Tag: farm pits

  • ಚಿಕ್ಕಪ್ಪನ ಮದುವೆಗೆ ಬಂದ ಮೂವರು ಬಾಲಕಿಯರು ಮಸಣಕ್ಕೆ

    ಚಿಕ್ಕಪ್ಪನ ಮದುವೆಗೆ ಬಂದ ಮೂವರು ಬಾಲಕಿಯರು ಮಸಣಕ್ಕೆ

    ಗದಗ: ಕುರಿ ಮೇಯಿಸಲು ಹೋದ ಐವರು ಬಾಲಕಿಯರಲ್ಲಿ ಮೂವರು ಕೃಷಿ ಹೊಂಡದ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.

    5 ಬಾಲಕಿಯರು ಒಟ್ಟಾಗಿ ಕುರಿ ಮರಿಗಳನ್ನು ಮೇಯಿಸಲು ಊರ ಪಕ್ಕಕ್ಕೆ ಹೋಗಿದ್ದರು. ಈ ವೇಳೆ ಜಮೀನಿನಲ್ಲಿದ್ದ ಕೃಷಿ ಹೊಂಡ ನೋಡಿ ನೀರು ಕುಡಿಯಲು ಹೋದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಅಂಕಿತಾ ಲಮಾಣಿ(13), ಸುನಿತಾ ಲಮಾಣಿ(11) ಹಾಗೂ ಸುನಿತಾ(10) ಮೃತ ಬಾಲಕಿಯರು. ಇದನ್ನೂ ಓದಿ: ದತ್ತಪೀಠದ ಹೋಮದ ಜಾಗದಲ್ಲಿ ಮಾಂಸ – ಮುಂದೆ ಅಲ್ಲಿ ಹೋಮ ಮಾಡಲ್ಲ ಅಂದ್ರು, ಮತ್ತೆಲ್ಲಿ?

    POLICE JEEP

    ಬಾಲಕಿಯರು ಗೋವಾದಲ್ಲಿ ವಾಸವಿದ್ದರು. 22ರಂದು ನಡೆಯಲಿದ್ದ ಚಿಕ್ಕಪ್ಪನ ಮದುವೆ ಸಲುವಾಗಿ ಪಾಲಕರೊಂದಿಗೆ ಅತ್ತಿಕಟ್ಟಿ ಗ್ರಾಮಕ್ಕೆ ಬಂದಿದ್ದರು. ಮೃತ ಬಾಲಕಿಯರಲ್ಲಿ ಅಂಕಿತಾ ಹಾಗೂ ಸುನಿತಾ ಸಹೋದರಿಯರು. ಮತ್ತೋರ್ವ ಮೃತ ಬಾಲಕಿ ಸುನಿತಾ ಡೋಣಿ ತಾಂಡ ನಿವಾಸಿ. ಮದುವೆ ಮನೆಯಲ್ಲಿ ಒಟ್ಟಾಗಿದ್ದ ಬಾಲಕಿಯರು ಒಟ್ಟಾಗಿ ಸಂಜೆ ಕುರಿ ಮರಿಗಳನ್ನು ಮೇಯಿಸಲು ಹೋಗಿದ್ದರು.

    ಸ್ಥಳೀಯ ಬಸವರಾಜ್ ಲಮಾಣಿ ಎಂಬವರ ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಮಕ್ಕಳು ಇಳಿದಿರುವುದನ್ನು ಚಿಕ್ಕಪ್ಪ ಗೋವಿಂದ ಲಮಾಣಿ ನೋಡಿದ್ದಾರೆ. ಸ್ಥಳಕ್ಕೆ ಬಂದಾಗ ಮಕ್ಕಳು ನೀರಲ್ಲಿ ಮುಳುಗಿದ್ದು ತಿಳಿದಿದೆ. ಈ ವೇಳೆ ಇಬ್ಬರನ್ನು ರಕ್ಷಣೆ ಮಾಡಿದ್ದು, ಉಳಿದ ಬಾಲಕಿಯರು ಮುಳುಗಿರುವುದನ್ನು ಕುಟುಂಬಸ್ಥರಿಗೆ ಹಾಗೂ ಸ್ಥಳೀಯರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

    ತಕ್ಷಣವೇ ಘಟನಾ ಸ್ಥಳಕ್ಕೆ ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಬಂದಿದ್ದು, ಉಳಿದ ಮೂವರು ಬಾಲಕಿಯರ ಶವವನ್ನು ಕೃಷಿ ಹೊಂಡದಿಂದ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಹಾಗೂ ತಹಶೀಲ್ದಾರ್ ಆಶಪ್ಪ ಪೂಜಾರ ಭೇಟಿ ನಿಡಿ, ಪರಿಶೀಲನೆ ನಡೆಸಿದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮದುವೆಗೆಂದು ಬಂದ ಮಕ್ಕಳು ಮಸಣ ಸೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವು

    ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವು

    ಕೊಪ್ಪಳ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ದುರಂತ ಅಂತ್ಯ ಕಂಡಿರುವ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ವರನಖೇಡ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದ್ದು, ತಡವಾಗಿ ತಡವಾಗಿ ಬೆಳಕಿಗೆ ಬಂದಿದೆ.

    ಹುಲಿಹೈದರ್ ಗ್ರಾಮದ ಕವಿತಾ (11) ಹಾಗೂ ಆಗೋಲಿ ಗ್ರಾಮದ ಸಂಜನಾ (9) ಸಾವನ್ನಪ್ಪಿರುವ ಬಾಲಕಿಯರು. ವರನಖೇಡ ಗ್ರಾಮದ ತೋಟದ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ.

    ಪಾಲಕರು ತೋಟದಲ್ಲಿ ವಾಸವಿದ್ದ ಹಿನ್ನಲೆಯಲ್ಲಿ ನಿನ್ನೆ ಪಾಲಕರ ಹತ್ತಿರ ಬಂದಿದ್ದ ಈ ಬಾಲಕಿಯರು, ಆಟ ಆಡುತ್ತ ಕೃಷಿ ಹೊಂಡಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿಯರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಾಲು ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಅಜ್ಜಿ, ಮೊಮ್ಮಗಳು ಸಾವು

    ಕಾಲು ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಅಜ್ಜಿ, ಮೊಮ್ಮಗಳು ಸಾವು

    ಚಿಕ್ಕಬಳ್ಳಾಪುರ: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಅಜ್ಜಿ ಹಾಗೂ ಮೊಮ್ಮಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪಿಂಜಾರಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ 45 ವರ್ಷದ ಮಂಜುಳಾ ಹಾಗೂ ಮೊಮ್ಮಗಳು 6 ವರ್ಷದ ಲಕ್ಷ್ಮೀ ಮೃತ ದುರ್ದೈವಿಗಳು. ಗ್ರಾಮದ ಹೊರವಲಯದ ನರಸಾರೆಡ್ಡಿ ಅವರ ತೋಟದಲ್ಲಿನ ಕೃಷಿ ಹೊಂಡದಲ್ಲಿ ಕಾಲು ತೊಳೆಯಲು ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಜ್ಜಿ, ಮೊಮ್ಮಗಳು ಮೃತಪಟ್ಟಿದ್ದಾರೆ.

    ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಅಪ್ಪಿಕೊಂಡೇ ಪ್ರಾಣ ಬಿಟ್ಟ ಅಣ್ಣ-ತಂಗಿ

    ಅಪ್ಪಿಕೊಂಡೇ ಪ್ರಾಣ ಬಿಟ್ಟ ಅಣ್ಣ-ತಂಗಿ

    ಬೆಳಗಾವಿ/ಚಿಕ್ಕೋಡಿ: ಒಬ್ಬರನ್ನೊಬ್ಬರು ಅಪ್ಪಿಕೊಂಡೇ ಸಹೋದರ-ಸಹೋದರಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ನಡೆದಿದೆ.

    ಪಾರಿಸನಾಥ ಕುಪವಾಡ (15) ಸನ್ಮತಿ ಕುಪವಾಡ (13) ಮೃತ ದುರ್ದೈವಿಗಳು. ಈಜು ಕಲಿಯಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಅಣ್ಣ-ತಂಗಿ ಸಾವನ್ನಪ್ಪಿದ್ದಾರೆ.

    ಮೃತ ಸನ್ಮತಿ ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿದ್ದಳು. ಈ ಸಂದರ್ಭದಲ್ಲಿ ಸನ್ಮತಿ ಸೊಂಟಕ್ಕೆ ಕಟ್ಟಿದ್ದ ಡಬ್ಬಿ ಹರಿದಿದೆ. ಈ ವೇಳೆ ಸಹೋದರಿಯನ್ನು ರಕ್ಷಿಸಲು ಹೋದ ಅಣ್ಣ ಕೂಡ ನೀರಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ.

    ಅಣ್ಣ-ತಂಗಿಯ ಸಾವು ಕಂಡು ಗ್ರಾಮದ ಜನರು ಕಣ್ಣೀರು ಹಾಕಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅಥಣಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಶಾಲೆಗೆ ರಜೆ – ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವು

    ಶಾಲೆಗೆ ರಜೆ – ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವು

    ವಿಜಯಪುರ: ಶಾಲೆಗೆ ರಜೆ ಹಿನ್ನೆಲೆ ಗ್ರಾಮದ ಹೊರವಯದಲ್ಲಿರುವ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದದಲ್ಲಿ ನಡೆದಿದೆ.

    ಐವರು ಬಾಲಕರ ಪೈಕಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಮತ್ತೋರ್ವ ಬಾಲಕನನ್ನು ರಕ್ಷಣೆ ಮಾಡಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದರಾಮಪ್ಪ ಬಿರಾದಾರ(11) ಅಮೀತ್ ಟಕ್ಕಳಕಿ(12) ಮೃತ ಬಾಲಕರು. ಮತ್ತೋರ್ವ ಬಾಲಕ ವೀರೇಶ್ ಟಕ್ಕಳಕಿಯನ್ನು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಕುಮಾರಪ್ಪ ಕೋರಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆ ಕುರಿತು ತಿಳಿಯುತ್ತಿದ್ದಂತೆ ಮೃತ ಬಾಲಕರ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಜರಣ ದಾಖಲಾಗಿದೆ.

  • ಕೃಷಿ ಹೊಂಡ ಕಳೆದುಹೋಗಿದೆ ಹುಡುಕಿಕೊಡಿ – ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ

    ಕೃಷಿ ಹೊಂಡ ಕಳೆದುಹೋಗಿದೆ ಹುಡುಕಿಕೊಡಿ – ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ

    ರಾಯಚೂರು: ಕೃಷಿ ಹೊಂಡ ಕಳೆದುಹೋಗಿದೆ ಹುಡುಕಿಕೊಡಿ ಎಂದು ರಾಯಚೂರಿನ ಸಿರವಾರ ತಾಲೂಕಿನ ಹಿರೇಹಣಗಿ ಗ್ರಾಮದ ರೈತರೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ರೈತ ಪ್ರವೀಣಕುಮಾರ್ ತನ್ನ ಜಮೀನಿನಲ್ಲಿರುವ ಕೃಷಿಹೊಂಡ ಹುಡುಕಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದಾಖಲೆಗಳ ಪ್ರಕಾರ ತನ್ನ ತಂದೆ ವೀರನಗೌಡ ಹೆಸರಿನಲ್ಲಿರುವ ಸರ್ವೆ ನಂ.3ಎ 6 ಎಕರೆ ಬೀಳುಬಿದ್ದ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣವಾಗಿದೆ. ಆದರೆ ಜಮೀನಿನಲ್ಲಿ ಕೃಷಿ ಹೊಂಡ ಇಲ್ಲ. ಹೀಗಾಗಿ ಕೃಷಿ ಹೊಂಡ ಹುಡುಕಿಕೊಡಿ ಎಂದು ಜಿಲ್ಲಾ ಪಂಚಾಯ್ತಿ ಸಿಇಓಗೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ ಎಂದು ಫೆಬ್ರವರಿ 2019 ರಲ್ಲಿ 14 ಜನ ಕೂಲಿ ಕಾರ್ಮಿಕರ ಹೆಸರಿನಲ್ಲಿ 41,860 ರೂಪಾಯಿ ಹಣ ಬಿಡುಗಡೆಯಾಗಿದೆ. ಆದರೆ ಜಮೀನಿನಲ್ಲಿ ಕೃಷಿಹೊಂಡ ಮಾತ್ರ ನಿರ್ಮಾಣ ಮಾಡಿಲ್ಲ. ಕೃಷಿಹೊಂಡಕ್ಕಾಗಿ ರೈತ ಅರ್ಜಿಹಾಕದಿದ್ದರು ಅವರ ಹೊಲದಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದೆ ಎಂದು ಬಿಲ್ ಮಂಜೂರು ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹೇಶ್ ದಾಖಲೆಗಳನ್ನು ಸೃಷ್ಟಿಸಿ ಹಣ ಲಪಟಾಯಿಸಿದ್ದಾರೆ ಎಂದು ರೈತ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.

    ಪಂಚಾಯ್ತಿ ಅಧಿಕಾರಿಗಳು ಕೇವಲ ದಾಖಲೆಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಬಯಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಸ್ಥಳ ಪರಿಶೀಲಿಸದೆ ಬೇರೆಡೆ ಕೃಷಿ ಹೊಂಡ ನಿರ್ಮಿಸಲಾಗಿದೆ. ಹಣ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಕೃಷಿಹೊಂಡ ನಿರ್ಮಾಣದ ಬಗ್ಗೆ ವರದಿ ನೀಡುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿರುವ ಜಿಪಂ ಸಿಇಓ ಲಕ್ಷ್ಮಿಕಾಂತ್ ರೆಡ್ಡಿ ವರದಿ ಬಂದ ಬಳಿಕ ಕ್ರಮ ಕೈಗೊಳುವುದಾಗಿ ಹೇಳಿದ್ದಾರೆ.

    ರೈತರ ಹೆಸರಲ್ಲಿ ಅಧಿಕಾರಿಗಳು ಅನುದಾನ ನುಂಗಿಹಾಕಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ. ಹೀಗಾಗಿ ಅಧಿಕಾರಿಗಳ ಅಕ್ರಮ ಬಯಲಿಗೆಳೆಯಲು ರೈತ ನನ್ನ ಜಮೀನಿನಲ್ಲಿರುವ ಕೃಷಿ ಹೊಂಡ ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.