Tag: Farm Land

  • ಮಂಗಗಳ ಹಾವಳಿ ತಪ್ಪಿಸಲು ನಾಯಿಗೆ ಹುಲಿಯ ಬಣ್ಣ ಬಳಿದ ರೈತ

    ಮಂಗಗಳ ಹಾವಳಿ ತಪ್ಪಿಸಲು ನಾಯಿಗೆ ಹುಲಿಯ ಬಣ್ಣ ಬಳಿದ ರೈತ

    ಶಿವಮೊಗ್ಗ: ಮಲೆನಾಡಿನಲ್ಲಿ ಹೆಚ್ಚುತ್ತಿರುವ ಮಂಗಗಳ ಹಾವಳಿಯನ್ನು ತಡೆಯಲು ರೈತರು ವಿವಿಧ ಉಪಾಯಗಳ ಮೊರೆ ಹೋಗುತ್ತಿದ್ದಾರೆ.

    ಮಂಗಗಳ ಹಾವಳಿಯಿಂದ ಬೆಳೆ ರಕ್ಷಿಸಲು ಇಲ್ಲೊಬ್ಬ ರೈತ ಭರ್ಜರಿ ಪ್ಲಾನ್ ಮಾಡಿದ್ದು, ನಾಯಿಗೆ ಹುಲಿಯ ಬಣ್ಣವನ್ನು ಬಳಿದಿದ್ದಾರೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಲ್ಲೂರು ಗ್ರಾಮದ ಶ್ರೀಕಾಂತ ಗೌಡ ಎಂಬವರು ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರೈತರೊಬ್ಬರು ಹುಲಿಯ ರೀತಿಯ ದೊಡ್ಡ ಗೊಂಬೆಯನ್ನು ಇಡುವ ಮೂಲಕ ಮಂಗಗಳಿಂದ ಬೆಳೆ ರಕ್ಷಿಸಲು ಮುಂದಾಗಿದ್ದರು. ಇದರಿಂದಾಗಿ ಮಂಗಗಳು ಬೆಳೆ ಹತ್ತಿರ ಬಂದಿರಲಿಲ್ಲ. ಅಲ್ಲದೆ ಎರಡು ದಿನಗಳ ನಂತರ ಈ ಗೊಂಬೆಯನ್ನು ಬೇರೆ ಸ್ಥಳದಲ್ಲಿ ಇರಿಸಿದ್ದರು. ಇದೂ ಫಲಕಾರಿಯಾಗಿತ್ತು. ಇದನ್ನೂ ಓದಿ: ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

    ಇದೇ ರೀತಿಯ ಉಪಾಯವನ್ನು ಶ್ರೀಕಾಂತ ಗೌಡ ಅವರು ಮಾಡಿದ್ದಾರೆ. ಆದರೆ ಇದರ ಮೇಲೆಯೇ ಹೆಚ್ಚು ದಿನಗಳ ಕಾಲ ಅವಲಂಬಿತವಾಗಿರಲು ಸಾಧ್ಯವಿಲ್ಲ ಎಂಬುದನ್ನು ಅರಿತು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ನಾಯಿಗೆ ಹುಲಿಯ ರೀತಿಯ ಬಣ್ಣ ಬಳಿಯಲು ನಿರ್ಧರಿಸಿದ್ದಾರೆ. ನಾಯಿಗೆ ಹುಲಿಯ ರೀತಿಯ ಬಣ್ಣವನ್ನು ಬಳಿದು ತೋಟದಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಿದ್ದಾರೆ.

    ಇದು ಹೇರ್ ಡೈ ಆಗಿದ್ದರಿಂದ ಬೇಗ ಬಣ್ಣ ಹೋಗುವುದಿಲ್ಲ. ತಿಂಗಳ ಕಾಲ ಇರಲಿದೆ. ಅಲ್ಲದೆ ಇದರಿಂದ ನಾಯಿಗೂ ಯಾವುದೇ ಅನಾರೋಗ್ಯ ಉಂಟಾಗುವುದಿಲ್ಲ. ಹೀಗೆ ಮಾಡಿದ್ದರಿಂದ ಮಂಗಗಳ ಹಾವಳಿ ತಪ್ಪಿದೆ ಎಂದು ಶ್ರೀಕಾತ ಗೌಡ ಅವರು ವಿವರಿಸಿದ್ದಾರೆ.

    ಸೊರಬ ತಾಲೂಕಿನ ಕಕ್ಕರಸಿಯ ಮತ್ತೋರ್ವ ರೈತ ಜೆ.ಎಸ್.ಚಿದಾನಂದಗೌಡ ಅವರು, ಇನ್ನೊಂದು ವಿಭಿನ್ನ ಪ್ರಯತ್ನ ಮಾಡಿದ್ದು, ನಾಯಿಗಳು ಬೊಗಳುವ ಶಬ್ದದ ಆಡಿಯೋವನ್ನು ಹೊಲದ ವಿವಿಧ ಭಾಗಗಳಲ್ಲಿ ಕೇಳುವಂತೆ ಮಾಡಿದ್ದಾರೆ. ಇದಕ್ಕಾಗಿ ಸ್ಪೀಕರ್ ಗಳನ್ನು ಅಳವಡಿಸಿಕೊಂಡಿದ್ದು, ಇದರಿಂದಲೂ ಮಂಗಗಳು ತೋಟದ ಹತ್ತಿರ ಬರದಂತೆ ತಡೆಯುತ್ತಿದ್ದಾರೆ.

    ಮಲೆನಾಡಿನ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಸರ್ಕಾರ ಸಹ ಕ್ರಮ ಕೈಗೊಳ್ಳಲು ಮುಂದಾಗಿದೆ. ಅರಣ್ಯ ಪ್ರದೇಶದಲ್ಲಿ ಮಂಕಿ ಪಾರ್ಕ್ ನಿರ್ಮಿಸಿ ಅಲ್ಲಿಯೇ ಮಂಗಗಳ ವಾಸಕ್ಕೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಈ ಕುರಿತು ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ ಮಂಕಿ ಪಾರ್ಕ್ ನಿರ್ಮಾಣವಾಗಲಿದೆ.

  • ಕಾಲುವೆ ಒಡೆದು ನೀರು ನುಗ್ಗಿದ್ದರಿಂದ ಕೆರೆಯಂತಾದ ನೂರಾರು ಎಕ್ರೆ ಜಮೀನು!

    ಕಾಲುವೆ ಒಡೆದು ನೀರು ನುಗ್ಗಿದ್ದರಿಂದ ಕೆರೆಯಂತಾದ ನೂರಾರು ಎಕ್ರೆ ಜಮೀನು!

    ಗದಗ: ಕಾಲುವೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿದ್ದರಿಂದ ನೂರಾರು ಎಕರೆ ಜಮೀನು ಕೆರೆಯಂತೆ ಭಾಸವಾಗುತ್ತಿರುವ ಘಟನೆ ತಾಲೂಕಿನ ಕದಡಿ ಗ್ರಾಮದಲ್ಲಿ ನಡೆದಿದೆ.

    ಕದಡಿ ಗ್ರಾಮದ ಬಳಿಯಿರುವ ಮಲಪ್ರಭಾ ಬಲದಂಡೆ ಕಾಲುವೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಹತ್ತಿರದ ಜಮೀನುಗಳಿಗೆ ನುಗ್ಗಿದೆ. ಪರಿಣಾಮ ನೂರಾರು ಎಕರೆ ಜಮೀನುಗಳು ಕೆರೆಯಂತೆ ನಿರ್ಮಾಣವಾಗಿದೆ. ಅಲ್ಲದೇ ಜಮೀನುಗಳಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣ ಬೆಳೆ ನಷ್ಟವಾಗಿದೆ.

    ಮಾಹಿತಿಗಳ ಪ್ರಕಾರ ಕಾಲುವೆ ಗುಣಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ, ಕಾಲುವೆ ಒಡೆದಿದೆ ಎಂದು ಹೇಳಲಾಗುತ್ತಿದೆ. ಕಾಲುವೆ ಒಡೆಯಲು ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕಾಲುವೇ ಒಡೆದಿರುವ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳಿಗೆ ರೈತರು ಮಾಹಿತಿ ನೀಡಿದ್ದರೂ, ನೀರನ್ನು ಸ್ಥಗಿತಗೊಳಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv