಲ್ಲ.
ರೈತರಿಗೆ ಪ್ರತಿ ತಿಂಗಳಿಗೆ ಸಂಬಳ ಬರುವುದಿಲ್ಲ, ನಿವೃತ್ತಿ ಬಳಿಕ ಪೆನ್ಷನ್ ಬರುವುದಿಲ್ಲ. ಹೀಗಾಗಿ ರೈತರಿಗೆ ಹೆಣ್ಣು ಕೊಡಲು ಜನ ಯೋಚಿಸುತ್ತಿದ್ದಾರೆ. ರೈತರು ಈ ಕುರಿತು ಚಿಂತಿಸಿ ಸಮಗ್ರ ಕೃಷಿ ಪದ್ಧತಿ ಮೂಲಕ ಪ್ರತಿ ತಿಂಗಳು ಸಂಬಳದ ರೀತಿ ಆದಾಯ ಪಡೆಯಬಹುದಾಗಿದೆ. ತೋಟಗಾರಿಕೆ ಬೆಳೆಯಲ್ಲಿ ಅರಣ್ಯ ಕೃಷಿಯನ್ನು ಮಾಡಬೇಕು.
https://www.youtube.com/watch?v=4q1NZurnxS8
ನಾನೂ ಸಹ 8 ಎಕರೆ 10 ಗುಂಟೆ ಕೃಷಿ ಭೂಮಿಯಲ್ಲಿ ನಾನು 2,100 ಶ್ರೀಗಂಧ, 1,000 ದಾಳಿಂಬೆ, 600 ಮಾವು, 600 ಸೀಬೆ ಹಣ್ಣು, 450 ಸೀತಾಫಲ, 100 ನೀರಲ ಹಣ್ಣು, 100 ಬೆಟ್ಟದ ನೆಲ್ಲಿಕಾಯಿ, 200 ನಿಂಬೆ ಗಿಡ, 200 ಮೋಸಂಬೆ ಗಿಡ, 200 ಸಾಗವಾನಿ, 50 ಕರಿಬೇವು ಗಿಡ, ನುಗ್ಗೆಕಾಯಿ ಗಿಡ ಬೆಳೆಯುತ್ತಿದ್ದೇನೆ. ಇದರೊಂದಿಗೆ ಕುರಿ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಹಾಗೂ ಹೈನುಗಾರಿಕೆ ಇವೆಲ್ಲವನ್ನೂ ಮಾಡಿದ್ದೇನೆ. ಇದರಿಂದ ಮಾವಿನ ಸೀಸನ್‍ನಲ್ಲಿ ಮಾವಿನ ಹಣ, ದಾಳಿಂಬೆ ಸೀಸನ್‍ನಲ್ಲಿ ದಾಳಿಂಬೆ ಹಣ ಹೀಗೆ ಸತತವಾಗಿ ಹಣ ಬರುವಂತೆ ಬೆಳೆಗಳನ್ನು ಬೆಳೆಯಬೇಕು. ಆಗ ಪ್ರತಿ ತಿಂಗಳೂ ಆದಾಯ ನಿರೀಕ್ಷಿಸಲು ಸಾಧ್ಯ. ಮಾರುಕಟ್ಟೆ ವಿರುದ್ಧ ನಿಲ್ಲಲು ಸಾಧ್ಯವಿಲ್ಲ.
ಮಾರುಕಟ್ಟೆಗೆ ತಕ್ಕಂತೆ ಬೆಳೆ ಬೆಳೆಯಬೇಕು. ಇದೆಲ್ಲ ತಕ್ಷಣಕ್ಕೆ ಆದರೆ, ಇನ್ನೂ ಶ್ರೀಗಂಧ ಬೆಳೆ ಬೆಳೆದರೆ ಮುಪ್ಪಾವಸ್ಥೆಯಲ್ಲಿ ನಿಮಗೆ ಪೆನ್ಷನ್ ರೀತಿ ಹಣ ಲಭ್ಯವಾಗುತ್ತದೆ. ಒಂದು ಎಕರೆ ಶ್ರೀಗಂಧ ಬೆಳೆದರೆ 6 ಕೋಟಿ ರೂ. ಆದಾಯ ಪಡೆಯಬಹುದು. ಇಷ್ಟೆಲ್ಲ ವ್ಯವಸ್ಥಿತವಾಗಿ ಕೃಷಿ ಮಾಡಿದರೆ, ಸರ್ಕಾರ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಬರುವುದಿಲ್ಲ. ನಾವು ಕೋಟ್ಯಾಧಿಪತಿಯಾಗುವ ಮೂಲಕ ಸರ್ಕಾರವನ್ನೂ ಕೋಟ್ಯಾಧಿಪತಿ ಮಾಡಬಹುದು.
ಜಗತ್ತು ರೈತನಿಗೆ ನೀಡುವ ಗೌರವದಲ್ಲಿ ಬದಲಾಗಬೇಕಿದೆ. ಈ ರೈತನ ಚಿತ್ರ ಬಿಡಿಸಲು ಹೇಳಿದರೆ ಹರಕು ಪಂಚೆ ಉಟ್ಟು ಮೋಡ ನೋಡುತ್ತಿರುವ ರೈತರನ್ನು ಮಕ್ಕಳು ಚಿತ್ರಿಸುತ್ತಾರೆ. ಆದರೆ, ಇದು ಬದಲಾಗಬೇಕು ರೈತರ ಚಿತ್ರ ಬಿಡಿಸಲು ಹೇಳಿದರೆ ಎಸಿ ಕಾರ್ ನಲ್ಲಿ ಕೋಟ್ ಹಾಕಿ ಕುಳಿತು ಸೆಲ್ಫಿ ಕ್ಲಿಕ್ಕಿಸುವ ಚಿತ್ರವನ್ನು ಬಿಡಿಸುವಂತಾಗಬೇಕು.
ಬೆಳಗಾವಿ: ಸಿಎಂ ಅವರೇ ಭತ್ತ ಕಟಾವು, ನಾಟಿ ಮಾಡಿದ್ದಾಯಿತು. ಈಗ ಕಬ್ಬು ಸುಲಿಯಲು ಬನ್ನಿ ಎನ್ನುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ರೈತ ಮಹಿಳೆ ಜಯಶ್ರೀ ಗುರಣ್ಣನವರ್ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಇಂದು ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬು ಬೆಳೆಗಾರರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ಜಯಶ್ರೀ, ನಾವು ರೈತರೇ ಅಲ್ಲ ಅನ್ನುವ ನೀವು, ನನ್ನ ಹೇಳಿಕೆಯನ್ನು ಸವಾಲನ್ನಾಗಿ ಸ್ವೀಕರಿಸಿದರೂ ಪರವಾಗಿಲ್ಲ. ನಾವು ಭತ್ತ ನಾಟಿದ್ದೇವೆ. ಕಟಾವು ಸಹ ಮಾಡಿದ್ದೇವೆ. ಆದರೆ ಈಗ ನೀವು ಕಬ್ಬು ಸುಲಿಯೋಕೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ.
ಕಬ್ಬು ಸುಲಿಯುವುದಕ್ಕೆ ನೀವೇ ಸ್ಥಳವನ್ನು ನಿಗದಿ ಮಾಡಿ. ಇಲ್ಲವೇ ನಾವು ನಿಗದಿ ಮಾಡಿದ ಜಾಗಕ್ಕೆ ಬಂದು ಕಬ್ಬು ಸುಲಿಯಿರಿ ಎಂದು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.
ಪ್ರತಿಭಟನೆ ವಾಪಸ್:
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ರೈತ ಮುಖಂಡರಾಗಿರುವ ಕೋಡಿಹಳ್ಳಿ ಚಂದ್ರಶೇಖರ್, ಬೆಳಗಾವಿ ಜಿಲ್ಲೆಯ ಕೆಂಡಸಕೊಪ್ಪದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ. ಸರ್ಕಾರ ರೈತರ ಬೇಡಿಕೆಗಳನ್ನು ಪೂರೈಸಲು ಬದ್ಧವಾಗಿದೆ. ಫೆಬ್ರವರಿ ತಿಂಗಳೊಳಗಾಗಿ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ. ಕಬ್ಬು ಬಿಲ್ ಬಾಕಿ ಹಾಗೂ ಬೆಂಬಲ ಬೆಲೆ ಹಾಗೂ ಭತ್ತಕ್ಕೆ ಎಮ್‍ಎಸ್‍ಪಿ ನಿಯಮದಂತೆ ಯೋಗ್ಯ ದರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಫೆಬ್ರವರಿ ಒಳಗೆ ಸಿಎಂ ಹೇಳಿದ ಹಾಗೆ ನಡೆದುಕೊಳ್ಳದೇ ಇದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.