Tag: family

  • ತುಮಕೂರಿಗೆ ಹೇಮಾವತಿ ನೀರು ಹರಿಸಲು ಹಸ್ತಕ್ಷೇಪ – ದೇವೇಗೌಡ್ರ ಕುಟುಂಬದ ವಿರುದ್ಧ ಜನ ಆರೋಪ

    ತುಮಕೂರಿಗೆ ಹೇಮಾವತಿ ನೀರು ಹರಿಸಲು ಹಸ್ತಕ್ಷೇಪ – ದೇವೇಗೌಡ್ರ ಕುಟುಂಬದ ವಿರುದ್ಧ ಜನ ಆರೋಪ

    – ನೀರು ಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

    ತುಮಕೂರು: ಜಿಲ್ಲೆಗೆ ಹೇಮಾವತಿಯಿಂದ ಬರಬೇಕಾಗಿದ್ದ ನೀರು ಸಂಪೂರ್ಣವಾಗಿ ಬರುತ್ತಿಲ್ಲ. ಹಾಗಾಗಿ ಜಿಲ್ಲೆಯ ಕೆರೆ ಕಟ್ಟೆಗಳು ಖಾಲಿ ಖಾಲಿಯಾಗಿ ಕಾಣ್ತಿದೆ. ಅದರಲ್ಲೂ ತಿಪಟೂರು ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ನೀರಿನ ಬವಣೆಗೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವೇ ಕಾರಣ ಎಂದು ಜನ ದೂರುತ್ತಿದ್ದಾರೆ.

    ಹೌದು. ತುಮಕೂರು ಜಿಲ್ಲೆಯಲ್ಲಿ ಮತ್ತೆ ನೀರಿನ ಬವಣೆ ಎದುರಾಗಿದೆ. ತಿಪಟೂರು, ಗುಬ್ಬಿ, ಶಿರಾ ಸೇರಿದಂತೆ ಬಹುತೇಕ ತಾಲೂಕಿನ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ಪ್ರತಿವರ್ಷ ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 24.5 ಟಿ.ಎಂ.ಸಿ.ನೀರು ಬಿಡಬೇಕು. ಆದ್ರೆ 4 ರಿಂದ 5 ಟಿ.ಎಂ.ಸಿ. ನೀರು ಮಾತ್ರ ಹರಿಸಿ ಸುಮ್ಮನಾಗುತ್ತಿದ್ದಾರೆ.

    ಅಲ್ಪ ಪ್ರಮಾಣದ ನೀರಿನಿಂದ ಜಿಲ್ಲೆಯ ಯಾವ ಕೆರೆಯೂ ತುಂಬುತ್ತಿಲ್ಲ. ಕುಡಿಯೋದಕ್ಕೆ ಹಾಗೂ ಕೃಷಿಗೆ ನೀರಿಲ್ಲದೆ ರೈತರು ಸಂಕಷ್ಟಪಡುವಂತಾಗಿದೆ. ಇದಕ್ಕೆಲ್ಲ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವೇ ಕಾರಣವೆಂದು ಜನರು ದೂರುತ್ತಿದ್ದಾರೆ. ಸಚಿವ ರೇವಣ್ಣ ನೀರು ಬಿಡದಂತೆ ಹಸ್ತಕ್ಷೇಪ ಮಾಡುತ್ತಿದ್ದು, ನೆಪಮಾತ್ರಕ್ಕೆ ನೀರು ಬಿಟ್ಟು ಕೈತೊಳೆದುಕೊಳ್ಳುತ್ತಿದ್ದಾರೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹೇಮಾವತಿ ನೀರು ಬಾರದೇ ತಿಪಟೂರಿನ ಹಲವು ಏತನೀರಾವರಿ ಘಟಕಗಳು ಸದ್ಯ ಪಾಳು ಬಿದ್ದಿವೆ. ತಿಪಟೂರು ತಾಲೂಕಿನ ಗೌಡನಕಟ್ಟೆ, ಗುರುಗದಹಳ್ಳಿಗಳಲ್ಲಿನ ಕೆರೆಗಳಲ್ಲಿ ನೀರಿಲ್ಲದ ಪರಿಣಾಮ ಸುಮಾರು 13 ಕೋಟಿ ರೂ ನಿರ್ಮಾಣವಾದ ನೀರು ಸರಬರಾಜು ಘಟಕಗಳು ಪಾಳು ಬಿದ್ದಿವೆ. ಪರಿಣಾಮವಾಗಿ ಈ ಭಾಗದ ಜನರು ಕುಡಿಯಲು, ಕೃಷಿ ಚಟುವಟಿಕೆಗೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ ಅಂತ ಗೌಡನಕಟ್ಟೆ ನಿವಾಸಿ ರಾಜಶೇಖರಯ್ಯ ತಿಪಟೂರು ಹೇಳಿದ್ದಾರೆ.

    ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ತುಮಕೂರು ಜಿಲ್ಲೆಗೆ ಹರಿಸುತ್ತಿಲ್ಲ. ಈ ಬಾರಿಯೂ ನೀರು ಬಿಡದಿದ್ದರೆ ದೇವೇಗೌಡರ ಕುಟುಂಬದ ವಿರುದ್ಧ ಉಗ್ರ ಹೋರಾಟ ಮಾಡೋ ಎಚ್ಚರಿಕೆಯನ್ನು ಜಿಲ್ಲೆಯ ಜನತೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಬೆಳಗಾವಿ: ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ನಡೆದಿದೆ.

    ಮೂವರು ಯಡೂರು ಕಲ್ಲೋಳ ಬ್ರಿಡ್ಜ್ ಕಮ್ ಬಂದಾರದ ಮೇಲಿಂದ ಕೃಷ್ಣಾ ನದಿಗೆ ಹಾರಿದ್ದಾರೆ ಎಂದು ತಿಳಿದು ಬಂದಿದ್ದು, ಮೃತರು ಯಡೂರು ಗ್ರಾಮದ ಅಶೋಕ ಕಾಂಬ್ಳೆ(70) ಪತ್ನಿ ನಿರ್ಮಲಾ ಕಾಂಬ್ಳೆ(60) ಮತ್ತು ಪುತ್ರ ಅರುಣ್ ಕಾಂಬ್ಳೆ(33) ಎಂದು ಗುರುತಿಸಲಾಗಿದೆ.

    ನಾಲ್ಕು ದಿನದ ಹಿಂದೆ ಮನೆಗೆ ಬೀಗ ಹಾಕಿ ಊರು ಬಿಟ್ಟು ಬಂದಿದ್ದ ಕುಟುಂಬಸ್ಥರು ಶವವಾಗಿ ಸಿಕ್ಕಿರುವುದು ಗ್ರಾಮಸ್ಥರಿಗೂ ಆತಂಕ ಮೂಡಿಸಿದೆ. ಇವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಸಾಲ ಹಾಗೂ ಮಗನ ಮದುವೆ ಆಗದೇ ಇರುವ ಕೊರಗು ಈ ಕುಟುಂಬದಲ್ಲಿ ಇತ್ತು ಎನ್ನಲಾಗಿದೆ.

    ಘಟನೆ ನಡೆದ ಸ್ಥಳಕ್ಕೆ ಅಂಕಲಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಳಕಲ್ ಜೋಗಿಯನ್ನು ಮರಳಿ ಕುಟುಂಬಕ್ಕೆ ಸೇರಿಸ್ತು ಫೇಸ್‍ಬುಕ್ ವೈರಲ್ ವಿಡಿಯೋ!

    ಇಳಕಲ್ ಜೋಗಿಯನ್ನು ಮರಳಿ ಕುಟುಂಬಕ್ಕೆ ಸೇರಿಸ್ತು ಫೇಸ್‍ಬುಕ್ ವೈರಲ್ ವಿಡಿಯೋ!

    ಬಾಗಲಕೋಟೆ: ಐದು ವರ್ಷದಿಂದ ದೂರ ಇದ್ದ ಮಾನಸಿಕ ಅಸ್ವಸ್ಥನೊಬ್ಬ ಫೇಸ್‍ಬುಕ್ ವಿಡಿಯೋದ ಮೂಲಕ ಮರಳಿ ಕುಟುಂಬವನ್ನು ಸೇರಿದ್ದಾನೆ. ಇಳಕಲ್ ಜೋಗಿ ಎಂದೇ ಹೆಸರಾಗಿದ್ದ ನರಸಿಂಹನನ್ನು ಸಾಮಾಜಿಕ ಜಾಲತಾಣದ ವೈರಲ್ ವಿಡಿಯೋ ಮೂಲಕ ಗಮನಿಸಿದ ಕುಟುಂಬಸ್ಥರು ಮನೆಗೆ ಕರೆದೊಯ್ದಿದ್ದಾರೆ.

    ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ನರಸಿಂಹ ಕಳೆದ ಐದು ವರ್ಷದಿಂದ ನಾಪತ್ತೆಯಾಗಿದ್ದ. ಮನೆಯವರೆಲ್ಲರೂ ಹುಡುಕಿ ಸುಸ್ತಾಗಿದ್ದರು. ಮಾನಸಿಕ ಅಸ್ವಸ್ಥನಾಗಿದ್ದರೂ ನರಸಿಂಹ ಇಳಕಲ್ ನಗರದಲ್ಲಿ ಸರ್ವ ವಿಜಯ ಸಂಸ್ಥೆಯವರು ನೆಟ್ಟ ನೂರಾರು ಗಿಡಗಳಿಗೆ ಪ್ರತಿ ನಿತ್ಯ ತಪ್ಪದೇ ಬಕೆಟ್ ಹಿಡಿದು ನೀರು ಹಾಕುತ್ತಿದ್ದ.

    ತಲೆ ತುಂಬ ಕೂದಲು ಬಿಟ್ಟುಕೊಂಡು ಹುಚ್ಚನಂತಾಗಿದ್ದ ನರಸಿಂಹನನ್ನು ಎಲ್ಲರೂ ಇಳಕಲ್ ಜೋಗಿ ಎಂದೇ ಕರೆಯುತ್ತಿದ್ದರು. ಮಾನಸಿಕ ಅಸ್ವಸ್ಥನಾಗಿದ್ದರೂ ಈತನ ಗಿಡದ ಮೇಲಿನ ಪ್ರೀತಿ ಎಲ್ಲರ ಮನಮಿಡಿಯುವಂತೆ ಮಾಡಿತ್ತು. ಕೊನೆಗೆ ಗಿಡಕ್ಕೆ ನೀರು ಹಾಕೋದನ್ನು ವಿಡಿಯೋ ಮಾಡಿದ ಸ್ಥಳೀಯರು ಅದಕ್ಕೆ ಒಳಿತು ಮಾಡು ಮನಸಾ ಎಂಬ ಹಾಡನ್ನು ಅಳವಡಿಸಿ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಾಕಷ್ಟು ಜನರಿಂದ ಶೇರ್, ಲೈಕ್ಸ್, ಕಮೆಂಟ್ ಪಡೆಯುತ್ತಾ ನರಸಿಂಹನ ಕುಟುಂಬದ ಗಮನಕ್ಕೂ ಬಂದಿದೆ. ಕೂಡಲೇ ಕುಟುಂಬಸ್ಥರು ಇಳಕಲ್ ನಗರಕ್ಕೆ ಭೇಟಿ ನೀಡಿದ್ದಾರೆ.

    ಈ ವೇಳೆ ಸ್ಥಳೀಯರು ತಲೆ ತುಂಬ ಕೂದಲು ಬಿಟ್ಟಿದ್ದ ಆತನಿಗೆ ಕ್ಷೌರ ಮಾಡಿಸಿ, ಸ್ನಾನಮಾಡಿಸಿ ಹೊಸ ಟಿ-ಶರ್ಟ್ ಹಾಕಿಸಿ ಮನೆಗೆ ಕಳಿಸಿ ಕೊಟ್ಟಿದ್ದಾರೆ. ಫೇಸ್‍ಬುಕ್ ನಿಂದ ಓರ್ವ ವ್ಯಕ್ತಿ ಮರಳಿ ಮನೆ ಸೇರಿದ್ದು, ಕುಟುಂಬಸ್ಥರಿಂದ ಅಗಲಿದ ನರಸಿಂಹ ಮತ್ತೆ ಮನೆಯವರ ಜೊತೆ ಒಂದಾದ ಘಟನೆ ಎಲ್ಲರ ಮನ ಕಲಕುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯ ಅಪಘಾತ-ಕುಟುಂಬಕ್ಕೆ ಸಾಂತ್ವಾನ, ಗಾಯಾಳುಗಳನ್ನು ಭೇಟಿ ಮಾಡಿದ್ರು ನಟ ನಿಖಿಲ್

    ಮಂಡ್ಯ ಅಪಘಾತ-ಕುಟುಂಬಕ್ಕೆ ಸಾಂತ್ವಾನ, ಗಾಯಾಳುಗಳನ್ನು ಭೇಟಿ ಮಾಡಿದ್ರು ನಟ ನಿಖಿಲ್

    -ಮೃತ ಕುಟುಂಬದವರಿಗೆ 1 ಲಕ್ಷ ರೂ. ಪರಿಹಾರ ಧನ

    ಮಂಡ್ಯ: ಇತ್ತೀಚೆಗೆ ಜಿಲ್ಲೆಯ ಗುತ್ತಲು ರಸ್ತೆಯಲ್ಲಿ ನಡೆದಿದ್ದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

    ಕಳೆದ ಮಂಗಳವಾರ ಮಂಡ್ಯದ ಗುತ್ತಲು ರಸ್ತೆಯಲ್ಲಿ ಯಮಸ್ವರೂಪಿಯಾಗಿ ಬಂದ ಲಾರಿ ನಾಲ್ವರನ್ನು ಬಲಿ ಪಡೆದು, ಹತ್ತು ಮಂದಿಗೆ ಗಾಯಗಳಾಗಿತ್ತು. ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಮನೆಗೆ ನಟ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ನಿಖಿಲ್ ಬಳಿ ಮನೆಯವರು ಅಪಘಾತದ ಸನ್ನಿವೇಶವನ್ನು ವಿವರಿಸುತ್ತಾ ಕಣ್ಣೀರು ಹಾಕಿದ್ದಾರೆ. ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ ನಿಖಿಲ್, ತಮ್ಮ ಕೈಲಾದ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್, ಇಂದು ಕುಮಾರಸ್ವಾಮಿ ಅವರು ಬರಬೇಕಿತ್ತು. ಆದರೆ ಕೆಲಸದ ಒತ್ತಡದಿಂದ ಬರಲು ಸಾಧ್ಯವಾಗಿಲ್ಲ. ಅವರ ಪರವಾಗಿ ನಾನು ಜವಬ್ದಾರಿಯನ್ನು ವಹಿಸಿ ಬಂದು ಭೇಟಿ ಮಾಡಿ ಸಾಂತ್ವಾನ ಹೇಳಿದ್ದೇನೆ. ಈಗಾಗಲೇ ಸರ್ಕಾರ ಮೃತ ಕುಟುಂಬದವರಿಗೆ ತಲಾ 2 ಲಕ್ಷ ರೂ. ಹಣ ಘೋಷಿಸಿದೆ. ಜೊತೆಗೆ ಗಾಯಾಳುಗಳಿಗೆ ಚಿಕಿತ್ಸೆಯನ್ನೂ ಕೊಡಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಮೃತ ಕುಟುಂಬದವರಿಗೆ ನಿಖಿಲ್ ಕುಮಾರಸ್ವಾಮಿ ವೈಯಕ್ತಿಕವಾಗಿ ತಲಾ 1 ಲಕ್ಷ ಪರಿಹಾರ ನೀಡಿದ್ದಾರೆ. ಉದ್ಯೋಗದ ಭರವಸೆ ಕೂಡ ನೀಡಿದ್ದಾರೆ. ನಂತರ ಮಿಮ್ಸ್ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಅಪಘಾತದಲ್ಲಿ ಪತಿ-ಪತ್ನಿ ಇಬ್ಬರೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರೋ ಪತಿಗೆ ಹೆಚ್ಚು ಗಾಯವಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಪರೇಷನ್‍ಗೆ ಹಣವಿಲ್ಲ ಎಂದಾಗ ಸ್ವತಃ ನಿಖಿಲ್ ವೈದ್ಯರಿಗೆ ಕರೆ ಮಾಡಿ ನಾನು ನಿಮ್ಮನ್ನು ಬಂದು ಭೇಟಿ ಮಾಡುತ್ತೇನೆ. ಆಪರೇಷನ್‍ ಮಾಡಿ ಅಂತ ಹೇಳಿದ್ದಾರೆ. ನಿಖಿಲ್ ತಾಯಿ ಹೃದಯ ನೋಡಿದ ಸ್ಥಳೀಯ ನಾಯಕರು ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನಮ್ಮ ಶವಗಳನ್ನು ಕಾರ್ಪೊರೇಶನ್ ನಲ್ಲಿ ಬಿಸಾಕಿ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

    ನಮ್ಮ ಶವಗಳನ್ನು ಕಾರ್ಪೊರೇಶನ್ ನಲ್ಲಿ ಬಿಸಾಕಿ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

    ಮಂಡ್ಯ: ನಮ್ಮ ಶವಗಳನ್ನು ಕಾರ್ಪೊರೇಶನ್ ನಲ್ಲಿ ಬಿಸಾಕಿ ಅಂತ ಹೇಳಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಸುಂಕಾತಣ್ಣೂರು ಗ್ರಾಮದಲ್ಲಿ ನಡೆದಿದೆ.

    ನಂದೀಶ್(35), ಕೋಮಲ(28), ಚಂದನ(10), ಮೀನ(13) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾವೂ ವಿಷ ಸೇವಿಸಿ ದಂಪತಿ ಸಾವಿಗೆ ಶರಣಾಗಿದ್ದಾರೆ. ಈ ಕುಟುಂಬಕ್ಕೆ ಎರಡು ಎಕರೆ ಜಮೀನು ಹೊಂದಿದ್ದು, ಇದರಲ್ಲಿ ಕಬ್ಬು ಬೆಳೆಯುತ್ತಿದ್ದರು. ಈ ಬೆಳೆ ಬೆಳೆಯಲು ದಂಪತಿ ಸುಮಾರು 10 ಲಕ್ಷ ಬ್ಯಾಂಕ್ ಮತ್ತು ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

    ಸಿಎಂ ಭೇಟಿ ಮಾಡಿದ್ದ ದಂಪತಿ:
    ಸದ್ಯ ಕುಟುಂಬ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಹೇಳಲಾಗುತ್ತಿದೆ. ಯಾಕಂದ್ರೆ ಮೃತ ದಂಪತಿ ಈ ಹಿಂದೆ 2 ಬಾರಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದು, ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಆದ್ರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮನನೊಂದು ದಂಪತಿ ಈ ಕೃತ್ಯ ಎಸಗಿದ್ದಾರೆ. ಆತ್ಮಹತ್ಯೆಗೂ ಮುನ್ನ ದಂಪತಿ ಡೆತ್ ನೋಟ್ ಬರೆದಿಟ್ಟು ಮನವಿ ಮಾಡಿಕೊಂಡಿದ್ದಾರೆ.

    ಡೆತ್ ನೋಟ್ ನಲ್ಲೇನಿದೆ?:
    ಈ ಹಿಂದೆ ನಾವು ಕುಮಾರಸ್ವಾಮಿಯವರನ್ನು ಭೇಟಿಯಾಗಿ ನನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದೇನೆ. ಆದ್ರೆ ನಮ್ಮ ಸಮಸ್ಯೆ ಪರಿಹಾರವಾಗಿಲ್ಲ. ಇದೀಗ ನಾವು ಹೇಡಿತನದಿಂದ ಸಾಯ್ತಿಲ್ಲ. ಆದ್ರೆ ಬದುಕೋದಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನಾವು ಸಾಯ್ತಾ ಇದ್ದೀವಿ. ಕಡೆಯದೊಂದು ನಮ್ಮ ಮನವಿ ಇದೆ. ನಮ್ಮ ಮೃತದೇಹಗಳನ್ನು ಯಾರೂ ಕೂಡ ಮುಟ್ಟಬಾರದು. ನಮ್ಮ ಶವಗಳನ್ನು ಕಾರ್ಪೊರೇಷನ್ ಗೆ ಬಿಸಾಕಿ ಅಂತ ದಂಪತಿ ಡೆತ್ ನೋಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅನಾರೋಗ್ಯಕ್ಕೀಡಾಗಿರೋ ಮಗುವಿನ ಚಿಕಿತ್ಸೆಗೆ ಸಿಎಂ ಎಚ್‍ಡಿಕೆ ನೆರವಿನ ಭರವಸೆ

    ಅನಾರೋಗ್ಯಕ್ಕೀಡಾಗಿರೋ ಮಗುವಿನ ಚಿಕಿತ್ಸೆಗೆ ಸಿಎಂ ಎಚ್‍ಡಿಕೆ ನೆರವಿನ ಭರವಸೆ

    ಚಿಕ್ಕಮಗಳೂರು: ಅನಾರೋಗ್ಯಕ್ಕೀಡಾಗಿರುವ ಮಗುವಿನ ಚಿಕಿತ್ಸೆ ಕೊಡಿಸಲು ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ಬಡ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

    ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶೃಂಗೇರಿಗೆ ಭೇಟಿ ನೀಡಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆಗೆ ಶೃಂಗೇರಿಗೆ ಬಂದಿರುವ ಕುಮಾರಸ್ವಾಮಿ, ರಾತ್ರಿ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ ಶಾರದಾಂಭೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಬಡ ಕುಟುಂಬವೊಂದು ಸಿಎಂ ಅವರನ್ನು ಭೇಟಿ ಮಾಡಿದೆ.

    ಬಾಳೆಹೊನ್ನೂರು ಸಮೀಪದ ನೆಲ್ಲಿಮಕ್ಕಿಯ ದೇವರಾಜ, ಸುನಿತಾ ದಂಪತಿಯ ಐದು ವರ್ಷದ ಅಮಂತ ಅನಿಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ. ಅದಕ್ಕಾಗಿ ಪ್ರತಿ ತಿಂಗಳೂ ಚಿಕಿತ್ಸೆಗೆ 25 ಸಾವಿರ ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಚಿಕಿತ್ಸೆಗೆ ನೆರವು ನೀಡುವಂತೆ ಬಡ ದಂಪತಿ ಸಿಎಂ ಬಳಿ ಮನವಿ ಮಾಡಿಕೊಂಡಿದೆ.

    ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿಗೆ ಬನ್ನಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತೇನೆ ಎಂದು ಬಡ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆತ್ತವರು ಬುದ್ಧಿ ಹೇಳಿದ್ದಕ್ಕೆ ಆ್ಯಸಿಡ್ ಕುಡಿದು ಯುವತಿ ಆತ್ಮಹತ್ಯೆ!

    ಹೆತ್ತವರು ಬುದ್ಧಿ ಹೇಳಿದ್ದಕ್ಕೆ ಆ್ಯಸಿಡ್ ಕುಡಿದು ಯುವತಿ ಆತ್ಮಹತ್ಯೆ!

    ಕೋಲಾರ: ತಂದೆ-ತಾಯಿ ಬುದ್ಧಿ ಹೇಳಿದ್ದಕ್ಕೆ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದ ಕೆಜಿಎಫ್‍ನಲ್ಲಿ ನಡೆದಿದೆ.

    ಬಾಲಕೃಷ್ಣನ್ ನಗರ ನಿವಾಸಿ 25 ವರ್ಷದ ಸುಧಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಕುಟುಂಬದ ಕಲಹ ಹಿನ್ನೆಲೆಯಲ್ಲಿ ಪೋಷಕರು ಸುಧಾಳಿಗೆ ಬುದ್ಧಿ ಹೇಳಿದ್ದರು. ಪೋಷಕರ ಮಾತಿನಿಂದ ನೊಂದ ಯುವತಿ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ತಲೆ ಕೂದಲು ಮೇಲಿನ ಪ್ರೀತಿಗೆ ಯುವತಿ ಆತ್ಮಹತ್ಯೆ

    ಘಟನೆ ಸಂಬಂಧ ರಾಬರ್ಟ್‍ಸನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಉಪರಾಷ್ಟ್ರಪತಿಯವರ ಕುಟುಂಬಕ್ಕೆ ಪೊಲೀಸರಿಂದ ಕಿರುಕುಳ?

    ಮಾಜಿ ಉಪರಾಷ್ಟ್ರಪತಿಯವರ ಕುಟುಂಬಕ್ಕೆ ಪೊಲೀಸರಿಂದ ಕಿರುಕುಳ?

    ಬೆಂಗಳೂರು: ನಗರದ ವೈಟ್ ಫೀಲ್ಡ್ ಪೊಲೀಸರು ಮಾಜಿ ಉಪರಾಷ್ಟ್ರಪತಿಯವರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

    ಎಸಿಪಿ ಸುಧಾಮ ನಾಯಕ್, ಸಬ್ ಇನ್ಸಪೆಕ್ಟರ್ ಸೋಮಶೇಖರ್ ವಿರುದ್ಧ ಈ ಆರೋಪ ವ್ಯಕ್ತವಾಗಿದ್ದು, ಈ ಕುರಿತು ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಸೊಸೆ ಲಕ್ಷ್ಮೀ ಜತ್ತಿ ಈಗಾಗಲೇ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‍ಗೆ ಮಾಹಿತಿ ನೀಡಿದ್ದಾರೆ.

    ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಸೊಸೆ ಲಕ್ಷ್ಮೀ ಜತ್ತಿ ಅವರಿಗೆ ವಿಲ್ಲಾ ಮಾಲೀಕರು ಕಿರುಕುಳ ನೀಡುತ್ತಿದ್ದು, ಈ ಕುರಿತು ಲಕ್ಷ್ಮಿ ಅವರು ಪೊಲೀಸರಿಗೆ ದೂರು ನಿಡಿದ್ದಾರೆ. ಆದ್ರೆ ಪೊಲೀಸರು ವಿಲ್ಲಾ ಓನರ್ ಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮಾತ್ರವಲ್ಲದೇ ಎಫ್‍ಐಆರ್ ದಾಖಲಿಸಿಕೊಳ್ಳಬೇಕಾದ್ರೆ ಹಣ ನೀಡಬೇಕು ಅಂತ ವೈಟ್‍ಫೀಲ್ಡ್ ಪೊಲೀಸ್ ಠಾಣೆಯ ಎಸಿಪಿ, ಎಸ್‍ಐ ಬೇಡಿಕೆಯಿಟ್ಟಿದ್ದಾರೆ ಅಂತ ಅವರು ಆರೋಪಿಸಿದ್ದಾರೆ.

    ಈಗಾಗಲೇ ಎಸಿಪಿ ಮೂರನೇ ವ್ಯಕ್ತಿಯಿಂದ 5 ಲಕ್ಷ ಹಾಗೂ ಸಬ್ ಇನ್ಸಪೆಕ್ಟರ್ ಗೆ 2 ಲಕ್ಷ ನೀಡಿದರೂ ಮತ್ತೆ ದುಡ್ಡಿಗಾಗಿ ಕಿರುಕುಳ ನೀಡುತ್ತಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿಲ್ಲಾ ವಿಚಾರವಾಗಿ ಜತ್ತಿ ಕುಟುಂಬಕ್ಕೆ ಮತ್ತು ವಿಲ್ಲಾ ಓನರ್ ಗಳ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರದ ಜಗಳ ಕೂಡ ಕೋರ್ಟ್ ಮೆಟ್ಟಿಲಲ್ಲೂ ಇದೆ. ವಿಲ್ಲಾ ಓನರ್ ಗಳು ದೂರು ನೀಡಿದರೆ ಎಫ್‍ಐಆರ್ ದಾಖಲಿಸಿ ನಮ್ಮನ್ನ ತನಿಖೆ ಮಾಡ್ತಾರೆ. ನಾವು ದೂರು ನೀಡಿದರೆ ಎನ್ ಸಿ ಆರ್ ಹಾಕಿ ಕಳಿಸುತ್ತಾರೆ. ಆದರೂ ವಿಲ್ಲಾ ಓನರ್ ಗಳಿಂದಾಗುವ ಕಿರುಕುಳದ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಬೇಕಾದ್ರೆ ಹಣ ನೀಡಬೇಕು. ಅಷ್ಟೇ ಅಲ್ಲದೇ ತಮ್ಮ ವಿಲ್ಲಾ ಗಳಲ್ಲಿ ಒಂದು ವಿಲ್ಲಾ ತನಗೆ ನೀಡಬೇಕು ಅಂತ . ಎಸಿಪಿ ಸುಧಾಮನಾಯಕ ಬೇಡಿಕೆ ಇಟ್ಟಿರುವುದಾಗಿ ಲಕ್ಷ್ಮೀ ಜತ್ತಿ ಅವರು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸರೇ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಕುಟುಂಬಸ್ಥರಿಂದ ನಟೋರಿಯಸ್ ಕೈದಿಯನ್ನ ಭೇಟಿ ಮಾಡಿಸಿದ್ರು!

    ಪೊಲೀಸರೇ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಕುಟುಂಬಸ್ಥರಿಂದ ನಟೋರಿಯಸ್ ಕೈದಿಯನ್ನ ಭೇಟಿ ಮಾಡಿಸಿದ್ರು!

    ಮಂಗಳೂರು: ಜೈಲಿನಲ್ಲಿರುವ ಕೈದಿಗಳನ್ನು ಭೇಟಿಯಾಗಲು ಕುಟುಂಬಸ್ಥರು ದಿನವಿಡೀ ಕಷ್ಟ ಪಡುತ್ತಾರೆ. ಆದರೆ ಇಲ್ಲೊಬ್ಬ ನಟೋರಿಯಸ್ ಕೈದಿಯನ್ನು ಪೊಲೀಸರೇ ರಸ್ತೆ ಮಧ್ಯೆ ಕುಟುಂಬಸ್ಥರಿಗೆ ಭೇಟಿ ಮಾಡಿಸಿ ಕಾನೂನು ಉಲ್ಲಂಘಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳೂರಿನ ಕದ್ರಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಫರಂಗಿಪೇಟೆಯ ಡಬಲ್ ಮರ್ಡರ್ ಪ್ರಕರಣದ ಪ್ರಮುಖ ಆರೋಪಿ ಡೀಲ್ ನೌಫಾಲ್ ನನ್ನು ಪ್ರಕರಣಯೊಂದಕ್ಕೆ ಸಂಬಂಧಿಸಿ ತುಮಕೂರು ಪೊಲೀಸರು ಮಂಗಳೂರು ಜೈಲಿನಿಂದ ಕರೆದೊಯ್ದಿದ್ದರು. ತುಮಕೂರಿನ ಚಿಕ್ಕನಾಯಕನಹಳ್ಳಿ ಕೋರ್ಟಿ ಗೆ ಹಾಜರುಪಡಿಸಿ ಮಂಗಳೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಪೊಲೀಸರೇ ವಾಹನ ನಿಲ್ಲಿಸಿ ಕುಟುಂಬಸ್ಥರ ಭೇಟಿಗೆ ಅವಕಾಶ ಮಾಡಿದ್ದಾರೆ.

    ನೌಫಾಲ್ ಪತ್ನಿ, ಮಗು ಸೇರಿ ಕುಟುಂಬಸ್ಥರು ಪೊಲೀಸ್ ವಾಹನದಲ್ಲಿಯೇ ಭಾವುಕ ಭೇಟಿ ಮಾಡಿದ್ದಾರೆ. ಪೊಲೀಸರು ಜೊತೆಗಿದ್ದರೂ ವಿಚಾರಣಾಧೀನ ಕೈದಿಯನ್ನು ರಸ್ತೆ ಮಧ್ಯೆ ನಿಲ್ಲಿಸಿ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಿದ್ದು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ. ಅಷ್ಟೇ ಅಲ್ಲದೇ ಪೊಲೀಸರು ಕೈದಿಯನ್ನು ಭೇಟಿ ಮಾಡಿಸಿದ್ದ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ.

    ಈ ಸಂದರ್ಭದಲ್ಲಿ ಕೈದಿ ತಪ್ಪಿಸಿಕೊಳ್ಳುವ ಅಥವಾ ಅಪಹರಣಕ್ಕೆ ಒಳಗಾಗುವ ಸಾಧ್ಯತೆಗಳೂ ಇರುತ್ತವೆ. ಆದರೆ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಪೊಲೀಸರು ಕೈದಿಯ ಜೊತೆ ಡೀಲ್ ಮಾಡಿಕೊಂಡು ಕುಟುಂಬಸ್ಥರನ್ನು ಭೇಟಿ ಮಾಡಿಸಿದ್ದು, ಕರ್ತವ್ಯ ಲೋಪಕ್ಕೆ ನಿದರ್ಶನ ಎಂಬ ಮಾತುಗಳು ಕೇಳಿ ಬಂದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಷಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ವಿಷಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಹಾಸನ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನದ ಅರಕಲಗೂಡಿನ ದೊಡ್ಡನಾಯಕನಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಕೃಷ್ಣ(50), ಪತ್ನಿ ಮಂಜುಳಾ(40) ಮತ್ತು ಪುತ್ರಿ ಭೂಮಿಕಾ(21) ಮೃತ ದುರ್ದೈವಿಗಳು. ಆತ್ಮಹತ್ಯೆಗೂ ಮುನ್ನ ಕುಟುಂಬ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಮೂವರು ಸದಸ್ಯರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ಹೇಳಿಕೊಂಡಿದ್ದಾರೆ.

    ವೃತ್ತಿಯಲ್ಲಿ ಕೃಷಿಕರಾಗಿದ್ದ ಕೃಷ್ಣ, ತಮ್ಮ ಪುತ್ರಿಯ ಬಗ್ಗೆ ಅಪಪ್ರಚಾರ ಕುರಿತು ಬೇಸರದಿಂದ ಇದ್ದರು ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಕೃಷ್ಣರ ಮಗನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದರಿಂದ ಅಮಾನಿತರಾದ ಕುಟುಂಬಸ್ಥರು ವಿಷ ಸೇವಿಸಿದ್ದಾರೆ ಎಂದು ಮಾತುಗಳು ಕೂಡ ಕೇಳಿ ಬರುತ್ತಿವೆ.

    ಆತ್ಮಹತ್ಯೆಯ ಕಾರಣ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv