Tag: Farm

  • ಗುಮ್ಮಟ ನಗರಿಯಲ್ಲಿ ಗಂಗೆಯ ಪವಾಡ- ಬರಗಾಲದಲ್ಲೂ ಉಕ್ಕಿ ಬಂದ ಜೀವಜಲ

    ಗುಮ್ಮಟ ನಗರಿಯಲ್ಲಿ ಗಂಗೆಯ ಪವಾಡ- ಬರಗಾಲದಲ್ಲೂ ಉಕ್ಕಿ ಬಂದ ಜೀವಜಲ

    – ಸಾಮೂಹಿಕ ವಿವಾಹ ಮಾಡಿ ಹರಕೆ ತೀರಿಸಲಿರುವ ರೈತ

    ವಿಜಯಪುರ: ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ. ನೂರಾರು ಅಡಿಗಳವರೆಗೆ ಕೊಳವೆ ಬಾವಿ ಕೊರೆದರು ನೀರು ಸಿಗದ ಪರಿಸ್ಥಿತಿ ಇದೆ. ಆದರೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಬಂಗಾರಗುಂಡ ಗ್ರಾಮದಲ್ಲಿ ಕೇವಲ 48 ಅಡಿ ಅಗೆದಾಗಲೇ ಬಾವಿಯಲ್ಲಿ ಗಂಗೆ ಉಕ್ಕಿ ಹೊರ ಬಂದಿದ್ದಾಳೆ.

    ಹೌದು. ಅಚ್ಚರಿ ಎನಿಸಿದರು ಇದು ನಿಜ. ಬಂಗಾರಗುಂಡ ಗ್ರಾಮದ ನಿವಾಸಿ ರೈತ ಹಾಗೂ ಶಿಕ್ಷಕರಾಗಿರುವ ಬಸಪ್ಪ ಕುರೆಕನಾಳ ಅವರ ಜಮೀನಲ್ಲಿ ಕೇವಲ 48 ಅಡಿಗೆ ಗಂಗೆ ಉದ್ಬವಿಸಿದ್ದಾಳೆ. ಹೀಗಾಗಿ ಗ್ರಾಮ ದೇವರಲ್ಲಿ ಹರಕೆ ಹೊತ್ತಿದ್ದ ಬಸಪ್ಪ ಇಂದು ಬಾವಿಯ ಬಳಿಯಲ್ಲೇ 10 ಜೋಡಿಗಳ ಸಾಮೂಹಿಕ ವಿವಾಹ ಮಾಡಲಿದ್ದಾರೆ. ಈ ಬಾವಿ ತೆಗೆಯುವ ಮೊದಲು, ಬಾವಿಗೆ ನೀರು ಬಂದರೆ ಕೈಲಾದಷ್ಟು ಜೋಡಿಗಳಿಗೆ ಸಾಮೂಹಿಕ ಮದುವೆ ಮಾಡಿಸುತ್ತೇನೆ ಎಂದು ಬಸಪ್ಪ ಗ್ರಾಮ ದೇವರಾದ ಮಾರುತೇಶ್ವರ, ರೇವಣಸಿದ್ದ, ಮಾಳಿಂಗರಾಯರಲ್ಲಿ ಹರಕೆ ಹೊತ್ತಿದ್ದರು. ಪವಾಡ ಎನ್ನುವಂತೆ ಜಮೀನಿನಲ್ಲಿ ಬಾವಿ ತೋಡಿಸಿದಾಗ ಕೇವಲ 48 ಅಡಿ ಆಳಕ್ಕೆ ನೀರು ಉಕ್ಕಿ ಬಂದು ಅಚ್ಚರಿ ಮೂಡಿಸಿದೆ.

    ಸದ್ಯ ಭೀಕರ ಬರಗಾಲದಲ್ಲೂ ಸೂಮಾರು 35 ಅಡಿಯವರೆಗೆ ಬಾವಿಯಲ್ಲಿ ನೀರು ತುಂಬಿದೆ. ಇದನ್ನ ದೇವರ ಪವಾಡ ಎಂದಿರುವ ಬಸಪ್ಪ ಅವರು ಹರಕೆಯಂತೆ ಸಾಮೂಹಿಕ ಮದುವೆ ಮಾಡಿಸಲಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಬಂಗಾರ ಗುಂಡ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಜನರು ಪಾಲ್ಗೊಳ್ಳಲಿದ್ದಾರೆ.

  • ತುಂಡಾಗಿ ಬಿದ್ದಿದ್ದ ತಂತಿ ತುಳಿದು ಒಂದೇ ಕುಟುಂಬದ ನಾಲ್ವರ ದುರ್ಮರಣ

    ತುಂಡಾಗಿ ಬಿದ್ದಿದ್ದ ತಂತಿ ತುಳಿದು ಒಂದೇ ಕುಟುಂಬದ ನಾಲ್ವರ ದುರ್ಮರಣ

    ಬೆಳಗಾವಿ: ಬುಧವಾರ ಸುರಿದಿದ್ದ ಮಳೆ, ಗಾಳಿಗೆ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಒಂದೇ ಕುಟುಂಬದ ನಾಲ್ವರು ಸೇರಿ ಎರಡು ಎತ್ತುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

    ರೇವಪ್ಪ ಕಲ್ಲೋಳಿ(35), ಪತ್ನಿ ರತ್ನವ್ವ ಕಲ್ಲೋಳಿ(30), ಮಗ ಸಚಿನ್ (8), ರೇವಪ್ಪರ ಅಣ್ಣನ ಮಗ ಕೃಷ್ಣ ಮೃತ ದುರ್ದೈವಿಗಳು. ಬುಧವಾರ ಸಂಜೆ ಮಳೆ-ಗಾಳಿಗೆ ರೇವಪ್ಪ ಅವರ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆದರಿಂದ ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ತಂತಿ ತೆರವುಗೊಳಿಸುವಂತೆ ಕೇಳಿದರು ಕ್ಯಾರೆ ಎಂದಿರಲಿಲ್ಲ. ಹೀಗಾಗಿ ಇಂದು ಬೆಳಗಿನ ಜಾವ ಕುಟುಂಬ ಸಮೇತ ಎರಡು ಎತ್ತಿನ ಜೊತೆ ಜಮೀನಿಗೆ ಹೋಗುತ್ತಿದ್ದ ದಂಪತಿ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಸಾವನ್ನಪ್ಪಿದ್ದಾರೆ.

    ಇಷ್ಟೆಲ್ಲ ನಡೆದಿದ್ದರು ಘಟನಾ ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಮಾತ್ರ ಇದುವರೆಗೂ ಬಂದಿಲ್ಲ. ಆದಷ್ಟು ಬೇಗ ಬಂದು ತುಂಡಾದ ತಂತಿಗಳನ್ನು ತೆರೆವುಗೊಳಿಸಬೇಕು ಅಂತ ಸ್ಥಳೀಯರು ಪಟ್ಟು ಹಿಡಿದು ಕುಳಿತ್ತಿದ್ದಾರೆ. ಸದ್ಯ ಈ ಬಗ್ಗೆ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಿಡಿಯಲು ಬಂದವರ ಬೆವರಿಳಿಸ್ತು 15 ಅಡಿಯ ದೈತ್ಯ ಕಾಳಿಂಗ ಸರ್ಪ!- ವಿಡಿಯೋ ನೋಡಿ

    ಹಿಡಿಯಲು ಬಂದವರ ಬೆವರಿಳಿಸ್ತು 15 ಅಡಿಯ ದೈತ್ಯ ಕಾಳಿಂಗ ಸರ್ಪ!- ವಿಡಿಯೋ ನೋಡಿ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೆಗದ್ದೆ ಗ್ರಾಮದಲ್ಲಿ ಮೈತುಂಬಾ ಪೊರೆ ತುಂಬಿಕೊಂಡಿದ್ದ ಬರೋಬ್ಬರಿ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಸೆರೆಹಿಡಿಯಲು ಬಂದವರ ಬೆವರಿಳಿಸಿದೆ.

    ಬರೋಬ್ಬರಿ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಕಳೆದ ಒಂದು ವರ್ಷದಿಂದ ಬಾಳೆಗದ್ದೆ ಗ್ರಾಮದ ತೋಟವೊಂದರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಕಂಡು ತೋಟದ ಕೆಲಸಗಾರರು ತುಂಬಾ ಭಯಪಟ್ಟಿದ್ದರು. ಹಲವು ಬಾರಿ ಕಾಳಿಂಗ ಸರ್ಪವನ್ನು ಹಿಡಿಯಲು ಪ್ರಯತ್ನಿಸಿದರೂ ಅದು ತಪ್ಪಿಸಿಕೊಂಡು ಕಣ್ಮರೆಯಾಗುತ್ತಿತ್ತು. ಆದರೆ ಬುಧವಾರ ಸರ್ಪವನ್ನು ಸ್ನೇಕ್ ಮಹಮದ್ ಎಂಬವರು ಸೆರೆಹಿಡಿದಿದ್ದಾರೆ.

    ಕಾಳಿಂಗ ಸರ್ಪವನ್ನು ಮಹಮದ್ ಅವರು ಸುಮಾರು ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಕಷ್ಟಪಟ್ಟು ಸೆರೆಹಿಡಿದಿದ್ದಾರೆ. ಮೈತುಂಬಾ ಪೊರೆ ಹೊಂದಿದ್ದ ಕಾರಣಕ್ಕೆ ಕಾಳಿಂಗ ಸರ್ಪ ಕೆಲಕಾಲ ಸೆರೆ ಸಿಗೋದಕ್ಕೂ ಸತಾಯಿಸಿ ಉರಗ ತಜ್ಞರ ಬೆವರಿಳಿಸಿದೆ. ಕಾಳಿಂಗ ಸರ್ಪ ಒಮ್ಮೆ ಕಣ್ಣಿಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಮಾಯವಾಗಿ ಸತಾಯಿಸಿದಲ್ಲದೆ ಬಾಯ್ತೆರೆದು, ಉಸಿರುಬಿಡುತ್ತಾ ಉರಗ ತಜ್ಞರನ್ನು ಹೆದರಿಸಲು ಪ್ರಯತ್ನಿಸಿದೆ. ಆದರೂ ಕೊನೆಗೆ ದೈತ್ಯ ಕಾಳಿಂಗ ಸರ್ಪವನ್ನು ಮಹಮದ್ ಅವರು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

    ಈ ರೋಚಕ ದೃಶ್ಯವನ್ನು ನೋಡಲು ಜನರು ತೋಟದ ಬಳಿ ಬಂದಿದ್ದರು. ಅಷ್ಟೇ ಅಲ್ಲದೆ ಅವರಲ್ಲೊಬ್ಬರು ಮೊಬೈಲ್‍ನಲ್ಲಿ ಕಾಳಿಂಗವನ್ನು ಹಿಡಿದಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಹಾಗೆಯೇ ಅದರ ಜೊತೆ ಜನರು ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಹಾವಿನ ಪೊರೆ ತೆಗೆದು ಅದನ್ನು ಚಾರ್ಮಾಡಿ ಅರಣ್ಯಕ್ಕೆ ಮಹಮದ್ ಅವರು ಸುರಕ್ಷಿತವಾಗಿ ಬಿಟ್ಟಿದ್ದಾರೆ.

    https://www.youtube.com/watch?v=l2Bb_-Qc2ow

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಂಪ್ ಹೌಸ್‍ನಲ್ಲಿ ಪ್ರತ್ಯಕ್ಷವಾಯ್ತು 10 ಅಡಿ ಉದ್ದದ ಕಾಳಿಂಗ ಸರ್ಪ!

    ಪಂಪ್ ಹೌಸ್‍ನಲ್ಲಿ ಪ್ರತ್ಯಕ್ಷವಾಯ್ತು 10 ಅಡಿ ಉದ್ದದ ಕಾಳಿಂಗ ಸರ್ಪ!

    ಹಾಸನ: ಸಕಲೇಶಪುರ ತಾಲೂಕಿನ ಚಗಳ್ಳಿ ಗ್ರಾಮದ ತೋಟವೊಂದರ ಪಂಪ್ ಹೌಸ್‍ನಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ.

    ಚಗಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರ ತೋಟದ ಪಂಪ್ ಹೌಸ್‍ನಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಇಂದು ಬೆಳಗ್ಗೆ ಶ್ರೀನಿವಾಸ್ ತಮ್ಮ ತೋಟಕ್ಕೆ ನೀರು ಬಿಡಲು ಪಂಪ್ ಹೌಸ್ ಬಳಿ ಹೋದಾಗ ಕಾಳಿಂಗ ಸರ್ಪವನ್ನು ಕಂಡು ಭಯಗೊಂಡಿದ್ದಾರೆ. ತಕ್ಷಣ ಉರಗ ತಜ್ಞ ಶೇಕ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಶೇಕ್ ಅವರು 10 ಅಡಿ ಉದ್ದದ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

    ಈ ವೇಳೆ ಉರಗ ತಜ್ಞರು ಹಾವನ್ನು ಹಿಡಿಯುವ ದೃಶ್ಯಾವಳಿಗಳನ್ನು ಕೆಲ ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರೆ.

    ಸದ್ಯ ಸೆರೆಸಿಕ್ಕ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು, ಸರ್ಪವನ್ನು ಗುಂಡ್ಯ ಅರಣ್ಯಕ್ಕೆ ಬಿಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪೈರು ಕೊಯ್ಲು ವೇಳೆ ಕಂಡ ಹೆಬ್ಬಾವು

    ಪೈರು ಕೊಯ್ಲು ವೇಳೆ ಕಂಡ ಹೆಬ್ಬಾವು

    ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಬಳಿ ಇರುವ ಗದ್ದೆಯೊಂದರಲ್ಲಿ ಪೈರು ಕೊಯ್ಲು ವೇಳೆ ಪ್ರತ್ಯಕ್ಷವಾಗಿದ್ದ ಹೆಬ್ಬಾವೊಂದನ್ನು ಪ್ರಾಣಿ ಪ್ರಿಯ ಹಾಗೂ ಉರಗತಜ್ಞ ಮುರಳಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ರೈತರು ಕೆಲಸ ಮಾಡುತ್ತಿದ್ದ ವೇಳೆ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಇದರಿಂದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರು, ರೈತರು ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕೆಜಿಎಫ್‍ನ ಅನಿಮಲ್ ರೆಸ್ಕ್ಯೂ ಸಂಸ್ಥೆಯ ಉರಗತಜ್ಞ ಮುರಳಿ ಅವರು ಕೆಲಕಾಲ ಸಾಹಸ ಮಾಡಿ ಹೆಬ್ಬಾವನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಹೆಬ್ಬಾವನ್ನು ಹಿಡಿಯುತ್ತಿದ್ದಂತೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಅಲ್ಲದೇ ಸ್ಥಳದಲ್ಲಿ ಹೆಬ್ಬಾವನ್ನು ನೋಡಲು ಬಂದಂತ ಗ್ರಾಮದ ಜನರು ಹೆಬ್ಬಾವಿನೊಂದಿಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡರು. ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ತೊಪ್ಪನಹಳ್ಳಿ ಅರಣ್ಯ ಪ್ರದೇಶಕ್ಕೆ ಹೆಬ್ಬಾವನ್ನು ಬಿಡಲಾಯಿತು.

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೋಮ್ಲಾಪುರದ ಗ್ರಾಮದಲ್ಲಿ ನಾಗರಹಾವನ್ನು ಅಟ್ಟಿಸಿಕೊಂಡು ಬಂದು ಅದು ಕೈತಪ್ಪಿದರಿಂದ 13 ಅಡಿ ಉದ್ದದ ಕಾಳಿಂಗ ಸರ್ಪ ಒಂದು ವಾರದಿಂದ ಅಡಿಕೆ ಮರದ ಲಾಟಿನಲ್ಲೇ ವಾಸವಾಗಿತ್ತು. ಅಡಿಕೆ ಮರಗಳ ಮಧ್ಯೆ ಸೇರಿಕೊಂಡಿದ್ದ ಕಾಳಿಂಗ ಒಂದು ವಾರದಿಂದ ಅಲ್ಲೇ ವಾಸವಾಗಿದ್ದನು. ಸೋಮವಾರ ಹೊರಬಂದ ಕಾಳಿಂಗನನ್ನು ನೋಡಿ ಭಯಗೊಂಡ ಗ್ರಾಮಸ್ಥರು ಸ್ನೇಕ್ ಹರೀಂದ್ರಾರನ್ನು ಕರೆಸಿ ಕಾಳಿಂಗನನ್ನು ಸೆರೆಹಿಡಿದಿದ್ದರು. ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಒಂದು ಗಂಟೆಯ ಕಾರ್ಯಚರಣೆ ನಡೆಸಿ ಸೆರೆ ಹಿಡಿದ ಕಾಳಿಂಗನನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾತ್ರೋ ರಾತ್ರಿ ತೋಟದಲ್ಲಿದ್ದ 600ಕ್ಕೂ ಹೆಚ್ಚು ಸಸಿಗಳು ನಾಶ

    ರಾತ್ರೋ ರಾತ್ರಿ ತೋಟದಲ್ಲಿದ್ದ 600ಕ್ಕೂ ಹೆಚ್ಚು ಸಸಿಗಳು ನಾಶ

    ರಾಯಚೂರು: ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಉಂಡ್ರಾಳದೊಡ್ಡಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಸಸಿಗಳನ್ನು ನಾಶ ಮಾಡಲಾಗಿದೆ.

    ಕಾಂಗ್ರೆಸ್ ಕಾರ್ಯಕರ್ತ ಗ್ರಾಮ ಪಂಚಾಯ್ತಿ ಸದಸ್ಯ ರಂಗನಾಥ್ ತೋಟದ ಮಾವಿನ ಸಸಿಗಳು ನಾಶವಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕೆಲವರು ಹಿಂದಿನಿಂದಲೂ ದ್ವೇಷ ಸಾಧಿಸುತ್ತಿದ್ದು ಅವರೇ ಈ ಕೃತ್ಯ ಎಸಗಿದ್ದಾರೆ ಅಂತ ರಂಗನಾಥ್ ಆರೋಪಿಸಿದ್ದು, ಕರಿಯಪ್ಪ ನಾಯಕ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.

    9 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 900 ಗಿಡಗಳಲ್ಲಿ 600 ಕ್ಕೂ ಹೆಚ್ಚು ಗಿಡಗಳನ್ನ ನಾಶ ಮಾಡಲಾಗಿದೆ. ಘಟನೆ ಹಿನ್ನೆಲೆ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.