Tag: family

  • ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಸೊಸೆಗೆ ಮತ್ತೊಂದು ಮದ್ವೆ

    ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಸೊಸೆಗೆ ಮತ್ತೊಂದು ಮದ್ವೆ

    ಭುವನೇಶ್ವರ್: ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಕುಟುಂಬಸ್ಥರು ಸೊಸೆಗೆ ಮತ್ತೊಂದು ಮದುವೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಒಡಿಶಾದ ಅಂಗುಲ್ ಜಿಲ್ಲೆಯ ಪ್ರತಿಮಾ ಬೆಹೆರಾ ಅವರು ತಮ್ಮ 20 ವರ್ಷದ ಸೊಸೆ ಲಿಲ್ಲಿ ಬೆಹೆರಾಗೆ ಮತ್ತೊಂದು ಮದುವೆ ಮಾಡಿಸಿದ್ದಾರೆ. ಪ್ರತಿಮಾ ಅವರು ಅಂಗುಲ್ ಜಿಲ್ಲೆಯ ಗೋಬರಾ ಗ್ರಾಮದ ಪಂಚಾಯ್ತಿ ಮಾಜಿ ಸರ್ಪಂಚ್ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 11ರಂದು ಟಾಲ್ಚರ್ ಏರಿಯಾದ ಜಗನ್ನಾಥ ದೇವಸ್ಥಾನದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಪ್ರತಿಮಾ ಅವರ ಕಿರಿಯ ಮಗ ರಶ್ಮಿರಂಜನ್ ಅವರು ತುರಂಗಾ ಗ್ರಾಮದ ಲಿಲ್ಲಿ ಅವರನ್ನು ಮದುವೆ ಮಾಡಿಕೊಂಡಿದ್ದರು. ಆದರೆ ಜುಲೈ ತಿಂಗಳಲ್ಲಿ ಭಾರತಪುರದಲ್ಲಿ ನಡೆದ ಕಲ್ಲಿದ್ದಲು ಗಣಿ ಅವಘಡದಲ್ಲಿ ರಶ್ಮಿರಂಜನ್ ಮೃತಪಟ್ಟಿದ್ದರು. ಪತಿಯ ಸಾವಿನಿಂದ ಲಿಲ್ಲಿ ತೀವ್ರ ದುಃಖದಲ್ಲಿದ್ದಳು. ಅಲ್ಲದೆ ಯಾರ ಜೊತೆಯೂ ಮಾತನಾಡದೇ ಮೂಕಳಾಗಿದ್ದಳು ಎಂದು ಪ್ರತಿಮಾ ಹೇಳಿದ್ದಾರೆ.

    ಲಿಲ್ಲಿಯ ದುಃಖ ನೋಡಲಾಗದೇ ನಾನು ಆಕೆಗೆ ಸಮಾಧಾನ ಮಾಡಿದೆ. ಅಲ್ಲದೆ ಮತ್ತೊಂದು ಮದುವೆ ಆಗಿ ಜೀವನದಲ್ಲಿ ಮುಂದೆ ಸಾಗುವಂತೆ ಆಕೆಗೆ ಸಲಹೆ ನೀಡಿದೆ. ಲಿಲ್ಲಿ ಮರುಮದುವೆಗೆ ಒಪ್ಪಿದ ಕೂಡಲೇ ನಾನು ವರನನ್ನು ಹುಡುಕಲು ಶುರು ಮಾಡಿದೆ. ಮೊದಲು ನಾನು ನನ್ನ ಸಹೋದರನನ್ನು ಸಂಪರ್ಕಿಸಿ ಲಿಲ್ಲಿ ಹಾಗೂ ಅವರ ಮಗ ಸಂಗ್ರಾಮ್ ಬೆಹೆರಾ ನಡುವಿನ ವಿವಾಹದ ಪ್ರಸ್ತಾಪ ಮುಂದಿಟ್ಟೆ ಎಂದು ಪ್ರತಿಮಾ ತಿಳಿಸಿದ್ದಾರೆ.

    ನನ್ನ ಮಗ ಮತ್ತೆ ಹಿಂತಿರುಗುವುದಿಲ್ಲ ಎಂದು ನನಗೆ ತಿಳಿದಿದೆ. ನಷ್ಟವನ್ನು ಭರಿಸುವುದಕ್ಕೆ ಆಗಲ್ಲ. ಕೇವಲ 20 ವರ್ಷದ ನನ್ನ ಸೊಸೆಯ ದುಃಖವನ್ನು ನನಗೆ ನೋಡಲು ಆಗುತ್ತಿರಲಿಲ್ಲ. ಜೀವನದಲ್ಲಿ ಸಂತೋಷವಾಗಿ ಇರಲು ಆಕೆಗೆ ಹಕ್ಕಿದೆ. ಹಾಗಾಗಿ ನನ್ನ ಸೊಸೆಗೆ ಮತ್ತೊಂದು ಮದುವೆ ಮಾಡಿಸಲು ನಿರ್ಧರಿಸಿದೆ ಎಂದು ಪ್ರತಿಮಾ ಪ್ರತಿಕ್ರಿಯಿಸಿದ್ದಾರೆ.

    ಲಿಲ್ಲಿಯ ಪತಿ ಸಂಗ್ರಾಮ್, “ನನ್ನ ತಂದೆ ಹಾಗೂ ನನ್ನ ಕುಟುಂಬದ ಸದಸ್ಯರು ಲಿಲ್ಲಿಯನ್ನು ಸೊಸೆಯಾಗಿ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ನನಗೆ ಏಕೆ ಆಕ್ಷೇಪಣೆ ಇರುತ್ತೆ? ಬದಲಿಗೆ ನಾನೂ ತುಂಬಾ ಖುಷಿಯಾಗಿದ್ದೇನೆ” ಎಂದು ಹೇಳಿದ್ದಾರೆ.

  • ನಾಯಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ – ಮೂವರು ಗಂಭೀರ

    ನಾಯಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ – ಮೂವರು ಗಂಭೀರ

    ತುಮಕೂರು: ನಾಯಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಮಣಕಿಕೆರೆ ಗ್ರಾಮದಲ್ಲಿ ನಡೆದಿದೆ.

    ಶಿವಕುಮಾರ್ ಸ್ವಾಮಿ, ತಾಯಿ ಸತ್ಯ ಪ್ರೇಮ, ಪತ್ನಿ ರೇಖಾಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಕುಮಾರ್ ಸ್ವಾಮಿ ಪಕ್ಕದ ಮನೆಯವರಾದ ವರುಣ್ ಹಾಗೂ ಕರ್ಣ ಎಂಬವರು ಈ ಕುಟುಂಬದ ಮೇಲೆ ನಾಯಿ ವಿಚಾರಕ್ಕೆ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ.

    ಶಿವಕುಮಾರಸ್ವಾಮಿ ಅವರ ಸಾಕುನಾಯಿ ಆರೋಪಿ ವರುಣ್ ಹಾಗೂ ಕರ್ಣ ಅವರ ಮನೆ ಬಳಿ ಹೋಗಿದಕ್ಕೆ ಜಗಳ ತೆಗೆದ ಅವರು, ಶಿವಕುಮಾರಸ್ವಾಮಿ ಕುಟುಂಬದ ಮೇಲೆ ಕಬ್ಬಿಣದ ಪೈಪಿನಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಕುಮಾರ್ ಸ್ವಾಮಿ ಕುಟುಂಬದವರಿಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಚ್‍ಡಿಡಿ ಕುಟುಂಬದ ಕಣ್ಣೀರಿಗೆ ಸಾರಾ ಮಹೇಶ್ ಕಾರಣ: ಎಚ್. ವಿಶ್ವನಾಥ್

    ಹೆಚ್‍ಡಿಡಿ ಕುಟುಂಬದ ಕಣ್ಣೀರಿಗೆ ಸಾರಾ ಮಹೇಶ್ ಕಾರಣ: ಎಚ್. ವಿಶ್ವನಾಥ್

    ಮೈಸೂರು: ಹೆಚ್. ಡಿ ದೇವೇಗೌಡರ ಕುಟುಂಬದ ಕಣ್ಣೀರಿಗೆ ಮಾಜಿ ಸಚಿವ ಸಾರಾ ಮಹೇಶ್ ಕಾರಣ ಎಂದು ಅನರ್ಹ ಜೆಡಿಎಸ್ ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ.

    ಇಂದು ಕೆ.ಆರ್. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ದೇವೇಗೌಡರ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೆ ಎಂದರೆ ಅದಕ್ಕೆ ಸಾರಾ ಮಹೇಶ್ ಮತ್ತು ಆತನ ಕೆಲ ಸ್ನೇಹಿತರು ಕಾರಣ. ದೇವೇಗೌಡರ ಮನೆಗೆ ಇವತ್ತು ಅನ್ಯಾಯವಾಗಿದ್ದರೆ ಅದಕ್ಕೂ ಸಾರಾ ಮಹೇಶ್ ಕಾರಣ. ದೇವೇಗೌಡರ ಕಣ್ಣೀರಿಗೂ ಅವರೇ ಕಾರಣ ಎಂದು ಕಿಡಿಕಾರಿದರು.

    ಸಾರಾ ಮಹೇಶ್ ದುರಹಂಕಾರದಿಂದ ಒಕ್ಕಲಿಗ ಶಾಸಕರೇ ಜೆಡಿಎಸ್‍ನಿಂದ ದೂರವಾದರು. ಇವತ್ತಿನ ದೇವೇಗೌಡರ ಈ ಸ್ಥಿತಿಗೆ ನಾವಲ್ಲ ಕಾರಣ ನೀವು. ಮಹೇಶ್ ಕ್ಷೇತ್ರದಲ್ಲಿ ಕೆಲವರಿಗೆ 500 ರೂಪಾಯಿ, 1 ಸಾವಿರ ರೂಪಾಯಿ ಕೊಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಆದರೆ ನನ್ನದ್ದು ಅಭಿವೃದ್ಧಿ ರಾಜಕಾರಣ. ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಿ. ಕೆ.ಆರ್. ನಗರದ ಅಭಿವೃದ್ಧಿಗೆ ನಾನು ಮಾಡಿದಷ್ಟು ಕೆಲಸ ನೀವು ಮಾಡಿಲ್ಲ ಎಂದು ವಾಗ್ದಾಳಿ ಮಾಡಿದರು.

    ಈ ವೇಳೆ ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ ವಿಶ್ವನಾಥ್, ಕಾನೂನುಗಿಂತ ಯಾರು ದೊಡ್ಡವರಲ್ಲ. ಡಿಕೆಶಿ ಇದೆಲ್ಲದರಿಂದ ಬಹು ಬೇಗ ಮುಕ್ತವಾಗಿ ಹೊರ ಬರಲಿ. ಹೊರ ಬಂದು ರಾಜಕಾರಣ ಮಾಡಬೇಕು ಎಂದು ಹಾರೈಸಿದರು.

  • ಕುಟುಂಬಸ್ಥರಿಗೆ ವಿಷ ಹಾಕಿ ಪ್ರಿಯಕರನ ಜೊತೆ ಅಪ್ರಾಪ್ತೆ ಎಸ್ಕೇಪ್

    ಕುಟುಂಬಸ್ಥರಿಗೆ ವಿಷ ಹಾಕಿ ಪ್ರಿಯಕರನ ಜೊತೆ ಅಪ್ರಾಪ್ತೆ ಎಸ್ಕೇಪ್

    ಲಕ್ನೋ: ಅಪ್ರಾಪ್ತೆಯೊಬ್ಬಳು ತನ್ನ ಇಡೀ ಕುಟುಂಬಸ್ಥರ ಊಟದಲ್ಲಿ ವಿಷ ಹಾಕಿ ಪ್ರಿಯಕರನ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಮೋರದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಕುಟುಂಬದ ಸದಸ್ಯರು ಮಾಡಿದ ಊಟದಲ್ಲಿ ವಿಷದ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ಅವರು ಪ್ರಜ್ಞೆ ತಪ್ಪಿದ್ದರು. ಸದ್ಯ ಕುಟುಂಬಸ್ಥರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪ್ರಾಪ್ತೆಯನ್ನು ಹುಡುಕುತ್ತಿದ್ದಾರೆ.

    ಮಂಗಳವಾರ ರಾತ್ರಿ ಅಪ್ರಾಪ್ತೆ ತನ್ನ ಮನೆಯಲ್ಲಿ ತಯಾರಿಸಿದ್ದ ಅಡುಗೆಯಲ್ಲಿ ವಿಷದ ಪದಾರ್ಥವನ್ನು ಮಿಶ್ರಣ ಮಾಡಿದ್ದಾಳೆ. ಈ ಊಟವನ್ನು ಮಾಡಿದ ಅಪ್ರಾಪ್ತೆಯ ತಾಯಿ, ಇಬ್ಬರು ಸಹೋದರಿಯರು, ಇಬ್ಬರು ಸಹೋದರರು, ಅತ್ತಿಗೆ ಹಾಗೂ ಸೋದರಳಿಯ ಪ್ರಜ್ಞೆ ತಪ್ಪಿದ್ದಾರೆ. ಕುಟುಂಬಸ್ಥರು ಪ್ರಜ್ಞೆ ತಪ್ಪುತ್ತಿದ್ದಂತೆ ಬಾಲಕಿ ತನ್ನ ಪ್ರಿಯಕರನಿಗೆ ಕರೆ ಮಾಡಿ ಆತನ ಜೊತೆ ಎಸ್ಕೇಪ್ ಆಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿ ಓಡಿಹೋದ ಯುವಕ ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದನು. ಯುವಕ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಕೇಳಿ ಬರುತ್ತಿದೆ. ಇವರಿಬ್ಬರ ಸಂಬಂಧಕ್ಕೆ ಅಪ್ರಾಪ್ತೆ ಮನೆಯಲ್ಲಿ ವಿರೋಧವಿತ್ತು. ಅಲ್ಲದೆ ಅಪ್ರಾಪ್ತೆಯ ಕುಟುಂಬಸ್ಥರು ಯುವಕನನ್ನು ಅತ್ಯಾಚಾರದ ಪ್ರಕರಣದಲ್ಲಿ ಸಿಲುಕಿಸಿದ್ದರು. ಯುವಕ ಜಾಮೀನಿನ ಮೇಲೆ ಹೊರ ಬಂದ ನಂತರ ಬಾಲಕಿಯನ್ನು ಸಂಪರ್ಕಿಸಿದ್ದಾನೆ. ಬಳಿಕ ಇಬ್ಬರು ಪ್ಲಾನ್ ಮಾಡಿ ಓಡಿ ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಬಾಲಕಿ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಬಾಲಕಿ ಕುಟುಂಬದ ಇಬ್ಬರು ಸದಸ್ಯರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮಹಿಳೆ ಹಾಗೂ ಅವರ ಮಗು ಆಸ್ಪತ್ರೆಯಲ್ಲಿ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್‍ಪಿ ಉದಯ್ ಶಂಕರ್ ಸಿಂಗ್ ತಿಳಿಸಿದ್ದಾರೆ. ಬಳಿಕ ಮಾತನಾಡಿದ ಎಸ್‍ಎಚ್‍ಒ ಮನೋಜ್ ಕುಮಾರ್ ಅವರು, ಬಾಲಕಿ ಅಪ್ರಾಪ್ತೆ ಆಗಿರುವ ಕಾರಣ ಆರೋಪಿ ಅರವಿಂದ್ ಕುಮಾರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

  • ಯುವಿ ಕುಟುಂಬದ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣ ಕೈಬಿಟ್ಟ ಆಕಾಂಕ್ಷ

    ಯುವಿ ಕುಟುಂಬದ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣ ಕೈಬಿಟ್ಟ ಆಕಾಂಕ್ಷ

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ್ದ ಬಿಗ್ ಬಾಸ್ 10 ಆವೃತ್ತಿಯ ಸ್ಪರ್ಧಿ ಆಕಾಂಕ್ಷ ಶರ್ಮಾ ಪ್ರಕರಣವನ್ನು ಕೈಬಿಟ್ಟಿದ್ದಾರೆ.

    ಯುವಿ ಸೋದರನ ಪತ್ನಿಯಾಗಿರುವ ಅಕಾಂಕ್ಷ 2017ರಲ್ಲಿ ಯುವರಾಜ್ ಸಿಂಗ್ ಕುಟುಂಬ ಹಾಗು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಅಡಿ ಮಾನಸಿಕ ಮತ್ತು ಆರ್ಥಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು.

    ಅಕಾಂಕ್ಷರ ದೂರಿನಂತೆ ಗುರುಗ್ರಾಮದ ಪೊಲೀಸ್ ಯುವರಾಜ್ ಸಿಂಗ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಯುವರಾಜ್ ಜೊತೆಗೆ ಅವರ ತಾಯಿ ಶಬ್ಮಮ್, ಸಹೋದರ ಜೊರಾವರ್ ಸಿಂಗ್ ವಿರುದ್ಧ ದೂರು ದಾಖಲಿಸಲಾಗಿತ್ತು. ಸದ್ಯ ದೂರು ಹಿಂಪಡೆದಿರುವ ಆಕಾಂಕ್ಷ, ಯುವಿ ಕುಟುಂಬದ ಕ್ಷಮೆಯಾಚಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಜೊರಾವರ್ ಸಿಂಗ್, ಆಕಾಂಕ್ಷ ವಿವಾಹ ವಿಚ್ಛೇದನ ಪಡೆದಿದ್ದರು. ಈ ವೇಳೆ 48 ಲಕ್ಷ ರೂ. ಜೀವನಾಂಶ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಯುವಿ ಸೋದರ ಜೊರಾವರ್ 2014ರಲ್ಲಿ ಅಕಾಂಕ್ಷಾರನ್ನು ಮದುವೆಯಾಗಿದ್ದರು. ಆಕಾಂಕ್ಷ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ ಭಾಗಿಯಾಗಿದ್ದರು. ಶೋದಲ್ಲಿಯೇ ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದರು. ಅಲ್ಲದೇ ಯುವರಾಜ್ ಸಿಂಗ್ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು. ಬಿಗ್ ಬಾಸ್ ಶೋದಿಂದ ಹೊರಬಂದ 4 ತಿಂಗಳಲ್ಲೇ ಮನೆ ಬಿಟ್ಟು ಹೊರ ಬಂದಿದ ಅವರು ಬಳಿಕ ಪತಿಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

    https://www.instagram.com/p/B1okzITAqnO/

  • ಒಂದೇ ಮನೆಯಲ್ಲಿ ಬರೋಬ್ಬರಿ 601 ಗಣಪನ ಪ್ರತಿಷ್ಠಾಪನೆ

    ಒಂದೇ ಮನೆಯಲ್ಲಿ ಬರೋಬ್ಬರಿ 601 ಗಣಪನ ಪ್ರತಿಷ್ಠಾಪನೆ

    ಧಾರವಾಡ: ಜಿಲ್ಲೆಯ ಗಾಂಧಿನಗರದಲ್ಲಿ ಕುಟುಂಬವೊಂದು ಬರೋಬ್ಬರಿ 601 ಗಣೇಶನನ್ನು ಪ್ರತಿಷ್ಠಾಪನೆ ಮಾಡಿದೆ.

    ನಾಗರತ್ನ ನಾಗೇಶ ತಲೇಕರ್ ಎಂಬವರ ಮನೆಯಲ್ಲಿ ಕಳೆದ 40 ವರ್ಷಗಳಿಂದ ಗಣಪನನ್ನು ಇಡಲಾಗುತ್ತಿದೆ. ಪ್ರತಿ ವರ್ಷ ಗಣಪನ ಸಂಖ್ಯೆ ಹೆಚ್ಚಾಗುತ್ತೆ. ಈ ವರ್ಷ ಇವರ ಮನೆಯಲ್ಲಿ 601 ಗಣಪನ ಮೂರ್ತಿಗಳು ಇವೆ. 1980ರಿಂದ ಇಲ್ಲಿವರೆಗೆ ಅವರು ಗಣಪನನ್ನು ಇಡುತ್ತಾ ಬಂದಿದ್ದು, ಮೈಸೂರಿನ ತ್ಯಾಗರಾಜ್ ಸರ್ಕಲ್‍ನಲ್ಲಿ 100 ಗಣೇಶನನ್ನು ಇಟ್ಟಿರುವುದನ್ನು ನೋಡಿ ಪ್ರೇರಣೆಯಿಂದ ಇವರು ಇಡುತ್ತಿದ್ದಾರೆ. ಮೊಟ್ಟ ಮೊದಲಿಗೆ ಇವರು 21 ಗಣೇಶನನ್ನು ಇಟ್ಟಿದ್ದಾರೆ. ನಂತರ ಅವುಗಳ ಸಂಖ್ಯೆ ಬೆಳೆಸುತ್ತಲೇ ಬಂದಿದ್ದಾರೆ. ಗಣೇಶನನ್ನು ಇಡೋದು ದೊಡ್ಡದಲ್ಲ. ಆದರೆ ಅದಕ್ಕೆ ತಕ್ಕಂತೆ ನಡೆಯಬೇಕು ಎಂದು ನಾಗರತ್ನ ಅವರು ಹೇಳುತ್ತಾರೆ.

    ಈ ಎಲ್ಲಾ ಗಣೇಶನಿಗೆ ಪ್ರತಿದಿನ ಎರಡು ಬಾರಿ ಪೂಜೆ ಮಾಡುತ್ತಾರೆ. ದೊಡ್ಡ ಗಣಪನಿಗೆ ಒಂದು ಹೂವಿನ ಹಾರ ಹಾಕಿದ್ರೆ, ಉಳಿದ ಗಣೇಶಗಳಿಗೆ ಒಂದೊಂದು ಹೂವನ್ನು ಇಟ್ಟು ಪೂಜೆ ಮಾಡಲಾಗುತ್ತೆ. ಅದೇ ರೀತಿ 11 ದಿನ ಇವರ ಮನೆಯಲ್ಲಿ ಪೂಜೆ ಪುನಸ್ಕಾರ ಇದ್ದೇ ಇರುತ್ತೆ. ಇವರು ಇಷ್ಟೊಂದು ಗಣಪನನ್ನು ಇಡುವುದನ್ನು ನೋಡಿ ಜನರು ಕೂಡ ಆಶ್ಚರ್ಯ ಪಡುತ್ತಾರೆ. ಇವುಗಳನ್ನು ಅವರು ಹುಬ್ಬಳ್ಳಿಯ ಉದಯ ಎಂಬವರಿಂದ ತಯಾರಿಸಿ, ಒಟ್ಟು 600 ಗಣಪನಿಗೆ ಒಂದೂವರೆ ಲಕ್ಷ ಖರ್ಚು ಮಾಡುತ್ತಾರೆ. ಅದರ ಪೂಜೆ ಪುನಸ್ಕಾರಕ್ಕೆ ಖರ್ಚು ಬೇರೆ. ಇಷ್ಟೊಂದು ಭಕ್ತಿಯಿಂದ ಅವರು ಗಣೇಶನ ಪ್ರತಿಷ್ಠಾಪನೆ ಮಾಡಿದ್ದು ನೋಡುವುದೇ ಒಂದು ಮಜಾ.

  • ಲವ್ವರ್ ಜೊತೆ ಎಸ್ಕೇಪ್ – ಯುವತಿಯನ್ನ ಅರೆಬೆತ್ತಲೆಗೊಳಿಸಿ ಥಳಿಸಿದ ಗ್ರಾಮಸ್ಥರು

    ಲವ್ವರ್ ಜೊತೆ ಎಸ್ಕೇಪ್ – ಯುವತಿಯನ್ನ ಅರೆಬೆತ್ತಲೆಗೊಳಿಸಿ ಥಳಿಸಿದ ಗ್ರಾಮಸ್ಥರು

    ಭೋಪಾಲ್: ಪ್ರೀತಿಸಿ ಬೇರೆ ಜಾತಿ ಯುವಕನೊಂದಿಗೆ ಪರಾರಿಯಾಗಿದ್ದ ಯುವತಿಯೊಬ್ಬಳನ್ನು ಗ್ರಾಮಸ್ಥರು ಅರೆಬೆತ್ತಲೆಗೊಳಿಸಿ ಥಳಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಅಲಿರಾಜ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಬುಡಕಟ್ಟು ಜನಾಂಗದ 19 ವರ್ಷದ ಯುವತಿ ಕಳೆದ ಭಾನುವಾರ ಅದೇ ಗ್ರಾಮದ ಬೇರೆ ಜಾತಿ ಯುವಕನೊಂದಿಗೆ ಯುವತಿ ಪರಾರಿಯಾಗಿದ್ದಳು. ಆದರೆ ಯುವತಿ ಮಂಗಳವಾರ ಗ್ರಾಮಸ್ಥರ ಕೈಗೆ ಸಿಗುತ್ತಿದ್ದಂತೆ ಎಲ್ಲರೂ ಸೇರಿ ಆಕೆಯನ್ನ ಅರೆಬೆತ್ತಲೆಗೊಳಿಸಿ ಹಿಗ್ಗಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಕೋಲುಗಳಿಂದ ಹೊಡೆಯುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.

    ಯುವತಿಯ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. 1 ನಿಮಿಷ 42 ಸೆಕೆಂಡ್ ಇರುವ ವಿಡಿಯೋ ಇದ್ದು, ಯುವತಿ ಕಿರುಚುತ್ತಾ ಬಿಟ್ಟುಬಿಡುವಂತೆ ಬೇಡಿಕೊಂಡರೂ ಕೋಲುಗಳಿಂದ ಗ್ರಾಮಸ್ಥರು ಹೊಡೆದಿರುವ ವಿಡಿಯೋದಲ್ಲಿ ಸೆರೆಯಾಗಿದೆ.

    ಯುವತಿ ರಕ್ಷಣೆ ಮಾಡುವಂತೆ ಕೇಳಿಕೊಂಡರೂ ಯಾರೋಬ್ಬರು ಆಕೆಯ ಸಹಾಯಕ್ಕೆ ಮುಂದಾಗಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಮಸ್ಥರ ಅಮಾನವೀಯ ನಡೆಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಲಿರಾಜ್‍ಪುರ್ ಪೊಲೀಸ್ ವರಿಷ್ಠಾಧಿಕಾರಿ ವಿಪುಲ್ ಶ್ರೀವಾಸ್ತವ ಅವರು, ನಾವು ವಾಟ್ಸಾಪ್ ಮೂಲಕ ಯುವತಿಯ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಪಡೆದುಕೊಂಡಿದ್ದೇವೆ. ಈ ಘಟನೆಯು ಅಂಬುವಾ ಪೊಲೀಸ್ ಠಾಣೆ ವ್ಯಾಪ್ತಿಯ ತೆಮಾಚಿ ಗ್ರಾಮದಲ್ಲಿ ನಡೆದಿದೆ ಎಂದು ಕೆಲವು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ನಮಗೆ ಯಾವುದೇ ದೂರು ಬಂದಿಲ್ಲ. ಮಹಿಳೆ ಮತ್ತು ಆಕೆಯ ತಂದೆಯ ಹೇಳಿಕೆಗಳನ್ನು ದಾಖಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

  • ನನ್ನನ್ನು ಯಾಕೆ ದೂಷಿಸುತ್ತೀರಾ, ಉಳಿದ ಮಕ್ಕಳನ್ನು ಯಾಕೆ ಪ್ರಶ್ನಿಸಲ್ಲ: ರಾನು ಪುತ್ರಿ

    ನನ್ನನ್ನು ಯಾಕೆ ದೂಷಿಸುತ್ತೀರಾ, ಉಳಿದ ಮಕ್ಕಳನ್ನು ಯಾಕೆ ಪ್ರಶ್ನಿಸಲ್ಲ: ರಾನು ಪುತ್ರಿ

    ನವದೆಹಲಿ: ರೈಲ್ವೆ ನಿಲ್ದಾಣದಿಂದ ಬಾಲಿವುಡ್ ಅಂಗಳಕ್ಕೆ ಹಾರಿದ ವೈರಲ್ ಸಿಂಗರ್ ರಾನು ಮೊಂಡಲ್ ಈಗ ಸಖತ್ ಫೇಮಸ್. ಇಷ್ಟು ದಿನ ಒಂಟಿಯಾಗಿದ್ದ ರಾನು ಅವರು ವೈರಲ್ ಆಗುತ್ತಿದ್ದಂತೆ ಮಗಳು ಅವರನ್ನು ಭೇಟಿಯಾಗಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ತಾಯಿ ಹೆಸರು ಗಳಿಸಿದ ಬಳಿಕ ಅವರ ಬಳಿಗೆ ಮಗಳು ಬಂದಿದ್ದಾಳೆ ಎಂದವರಿಗೆ ರಾನು ಪುತ್ರಿ ತಿರುಗೇಟು ನೀಡಿದ್ದಾರೆ.

    ಮಾಧ್ಯಮವೊಂದು ರಾನು ಪುತ್ರಿ ಎಲಿಜಬೆತ್ ಸಾಥಿ ರಾಯ್ ಅವರ ಸಂದರ್ಶನ ಮಾಡಿದಾಗ ತಾಯಿ ಬಗ್ಗೆ ಮಾತನಾಡಿ, ನನ್ನ ತಾಯಿ ರೈಲ್ವೇ ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ವಿಚಾರ ನನಗೆ ತಿಳಿದಿರಲಿಲ್ಲ. ಈ ಹಿಂದೆ ಸಾಕಷ್ಟು ಬಾರಿ ನಾನು ಆಕೆಯನ್ನು ಭೇಟಿ ಮಾಡಲು ಪ್ರಯತ್ನಿಸಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ನನ್ನ ಪತಿ ನನ್ನ ಜೊತೆ ಇಲ್ಲ. ನಾನು ಚಿಕ್ಕ ಅಂಗಡಿ ಇಟ್ಟುಕೊಂಡು ಮಗುವೊಂದಿಗೆ ಜೀವನ ನಡೆಸುತ್ತಿದ್ದೇನೆ. ನನ್ನ ಬದುಕು ಸಾಗಿಸುವುದೆ ಕಷ್ಟವಿದೆ. ಆದರಲ್ಲೂ ನಾನು ನನ್ನ ತಾಯಿಯನ್ನು ಆಗಾಗ ನೋಡಲು ಬರುತ್ತಿದ್ದೆ. ಸಾಕಷ್ಟು ಬಾರಿ ನನ್ನ ಜೊತೆಯೇ ಇರು ಎಂದು ಅಮ್ಮನಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಿರಲಿಲ್ಲ. ಆಗಾಗ ನಾನು ತಾಯಿಗೆ ಹಣವನ್ನು ಹಾಗೂ ತಿನ್ನಲು ಆಹಾರವನ್ನು ಕೊಂಡೊಯ್ಯುತ್ತಿದ್ದೆ ಎಂದರು. ಇದನ್ನು ಓದಿ:ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ- ಕುಟುಂಬದ ಕಹಾನಿ ಬಿಚ್ಚಿಟ್ಟ ರಾನು

    ನನ್ನ ತಾಯಿ ಎರಡು ಮದುವೆಯಾಗಿದ್ದಾರೆ. ನಾನು ಅವರ ಮೊದಲ ಪತಿಯ ಮಗಳು, ನನಗೆ ಓರ್ವ ಸಹೋದರ ಕೂಡ ಇದ್ದಾನೆ. ಅವರ ಎರಡನೇ ಗಂಡನಿಗೆ ಎರಡು ಮಕ್ಕಳಿದ್ದಾರೆ. ಒಟ್ಟು 4 ಮಕ್ಕಳಿದ್ದೇವೆ. ಆದರೆ ಎಲ್ಲರೂ ಕೂಡ ನನ್ನನ್ನು ಮಾತ್ರ ದೂಷಿಸುತ್ತಿದ್ದಾರೆ. ಉಳಿದ ಮಕ್ಕಳನ್ನು ಯಾಕೆ ಯಾರು ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಕೆಲವು ವರ್ಷಗಳ ಹಿಂದೆಯಷ್ಟೆ ನನ್ನ ತಂದೆ ತೀರಿಹೋದರು. ಆದರೆ ಅಮ್ಮನ ಎರಡನೇ ಪತಿ ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಎರಡನೇ ಪತಿಯ ಮಕ್ಕಳು ಮುಂಬೈನಲ್ಲಿ ವಾಸವಿದ್ದಾರೆ. ಅವರು ಯಾಕೆ ಅಮ್ಮನನ್ನು ನೋಡಲು ಬಂದಿಲ್ಲ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ ಎಂದು ಕಿಡಿಕಾರಿದರು. ಇದನ್ನು ಓದಿ:ರಾನು ಕಂಠದಲ್ಲಿ ಮತ್ತೊಂದು ಹೊಸ ಹಾಡು ತಂದ ಹಿಮೇಶ್

    ಅವರು ಬೀದಿಯಲ್ಲಿ ಹಾಡಿ, ಜೀವನ ನಡೆಸುತ್ತಿದ್ದ ಬಗ್ಗೆ ನನಗೆ ತಿಳಿದಿರಲಿಲ್ಲ. ಅವರನ್ನು ರಣಘಾಟ್‍ನ ಅಮ್ರಾ ಶೋಬಾಯಿ ಶೊಯ್ತಾನ್ ಕ್ಲಬ್ ಅವರು ನೋಡಿಕೊಳ್ಳುತ್ತಿದ್ದರು. ನನ್ನ ಸಹೋದರರು ಕೂಡ ಈ ಕ್ಲಬ್ ಸದಸ್ಯರಾಗಿದ್ದರು. ಅವರೇ ಅಮ್ಮನನ್ನು ಕ್ಲಬ್‍ನಲ್ಲಿ ನೋಡಿಕೊಳ್ಳುತ್ತಿದ್ದರು. ಅವರು ನನಗೆ ಅಮ್ಮನನ್ನು ಭೇಟಿಯಾಗಲು ಬಿಡುತ್ತಿರಲಿಲ್ಲ. ಫೋನ್ ಮಾಡಿದ್ದರು ಕೂಡ ಮಾತನಾಡಲು ಕೊಡುತ್ತಿರಲಿಲ್ಲ. ಅಮ್ಮನ ಜೊತೆ ಮಾತನಾಡಲು ಪ್ರಯತ್ನಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದ್ದರು. ಆದ್ದರಿಂದ ನಾನು ಅಮ್ಮನಿಂದ ದೂರವಿದ್ದೆ. ಬಳಿಕ ಅಮ್ಮ ಬಗ್ಗೆ ಏನು ಮಾಹಿತಿ ಇರಲಿಲ್ಲ ಎಂದು ಆರೋಪಿಸಿದರು.

    ಈಗ ಅಮ್ಮನಿಗೆ ಹಣ, ಹೆಸರು ಬರುತ್ತಿರುವುದಕ್ಕೆ ಅವರು ನನ್ನನ್ನು ಮತ್ತೆ ಅಮ್ಮನಿಂದ ದೂರ ಮಾಡುತ್ತಿದ್ದಾರೆ. ಅಮ್ಮನಿಗೆ ನನ್ನ ಬಗ್ಗೆ ತಪ್ಪಾಗಿ ಹೇಳಿ ತಲೆಕೆಡಿಸುತ್ತಿದ್ದಾರೆ. ಇಬ್ಬರು ಸೇರಿ ಇತ್ತೀಚೆಗೆ ತಾಯಿಯ ಬ್ಯಾಂಕ್ ಖಾತೆಯಿಂದ 10 ಸಾವಿರ ತೆಗೆದುಕೊಂಡಿದ್ದಾರೆ. ಮನೆಗೆ ಸಾಮಾಗ್ರಿ ತಂದು ಕೊಡುವುದಾಗಿ ಅಮ್ಮನ ಬಳಿ ಹಣ ಪಡೆದು, ಆಕೆಗೆ 4 ಜೊತೆ ಬಟ್ಟೆ, ಬ್ಯಾಗ್ ತಂದು ಕೊಟ್ಟು, ಉಳಿದ ಹಣವನ್ನು ತಾವೇ ಖಾಲಿ ಮಾಡಿದ್ದಾರೆ. ಎಲ್ಲರು ನನ್ನನ್ನೇ ದೂಷಿಸುತ್ತಿದ್ದಾರೆ. ಆದರು ಕೂಡ ನಾನು ಅಮ್ಮನಿಗೆ ಬೆಂಬಲ ನೀಡುತ್ತೇನೆ. ಅವರ ಮಧುರ ಧ್ವನಿಯ ಮೂಲಕ ಅವಕಾಶವನ್ನು ಅವರೇ ಗಿಟ್ಟಿಸಿಕೊಂಡಿದ್ದಾರೆ. ಅವರ ಮಗಳೆಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತೆ ಎಂದರು.

    ಈಗಲೂ ನಾನು ನಮ್ಮ ಮನೆಗೆ ಬಾ, ನನ್ನ ಜೊತೆ ಇರು ಎಂದು ಅಮ್ಮನಿಗೆ ಹೇಳುತ್ತಿದ್ದೇನೆ ಆದರೆ ಅವರು ನನ್ನ ಮಾತನ್ನು ಕೇಳುತ್ತಿಲ್ಲ. ಅವರನ್ನು ನಾನು ಒತ್ತಾಯ ಮಾಡಲ್ಲ. ಅವರಿಗೆ ಇಷ್ಟವಿದ್ದರೆ ನನ್ನ ಜೊತೆಯಲ್ಲಿ ಇರಲಿ ನಾನು ನೋಡಿಕೊಳ್ಳುತ್ತೇನೆ ಎಂದು ಎಲಿಜಬೆತ್ ತಿಳಿಸಿದರು.

  • ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ- ಕುಟುಂಬದ ಕಹಾನಿ ಬಿಚ್ಚಿಟ್ಟ ರಾನು

    ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ- ಕುಟುಂಬದ ಕಹಾನಿ ಬಿಚ್ಚಿಟ್ಟ ರಾನು

    ನವದೆಹಲಿ: `ತೇರಿ ಮೇರಿ ಕಹಾನಿ’ ಎಂದು ಹಾಡಿ ವೈರಲ್ ಸಿಂಗರ್ ಆದ ರಾನು ಮೊಂಡಲ್ ಅವರು ತನ್ನ ಸುಮಧುರ ಧ್ವನಿಯಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಈಗ ತಮ್ಮ ಕುಟುಂಬ ಹಾಗೂ ವೈಯಕ್ತಿಕ ಜೀವನದ ಕಥೆಯನ್ನು ರಾನು ಬಿಚ್ಚಿಟ್ಟಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದ ವೇಳೆ ರಾನು ಅವರು ತಮ್ಮ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ತಾನು ಹುಟ್ಟಿದಾಗಿನಿಂದಲೂ ಬಡವಳಲ್ಲ, ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ. ಒಳ್ಳೆಯ ಕುಟುಂಬದಲ್ಲಿ ಜನಿಸಿರುವುದಾಗಿ ರಾನು ತಿಳಿಸಿದ್ದಾರೆ.

    ‘ನಾನು ಫುಟ್‍ಪಾತ್‍ನಲ್ಲಿ ಹುಟ್ಟಿಲ್ಲ. ನಾನು ಉತ್ತಮ ಕುಟುಂಬಕ್ಕೆ ಸೇರಿದವಳು. ಆದರೆ ಅದು ನನ್ನ ಹಣೆಬರಹ. ನಾನು ಕೇವಲ ಆರು ತಿಂಗಳ ಮಗುವಾಗಿದ್ದಾಗ ನನ್ನ ಹೆತ್ತವರಿಂದ ಬೇರ್ಪಟ್ಟಿದ್ದೇನೆ. ನಾನು ಮದುವೆಯ ನಂತರ ಪಶ್ಚಿಮ ಬಂಗಾಳದಿಂದ ಮುಂಬೈಗೆ ಸ್ಥಳಾಂತರಗೊಂಡೆನು ಎಂದು ಹೇಳಿದ್ದಾರೆ.

    ಅಷ್ಟೇ ಅಲ್ಲದೆ ತಮ್ಮ ಪತಿ ಬಾಲಿವುಡ್ ಸ್ಟಾರ್ ಫಿರೋಜ್ ಖಾನ್ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಅವರ ಮಗ ಫರ್ದೀನ್ ಆ ಸಮಯದಲ್ಲಿ ಕಾಲೇಜು ಒದುತ್ತಿದ್ದರು, ಅವರ ಕುಟುಂಬ ಸದಸ್ಯರಂತೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದರು.

    ನಮಗೆ ಮನೆ ಇತ್ತು, ಆದರೆ ಅದನ್ನು ನಿರ್ವಹಿಸಲು ಜನರು ಬೇಕು. ಒಂಟಿಯಾಗಿ ಹಲವು ದಿನದಿಂದ ಬದುಕಿದ್ದೇನೆ. ನಾನು ತುಂಬಾ ಕಷ್ಟಪಟ್ಟಿದ್ದೇನೆ ಆದರೆ ಯಾವಾಗಲೂ ದೇವರನ್ನು ನಂಬುತ್ತೇನೆ. ಹಿಂದೆ ನಾನು ಸಂದರ್ಭಗಳಿಗೆ ಅನುಗುಣವಾಗಿ ಹಾಡುತ್ತಿದ್ದೆನು. ಆದರೆ ನನಗೆ ಯಾರು ಕೂಡ ಅವಕಾಶ ನೀಡಿಲ್ಲ ಎಂದು ಕಷ್ಟವನ್ನು ಹೇಳಿಕೊಂಡರು.

    ನಾನು ತುಂಬಾ ಸಂತೋಷವಾಗಿದ್ದೇನೆ, ಈಗಾಗಲೇ 5-6 ಹಾಡುಗಳನ್ನು ರೆಕಾರ್ಡ್ ಮಾಡಿದ್ದೇನೆ. ಮುಂಬೈನಲ್ಲಿನ ಸಂಗೀತದ ಅವಕಾಶಗಳು ಎಂದರೆ ಅದಕ್ಕೆ ದೊಡ್ಡ ಅರ್ಥವಿದೆ. ನನ್ನ ಮನೆಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವುದು ಸಹ ಕಷ್ಟ. ಮುಂಬೈಯಲ್ಲಿ ಒಂದು ಮನೆ ಇದ್ದಿದ್ದರೆ ಚೆನ್ನಾಗಿತ್ತು. ಆದರೆ ನಾನು ಅದರ ಬಗ್ಗೆ ಯೋಚಿಸಬೇಕಾಗಿಲ್ಲ. ದೇವರು ಇದ್ದಾನೆ ಎಂದು ರಾನು ಸಂದರ್ಶನದಲ್ಲಿ ತಮ್ಮ ಕುಟುಂಬ, ಹಿಂದಿನ ಜೀವನದ ಬಗ್ಗೆ ಹಂಚಿಕೊಂಡಿದ್ದಾರೆ.

    ರೈಲ್ವೇ ನಿಲ್ದಾಣದಲ್ಲಿ ‘ಎಕ್ ಪ್ಯಾರ್ ಕಾ ನಗ್ಮ’ ಎಂದು ಹಾಡಿ ರಾನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದರು. ಬಳಿಕ ಅವರಿಗೆ ಖ್ಯಾತ ಗಾಯಕ ಹಿಮೇಶ್ ರೆಶ್ಮೀಯ ಅವರು ತಮ್ಮ ಚಿತ್ರದಲ್ಲಿ ‘ತೇರಿ ಮೇರಿ ಕಹಾನಿ’ ಎಂದು ಹಾಡಲು ಅವಕಾಶ ಕೊಟ್ಟರು. ಈ ಹಾಡನ್ನು ರಾನು ಅವರು ರೆಕಾರ್ಡಿಂಗ್ ಮಾಡುತ್ತಿದ್ದ ವಿಡಿಯೋ ತುಣುಕನ್ನು ಹಿಮೇಶ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕೂಡ ಎಲ್ಲೆಡೆ ಸಖತ್ ವೈರಲ್ ಆಗಿತ್ತು.

  • ಒಂದೇ ಬೈಕ್‍ನಲ್ಲಿ 7 ಜನ, 2 ಶ್ವಾನ ಸಮೇತ ಲಗೇಜ್ ಸಾಗಿಸಿದ ವ್ಯಕ್ತಿ: ವಿಡಿಯೋ ನೋಡಿ

    ಒಂದೇ ಬೈಕ್‍ನಲ್ಲಿ 7 ಜನ, 2 ಶ್ವಾನ ಸಮೇತ ಲಗೇಜ್ ಸಾಗಿಸಿದ ವ್ಯಕ್ತಿ: ವಿಡಿಯೋ ನೋಡಿ

    ನವದೆಹಲಿ: ನಾವು ಒಂದು ಬೈಕ್‍ನಲ್ಲಿ ಇಬ್ಬರು ಅಥವಾ ಮೂವರು ಕುಳಿತುಕೊಳ್ಳವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪೂರ್ತಿ ಅವನ ಕುಟುಂಬವನ್ನು ಲಗೇಜ್ ಸಮೇತ ಒಂದೇ ಬೈಕ್‍ನಲ್ಲಿ ಸಾಗಿಸಿದ್ದಾನೆ.

    ಒಂದು ಬೈಕ್‍ನಲ್ಲಿ ತನ್ನ ಐದು ಜನ ಮಕ್ಕಳು ಮತ್ತು ಹೆಂಡತಿ ಹಾಗೂ ಎರಡು ನಾಯಿ ಮರಿಯ ಜೊತೆಗೆ ತನ್ನ ಮನೆಯ ಎಲ್ಲ ಲಗೇಜ್‍ನ್ನು ಕಟ್ಟಿಕೊಂಡು ಒಬ್ಬ ವ್ಯಕ್ತಿ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    https://twitter.com/rishadcooper/status/1166931979138260994

    ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ರಿಷಾದ್ ಕೂಪರ್ ಎಂಬವರು ತಮ್ಮ ಟ್ವಿಟ್ಟರ್‍ ನಲ್ಲಿ ಹಾಕಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬೈಕಿನ ಹಿಂಬದಿಯಲ್ಲಿ ಮೂರು ಮಕ್ಕಳು ಕುಳಿತಿದ್ದಾರೆ. ನಂತರ ಆತನ ಮಡದಿ ಕುಳಿತಿದ್ದಾಳೆ. ಆತ ಬೈಕ್ ಓಡಿಸುತ್ತಿದ್ದು, ಮುಂಭಾಗದಲ್ಲಿ ಇಬ್ಬರು ಮಕ್ಕಳು ಕುಳಿತಿರುತ್ತಾರೆ. ಬೈಕಿನ ಸುತ್ತಾ ಲಗೇಜ್‍ನ್ನು ಕಟ್ಟಿದ್ದು, ಬೈಕ್ ಬಲಭಾಗದಲ್ಲಿರುವ ಲಗೇಜ್ ಮೇಲೆ ಒಂದು ನಾಯಿ ಆರಾಮವಾಗಿ ಕುಳಿತಿದೆ. ಇನ್ನೊಂದು ನಾಯಿಯನ್ನು ಮುಂದೆ ಕುಳಿತಿರುವ ಹುಡುಗ ಹಿಡಿದುಕೊಂಡಿರುವುದನ್ನು ಕಾಣಬಹುದು.

    ಒಟ್ಟು ಈ ವಿಡಿಯೋದಲ್ಲಿ ನಾಯಿಗಳನ್ನು ಸೇರಿಸಿದರೆ ಒಟ್ಟು 9 ಜನ ಕುಳಿತಿದ್ದಾರೆ. ಈ ವಿಡಿಯೋ ಆಪ್ಲೋಡ್ ಮಾಡಿರುವ ಕೂಪರ್ ಇದಕ್ಕೆ ಭಾರತದಲ್ಲಿ ಮಾತ್ರ ಎಂದು ಶೀರ್ಷಿಕೆ ಕೊಟ್ಟಿದ್ದು, ವಿಡಿಯೋ ನೋಡಿದ ಜನರು ಅಶ್ಚರ್ಯದ ಜೊತೆಗೆ ಅತಂಕವನ್ನು ವ್ಯಕ್ತಪಡಿಸಿದ್ದಾರೆ.