Tag: family

  • ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ 6 ಮಂದಿ ಸಾವು

    ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ 6 ಮಂದಿ ಸಾವು

    ಚೆನ್ನೈ: ಚಾಲಕನ ನಿಯಂತ್ರಣ ತಪ್ಪಿ ಕಾರು ಒಂದು ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ 6 ಜನ ಮೃತಪಟ್ಟ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಬಳಿ ನಡೆದಿದೆ.

    ಮಸಕ್ಕಳಿಪಾಳಯಂ ಪ್ರಕಾಶ್ (45), ಪತ್ನಿ ಚಿತ್ರಾ (40), ಪುತ್ರಿ ಪೂಜಾ (8), ಹಿರಿಯ ಸಹೋದರಿ ಎಸ್.ಸುಮತಿ (50), ಸಹೋದರ ಪನ್ನಿರ್ ಸೆಲ್ವಂ ಪತ್ನಿ ಲತಾ (42), ಇವರ ಪುತ್ರಿ ಧಾರಣಿ (9) ಮೃತ ದುರ್ದೈವಿಗಳು. ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದಾಗ ಪೊಲ್ಲಾ ಬಳಿಯ ಪಂಬಿಕುಲಂ ಅಲಿಯರ್ ಯೋಜನೆಯ ಕಾಲುವೆಯಲ್ಲಿ ತಡರಾತ್ರಿ 2 ಗಂಟೆಗೆ ಘಟನೆ ಸಂಭವಿಸಿದೆ.

    ಪ್ರಕಾಶ್ ಕಾರು ಚಾಲನೆ ಮಾಡುತ್ತಿದ್ದರು. ಉಡುಮಲೆಪೇಟ್-ಪೊಲ್ಲಾಚಿ ರಸ್ತೆಯಲ್ಲಿರುವ ಕೆಡಿಮೆಡು ಪ್ರದೇಶವನ್ನು ತಲುಪಿದಾಗ ಕಾರು ಪ್ರಕಾಶ್ ನಿಯಂತ್ರಣ ತಪ್ಪಿತ್ತು. ಪರಿಣಾಮ ಕಾರು ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿಗೆ ಬಿದ್ದಿದೆ. ಇದರಿಂದಾಗಿ ಕಾರಿನಿಂದ ಹೊರಬರಲು ಸಾಧ್ಯವಾಗದೇ ಸ್ಥಳದಲ್ಲಿಯೇ 6 ಜನ ಮೃತಪಟ್ಟಿದ್ದಾರೆ.

    ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗೊಮಾಂಗಲಂ ಪೊಲೀಸರು, ಕ್ರೇನ್ ಸಹಾಯದಿಂದ ಕಾರನ್ನು ಮೇಲೆತ್ತಿದ್ದಾರೆ. ಬಳಿಕ ಅದರಲ್ಲಿದ್ದ ಮೃತ ದೇಹಗಳನ್ನು ಪೊಲ್ಲಚಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುಟುಂಬದ ಐವರನ್ನು ಕೊಲೆಗೈದು ಮನೆಗೆ ಬೆಂಕಿ ಹಚ್ಚಿದ..!

    ಕುಟುಂಬದ ಐವರನ್ನು ಕೊಲೆಗೈದು ಮನೆಗೆ ಬೆಂಕಿ ಹಚ್ಚಿದ..!

    ರಾಂಚಿ: ವ್ಯಕ್ತಿಯೊಬ್ಬ ತನ್ನ ಕುಟುಂಬದ ಐವರನ್ನು ಕೊಲೆ ಮಾಡಿದಲ್ಲದೆ ಮನೆಗೆ ಬೆಂಕಿ ಹಚ್ಚಿದ ಅಮಾನವೀಯ ಘಟನೆ ಜಾರ್ಖಂಡ್‍ನ ಸೆರೈಕೇಲಾ ಜಿಲ್ಲೆಯಲ್ಲಿ ನಡೆದಿದೆ.

    ಚಿನ್ನು ಸೋರೇನ್(40) ಬಂಧಿತ ಆರೋಪಿ. ಚಿನ್ನು ಶುಕ್ರವಾರ ರಾತ್ರಿ ಕುಡಿದು ತನ್ನ ಪಕ್ಕದ ಮನೆಯಲ್ಲಿ ಇದ್ದನು. ಬಳಿಕ ಇಂದು ಬೆಳಗ್ಗೆ ತನ್ನ ಮನೆಗೆ ತೆರಳಿ ಹಿರಿಯ ಸಹೋದರ ರಬಿ ಮಂಜಿ(45)ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಚಿನ್ನು ತನ್ನ ಸಹೋದರನ ಮೇಲೆ ಹಲ್ಲೆ ಮಾಡಿದ ಬಳಿಕ ತನ್ನ ಅತ್ತಿಗೆ ಪಾರ್ವತಿ(30)ಯನ್ನು ಕೊಲೆ ಮಾಡಿದ್ದಾನೆ. ಅಲ್ಲದೆ ಆಕೆಯ ಮೂವರು ಮಕ್ಕಳಾದ ಜೀತನ್(15), ಸುರೇಶ್(13) ಹಾಗೂ ಪರೇಶ್(11) ನನ್ನು ಕೊಲೆ ಮಾಡಿದ್ದಾನೆ.

    ನಂತರ ಆರೋಪಿ ತನ್ನ ತಾಯಿ ಹಾಗೂ ಎರಡನೇ ಸಹೋದರ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಇವರಿಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿನ್ನು ಮನೆಯವರ ಮೇಲೆ ಹಲ್ಲೆ ಮಾಡಿದ ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿ ಚಂದನ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

    ಪೊಲೀಸರು ಆರೋಪಿ ಚಿನ್ನು ಸೋರೇನ್‍ನನ್ನು ಬಂಧಿಸಿದ್ದಾರೆ. ಗ್ರಾಮಸ್ಥರ ಪ್ರಕಾರ ಆರೋಪಿ ಚಿನ್ನು ಸೋರೇನ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಈ ಕೊಲೆಗೆ ನಿಖರ ಕಾರಣ ಏನು ಎಂಬುದು ಅಧಿಕೃತವಾಗಿ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಜೈಪುರ: ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಕುಟುಂಬದವರಿಗೆ ಸರ್ಕಾರ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಆದರೆ ರಾಜಸ್ಥಾನದ ಅಜ್ಮೇರ್‍ದಲ್ಲಿ ಬದುಕಿದ್ದಾಗ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ ಅಜ್ಜಿಯೊಬ್ಬರ ಹಣವೂ ಈಗ ಯೋಧರ ಕುಟುಂಬಕ್ಕೆ ಸಹಾಯವಾಗಿದೆ.

    ಭಿಕ್ಷುಕಿ ನಂದಿನಿ ಶರ್ಮಾ ಸಂಪಾದನೆ ಮಾಡಿದ್ದ ಹಣವನ್ನು ಈಗ ಹುತಾತ್ಮರ ಕುಟುಂಬಕ್ಕೆ ನೀಡಲಾಗಿದೆ. ನಂದಿನಿ ಶರ್ಮಾ 2018 ಆಗಸ್ಟ್ ರಲ್ಲಿ ಮೃತಪಟ್ಟಿದ್ದು, ಮೃತಪಡುವುದಕ್ಕೂ ಮೊದಲು ನನ್ನ ಬಳಿ ಇರುವ ಹಣವನ್ನು ದೇಶ ಮತ್ತು ಸಮಾಜಕ್ಕಾಗಿ ಬಳಸಬೇಕೆಂಬುದು ಹೇಳಿಕೊಂಡಿದ್ದರಂತೆ. ಹೀಗಾಗಿ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ 6.61 ಲಕ್ಷ ಹಣವನ್ನು ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ್ದ ಕುಟುಂಬದವರಿಗೆ ನೀಡಲಾಗಿದೆ.

    ಮೃತ ನಂದಿನಿ ಶರ್ಮಾ ಅಜ್ಮೇರ್  ಬಜರಂಗಢದಲ್ಲಿರುವ ಅಂಬೆ ಮಾತೆ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದರು. ಅವರು ಪ್ರತಿದಿನ ಗಳಿಸುತ್ತಿದ್ದ ಹಣವನ್ನು ಅಂದೇ ಬ್ಯಾಂಕಿಗೆ ಹೋಗಿ ಜಮಾ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಾವು ಸಂಪಾದಿಸಿ ಹಣವನ್ನು ಸುರಕ್ಷಿತವಾಗಿ ಬಳಸಬೇಕೆಂದು ಇಬ್ಬರು ಟ್ರಸ್ಟಿಗಳ ಬಳಿ ಸಹ ಕೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ಮೃತಪಟ್ಟ ನಂತರ ಈ ಹಣ ದೇಶಕ್ಕಾಗಿ ವಿನಿಯೋಗಿಸಬೇಕು ಎಂದು ವಿಲ್ ಬರೆದಿಟ್ಟಿದ್ದರು.

    ಶರ್ಮಾ 2018 ಮೃತಪಟ್ಟಿದ್ದಾರೆ. ಆದರೆ ಟ್ರಸ್ಟಿಗಳು ಸೂಕ್ತ ಸಮಯ ಬಂದಾಗ ಹಣವನ್ನು ದಾನ ಮಾಡಲು ಕಾಯುತ್ತಿದ್ದರು. ಇತ್ತೀಚೆಗೆ ಪುಲ್ವಾಮಾ ಉಗ್ರ ದಾಳಿಯಲ್ಲಿ 44 ಯೋಧರು ಮೃತಪಟ್ಟಿದ್ದರು. ಇದೇ ಸೂಕ್ತ ಸಮಯ ಎಂದು ಟ್ರಸ್ಟಿಗಳು ನಿರ್ಧಾರ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಹುತಾತ್ಮ ಸೈನಿಕರ ಕುಟುಂಬಕ್ಕೆ ನೀಡಲಾಗುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಟ್ರಸ್ಟ್ ಗಳಿಂದ ಹಣವನ್ನು ಪಡೆದು ಅವರಿಗೆ ರಶೀದಿ ನೀಡಲಾಗಿದೆ ಎಂದು ಅಜ್ಮೇರ್ ಜಿಲ್ಲಾಧಿಕಾರಿ ವಿಶ್ವ ಮೋಹನ್ ಶರ್ಮಾ ತಿಳಿಸಿದ್ದಾರೆ.

    ಮೃತ ಅಜ್ಜಿ ಸಂಪಾದನೆ ಮಾಡಿದ್ದ ಹಣವನ್ನು ಹುತಾತ್ಮರ ಕುಟುಂಬಕ್ಕೆ ನೀಡಲಾದ ವಿಷಯ ತಿಳಿದು ದೇವಾಲಯ ಭಕ್ತರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರಿಗೆ ಭಕ್ತರು ಯಾವಾಗಲೂ ಗೌರವ ಕೊಡುತ್ತಿದ್ದರು. ಶರ್ಮಾ ಅವರಿಗೆ ಹಣದ ಜತೆ ಊಟ, ಬಟ್ಟೆಯನ್ನು ಸಹ ದಾನ ಮಾಡುತ್ತಿದ್ದರು. ಅವರು ಪ್ರತಿದಿನ ಹಣವನ್ನು ಬ್ಯಾಂಕ್‍ನಲ್ಲಿ ಜಮೆ ಮಾಡುತ್ತಿದ್ದ ವಿಚಾರ ಬಗ್ಗೆ ನಮಗೆಲ್ಲ ತಿಳಿದಿತ್ತು ಎಂದು ದೇವಸ್ಥಾನದ ಪುರೋಹಿತರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಂಬ, ಗೋಡೆಗೆ ಡಿಕ್ಕಿ ಹೊಡೆದು ಕಾರ್ ಸ್ಫೋಟ – ಒಂದೇ ಕುಟುಂಬದ ನಾಲ್ವರ ದುರ್ಮರಣ

    ಕಂಬ, ಗೋಡೆಗೆ ಡಿಕ್ಕಿ ಹೊಡೆದು ಕಾರ್ ಸ್ಫೋಟ – ಒಂದೇ ಕುಟುಂಬದ ನಾಲ್ವರ ದುರ್ಮರಣ

    ಹಾಸನ: ಕಾರು ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಉದಯಪುರದ ಬಳಿ ನಡೆದಿದೆ.

    ವಿವೇಕ್ ನಾಯಕ್ (40), ಪತ್ನಿ ರೇಷ್ಮಾ (35), ಮಗಳು ವಿನಂತಿ (8) ಮತ್ತು ಮಗ ಸೇವಂತ್ ನಾಯಕ್ (6) ಮೃತ ದುರ್ದೈವಿಗಳು. ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ವಿವೇಕ್ ನಾಯಕ್ ಬೆಂಗಳೂರಿನ ಸ್ಪೈ ಕಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಗುರುವಾರ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ತನ್ನ ಕಾರಿನಲ್ಲಿ ಬೆಂಗಳೂರಿನಿಂದ ಹುಟ್ಟೂರು ಕುಂದಾಪುರಕ್ಕೆ ತೆರಳುತ್ತಿದ್ದರು.

    ಮುಂಜಾನೆ ಸುಮಾರು 8.30ಕ್ಕೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲೂಕಿನ ಉದಯಪುರದ ಬಳಿ ರಸ್ತೆ ಬದಿಯ ಕಂಬಕ್ಕೆ ಗುದ್ದಿದ ಕಾರು ನಂತರ ಅಲ್ಲೇ ಇದ್ದ ಶೌಚಾಲಯದ ಗೋಡೆಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಇಂಜಿನ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು ವಿವೇಕ್ ನಾಯಕ್, ರೇಷ್ಮಾ, ವಿನಂತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಗ ಸೇವಂತ್‍ಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ತಿಳಿಸಿದ್ದಾರೆ.

    ಅಪಘಾತಕ್ಕೆ ಅತಿ ವೇಗವೇ ಕಾರಣ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದಲ್ಲದೇ ಬೆಂಕಿ ಹೊತ್ತಿಕೊಂಡಿದ್ದರಿಂದ ಸಂಪೂರ್ಣ ಸುಟ್ಟು ಹೋಗಿದೆ. ಕಾರನಲ್ಲಿದ್ದ ಏರ್ ಬ್ಯಾಗ್ ಓಪನ್ ಆದರೂ ಕಾರಿನಲ್ಲಿದ್ದವರು ಹೊರ ಬರಲಾಗದೇ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನಾಲ್ವರ ಮೃತದೇಹಗಳನ್ನು ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿ ವೇಣುಗೋಪಾಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳ್ಕೊಂಡ ನೋವು ಅನುಭವಿಸಿದವರಿಗಷ್ಟೇ ಗೊತ್ತು- ಸುಮಲತಾ ಅಂಬರೀಶ್

    ಕಳ್ಕೊಂಡ ನೋವು ಅನುಭವಿಸಿದವರಿಗಷ್ಟೇ ಗೊತ್ತು- ಸುಮಲತಾ ಅಂಬರೀಶ್

    ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ ಬಲಿಯಾದ ಯೋಧ ಗುರು ಮನೆಗೆ ನಟಿ ಸುಮಲತಾ ಅಂಬರೀಶ್ ಅವರು ಇಂದು ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕುಟುಂಬ ನೋವು ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಒಬ್ಬರನ್ನು ಕಳೆದುಕೊಂಡಿರುವ ನೋವನ್ನು ಮಾತಿನಲ್ಲೇ ತುಂಬಿಸಲು ಸಾಧ್ಯವಿಲ್ಲ. ಆದ್ರೂ ನಿಮ್ಮ ನೋವಿನಲ್ಲಿ ನಾವು ಮಾತ್ರ ಅಲ್ಲ ಇಡೀ ದೇಶವೇ ಜೊತೆ ಇದೆ. ದೇಶದ ಜನ ನಿಂತು ನಿಮಗೆ ಸೆಲ್ಯೂಟ್ ಹೊಡೆಯುತ್ತೇವೆ. ನಿಮ್ಮನ್ನು ಪ್ರೀತಿಸುತ್ತಾ ಇದೆ. ನಿಮ್ಮ ಮಗನಿಂದ ದೊಡ್ಡ ಗೌರವ ನಿಮಗೆಲ್ಲರಿಗೂ ಸಿಕ್ಕಿದೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದ್ದಾರೆ.

    ನಮ್ಮ ನೋವನ್ನು ಇನ್ನೊಬ್ಬರಿಗೆ ಹೇಳಿದ್ರೆ ಅರ್ಥವಾಗಲ್ಲ. ಅದನ್ನು ಅನುಭವಿಸಿದವರಿಗೆ ಆ ನೋವು ಏನೆಂಬುದು ತಿಳಿಯುತ್ತದೆ. ಗುರು ಪತ್ನಿ ತುಂಬಾ ಚಿಕ್ಕ ಹುಡುಗಿ. ಅವಳಿಗೆ ಜೀವನದಲ್ಲಿ ಇನ್ನೂ ತುಂಬಾನೇ ಧೈರ್ಯ ತುಂಬಬೇಕಿದೆ. ಈಗಾಗಲೇ ತುಂಬಾ ಜನ ಅವರ ಪರವಾಗಿ ನಿಂತಿದ್ದಾರೆ. ಜೊತೆಗೆ ನಾವು ಒಂದು ಸಣ್ಣ ಸೇವೆಯನ್ನು ಮಾಡಿದ್ದೇವೆ ಅಂದ್ರು.

    ಜಮೀನು ಹಸ್ತಾಂತರದ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಇದು ನಮ್ಮ ಕರ್ತವ್ಯ ಅಂತ ಹೇಳಿದ್ದೇನೆ. ನಾವು ಮಾಡಬೇಕಾಗಿರೋ ಕನಿಷ್ಟ ಧರ್ಮ ಇದಾಗಿದೆ. ಒಪ್ಪಿಕೊಂಡರೆ ನಮ್ಮ ಪುಣ್ಯ. ಇದರಿಂದ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ, ತೃಪ್ತಿ ಸಿಗುತ್ತದೆ ಎಂದು ಹೇಳಿದೆ. ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಮುಂದಿನ ಪ್ರಕ್ರಿಯೆ ಆರಂಭಿಸುವುದಾಗಿ ಅವರು ಹೇಳಿದ್ರು.

    ಇಂದು ಜಿಲ್ಲೆಯ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಬಳಿಕ ಬಸವನ ಆಶೀರ್ವಾದ ಪಡೆದು, ಕಾಣಿಕೆ ಸಲ್ಲಿಸಿದ ಬಳಿಕ ಅವರು ಗುರು ಮನೆಗೆ ತೆರಳಿ ಸಾಂತ್ವನ ತಿಳಿಸಿದ್ದಾರೆ.

    ಫೆ.14ರಂದು ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

    https://www.youtube.com/watch?v=u3eOKo1jwdw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧನ ಕುಟುಂಬಕ್ಕೆ 1 ದಿನದ ದುಡಿಮೆ ನೀಡಿದ್ರು ಗೋಬಿ ಮಂಚೂರಿ ವ್ಯಾಪಾರಿ!

    ಹುತಾತ್ಮ ಯೋಧನ ಕುಟುಂಬಕ್ಕೆ 1 ದಿನದ ದುಡಿಮೆ ನೀಡಿದ್ರು ಗೋಬಿ ಮಂಚೂರಿ ವ್ಯಾಪಾರಿ!

    ಮಂಡ್ಯ: ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ವೀರ ಯೋಧ ಗುರು ಕುಟುಂಬಕ್ಕೆ ಗೋಬಿ ಮಂಚೂರಿ ವ್ಯಾಪಾರಿಯೊಬ್ಬರು ತಮ್ಮ ಒಂದು ದಿನದ ದುಡಿಮೆಯನ್ನು ನೀಡಿ ಗೌರವ ಸಲ್ಲಿಸಿದ್ದಾರೆ.

    ಮಂಡ್ಯದ ಹೊಳಲು ವೃತ್ತದಲ್ಲಿರುವ ವ್ಯಾಪಾರಿ ಉಪ್ಪಿಗೋವಿಂದ ಅವರು ಒಂದು ದಿನದ ದುಡಿಮೆಯನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಗುಡಿಗೆರೆ ಯೋದ ಗುರು.ಎಚ್. ಮಡಿವಾಳ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಂಗಳವಾರ ವ್ಯಾಪಾರ ಆರಂಭಿಸಿದ್ದರು. ಆಹಾರ ಸೇವಿಸಿದ ಯಾರ ಬಳಿಯೂ ಹಣ ಪಡೆಯದೇ ಯೋಧರ ನೆರವಿಗೆ ನಿಮ್ಮ ಕೈಲಾದ ಹಣವನ್ನು ಹುಂಡಿಗೆ ಹಾಕಿ ಎಂದು ಮನವಿ ಮಾಡಿದ್ದರು.

    ಆಹಾರ ಸೇವಿಸಿದವರು ನೀಡಿದ ಹಣ ಸುಮಾರು 10 ಸಾವಿರ ರೂ. ಸಂಗ್ರಹವಾಗಿತ್ತು. ಸಂಗ್ರಹವಾದ ಹಣವನ್ನು ಬುಧವಾರ ಉಪ್ಪಿಗೋವಿಂದ ಅವರು ವೀರ ಯೋಧ ಗುರು ಕುಟುಂಬಕ್ಕೆ ನೀಡಿದ್ದಾರೆ.

    ಇಂದು ಯೋಧರು ತಮ್ಮ ಮಕ್ಕಳು, ಕುಟುಂಬದವರಿಂದ ದೂರ ಇದ್ದು ದೇಶ ಕಾಯುತ್ತಿದ್ದಾರೆ. ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ನಡೆಸುತ್ತಿದ್ದಾರೆ. ಆದ್ದರಿಂದ ಒಂದು ದಿನ ಸಂಪಾದನೆ ಮಾಡಿದ ಹಣವನ್ನು ವೀರ ಯೋಧ ಗುರು ಮೃತರ ಕುಟುಂಬಕ್ಕೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

    ಸರ್ಕಾರ ಎಷ್ಟೇ ಹಣ ಕೊಟ್ಟರು, ಸಾರ್ವಜನಿಕರು ತಮ್ಮ ಕೈಲಾದ ಸಹಾಯ ಮಾಡುವುದರಿಂದ ಮುಂದೆ ಅವರ ಮಕ್ಕಳನ್ನು ಯೋಧರಾಗಿ ಮಾಡಲು ಬಯಸುತ್ತಾರೆ. ಇದನ್ನು ನನ್ನ ಆತ್ಮ ತೃಪ್ತಿಗಾಗಿ ಮಾಡುತ್ತಿದ್ದೇನೆ ಎಂದು ಉಪ್ಪಿಗೋವಿಂದ ಹೇಳಿದರು.

    https://www.youtube.com/watch?v=vw7lk_ueU98

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ಅಧಿಕಾರಿಗಳಿಂದ ನಿವೃತ್ತ ಸೈನಿಕನ ಕುಟುಂಬಕ್ಕೆ ಅನ್ಯಾಯ!

    ಸರ್ಕಾರಿ ಅಧಿಕಾರಿಗಳಿಂದ ನಿವೃತ್ತ ಸೈನಿಕನ ಕುಟುಂಬಕ್ಕೆ ಅನ್ಯಾಯ!

    ತುಮಕೂರು: ಸೈನಿಕರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ದೇಶವನ್ನು ಕಾಯುತ್ತಾರೆ. ಇದಕ್ಕೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯೇ ಸಾಕ್ಷಿ. ಹೀಗಿರುವಾಗ ಸರ್ಕಾರ ಇಂತಹ ಯೋಧರ ಕುಟಂಬದ ಸಹಾಯಕ್ಕೆ ಎಷ್ಟರ ಮಟ್ಟಿಗೆ ಬರುತ್ತೆ ಎನ್ನುವ ಪ್ರಶ್ನೆ ಎದುರಾಗಿದೆ. ಜಿಲ್ಲೆಯ ಸೈನಿಕರಿಗೆ ಸರ್ಕಾರಿ ಅಧಿಕಾರಿಗಳು ನೀಡುತ್ತಿರುವ ಕಿರುಕುಳದಿಂದ ಈ ಪ್ರಶ್ನೆ ಎದ್ದಿದೆ.

    ಕುಣಿಗಲ್ ತಾಲೂಕಿನ ಸೂಳೆಕೊಪ್ಪದ ನಿವೃತ್ತ ಸೈನಿಕ ಆರ್. ಸಿದ್ದಲಿಂಗಯ್ಯರ ಕುಟುಂಬವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಸರ್ಕಾರದಿಂದ ನೀಡುವ ಭೂಮಿಗೆ ಕಳೆದ 20 ವರ್ಷಗಳಿಂದ ನಿವೃತ್ತ ಯೋಧನ ಕುಟುಂಬ ಅಲೆದಾಡುತ್ತಿದೆ. ಆದರೂ ಕೂಡ ತಾಲೂಕಿನ ಕಂದಾಯ ಅಧಿಕಾರಿಗಳು ಭೂಮಿ ಮಂಜೂರು ಮಾಡಲು ಮೀನ-ಮೇಷ ಎಣಿಸುತ್ತಿದ್ದಾರೆ.

    ಆರ್. ಸಿದ್ದಲಿಂಗಯ್ಯ ಸೇನೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತಿಯಾಗಿದ್ದರು. ಸರ್ಕಾರಿ ಭೂಮಿಗಾಗಿ 1996ರಲ್ಲಿ ಅರ್ಜಿ ಹಾಕಿದ್ದರು. ಬಳಿಕ 1998ರಲ್ಲಿ ಅನಾರೋಗ್ಯದಿಂದ ತೀರಿಹೋಗಿದ್ದರು. ಸಿದ್ದಲಿಂಗಯ್ಯ ಮೃತಪಟ್ಟ ನಂತರ ಕುಟುಂಬಕ್ಕೆ ಜಮೀನು ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಇದೂವರೆಗೆ ಜಮೀನು ಮಂಜೂರು ಮಾಡಿಲ್ಲ.

    ತೆರೆದಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂಬರ್ 12 ರಲ್ಲಿ 4 ಎಕರೆ ಜಮೀನನ್ನು ಯೋಧನ ಕುಟುಂಬವೇ ಗುರುತಿಸಿಕೊಟ್ಟಿದೆ. ಸತತ 20 ವರ್ಷಗಳಿಂದ ಯೋಧನ ಪತ್ನಿ ಸ್ವರೂಪರಾಣಿ ಕಚೇರಿಗಳಿಗೆ ಅಲೆದು ಅಲೆದು ಹೈರಾಣಾಗಿದ್ದಾರೆ.

    ಯೋಧರು ಹುತಾತ್ಮರಾದಾಗ ಸರ್ಕಾರಗಳು ದಿಢೀರ್ ಅನುಕಂಪ ತೋರಿಸಿ ಸೈನಿಕನ ಕುಟುಂಬದ ಜೊತೆ ನಾವಿದ್ದೇವೆ. ಯಾವೊಬ್ಬ ಸೈನಿಕರಿಗೆ ಕಷ್ಟವಾಗದಂತೆ ನಾವು ನೋಡಿಳ್ಳುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಈ ಎಲ್ಲ ಹೇಳಿಕೆಗಳು ಕೆಲ ದಿನಗಳಲ್ಲಿ ಮೂಲೆಗೆ ಸೇರುತ್ತವೆ. 20 ವರ್ಷದಿಂದ ನಾವು ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ನಮಗೆ ಜಾಗವನ್ನು ಮಂಜೂರು ಮಾಡಿಲ್ಲ ಎಂದು ಸ್ವರೂಪರಾಣಿ ದು:ಖ ವ್ಯಕ್ತ ವ್ಯಕ್ತಪಡಿಸಿ ಅಕ್ರೋಶ ಹೊರ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಟುಂಬದ ಜೊತೆ ರಕ್ತದಾನ ಮಾಡಿ ನುಡಿದಂತೆ ನಡೆದ ಶಶಿಕುಮಾರ್!

    ಕುಟುಂಬದ ಜೊತೆ ರಕ್ತದಾನ ಮಾಡಿ ನುಡಿದಂತೆ ನಡೆದ ಶಶಿಕುಮಾರ್!

    ಬೆಂಗಳೂರು: ಬಿಗ್ ಬಾಸ್ ಸೀಸನ್ – 6ರ ವಿನ್ನರ್, ಆಧುನಿಕ ರೈತ ಶಶಿಕುಮಾರ್ ಅವರು ಇಂದು ತಮ್ಮ ಕುಟುಂಬ ಸಮೇತ ರಕ್ತದಾನ ಮಾಡಿ ತಾವು ಈ ಹಿಂದೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.

    ಶಶಿ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೊಸ ವರ್ಷದಂದು ಕುಟುಂಬ ಸಮೇತ ರಕ್ತದಾನ ಮಾಡುತ್ತೇವೆ. ಅಷ್ಟೇ ಅಲ್ಲದೇ ಅಂಗಾಂಗ ದಾನಕ್ಕೆ ಅನುಮತಿ ನೀಡುತ್ತೇವೆ ಎಂದು ಸಂಕಲ್ಪ ಮಾಡಿದ್ದರು. ಈ ಸಂಕಲ್ಪವನ್ನು ಪೂರ್ಣಗೊಳಿಸಲು ಶಶಿ ಹಾಗೂ ಅವರ ಕುಟುಂಬದ 15 ಜನ ರಕ್ತದಾನ ಮಾಡಿದ್ದಾರೆ.

    ಶಶಿ ಕುಟುಂಬ ಸಮೇತ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿದ್ದಾರೆ. ಶಶಿಕುಮಾರ್ ಅವರು ಮೊದಲಿನಿಂದಲೂ ರಕ್ತದಾನ ಮಾಡುತ್ತಿದ್ದು, ಇದುವರೆಗೂ ಅವರು 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ.

    ಬಿಗ್ ಬಾಸ್ ಪಟ್ಟ ಪಡೆದ ಬಳಿಕ ಮಾತನಾಡಿದ ಶಶಿ, ಇದು ನನ್ನೊಬ್ಬನ ಗೆಲುವಲ್ಲ, ಇದು ಎಲ್ಲರ ಗೆಲುವು ಎಂದು ಹೇಳಿದ್ದರು. ನನಗೆ ಬಂದ ಬಹುಮಾನದ ಹಣವನ್ನು ರೈತಾಪಿ ವರ್ಗದ ಕಲ್ಯಾಣಕ್ಕೆ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಮತ್ತು ಬೇಸಾಯದತ್ತ ಯುವಕರನ್ನು ಸೆಳೆಯುವುದಕ್ಕೆ ಬಳಸುವುದಾಗಿ ಹೇಳಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬುದ್ಧಿಜೀವಿಗಳ ವಿರುದ್ಧ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗರಂ

    ಬುದ್ಧಿಜೀವಿಗಳ ವಿರುದ್ಧ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗರಂ

    – ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವಾನ, ಪರಿಹಾರ

    ಮಂಡ್ಯ: ಬುದ್ಧಿ ಜೀವಿಗಳನ್ನು ದೇಶದಿಂದ ಓಡಿಸಿದ್ರೆ ಎಲ್ಲವೂ ಚೆನ್ನಾಗಿರುತ್ತದೆ. ಅವರು ನಾನ್ ಸೆನ್ಸ್ ಮಾಡುತ್ತಿದ್ದಾರೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬುದ್ಧಿ ಜೀವಿಗಳು ಮಾತುಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರನ್ನು ಓಡಿಸಿದ್ರೆ ದೇಶ ಚೆನ್ನಾಗಿರುತ್ತದೆ. ಇದಕ್ಕೆ ತಕ್ಕ ಉತ್ತರ ಕೊಡಬೇಕು. ದೊಡ್ಡ ಮಟ್ಟದ ವಾರ್ ಡಿಕ್ಲೇರ್ ಮಾಡಬೇಕು. ಐಡೆಂಟಿಟಿ ಕ್ರೈಸಿಸ್‍ನಿಂದ ಕೆಲವರು ಮಾತಾಡ್ತಾರೆ. ವಂದೇ ಮಾತರಂ ಅಂದ್ರೆ ಗುಂಡಾಕ್ತಾರೆ. ಪಾಕಿಸ್ತಾನಕ್ಕೆ ಜೈಕಾರ ಕೂಗುವವರಿಗೆ ಹುಚ್ಚು ಹಿಡಿದಿದೆ. ಇದಕ್ಕೆ ಕೆಲವೊಂದು ರಾಜಕಾರಣ ಕಾರಣವಾಗಿದೆ. ಈ ರೀತಿ ಕೂಗಿದ್ರೆ ಗುರುತಿಸಿಕೊಳ್ಳಬಹುದು ಅಂದುಕೊಂಡಿದ್ದಾರೆ. ಅವರನ್ನು ಮಟ್ಟ ಹಾಕಬೇಕು ಎಂದು ವಾಗ್ದಾಳಿ ನಡೆಸಿದ್ರು.

    ಗುರು ಕುಟುಂಬದವರಿಗೆ ಸಮಾಧಾನ ಹೇಳೋದು ಬಿಟ್ಟರೆ ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳೋದಕ್ಕೆ ಹೆಮ್ಮೆಯಾಗುತ್ತಿದೆ. ನಾವಂತೂ ಬಾರ್ಡರ್ ನಲ್ಲಿ ಹೋಗಿ ದೇಶ ಕಾಯೋ ಕೆಲಸ ಮಾಡಿಲ್ಲ. ಇಲ್ಲಿ ಆರಾಮಾಗಿದ್ದೇವೆ. ಅವರು ನಮ್ಮನ್ನು ಕಾಯುತ್ತಿರುವುದರಿಂದ ನಾವು ಆರಾಮವಾಗಿರಲು ಕಾರಣ ಎಂದು ಅವರು ಹೇಳಿದ್ರು. ಇದನ್ನೂ ಓದಿ; ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

    ನಾವೆಲ್ಲ ಹೋಗಿ ನಿಮ್ಮ ಜೊತೆ ಇದ್ದೇವೆ ಅಂದ್ರೆ ಅವರಿಗೂ ಸ್ವಲ್ಪ ಧೈರ್ಯ ಬರುತ್ತದೆ. ಯಾಕಂದ್ರೆ ಅವರಿಗೆ ನನ್ನ ಮಗನನ್ನು ಯಾಕಾದ್ರೂ ಸೇನೆಗೆ ಕಳುಹಿಸಿದೆ ಎಂಬಂತಾಗಬಾರದು. ಹೀಗಾಗಿ ಇಡೀ ದೇಶ, ರಾಜ್ಯ ನಮ್ಮ ಜೊತೆಗಿದೆ ಅನ್ನೋ ಭಾವನೆ ತರಿಸಬೇಕು. ಅವರು ಯಾವತ್ತೂ ಮುಂದೆ ನೊಂದುಕೊಳ್ಳಬಾರದು ಎಂದು ಅವರು ತಿಳಿಸಿದ್ರು. ಇದನ್ನೂ ಓದಿ; ಬುದ್ಧಿಜೀವಿಗಳಿಗೆ ಶಾಸಕ ರಾಜುಗೌಡ ಎಚ್ಚರಿಕೆ

    ನಾನು ಕೂಡ ರಿಕ್ಕಿ ಸಿನಿಮಾದ ಶೂಟಿಂಗ್ ಗೆ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿ ಹೋಗಿದ್ದ ನಾನು ಅವರನ್ನು ಗಮನಿಸಿದಂತೆ ಅವರೂ ದಿನದ 24 ಗಂಟೆಯೂ ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿಯೊಂದನ್ನು ಚೆಕ್ ಮಾಡುತ್ತಿದ್ದರು. ಅಲ್ಲಿ ಏನೇ ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಅವರ ಗಮನ ಇರುತ್ತಿತ್ತು. ಇದನ್ನೂ ಮೀರಿ ಕೆಲವರು ನಮ್ಮ ದೇಶದ ಒಳಗೆ ನುಗಿ ಇಂತಹ ಹೇಯ ಕೃತ್ಯಗಳನ್ನು ನಡೆಸುತ್ತಾರೆ ಅಂದ್ರೆ ಒಳಗೆನೂ ಅವರಿಗೆ ಬೆಂಬಲ ಇರಬಹುದು ಎಂದು ದೇಶದ್ರೋಹಿಗಳ ವಿರುದ್ಧ ಗರಂ ಆದ್ರು.

    ಗುರು ಇಡೀ ದೇಶದ ಹೆಮ್ಮೆ. ಏನೇ ಸಹಾಯ ಮಾಡಿದ್ರು ನೋವನ್ನು ಬರಿಸಲು ಆಗಲ್ಲ. ಇಡೀ ದೇಶ ಜೊತೆ ಇದೆ ಎಂಬುದನ್ನು ತೋರಿಸಿದ್ರೆ ತಾಯಿಗೆ ಧೈರ್ಯ ಇರುತ್ತೆ. ಪರಿಹಾರ ಕೊಟ್ಟರೆ ನೋವನ್ನು ಬರಿಸಲು ಆಗಲ್ಲ. ನಾನು ನೀಡಿದ ಹಣ ನನ್ನದಲ್ಲ. ಸರ್ಕಾರಿ ಶಾಲೆ ಸಿನಿಮಾ ನೋಡಿ ಜನ ಕೊಟ್ಟ ಹಣ. ಅದನ್ನು ಈ ರೀತಿಯ ಸೇವೆಗೆ ಬಳಸುತ್ತಿದ್ದೇನೆ. ಉಗ್ರರ ಕೃತ್ಯಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ರು.

    ಬಳಿಕ ಬೆಲ್‍ಬಾಟಂ ಚಿತ್ರ ತಂಡ ಗುರು ಅವರನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ವಂದನೆ ಸಲ್ಲಿಸಿತ್ತು. ಇದೇ ವೇಳೆ ನಟಿ ಹರಿಪ್ರಿಯ ಅವರು ಹುತಾತ್ಮ ಯೋಧ ಗುರು ಮನೆಯವರ ದುಃಖ ನೋಡಿ, ತಂದೆಯ ಸಾವನ್ನು ನೆನೆದು ಕಣ್ಣೀರಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

    ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

    ಮಂಡ್ಯ: ಹುತಾತ್ಮ ಗುರು ಅವರ ಮನೆಗೆ ರಾಜಕಾರಣಿಗಳು, ಅಧಿಕಾರಿಗಳು, ಸೇನೆ ಅವರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಈಗ ‘ಬೆಲ್ ಬಾಟಮ್’ ಚಿತ್ರ ತಂಡ ಗುರು ಅವರ ಮನೆಗೆ ಹೋಗಿ ಸಹಾಯ ಧನ ನೀಡಿ ಅವರ ತಾಯಿ, ಪತ್ನಿಗೆ ಸಾಂತ್ವನ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಹರಿಪ್ರಿಯಾ, ಸಿನಿಮಾ ಮಾಡುವಾಗ ಗಡಿಯನ್ನು ನೋಡಿದ್ದೇನೆ. ನಮ್ಮನ್ನು ಕಾಯುವವರು ಅಗಲಿದಾಗ ನೋವಾಗುತ್ತದೆ. ನಾವು ಉಗ್ರರಿಗೆ ಉತ್ತರ ಕೊಡಬೇಕು. ಮತ್ತೆ ಈ ರೀತಿ ಆಗಬಾರದು. ಅವರ ಪತ್ನಿಯನ್ನು ನನ್ನಿಂದ ನೋಡಲು ಆಗುತ್ತಿಲ್ಲ. ಕಾಶ್ಮೀರ ಭಾಗದಲ್ಲಿ ಚಿತ್ರೀಕರಣಕ್ಕೆ ಹೋಗಿ ಬಂದಿದ್ದಕ್ಕೆ ನನ್ನ ತಾಯಿ ಭಯ ಪಟ್ಟಿದ್ದರು. ಇನ್ನೂ ದೇಶ ಕಾಯುವ ಯೋಧರ ತಾಯಿಯರ ಪರಿಸ್ಥಿತಿ ಏನು? ಎಂದು ಪ್ರಶ್ನೆ ಮಾಡಿ ಕಣ್ಣೀರು ಹಾಕಿದರು.

    ಹುತಾತ್ಮ ಯೋಧ ಗುರು ಮನೆಯವರ ದುಃಖ ನೋಡಿ, ತಂದೆಯ ಸಾವನ್ನು ನೆನೆಪಿಸಿಕೊಂಡು ಹರಿಪ್ರಿಯಾ ಕಣ್ಣೀರು ಹಾಕಿದ್ದಾರೆ. ಒಂದು ಕುಟುಂಬದಲ್ಲಿ ಯಾರನ್ನೇ ಕಳೆದುಕೊಂಡರು ನೋವಾಗುತ್ತದೆ. ಆ ನೋವು ನಮ್ಮ ತಂದೆಯನ್ನು ಕಳೆದುಕೊಂಡಾಗ ನನಗೆ ಆಗಿದೆ. ಆದರೆ ಯೋಧ ಗುರು ಅವರ ಪತ್ನಿ, ತಾಯಿ ನೋಡಿದರೆ ತುಂಬಾ ನೋವಾಗುತ್ತದೆ. ಇಡೀ ಭಾರತ, ಇಂತಹ ಎಲ್ಲ ತಾಯಂದಿರಿಗೆ ಸಹಾಯ ಮಾಡಲು ನಾವಿದ್ದೇವೆ. ಅವರು ತಮ್ಮ ಮಕ್ಕಳನ್ನು ದೇಶ ಕಾಯಲು ಕಳುಹಿಸಿದ್ದಕ್ಕೆ ನಾವು ಇಷ್ಟು ಆರಾಮಾಗಿದ್ದೇವೆ. ಹೀಗಾಗಿ ಅವರಿಗೆಲ್ಲ ಒಂದು ಸೆಲ್ಯೂಟ್. ನಾವೆಲ್ಲ ಅವರ ಮಕ್ಕಳು ಎಂಬಂತೆ ಹುತಾತ್ಮ ಯೋಧನ ಕುಟುಂಬದ ಜೊತೆ ಇರಬೇಕು. ಆದರೂ ನಮ್ಮಿಂದ ಅವರ ಮಗನ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಧೈರ್ಯ ಇದ್ದಿದ್ದರೆ ಉಗ್ರರು ನೇರವಾಗಿ ಬಂದು ಹೊಡೆದಾಡಬೇಕಿತ್ತು. ಈ ರೀತಿ ಹೇಡಿಗಳಾಗಿ ಬಂದು ಕೊಲ್ಲುವುದು ಸರಿಯಲ್ಲ. ಇದಕ್ಕೆ ಆದಷ್ಟು ಬೇಗ ಉತ್ತರ ಕೊಟ್ಟರೆ ದೇಶ ಜನ ಖುಷಿಯಾಗುತ್ತಾರೆ. ದೇಶ ಸೇವೆಯಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಿಯರಿಗೆ ಖುಷಿ ಆಗುತ್ತದೆ. ಕೊನೆಯ ಪಕ್ಷ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರ ಆತ್ಮಕ್ಕೆ ಒಂದು ಸಮಾಧಾನ ಸಿಗುತ್ತದೆ. ನಮ್ಮ ದೇಶದ ಅನ್ನ ತಿಂದು, ನಮ್ಮ ನೆಲದಲ್ಲಿ ಇದ್ದುಕೊಂಡು, ಬೇರೆ ಅವರಿಗೆ ಸಹಾಯ ಮಾಡುತ್ತಾರೆ. ಅಂತಹವರು ಯಾಕಿಲ್ಲಿರಬೇಕು? ಇಲ್ಲಿ ಇರುವುದಕ್ಕೆ ಅವರು ಅರ್ಹರೇ ಅಲ್ಲ. ಮೊದಲು ಅವರನ್ನು ದೇಶದಿಂದ ಹೊರ ಹಾಕಬೇಕು ಎಂದು ಉಗ್ರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ನಿರ್ದೆಶಕ ರಿಷಬ್ ಶೆಟ್ಟಿ, ನಟಿ ಹರಿಪ್ರಿಯಾ ಹಾಗೂ ನಿರ್ಮಾಪಕ ಸಂತೋಷ್ ಕುಮಾರ್ ಸೇರಿದಂತೆ ಸಿನಿಮಾದ ಕಲಾವಿದರು ಗುರು ಅವರ ಮನೆಗೆ ಹೋಗಿದ್ದರು. ಯೋಧ ಗುರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ. ಬಳಿಕ ನಿರ್ಮಾಪಕ ಸಂತೋಷ್ ಕುಮಾರ್ 25 ಸಾವಿರ ರೂ. ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು 50 ಸಾವಿರ ರೂ. ಚೆಕ್ ವಿತರಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv