Tag: family

  • ಅಂತರ್ಜಾತಿ ವಿವಾಹ, ಎರಡು ಕುಟುಂಬದ ನಡುವೆ ಗಲಾಟೆ – ಇಬ್ಬರ ಕೈ ಬೆರಳು ಕಟ್

    ಅಂತರ್ಜಾತಿ ವಿವಾಹ, ಎರಡು ಕುಟುಂಬದ ನಡುವೆ ಗಲಾಟೆ – ಇಬ್ಬರ ಕೈ ಬೆರಳು ಕಟ್

    ಕಾರವಾರ: ಅಂತರ್ಜಾತಿ ವಿವಾಹ ಸಂಬಂಧವಾಗಿ ಎರಡೂ ಕುಟುಂಬಗಳು ಬಡಿದಾಡಿಕೊಂಡು ಯುವಕನ ಕುಟುಂಬದ ಆರು ಜನರು ಗಂಭೀರ ಗಾಯಗೊಂಡ ಘಟನೆ ಬನವಾಸಿಯಲ್ಲಿ ನಡೆದಿದೆ.

    ಬನವಾಸಿಯ ಕೃಷ್ಣಚೆನ್ನಯ್ಯ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಕುನವಳ್ಳಿಯ ಮಡಿವಾಳ ಜನಾಂಗದ ಯುವತಿಯನ್ನು ಪ್ರೀತಿಸಿದ್ದು, ಎಂಟು ದಿನದ ಹಿಂದೆ ಬೆಂಗಳೂರಿನಲ್ಲಿ ಮದುವೆಯಾಗಿದ್ದರು.

    ಯುವಕ ದಲಿತ ಎಂಬ ಕಾರಣಕ್ಕೆ ಯುವತಿಯ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮದುವೆ ಮಾಡಿಕೊಂಡು ಜೋಡಿಗಳು ಇಂದು ಬೆಂಗಳೂರಿನಿಂದ ಊರಿಗೆ ಬಂದಿದ್ದಾರೆ. ಈ ಮದುವೆಗೆ ಯಾವುದೇ ಅಧಿಕೃತ ದಾಖಲೆ ಇಲ್ಲದನ್ನು ತಿಳಿದ ಯುವತಿ ಕುಟುಂಬದವರು ಯುವತಿಯನ್ನು ಅಪಹರಿಸಿ ಕರೆದುಕೊಂಡು ಹೋಗಲು ಬನವಾಸಿಗೆ ಬಂದಿದ್ದಾರೆ.

    ಈ ವೇಳೆ ಮನೆಯಲ್ಲಿ ಮದುವೆಯಾದ ನವ ಜೋಡಿಗಳು ಇರಲಿಲ್ಲ. ಇದರಿಂದ ಕೋಪಗೊಂಡ ಯುವತಿಯ ಚಿಕ್ಕಪ್ಪ ಹೊಳಿಯಪ್ಪ ಶಾನವಳ್ಳಿ ಮತ್ತು ಸಂಬಧಿಕರು ಯುವಕನ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಎರಡೂ ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು ಯುವಕನ ಸಹೋದರ ಹಾಗೂ ಮಾವನಿಗೆ ಮಚ್ಚಿನಿಂದ ಹೊಡೆದಿದ್ದು ಬೆರಳುಗಳು ತುಂಡಾಗಿವೆ. ಈ ಬಡಿದಾಟದಲ್ಲಿ ಒಟ್ಟು ಆರು ಜನರಿಗೆ ಗಂಭೀರ ಗಾಯವಾಗಿದೆ.

    ಗಾಯಾಳುಗಳನ್ನು ಬನವಾಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಎರಡೂ ಕುಟುಂಬದ ವಿರುದ್ಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಗಸದಲ್ಲಿ ಅಪ್ಪು ರೋಚಕ ಸಾಹಸಯಾನ!

    ಆಗಸದಲ್ಲಿ ಅಪ್ಪು ರೋಚಕ ಸಾಹಸಯಾನ!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಲ್ಲಿ ಆಗಸದಲ್ಲಿ ಸಾಹಸ ಮಾಡಿದ್ದಾರೆ.

    ಸದ್ಯ ದಕ್ಷಿಣ ಅಮೆರಿಕದಲ್ಲಿ ಕುಟುಂಬಸ್ಥರೊಂದಿಗೆ ಪುನಿತ್ ರಾಜ್‍ಕುಮಾರ್ ಬೇಸಿಗೆ ರಜೆ ಕಳೆಯುತ್ತಿದ್ದಾರೆ. ಈ ವೇಳೆ ದಕ್ಷಿಣ ಅಮೇರಿಕಾದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡುತ್ತಾ ಹಾಲಿಡೇ ಸಂಭ್ರಮದಲ್ಲಿದ್ದಾರೆ.

    ಈ ಪ್ರವಾಸದ ವೇಳೆ ಪುನೀತ್ ರಾಜ್‍ಕುಮಾರ್ ಸ್ಕೈ ಡೈವಿಂಗ್ ಮಾಡಿದ್ದು, ಈ ರೋಮಾಂಚನ ಸಾಹಸದ ದೃಶ್ಯಗಳನ್ನು ಪಿಆರ್‌ಕೆ ಸ್ಟೂಡಿಯೋ ಅಧಿಕೃತ ಯೂ ಟ್ಯೂಬ್ ಚಾನೆಲಿನಲ್ಲಿ ಅಪ್ಲೋಡ್ ಆಗಿದೆ.

    ಪುನೀತ್ ಸ್ಕೈ ಡೈವಿಂಗ್ ದೃಶ್ಯಗಳು, ಬೋಟಿಂಗ್, ಜಲಪಾತ, ದಕ್ಷಿಣ ಅಮೇರಿಕದ ಸುಂದರ ಪ್ರಕೃತಿಯ ಚಿತ್ರಣಗಳು ಸೆರೆಯಾಗಿದೆ.

    ದಕ್ಷಿಣ ಅಮೇರಿಕಾದ ಭೇಟಿಯ ಕೆಲವು ಅತ್ಯುತ್ತಮ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ. ಈ ವಿಡಿಯೋ ವೀಕ್ಷಿಸಿ ಮತ್ತು ಆನಂದಿಸಿ ಎಂದು ಕ್ಯಾಪ್ಷನ್ ಕೂಡ ಹಾಕಲಾಗಿದೆ.

  • ಮೃತಪಟ್ಟ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡ ತಾಯಿ!

    ಮೃತಪಟ್ಟ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡ ತಾಯಿ!

    ಮಲೇಷ್ಯಾ: ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕವೂ ಫೋಟೋಗಳಲ್ಲಿ ಕಾಣಿಸಿಕೊಂಡರೆ ನಂಬಲು ಅಸಾಧ್ಯ. ಆದರೆ ಮಲೇಷ್ಯಾ ಇಂತಹದೊಂದು ಘಟನೆ ನಡೆದಿದೆ. ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದ ತಾಯಿ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

    ಹೌದು. ಇದೇನಪ್ಪ ಸಾವನ್ನಪ್ಪಿದವರು ಫೋಟೋದಲ್ಲಿ ಹೇಗೆ ಬಂದರು ಎಂದು ಅಚ್ಚರಿ ಆಗಬಹುದು, ಆದರೆ ತಂತ್ರಜ್ಞಾನದಿಂದ ಇದು ನಿಜವಾಗಿದೆ. ಮಲೇಷ್ಯಾದ ಮಹಿಳಾ ಫೋಟೋಗ್ರಾಫರ್ ಜಾರಾ ಹಲೀನಾ ಅವರ ಸೃಜನಶೀಲತೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ಪಡೆದಿದೆ.

    ಮಲೇಷ್ಯಾದ ಅಡೆಲಿನ್ ನೆಲ್ಡಾ ನಾಲ್ಕನೇ ಮಗುವಿಗೆ ತಾಯಿಯಾಗುವ ಸಂತಸದಲ್ಲಿದ್ದರು. ನಾಲ್ಕನೇ ಮಗು ಜನಿಸಿದ ಬಳಿಕ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಬೇಕೆಂಬ ಆಸೆ ಹೊಂದಿದ್ದರು. ಆದರಿಂದ ಅವರು ಫೋಟೋಗ್ರಾಫರ್ ಜಾರಾರನ್ನು ಸಂಪರ್ಕಿಸಿ, ಡೆಲಿವರಿ ಬಳಿಕ ಫ್ಯಾಮಿಲಿ ಫೋಟೋಶೂಟ್ ಮಾಡಿಸಲು ನಿರ್ಧರಿಸಿದ್ದರು. ಆದರೆ ದುರಾದೃಷ್ಟವಶಾತ್ ಡೆಲಿವರಿ ವೇಳೆ ಅಡೆಲಿನಾ ಮೃತಪಟ್ಟಿದ್ದಾರೆ.

    ಅಡೆಲಿನ್ ಸಾವಿನಿಂದ ಆಕೆಯ ಕುಟುಂಬ ಸದಸ್ಯರು ಮಾತ್ರವಲ್ಲದೇ ಛಾಯಾಗ್ರಾಹಕಿ ಜಾರಾ ಕೂಡಾ ಬಹಳಷ್ಟು ದುಃಖಿತರಾಗಿದ್ದರು. ಅಲ್ಲದೇ ಅಡೆಲಿನ್ ಸಾವಿನಿಂದ ಆಕೆ ಕನಸಾಗಿದ್ದ ಫ್ಯಾಮಿಲಿ ಫೋಟೋಶೂಟ್ ಕೂಡಾ ಕನಸಾಗಿಯೇ ಉಳಿದಿತ್ತು. ಆದರೆ ಛಾಯಾಗ್ರಾಹಕಿ ಆ ಕನಸನ್ನ ನನಸು ಮಾಡಿದ್ದಾರೆ.

    ಅಡೆಲಿನ್ ಸಾವನ್ನಪ್ಪಿದ 5 ತಿಂಗಳಲ್ಲೇ ಫ್ಯಾಮಿಲಿ ಫೋಟೋಶೂಟ್ ಆಯೋಜಿಸಿದ ಜಾರಾ ತಂತ್ರಜ್ಞಾನವನ್ನು ಬಳಸಿ ಅಡೆಲಿನ್‍ರನ್ನು ಕೂಡಾ ಈ ಫೋಟೋಗಳಲ್ಲಿ ಕಾಣುವಂತೆ ಕ್ರಿಯೇಟಿವ್ ಎಡಿಟಿಂಗ್ ಮಾಡಿ ಬೇಷ್ ಅನ್ನಿಸಿಕೊಂಡಿದ್ದಾರೆ.

    ಸದ್ಯ ಈ ಫೋಟೋಶೂಟ್‍ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬಹುತೇಕ ಎಲ್ಲಾ ಛಾಯಾಗ್ರಾಹಕರು ಜಾರಾರ ಈ ಪ್ರಯತ್ನಕ್ಕೆ ಫಿದಾ ಆಗಿದ್ದಾರೆ.

  • ಭೀಕರ ಅಪಘಾತ: ನಿವೃತ್ತಿಯ ದಿನವೇ ಕುಟುಂಬದ ಐವರನ್ನು ಕಳೆದುಕೊಂಡ ಮೆಸ್ಕಾಂ ಎಂಜಿನಿಯರ್

    ಭೀಕರ ಅಪಘಾತ: ನಿವೃತ್ತಿಯ ದಿನವೇ ಕುಟುಂಬದ ಐವರನ್ನು ಕಳೆದುಕೊಂಡ ಮೆಸ್ಕಾಂ ಎಂಜಿನಿಯರ್

    ಶಿವಮೊಗ್ಗ: ಮೆಸ್ಕಾಂ ಎಂಜಿನಿಯರ್ ಒಬ್ಬರು ನಿವೃತ್ತಿಯ ದಿನವೇ ಭೀಕರ ಅಪಘಾತದಲ್ಲಿ ಕುಟುಂಬದ ಐವರನ್ನು ಕಳೆದುಕೊಂಡ ಘಟನೆ ಇಂದು ಜಿಲ್ಲೆಯಲ್ಲಿ ನಡೆದಿದೆ.

    ಚಂದ್ರಪ್ಪ ಅವರ ಕುಟುಂಬದ ಐವರು ಸದಸ್ಯರನ್ನು ಕಳೆದುಕೊಂಡ ಮೆಸ್ಕಾಂ ನಿವೃತ್ತ ಎಂಜಿನಿಯರ್. ಚಂದ್ರಪ್ಪ ಅವರ ಪತ್ನಿ ಮಂಗಳಾ (55), ಪುತ್ರ ಮಂಜುನಾಥ (38), ಅಳಿಯ ನೀಲಕಂಠ, ಪುತ್ರಿ ಉಷಾ ಹಾಗೂ ಮೊಮ್ಮಗ ನಂದೀಶ್ ಮೃತಪಟ್ಟಿದ್ದಾರೆ.

    ಭದ್ರಾವತಿ ತಾಲೂಕು ಮಂಗೋಟೆಯವರಾದ ಚಂದ್ರಪ್ಪ ಶಿವಮೊಗ್ಗದ ಗೋಪಾಳದಲ್ಲಿ ಮನೆ ಮಾಡಿದ್ದರು. ಕುಂಸಿ ಗ್ರಾಮದಲ್ಲಿ ಮೆಸ್ಕಾಂ ಎಂಜಿನಿಯರ್ ಸೇವೆ ಸಲ್ಲಿಸಿದ್ದ ಚಂದ್ರಪ್ಪ ಅವರು ಇಂದು ನಿವೃತ್ತಿ ಹೊಂದಿದ್ದಾರೆ. ಈ ಪ್ರಯುಕ್ತ ಮೆಸ್ಕಾಂ ಸಿಬ್ಬಂದಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹೀಗಾಗಿ ಚಂದ್ರಪ್ಪ ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಿಫ್ಟ್ ಕಾರಿನಲ್ಲಿ ಕುಂಸಿ ಗ್ರಾಮಕ್ಕೆ ತೆರಳುತ್ತಿದ್ದರು.

    ಶಿವಮೊಗ್ಗ ತಾಲೂಕು ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ ಚಂದ್ರಪ್ಪ ಅವರ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಕ್ಯಾಂಟರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ವೇಗವಾಗಿ ಸಂಚರಿಸುತ್ತಿದ್ದ ಲಾರಿ ಕಾರಿನ ಮೇಲೆ ಹರಿದಿದ್ದು, ಅದರಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ನಿವೃತ್ತಿಯ ಸಮಾರಂಭಕ್ಕೆ ಕುಟುಂಬದವರ ನಿರೀಕ್ಷೆಯಲ್ಲಿದ್ದ ಚಂದ್ರಪ್ಪ ಅವರು ಭಾರೀ ಆಘಾತಕ್ಕೆ ಒಳಗಾಗಿದ್ದಾರೆ.

    ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

  • ನಾಗಸಾಧು ಮೊರೆ ಹೋದ ಶಾಸಕ ಕಂಪ್ಲಿ ಗಣೇಶ್!

    ನಾಗಸಾಧು ಮೊರೆ ಹೋದ ಶಾಸಕ ಕಂಪ್ಲಿ ಗಣೇಶ್!

    ಬಳ್ಳಾರಿ: ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲುವಾಸ ಅನುಭವಿಸಿ, ಬಿಡುಗಡೆಯಾಗಿರುವ ಕಂಪ್ಲಿ ಶಾಸಕ ಗಣೇಶ್ ಇದೀಗ ಕಷ್ಟಗಳಿಂದ ಪಾರಾಗಲು ನಾಗಸಾಧುವಿನ ಮೊರೆ ಹೋಗಿದ್ದಾರೆ.

    ಸಂಡೂರಿನ ಜೋಗಿಹಳ್ಳದ ಬಳಿಯಿರುವ ಅನ್ನಪೂರ್ಣೇಶ್ವರಿ ಮಠದಲ್ಲಿನ ನಾಗಸಾಧುಗಳನ್ನು ಕಂಪ್ಲಿ ಗಣೇಶ್ ಭೇಟಿ ಮಾಡಿ ಆಶೀರ್ವಾದ ಪಡೆದು ನೋವು ತೋಡಿಕೊಂಡಿದ್ದಾರೆ. ಗಣೇಶ್ ಅವರು ಕುಟುಂಬ ಸಮೇತರಾಗಿ ನಾಗಸಾಧು ಮೊರೆ ಹೋಗಿದ್ದು, ನಾಗಸಾಧು ಇರುವ ಮಠದಲ್ಲಿ ಕೆಲಕಾಲ ಧ್ಯಾನ ಮಾಡಿದ್ದಾರೆ. ಈ ವೇಳೆ ಮೌನ ವ್ರತದಲ್ಲಿದ್ದ ನಾಗಸಾಧು, ಸ್ಲೇಟ್‍ನಲ್ಲೇ ಬರೆದು ಒಳ್ಳೆಯದಾಗುತ್ತೆ ಎಂದು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆಶೀರ್ವದಿಸಿದ್ದಾರೆ.

    ಈ ಹಿಂದೆ ಉಪಚುನಾವಣೆಗೂ ಮುನ್ನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಉಗ್ರಪ್ಪ ಅವರು ಈ ನಾಗಸಾಧುಗಳನ್ನೇ ಭೇಟಿ ಮಾಡಿ ಆಶೀರ್ವಾದ ಪಡೆದು ನಂತರ ಗೆಲುವು ಸಾಧಿಸಿದ್ದರು. ಹೀಗಾಗಿ ಇದೀಗ ಗಣೇಶ್ ಕೂಡ ಕಷ್ಟಗಳಿಂದ ಪಾರಾಗಾಲು ನಾಗಸಾಧು ಮೊರೆ ಹೋದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

  • 53 ವರ್ಷವಾದ್ರೂ ಮದ್ವೆ ಏಕೆ ಆಗಿಲ್ಲ ಎಂಬುದನ್ನು ರಿವೀಲ್ ಮಾಡಿದ ಸಲ್ಮಾನ್

    53 ವರ್ಷವಾದ್ರೂ ಮದ್ವೆ ಏಕೆ ಆಗಿಲ್ಲ ಎಂಬುದನ್ನು ರಿವೀಲ್ ಮಾಡಿದ ಸಲ್ಮಾನ್

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ 53 ವರ್ಷವಾದ್ರೂ ಮದುವೆ ಯಾಕೆ ಆಗಲಿಲ್ಲ ಎಂಬುದನ್ನು ರಿವೀಲ್ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್, ನಾನು ನನ್ನ ಕುಟುಂಬದ ವಿಷಯಕ್ಕೆ ತುಂಬಾ ಪ್ರೊಟೇಕ್ಟೀವ್ ಆಗಿರುತ್ತೇನೆ. ನಾನು ನನ್ನ ಕುಟುಂಬವನ್ನು ತುಂಬಾ ಪ್ರೀತಿಸುತ್ತೇನೆ. ನನಗೆ ಸಮಯ ಸಿಕ್ಕಾಗಲೆಲ್ಲಾ ನನ್ನ ಕುಟುಂಬದ ಜೊತೆ ಕಾಲ ಕಳೆಯುತ್ತೇನೆ. ನನ್ನ ಮನೆಯವರು ನನಗೆ ಮದುವೆ ಮಾಡಿಸಲು ಹಲವು ಬಾರಿ ಮುಂದಾದರು. ಆದರೆ ನಾನು ನನ್ನ ಕುಟುಂಬ ಹೊರತುಪಡಿಸಿ ಬೇರೆ ಯಾರಿಗೂ ಮಹತ್ವ ಕೊಡುವುದಿಲ್ಲ. ಜೀವನ ಸಂಗಾತಿಗೆ ಸಮಯ ಕೊಡಲಿಲ್ಲ ಅಂದರೆ ತಪ್ಪಾಗುತ್ತೆ. ಹಾಗಾಗಿ ನಾನು ಮದುವೆಯಾಗಿಲ್ಲ ಎಂದರು.

    ತಮ್ಮ ಚಿತ್ರದಲ್ಲಿ ಬೋಲ್ಡ್ ಹಾಗೂ ಕಿಸ್ಸಿಂಗ್ ಸೀನ್ ಯಾಕೆ ಮಾಡುವುದಿಲ್ಲ ಎಂಬುದನ್ನು ಕೂಡ ಹೇಳಿದ್ದಾರೆ. ನಾನು ಯಾವಾಗಲೂ ಸಿನಿಮಾವನ್ನು ಕುಟುಂಬದವರ ಜೊತೆ ವೀಕ್ಷಿಸುತ್ತೇನೆ. ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಬಂದರೆ ಅದು ನೋಡಲು ಎಲ್ಲರಿಗೂ ಮುಜುಗರವಾಗುತ್ತದೆ. ನನ್ನ ಕುಟುಂಬದವರು ನನ್ನ ಸಿನಿಮಾದಲ್ಲಿಯೇ ಕಿಸ್ಸಿಂಗ್ ಸೀನ್ ನೋಡಿದರೆ ಇನ್ನಷ್ಟು ಮುಜುಗರಕ್ಕೆ ಒಳಗಾಗುತ್ತಾರೆ. ಹಾಗಾಗಿ ನಾನು ಕಿಸ್ಸಿಂಗ್ ಹಾಗೂ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

    ಸಲ್ಮಾನ್ ಖಾನ್ ಈಗ ‘ಭಾರತ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಕತ್ರಿನಾ ಕೈಫ್, ದಿಶಾ ಪಠಾಣಿ, ಸುನೀಲ್ ಗ್ರೋವರ್ ಹಾಗೂ ತಬು ನಟಿಸಿದ್ದಾರೆ. ಈ ಸಿನಿಮಾವನ್ನು ಅಲಿ ಅಬ್ಬಾಸ್ ಝಫರ್ ನಿರ್ದೇಶನ ಮಾಡಿದ್ದಾರೆ.

  • ಮಗಳು ಮೃತಪಟ್ಟಿದ್ದಕ್ಕೆ ಒಬ್ಬರ ಕೈಗೆ ಒಬ್ಬರು ವೇಲ್ ಕಟ್ಟಿಕೊಂಡು ಮೂವರು ಆತ್ಮಹತ್ಯೆ

    ಮಗಳು ಮೃತಪಟ್ಟಿದ್ದಕ್ಕೆ ಒಬ್ಬರ ಕೈಗೆ ಒಬ್ಬರು ವೇಲ್ ಕಟ್ಟಿಕೊಂಡು ಮೂವರು ಆತ್ಮಹತ್ಯೆ

    ಚಿಕ್ಕಮಗಳೂರು: ಒಬ್ಬರ ಕೈಗೆ ಒಬ್ಬರು ವೇಲ್ ಬಿಗಿದುಕೊಂಡು ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ.

    ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಕೆಳಪೇಟೆ ನಿವಾಸಿಗಳಾದ ಸುಬ್ಬಮ್ಮ, ಶಶಿಕಲಾ, ಉಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಮೇಶ್ ಹಾಗೂ ಶಶಿಕಲಾ ದಂಪತಿಯಾಗಿದ್ದು, ಸುಬ್ಬಮ್ಮ ಶಶಿಕಲಾಳ ತಾಯಿಯಾಗಿದ್ದಾರೆ.

    ದಂಪತಿಯ 2 ವರ್ಷದ ಮಗಳು ಅಮೂಲ್ಯಳಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ರಿಂದ ಹಾರ್ಟ್ ಆಪರೇಷನ್ ಮಾಡಿಸಿದ್ರು. ಹೀಗಿದ್ದರೂ ಮಗು ಬದುಕದೇ ಯುಗಾದಿ ಹಬ್ಬದಂದು ಸಾವನ್ನಪ್ಪಿತ್ತು. ಇದರಿಂದ ಮನನೊಂದ ಮನೆಯವರು, ಕುಟುಂಬದಲ್ಲಿ ನಾವ್ಯಾರು ಬದುಕಬಾರದೆಂದು ಎಲ್ಲರೂ ಕೈಗೆ ವೇಲ್ ಕಟ್ಟಿಕೊಂಡು ಇಂದು ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

    ನದಿಯಿಂದ ಒಮ್ಮೆಲೆ ಮೂರು ಮೃತದೇಹಗಳನ್ನು ಹೊರತೆಗೆಯುವಾಗ ಸ್ಥಳೀಯರು ಕಣ್ಣಾಲಿಗಳು ತೇವಗೊಂಡು, ನಮ್ಮ ಶತ್ರುಗಳಿಗೂ ಈ ಸ್ಥಿತಿ ಬರಬಾರದೆಂದು ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾತ್ರೋರಾತ್ರಿ 7 ಮಕ್ಕಳ ತಾಯಿಯಾದ 22ರ ಮಹಿಳೆ!

    ರಾತ್ರೋರಾತ್ರಿ 7 ಮಕ್ಕಳ ತಾಯಿಯಾದ 22ರ ಮಹಿಳೆ!

    ಲಂಡನ್: ತನ್ನ ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ 22ರ ಮಹಿಳೆಯೊಬ್ಬರು ತಮ್ಮ ಕಿರಿಯ ಸಹೋದರ-ಸಹೋದರಿಯನ್ನು ದತ್ತು ಪಡೆಯುವ ಮೂಲಕ ರಾತ್ರೋರಾತ್ರಿ ಏಳು ಮಕ್ಕಳ ತಾಯಿಯಾಗಿದ್ದಾರೆ.

    ಶ್ಯಾನ್ನೋನ್ ಎಲ್ಲಿಸ್ 2 ಮಕ್ಕಳ ತಾಯಿ. ಇವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಎಲ್ಲಿಸ್ ಅವರ 39 ವರ್ಷದ ತಾಯಿ ಶೆಲ್ಲಿ ಮೃತಪಟ್ಟಿದ್ದಾರೆ. ನಂತರ ಎಲ್ಲಿಸ್ ತಮ್ಮ ಐದು ಕಿರಿಯ ಸಹೋದರ ಮತ್ತು ಸಹೋದರಿಯರನ್ನು ದತ್ತು ತೆಗೆದುಕೊಂಡಿದ್ದಾರೆ. ಹೀಗಾಗಿ ಎಲ್ಲಿಸ್ ತಮ್ಮಿಬ್ಬರು ಮಕ್ಕಳು ಸೇರಿದಂತೆ ಈಗ ಏಳು ಮಕ್ಕಳ ತಾಯಿಯಾಗಿದ್ದಾರೆ.

    ವಿಶ್ವ ತಾಯಿಯಂದಿರ ದಿನ ಎಲ್ಲಿಸ್ ಅವರಿಗೆ ಅವರ ಮಕ್ಕಳು ಕೈಯಿಂದ ತಯಾರಿಸಿದ್ದ ಕಾರ್ಡುಗಳು, ಚಾಕ್ಲೇಟ್‍ಗಳು ಮತ್ತು ಹೂವುಗಳನ್ನು ನೀಡಿದರು. ಅಷ್ಟೇ ಅಲ್ಲದೇ ಪಾರ್ಕಿನ ಮರವೊಂದರ ಬಳಿ ಹೋಗಿ ತಮ್ಮ ತಾಯಿ ಶೆಲ್ಲಿ ಅವರಿಗೆ ಕುಟುಂಬದವರು ಒಟ್ಟಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಎಲ್ಲಿಸ್ ತಾಯಿ ಶೆಲ್ಲಿ ಬದುಕ್ಕಿದ್ದಾಗ ತಮ್ಮ ಎಲ್ಲ ಮಕ್ಕಳನ್ನು ಕರೆದುಕೊಂಡು ಪಾರ್ಕಿನಲ್ಲಿದ್ದ ಮರದ ಬಳಿ ಹೋಗುತ್ತಿದ್ದರು. ಅಲ್ಲಿ ಅವರು ಕುಟುಂಬದವರ ಜೊತೆ ಸಂತೋಷದಿಂದ ಇರುತ್ತಿದ್ದರು. ಹೀಗಾಗಿ ಅವರ ತಾಯಿಗೆ ಪ್ರಿಯವಾದ ಅದೇ ಮರದ ಬಳಿಯೇ ಅಸ್ಥಿ ವಿಸರ್ಜನೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೀಗಾಗಿ ಮರದ ಬಳಿ ಮಕ್ಕಳು ಹೋಗಿ ಅಂತಿಮ ನಮನ ಸಲ್ಲಿಸಿದ್ದಾರೆ.

    ಎಲ್ಲಿಸ್ ತಾಯಿ ಶೆಲ್ಲಿ ಮೃತಪಟ್ಟ ನಂತರ ಅವರ ಸಹೋದರ-ಸಹೋದರಿಯರನ್ನು ದೂರ ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಆಗ ಎಲ್ಲಿಸ್ ತಮ್ಮ ಪತಿ ಕೀರನ್ ಫರ್ಗ್ಯೂಸನ್ ಬಳಿ ಅವರನ್ನು ದತ್ತು ಪಡೆದುಕೊಳ್ಳವ ಬಗ್ಗೆ ಹೇಳಿದ್ದಾರೆ. ಆಗ ಪತಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ನಂತರ ಅವರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

    “ನಮ್ಮ ತಾಯಿ ಬಯಸಿದ್ದಂತೆ ನಮ್ಮ ಕುಟುಂಬ ತುಂಬಾ ದೊಡ್ಡದಾಗಿತ್ತು. ಜೊತೆಗೆ ಯಾವಾಗಲೂ ನಾವು ಸಂತಸದಿಂದ ಇದ್ದೆವು. ನಮಗೆ ತಂದೆ ಇಲ್ಲದಿದ್ದರು ನಮ್ಮ ತಾಯಿ ನಾವು ಕೇಳಿದ ಎಲ್ಲವನ್ನು ಕೊಡಿಸುತ್ತಿದ್ದರು. ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಎಲ್ಲಿಸ್ ಹೇಳಿದ್ದಾರೆ.

    ಜನವರಿ 2018ರಲ್ಲಿ ನಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಹಾಟ್ರ್ಲೆಪೂಲ್ ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ವೈದ್ಯರು ನಮ್ಮ ತಾಯಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರು ಬದುಕುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದರು. ಆಗ ನಮ್ಮ ತಾಯಿ ನನ್ನ ಕಡೆ ದುಃಖದಿಂದ ನೋಡಿದರು. ಈ ವೇಳೆ ನಾನು ಅಮ್ಮನಿಗೆ ನನ್ನ ಸಹೋದರ ಮತ್ತು ಸಹೋದರಿಯರನ್ನು ನೋಡಿಕೊಳ್ಳುತ್ತೇನೆಂದು ಭರವಸೆ ನೀಡಿದ್ದೇನೆ. ಹೀಗಾಗಿ ನಾನು ಎಲ್ಲರಿಗೂ ಅಮ್ಮನಾಗಬೇಕೆಂದು ಬಯಸಿದ್ದೇನೆ ಎಂದು ಎಲ್ಲಿಸ್ ತಿಳಿಸಿದ್ದಾರೆ.

    2018 ಜನವರಿ 25 ರಂದು ಶೆಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಎಲ್ಲಿಸ್ ತಾನು ಕೊಟ್ಟ ಮಾತಿನಂತೆ ತನ್ನ ಕಿರಿಯ ಸಹೋದರ ಸಹೋದರಿಯರಿಗೆ ಕಾನೂನಿನ ಪ್ರಕಾರ ತಾಯಿಯಾಗಿದ್ದಾರೆ.

  • 7 ಮೀನುಗಾರರು ನಾಪತ್ತೆಯಾಗಿ 100 ದಿನ – ರಕ್ಷಣಾ ಸಚಿವೆ ಕಂಡು ಕಣ್ಣೀರು ಹಾಕಿದ್ರು ಪತ್ನಿಯರು

    7 ಮೀನುಗಾರರು ನಾಪತ್ತೆಯಾಗಿ 100 ದಿನ – ರಕ್ಷಣಾ ಸಚಿವೆ ಕಂಡು ಕಣ್ಣೀರು ಹಾಕಿದ್ರು ಪತ್ನಿಯರು

    ಉಡುಪಿ: ಡಿಸೆಂಬರ್ ತಿಂಗಳಲ್ಲಿ ಮೀನುಗಾರಿಕೆಗೆ ಹೊರಟು ಬೋಟ್ ಸಮೇತ ನಾಪತ್ತೆಯಾಗಿದ್ದ ಮೀನುಗಾರರ ಮನೆಗಳಿಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಭೇಟಿ ಕೊಟ್ಟು, ಅವರ ಕುಟುಂಬಕ್ಕೆ ಸಮಾಧಾನ ಹೇಳಿದ್ದಾರೆ.

    ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಜೊತೆ ನಿರ್ಮಲಾ ಸೀತಾರಾಮನ್ ಅವರು ಮಲ್ಪೆಯಲ್ಲಿರುವ ಮೀನುಗಾರರ ಮನೆಗೆ ಭೇಟಿ ಕೊಟ್ಟಾಗ ಬಂಧುಗಳ ಕಣ್ಣೀರ ಕಟ್ಟೆ ಒಡೆಯಿತು.

    ಮೂರು ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ ಮೀನುಗಾರರ ಹುಡುಕಾಟ ಇನ್ನೂ ನಡೆಯುತ್ತಲೇ ಇದೆ. ಕುಟುಂಬಸ್ಥರು ಇವತ್ತು ಬರ್ತಾರೆ ನಾಳೆ ಬರ್ತಾರೆ ಎಂದು ಕಾಯುತ್ತಲೇ ಇದ್ದಾರೆ. ಕಾಣೆಯಾದ ಚಂದ್ರಶೇಖರ, ದಾಮೋದರ ಅವರ ಮನೆಗಳಿಗೆ ಭೇಟಿ ನೀಡಿದಾಗ ಅವರಿಬ್ಬರ ಪತ್ನಿಯರ ಆಕ್ರಂದನ ನೋಡಿ ರಕ್ಷಣಾ ಸಚಿವೆ ಅಸಹಾಯಕರಾದರು.

    ಕೊನೆಗೆ ದುಃಖಿತರನ್ನು ಸಮಾಧಾನಪಡಿಸಿ, ನಾಪತ್ತೆಯಾದ ಮೀನುಗಾರರನ್ನು ಆದಷ್ಟು ಬೇಗ ಹುಡುಕಿ ಕೊಡುತ್ತೇವೆ. ಘಟನೆ ನಡೆದ ದಿನದಿಂದ ಮೀನುಗಾರರನ್ನು ಹುಡುಕಲು ಕಾರ್ಯಪ್ರವೃತರಾಗಿದ್ದೇವೆ ಎಂದು ದುಃಖತಪ್ತ ಕುಟುಂಬಕ್ಕೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

  • ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ

    ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ

    ಬೆಂಗಳೂರು: ತನ್ನಿಬ್ಬರ ವಿಶೇಷ ಚೇತನ ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯ ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡ ತೋಗೂರಿನಲ್ಲಿ ನಡೆದಿದೆ.

    ರಾಧಮ್ಮ (55) ಸಂತೋಷ್(30) ಹಾಗೂ ಹರೀಶ್ (25) ಆತ್ಮಹತ್ಯೆಗೆ ಶರಣಾದವರು. ರಾಧಮ್ಮನ ಇಬ್ಬರು ಮಕ್ಕಳು ವಿಶೇಷ ಚೇತನಾಗಿದ್ದು, ಇವರನ್ನು ನೋಡಿಕೊಳ್ಳಲು ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಹಾಗಾಗಿ ಇಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕುಟುಂಬ ನಿರ್ವಹಣೆಗೆ ಆರ್ಥಿಕ ಮುಗ್ಗಟ್ಟಿನ ತೊಂದರೆಯಿಂದ ರಾಧಮ್ಮ ಮೊದಲು ತನ್ನ ಇಬ್ಬರ ಮಕ್ಕಳಿಗೆ ವಿಷ ನೀಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv