Tag: Farm bills

  • 6 ತಿಂಗಳಲ್ಲಿ ರೈತರಿಗೆ ಹೇಗೆ ಒಳ್ಳೆದಾಗುತ್ತೆ ನೋಡಿ – ವಿರೋಧಿಗಳಿಗೆ ಸಿಎಂ ಸವಾಲು

    6 ತಿಂಗಳಲ್ಲಿ ರೈತರಿಗೆ ಹೇಗೆ ಒಳ್ಳೆದಾಗುತ್ತೆ ನೋಡಿ – ವಿರೋಧಿಗಳಿಗೆ ಸಿಎಂ ಸವಾಲು

    – ರೈತ ಈಗ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು
    – ಮಧ್ಯವರ್ತಿಗಳ ಹಾವಳಿ ಕೈತಪ್ಪಲಿದೆ
    – ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು

    ಬೆಂಗಳೂರು: ಆರು ತಿಂಗಳಲ್ಲಿ ರೈತರಿಗೆ ಯಾವ ರೀತಿ ಒಳ್ಳೆಯದು ಆಗುತ್ತದೆ ಎಂಬುದನ್ನು ನೋಡಿ ಎಂದು ಸಿಎಂ ಯಡಿಯೂರಪ್ಪ ಮಸೂಧೆ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಸವಾಲು ಎಸೆದಿದ್ದಾರೆ.

    ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು. ಎಪಿಎಂಸಿಯ ಬಾಗಿಲು ಮುಚ್ಚಿಲ್ಲ. ರೈತರು ಈಗ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. 6 ತಿಂಗಳ ಕಾದು ನೋಡಿ. ರೈತರಿಗೆ ಇದರಿಂದ ಎಷ್ಟು ಅನುಕೂಲವಾಗಲಿದೆ ಎಂಬುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಂದ್ ಎಫೆಕ್ಟ್ – ಗ್ರಾಹಕರಿಗಾಗಿ ಕಾದು ಸುಸ್ತಾಗಿ ನಿದ್ರೆಗೆ ಜಾರಿದ ವ್ಯಾಪಾರಸ್ಥರು

    ನಾನು ರೈತನ ಮಗ, ಅನ್ನ ಕೊಡುವ ರೈತನಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರುವವನು ಅಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನನ್ನ ಬೆಳೆ, ನನ್ನ ಹಕ್ಕು. ರೈತ ಈಗ ತಾನು ಬೆಳೆಯುವ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಅನಾವಶ್ಯಕವಾಗಿ ಬೇರೆ ರೈತರನ್ನು ಗೊಂದಲ ಮಾಡಬೇಡಿ ಎಂದು ರೈತರ ಜೊತೆ ಮನವಿ ಮಾಡುತ್ತೇನೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ಧಕ್ಕೆ ಆಗುವ ಕೆಲಸ ಈ ಯಡಿಯೂರಪ್ಪ ಮಾಡುವುದಿಲ್ಲ ಎಂದು ಹೇಳಿದರು. ಎಪಿಎಂಸಿ ಪೂರ್ಣ ಬಾಗಿಲು ಮುಚ್ಚಿಲ್ಲ. ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದು ಸಮರ್ಥಿಸಿಕೊಂಡರು.

    ಕಾಯ್ದೆಯಿಂದ ಶೇ.70ರಿಂದ 80ರಷ್ಟು ಅನುಕೂಲ ಆಗಲಿದೆ. ನಾನು ಶೀಘ್ರದಲ್ಲೇ ರಾಜ್ಯ ಪ್ರವಾಸ ಮಾಡುತ್ತೇನೆ. ಆಗ ರೈತರು ಎಷ್ಟು ಮೆಚ್ಚುಗೆ ವ್ಯಕ್ತಪಡಿಸ್ತಾರೆ ಎಂಬುದು ಗೊತ್ತಾಗುತ್ತದೆ. ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿಯೇ ಈ ಕಾಯ್ದೆ ತರಲಾಗಿದೆ ಎಂದರು.

    ಕಾಂಗ್ರೆಸ್ ನಾಯಕರ ಕಥೆ ಏನು ಅಂತಾ ಗೊತ್ತಿದೆ. ಈ ಹಿಂದೆ ಕಾಂಗ್ರೆಸ್‍ನವರು ಕಾಯ್ದೆ ಜಾರಿ ಬಗ್ಗೆ ಏನೆಲ್ಲಾ ಮಾಡಿದ್ದರು ಎಂಬುದು ಗೊತ್ತಿದೆ. ಹಿಂದೆ ಇದನ್ನು ಜಾರಿ ಮಾಡಲು ಕಾಂಗ್ರೆಸ್ ಮುಂದಾಗಿದ್ದರು. ಈಗ ಅದನ್ನು ಪ್ರಾಮಾಣೀಕವಾಗಿ ಜಾರಿ ಮಾಡಲು ಮುಂದಾಗಿದ್ದೇವೆ. ಈ ಕಾಯ್ದೆಯಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗಲಿದೆ ಎಂದು ಸಮರ್ಥಿಸಿಕೊಂಡರು.

  • ನಾವು ತೆಗೆಯಲ್ಲ, ರೈತರೇ ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ: ಡಿಕೆ ಶಿವಕುಮಾರ್

    ನಾವು ತೆಗೆಯಲ್ಲ, ರೈತರೇ ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ: ಡಿಕೆ ಶಿವಕುಮಾರ್

    ಬೆಂಗಳೂರು: ಕಾಂಗ್ರೆಸ್ ಶಾಸಕರು ನಿಮ್ಮ ಸರ್ಕಾರ ತೆಗೆಯುವುದಿಲ್ಲ. ರೈತರೇ ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೈ ನಾಯಕರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಇದ್ದೇನೆ ಎಂದು ಬೂಟಾಟಿಕೆ ಮಾಡ್ತಾರೆ. ಆದರೆ ರಾಜ್ಯದ ರೈತರು ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ. ಈ ಕಾನೂನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.

     

    ಈಗಾಗಲೇ ಆನೇಕಲ್ ಮತ್ತು ಕನಕಪುರ ಭಾಗದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ಬೀಜ ಕೊಟ್ಟು ಬೆಲೆ ಬಳಿಕ ಕ್ವಾಲಿಟಿ ಸರಿಯಿಲ್ಲ ಅಂತ ಹೇಳಿದ್ದವು. ರೈತನ ರಕ್ಷಣೆ ನಮ್ಮ ಹೊಣೆ. ಹೀಗಾಗಿ ಪ್ರತಿಭಟನೆಗೆ ಕರೆ ನೀಡಿದ್ದು, ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ವಂದನೆಗಳು ಎಂದು ತಿಳಿಸಿದರು.

    ಭೂ ಸುಧಾರಣಾ ಕಾಯ್ದೆಯನ್ನು ತಂದಿದ್ದು ಕಾಂಗ್ರೆಸ್. ನಾವು ಯಾವುದೇ ಇಂತಹ ರೈತ ವಿರೋಧಿ ಕಾನೂನು ತರಲಿಲ್ಲ. ಅರಣ್ಯ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಎಸ್ಸಿ ಮತ್ತು ಎಸ್ಟಿ ಅವರಿಗೆ ಜಮೀನು ಕೊಟ್ಟೆವು. ಕಾಂಗ್ರೆಸ್ಸಿನದ್ದು ಏನೇ ಇದ್ದರೂ ಕೊಡುವ ಇತಿಹಾಸ. ಬಿಜೆಪಿ ಇತಿಹಾಸ ಕಿತ್ತುಕೊಳ್ಳುವುದು. ರೈತರ ಜಮೀನು ಕಿತ್ತುಕೊಳ್ಳಲು ಈಗ ಈ ರೀತಿಯ ಕಾನೂನು ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

    ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.