Tag: family

  • ಮನೆಯವರ ಮುಂದೆಯೇ ಅವಮಾನ – ಪ್ರೀತಿಸಿದ ಯುವಕ ಆತ್ಮಹತ್ಯೆ, ಯುವತಿ ಗಂಭೀರ

    ಮನೆಯವರ ಮುಂದೆಯೇ ಅವಮಾನ – ಪ್ರೀತಿಸಿದ ಯುವಕ ಆತ್ಮಹತ್ಯೆ, ಯುವತಿ ಗಂಭೀರ

    ತಿರುವನಂತಪುರಂ: ಪ್ರೀತಿ ವಿಚಾರವಾಗಿ ಕುಟುಂಬದ ಮುಂದೆಯೇ ಅವಮಾನ ಮಾಡಿದ್ದಕ್ಕೆ ಕೇರಳದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸಂತ್ರಸ್ತನನ್ನು ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಮೂಲದ ಶಾಹೀರ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಮುಂದೆ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಅವಮಾನ ಮಾಡಿದ್ದಾರೆ ಎಂದು ನೊಂದುಕೊಂಡು ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಶಾಹೀರ್ ಸ್ಥಳೀಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇದು ಹುಡುಗಿಯರ ಸಂಬಂಧಿಕರಿಗೆ ತಿಳಿದಿದೆ. ಆಗ ಹುಡುಗಿಯ ಕಡೆಯವರು ಆತನನ್ನು ಸುತ್ತುವರಿದು ಯುವಕನ ಕುಟುಂಬದವರ ಮುಂದೆಯೇ ಆತನನ್ನು ಥಳಿಸಿದ್ದಾರೆ. ಅಲ್ಲದೆ ನಮ್ಮ ಕುಟುಂಬದ ಹುಡುಗಿಯನ್ನೇ ಪ್ರೀತಿಸಲು ಧೈರ್ಯ ಮಾಡಿದ್ದೀಯಾ ಎಂದು ಆತನ ಹೆತ್ತವರ ಮುಂದೆಯೇ ಹೊಡೆದಿದ್ದಾರೆ.

    ಈ ವೇಳೆ ಶಾಹೀರ್ ಸಹೋದರ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದಾಗ, ಹುಡುಗಿಯ ಸಂಬಂಧಿಕರು ಅವನನ್ನೂ ಹೊಡೆದಿದ್ದಾರೆ. ಶಾಹೀರ್ ಸಹೋದರನಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅವರ ಸಂಬಂಧದ ಕುರಿತು ಬಹಿರಂಗವಾಗಿದ್ದಕ್ಕೆ ಹಾಗೂ ಹಿಂಸಾಚಾರ ನಡೆದಿದ್ದನ್ನು ಸಹಿಸಲಾಗದೆ ಹುಡುಗಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾಳೆ. ಅವಳ ಸ್ಥಿತಿ ಸಹ ಗಂಭೀರವಾಗಿದೆ. ಅತ್ತ ಶಾಹೀರ್ ಸಹ ತನ್ನ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಕ್ಕಾಗಿ ನೋಂದುಕೊಂಡು ಪ್ರಾಣ ಬಿಡುವುದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ ಎಂದು ನಿರ್ಧರಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಅವನ ಸಾವಿನ ನಂತರ ಮಲಪ್ಪುರಂ ಪೊಲೀಸರು 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಎಲ್ಲದರ ಮಧ್ಯೆ 22 ವರ್ಷದ ಯುವಕ ಮಾತ್ರ ಮಾಣ ಕಳೆದುಕೊಂಡಿದ್ದಾನೆ. ಐಪಿಸಿ ಸೆಕ್ಷನ್‍ನ ವಿವಿಧ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಪ್ರಸ್ತುತ ಮಾಹಿತಿ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಇವರೇನಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

  • ತಂದೆಯನ್ನ ಕೊಂದು ರಸ್ತೆ ಬದಿ ಎಸೆದು ಅಪಘಾತವೆಂದ ಮಗ ಅರೆಸ್ಟ್

    ತಂದೆಯನ್ನ ಕೊಂದು ರಸ್ತೆ ಬದಿ ಎಸೆದು ಅಪಘಾತವೆಂದ ಮಗ ಅರೆಸ್ಟ್

    ಧಾರವಾಡ: ಕುಟುಂಬಸ್ಥರಿಗೆ ತಂದೆ ಕಿರಿಕಿರಿ ಮಾಡುತ್ತಿದ್ದರು ಎಂಬ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿ, ಬಳಿಕ ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

    ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹನುಮಂತಪ್ಪ ಕಿರೇಸೂರ ಮೃತ ದುರ್ದೈವಿ. ರಮೇಶ್ ಕಿರೇಸೂರ ತಂದೆಯನ್ನೆ ಕೊಲೆ ಮಾಡಿದ್ದ ಪಾಪಿ ಮಗ. ಕೊಲೆ ಮಾಡಲು ಆರೋಪಿಗೆ ಸೋದರ ಸಂಬಂಧಿಗಳಾದ ವೆಂಕಪ್ಪ ಮತ್ತು ಸತ್ಯಪ್ಪ ಸಾಥ್ ಕೊಟ್ಟಿದ್ದಾರೆ.

    ಅಕ್ಟೋಬರ್ ೨೭ರಂದು ಜಾವೂರ-ಹಂಚಿನಾಳ ರಸ್ತೆ ಮಧ್ಯೆ ಹನುಮಂತಪ್ಪ ಅವರ ಶವ ಪತ್ತೆಯಾಗಿತ್ತು. ಅಲ್ಲದೆ ನಮ್ಮ ತಂದೆಗೆ ಅಪಘಾತವಾಗಿದೆ ಎಂದು ರಮೇಶ್ ಪೊಲೀಸರಿಗೆ ದೂರು ನೀಡಿದ್ದನು. ಪತ್ತೆಯಾದ ಶವದ ಸ್ವರೂಪ ನೋಡಿದ ನವಲಗುಂದ ಪೊಲೀಸರು ಅನುಮಾನಗೊಂಡು, ಇದು ಅಪಘಾತವಲ್ಲ ಕೊಲೆ ಎಂದು ಶಂಕಿಸಿ ತನಿಖೆ ಕೈಗೊಂಡಿದ್ದರು.

    ಪೊಲೀಸರು ಪ್ರಕರಣ ಸಂಬಂಧ ಕುಟುಂಬಸ್ಥರ ವಿಚಾರಣೆ ನಡೆಸಿದಾಗ ಆರೋಪಿ ಮಗ ಸಿಕ್ಕಿಬಿದ್ದಿದ್ದಾನೆ. ಕುಟುಂಬ ಸದಸ್ಯರಿಗೆ ಕಿರಿಕಿರಿ ಮಾಡುತ್ತಿದ್ದ ಎಂಬ ಕಾರಣಕ್ಕೆ ತಂದೆಯನ್ನ ಕೊಲೆ ಮಾಡಿ, ಬಳಿಕ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಜಾಣತನ ಪ್ರದರ್ಶಿಸಿ ಮಗ ಖಾಕಿ ಅತಿಥಿಯಾಗಿದ್ದಾನೆ.

    ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ನವಲಗುಂದ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

  • ಮದ್ವೆ ಮುಗಿಸಿ ಬರುತ್ತಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ

    ಮದ್ವೆ ಮುಗಿಸಿ ಬರುತ್ತಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ

    ಚಂಡೀಗಢ: ಮದುವೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಮೃತಪಟ್ಟ ಘಟನೆ ಪಂಜಾಬ್‌ನ ಪರ‍್ಯಾಲಿಯಲ್ಲಿ ನಡೆದಿದೆ.

    ಸುನಂ-ಭವಾನಿಗಡ ಮಾರ್ಗದಲ್ಲಿ ಈ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಪತಿ-ಪತ್ನಿ ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರು ಮದುವೆ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಚಾಲಕ ಕೆಟ್ಟು ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲದೆ ಈ ಬಗ್ಗೆ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.

    ಅಪಘಾತದಲ್ಲಿ ಪತಿ, ಪತ್ನಿ, ಅವರ ಮಗ ಹಾಗೂ ಮೊಮ್ಮಗಳು ಪ್ರಯಾಣಿಸುತ್ತಿದ್ದರು. ಮೃತಪಟ್ಟ ವ್ಯಕ್ತಿಯನ್ನು ಹರೀಶ್ ಅದಾಲ್ಕಾ ಎಂದು ಗುರುತಿಸಲಾಗಿದ್ದು, ಇವರು ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಸೋಮವಾರ ರಾತ್ರಿ ನಾಲ್ವರು ಭವಾನಿಗಡದಲ್ಲಿ ನಡೆದ ಮದುವೆ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದರು ಎನ್ನಲಾಗಿದೆ.

    ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹಳ್ಳಿಯಲ್ಲಿ ಮದುವೆ ಮಾಡಿದ್ದಕ್ಕೆ ಕಿರಿಕ್ – ವಧು ವರನ ಕುಟುಂಬದ ನಡುವೆ ಮಾರಾಮಾರಿ

    ಹಳ್ಳಿಯಲ್ಲಿ ಮದುವೆ ಮಾಡಿದ್ದಕ್ಕೆ ಕಿರಿಕ್ – ವಧು ವರನ ಕುಟುಂಬದ ನಡುವೆ ಮಾರಾಮಾರಿ

    ಹೈದರಾಬಾದ್: ಹಳ್ಳಿಯಲ್ಲಿ ಮದುವೆ ಆಯೋಜಿಸಲಾಗಿದೆ ಎನ್ನುವ ವಿಚಾರಕ್ಕೆ ಮುಹೂರ್ತದ ದಿನವೇ ವಧು ಮತ್ತು ವರನ ಕುಟುಂಬದವರು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ತೆಲಂಗಾಣದ ಸರ್ಯಪೇಟೆಯಲ್ಲಿ ನಡೆದಿದೆ.

    ಮದುವೆ ಮನೆಯಲ್ಲೇ ವಧು ಮತ್ತು ವರನ ಕಡೆಯವರು ಬಡಿದಾಡಿಕೊಂಡಿದ್ದು, ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಕೊಡಾಡ್ ಗ್ರಾಮೀಣ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಶಿವರಾಮ್ ರೆಡ್ಡಿ, ಅಕ್ಟೋಬರ್ ನಲ್ಲಿ ಸೂರ್ಯಪೇಟೆ ಜಿಲ್ಲೆಯ ಕೊಡಾಡ್ ಮಂಡಲದ ಅಜಯ್ ಮತ್ತು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಇಂದ್ರಜ ನಡುವೆ ವಿವಾಹವನ್ನು ನಿಗದಿಪಡಿಸಲಾಗಿತ್ತು. ಅದರಂತೆ ಮದುವೆ ಮಾಡಲು ಅಕ್ಟೋಬರ್ 29 ರಂದು ಮದುವೆ ನಿಶ್ಚಯ ಮಾಡಲಾಗಿತ್ತು.

    ವಿವಾಹದ ಸಂಭ್ರಮಾಚರಣೆಯ ಸಮಯದಲ್ಲಿ, ಗ್ರಾಮದಲ್ಲಿ ಮದುವೆ ಮಾಡುತ್ತಿರುವ ವಿಚಾರದ ಬಗ್ಗೆ ವಧು ಮತ್ತು ವರನ ಕುಟುಂಬ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವಾದವು ಜಗಳವಾಗಿ ಮಾರ್ಪಟ್ಟು, ಎರಡೂ ಕುಟುಂಬದ ಸದಸ್ಯರು ಸಮಾರಂಭಕ್ಕೆ ಹಾಕಿಸಿದ್ದ ಕುರ್ಚಿಗಳಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂದು ಶಿವರಾಮ್ ರೆಡ್ಡಿ ಹೇಳಿದ್ದಾರೆ.

    ಈ ವಿಚಾರ ತಿಳಿದ ನಂತರ ನಾವು ತಕ್ಷಣ ಅಲ್ಲಿಗೆ ಹೋದೆವು. ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ಸೇರಿಸಿ ಠಾಣೆಗೆ ಬಂದು ದೂರು ನೀಡಿ ಎಂದು ಹೇಳಿದ್ದವು. ಆದರೆ ಮರು ದಿನ ಠಾಣೆಗೆ ಬಂದ ಅವರು ಈ ಜಗಳದ ವಿಚಾರವಾಗಿ ವಧು ವರರಿಗು ಯಾವುದೇ ಸಮಸ್ಯೆ ಇಲ್ಲ. ಅವರು ನಾವು ಒಟ್ಟಿಗೆ ಇರುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ನಾವು ದೂರು ನೀಡುವುದಿಲ್ಲ. ನಮ್ಮಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಬಾಣಂತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಡೆಂಗ್ಯೂಗೆ ಬಲಿ

    ಬಾಣಂತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಡೆಂಗ್ಯೂಗೆ ಬಲಿ

    ಹೈದರಾಬಾದ್: ತೆಲಂಗಾಣದಲ್ಲಿ ಮಾರಕ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದ್ದು, ಕೇವಲ 15 ದಿನಗಳಲ್ಲಿ ಒಂದೇ ಕುಟುಂಬದ ನಾಲ್ವರು ಡೆಂಗ್ಯೂಗೆ ಬಲಿಯಾಗಿದ್ದಾರೆ.

    ಮಂಚೇರಿಯಲ್ ಜಿಲ್ಲೆಯ ನಿವಾಸಿಗಳಾದ ರಾಜಗಟ್ಟು, ಪತ್ನಿ ಸೋನಿ(28), ಲಿಂಗಯ್ಯ, ಮಗಳು ಶ್ರೀವರ್ಷಿಣಿ ಮೃತ ದುರ್ದೈವಿಗಳು. ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜಗಟ್ಟು ಅವರು ಕಳೆದ 15 ದಿನಗಳ ಹಿಂದೆ ಡೆಂಗ್ಯೂ ಜ್ವರದಿಂದ ಪ್ರಾಣಬಿಟ್ಟಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜಗಟ್ಟು ಅವರು ಅಕ್ಟೋಬರ್ 16ರಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು. ರಾಜಗಟ್ಟು ಅವರು ನಿಧನರಾದ 5 ದಿನಗಳ ಬಳಿಕ ಸೋನಿ ಅವರ ತಾತ ಲಿಂಗಯ್ಯ ಡೆಂಗ್ಯೂ ಜ್ವರದಿಂದ ಬಳಲಿ ಮೃತಪಟ್ಟಿದ್ದರು.

    ಈ ಎರಡು ಸಾವುಗಳ ನೋವಿನಿಂದ ಮನೆಮಂದಿ ಇನ್ನೂ ಹೊರಬಂದಿರಲಿಲ್ಲ, ಅಷ್ಟರಲ್ಲೇ ದೀಪಾವಳಿ ಹಬ್ಬದಂದೇ ರಾಜಗಟ್ಟು ಮಗಳು ಶ್ರೀವರ್ಷಿಣಿ ಡೆಂಗ್ಯೂ ಜ್ವರಕ್ಕೆ ಬಲಿಯಾದಳು. ಗರ್ಭಿಣಿಯಾಗಿದ್ದ ರಾಜಗಟ್ಟು ಪತ್ನಿ ಸೋನಿ ಈ ಸಾವುಗಳಿಂದ ಬಹಳಷ್ಟು ನೊಂದಿದ್ದರು, ಅವರನ್ನು ಕೂಡ ಮಾರಕ ಡೆಂಗ್ಯೂ ಬಿಡಲಿಲ್ಲ. ಮಂಗಳವಾರ ಸಿಕಂದ್ರಾಬಾದ್‍ನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಸೋನಿ ಜನ್ಮ ನೀಡಿದರು. ಆದರೆ ಹೆರಿಗೆ ಆದ ಮರುದಿನವೇ ಸೋನಿ ಮೃತಪಟ್ಟಿದ್ದಾರೆ. ಹೀಗೆ ಒಂದೇ ಕುಟುಂಬದ ನಾಲ್ವರು ಡೆಂಗ್ಯೂಗೆ ಬಲಿಯಾಗಿರುವುದು ವಿಷಾದನೀಯವಾಗಿದೆ.

    ಕಳೆದ ವಾರ ತೆಲಂಗಾಣ ಹೈಕೋರ್ಟ್ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಜ್ವರದ ಹಾವಳಿಯನ್ನು ತಡೆಗಟ್ಟುವಂತೆ ಸಾರ್ವಜನಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತ್ತು. ವಿಚಾರಣೆ ನಡೆಸಿದ ದ್ವೀಸದಸ್ಯ ಪೀಠದ ನ್ಯಾಯಾಧೀಶರು, ಜನವರಿಯಲ್ಲಿ 85 ಸಂಖ್ಯೆಯಲ್ಲಿದ್ದ ಡೆಂಗ್ಯೂ ಪ್ರಕರಣಗಳು ಅಕ್ಟೋಬರ್ ವರೆಗೆ ಹೇಗೆ 3,500 ಪ್ರಕರಣವಾಯ್ತು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

    ಅಷ್ಟೇ ಅಲ್ಲದೆ ಒಂದು ವೇಳೆ ಸರ್ಕಾರ ರಾಜ್ಯದಲ್ಲಿ ಡೆಂಗ್ಯೂ ಜ್ವರವನ್ನು ನಿಯಂತ್ರಣ ಮಾಡಲು ವಿಫಲವಾದರೆ, ಮಾರಕ ಡೆಂಗ್ಯೂ ಜ್ವರದಿಂದ ಸಾವನ್ನಪ್ಪುವ ರೋಗಿಗಳ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನವನ್ನು ನೀಡಬೇಕು ಎಂದು ಆದೇಶಿಸಿತ್ತು.

  • ಕೇಕ್‍ನಲ್ಲಿ ನಿದ್ರೆ ಮಾತ್ರೆ ಹಾಕಿ ಮಕ್ಕಳಿಗೆ ನೇಣು ಬಿಗಿದ ದಂಪತಿ

    ಕೇಕ್‍ನಲ್ಲಿ ನಿದ್ರೆ ಮಾತ್ರೆ ಹಾಕಿ ಮಕ್ಕಳಿಗೆ ನೇಣು ಬಿಗಿದ ದಂಪತಿ

    – ಒಂದೇ ಸೀರೆಯಲ್ಲಿ ನೇಣು ಹಾಕಿಕೊಂಡ ಸತಿಪತಿ
    – ಸ್ವಾಭಿಮಾನಕ್ಕೆ ಮಕ್ಕಳನ್ನೇ ಕೊಂದ್ರಾ ದಂಪತಿ?
    – ಗೆಳೆಯ ಸಾವನ್ನು ಕಂಡು ಬೆಚ್ಚಿ ಬಿದ್ದ ಬಾಲಕ

    ಬೆಳಗಾವಿ: ಚಿನ್ನದಂತಹ ಸಂಸಾರದ ನಾಲ್ಕು ಜನರು ಈಗ ಬಾರದ ಲೋಕಕ್ಕೆ ತೆರಳಿದ್ದಾರೆ. ಅದು ಮನೆಯ ಯಜಮಾನನ ಒಂದು ತಪ್ಪು ನಿರ್ಧಾರದಿಂದಾಗಿ ಈ ಸ್ಥಿತಿ ಬಂದಿರುವುದು. ಏನೂ ಅರಿಯದ ತನ್ನೆರಡು ಮಕ್ಕಳಿಗೆ ನೇಣು ಹಾಕಿ ನಂತರ ದಂಪತಿ ಕೂಡ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ ಇದು.

    ಹೊಸೂರು ಗ್ರಾಮದ ಶರಣಾದ ಭೀಮಪ್ಪ ಚೂನಪ್ಪಗೋಳ (35), ಪತ್ನಿ ಮಂಜುಳಾ (30) ಮತ್ತು ತನ್ನೆರೆಡು ಮಕ್ಕಳಾದ ಪ್ರದೀಪ್(8), ಮೋಹನ್(6) ಆತ್ಮಹತ್ಯೆಗೆ ಶರಣಾದ ಕುಟುಂಬ. ಐದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ಪನನ್ನು ಪ್ರದೀಪ್ ಉಳಿಸಿಕೊಂಡಿದ್ದ. ಆದರೆ ಈಗ ಅದೇ ಮಗನನ್ನೇ ಭೀಮಪ್ಪ ಕೊಂದು ಬಿಟ್ಟ ಕಥೆ ಕಲ್ಲು ಹೃದಯವನ್ನೂ ಕರಿಸುವಂತಿದೆ.

    ಭೀಮಪ್ಪ ಹಾಗೂ ಮಂಜುಳಾ ಶನಿವಾರ ಬೆಳಗ್ಗೆ ಗೋಕಾಕ್ ನಗರಕ್ಕೆ ಹೋಗಿದ್ದರು. ಮಂಜುಳಾ ತಾನು ಕಲೆತಿದ್ದ ಕಂಪ್ಯೂಟರ್ ಕೋರ್ಸ್ ನ ಸರ್ಟಿಫಿಕೇಟ್ ತೆಗೆದುಕೊಂಡು ಜತೆಗೆ ಮಕ್ಕಳಿಗೆ ತಿಂಡಿ ತಿನಸನ್ನು ಖರೀದಿಸಿ ಗ್ರಾಮಕ್ಕೆ ಮರಳಿದ್ದರು. ಹೀಗೆ ಮರಳಿ ಮನೆಗೆ ಬಂದ ದಂಪತಿ ಆಟವಾಡುತ್ತಿದ್ದ ಇಬ್ಬರು ಮಕ್ಕಳನ್ನು ಕರೆದು ಸಂತೆಯಲ್ಲಿ ತಂದಿದ್ದ ಕೇಕ್ ಕೊಟ್ಟಿದ್ದಾರೆ. ಅದರ ಜತೆಗೆ ತಾಯಿ ಟೀ ಮಾಡಿ ಮಕ್ಕಳಿಗೆ ಕುಡಿಸಿದ್ದಾಳೆ. ಆದರೆ ಇದೇ ಮಕ್ಕಳ ಕೊನೆ ಅಂತ ಆ ಎರಡು ಕಂದಮ್ಮಗಳಿಗೆ ಮಾತ್ರ ತಿಳಿದಿರಲಿಲ್ಲ.

    ಸಂತೆಯಲ್ಲಿ ತಂದಿದ್ದ ಕೇಕ್‍ನಲ್ಲಿ ದಂಪತಿ ನಿದ್ರೆ ಮಾತ್ರೆ ಬೆರೆಸಿದ್ದರು. ಪರಿಣಾಮ ಮಕ್ಕಳು ನಿದ್ರೆಗೆ ಜಾದಿದ್ದರು. ಹೀಗೆ ನೆಮ್ಮದಿಯಿಂದ ಮಲಗಿದ್ದ ಮಕ್ಕಳನ್ನು ಮಂಜುಳಾ ಕೈಯಲ್ಲಿ ಎತ್ತಿ ಹಿಡದರೆ ಪಾಪಿ ತಂದೆ ಭೀಮಪ್ಪ ಸೀರೆಯಿಂದ ಕತ್ತಿಗೆ ನೇಣು ಬಿಗಿದಿದ್ದ. ಈ ರೀತಿ ಎರಡು ಮಕ್ಕಳನ್ನ ಸಾವಿನ ಮನೆಗೆ ಕಳುಹಿಸಿದ ದಂಪತಿ ನಂತರ ಒಂದೇ ಹಗ್ಗದಲ್ಲಿ ತಾವು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಒಂದಲ್ಲ ಎರಡಲ್ಲ ಐದು ಬಾರಿ ಈ ಭೀಮಪ್ಪ ಆತ್ಮಹತ್ಯೆಗೆ ಯತ್ನಿಸಿದ್ದ. ಮೂರು ಬಾರಿ ಬಾವಿಗೆ ಹಾರಿದ್ರೇ ಒಂದು ಬಾರಿ ಬೆಂಕಿ ಹಚ್ಚಿಕೊಂಡು ಇನ್ನೊಂದು ಬಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಸಂದರ್ಭದಲ್ಲಿ ಮೊದಲ ಮಗ ಪ್ರದೀಪ್ ಕಿರುಚಾಡಿ ಅಕ್ಕಪಕ್ಕದವರನ್ನು ಕರೆದು ತಂದೆಯನ್ನ ಉಳಿಸಿಕೊಂಡಿದ್ದ.

    ಪತ್ನಿ ಮಂಜುಳಾ ಪತಿಗಿಂತ ಹೆಚ್ಚು ಓದಿದ್ದು ನಾನೇ ಹೇಳಿದ್ದು ಮನೆಯಲ್ಲಿ ಆಗಬೇಕು ಎಂದು ಪಟ್ಟು ಹಿಡಿದಾಗೊಮ್ಮೆ ಈ ರೀತಿ ಭೀಮಪ್ಪ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ಮಗನನ್ನ ಒಂದು ಬಾರಿ ಶಾಲೆಯ ಮೇಲೆಯೇ ಬಿಸಾಕಿ ಒಗೆದಿದ್ದ. ಇದರಿಂದಾಗಿ ಗ್ರಾಮಸ್ಥರು ಇವನ ಸಹವಾಸವೇ ಬೇಡ ಅಂತ ದೂರ ಉಳಿದಿದ್ದರು. ಆದರೆ ಶನಿವಾರ ಗೋಕಾಕ್‍ಗೆ ಹೋಗಿ ಬಂದ ದಂಪತಿ ಆತ್ಮಹತ್ಯೆಗೆ ಪ್ಲಾನ್ ಮಾಡಿದ್ದರು.

    ಮಕ್ಕಳನ್ನ ಮೊದಲು ಸಾಯಿಸಿ ನಂತರ ಇಬ್ಬರು ಸಾಯಬೇಕು ಅಂತ ಭೀಮಪ್ಪ ಹಾಗೂ ಮಂಜುಳಾ ಪ್ಲಾನ್ ಮಾಡಿದ್ದರು. ಆದರೆ ಮಕ್ಕಳನ್ನ ಸಾಯಿಸಬೇಕೆಂದರೆ ಅವರು ಕಿರುಚಾಡಿ ಅಕ್ಕಪಕ್ಕದವರಿಗೆ ಗೊತ್ತಾದರೆ ಮತ್ತೆ ತಮ್ಮ ಪ್ಲಾನ್ ಉಲ್ಟಾ ಆಗುತ್ತೆ ಅಂದುಕೊಂಡು ಗೋಕಾಕ್‍ನಲ್ಲಿ ನಿದ್ರೆ ಮಾತ್ರಗಳನ್ನು ತಂದಿದ್ದರು. ಅದರಂತೆ ನಿದ್ರೆ ಮಾತ್ರೆಗಳನ್ನ ಕೇಕ್ ಹಾಗೂ ಟೀಯಲ್ಲಿ ಹಾಕಿದ್ದಾರೆ. ಹಾಕಿ ಮಕ್ಕಳಿಗೆ ಮೊದಲು ತಿನ್ನಿಸಿದ್ದಾರೆ. ಹೀಗೆ ತಿಂದ ಮಕ್ಕಳು ನಿದ್ರೆಗೆ ಜಾರಿದ್ದಾರೆ. ಹೀಗೆ ಮಕ್ಕಳು ಮಲಗುತ್ತಿದ್ದಂತೆ ಅವರಿಗೆ ನೇಣು ಹಾಕಿ ತಾವು ಒಂದೇ ಹಗ್ಗಕ್ಕೆ ಕೊರಳೋಡ್ಡಿದ್ದಾರೆ.

    ಭೀಮಪ್ಪನ ತಾಯಿ ಯಲ್ಲವ್ವಾ ಸಂಜೆ 6.30ರ ಸುಮಾರಿಗೆ ಮನೆಗೆ ಬಂದು ಮಗನ ಮನೆ ಕದ ಬಡೆದಿದ್ದಾಳೆ. ಮಗ ಮಾತ್ರ ಕದ ತೆಗೆಯಲಿಲ್ಲ. ಅರ್ಧ ಗಂಟೆ ಸುಮ್ಮನಾದ ತಾಯಿ ಯಲ್ಲವ್ವಾ ಅಲ್ಲೇ ಪಕ್ಕದ ಮನೆಯ ಬಾಲಕನ್ನೊಬ್ಬನನ್ನ ಕರೆದು ಮನೆಯ ಹೆಂಚಿನ ಮೇಲೆ ಹತ್ತಿಸಿ ನೋಡಲು ಹೇಳಿದ್ದಳು. ಹೆಂಚು ತೆಗೆದುನೋಡಿದ ಬಾಲಕ ಗಣೇಶ ಎಲ್ಲರೂ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳುತ್ತಾ ಗಾಬರಿಯಿಂದ ಕೆಳಗೆ ಜಿಗಿದಿದ್ದಾನೆ. ಇತ್ತ ಗ್ರಾಮಸ್ಥರು ಸೇರಿಕೊಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

    ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದರು. ಬಳಿಕ ಭೀಮಪ್ಪನ ಜಮೀನಿನಲ್ಲೇ ಒಂದೇ ಚಿತೆಯಲ್ಲಿ ನಾಲ್ಕು ಜನರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದಾದ ಬಳಿಕ ಸ್ಥಳಕ್ಕೆ ಬಂದ ಎಸ್.ಪಿ ಸ್ಥಳ ಪರಿಶೀಲನೆ ನಡೆಸಿ ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರಿಂದ ಮಾಹಿತಿ ಕಲೆಹಾಕಿ ತನಿಖೆ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ.

    ಮಗನನ್ನು ದೊಡ್ಡ ಅಧಿಕಾರಿ ಮಾಡಬೇಕು. ಇದಕ್ಕಾಗಿ ಚೆನ್ನಾಗಿ ಓದಿಸಬೇಕೆಂದುಕೊಂಡಿದ್ದ ತಾಯಿ ಮೊದಲ ಮಗ ಪ್ರದೀಪ್‍ನನ್ನು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದಿಸುತ್ತಿದ್ದಳು. ಹೀಗೆ ಮಕ್ಕಳ ಭವಿಷ್ಯವನ್ನ ಕಂಡಿದ್ದ ತಾಯಿಗೆ ಅದೇನಾಯ್ತೋ ಗಂಡನ ಮಾತು ಕೇಳಿ ಆ ಒಂದು ತಪ್ಪು ನಿರ್ಧಾವರನ್ನ ಕೈಗೊಂಡು ಪ್ರಾಣಬಿಟ್ಟಿದ್ದಾಳೆ.

  • ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

    ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

    ಚೆನ್ನೈ: ಒಂದೇ ಕುಟುಂಬದ ನಾಲ್ಕು ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ.

    ಸುಂದರಲಿಂಗಂ(40), ಮಹೇಶ್ವರಿ(35), ಕೃತಿಕ(17) ಹಾಗೂ ಸಮೀಕ್ಷಾ(13) ಆತ್ಮಹತ್ಯೆ ಮಾಡಿಕೊಂಡವರು. ನಾಲ್ವರು ಅರೋವಿಲ್ಲೆ ಬಳಿಯಿರುವ ಕುಯಿಲಪಾಲಯಂ ನಿವಾಸಿಗಳಾಗಿದ್ದು, ಹೆಚ್ಚುತ್ತಿರುವ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸುಂದರಲಿಂಗಂ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲದೆ ಆತನ ಪತ್ನಿ ಮಹೇಶ್ವರಿ ಅರೋವಿಲ್ಲೆಯ ಹೋಟೆಲ್‍ಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಅರೋವಿಲ್ಲೆಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸೋಮವಾರದಿಂದ ಮಹೇಶ್ವರಿ ಕೆಲಸಕ್ಕೆ ಹೋಗಲಿಲ್ಲ. ಹೀಗಾಗಿ ಹೋಟೆಲ್ ಮಾಲೀಕ ಗುರುವಾರ ರಾತ್ರಿ ಸಿಬ್ಬಂದಿಗೆ ಮಹೇಶ್ವರಿಯನ್ನು ನೋಡಿಕೊಂಡು ಬಾ ಎಂದು ಹೇಳಿ ಆಕೆಯ ಮನೆಗೆ ಕಳುಹಿಸಿಕೊಟ್ಟಿದ್ದರು. ಸಿಬ್ಬಂದಿ ಮಹೇಶ್ವರಿ ಮನೆಗೆ ಹೋದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಾಗಿಲನ್ನು ಒಡೆದು ಮನೆಯನ್ನು ಪ್ರವೇಶಿಸಿದಾಗ ಸುಂದರಲಿಂಗಂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಪತ್ನಿ ಹಾಗೂ ಮಕ್ಕಳ ಮೃತದೇಹ ಹಾಸಿಗೆ ಮೇಲೆ ಬಿದ್ದಿತ್ತು.

    ಸುಂದರಲಿಂಗಂ ಹಾಗೂ ಮಹೇಶ್ವರಿಗೆ ಸುಮಾರು 10 ಲಕ್ಷವರೆಗೂ ಸಾಲ ಇದೆ. ಕಳೆದ ವರ್ಷ ಅವರು ತಮ್ಮ ಪಕ್ಕದ ಮನೆಯವರಿಂದ ದೀಪಾವಳಿ ಚಿಟ್ ಫಂಡ್‍ಗೆ ಹಣವನ್ನು ಪಡೆದುಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಕುಟುಂಬ ಸಮೇತ ಕೊಲೆಯಾದವ RSS ವ್ಯಕ್ತಿ ಅಲ್ಲ: ಪೊಲೀಸ್ ಸ್ಪಷ್ಟನೆ

    ಕುಟುಂಬ ಸಮೇತ ಕೊಲೆಯಾದವ RSS ವ್ಯಕ್ತಿ ಅಲ್ಲ: ಪೊಲೀಸ್ ಸ್ಪಷ್ಟನೆ

    ಕೋಲ್ಕತ್ತಾ: ಗುರುವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನಲ್ಲಿ ಕುಟುಂಬ ಸಮೇತ ಕೊಲೆಯಾದ ವ್ಯಕ್ತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‍ಎಸ್‍ಎಸ್)ಕ್ಕೆ ಸೇರಿದ ವ್ಯಕ್ತಿಯಲ್ಲ. ಆರ್‍ಎಸ್‍ಎಸ್‍ಗೂ ಈ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಪಶ್ಚಿಮ ಬಂಗಾಳ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

    ಮುರ್ಷಿದಾಬಾದ್‍ನ ಜಿಯಾಗಂಜ್ ಬಡಾವಣೆಯಲ್ಲಿ ವಾಸವಿದ್ದು, ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಪಾಲ್ ಮತ್ತು ಆತನ ಗರ್ಭಿಣಿ ಪತ್ನಿ ಬ್ಯೂಟಿ ಪಾಲ್ ಹಾಗೂ 6 ವರ್ಷದ ಮಗ ಆನಂದ್‍ನನ್ನು ಅವರ ನಿವಾಸದಲ್ಲೇ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

    ಕುಟುಂಬ ಸಮೇತನಾಗಿ ಕೊಲೆಯಾದ ಪ್ರಕಾಶ್ ಪಾಲ್, ಆರ್‍ಎಸ್‍ಎಸ್‍ನ ಕಾರ್ಯಕರ್ತನಾಗಿದ್ದು ಈ ಕೊಲೆ ರಾಜಕೀಯ ವಿಚಾರಕ್ಕೆ ಆಗಿರಬಹುದು ಎಂದು ದೇಶದಾದ್ಯಂತ ಸಖತ್ ಸುದ್ದಿಯಾಗಿತ್ತು. ಈ ಪ್ರಕರಣವನ್ನು ತನಿಖೆ ಮಾಡಿರುವ ಮುರ್ಷಿದಾಬಾದ್ ಪೊಲೀಸರು, ಪ್ರಕಾಶ್ ಆರ್‍ಎಸ್‍ಎಸ್ ಕಾರ್ಯಕರ್ತನಲ್ಲ. ಈ ಕೊಲೆಗೂ ರಾಜಕೀಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಕೊಲೆ ವೈಯಕ್ತಿಕ ದ್ವೇಷದಿಂದ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪೊಲೀಸರು, ಪ್ರಕಾಶ್ ಪಾಲ್‍ಗು ಮತ್ತು ಆರ್‍ಎಸ್‍ಎಸ್‍ಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ನಾವು ಆತನ ಕುಟುಂಬದವರು ಮತ್ತು ಸ್ಥಳೀಯರನ್ನು ವಿಚಾರಿಸಿದಾಗ ಆತ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿಲ್ಲ ಎಂಬುದು ಗೊತ್ತಾಗಿದೆ. ಇದರ ಜೊತೆಗೆ ಆತನ ಮನೆಯನ್ನೂ ನಾವು ಪರಿಶೀಲನೆ ಮಾಡಿದ್ದು, ರಾಜಕೀಯಕ್ಕೆ ಅಥವಾ ಆರ್‍ಎಸ್‍ಎಸ್ ಸಂಬಂಧಿಸಿದ ಯಾವುದೇ ದಾಖಲೆ ನಮಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಮೃತ ವ್ಯಕ್ತಿ ಶಿಕ್ಷಕ ವೃತ್ತಿಯ ಜೊತೆಗೆ ವಿಮೆ ಕಂಪನಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಗೊಂಡಿದ್ದನು. ಆರ್ಥಿಕ ವಿಚಾರವಾಗಿಯೇ ಇಲ್ಲ ವೈಯಕ್ತಿಕ ದ್ವೇಷದಿಂದ ಈ ವ್ಯಕ್ತಿ ಕುಟುಂಬ ಸಮೇತ ಕೊಲೆಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

  • 14 ವರ್ಷ 6 ಕೊಲೆ- ಸೈನೈಡ್ ಹಂತಕಿಯ ನಿಗೂಢ ಹೆಜ್ಜೆ ಪತ್ತೆ

    14 ವರ್ಷ 6 ಕೊಲೆ- ಸೈನೈಡ್ ಹಂತಕಿಯ ನಿಗೂಢ ಹೆಜ್ಜೆ ಪತ್ತೆ

    -ಕ್ರೂರಿಯ ಸಂಚಿಗೆ ಬಲಿಯಾದ ಅಮಾಯಕರು
    -ಒಬ್ಬೊಬ್ಬರನ್ನು ಹಂತ ಹಂತವಾಗಿ ಕೊಂದಿದ್ದಳು

    ತಿರುವನಂತಪುರಂ: ಕೇರಳ ಪೊಲೀಸರು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನದೇ ಕುಟುಂಬಸ್ಥರನ್ನು ಹಂತ ಹಂತವಾಗಿ ಕೊಲ್ಲುತ್ತಾ ಆಸ್ತಿಯನ್ನು ಅನುಭವಿಸುವ ಪ್ಲಾನ್ ಮಾಡಿದ್ದ ಹಂತಕಿ ಜೂಲಿಯ ಕನಸಿಗೆ ಪೊಲೀಸರು ತಣ್ಣೀರು ಹಾಕಿದ್ದಾರೆ. ಸುದೀರ್ಘ ತನಿಖೆಯ ಬಳಿಕ ಪ್ರಕರಣಕ್ಕೆ ಪೊಲೀಸರು ಇತಿಶ್ರೀ ಹಾಡಿ, ಕೊಲೆಯ ಸುತ್ತ ಹುಟ್ಟಿಕೊಂಡಿದ್ದ ನಿಗೂಢ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡಿದ್ದಾರೆ.

    ಹಂತಕಿ ಜೂಲಿ ತನ್ನ ಕುಟುಂಬಸ್ಥರನ್ನು ಕೊಲ್ಲುವದರ ಜೊತೆಗೆ ಸಂಬಂಧಿ ಮಹಿಳೆಯನ್ನು ಕೊಂದು ಆಕೆಯ ಪತಿಯನ್ನ ಮದುವೆ ಆಗಿದ್ದಳು. ಎರಡು ಕುಟುಂಬಗಳ ಆಸ್ತಿಯನ್ನು ಅನುಭವಿಸಲು ಹಂತಕಿ ಜೂಲಿ ಮತ್ತು ಆಕೆಯ ಎರಡನೇ ಗಂಡ ಶಜು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ಇಬ್ಬರಿಗೆ ಸೈನೈಡ್ ಪೂರೈಸುತ್ತಿದ್ದ ಮತ್ತಿಬ್ಬರು ಸೆರೆಮನೆ ಸೇರಿಕೊಂಡಿದ್ದಾರೆ.

    ಕೇರಳದ ಕೊಜ್ಹಿಕೊಡೆ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಶನಿವಾರ ಪೊಲೀಸರು ಹಂತಕಿ ಜೂಲಿಯನ್ನು ಬಂಧಿಸಿದ್ದಾರೆ. ಅಲ್ಲದೇ ಕೊಲೆ ಮಾಡಲು ಸಹಕಾರ ನೀಡಿದ್ದ ಜೂಲಿ 2ನೇ ಪತಿ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಹಂತ ಹಂತವಾಗಿ ಕೊಲೆ: 2002 ರಿಂದ 2016ರ ಅವಧಿಯಲ್ಲಿ ಕ್ಯಾಥೊಲಿಕ್ ಕುಟುಂಬದ 6 ಮಂದಿಯನ್ನು ಜೂಲಿ ಕೊಲೆ ಮಾಡಿದ್ದಾಳೆ. ನಿವೃತ್ತ ಶಿಕ್ಷಕಿ ಅಣ್ಣಮ್ಮ ಥಾಮಸ್ (57) 2002ರಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ವೇಳೆ ಅವರ ಸಾವನ್ನ ಸಹಜಸಾವು ಎಂದು ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದರು. 6 ವರ್ಷದ ಬಳಿಕ ಅಣ್ಣಮ್ಮ ಥಾಮಸ್ ಪತಿ ಟಾಮ್ ಥಾಮಸ್ (66) ಹೃದಯಘಾತದಿಂದ ಸಾವನ್ನಪ್ಪಿದ್ದರು. 2001 ರಲ್ಲಿ ದಂಪತಿಯ ಪುತ್ರ ರಾಯ್ ಥಾಮಸ್ (40) ಕೂಡ ಇದೇ ರೀತಿ ಮೃತ ಪಟ್ಟಿದ್ದರು. ಈ ವೇಳೆ ಅವರನ್ನು ವಿಷ ಉಣಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆ ಬಳಿಕ ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) 2014 ರಲ್ಲಿ ಸಾವನ್ನಪ್ಪಿದ್ದರು. ಎಲ್ಲರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

    ಎರಡರ ಕಂದಮ್ಮ ಬಲಿ: 2016 ರಲ್ಲಿ ಇದೇ ಕುಟುಂಬದ ಸಂಬಂಧಿಯ 2 ವರ್ಷದ ಮಗಳು ಅಲ್ಫೋನ್ಸ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಇದಾದ ಕೆಲ ತಿಂಗಳ ಅಂತರದಲ್ಲೇ ಅಲ್ಫೋನ್ಸ ತಾಯಿ 27 ವರ್ಷದ ಸಿಲಿ ಕೂಡ ಸಾವನ್ನಪ್ಪಿದ್ದರು. ಇತ್ತ ಪತಿ ಮರಣದ ಬಳಿಕ ಪತ್ನಿ ಜೂಲಿ ಮೃತ ಸಿಲಿ ಪತಿಯನ್ನು ಮದುವೆಯಾಗಿ ಕುಟುಂಬ ಅಸ್ತಿ ತಮಗೆ ಸೇರಬೇಕು ಎಂದು ಕಾನೂನಿನ ಅನ್ವಯ ಮನವಿ ಸಲ್ಲಿಸಿದ್ದರು. ಆದರೆ ಟಾಮ್ ಥಾಮಸ್ ಕಿರಿಯ ಪುತ್ರನ ಮಗ ಯುಎಸ್ ಎನ್‍ಆರ್ ಐ ಆಗಿರುವ ಮೆಜೊ ಇದಕ್ಕೆ ಆಕ್ಷೇಪಣೆ ಸಲ್ಲಿಸಿ ಕುಟುಂಬ ಸರಣಿ ಸಾವಿನ ಕುರಿತು ಕ್ರೈಂ ಬ್ರಾಂಚ್‍ಗೆ ದೂರು ನೀಡಿದ್ದರು.

    ಪ್ರಕರಣದ ದಾಖಲಿಸಿ ವಿಚಾರಣೆ ಆರಂಭಿಸಿದ ಅಪರಾಧದಳ ಪೊಲೀಸರಿಗೆ ವಿಚಾರಣೆ ವೇಳೆ ಶಾಕಿಂಗ್ ಅಂಶಗಳು ತಿಳಿದು ಬಂದಿದ್ದವು. ಈ ಪ್ರಕರಣ ಕೇರಳದಲ್ಲಿ ಸಂಚಲನವನ್ನು ಉಂಟು ಮಾಡಿದೆ.

    ಪ್ರತಿ ಬಾರಿ ಕುಟುಂಬ ಸದಸ್ಯರನ್ನು ಕೊಲೆ ಮಾಡುವ ವೇಳೆ ಜೂಲಿ ಸೂಕ್ತ ಪ್ಲಾನ್ ಮಾಡಿ ಯಾರಿಗೂ ಅನುಮಾನಬಾರದಂತೆ ಕೃತ್ಯ ಎಸಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ಮೃತರ ವೈಜ್ಞಾನಿಕ ಪರೀಕ್ಷೆಗಳ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ವಿಚಾರಣೆ ವೇಳೆ ಮೃತ 6 ಮಂದಿ ಸಾವಿನ ವೇಳೆ ಜೂಲಿ ಸ್ಥಳದಲ್ಲಿ ಇರುವುದು ಖಚಿತವಾಗಿದೆ. ಈ ಪ್ರಕರಣ ತಮಗೆ ಹೆಚ್ಚು ಚಾಲೆಂಜಿಂಗ್ ಆಗಿತ್ತು ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಪ್ರಕರಣವನ್ನು ಬೇದಿಸಲು ಪೊಲೀಸರು ಜೂಲಿ ಹಾಗೂ ಆಕೆಯ 2ನೇ ಪತಿ ಶಾಜುನನ್ನು 8 ಬಾರಿ ತೀವ್ರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಎಂಟು ಬಾರಿ ವಿಚಾರಣೆಯಲ್ಲಿಯೂ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಲ್ಲದೇ ಜೂಲಿಯ ಫೋನ್ ವಿವರ ಪಡೆದ ವೇಳೆ ಆಕೆ ಶಾಜುನೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದು ತಿಳಿದು ಬಂದಿತ್ತು. ಅಂದಹಾಗೇ ಜೂಲಿ ವಾಣಿಜ್ಯ ಪದವೀಧರೆಯಾಗಿದ್ದು, ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ ಎಂದು ಹೇಳಿ ಕೆಲಸ ಪಡೆದಿದ್ದಳು.

    ಕೊಲೆಗೆ ಸೈನೈಡ್ ಬಳಕೆ: ಜೂಲಿ ತನ್ನ ಕುಟುಂಬದ 6 ಮಂದಿಯನ್ನು ಕೊಲೆ ಮಾಡಲು ನಿಧಾನವಾಗಿ ಸಾಯಿಸುವ ಸೈನೈಡನ್ನು ಬಳಕೆ ಮಾಡಿದ್ದಳು. ಮೃತ ದೇಹಗಳನ್ನು ಹೊರ ತೆಗೆದು ಪರೀಕ್ಷೆ ನಡೆಸಿದ ವೇಳೆ ಮೃತರ ದೇಹದಲ್ಲಿ ವಿಷ ಇರುವುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ಖಚಿತವಾಗಿತ್ತು. ಜೂಲಿಗೆ ಸೈನೈಡ್ ಪೂರೈಕೆ ಮಾಡುತ್ತಿದ್ದ ಆರೋಪದ ಅಡಿ ಅಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಜಿಕುಮಾರ್ ಹಾಗೂ ಎಂಎಸ್ ಮ್ಯಾಥ್ಯೂರನ್ನು ಬಂಧಿಸಿದ್ದಾರೆ.

  • ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿ ನೇಣಿಗೆ ಶರಣು

    ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿ ನೇಣಿಗೆ ಶರಣು

    ಮಂಡ್ಯ: ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ನಡೆದಿದೆ.

    ಹೆಮ್ಮನಹಳ್ಳಿ ನಿವಾಸಿ ಪ್ರದೀಪ್(36) ನೇಣಿಗೆ ಶರಣಾದ ವ್ಯಕ್ತಿ. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವ್ಯವಹಾರ ನಡೆಸಲು ಖಾಸಗಿ ಫೈನಾನ್ಸ್ ಕಂಪನಿಯಿಂದ ಪ್ರದೀಪ್ ಸಾಲ ಪಡೆದಿದ್ದರು. ಆದರೆ ಆತನಿಗೆ ಸರಿಯಾಗಿ ಸಾಲ ಪಾವತಿಸಲು ಆಗುತ್ತಿರಲಿಲ್ಲ. ಈ ನಡುವೆ ಮಂಗಳವಾರ ಪ್ರದೀಪ್ ಪತ್ನಿ ರೇಣುಕಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದ್ದರಿಂದ ಪತ್ನಿಯ ಅಂತ್ಯ ಸಂಸ್ಕಾರಕ್ಕಾಗಿ ಪ್ರದೀಪ್ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಪ್ರದೀಪ್ ಗ್ರಾಮಕ್ಕೆ ಬಂದಿರುವ ವಿಷಯ ತಿಳಿದ ಖಾಸಗಿ ಫೈನಾನ್ಸ್ ಕಂಪನಿಯ ನೌಕರರು ಆತನನ್ನು ಕರೆದುಕೊಂಡು ಹೋಗಲು ಬಂದಿದ್ದರು.

    ಈ ವೇಳೆ ಪ್ರದೀಪ್ ತಾಯಿ, ನಾದಿನಿಯನ್ನು ಕೂಡ ಕಾರಿನಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದ್ದರು. ಇದರಿಂದ ಹೆದರಿಕೊಂಡು ಪ್ರದೀಪ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಫೈನಾನ್ಸ್ ಕಂಪನಿ ನೌಕರರನ್ನು ಕೆಸ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.