Tag: farm loan

  • ಬರೀ ಮಾತೇ ಆಯ್ತು, ಎಲ್ಲಾ ರೈತರ ಬಾಯಿಗೆ ಬಿದ್ದಿಲ್ಲ ಸಾಲ ಮನ್ನಾದ ಲಡ್ಡು!

    ಬರೀ ಮಾತೇ ಆಯ್ತು, ಎಲ್ಲಾ ರೈತರ ಬಾಯಿಗೆ ಬಿದ್ದಿಲ್ಲ ಸಾಲ ಮನ್ನಾದ ಲಡ್ಡು!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ಹತ್ತಿರ ಹತ್ತಿರ ಒಂದು ವರ್ಷ ಆಗುತ್ತಿದೆ. ದಿನಗಳು ಉರುಳುತ್ತಿದ್ದು, ಆದರೆ ರೈತರ ಸಾಲ ಸಂಪೂರ್ಣ ಮನ್ನಾ ಆಗದ್ದಕ್ಕೆ ಟೀಕೆ ಕೇಳಿಬಂದಿದೆ.

    ವಿಧಾನಸಭಾ ಚುನಾವಣೆ ಸಮಯದಲ್ಲಿ ನಾನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಈಗ ಲೋಕಸಭಾ ಚುನಾವಣೆ ಮುಗಿಯುತ್ತಾ ಬಂದಿದ್ದು ಸಾಲ ಮನ್ನಾ ಭರವಸೆ ಭರವಸೆಯಾಗಿಯೇ ಉಳಿದಿದ್ದು ಪೂರ್ಣವಾಗಿ ಮನ್ನಾ ಆಗದ್ದಕ್ಕೆ ರೈತರಿಂದ ಮತ್ತು ಬಿಜೆಪಿಯಿಂದ ಟೀಕೆ ಕೇಳಿ ಬಂದಿದೆ.

    ಋಣಮುಕ್ತ ಪತ್ರ ಕಳುಹಿಸುತ್ತೇನೆ ಎಂದು ಹೇಳಿದ ಸಿಎಂ, ರೈತರಿಗೆ ಸಾಂತ್ವನ ಪತ್ರ ಪತ್ರ ನೀಡಿದ್ದಾರೆ. ರೈತರಿಗೆ ಕಳಿಸಲಾದ ಸಾಂತ್ವನ ಪತ್ರದಲ್ಲಿ ಕೇವಲ ಆಶಯ, ಇಸ್ರೇಲ್ ಮಾದರಿ ಕೃಷಿ, ಕವಿವಾಣಿಗಳು ಇದೆ ಹೊರತು ಸಾಲಮನ್ನಾ ಮೊತ್ತದ ಉಲ್ಲೇಖವೇ ಇಲ್ಲ. ಸಾಲ ಮರುಪಾವತಿ ಮಾಡಿದ ರೈತರಿಗೆ 25 ಸಾವಿರ ಪ್ರೋತ್ಸಾಹ ಧನದ ಬಗ್ಗೆಯೂ ಮಾತಿಲ್ಲ. ರೈತರ ಸಹಕಾರ ಅಗತ್ಯ. ಸರ್ಕಾರ ಸದಾ ನಿಮ್ಮೊಂದಿಗೆ ಎಂದು ಹೇಳಿ ಪತ್ರ ಮುಗಿಯುತ್ತದೆ.

    ಎಷ್ಟು ಕೋಟಿ ಸಾಲ ಮನ್ನಾ ಆಗಿದೆ?
    ಸಿಎಂ ಘೋಷಣೆ ಮಾಡಿದ ಸಾಲ ಮನ್ನಾ ಮೊತ್ತ 44ಸಾವಿರ ಕೋಟಿ ರೂ. ಆಗಿದ್ದು, ಸಹಕಾರಿ ಸಂಘಗಳ ಸಾಲ ಮನ್ನಾಗೆ 9,448.61 ಕೋಟಿ ರೂ. ಹಣದ ಅಗತ್ಯವಿದೆ. ಇಲ್ಲಿಯವರೆಗೆ ಸಹಕಾರಿ ಸಂಘಗಳಲ್ಲಿ ರೈತರ 2,630 ಕೋಟಿ ರೂ. ಸಾಲ ಮನ್ನಾ ಆಗಿದ್ದು, ವಾಣಿಜ್ಯ ಬ್ಯಾಂಕ್ ಗಳಲ್ಲಿ 2,800  ಕೋಟಿ ರೂ. ಮನ್ನಾ ಆಗಿದೆ. ಸಾಲ ಮನ್ನಾಗೆ ರಾಜ್ಯ ಸರ್ಕಾರ ಒಟ್ಟು 5,430 ಕೋಟಿ ರೂ. ಹಣವನ್ನು ವಿನಿಯೋಗಿಸಿದೆ.

    ಪಬ್ಲಿಕ್ ಪ್ರಶ್ನೆಗಳು
    1. ಪತ್ರದಲ್ಲಿ ಸಾಲಮನ್ನಾ ಮೊತ್ತ ಉಲ್ಲೇಖಿಸದೇ ಜವಾಬ್ದಾರಿಯಿಂದ ನುಣುಚಿಕೊಂಡ್ರಾ ಸಿಎಂ?
    2. ಕೇವಲ `ಲೋಕ’ಎಲೆಕ್ಷನ್ ಗೆಲ್ಲುವ ಸಲುವಾಗಿ ಫೆ.19ಕ್ಕೆ ಸಾಂತ್ವನ ಪತ್ರ ಕಳಿಸಿಕೊಟ್ರಾ?
    3. ಪುತ್ರ ನಿಖಿಲ್ ಗೆಲ್ಲಿಸಿಕೊಳ್ಳಲು ರೈತರ ಮತಬುಟ್ಟಿಗೆ ಸಾಂತ್ವನದ ಮೂಲಕ ಕೈ ಹಾಕಿದ್ರಾ?
    4. ಜೂನ್ ಅಂತ್ಯದ ವೇಳೆಗೆ ಬಾಕಿ ಉಳಿದ 28570 ಕೋಟಿ ರೂ. ಸಾಲ ಮನ್ನಾ ಆಗುತ್ತಾ?
    5. ಈಗಾಗಲೇ ಸಾಲ ಮರುಪಾವತಿ ಮಾಡಿದವರಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ಸಿಗೋದು ಯಾವಾಗ?

  • ಕೇಂದ್ರ ಸರ್ಕಾರದಿಂದ ರೈತರ 4.5 ಲಕ್ಷ ಕೋಟಿ ರೂ. ಸಾಲಮನ್ನಾ?

    ಕೇಂದ್ರ ಸರ್ಕಾರದಿಂದ ರೈತರ 4.5 ಲಕ್ಷ ಕೋಟಿ ರೂ. ಸಾಲಮನ್ನಾ?

    ನವದೆಹಲಿ: ಪಂಚರಾಜ್ಯಗಳ ಸೋಲಿನ ಬಳಿಕ ಎಚ್ಚೆತ್ತಿರುವ ಕೇಂದ್ರ ಸರ್ಕಾರ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಚಿಂತಿಸಿದೆ.

    ರೈತರ ಸಾಲದ ವಿಚಾರವನ್ನು ಕಡೆಗಣಿಸಿದರೆ ನಮಗೂ ಸಮಸ್ಯೆಯಾಗಬಹುದು ಎನ್ನುವುದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೂ ಮುನ್ನ ಸಾಲಮನ್ನಾ ಘೋಷಣೆಯನ್ನು ಮಾಡುವ ಸಾಧ್ಯತೆಯಿದೆ.

    ಒಂದೊಮ್ಮೆ ಸರ್ಕಾರದಿಂದ ಈ ನಿರ್ಧಾರ ಹೊರ ಬಿದ್ದರೆ 26 ಕೋಟಿ ರೈತರ ಸುಮಾರು 4.5 ಲಕ್ಷ ಕೋಟಿ ರೂಪಾಯಿ ಸಾಲಮನ್ನಾವಾಗುವ ಸಾಧ್ಯತೆಯಿದೆ. ಈ ಹಿಂದೆ 2008ರಲ್ಲಿ ಯುಪಿಎ ಸರ್ಕಾರ ರೈತರ 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಏರಿತ್ತು. ಈಗ ಅದೇ ತಂತ್ರವನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಲಿದೆ ಎನ್ನಲಾಗಿದೆ.

    ಬಿಜೆಪಿ ಸೋತ ಪ್ರಮುಖ ಮೂರು ರಾಜ್ಯಗಳು ಕೂಡ ರೈತರ ಹೋರಾಟಗಳು ಹೆಚ್ಚು ನಡೆದ ರಾಜ್ಯಗಳಾಗಿವೆ. ನಗರದ ಜನತೆ ಕೈ ಹಿಡಿದರೂ ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಹಿನ್ನಡೆ ಆಗುತ್ತಿರುವುದು ಪ್ರತಿ ಚುನಾವಣೆಯಲ್ಲಿ ಸಾಬೀತಾಗುತ್ತಲೇ ಇದೆ. ಹೀಗಾಗಿ ಗ್ರಾಮೀಣ ಜನರನ್ನು ಸೆಳೆಯಲು ಸಾಲಮನ್ನಾ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.

    ಶೀಘ್ರವೇ ಈ ಕುರಿತು ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಮಾರ್ಚ್ ಮೊದಲೇ ಈ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ. ಸಾಲ ಮನ್ನಾವನ್ನು ಹೇಗೆ ಜಾರಿ ಮಾಡಬೇಕು ಎಂಬುವುದರ ಕುರಿತು ಆರ್ಥಿಕ ತಜ್ಞರಿಂದ ಕೇಂದ್ರ ಸರ್ಕಾರ ಮಾಹಿತಿ ಪಡೆಯಲಿದೆ.

    ಈಗಾಗಲೇ ಕಾಂಗ್ರೆಸ್ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡಲಾಗುವುದು ಎನ್ನುವ ಆಶ್ವಾಸನೆ ನೀಡಿದೆ. ರೈತರ ಸಾಲಮನ್ನಾ ಮಾಡಿದರೆ ಸಾಲಮನ್ನಾ ಹೆಸರಿನಲ್ಲಿ ಅಜೆಂಡಾ ರೂಪಿಸಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸುತ್ತಿರುವ ಯುಪಿಎ ಮೈತ್ರಿಕೂಟಕ್ಕೆ ಮೋದಿ ಶಾಕ್ ನೀಡಿದಂತಾಗುತ್ತದೆ. ಅಷ್ಟೇ ಅಲ್ಲದೇ ಸಾಲಮನ್ನಾ ಮತ್ತು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ರೈತರ ಮನವೊಲಿಕೆಯ ಕೆಲಸವೂ ಸುಲಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv