Tag: fare

  • ಬಂಡೀಪುರ ಸಫಾರಿ, ಕಾಟೇಜ್ ದರ ಏರಿಕೆ- ಪ್ರವಾಸಿಗರಿಗೆ ಬೆಲೆ ಏರಿಕೆ ಶಾಕ್

    ಬಂಡೀಪುರ ಸಫಾರಿ, ಕಾಟೇಜ್ ದರ ಏರಿಕೆ- ಪ್ರವಾಸಿಗರಿಗೆ ಬೆಲೆ ಏರಿಕೆ ಶಾಕ್

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಫಾರಿ, ಕಾಟೇಜ್ ದರ ಏರಿಸಲಾಗಿದೆ. ಸಫಾರಿ ದರ ಡಬಲ್ ಮಾಡಿದ್ದು ವನ್ಯಪ್ರಿಯರು, ಪ್ರವಾಸಿಗರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.

    ಹುಲಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ. ಕಾಡು ಪ್ರಾಣಿಗಳ ವೀಕ್ಷಣೆಗೆ ಸಫಾರಿ ಮಾಡಲೆಂದೇ ದೇಶ-ವಿದೇಶಗಳಿಂದ ನಿತ್ಯ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಸಫಾರಿ, ಕೊಠಡಿ ಬಾಡಿಗೆ, ಪಾರ್ಕಿಂಗ್ ಶುಲ್ಕ ಹೀಗೆ ಯಾವುದೇ ರೀತಿಯ ದರಗಳಲ್ಲೂ ಬದಲಾವಣೆ ಮಾಡಿರಲಿಲ್ಲ. ಇದೀಗ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು ದರ ಹೆಚ್ಚಳ ಮಾಡುವ ಬಗ್ಗೆ ಕಳೆದ ಜನವರಿ 29 ರಂದು ಬರೆದಿರುವ ಪತ್ರವನ್ನು ಉಲ್ಲೇಖಿಸಿ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಅವರು ಸಫಾರಿ ಮತ್ತಿತರ ದರಗಳನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ.

    ಬಂಡೀಪುರದಲ್ಲಿ ಮಾರ್ಚ್ 31 ರ ತನಕ ಒಬ್ಬರಿಗೆ ಪ್ರವೇಶ ಶುಲ್ಕ 250 ರೂಪಾಯಿ ಮತ್ತು ಸಫಾರಿಗೆ 100 ರೂಪಾಯಿ ಇತ್ತು. ಆದರೆ ಏಪ್ರಿಲ್ 1 ರಿಂದ ಪ್ರವೇಶ ಶುಲ್ಕ 300 ರೂಪಾಯಿ ಹಾಗೂ ಸಫಾರಿಗೆ 300 ರೂಪಾಯಿ ದರ ನಿಗದಿಪಡಿಸಲಾಗಿದೆ. ಹಾಗಾಗಿ ಪ್ರವಾಸಿಗರು ಇನ್ನು ಮುಂದೆ 600 ರೂಪಾಯಿ ಕೊಟ್ಟು ಸಫಾರಿ ಹೋಗಬೇಕಾಗಿದೆ. ಹಾಗೆಯೇ ಮಕ್ಕಳು ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹಾಗೂ ಸಫಾರಿ ಸೇರಿದಂತೆ 300 ರೂಪಾಯಿ, ವಿದೇಶಿ ಪ್ರವಾಸಿಗರಿಗೆ 1,000 ರೂಪಾಯಿ ದರ ನಿಗದಿಪಡಿಸಲಾಗಿದೆ.

    ಸಫಾರಿ ಜಿಪ್ಸಿ ಬಾಡಿಗೆ ಭಾರತೀಯರಿಗೆ 3,500 ರೂಪಾಯಿ, ವಿದೇಶಿಯರಿಗೆ 5,000 ರೂಪಾಯಿ, 9 ಸೀಟಿನ ಕ್ಯಾಂಪರ್ ಗೆ ಭಾರತೀಯರಿಗೆ 5,000 ರೂಪಾಯಿ, ವಿದೇಶಿಯರಿಗೆ 7,000 ರೂಪಾಯಿ ನಿಗದಿಪಡಿಸಲಾಗಿದೆ.

    ಬಂಡೀಪುರ ಕ್ಯಾಂಪಸ್ ನಲ್ಲಿರುವ ಕೊಠಡಿ ಬಾಡಿಗೆ ಒಂದು ದಿನಕ್ಕೆ 2,000 ರೂಪಾಯಿ, ವಿದೇಶಿಯರಿಗೆ 4,000 ರೂಪಾಯಿ, ಗಜೇಂದ್ರ ವಿಐಪಿ ಕೊಠಡಿ(1) ಬಾಡಿಗೆ 3,000 ರೂಪಾಯಿಯಿಂದ 6000 ರೂಪಾಯಿ ಗೆ ಏರಿಗೆ ಮಾಡಲಾಗಿದೆ. ಗಜೇಂದ್ರ ವಿಐಪಿ ಕೊಠಡಿ (2)ರ ಬಾಡಿಗೆಯನ್ನು 2,500 ಹಾಗೂ ವಿದೇಶಿಯರಿಗೆ 5,000 ರೂ. ನಿಗದಿ ಮಾಡಲಾಗಿದೆ.

    ಗಜೇಂದ್ರ ವಿಐಪಿ ಕೊಠಡಿ(3)ರ ಬಾಡಿಗೆಯನ್ನು 2,000 ರೂಪಾಯಿ ವಿದೇಶಿಯರಿಗೆ 4,000 ರೂಪಾಯಿ ನಿಗದಿ ಮಾಡಲಾಗಿದೆ. 10 ಬೆಡ್ ಗಳ ಡಾರ್ಮೆಟರಿ ಬಾಡಿಗೆಯನ್ನು 2,500 ವಿದೇಶಿಯರಿಗೆ 5000 ರೂಪಾಯಿ, 20 ಬೆಡ್ ಗಳ ಡಾರ್ಮೆಟರಿ ಬಾಡಿಗೆಯನ್ನು 5000 ರೂಪಾಯಿ, ವಿದೇಶಿಯರಿಗೆ 10,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಕ್ಯಾಮೆರಾ ಹಾಗೂ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಸಹ ಹೆಚ್ಚಳ ಮಾಡಲಾಗಿದೆ.

    ಒಟ್ನಲ್ಲಿ ದರ ಏರಿಕೆ ಕ್ರಮ ಸರಿಯಾದುದಲ್ಲ, ಜನಸಾಮಾನ್ಯರಿಗೆ ಕೈಗೆಟುಕವ ದರದಲ್ಲಿ ಹೆಚ್ಚಳ ಮಾಡಲಾಗಿಲ್ಲ. ಇಷ್ಟೊಂದು ದರ ಭರಿಸಲಾಗದೆ ಬಡವರು, ಮಧ್ಯಮ ವರ್ಗದವರು, ಶಾಲಾ ಮಕ್ಕಳು ಸಫಾರಿಯಿಂದ ದೂರ ಉಳಿಯುವಂತಾಗುತ್ತದೆ. ಕಾಡಿನ ಸೊಬಗನ್ನು ಸವಿಯುವುದರಿಂದ ವಂಚಿತರಾಗಬೇಕಾಗುತ್ತದೆ. ಉಳ್ಳವರಿಗೆ ಬೇಕಾದರೆ ದರ ಏರಿಕೆ ಮಾಡಲಿ, ಆದರೆ ಸ್ಥಳೀಯರಿಗೆ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಲ್ಕ ಕಡಿಮೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

  • ವಿಮಾನ ಪ್ರಯಾಣಕ್ಕೆ ದರ ನಿಗದಿ – ಬೆಂಗಳೂರಿನಿಂದ ಎಲ್ಲೆಲ್ಲಿಗೆ ಎಷ್ಟು ರೂ.? – ದರಪಟ್ಟಿ ಓದಿ

    ವಿಮಾನ ಪ್ರಯಾಣಕ್ಕೆ ದರ ನಿಗದಿ – ಬೆಂಗಳೂರಿನಿಂದ ಎಲ್ಲೆಲ್ಲಿಗೆ ಎಷ್ಟು ರೂ.? – ದರಪಟ್ಟಿ ಓದಿ

    ನವದೆಹಲಿ: ಕೋವಿಡ್ 19 ನಿಂದಾಗಿ ಆಗಿರುವ ನಷ್ಟವನ್ನು ತುಂಬಲು ವಿಮಾನಯಾನ ಕಂಪನಿಗಳು ದುಬಾರಿ ಟಿಕೆಟ್ ದರವನ್ನು ವಿಧಿಸುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ನಾಗರಿಕ ವಿಮಾನಯಾನ ನಿರ್ದೇಶನಾಲಯ ದರವನ್ನು ನಿಗದಿ ಪಡಿಸಿದೆ.

    ಲಾಕ್‍ಡೌನ್ ಘೋಷಣೆಯಾದ ಬಳಿಕ ಸ್ಥಗಿತಗೊಂಡಿರುವ ದೇಶಿಯ ವಿಮಾನ ಸಂಚಾರ ಮೇ 25ರಿಂದ ಆರಂಭವಾಗಲಿದೆ. ವಿಮಾನ ಸೇವೆಗೆ ವಿಮಾನಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಂಪನಿಗಳು ವಿಮಾನದ ಒಳಗಡೆ ಸಾಮಾಜಿಕ ಆಂತರ ಕಾಪಾಡುವ ನಿಟ್ಟಿನಲ್ಲಿ ದುಬಾರಿ ಟಿಕೆಟ್ ದರ ವಿಧಿಸುತ್ತಿವೆ ಎಂದು ಗ್ರಾಹಕರು ದೂರು ನೀಡಿದ್ದರು.

    ವರ್ಗ ಹೇಗೆ?
    ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನ ಹಾರಾಟದ ಮಾರ್ಗವನ್ನು ಎ,ಬಿ,ಸಿ,ಡಿ,ಇ,ಎಫ್,ಜಿ ವಿಂಗಡಿಸಿ ಗರಿಷ್ಠ ಮತ್ತು ಕನಿಷ್ಠ ದರವನ್ನು ನಿಗದಿ ಪಡಿಸಿದೆ. 40 ನಿಮಿಷ ಪ್ರಯಾಣದ ಅವಧಿ ಹೊಂದಿರುವ ಮಾರ್ಗಗಳು ‘ಎ’ ವರ್ಗದಲ್ಲಿ ಬರುತ್ತವೆ. 180 -210 ನಿಮಿಷ ಪ್ರಯಾಣ ಅವಧಿ ಹೊಂದಿರುವ ಮಾರ್ಗಗಳು ‘ಜಿ’ ವರ್ಗದಲ್ಲಿ ಬರುತ್ತದೆ.

    ದರ ಎಷ್ಟು?
    ಎ ವರ್ಗ – ಕನಿಷ್ಠ 2,000 ರೂ. ಗರಿಷ್ಠ 6,000 ರೂ.
    ಮಾರ್ಗಗಳು : ಬೆಂಗಳೂರು – ಚೆನ್ನೈ, ಬೆಂಗಳೂರು – ಕೊಚ್ಚಿ, ಬೆಂಗಳೂರು – ಮಂಗಳೂರು. ಇದನ್ನೂ ಓದಿ: ವಿಮಾನ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

    ಬಿ ವರ್ಗ – ಕನಿಷ್ಠ 2,500 ರೂ. ಗರಿಷ್ಠ 7,500
    ಮಾರ್ಗಗಳು: ಬೆಂಗಳೂರು – ಕ್ಯಾಲಿಕಟ್, ಬೆಂಗಳೂರು – ಕೊಯಮತ್ತೂರ್, ಬೆಂಗಳೂರು – ಹೈದರಾಬಾದ್, ಬೆಂಗಳೂರು – ತಿರುವನಂತಪುರಂ.

    ಸಿ ವರ್ಗ – ಕನಿಷ್ಠ 3,000 ರೂ. ಗರಿಷ್ಠ 9,000 ರೂ.
    ಮಾರ್ಗಗಳು: ಬೆಂಗಳೂರು – ಮುಂಬೈ, ಬೆಂಗಳೂರು – ನಾಗ್ಪುರ, ಬೆಂಗಳೂರು – ಪೋರ್ಟ್‍ಬ್ಲೇರ್, ಬೆಂಗಳೂರು – ಪುಣೆ, ಬೆಂಗಳೂರು – ವಿಶಾಖಪಟ್ಟಣ.

    ಡಿ ವರ್ಗ – ಕನಿಷ್ಠ 3,500 ರೂ., ಗರಿಷ್ಠ 10,000 ರೂ.
    ಮಾರ್ಗಗಳು : ಬೆಂಗಳೂರು – ಅಹಮದಾಬಾದ್, ಬೆಂಗಳೂರು – ಭೋಪಾಲ್, ಬೆಂಗಳೂರು – ಭುವನೇಶ್ವರ, ಬೆಂಗಳೂರು – ಇಂದೋರ್, ಬೆಂಗಳೂರು – ರಾಯ್‍ಪುರ.

    ಇ ವರ್ಗ – ಕನಿಷ್ಠ 4,500 ರೂ. ಗರಿಷ್ಠ 13,000 ರೂ.
    ಮಾರ್ಗಗಳು: ಬೆಂಗಳೂರು – ದೆಹಲಿ, ಬೆಂಗಳೂರು – ಜೈಪುರ, ಬೆಂಗಳೂರು – ಲಕ್ನೋ, ಬೆಂಗಳೂರು – ಪಾಟ್ನಾ, ಬೆಂಗಳೂರು- ರಾಂಚಿ.

    ಎಫ್ ವರ್ಗ – ಕನಿಷ್ಠ 5,500 ರೂ., ಗರಿಷ್ಠ 15,700 ರೂ.
    ಮಾರ್ಗಗಳು: ಬೆಂಗಳೂರು – ಚಂಡೀಗಢ, ಬೆಂಗಳೂರು ಗುವಹಾಟಿ, ಬೆಂಗಳೂರು – ಇಂಫಾಲ್, ಬೆಂಗಳೂರು- ವಾರಣಾಸಿ.

    ಜಿ ವರ್ಗ – ಕನಿಷ್ಠ 6,500 ರೂ., ಗರಿಷ್ಠ 18,500 ರೂ.
    ಮಾರ್ಗಗಳು: ದೆಹಲಿ – ಕೊಯಮತ್ತೂರು, ದೆಹಲಿ – ತಿರುವನಂತಪುರಂ, ದೆಹಲಿ – ಪೋರ್ಟ್ ಬ್ಲೇರ್.

  • ಸಾರಿಗೆ ಬಸ್ ಪ್ರಯಾಣ ದರ ಏರಿಕೆ – ಎಷ್ಟಿದ್ದ ದರ ಎಷ್ಟು ಆಗಲಿದೆ?

    ಸಾರಿಗೆ ಬಸ್ ಪ್ರಯಾಣ ದರ ಏರಿಕೆ – ಎಷ್ಟಿದ್ದ ದರ ಎಷ್ಟು ಆಗಲಿದೆ?

    ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆಯಾಗಿದೆ. ಶೇ.12 ರಷ್ಟು ದರವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಪ್ರಕಟಿಸಿದೆ.

    ಬಸ್ ಪ್ರಯಾಣ ದರ ಪರಿಷ್ಕರಿಸುವ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಶೇ.12 ರಷ್ಟು ಪ್ರಯಾಣ ದರವನ್ನು ಏರಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಸಾರಿಗೆ ಇಲಾಖೆಯ ಆಧೀನ ಕಾರ್ಯದರ್ಶಿ ಸತ್ಯವತಿ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಲೋಕಸಭಾ ಚುನಾವಣೆಯ ನಂತರ ಪ್ರಯಾಣ ದರ ಏರಿಕೆ ಮಾಡಲು ಸಮ್ಮಿಶ್ರ ಸರ್ಕಾರ ಮುಂದಾಗಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಸರ್ಕಾರವೇ ಪತನ ಹೊಂದಿದ ಪರಿಣಾಮ ಅಧಿಕರಕ್ಕೆ ಏರಿದ ಬಿಜೆಪಿ ಸರ್ಕಾರ ಕೂಡಲೇ ದರ ಏರಿಸಿರಲಿಲ್ಲ. ಈಗ ಉಪ ಚುನಾವಣೆ ನಡೆದ ನಂತರ ದರವನ್ನು ಸರ್ಕಾರ ಏರಿಕೆ ಮಾಡಲು ಒಪ್ಪಿಗೆ ನೀಡಿದೆ.

    ಎಷ್ಟು ಏರಿಕೆ ಆಗುತ್ತದೆ?
    ಈಗ 100 ರೂಪಾಯಿ ಟಿಕೆಟ್ ದರ 12 ರೂ. ಏರಿಕೆ ಆಗಿದ್ದರೆ 300 ರೂ. ಟಿಕೆಟ್ ದರ ಇದ್ದರೆ ಇನ್ನು ಮುಂದೆ ನೀವು 36 ರೂ. ಹೆಚ್ಚು ನೀಡಿ ಒಟ್ಟು 336 ರೂ. ನೀಡಬೇಕಾಗುತ್ತದೆ. 500 ರೂ. ಟಿಕೆಟ್ ದರ ಇದ್ದರೆ ನೀವು 60 ರೂ. ಹೆಚ್ಚಿಗೆ ನೀಡಬೇಕಾಗುತ್ತದೆ. 1000 ರೂ. ಟಿಕೆಟಿಗೆ ಇನ್ನು ಮುಂದೆ ಒಟ್ಟು 1120 ರೂ. ನೀಡಬೇಕಾಗುತ್ತದೆ.

  • ನ್ಯೂ ಇಯರ್‌ಗೆ ರೈಲ್ವೇ ಪ್ರಯಾಣಿಕರಿಗೆ ಶುಲ್ಕ ಹೆಚ್ಚಳದ ಶಾಕ್

    ನ್ಯೂ ಇಯರ್‌ಗೆ ರೈಲ್ವೇ ಪ್ರಯಾಣಿಕರಿಗೆ ಶುಲ್ಕ ಹೆಚ್ಚಳದ ಶಾಕ್

    ನವದೆಹಲಿ: ದೇಶದಾದ್ಯಂತ ಜನರು ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ. ಆದರೆ ಹೊಸ ವರ್ಷಕ್ಕೂ ಮುಂಚಿತವಾಗಿ ರೈಲ್ವೇ ಇಲಾಖೆ ರೈಲು ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಅದೇನೆಂದರೆ ಇಲಾಖೆ ರೈಲ್ವೇ ಸೇವೆಗಳ ಶುಲ್ಕವನ್ನು ಹೆಚ್ಚಳ ಮಾಡಿದೆ.

    ಉಪನಗರ ರೈಲುಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರೈಲ್ವೇ ಸೇವೆಗಳ ಶುಲ್ಕವನ್ನು ಏರಿಕೆ ಮಾಡಿದೆ. ಅಲ್ಲದೇ ಜನವರಿ 1, 2020 ರಿಂದ ಅಂದರೆ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಮಂಗಳವಾರ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.

    ಮಂಗಳವಾರ ಇಲಾಖೆ ಹೊರಡಿಸಿದ್ದ ಆದೇಶದಂತೆ ಸಾಮಾನ್ಯ, ನಾನ್ ಎಸಿ ರೈಲು ದರಗಳು ಪ್ರತಿ ಕಿ.ಮೀ ಪ್ರಯಾಣಕ್ಕೆ 1 ಪೈಸೆ ಏರಿಕೆಯಾಗಿದೆ. ರೈಲ್ವೆ ಮೇಲ್, ಎಕ್ಸ್ ಪ್ರೆಸ್, ಎಸಿ ರಹಿತ ರೈಲುಗಳ ದರದಲ್ಲಿ ಕಿಲೋ ಮೀಟರ್‌ಗೆ 2 ಪೈಸೆ ಹೆಚ್ಚಳ ಮತ್ತು ಎಸಿ ತರಗತಿಗಳ ದರದಲ್ಲಿ ಪ್ರತಿ ಕಿಲೋ ಮೀಟರ್‌ಗೆ 4 ಪೈಸೆ ಏರಿಕೆಯಾಗಲಿದೆ ಎಂದು ಇಲಾಖೆ ಘೋಷಿಸಿದೆ.

    ಪ್ರೀಮಿಯಂ ರೈಲುಗಳಾದ ಶತಾಬ್ದಿ, ರಾಜಧಾನಿ ಮತ್ತು ಡುರೊಂಟೊ ರೈಲುಗಳ ಶುಲ್ಕವೂ ಹೆಚ್ಚಳವಾಗಲಿದೆ. 1,447 ಕಿ.ಮೀ ದೂರ ಕ್ರಮಿಸುವ ದೆಹಲಿ-ಕೋಲ್ಕತಾ ರಾಜಧಾನಿ ಎಕ್ಸ್ ಪ್ರೆಸ್‍ನಲ್ಲಿ ಪ್ರತಿ ಕಿ.ಮೀ.ಗೆ 4 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಅಂದರೆ ಅಂದಾಜು 58 ರೂ. ಅಧಿಕವಾಗಿದೆ.

    ರೈಲ್ವೇ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಮುಂಗಡ ಟಿಕೆಟ್ ಶುಲ್ಕ ಮತ್ತು ಸೂಪರ್ ಫಾಸ್ಟ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಡೀಸೆಲ್ ಬೆಲೆ ಹೆಚ್ಚಳ : ಶೀಘ್ರವೇ ಖಾಸಗಿ ಪ್ರವಾಸಿ ಟ್ಯಾಕ್ಸಿಗಳ ದರ ಏರಿಕೆ!

    ಡೀಸೆಲ್ ಬೆಲೆ ಹೆಚ್ಚಳ : ಶೀಘ್ರವೇ ಖಾಸಗಿ ಪ್ರವಾಸಿ ಟ್ಯಾಕ್ಸಿಗಳ ದರ ಏರಿಕೆ!

    ಬೆಂಗಳೂರು: ಬಜೆಟ್ ನಲ್ಲಿ ಪೆಟ್ರೋಲ್-ಡೀಸೆಲ್ ದರಗಳ ಮೇಲೆ ಸೆಸ್ ದರವನ್ನು ಹೆಚ್ಚಿಸಿದ್ದರ ಪರಿಣಾಮ ಖಾಸಗಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ದರ ಏರಿಕೆ ಮಾಡಲು ಮುಂದಾಗಿದ್ದಾರೆ.

    ತೈಲ ಕಂಪೆನಿಗಳು ದಿನ ನಿತ್ಯ ತೈಲ ದರ ಪರಿಷ್ಕರಣೆ ಮಾಡುತ್ತಿರುವುದಲ್ಲದೇ, ರಾಜ್ಯ ಸರ್ಕಾರವು ತನ್ನ ನೂತನ ಬಜೆಟ್ ನಲ್ಲಿ ಸೆಸ್ ದರವನ್ನು ಏರಿಕೆ ಮಾಡಿದೆ. ಇದರ ಜೊತೆಗೆ ಖಾಸಗಿ ಮೋಟರು ವಾಹನಗಳಿಗೆ ರಸ್ತೆ ತೆರಿಗೆಯನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಪ್ರವಾಸಿ ಟ್ಯಾಕ್ಸಿ ಹಾಗೂ ಕ್ಯಾಬ್ ಗಳು ದರ ಪರೀಷ್ಕರಣೆ ಮಾಡುವ ಕುರಿತು ಚಿಂತನೆ ನಡೆಸಿದ್ದಾರೆ.

    ಮುಂದಿನ ವಾರದಲ್ಲಿ ಸಭೆ ನಡೆಸಿ ದರ ಪರಿಷ್ಕರಣೆ ಮಾಡಲಾಗುವುದು ಎಂದು ಕರ್ನಾಟಕ ಟೂರಿಸ್ಟ್ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳರವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಖಾಸಗಿ ಟ್ಯಾಕ್ಸಿ ಮಾಲೀಕರು ಹೆಚ್ಚುತ್ತಿರುವ ಹೊರೆಯನ್ನು ಕಡಿತಗೊಳಿಸಲು ಸಾರ್ವಜನಿಕರ ಮೇಲೆ ಹೊರೆ ಹೊರಿಸಲು ನಿರ್ಧರಿಸಿದ್ದಾರೆ. ಐಟಿ ಬಿಟಿ ಉದ್ಯೋಗಿಗಳನ್ನು ಕರೆದುಕೊಂಡು ಹೋಗುವ ವಾಹನ ಸೇರಿದಂತೆ ಟೂರಿಸ್ಟ್ ವಾಹನಗಳದ ದರ 5% ರಿಂದ 10% ರಷ್ಟು ಏರಿಕೆಗೆ ಚಿಂತನೆ ಮಾಡಿದ್ದಾರೆ.

  • ವೋಟ್ ಹಾಕೋಕೆ ಊರಿಗೆ ಹೊರಟಿದ್ದೀರಾ?- ಮಾಮೂಲಿಗಿಂತ ಡಬಲ್ ದುಡ್ಡು ಇಟ್ಕೊಳ್ಳಿ

    ವೋಟ್ ಹಾಕೋಕೆ ಊರಿಗೆ ಹೊರಟಿದ್ದೀರಾ?- ಮಾಮೂಲಿಗಿಂತ ಡಬಲ್ ದುಡ್ಡು ಇಟ್ಕೊಳ್ಳಿ

    ಬೆಂಗಳೂರು: ಶನಿವಾರ ರಾಜ್ಯಾದ್ಯಂತ ವಿಧಾಸಭಾ ಚುನಾವಣೆ ಇರೋ ಹಿನ್ನೆಲೆಯಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಸ್ವಂತ ಊರಿನಿಂದ ದೂರದಲ್ಲಿರುವ ಮತದಾರರು ತಮ್ಮ ಊರಿಗೆ ತೆರಳಬೇಕು ಅಂತಾ ಪ್ಲಾನ್ ಮಾಡಿದ್ದರೆ, ಜೇಬಿನಲ್ಲಿ ಮಾಮೂಲಿಗಿಂತ ಡಬಲ್ ಹಣ ಇಟ್ಟುಕೊಂಡು ಪ್ರಯಾಣಿಸಿ. ಕಾರಣ ಖಾಸಗಿ ಬಸ್‍ಗಳ ಪ್ರಯಾಣ ದರ ದುಪ್ಪಟ್ಟು ಆಗಿದೆ. ಚುನಾವಣಾ ಕಾರ್ಯಕ್ಕಾಗಿ 4,000 ಬಿಎಂಟಿಸಿ ಬಸ್‍ಗಳನ್ನು ನಿಯೋಜನೆ ಮಾಡಲಾಗಿದೆ.

    ಚುನಾವಣಾ ಕೆಲಸಕ್ಕಾಗಿ ಕೆಎಸ್‍ಆರ್‍ಟಿಸಿ ಬಸ್ ಗಳು ಬುಕ್ ಆಗಿವೆ. ಸಾಮಾನ್ಯವಾಗಿ ದಿನನಿತ್ಯ ಸಂಚರಿಸುವ ಬಸ್‍ಗಳಿಂತ ಕಡಿಮೆ ಸಂಖ್ಯೆಯಲ್ಲಿ ಬಸ್ ಲಭ್ಯವಾಗಲಿವೆ. ಸಾರಿಗೆ ಬಸ್‍ಗಳ ಸಂಖ್ಯೆ ಕಡಿಮೆ ಇರುವ ಕಾರಣ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತ ತಮ್ಮ ವಾಹನಗಳಿಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಪ್ರಯಾಣ ದರವನ್ನು ಮಾಲೀಕರು ಡಬಲ್, ತ್ರಿಬಲ್ ಮಾಡಿಕೊಂಡಿದ್ದಾರೆ.

    ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ 600 ರೂ. ದಿಂದ 800 ರೂ.ವರೆಗೂ ಟಿಕೆಟ್ ಸಿಗುತ್ತೆ. ಇಂದು ಅದೇ ಬೆಲೆಯ ಒಂದು ಸೀಟ್‍ಗೆ 1800 ರೂ. ಏರಿಕೆ ಮಾಡಲಾಗಿದೆ. ಇತ್ತ 500 ರಿಂದ 700ರೂ. ಬೆಂಗಳೂರಿನಿಂದ ಮಂಗಳೂರಿಗಿದ್ದ ಬಸ್ ಚಾರ್ಜ್ 1,500 ರೂ.ವರೆಗೂ ತಲುಪಿದೆ. ಇದೇ ರೀತಿಯಾಗಿ ಎಲ್ಲ ಮಾರ್ಗಗಳ ಪ್ರಯಾಣ ದರ ಬೇಡಿಕೆಗೆ ತಕ್ಕಂತೆ ಏರಿಕೆ ಮಾಡಲಾಗಿದೆ.