Tag: fani cyclone

  • ಖಚಿತ ಮಾಹಿತಿ ನೀಡಿ 10 ಲಕ್ಷ ಮಂದಿಯನ್ನು ರಕ್ಷಿಸಿದ್ದ ಭಾರತೀಯ ಹವಾಮಾನ ಇಲಾಖೆಗೆ ವಿಶ್ವಸಂಸ್ಥೆ ಶ್ಲಾಘನೆ

    ಖಚಿತ ಮಾಹಿತಿ ನೀಡಿ 10 ಲಕ್ಷ ಮಂದಿಯನ್ನು ರಕ್ಷಿಸಿದ್ದ ಭಾರತೀಯ ಹವಾಮಾನ ಇಲಾಖೆಗೆ ವಿಶ್ವಸಂಸ್ಥೆ ಶ್ಲಾಘನೆ

    ನವದೆಹಲಿ: ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ ಫೋನಿ ಚಂಡಮಾರುತದ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ 10 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸುವ ಮೂಲಕ ಸಾವು ನೋವಿನ ಪ್ರಮಾಣವನ್ನು ಕನಿಷ್ಟ ಮಟ್ಟಕ್ಕೆ ಇಳಿಸಿದ ಭಾರತದ ಕಾರ್ಯ ವೈಖರಿಗೆ ವಿಶ್ವಸಂಸ್ಥೆ ಹಾಗೂ ವಿವಿಧ ರಂಗದ ತಜ್ಞರು ಶ್ಲಾಘಿಸಿದ್ದಾರೆ.

    ಚಂಡಮಾರುತದಿಂದಾಗಿ ಪುರಿಯಲ್ಲಿ ಭೂ ಕುಸಿತ ಉಂಟಾಗುವ ಸ್ಥಳವನ್ನು ನಿಖರವಾಗಿ ಗುರುತಿಸಿದ್ದ ಭಾರತೀಯ ಹವಾಮಾನ ಇಲಾಖೆಯ(ಐಎಂಡಿ) ಸಿಬ್ಬಂದಿಯ ಕಾರ್ಯದ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ ಸೂಚಿಸಿದೆ. “ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿ ಜನಸಾಮಾನ್ಯರನ್ನು ರಕ್ಷಿಸುವ ನಿಟ್ಟಿನಲ್ಲಿ ಐಎಂಡಿ ಮಾಡಿರುವ ಕೆಲಸ ಅನುಕರಣೀಯ” ಎಂದು ವಿಶ್ವಸಂಸ್ಥೆಯ ಪ್ರಕೃತಿ ವೈಪರೀತ್ಯ ನಿರ್ವಹಣಾ ವಿಭಾಗದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಮಾಮಿ ಮಿಝುತೋರಿ ಹೊಗಳಿದ್ದಾರೆ.

    ಫೋನಿ ಚಂಡಮಾರುತ ಪುರಿಯ ಸಮುದ್ರ ತೀರಕ್ಕೆ ಶುಕ್ರವಾರ ಅಪ್ಪಳಿಸಲಿದೆ ಮತ್ತು ಅಲ್ಲಿ ಭೂ ಕುಸಿತ ಸಂಭವಿಸಲಿದೆ ಎಂದು ಐಎಂಡಿ ನಿಖರವಾಗಿ ಗುರುತಿಸಿತ್ತು. ಈ ಚಂಡಮಾರುತ ಭಾರೀ ಪ್ರಮಾಣದಲ್ಲಿ ಹಾನಿ ಮಾಡಲಿದೆ ಎಂದು ಅಂದಾಜಿಸಿದ್ದ ಭಾರತ ಸುಮಾರು 12 ಲಕ್ಷ ಮಂದಿಯನ್ನು ಮೊದಲೇ ಸ್ಥಳಾಂತರ ಮಾಡಿತ್ತು. ಹೀಗಾಗಿ ಸಾವು ನೋವಿನ ಸಂಖ್ಯೆಯನ್ನು ಕಡಿಮೆ ಮಾಡಿದ್ದಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

    ಮಾಮಿ ಮಿಝುತೋರಿ ಪ್ರತಿಕ್ರಿಯಿಸಿ, ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡು ಲಕ್ಷಾಂತರ ಜೀವಗಳನ್ನು ಉಳಿಸಿದೆ. ಈ ಆಪರೇಷನ್‍ನಲ್ಲಿ 45 ಸಾವಿರ ಸ್ವಯಂಸೇವಕರು ಹಾಗೂ 2 ಸಾವಿನ ತುರ್ತು ನಿರ್ವಹಣಾ ಸಿಬ್ಬಂದಿ ಶ್ರಮವಹಿಸಿದ್ದಾರೆ. ನಿರಂತರವಾಗಿ ಸುಮಾರು 30 ಲಕ್ಷಕ್ಕೂ ಅಧಿಕ ಜನರಿಗೆ ಮಾಧ್ಯಮಗಳ ಮುಖಾಂತರ ಫೋನಿ ಚಂಡಮಾರುತದ ಬಗ್ಗೆ ಮಾಹಿತಿ ನೀಡಿದ ಭಾರತ ಸರ್ಕಾರದ ಕ್ರಮ ಶ್ಲಾಘಾನೀಯ ಎಂದಿದ್ದಾರೆ.

    ಒಡಿಶಾದಲ್ಲಿ 4.6 ಕೋಟಿ ಜನರು ಫೋನಿ ಚಂಡಮಾರುತದಿಂದ ಸಂತ್ರಸ್ಥರಾಗಿದ್ದು ಆಸ್ತಿ-ಪಾಸ್ತಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ, ಫೋನಿ ಚಂಡಮಾರುತ ಇದೀಗ ಪಶ್ಚಿಮ ಬಂಗಾಳದತ್ತ ತಿರುಗಿದೆ.

    ಈವರೆಗೆ ಫಾನಿ ಚಂಡಮಾರುತಕ್ಕೆ ಆರ್ಭಟಕ್ಕೆ ಸಾವಿನ ಸಂಖ್ಯೆ 14ಕ್ಕೆ ಏರಿದೆ. ಒಡಿಶಾದ 9 ಜಿಲ್ಲೆಗಳಲ್ಲಿ ಫಾನಿ ಚಂಡಮಾರುತ ತನ್ನ ರೌದ್ರಾವಾತಾರ ಪ್ರದರ್ಶಿಸುತ್ತಿದೆ. ಭುವನೇಶ್ವರ ಒಂದೇ ಜಿಲ್ಲೆಯಲ್ಲಿ ಈವರೆಗೆ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಯೂರ್‍ಬಂಜ್ ಜಿಲ್ಲೆಯಲ್ಲಿ 4 ಮಂದಿ, ಪುರಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಈ ಹಿಂದೆ 1999ರಲ್ಲಿ ಒಡಿಶಾಗೆ ಕಾಲಿಟ್ಟಿದ್ದ ಸೂಪರ್ ಚಂಡಮಾರುತಕ್ಕೆ 10 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಸೂಪರ್ ಚಂಡಮಾರುತಕ್ಕಿಂತಲೂ ಈ ಬಾರಿಯ ಫೋನಿ ಜಾಸ್ತಿ ಪ್ರಮಾಣದಲ್ಲಿ ಹಾನಿ ಮಾಡಿದ್ದರೂ ಸಾವು ನೋವಿನ ಸಂಖ್ಯೆ ತಗ್ಗಿದೆ.

  • ಪ್ರಚಂಡ ಮಾರುತಕ್ಕೆ ಒಡಿಶಾ ತತ್ತರ – 8 ಸಾವು, ಆಸ್ತಿ-ಪಾಸ್ತಿ ನಷ್ಟ ಲೆಕ್ಕಕ್ಕೇ ಸಿಗ್ತಿಲ್ಲ

    ಪ್ರಚಂಡ ಮಾರುತಕ್ಕೆ ಒಡಿಶಾ ತತ್ತರ – 8 ಸಾವು, ಆಸ್ತಿ-ಪಾಸ್ತಿ ನಷ್ಟ ಲೆಕ್ಕಕ್ಕೇ ಸಿಗ್ತಿಲ್ಲ

    ಭುವನೇಶ್ವರ್: ಒಡಿಶಾದಲ್ಲಿ ಅಟ್ಟಹಾಸಗೈದು 8 ಅಮಾಯಕ ಜೀವಗಳನ್ನು ಆಹುತಿ ಪಡೆದು ಘಟ ಸರ್ಪದಂತೆ ಬುಸುಗುಟ್ಟಿದ್ದ ಫೋನಿ ಚಂಡಮಾರುತ ಒಡಿಶಾದಿಂದ ಪಶ್ಚಿಮ ಬಂಗಾಳಕ್ಕೆ ಕಾಲಿಟ್ಟಿದೆ.

    175 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿದ ಪ್ರಚಂಡ ಮಾರುತ, ಜಗ್ನನಾಥನ ಊರಲ್ಲಿ ಕಂಡುಕೇಳರಿಯದಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ರಾಜಭವನಕ್ಕೆ ಸಂಪರ್ಕವೆಲ್ಲ ಕಡಿತಗೊಂಡಿದ್ದು, ಪುರಿಯಲ್ಲಿ ಸರ್ಕಾರಿ ಕಚೇರಿ, ಭುವನೇಶ್ವರದಲ್ಲಿರುವ ಏಮ್ಸ್ ಆಸ್ಪತ್ರೆ ಕಟ್ಟಡಕ್ಕೆ ಹಾನಿಯಾಗಿದೆ.

    ಭುವನೇಶ್ವರ್ ಏರ್‍ಪೋರ್ಟ್ ನ ಯಂತ್ರೋಪಕರಣಕ್ಕೆ ಧಕ್ಕೆ ಆಗಿದ್ದು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಪ್ಯಾರಾದೀಪ್ ಮತ್ತು ಗೋಪಾಲ್‍ಪುರ್ ಬಂದರುಗಳನ್ನು ಬಂದ್ ಮಾಡಲಾಗಿದೆ. ಹೌರಾ-ಚೆನ್ನೈ ನಡುವೆ ಸಂಚರಿಸೋ 220 ರೈಲುಗಳ ಓಡಾಟವನ್ನೂ ನಿಲ್ಲಿಸಲಾಗಿದೆ. 10 ಸಾವಿರ ಹಳ್ಳಿಗಳು ಮತ್ತು ಪಟ್ಟಣಗಳ 52 ಏರಿಯಾಗಳ 12 ಲಕ್ಷ ಮಂದಿಯನ್ನ ಸ್ಥಳಾಂತರ ಮಾಡಲಾಗಿದೆ. ಸಹಜ ಸ್ಥಿತಿಗೆ ಬಂದ ಬಳಿಕವಷ್ಟೇ ಒಡಿಶಾದಲ್ಲಾಗಿರುವ ವ್ಯಾಪಕ ನಷ್ಟದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಇದನ್ನೂ ಓದಿ: ಚಂಡಮಾರುತಕ್ಕೆ ಫೋನಿ ಹೆಸರು ಬಂದಿದ್ದು ಹೇಗೆ?

    ಪಶ್ಚಿಮ ಬಂಗಾಳದಲ್ಲೂ 100ರಿಂದ 110 ಕಿಲೋ ಮೀಟರ್ ವೇಗದಲ್ಲಿ ಫೋನಿ ಅಪ್ಪಳಿಸಿದೆ. ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ್, ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ, ಹೂಗ್ಲಿ, ಜಾಗ್ರಾಂ, ಕೋಲ್ಕತ್ತಾದಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಕೋಲ್ಕತ್ತಾ ಏರ್‍ಪೋರ್ಟ್ ನಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಬೆಳಗ್ಗೆ 11.30ರವರೆಗೆ ಅತ್ಯಂತ ಭೀಕರ ಸ್ಥಿತಿಯಲ್ಲಿರುವ ಫೋನಿ ಚಂಡಮಾರುತ, ರಾತ್ರಿ 11.30ರ ವೇಳೆಗೆ ತೀವ್ರ ಸ್ಥಿತಿಗೆ ತನ್ನ ಅಬ್ಬರವನ್ನ ತಗ್ಗಿಸಲಿದೆ ಎಂಬುದಾಗಿ ತಿಳಿದುಬಂದಿದೆ.

  • ‘ಫನಿ’ ಎಫೆಕ್ಟ್: ಬೆಂಗ್ಳೂರು, ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರ ರದ್ದು

    ‘ಫನಿ’ ಎಫೆಕ್ಟ್: ಬೆಂಗ್ಳೂರು, ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರ ರದ್ದು

    ಬೆಂಗಳೂರು: ದಕ್ಷಿಣ ಭಾರತ ಸೇರಿದಂತೆ ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ ಭಾಗದಲ್ಲಿ ‘ಫನಿ’ ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಪರಿಣಾಮ ಬೆಂಗಳೂರು ಸೇರಿದಂತೆ ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.

    ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿಗೆ ಹೊರಡುವ ವಿವಿಧ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೇ ವಲಯ ರದ್ದು ಮಾಡಿದ್ದು, ಗುರುವಾರ ರಾತ್ರಿ 10 ರೈಲುಗಳ ಸಂಚಾರ ರದ್ದಾಗಿದೆ. ಚಂಡಮಾರುತದ ಪ್ರಭಾವದಿಂದ ಉಂಟಾಗಬಹುದಾದ ಅಪಾಯದ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

    ಬೆಂಗಳೂರಿನಿಂದ ಹೊರಟು ಮೈಸೂರು, ಪುರಿ, ಭುವನೇಶ್ವರ ಮಾರ್ಗವಾಗಿ ಒರಿಸ್ಸಾಗೆ ಪ್ರಯಾಣ ಬೆಳೆಸಬೇಕಾಗಿದ್ದ ರೈಲುಗಳ ಸಂಚಾರ ರದ್ದಾಗಿದೆ. ಅಲ್ಲದೆ ಪುರಿ ಮತ್ತು ಭುವನೇಶ್ವರ, ಪಶ್ಚಿಮ ಬಂಗಾಳದ ಹೌರಾ ಮತ್ತು ಅಸ್ಸಾಮಿನ ಗುವಾಹಟಿ ಕಡೆಗೆ ಹೊರಡುವ ರೈಲುಗಳ ಸಂಚಾರ ಸ್ಥಗಿತವಾಗಿದೆ. ಪ್ರಮುಖವಾಗಿ ಯಶವಂತಪುರ – ಹೌರಾ ಮಾರ್ಗದ 12246, 2888, 12864 ರೈಲು, ಸಂಗೊಳ್ಳಿ ರಾಯಣ್ಣ ನಿಲ್ದಾಣ – ಭುವನೇಶ್ವರ ಮಾರ್ಗದ 18464 ರೈಲು, ಗೋವಾ – ಹೌರಾ ಮಾರ್ಗದ 18048 ಹಾಗೂ ಹೌರ – ಭುವನೇಶ್ವರ – ಬೆಂಗಳೂರು – ಮೈಸೂರು – ಗೋವಾ ಮಾರ್ಗದ ರೈಲು ಸಂಚಾರ ರದ್ದಾಗಿದೆ.

    ಫನಿ ಚಂಡಮಾರುತದಿಂದ ಉಂಟಾಗಬಹುದಾದ ಪರಿಣಾಮಗಳನ್ನು ನೋಡಿಕೊಂಡು ಮತ್ತೆ ಸಂಚಾರ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಒಂದೊಮ್ಮೆ ಫನಿ ಚಂಡಮಾರುತ ಪ್ರಭಾವದಿಂದ ಹೆಚ್ಚಿನ ಹಾನಿ ಸಂಭವಿಸಿದರೆ ಸಂಚಾರ ಆರಂಭವಾಗುವುದು ಮತ್ತಷ್ಟು ವಿಳಂಬ ಆಗಲಿದೆ.

    ಸದ್ಯದ ಮಾಹಿತಿಯ ಅನ್ವಯ ತಾತ್ಕಾಲಿಕವಾಗಿ ಮೇ 06ರ ವರೆಗೂ ರಾಜ್ಯದಿಂದ ಹೊರಡುವ ರೈಲುಗಳ ಸಂಚಾರ ರದ್ದಾಗಿದ್ದು, ಈ ಅವಧಿಯವರೆಗೂ ಒಡಿಸ್ಸಾ ಮಾರ್ಗವಾಗಿ ರೈಲು ಸಂಚಾರ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಲಭಿಸಿದೆ.

  • ‘ಫನಿ’ ಚಂಡಮಾರುತ ಏಫೆಕ್ಟ್ – ದಕ್ಷಿಣ ಕರ್ನಾಟಕಕ್ಕಿಲ್ಲ ಆತಂಕ, ಉತ್ತರದಲ್ಲಿ ವಹಿಸಿ ಎಚ್ಚರ

    ‘ಫನಿ’ ಚಂಡಮಾರುತ ಏಫೆಕ್ಟ್ – ದಕ್ಷಿಣ ಕರ್ನಾಟಕಕ್ಕಿಲ್ಲ ಆತಂಕ, ಉತ್ತರದಲ್ಲಿ ವಹಿಸಿ ಎಚ್ಚರ

    ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಈಗ ಫನಿ ಚಂಡಮಾರುತ ಪ್ರಭಾವ ಹೆಚ್ಚಾಗಿದ್ದು, ಪುದುಚೇರಿ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ತೀರ ಪ್ರದೇಶಗಳಲ್ಲಿ ಭಾರೀ ಮಳೆಯ ಆತಂಕ ಸೃಷ್ಟಿಸಿದೆ. ಹಿಂದೂ ಮಹಾಸಾಗರ-ಬಂಗಾಳಕೊಲ್ಲಿಯ ಸಮನಾಂತರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಫನಿ ಚಂಡಮಾರುತ ಈಗ ಶ್ರೀಲಂಕಾದ ಟ್ರಿಂಕೋಮಲಿಯಿಂದ 550 ಕಿ.ಮೀ. ದೂರಕ್ಕೂ ಚೆನ್ನೈನ ಆಗ್ನೇಯ ದಿಕ್ಕಿನಿಂದ 820 ಕಿ.ಮೀ. ದೂರದಲ್ಲಿ ಬರುತ್ತಿದೆ.

    ಫನಿ ಚಂಡಮಾರುತ ಆರಂಭವಾದಾಗ ಅಂದರೆ ಏಪ್ರಿಲ್ 25ರ ಆಸುಪಾಸಿನಲ್ಲಿ ಶ್ರೀಲಂಕಾದ ಅರ್ಧ ಉತ್ತರಭಾಗವನ್ನು ಆಕ್ರಮಿಸಿ, ಅಲ್ಲಿಂದ ಪುದುಚೇರಿ, ತಮಿಳುನಾಡಿನ ದಕ್ಷಿಣಭಾಗ ಸೇರಿ ಚೆನ್ನೈ ಆಂಧ್ರ ಪ್ರದೇಶದ ಮಚಿಲಿಪಟ್ಟಣದ ಮಧ್ಯೆ ಭರ್ಜರಿಯಾಗಿ ಅಪ್ಪಳಿಸುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗ, ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತೆ ಎಂದು ಅಂದಾಜಿಸಲಾಗಿತ್ತು. ಆದರೆ ಏಪ್ರಿಲ್ 27ರ ಮಧ್ಯಭಾಗದಿಂದ ಚಂಡಮಾರುತ ದಿಕ್ಕು ಬದಲಿಸುತ್ತಿದ್ದು, ತಿರುವು ಪಡೆದು ದಕ್ಷಿಣದ ಚೆನ್ನೈನಿಂದ ಉತ್ತರದ ಕಡೆ ಅಂದರೆ ಆಂಧ್ರ ಪ್ರದೇಶದ ಮಚಲಿಪಟ್ಟಣ, ಉತ್ತರ ಕರಾವಳಿ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕಡೆ ಮುನ್ನುಗ್ತಿದೆ.

    ಸದ್ಯದ ಮಾಹಿತಿ ಅನ್ವಯ ಆಂಧ್ರ-ಒಡಿಶಾದ ಮಧ್ಯ ಕರಾವಳಿ ಭಾಗದಲ್ಲಿ ಚಂಡಮಾರುತದ ಪ್ರಭಾವ ಬೀರುವ ಅವಕಾಶ ಹೆಚ್ಚಾಗಿದ್ದು, ಚಂಡಮಾರುತ ವೇಗ ಮತ್ತಷ್ಟು ಹೆಚ್ಚಾದರೆ ಖಂಡಿತಾ ಒಡಿಶಾದಲ್ಲಿ ಹೆಚ್ಚಿನ ಅವಘದ ಸಂಭವಿಸಲಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿದಂತೆ ಎಚ್ಚರಿಕೆ ನೀಡಲಾಗಿದೆ. ಎನ್‍ಡಿಆರ್‍ಎಫ್, ಕೋಸ್ಟ್‍ಗಾರ್ಡ್‍ಗೆ ಹೈ ಅಲರ್ಟ್‍ನಲ್ಲಿರುವಂತೆ ಸೂಚಿಸಲಾಗಿದೆ. ಒಡಿಶಾದ 28 ಜಿಲ್ಲೆಗಳ ಡಿಸಿಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಆಂಧ್ರ-ಒಡಿಶಾದ ಕರಾವಳಿ ಜನರನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು, ಕೇಂದ್ರ ಗೃಹ ಸಚಿವಾಲಯ ಹೆಚ್ಚಿನ ನಿಗಾ ವಹಿಸಿದೆ.

    ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೆ ಕಡಿಮೆ ಪ್ರಮಾಣದಲ್ಲಿ ಆಗಲಿದ್ದು, ಇದಕ್ಕೆ ಪ್ರಮುಖ ಕಾರಣ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಫನಿ ಚಂಡಮಾರುತ ತನ್ನ ದಿಕ್ಕು ಬದಲಿಸಿದೆ. ಚೆನ್ನೈ ಮೇಲೆ ಮೋಡಗಳು ಆವರಿಸಿದರೆ ಬೆಂಗಳೂರು, ಮೈಸೂರು ಭಾಗದಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಕೇರಳದಲ್ಲೂ ಮಳೆ ಆಗುವ ಸಾಧ್ಯತೆ ಕಡಿಮೆ ಇದೆ. ಆದರೆ ಆಂಧ್ರದ ಉತ್ತರ ಭಾಗಕ್ಕೆ ಚಂಡಮಾರುತದ ಪ್ರಭಾವ ಶಿಫ್ಟ್ ಆಗುತ್ತಿರುವುವರಿಂದ ಉತ್ತರ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

  • ಫನಿ ಚಂಡಮಾರುತ ಎಫೆಕ್ಟ್ – ರಾಜ್ಯದಲ್ಲಿ ಹಲವೆಡೆ ಮಳೆ, ಸುಳಿಗಾಳಿಯ ಚೆಲ್ಲಾಟ

    ಫನಿ ಚಂಡಮಾರುತ ಎಫೆಕ್ಟ್ – ರಾಜ್ಯದಲ್ಲಿ ಹಲವೆಡೆ ಮಳೆ, ಸುಳಿಗಾಳಿಯ ಚೆಲ್ಲಾಟ

    ಬೆಂಗಳೂರು: ಫನಿ ಚಂಡಮಾರುತ ರಾಜ್ಯಕ್ಕೆ ಅಪ್ಪಳಿಸುವ ಭೀತಿ ಹೆಚ್ಚಿದ್ದು, ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಸುಳಿಗಾಳಿಯ ಸೃಷ್ಟಿಯಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಎಚ್ಚರಿಕೆ ನೀಡಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಫನಿ ಚಂಡಮಾರುತದ ಎಫೆಕ್ಟ್ ರಾಜ್ಯಕ್ಕೂ ಕೂಡ ತಟ್ಟಲಿದೆ. ಫನಿ ಚಂಡಮಾರುತ ದುರ್ಬಲವಾದರೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ಮಂಡ್ಯ, ಮೈಸೂರು ತುಮಕೂರಿನಲ್ಲಿ ಸಾಧಾರಣ ಮಳೆಯಾಗಲಿದ್ದು, ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡ ಭಾಗಗಳಲ್ಲಿ ಸುಳಿಗಾಳಿಯಿಂದ ಮಳೆರಾಯನ ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿಯಲ್ಲಿ ಹೈ ಅಲರ್ಟ್ ಫೋಷಿಸಲಾಗಿದ್ದು ಈ ಪ್ರದೇಶಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ ಫನಿ ಎಫೆಕ್ಟ್ ರಾಜ್ಯದ ಬಹುತೇಕ ಭಾಗದಲ್ಲಿ ಮೇ 4ರ ತನಕ ಇರಲಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ.

    ಫನಿ ಚಂಡಮಾರುತ ದೊಡ್ಡ ಮಟ್ಟದಲ್ಲಿ ರಾಜ್ಯದ ಮೇಲೆ ಪ್ರಭಾವ ಬೀರದೇ ಇದ್ದರೂ ಸಣ್ಣ ಪ್ರಮಾಣದಲ್ಲಿ ಮಳೆರಾಯ ಆರ್ಭಟಿಸಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.