Tag: family

  • ಕೊಡಗಿನಲ್ಲೊಂದು ಕರುಣಾಜನಕ ಕಥೆ – ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಬಿಟ್ಟು ಬಂದ ವೃದ್ಧೆಯ ರಕ್ಷಣೆ

    ಕೊಡಗಿನಲ್ಲೊಂದು ಕರುಣಾಜನಕ ಕಥೆ – ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಬಿಟ್ಟು ಬಂದ ವೃದ್ಧೆಯ ರಕ್ಷಣೆ

    ಮಡಿಕೇರಿ: ಮಹಾಮಳೆಗೆ ಮೃತಪಟ್ಟಿದ್ದಾರೆ ಎಂದು ಭಾವಿಸಿ ಕುಟುಂಬಸ್ಥರು ಬಿಟ್ಟು ಬಂದ ವೃದ್ಧೆಯೊಬ್ಬರನ್ನು ಸಿವಿಲ್ ಡಿಫೆನ್ಸ್ ತಂಡ ರಕ್ಷಣೆ ಮಾಡಿರುವ ಘಟನೆ ಹೆಬ್ಬೆಟ್ಟಗಿರಿಯಲ್ಲಿ ನಡೆದಿದೆ.

    ಕುಂಭದ್ರೋಣ ಮಳೆಗೆ ಗುಡ್ಡ ಕುಸಿತ ಸಂಭವಿಸಿ ನಿರಾಶ್ರಿತರಾದ ಕುಟುಂಬ ಅನಿವಾರ್ಯವಾಗಿ ಮನೆ ತೊರೆಯುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವೇಳೆ ಮನೆಯಲ್ಲಿ 85 ವರ್ಷದ ಅಜ್ಜಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ ಕುಟುಂಬಸ್ಥರು ಅವರನ್ನು ಹೊತ್ತು ತರಲಾಗದೇ ಮನೆಯಲ್ಲೇ ಬಿಟ್ಟು ಬಂದಿದ್ದರು.

    ಹೆಬ್ಬೆಟ್ಟಗಿರಿಯ ಪಕ್ಕದ ಎಲ್ಲಾ ಗ್ರಾಮಗಳಲ್ಲೂ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು. ಈ ವೇಳೆ ಮೊಮ್ಮಗ ಪವನ್ ಅಜ್ಜಿಯನ್ನ ಬಿಟ್ಟು ಬಂದಿರುವ ವಿಚಾರವನ್ನು ಎಸ್ಪಿ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚತ್ತ ಎಸ್ಪಿ ರಕ್ಷಣಾ ಕಾರ್ಯ ನಡೆಸುತ್ತಿದ್ದ ಸಿವಿಲ್ ಡಿಫೆನ್ಸ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿದು ಮನೆಗೆ ತೆರಳಿದಾಗ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದ ಅಜ್ಜಿ ಮಂಚದ ಮೇಲೆ ಮಲಗಿದ್ದರು. ಜೀವಂತವಾಗಿರುವುದನ್ನು ಕಂಡ ರಕ್ಷಣಾ ಪಡೆ ಯೋಧರು ಅಜ್ಜಿಯನ್ನು 10 ಕಿಮೀ ದೂರ ಹೊತ್ತು ತಂದು ರಕ್ಷಿಸಿದ್ದಾರೆ.

    ಇತ್ತ ಅಜ್ಜಿಯ ಜೀವ ಉಳಿಸಲು ಪಣತೊಟ್ಟ 12 ಮಂದಿ ಸ್ವಯಂ ಸೇವರ ರಕ್ಷಣಾ ಕಾರ್ಯಾಚರಣೆ ತಂಡ ಸವಾಲು ಸ್ವೀಕರಿಸಿ ಯಶ್ವಸಿಯಾಗಿದ್ದಾರೆ. ಮಡಿಕೇರಿ ಜನರ ರಕ್ಷಣೆಗಾಗಿ ಬೆಂಗಳೂರಿನಿಂದ ತೆರಳಿದ್ದ ಡಾ. ಪಿಆರ್ ಎಸ್ ಚೇತನ್ ಅವರ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿ ಅಜ್ಜಿ ಜೀವ ರಕ್ಷಣೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಂದೆ ರಾಜಕೀಯಕ್ಕೆ ಸೇರ್ಪಡೆ ಆಗ್ತೀರಾ: ಭವಿಷ್ಯದ ಬಗ್ಗೆ ಇಂದಿರಾ ನೂಯಿ ಮಾತು

    ಮುಂದೆ ರಾಜಕೀಯಕ್ಕೆ ಸೇರ್ಪಡೆ ಆಗ್ತೀರಾ: ಭವಿಷ್ಯದ ಬಗ್ಗೆ ಇಂದಿರಾ ನೂಯಿ ಮಾತು

    ನ್ಯೂಯಾರ್ಕ್: ರಾಜಕೀಯ ರಂಗವನ್ನು ಸೇರುವುದಿಲ್ಲ, ಇನ್ನು ಮುಂದೆ ತನ್ನ ಕುಟುಂಬಕ್ಕೆ ಹೆಚ್ಚಿನ ಪ್ರಾಶ್ಯಸ್ತ ಕೊಡಲು ನಿರ್ಧರಿಸಿದ್ದೇನೆ ಎಂದು ಪೆಪ್ಸಿಕೋ ಕಂಪೆನಿಯ ಸಿಇಒ ಇಂದಿರಾ ನೂಯಿ ಹೇಳಿದ್ದಾರೆ.

    ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು, ನನಗೆ ರಾಜಕೀಯ ಸರಿಹೊಂದುವುದಿಲ್ಲ, ನಾನು ಒಳ್ಳೆಯ ಕೆಲಸಗಾರ್ತಿಯಾಗಿದ್ದೇನೆ. ರಾಜಕೀಯಕ್ಕೆ ಬರಲು ಯಾವುದೇ ಭಯಭೀತಿಗಳಿಲ್ಲ. ಪೆಪ್ಸಿಕೋ ಕಂಪೆನಿಯನ್ನು ತೊರೆದ ಮೇಲೆ ನಾನು ನನ್ನ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ನಿರ್ಧರಿಸಿದ್ದೇನೆ ಹಾಗಾಗಿ ರಾಜಕೀಯರಂಗಕ್ಕೆ ಪ್ರವೇಶಿಸುವುದಿಲ್ಲ ಎಂದಿದ್ದಾರೆ.

    ದೊಡ್ಡ ಕಂಪೆನಿಗೆ ಸೇರ್ಪಡೆಯಾದಾಗ ಒಂದಕ್ಕೆ ಮಾತ್ರ ಆದ್ಯತೆ ನೀಡಲಾಗಿತ್ತು. ಹಾಗಾಗಿ ಸಿಇಒ ಸ್ಥಾನಕ್ಕೆ ನೀಡಬೇಕಾಯಿತು. 24 ವರ್ಷಗಳ ಕಾಲ ಅದೇ ನನ್ನ ಮೊದಲು ಕುಟುಂಬವಾಗಿತ್ತು. ಇದರಿಂದಾಗಿ ನನ್ನ ಕುಟುಂಬದಲ್ಲಿ ಅನೇಕ ಬದಲಾವಣೆಗಳಾಗಿರಬಹುದು ಹಾಗಾಗಿ ಈಗ ನನ್ನ ಕುಟುಂಬಕ್ಕೆ ಆದ್ಯತೆ ನೀಡಬೇಕಾದ ಸಮಯ ಬಂದಿದೆ ಎಂದು ನೂಯಿ ತಿಳಿಸಿದರು.

    ಪೆಪ್ಸಿಕೋ ಕಂಪೆನಿಯಲ್ಲಿ ಅನೇಕ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು, ಆ ಕ್ಷಣಗಳು ನನ್ನ ಹೃದಯದಲ್ಲಿ ಸದಾ ನೆನಪಿರುತ್ತದೆ ಹಾಗೂ ಪೆಪ್ಸಿಕೋ ಕಂಪೆನಿ ಇಷ್ಟು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆ. ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಕಂಪೆನಿಯ ಹಿರಿಯ ನಾಯಕ ರಾಮನ್ ನೇತೃತ್ವದಲ್ಲಿ ತಂಡ ಹೀಗೆ ಕಂಪೆನಿಯನ್ನು ದೀರ್ಘಾವಧಿಗಳ ಕಾಲ ಬೆಳೆಸಿಕೊಂಡು ಮುಂದುವರಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

    ವಿಶ್ವದ ಎರಡನೇ ತಂಪು ಪಾನೀಯದ ಪೆಪ್ಸಿಕೋ ಕಂಪೆನಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ನೂಯಿ 12 ವರ್ಷಗಳ ನಂತರ ಕಂಪೆನಿಯಿಂದ ಹೊರಬರುತ್ತಿದ್ದಾರೆ. ಅಕ್ಟೋಬರ್ 3ಕ್ಕೆ ಅವರ ಅವಧಿ ಮುಕ್ತಾಯವಾಗಲಿದ್ದು, 2019 ರವರೆಗೂ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ. ಇಂದಿರಾ ನೂಯಿರವರು 1980 ರಲ್ಲಿ ರಾಜ್ ನೂಯಿ ಎಂಬವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

  • ಅಂಧರ ಕುಟುಂಬಕ್ಕೆ ಕಂಟಕವಾದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ!

    ಅಂಧರ ಕುಟುಂಬಕ್ಕೆ ಕಂಟಕವಾದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ!

    ಬೆಂಗಳೂರು: ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಜೀವನ ಮಾಡುತ್ತಿದ್ದ ಆ ಅಂಧರ ಕುಟುಂಬಕ್ಕೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಂಟಕವಾಗಿ ಮಾರ್ಪಟ್ಟಿದೆ. ಈ ಅಂಧರ ಜೀವನೋಪಾಯಕ್ಕಿದ್ದ ಏಕೈಕ ಟೀ ಅಂಗಡಿಯನ್ನ ಅಧಿಕಾರಿಗಳು ಕುಂಟು ನೆಪವೊಡ್ಡಿ ಎತ್ತಂಗಡಿ ಮಾಡಿಸಿದ್ದಾರೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ತಾಲೂಕಿನ ದಾಬಸ್‍ಪೇಟೆಯಲ್ಲಿ ನಡೆದಿದೆ. ಇಲ್ಲಿನ ಲೋಕೇಶ್ ಎಂಬವರ ಕುಟುಂಬ ಸಾಕಷ್ಟು ವರ್ಷಗಳಿಂದ ಟೀ ಮಾರುತ್ತಾ ನೆಮ್ಮದಿಯ ಜೀವನವನ್ನ ನಡೆಸುತ್ತಿದ್ದರು. ಕುಟುಂಬದ ಎಲ್ಲಾ ಸದಸ್ಯರಿಗೂ ಸಂಪೂರ್ಣ ಕಣ್ಣು ಕಾಣದೆ ಕೇವಲ ಶೇ.20ರಷ್ಟು ಮಾತ್ರ ಕಾಣುತ್ತದೆ. ಹೀಗಿದ್ದರೂ ಸ್ವಾಭಿಮಾನದ ಬದುಕನ್ನ ಬಿಟ್ಟುಕೊಡದ ಇವರೆಲ್ಲಾ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ, ಜೀವನೋಪಾಯಕ್ಕಾಗಿ ಟೀ ಅಂಗಡಿಯೊಂದನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

    ಆದ್ರೆ ಇದೀಗ ಕೆ.ಐ.ಎ.ಡಿ.ಬಿ ಸಂಸ್ಥೆ ಅಂಧರು ಇಟ್ಟುಕೊಂಡಿದ್ದ ಟೀ ಅಂಗಡಿಯನ್ನ ಎತ್ತಂಗಡಿ ಮಾಡಿದ್ದು, ಇವರ ಜೀವನ ಇದೀಗ ಬೀದಿಪಾಲಾಗಿದೆ. ಹೀಗಾಗಿ ನಮಗೆ ಇಲ್ಲಿನ ಅಧಿಕಾರಿಗಳು ಮತ್ತೆ ಟೀ ಅಂಗಡಿಯನ್ನ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಅಂಧ ಲೋಕೇಶ್ ಕುಟುಂಬ ಪರಿಪರಿಯಾಗಿ ಮಾಧ್ಯಮದಗಳ ಮುಂದೆ ಬೇಡಿಕೊಳ್ಳುತ್ತಿದ್ದಾರೆ.

    ಈ ವಿಚಾರದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಜನಪ್ರತಿಧಿಗಳ ಮುಂದೆ ಅಂಗಲಾಚಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಅಂತ ಕುಟುಂಬದ ಹನುಮಕ್ಕ ತನ್ನ ಅಳಲು ತೋಡಿಕೊಂಡಿದ್ದಾರೆ.

  • ಒಂದೇ ಕುಟುಂಬದ ನಾಲ್ವರ ಮೃತ ದೇಹಗಳು ಮನೆಯ ಹಿಂಬದಿಯ ಗುಂಡಿಯಲ್ಲಿ ಪತ್ತೆ!

    ಒಂದೇ ಕುಟುಂಬದ ನಾಲ್ವರ ಮೃತ ದೇಹಗಳು ಮನೆಯ ಹಿಂಬದಿಯ ಗುಂಡಿಯಲ್ಲಿ ಪತ್ತೆ!

    ತಿರುವನಂತಪುರಂ: ನಾಪತ್ತೆಯಾಗಿದ್ದ ಕೇರಳ ಕುಟುಂಬದ ನಾಲ್ಕು ಸದಸ್ಯರ ಮೃತದೇಹಗಳು ಅವರ ಮನೆಯ ಹಿಂಬದಿಯ ಗುಂಡಿಯಲ್ಲಿ ಪತ್ತೆಯಾಗಿದೆ.

    ಘಟನೆ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದ್ದು, ಮೃತ ಪಟ್ಟವರನ್ನು ಕೃಷ್ಣನ್ (52), ಪತ್ನಿ ಸುಶೀಲಾ (50) ಹಾಗೂ ಅವರ ಮಗಳು ಹರ್ಷ (21), ಮಗ ಅರ್ಜುನ್(19) ಎಂದು ಗುರುತಿಸಲಾಗಿದ್ದು, ಕಳೆದ ನಾಲ್ಕು ದಿನಗಳಿಂದಲೂ ನಾಪತ್ತೆಯಾಗಿದ್ದ ಇವರ ಶವ ಮನೆಯ ಹಿಂಭಾಗದಲ್ಲಿ ಗುಂಡಿಯಲ್ಲಿ ಹೂಳಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮೃತಪಟ್ಟವರು ಮುಂಡನ್ಮುಡಿಯಲ್ಲಿರುವ ರಬ್ಬರ್ ಎಸ್ಟೇಟ್‍ನಲ್ಲಿ ವಾಸವಾಗಿದ್ದರು. ಕೃಷ್ಣನ್ ರಬ್ಬರ್ ತೋಟವನ್ನು ಹೊಂದಿದ್ದು, ಅವರು ವಾಮಾಚಾರ ಅಭ್ಯಾಸ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ಈ ಘಟನೆ ಕುರಿತು ಪೊಲೀಸರು ಸ್ಥಳೀಯರನ್ನು ವಿಚಾರಣೆ ಮಾಡಿದಾಗ ನಾಲ್ಕು ದಿನಗಳಿಂದ ಅವರು ಕಾಣೆಯಾಗಿದ್ದರು ಎಂದು ಹೇಳಿದ್ದಾರೆ. ಹಾಗಾಗಿ ಪೊಲೀಸರು ಮನೆಯ ಸುತ್ತಮುತ್ತಲೂ ಪರಿಶೀಲಿಸಿದಾಗ ಒಂದರ ಮೇಲೊಂದರಂತೆ ಬಿದ್ದಿರುವ ಕೊಳೆತ ಮೃತದೇಹಗಳು ಪತ್ತೆಯಾಗಿವೆ. ಈ ಕೃತ್ಯ ಭಾನುವಾರ ನಡೆದಿದ್ದು, ಮನೆಯಲ್ಲಿ ಸುತ್ತಿಗೆ ಮತ್ತು ಚಾಕು ಸಿಕ್ಕಿದೆ.

    ಬುಧವಾರ ಮನೆಗೆ ಕುಟುಂಬದ ಸಂಬಂಧಿಕರು ಬಂದಿದ್ದು, ಆ ಸಂದರ್ಭದಲ್ಲಿ ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈಗ ಮರಣೋತ್ತರ ಪರೀಕ್ಷೆಗೆಂದು ಮೃತ ದೇಹಗಳನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಮೃತ ದೇಹಗಳ ಮೇಲೆ ಆಗಿರುವ ಗಾಯಗಳನ್ನು ನೋಡಿದರೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

  • ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬ ಆತ್ಮಹತ್ಯೆಗೆ ನಿರ್ಧಾರ

    ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬ ಆತ್ಮಹತ್ಯೆಗೆ ನಿರ್ಧಾರ

    ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಗೀಕಹಳ್ಳಿ ಗ್ರಾಮದಲ್ಲಿ ಕುಟುಂಬವೊಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದು, ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದೆ.

    ಗೀಕಹಳ್ಳಿ ಗ್ರಾಮದ ಮಹದೇವ್ ಎಂಬವರ ಕುಟುಂಬಕ್ಕೆ ಇಂತಹ ದುಃಸ್ಥಿತಿ ಬಂದಿದೆ. ಕಳೆದ ಎರಡು ವರ್ಷಗಳಿಂದ ಗ್ರಾಮದ ಮುಖಂಡರ ಆಕ್ರೋಶಕ್ಕೆ ಸಿಲುಕಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಮಹದೇವ್, ಬಿಳಿಗೆರೆ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದ್ದಾರೆ.

    ಐದು ವರ್ಷದ ಹಿಂದೆ ಗ್ರಾಮದ ಮುಖಂಡರ ಜೊತೆ ಜಾಗ ಖರೀದಿ ವಿಚಾರದಲ್ಲಿ ಮಹದೇವ ಜಗಳ ಮಾಡಿಕೊಂಡಿದ್ದರು. ಈ ವಿಚಾರ ಮುಂದಿಟ್ಟುಕೊಂಡ ಗ್ರಾಮದ ಇನ್ನಿತರ ಮುಖಂಡರು ಮಹದೇವ್ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ರು. ಬಹಿಷ್ಕಾರದ ಎಫೆಕ್ಟ್ ಇವರ ಮಗಳ ಕುಟುಂಬದ ಮೇಲೂ ಬೀರಿದೆ. ಅಳಿಯ ಮಗಳನ್ನು ಇದೇ ಕಾರಣಕ್ಕೆ ಬಿಟ್ಟು ಹೋಗಿದ್ದಾನೆ. ಹಬ್ಬಗಳಲ್ಲಿ ಭಾಗವಹಿಸುವಂತಿಲ್ಲ, ಅಂಗಡಿಗಳಲ್ಲಿ ಪದಾರ್ಥ ಕೊಂಡುಕೊಳ್ಳುವಂತಿಲ್ಲ, ಮತ್ತೊಬ್ಬರ ಮನೆಯಲ್ಲಿ ನೀರೂ ಕುಡಿಯುವಂತಿಲ್ಲ ಇಂತಹ ಪರಿಸ್ಥಿತಿ ಮಹದೇವ್ ಅವರ ಕುಟುಂಬಕ್ಕೆ ಬಂದಿದೆ. ಗ್ರಾಮದ ಹೊರವಲಯದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಮಹದೇವನ ಕುಟುಂಬಕ್ಕೆ ಸದ್ಯ ಜೀವ ಭಯ ಉಂಟಾಗಿದೆ.

  • ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣು

    ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣು

    ರಾಂಚಿ: ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮತ್ತೊಂದು ಅಘಾತಕಾರಿ ಆತ್ಮಹತ್ಯೆ ಘಟನೆ ವರದಿಯಾಗಿದೆ. ರಾಂಚಿಯ ಒಂದೇ ಕುಟುಂಬದ 7 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಘಟನೆ ನಡೆದಿದ್ದು, ಸಾಮೂಹಿಕ ಆತ್ಮಹತ್ಯೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಆದರೆ ಈ ಕುರಿತು ಸಂಪೂರ್ಣ ತನಿಖೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಪತಿ ದೀಪಕ್ ಝಾ (40), ಪತ್ನಿ ಸೋನಿ ಝಾ, ರೂಪೇಶ್ ಝಾ, ಪುತ್ರಿ ದೃಷ್ಟಿ(7), ಕಿರಿಯ ಪುತ್ರ ಗಂಜು ಹಾಗೂ ದೀಪಕ್ ಝಾ ತಂದೆ, ತಾಯಿ ಮೃತದೇಹಗಳು ಸಹ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಘಟನೆಗೂ ಒಂದು ತಿಂಗಳ ಮುನ್ನ 6 ಮಂದಿಯ ಕುಟುಂಬವೊಂದು ಜಾರ್ಖಂಡ್‍ನ ಹಜಾರಿಬಾಗ್ ಆಪಾರ್ಟ್ ಮೆಂಟ್‍ವೊಂದರಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿತ್ತು. ಈ ವೇಳೆ ತನಿಖೆ ನಡೆಸಿದ ಪೊಲೀಸರು ಕುಟುಂಬದ ಸಾಮೂಹಿಕ ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಯೇ ಕಾರಣ ಎಂದು ಸ್ಪಷ್ಟನೆ ನೀಡಿದ್ದರು.

  • ಎಚ್‍ಡಿಡಿ ಕುಟುಂಬದ ಅಮರನಾಥ ಯಾತ್ರೆ ರದ್ದು

    ಎಚ್‍ಡಿಡಿ ಕುಟುಂಬದ ಅಮರನಾಥ ಯಾತ್ರೆ ರದ್ದು

    ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಅಧಿಕಾರಿ ಹೆಚ್.ಡಿ. ದೇವೇಗೌಡ ಕುಟುಂಬ ಕೈಗೊಳ್ಳಬೇಕಿದ್ದ ಅಮರನಾಥ ಯಾತ್ರೆ ರದ್ದಾಗಿದೆ.

    ದೇವೇಗೌಡರು ಬುಧವಾರ ಪತ್ನಿ ಚೆನ್ನಮ್ಮ, ಪುತ್ರ ರೇವಣ್ಣ, ಸೊಸೆ ಭವಾನಿ ಮತ್ತು ಮೊಮ್ಮಕ್ಕಳೊಂದಿಗೆ ಯಾತ್ರೆ ಹೋಗಬೇಕಿತ್ತು. ಆದರೆ ಅಮರನಾಥದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಯಾತ್ರೆಯನ್ನು ರದ್ದೊಗೊಳಿಸಿದ್ದಾರೆ.

    ಪತ್ನಿ ಚೆನ್ನಮ್ಮ ಅವರು ಅಮರನಾಥ ಯಾತ್ರೆ ಮಾಡಬೇಕೆಂಬ ಆಸೆಯನ್ನು ದೇವೇಗೌಡರ ಬಳಿ ವ್ಯಕ್ತಪಡಿದ್ದರು. ಸದಾ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿ ಇರುವ ದೇವೇಗೌಡರು ಪತ್ನಿ ಆಸೆಯನ್ನು ಈಡೇರಿಸಲು ಮುಂದಾಗಿದ್ದರು. ಅದರಂತೆ ದೇವೇಗೌಡರು ಬುಧವಾರ ಬೆಳಗ್ಗೆ ದೆಹಲಿಯಿಂದ ಅಮರನಾಥ ಯಾತ್ರೆ ಮಾಡಲು ನಿರ್ಧರಿಸಿದ್ದರು. ಆದರೆ ಈಗ ಮಳೆಯಿಂದ ಅಮರನಾಥ ಯಾತ್ರೆಯನ್ನು ರದ್ದು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ವಿಶೇಷ ಪೂಜೆ: ದೇವೇಗೌಡರ ಕುಟುಂಬದವರು ದೇವರು, ಜ್ಯೋತಿಷ್ಯದ ಮೇಲೆ ಜಾಸ್ತಿ ನಂಬಿಕೆ ಇಟ್ಟಿದ್ದಾರೆ. ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಯ ಬಗ್ಗೆ ಭವಿಷ್ಯವಾಣಿಗಳು ಕೇಳಿ ಬರುತ್ತಿದ್ದಂತೆ ದೇವೇಗೌಡರ ಕುಟುಂಬ ಗ್ರಹಣ ದೋಷ ನಿವಾರಣೆಗಾಗಿ ಮಹಾ ಪೂಜೆ ನಡೆಸಲು ನಿರ್ಧರಿಸಿದೆ. ಸುದೀರ್ಘ ಗ್ರಹಣ ಮುಗಿದ ಬೆಳಗಿನ ಜಾವ ಗ್ರಹಣ ದೋಷ ನಿವಾರಣೆಗಾಗಿ ಗವಿ ಗಂಗಾಧರ ದೇಗುಲದಲ್ಲಿ ಶಿವಾರಾಧನೆ, ಹೋಮ, ಯಜ್ಞ ಯಾಗಗಳನ್ನು ನಡೆಸಲಿದ್ದಾರೆ ಎಂದು ಸೋಮಸುಂದರ ದೀಕ್ಷಿತ್ ಹೇಳಿದ್ದರು.

  • 25 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ವ್ಯಕ್ತಿಯನ್ನು ಗೂಡು ಸೇರಿಸಿದ ಪಬ್ಲಿಕ್ ಹೀರೋ

    25 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ವ್ಯಕ್ತಿಯನ್ನು ಗೂಡು ಸೇರಿಸಿದ ಪಬ್ಲಿಕ್ ಹೀರೋ

    ಉಡುಪಿ: ಬರೋಬ್ಬರಿ 25 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ವ್ಯಕ್ತಿಯನ್ನು ಇಂದು ನಮ್ಮ ಪಬ್ಲಿಕ್ ಹೀರೋ ಗೂಡು ಸೇರುವಂತೆ ಮಾಡಿದ್ದಾರೆ.

    ಅಶೋಕ್ ಉಡುಪಿ ನಗರದ ಪಣಿಯಾಡಿ ಮೂಲದ ನಿವಾಸಿ. ಅಶೋಕ್ ಮನೆಯಿಂದ ದೂರವಾಗಿ 25 ವರ್ಷಗಳೇ ಕಳೆದಿವೆ. ಒಂದು ದಿನ ಮನೆಯಿಂದ ತೆರಳಿದವರು ಮತ್ತೆ ಊರಿಗೆ ಬಂದಿರಲಿಲ್ಲ. ಎಲ್ಲಿದ್ದರು ಎನ್ನುವುದು ಯಾರಿಗೂ ಗೊತ್ತಿಲ್ಲ. ಊರೂರು ಸುತ್ತಿ 15 ದಿನಗಳ ಹಿಂದೆ ಅಶೋಕ್ ಉಡುಪಿಯ ಕೃಷ್ಣ ಮಠಕ್ಕೆ ಬಂದಿದ್ದರು. ಮಠಕ್ಕೆ ಬರುವ ಭಕ್ತರು ಕೊಟ್ಟ ಹಣ, ತಿಂಡಿ ತಿಂದು ಜೀವನ ಸಾಗಿಸುತ್ತಿದ್ದರು. ಇಷ್ಟಾಗುವಾಗ ನಮ್ಮ ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಅವರ ಕಣ್ಣಿಗೆ ಅಶೋಕ್ ಕಂಡಿದ್ದಾರೆ. ಕೂಡಲೇ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

     

    ವೈದ್ಯರು ಟ್ರೀಟ್‍ಮೆಂಟ್ ಎಲ್ಲ ಶುರು ಮಾಡಿದ್ದಾರೆ. ಟ್ರೀಟ್‍ಮೆಂಟ್ ಆಗುತ್ತಿದ್ದಂತೆ ಅಶೋಕ್ ಗೆ ಹಳೆಯದ್ದೆಲ್ಲ ನೆನಪಾಗಿದೆ. ತನ್ನ ಊರು ಮತ್ತೆ ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದಾರೆ. ನಿತ್ಯಾನಂದ ಒಳಕಾಡು ಭಾವಚಿತ್ರ ತೆಗೆದು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲಾತಾಣದಲ್ಲಿ ಹಾಕಿದ್ದಾರೆ. ಫೋಟೋ ವೈರಲ್ ಆಗುತ್ತಿದ್ದಂತೆ ಅಶೋಕ್ ಅವರ ಮಕ್ಕಳು ಮುಂಬೈ ಮತ್ತು ಬೆಂಗಳೂರಿನಿಂದ ಓಡೋಡಿ ಬಂದಿದ್ದಾರೆ.

    ನಿತ್ಯಾನಂದ ಒಳಕಾಡು ಮತ್ತು ಟೀಮ್ ಉಡುಪಿಯಲ್ಲಿರುವ ಇವರ ಮನೆಯನ್ನ ಪತ್ತೆ ಮಾಡಿದ್ದಾರೆ. 25 ವರ್ಷದ ನಂತರ ಅಶೋಕ್ ತನ್ನ ಮನೆಯನ್ನು ಸೇರಿದ್ದಾರೆ. ಕಳೆದೆ ಹೋಗಿದ್ದಾರೆ ಎಂದು ಅಂದುಕೊಂಡಿದ್ದ ಮಕ್ಕಳಿಗೆ ಅಪ್ಪ ಸಿಕ್ಕ ಖುಷಿಯಾಗಿದೆ. ಅಶೋಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ವಾಟ್ಸಾಪ್-ಫೇಸ್ಬುಕ್ 3 ಮಕ್ಕಳಿಗೆ ಅಪ್ಪನನ್ನ ಹುಡುಕಿಕೊಟ್ಟಿದೆ. ಮಡದಿಗೆ ಗಂಡನನ್ನ ಹುಡುಕಿಕೊಟ್ಟಿದೆ. ನಮ್ಮ ಪಬ್ಲಿಕ್ ಹೀರೋ ಕುಟುಂಬವನ್ನ ಒಂದು ಮಾಡಿದ್ದಾರೆ.

  • ಕಾರಿನೊಂದಿಗೆ ಕೊಚ್ಚಿ ಹೋಗ್ತಿದ್ದ ಕುಟುಂಬವನ್ನು ಹಗ್ಗ ನೀಡಿ ಕಾಪಾಡಿದ್ರು: ವೈರಲ್ ವಿಡಿಯೋ ನೋಡಿ

    ಕಾರಿನೊಂದಿಗೆ ಕೊಚ್ಚಿ ಹೋಗ್ತಿದ್ದ ಕುಟುಂಬವನ್ನು ಹಗ್ಗ ನೀಡಿ ಕಾಪಾಡಿದ್ರು: ವೈರಲ್ ವಿಡಿಯೋ ನೋಡಿ

    ಮುಂಬೈ: ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಕಾರಿನ ಸಮೇತ ಕೊಚ್ಚಿ ಹೋಗುತ್ತಿದ್ದ ಒಂದು ಕುಟುಂಬವನ್ನು ಅಲ್ಲಿನ ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.

    ಈ ಘಟನೆಯನ್ನು ಅಲ್ಲೇ ಇದ್ದ ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.

    ನವಿ ಮುಂಬೈನ ಟೋಲಾಜಾದ ಬಳಿ ಸೋಮವಾರ ಮಧ್ಯಾಹ್ನ ಘಟನೆ ನಡೆದಿದ್ದು, ಕಾರಿನಿಂದ ತೆರಳುತ್ತಿದ್ದ ಕುಟುಂಬವೊಂದು ಮಹಾರಾಷ್ಟ್ರದ ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುತಿತ್ತು. ಈ ವೇಳೆ ಗಮನಿಸಿದ ಅಲ್ಲಿನ ಸ್ಥಳೀಯರು ತಡ ಮಾಡದೇ ಹಗ್ಗವನ್ನು ಎಸೆದು ಒಬ್ಬೊಬ್ಬರನ್ನು ದಡಕ್ಕೆ ಎಳೆದುಕೊಳ್ಳುವ ಮೂಲಕ ರಕ್ಷಿಸಿದ್ದಾರೆ.

    37 ವರ್ಷದ ಅಶ್ರಫ್ ಖಲೀಲ್ ಶೇಖ್, ಅವರ ಪತ್ನಿ ಹಮೀದಾ ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಆ ವೇಳೆ ಟೋಲಾಜಾದ ಸೇತುವೆ ಬಳಿ ಕಾರು ನಿಯಂತ್ರಣ ತಪ್ಪಿ, ಮಳೆಯಿಂದ ತುಂಬಿ ಹರಿಯುತ್ತಿದ್ದ ನೀರಿನ ಪ್ರವಾಹಕ್ಕೆ ಬಿದ್ದಿದೆ. ಬಿದ್ದ ನಂತರ ಕಾರಿನಲ್ಲಿದ್ದವರು ಟಾಪ್ ಏರಿ ಸಹಾಯಕ್ಕಾಗಿ ಕೂಗಿದ್ದಾರೆ.

    ಇದನ್ನು ಕಂಡ ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ ಹಗ್ಗವನ್ನು ನೀಡಿ ಮೊದಲಿಗೆ ಮಹಿಳೆಯನ್ನು ದಡಕ್ಕೆ ಎಳೆದುಕೊಂಡಿದ್ದಾರೆ. ಅನಂತರ ಉಳಿದವರನ್ನು ದಡಕ್ಕೆ ಎಳೆಯುವ ಮೂಲಕ ಎಲ್ಲರನ್ನು ರಕ್ಷಿಸಿದ್ದಾರೆ.

  • ನಾನು ಮನೆಯಲ್ಲಿ ಇಲ್ಲ, ದೇಶ ಕಾಯೋ ನಮಗೆ ನ್ಯಾಯ ಕೊಡಿಸಿ – ಸಾಮಾಜಿಕ ಜಾಲತಾಣದಲ್ಲಿ ಯೋಧನ ಮನವಿ

    ನಾನು ಮನೆಯಲ್ಲಿ ಇಲ್ಲ, ದೇಶ ಕಾಯೋ ನಮಗೆ ನ್ಯಾಯ ಕೊಡಿಸಿ – ಸಾಮಾಜಿಕ ಜಾಲತಾಣದಲ್ಲಿ ಯೋಧನ ಮನವಿ

    ಮೈಸೂರು: ದೇಶ ಕಾಯಲು ಹೋಗಿದ್ದೇನೆ, ಆದರೆ ನನ್ನ ಕುಟುಂಬಕ್ಕೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಈಗಾಲಾದರು ನಮಗೇ ನ್ಯಾಯ ಕೊಡಿಸಿ ಎಂದು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೋನಿ ರಾಜೀವ್ ಗ್ರಾಮದ ನಿವಾಸಿಯಾಗಿದ್ದ ಯೋಧರೊಬ್ಬರು ಮನವಿ ಮಾಡಿದ್ದಾರೆ.

    ಯೋಧ ಮಂಜುನಾಥ್ ಈ ಕುರಿತು ಮನವಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೇಳೆ ತಾನು ದೇಶ ಕಾಯುವ ಕರ್ತವ್ಯದ ಮೇರೆಗೆ ಸೇನೆಗೆ ಹೋಗಿದ್ದು ನನ್ನ ಕುಟುಂಬಕ್ಕೆ ಈಗಲಾದರು ಪೊಲೀಸರು ನ್ಯಾಯ ನೀಡಿ ಎಂದು ಹೇಳಿದ್ದಾರೆ.

    ಏನಿದು ಘಟನೆ: ಮಂಜುನಾಥ್ ಸೈನ್ಯದಲ್ಲಿ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೋನಿ ರಾಜೀವ್ ಗ್ರಾಮದ ವಾಸಿಸುವ ಮಂಜುನಾಥ್ ಅವರು ತನ್ನ ತಂದೆ ಮೇಲೆ ಕೆಲವರು ಜನರು ವಿನಾಃಕಾರಣ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಸೇನಾ ಸಮವಸ್ತ್ರದಲ್ಲೇ ಬೇಸರ ವ್ಯಕ್ತಪಡಿಸಿರುವ ಮಂಜುನಾಥ್, ಅಪಘಾತದ ಪ್ರಕರಣದಲ್ಲಿ ತಂದೆ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ಆದರೆ ತನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ. ಅಪಘಾತ ಮಾಡಿದವರ ಕಡೆಯವರೆ ತನ್ನ ತಂದೆ ಮೇಲೆ ಹಲ್ಲೆ ಮಾಡಿದ್ದಾರೆ. ಆದರೂ ಪೊಲೀಸರು ಈವರೆಗೂ ತಪ್ಪು ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ನಾನು ಕರ್ತವ್ಯದಲ್ಲಿದ್ದು, ನಾನು ಮನೆಯಲ್ಲಿ ಇರುವುದಿಲ್ಲ. ದೇಶ ಕಾಯೋ ನಮಗೆ ನಮ್ಮ ತಂದೆಗೆ ಆದ ಅನ್ಯಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    https://www.youtube.com/watch?v=2aXwzCRZCbM