Tag: family

  • ವರದಕ್ಷಿಣೆ ಕಿರುಕುಳ ಆರೋಪ – ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳ ಆರೋಪ – ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಶಿವಮೊಗ್ಗ: ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ನಡೆದಿದೆ.

    ಮೃತಪಟ್ಟ ಗೃಹಿಣಿಯನ್ನು ದೀಪ (25) ಎಂದು ಗುರುತಿಸಲಾಗಿದೆ. ಚನ್ನಗಿರಿ ತಾಲೂಕು ಕತ್ತಲಗೆರೆಯ ದೀಪ ಹಾಗೂ ಭದ್ರಾವತಿ ತಾಲೂಕು ಮೈದೊಳಲು ಗ್ರಾಮದ ಪ್ರದೀಪ್ ಜೊತೆ ಕಳೆದ 5 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.

    ಮದುವೆಯಾದ ಆರಂಭದಲ್ಲಿ ಇಬ್ಬರ ಸಂಸರ ಚನ್ನಾಗಿಯೇ ಇತ್ತು. ಆದರೆ ವರ್ಷ ಕಳೆದಂತೆ ದೀಪಾಳಿಗೆ ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದರು ಎಂದು ದೀಪ ಕುಟುಂಬಸ್ಥರು ಆರೋಪಿಸಿದ್ದಾರೆ.

    ದೀಪ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹುಡುಗಿಯಲ್ಲ. ಆಕೆಯನ್ನು ಶುಕ್ರವಾರ ಮಧ್ಯರಾತ್ರಿ ಗಂಡ, ಅತ್ತೆ ಮಾವ ಸೇರಿಕೊಂಡು ಹೊಡೆದು ನೇಣು ಹಾಕಿದ್ದಾರೆ ಎಂದು ಮೃತ ದೀಪ ಕುಟುಂಬದವರ ಆರೋಪವಾಗಿದೆ. ಈ ಘಟನೆ ನಂತರ ಪತಿ, ಅತ್ತೆ – ಮಾವ ಪರಾರಿಯಾಗಿದ್ದಾರೆ.

    ಸದ್ಯ ಈ ವಿಷಯ ತಿಳಿದ ಹೊಳೆಹೊನ್ನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅಪ್ರಾಪ್ತೆಗೆ ತಾಳಿ ಕಟ್ಟಿ ವಿಷ ಕುಡಿಸಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ

    ಅಪ್ರಾಪ್ತೆಗೆ ತಾಳಿ ಕಟ್ಟಿ ವಿಷ ಕುಡಿಸಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ

    ಬಾಗಲಕೋಟೆ: ಯುವಕನೊಬ್ಬ ಪ್ರೀತಿಸಿದ್ದ ಅಪ್ರಾಪ್ತೆಗೆ ಅರಿಶಿನ ತಾಳಿಯನ್ನು ಕಟ್ಟಿ ವಿಷ ಕುಡಿಸಿ, ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ವ್ಯಾಪ್ತಿಯ ಹುಲ್ಲಿಕೇರಿ ಎಸ್.ಪಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಕುಮಾರ್ ಪಾಟೀಲ್ ಅಪ್ರಾಪ್ತೆಗೆ ವಿಷ ಕುಡಿಸಿದ ಯುವಕ. ಕುಮಾರ್ ಹಾಗೂ 16 ವರ್ಷದ ಅಪ್ರಾಪ್ತೆ ಕೆಲ ತಿಂಗಳಿನಿಂದ ಪ್ರೀತಿಸುತ್ತಿದ್ದರು. ಈ ಇಬ್ಬರ ಪ್ರೀತಿಯ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ, ಅಪ್ರಾಪ್ತೆ ಮನೆಯವರು ಹಾಗೂ ಕುಮಾರ್ ಕುಟುಂಬಸ್ಥರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    ತನ್ನ ತಂಗಿ ಜೊತೆ ಓಡಾಡದಂತೆ ಅಪ್ರಾಪ್ತೆಯ ಸಹೋದರ, ಕುಮಾರ್ ನನ್ನು ತಾಕೀತು ಮಾಡಿದ್ದನು. ಹೀಗಾಗಿ ಕುಮಾರ್ ಮಂಗಳವಾರ ಶಾಲೆಗೆ ಹೊರಟಿದ್ದ ಅಪ್ರಾಪ್ತೆಯನ್ನು ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಅರಿಶಿನದ ತಾಳಿಯನ್ನು ಕಟ್ಟಿದ್ದಾನೆ. ಬಳಿಕ ತಂದಿದ್ದ ವಿಷದ ಬಾಟಲ್ ತೆರೆದು ಅವಳಿಗೆ ಕುಡಿಸಿ, ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಗ್ರಾಮಸ್ಥರಿಗೆ ಈ ವಿಷಯ ತಿಳಿದು ಅಪ್ರಾಪ್ತೆಯನ್ನು ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇತ್ತ ಕುಮಾರ್ ನನ್ನು ಗುಳೇದಗುಡ್ಡ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಅಪ್ರಾಪ್ತೆಯ ಪೋಷಕರು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಕುಮಾರ್ ವಿರುದ್ಧ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪ್ರಾಪ್ತೆ ಹಾಗೂ ಯುವಕನ ಲವ್ ಟ್ರಾಜೆಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸುವರೆಗೂ ಹೋಗಿರುವ ಪ್ರಕರಣ ಗ್ರಾಮಸ್ಥರಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

  • ವಿನೂತನವಾಗಿ ಹೊಸ ವರ್ಷಕ್ಕೆ ಕಿಚ್ಚ ಕುಟುಂಬದಿಂದ ವಿಶ್

    ವಿನೂತನವಾಗಿ ಹೊಸ ವರ್ಷಕ್ಕೆ ಕಿಚ್ಚ ಕುಟುಂಬದಿಂದ ವಿಶ್

    ಬೆಂಗಳೂರು: ವಿಶ್ವಾದಾದ್ಯಂತ ಇಂದು ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಇತ್ತ ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಹೊಸ ವರ್ಷಕ್ಕೆ ನೂತನವಾಗಿಯೇ ಸಮಸ್ತ ಕನ್ನಡಿಗರಿಗೂ ನ್ಯೂ ಇಯರ್ ವಿಶ್ ಮಾಡಿದ್ದಾರೆ.

    ಸುದೀಪ್ ಟ್ವೀಟ್ ಮಾಡುವುದರ ಜೊತೆಗೆ ಒಂದು ವಿಡಿಯೋ ಅಪ್ಲೋಡ್ ಮಾಡುವ ಮೂಲಕ ನ್ಯೂ ಇಯರ್‌ಗೆ ಶುಭಾಶಯ ಕೋರಿದ್ದಾರೆ. “ವಿಡಿಯೋದಲ್ಲಿ ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಈ ನಿಮ್ಮ ಪ್ರೀತಿಯ ಕಿಚ್ಚ ಸುದೀಪನ ಕುಟುಂಬದಿಂದ ಎಂದು ಹೇಳಿ ಪಕ್ಕಕ್ಕೆ ಹೋಗುತ್ತಾರೆ. ಆಗ ಅವರ ಕುಟುಂಬದ ಸದಸ್ಯರೆಲ್ಲರೂ ಹೊಸ ವರ್ಷದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ. ಹೀಗಾಗಿ ಸುದೀಪ್ ವಿನೂತನವಾಗಿಯೇ ನ್ಯೂ ಇಯರ್‌ಗೆ ವಿಶ್ ಮಾಡಿದ್ದಾರೆ.

    ಇದಕ್ಕೂ ಮೊದಲು “2020ಗೆ ಹೆಜ್ಜೆಯಿಡುವ ಮುನ್ನ ಈ ವರ್ಷದ ನಿಮ್ಮ ಹೆಜ್ಜೆಗುರುತುಗಳತ್ತ ಒಮ್ಮೆ ಕಣ್ಣಾಯಿಸಿ ನೋಡಿ. ಈ ವರ್ಷದಲ್ಲಿ ನೀವು ಕಳೆದ ಅಮೂಲ್ಯ ಕ್ಷಣಗಳು ಮತ್ತು ಜೊತೆಯಾದ ವ್ಯಕ್ತಿಗಳು, ನೀವು ಕ್ಷಮೆ ಕೇಳಬೇಕಾದವರು ಮತ್ತು ನಿಮ್ಮಿಂದ ಕ್ಷಮೆಗೆ ಕಾದಿರುವವರು. ಬೇರೆಯವರಿಂದ ನಿಮಗೆ ಸಿಕ್ಕ ಒಳ್ಳೆಯದು ಮತ್ತು ನಿಮ್ಮಿಂದ ಬೇರೆಯವರಿಗಾದ ಒಳ್ಳೆಯದು” ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೆರಡು ಟ್ವೀಟ್ ಮಾಡಿ “ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡರೆ ನೀವು ನಡೆದು ಬಂದ ಹಾದಿ ಬಗ್ಗೆ ಸ್ಪಷ್ಟತೆಗಳು ಸಿಕ್ಕಿಬಿಡುತ್ತವೆ. ಆ ಸ್ಪಷ್ಟತೆಗಳ ಆಧಾರದ ಮೇಲೆ ಈ ವರ್ಷ ಮಾಡಬೇಕಾದ್ದೇನು? ಮಾಡಬಾರದ್ದೇನು? ನೀ ಬದಲಾಗಬೇಕಾದ್ದು ಎಲ್ಲಿ? ಸ್ಥಿರತೆ ಕಾಪಾಡಿಕೊಳ್ಳಬೇಕಾದ್ದು ಎಲ್ಲಿ? ಎಂಬವುಗಳ ಬಗ್ಗೆ ದಿಟ್ಟ ನಿರ್ಧಾರ ಹೊಂದಿ 2020ನೇ ವರ್ಷಕ್ಕೆ ಹೆಜ್ಜೆಯಿಡೋಣ. 2020 ಅನ್ನು ಅತ್ಯಂತ ಹರ್ಷದಿಂದ ಸ್ವಾಗತಿಸಿ, ಹೆಚ್ಚು ಸಾರ್ಥಕವಾಗಿ ಕಳೆಯೋಣ” ಎಂದು ಹೊಸ ವರ್ಷಕ್ಕೆ ವಿಶ್ ಮಾಡಿದ್ದಾರೆ.

  • ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ಆಪ್ತ ಸ್ನೇಹಿತನನ್ನೇ ಕೊಂದ

    ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ಆಪ್ತ ಸ್ನೇಹಿತನನ್ನೇ ಕೊಂದ

    ಚಿತ್ರದುರ್ಗ: ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ವ್ಯಕ್ತಿಯೋರ್ವ ತನ್ನ ಅಪ್ತ ಸ್ನೇಹಿತನನ್ನೇ ಕೊಂದು ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಡವಿಗೊಂಡನಹಳ್ಳಿಯ ಚಂದ್ರಣ್ಣ (55) ಹಾಗೂ ಮಂಜುನಾಥ್ (37) ಇಬ್ಬರು ಅಪ್ತ ಸ್ನೇಹಿತರಾಗಿದ್ದರು. ಅವರಿಬ್ಬರ ವಯಸ್ಸಿನಲ್ಲಿ ವ್ಯತ್ಯಾಸವಿದ್ದರೂ ಸಹ ಸುಮಾರು ವರ್ಷಗಳಿಂದ ಆಪ್ತ ಮಿತ್ರರಾಗಿದ್ದ ಗೆಳೆಯರ ನಡುವೇ ಮಾಟ ಮಂತ್ರ ಎಂಬ ಮೌಢ್ಯದ ಅನುಮಾನ ಮೂಡಿ ಅವರಿಬ್ಬರ ಮಧ್ಯೆ ದ್ವೇಷ ಹುಟ್ಟಿಸಿತ್ತು. ಈಗ ಆ ದ್ವೇಷ ಗೆಳೆಯನ ಜೀವವನ್ನೇ ಬಲಿ ಪಡೆದಿದೆ.

    ಸದಾ ಚಂದ್ರಣ್ಣನ ಎಲ್ಲಾ ಕೆಲಸ ಕಾರ್ಯಗಳಲ್ಲೂ ಹೆಗಲು ಕೊಡುತ್ತಿದ್ದ ಮಂಜುನಾಥ್ ಚಂದ್ರಣ್ಣ ಹಿರಿಯನಾದರೂ ತುಂಬ ಸಲಿಗೆಯಿಂದ ಇರುತ್ತಿದ್ದರು. ಆದರೆ ಅವರಿಬ್ಬರ ಸ್ನೇಹ ಸಹಿಸಲಾಗದ ಯಾರೋ ಮಹಾನುಭಾವರು ಇಬ್ಬರ ನಡುವೇ ಮಾಟ, ಮಂತ್ರ ಎಂಬ ಮೌಢ್ಯದ ಬೀಜವನ್ನು ಬಿತ್ತಿದ್ದರು. ಹೀಗಾಗಿ ಪರಸ್ಪರ ದ್ವೇಷ ಹಾಗೂ ಅಸೂಯೆ ಶುರುವಾಗಿತ್ತು. ದಿನಬೆಳಗಾದರೆ ಹಗೆತನ ಸಾಧಿಸುತ್ತಾ ಊರಲ್ಲಿ ಓಡಾಡುತ್ತಿದ್ದರು.

    ಹೀಗಿರುವಾಗ ಡಿಸೆಂಬರ್ 4 ರಂದು ಕಟ್ಟಿಗೆ ಕಡಿದು ಇದ್ದಲು ಮಾಡುವ ಕಾಯಕಕ್ಕೆ ಚಂದ್ರಣ್ಣ ತೆರಳಿದ್ದು, ರಾತ್ರಿ ವೇಳೆ ಅದೇ ಜಮೀನಿನಲ್ಲಿ ಮಲಗಲು ನಿರ್ಧರಿಸಿದ್ದರು. ಆಗ ಅವರನ್ನು ಹಿಂಬಾಲಿಸಿದ್ದ ಆತನ ಗೆಳೆಯ ಮಂಜುನಾಥ್ ಚಂದ್ರಣ್ಣ ನಿದ್ರೆಗೆ ಜಾರುತ್ತಿದ್ದಂತೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಬಳಿಕ ಬಲವಾದ ಕೋಲಿನಿಂದ ಕತ್ತಿಗೆ ಇರಿದು ಉಸಿರುಗಟ್ಟಿಸಿದ್ದಾನೆ. ಕೊನೆಗೆ ತಲೆಮೇಲೆ ಕಲ್ಲು ಎತ್ತಿಹಾಕಿ ಚಂದ್ರಣ್ಣನನ್ನು ಹತ್ಯೆ ಮಾಡಿದ್ದಾನೆ.

    ಈ ವಿಷಯ ತಿಳಿದ ಚಂದ್ರಣ್ಣನ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುಮಾರು ವರ್ಷಗಳಿಂದ ಚಂದ್ರಣ್ಣನಿಗೆ ಆಪ್ತ ಸ್ನೇಹಿತನಂತಿದ್ದ ಮಂಜುನಾಥ್ ಇತ್ತೀಚೆಗೆ ಚಂದ್ರಣ್ಣನು ನಮ್ಮ ಕುಟುಂಬದ ಮೇಲೆ ಮಾಟ ಮಂತ್ರ ಮಾಡಿಸಿ ನಮ್ಮ ಸಂಸಾರ ಹಾಳು ಮಾಡಿದ್ದಾನೆ. ಆತನನ್ನು ಬಿಡುವುದಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದ ಎಂದು ಹೇಳಿದ್ದಾರೆ.

    ಈ ವಿಷಯವನ್ನು ಬೆನ್ನತ್ತಿದ ಪೊಲೀಸರು ಮಂಜುನಾಥ್ ಅನ್ನು ವಿಚಾರಣೆ ನಡೆಸಿದಾಗ, ನಾನು ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆ. ಆದರೆ ನಂತರ ಮಾಟ ಮಂತ್ರ ಎಂಬ ಮೌಢ್ಯದ ಅನುಮಾದಿಂದ ನಾನೇ ಕೊಲೆ ಮಾಡಿದ್ದು, ಎಂದು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಸುವಿಗೆ ಸೀಮಂತ ಮಾಡಿ, ಉಡಿ ತುಂಬಿದ್ರು

    ಹಸುವಿಗೆ ಸೀಮಂತ ಮಾಡಿ, ಉಡಿ ತುಂಬಿದ್ರು

    ಚಿಕ್ಕೋಡಿ/ಬೆಳಗಾವಿ: ಗೋ ಮಾತೆ ಎಂದು ಪೂಜಿಸುವ ಹಸುವಿಗೆ ಸೀಮಂತ ಕಾರ್ಯಕ್ರಮ ನೇರವೇರಿಸಿದ ಅಪರೂಪದ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದಲ್ಲಿ ನಡೆದಿದೆ.

    ಮಾಂಗೂರ ಗ್ರಾಮದ ರಾವಸಾಹೇಬ ಜಿನ್ನಪ್ಪಾ ಮಾಣಕಾಪುರೆ ಅವರಿಗೆ ಸೇರಿದ ಹಸು ಗರ್ಭ ಧರಿಸಿತ್ತು. ಮಣಕಾಪೂರೆ ಕುಟುಂಬಸ್ಥರು ತಮ್ಮ ಗರ್ಭವತಿ ಹಸುವಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಹಸುವಿಗೆ ಉಡಿ ತುಂಬಿ, ಹೂ ಮಾಲೆ ಹಾಕಿ ಹೂಗಳ ದಂಡಿಯನ್ನು ಕಟ್ಟಿ, ಹಸಿರು ಬಳೆ ತೊಡೆಸಿ, ಸೀರೆಯನ್ನು ತೊಡಿಸಿ ಶೃಂಗರಿಸಿದ್ದರು.

    ಜೊತೆಗೆ ಗ್ರಾಮದ ಮುತೈದೆಯರು ಉಡಿ ತುಂಬಿದ್ದಾರೆ. ಹಸುವಿಗೆ ಉಡಿ ತುಂಬುವ ಅಪರೂಪದ ಸೀಮಂತ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದರು. ಕಾರ್ಯಕ್ರಮಕ್ಕೆ ಮಣಕಾಪೂರೆ ಕುಟುಂಬಸ್ದರು ಸೇರಿದಂತೆ ಅನೇಕ ಹೆಣ್ಣು ಮಕ್ಕಳು ಹಾಗೂ ಪುರುಷರು ಭಾಗಿಯಾಗಿದ್ದರು. ಇವರೆಲ್ಲರೂ ಹಸುವಿನ ಸೀಮಂತ ಕಾರ್ಯಕ್ಕೆ ಸಾಕ್ಷಿಯಾಗಿದ್ದರು.

  • ಮದ್ಯವರ್ಜನ ಶಿಬಿರದಿಂದ ಕುಡಿತ ಬಿಟ್ಟ 44 ಜನ ವ್ಯಸನಿಗಳು

    ಮದ್ಯವರ್ಜನ ಶಿಬಿರದಿಂದ ಕುಡಿತ ಬಿಟ್ಟ 44 ಜನ ವ್ಯಸನಿಗಳು

    ರಾಯಚೂರು: ಮದ್ಯವ್ಯಸನ ಮುಕ್ತ ಸಮಾಜಕ್ಕಾಗಿ ರಾಯಚೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ 1,450ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನದ ಮುಕ್ತಾಯ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಕಳೆದ ಒಂದು ವಾರದಿಂದ ಮದ್ಯ ವರ್ಜನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮದುವೆ ಮನೆಯಂತೆ ಶೃಂಗಾರಗೊಂಡಿದ್ದ ಕಾರ್ಯಕ್ರಮದಲ್ಲಿ ಆರತಿ ಬೆಳಗುವ ಮೂಲಕ ಕಾರ್ಯಕ್ರಮದ ಕೊನೆಯ ದಿನಕ್ಕೆ ಮಹಿಳೆಯರು ಚಾಲನೆ ನೀಡಿದರು. ಕಾರ್ಯಕ್ರಮದಿಂದ 44 ಜನ ಮದ್ಯ ವ್ಯಸನಿಗಳು ಮದ್ಯ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯ ವರ್ಜನೆ ಮಾಡಿದ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

    8 ದಿನಗಳ ಕಾಲ ನಡೆದ ಯಶಸ್ವಿ ಶಿಬಿರದಲ್ಲಿ ಮದ್ಯ ಬಿಟ್ಟ ಪುರುಷರು ಮದುಮಗನಂತೆ ಕಂಗೊಳಿಸ್ತಿದ್ರು. ಅವರೊಂದಿಗೆ ಬಂದಿದ್ದ ಕುಟುಂಬಸ್ಥರು ನಮ್ಮವರು ಕುಡಿತ ಬಿಟ್ಟರು ಎನ್ನುವ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಗಂಡಂದಿರು ಹೆಂಡತಿಗೆ ಮಲ್ಲಿಗೆ ಮುಡಿಸಿದ್ರೆ, ಹೆಂಡತಿಯರು ಗಂಡನ ಆಶೀರ್ವಾದ ಪಡೆದರು. ತಾಯಿ-ಮಗ ಹಾಗೂ ಅಣ್ಣ-ತಂಗಿ ಇದ್ರೆ, ಕುಡಿತ ಬಿಟ್ಟವರು ತಾಯಿ ಹಾಗೂ ಅಕ್ಕ, ತಂಗಿಯ ಆಶೀರ್ವಾದ ಪಡೆದಿದ್ದು ಹಾಗೂ ಕೊನೆಯಲ್ಲಿ ಸಭೆಯಲ್ಲಿ ಸೇರಿದವರೆಲ್ಲ ಅಕ್ಷತೆ ಹಾಕಿ ಚಪ್ಪಾಳೆ ತಟ್ಟಿದ್ದು ವಿಶೇಷವಾಗಿತ್ತು.

    ಕಳೆದ ನಾಲ್ಕು ವರ್ಷಗಳಿಂದ ಕುಡಿತದ ಚಟಕ್ಕೆ ಒಳಗಾಗಿ ಬದುಕು ಹಾಳುಮಾಡಿಕೊಂಡಿದ್ದೆ ಆದರೆ ಈಗ ಉತ್ತಮ ಜೀವನ ನಡೆಸುವ ಭರವಸೆ ಬಂದಿದೆ ಎಂದು ಶಿಬಿರದಿಂದ ಕುಡಿತದ ಚಟ ಬಿಟ್ಟಿರುವ ರಾಯಚೂರಿನ ಉರುಕುಂದಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿಬಿರದಲ್ಲಿ ರಾಯಚೂರು ಮಾತ್ರವಲ್ಲದೆ ಕಲಬುರ್ಗಿ ಸೇರಿ ವಿವಿಧೆಡೆಯವರು ಭಾಗವಹಿಸಿದ್ದರು.

  • ಸ್ನೇಹಿತರಿಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ಕುಟುಂಬಸ್ಥರಿಂದ ಕೊಲೆ ಆರೋಪ

    ಸ್ನೇಹಿತರಿಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ಕುಟುಂಬಸ್ಥರಿಂದ ಕೊಲೆ ಆರೋಪ

    ಕೋಲಾರ: ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವಕರ ಶವ ಪತ್ತೆಯಾಗಿದೆ.

    ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಣ್ಣಹಳ್ಳಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಪ್ರವೀಣ್ (20) ಹಾಗೂ ಶ್ರೀನಾಥ್ (20) ಒಂದೇ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಸ್ನೇಹಿತರು. ಪ್ರವೀಣ್ ಕೆ.ಆರ್ ಪುರಂ ಮಾರ್ಕೆಟ್‍ನಲ್ಲಿ ತನ್ನ ಚಿಕ್ಕಪ್ಪನ ಜೊತೆಗೆ ಕೆಲಸ ಮಾಡುತ್ತಿದ್ದರೆ, ಶ್ರೀನಾಥ್ ಅಣ್ಣಿಹಳ್ಳಿಯಲ್ಲಿ ತನ್ನ ಬಾವನ ಜೊತೆಗೆ ವ್ಯವಸಾಯ ಮಾಡುತ್ತಿದ್ದ.

    ಎರಡೂ ಕುಟುಂಬದವರಿಗೂ ಇವರಿಬ್ಬರ ಸ್ನೇಹದ ಬಗ್ಗೆ ಗೊತ್ತಿತ್ತು. ಮೊನ್ನೆಯಷ್ಟೇ ಕೆಆರ್ ಪುರಂನಿಂದ ಬಂದಿದ್ದ ಪ್ರವೀಣ್, ಶ್ರೀನಾಥ್ ಜೊತೆ ನಿನ್ನೆವರೆಗೂ ಜೊತೆಯಲ್ಲೇ ಇದ್ದ. ಇಬ್ಬರು ಮನೆಗೆ ಹೋಗಿರಲಿಲ್ಲ. ಅವರ ಮನೆಯವರು ಕೂಡಾ ಅವನ ಮನೆಯಲ್ಲಿದ್ದಾರೆಂದು ಇವರು ಇವರ ಮನೆಯಲ್ಲಿದ್ದಾರೆಂದು ಅವರು ಸುಮ್ಮನಿದ್ದರು. ಬುಧವಾರ ಸಂಜೆ ಕೂಡಾ ಫೋನ್ ಮಾಡಿ ಮಾತನಾಡಿಸಿದ್ದಾಗ ಇಬ್ಬರು ಒಟ್ಟಿಗೆ ಇರೋದಾಗಿ ತಿಳಿಸಿದ್ದರು.

    ಆದರೆ ಇಂದು ಬೆಳಗ್ಗೆ 11 ಗಂಟೆಗೆ ಇಬ್ಬರು ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತ ಪ್ರವೀಣ್ ಹಾಗೂ ಶ್ರೀನಾಥ್ ಕುಟುಂಬಸ್ಥರು ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತ ಹುಡುಗರಲ್ಲ. ಜೊತೆಗೆ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಏನೂ ಬಂದಿಲ್ಲ. ಇಬ್ಬರನ್ನು ಯಾರೋ ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಪ್ರಕರಣ ದಾಖಲಿಸಿಕೊಂಡಿರುವ ನಂಗಲಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಮನೆಗೆ ಕರೆಸಿ ಪ್ರಿಯತಮೆಗೆ ಬೆಂಕಿ ಹಚ್ಚಿದ ಪ್ರಿಯಕರನ ಕುಟುಂಬಸ್ಥರು

    ಮನೆಗೆ ಕರೆಸಿ ಪ್ರಿಯತಮೆಗೆ ಬೆಂಕಿ ಹಚ್ಚಿದ ಪ್ರಿಯಕರನ ಕುಟುಂಬಸ್ಥರು

    ರಾಯ್‍ಪುರ: ಮನೆಗೆ ಕರೆಸಿ ಪ್ರಿಯಕರನ ಕುಟುಂಬಸ್ಥರು ಯುವತಿಯ ಮೇಲೆ ಬೆಂಕಿ ಹಚ್ಚಿದ ಘಟನೆ ಛತ್ತಿಸ್‍ಗಢದ ರಾಯ್‍ಪುರದಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಯುವತಿಯ ದೇಹ ಶೇ. 80ರಷ್ಟು ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಡಿಸೆಂಬರ್ 18ರಂದು ಈ ಘಟನೆ ನಡೆದಿದ್ದು, ಯುವತಿ ಆಸ್ಪತ್ರೆಗೆ ದಾಖಲಾಗಿರುವುದನ್ನು ನೋಡಿ ಶನಿವಾರ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಿಯಕರನ ಕುಟುಂಬಸ್ಥರು ಹಾಗೂ ಆತನ ಸಂಬಂಧಿಕರ ವಿರುದ್ಧ ಯುವತಿಯ ಸಹೋದರ ದೂರು ದಾಖಲಿಸಿದ್ದಾರೆ.

    ಡಿಸೆಂಬರ್ 18ರಂದು ಪ್ರಿಯಕರ ನನ್ನ ಸಹೋದರಿಯ ಜೊತೆ ಮಾತನಾಡಲು ಮನೆಗೆ ಕರೆದುಕೊಂಡು ಹೋಗಿದ್ದನು. ನನ್ನ ಸಹೋದರಿ ಆತನ ಮನೆಗೆ ತಲುಪಿದಳು. ಪ್ರಿಯಕರ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಕುಟುಂಬಸ್ಥರು ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಘಟನೆಯಲ್ಲಿ ಯುವತಿಯ ದೇಹ ಶೇ. 80ರಷ್ಟು ಸುಟ್ಟು ಹೋಗಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶನಿವಾರ ಯುವತಿಯನ್ನು ರಾಯ್‍ಪುರ ಮೂಲದ ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮಹಿಳೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸದ್ಯ ಪೊಲೀಸರು ಯುವಕನ ಕುಟುಂಬಸ್ಥರ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಹಾಗೂ 34 ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

    ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ.

  • ಕನಗನಮರಡಿ ಬಸ್ ದುರಂತ ನೆನೆದು ಬಿಕ್ಕಿಬಿಕ್ಕಿ ಅತ್ತ ಬದುಕಿ ಬಂದ ಬಾಲಕ

    ಕನಗನಮರಡಿ ಬಸ್ ದುರಂತ ನೆನೆದು ಬಿಕ್ಕಿಬಿಕ್ಕಿ ಅತ್ತ ಬದುಕಿ ಬಂದ ಬಾಲಕ

    ಮಂಡ್ಯ: ಕಳೆದ ವರ್ಷ ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ನಡೆದ ಬಸ್ ದುರಂತ ಇನ್ನೂ ಕೂಡ ಮಾಸಿಲ್ಲ. 30 ಜನರನ್ನು ಆಹುತಿ ಪಡೆದ ಈ ಬಸ್ ದುರಂತದ ಬಗ್ಗೆ ಕೇಳಿದರೆ ಸಾಕು ದುರಂತದಲ್ಲಿ ಬದುಕಿ ಬಂದ ಬಾಲಕ ರೋಹಿತ್ ಬಿಕ್ಕಿಬಿಕ್ಕಿ ಅಳುತ್ತಾನೆ.

    2018 ನವಂಬರ್ 24ರಂದು ನಡೆದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಮಧ್ಯಾಹ್ನದ ವೇಳೆ ಬಸ್‍ ಕಾಲುವೆಗೆ ಉರುಳಿದ ಪರಿಣಾಮ 30 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ಪೈಕಿ ಬಸ್‍ನಲ್ಲಿದ್ದ ರೋಹಿತ್ ಮಾತ್ರ ಬದುಕಿ ಬಂದಿದ್ದನು. ಈ ದುರಂತದಲ್ಲಿ ಹಲವು ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ರೆ, ಇನ್ನೂ ಹಲವು ಮಕ್ಕಳು ತಮ್ಮ ತಂದೆ-ತಾಯಿಗಳನ್ನು ಕಳೆದುಕೊಂಡಿದ್ದರು. ಮತ್ತು ಕೆಲವರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಇಂದಿಗೂ ಸಹ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತ ಪ್ರಕರಣ ಹೇಳುತ್ತಿದೆ ಮನಕಲಕುವ ಕಥೆ!

    ಆ ಬಸ್ ದುರಂತದಲ್ಲಿ ಬದುಕಿ ಬಂದಿರುವ ಬಾಲಕ ರೋಹಿತ್‍ನಲ್ಲಿ ಮಾತ್ರ ಆ ದುರಂತದ ಕಪ್ಪು ಛಾಯೆ ಇಂದಿಗೂ ಕೂಡ ಅಳಿದಿಲ್ಲ. ಬಸ್ ಎಂದರೆ ಸಾಕು ರೋಹಿತ್ ಬಿಕ್ಕಿಬಿಕ್ಕಿ ಅಳುವುದಕ್ಕೆ ಶುರು ಮಾಡುತ್ತಿದ್ದಾನೆ. ಯಾಕಪ್ಪಾ ಏನಾಯಿತು ಎಂದು ಕೇಳಿದ್ರೂ ಏನು ಹೇಳದೇ ಸುಮ್ಮನೆ ಕಣ್ಣೀರು ಹಾಕುತ್ತಾನೆ. ರೋಹಿತ್‍ನ ಕಣ್ಣೆದುರೇ ತನ್ನ ಸ್ನೇಹಿತರು ತನ್ನೂರಿನ ಜನರು ಹಾಗೂ ನೆಂಟರುಗಳು ಜಲ ಸಮಾಧಿಯಾಗಿದ್ದರು. ಇದನ್ನು ಕಣ್ಣಾರೆ ಕಂಡಿರುವ ರೋಹಿತ್, ಇಂದಿಗೂ ಸಹ ಅದ್ಯಾವುದನ್ನೂ ಮರೆತಿಲ್ಲ. ಘಟನೆ ನಡೆದು ಒಂದು ವರ್ಷ ಕಳೆದರು ಸಹ ಆತ ಬಸ್ ಮತ್ತು ನೀರಿನ ಹೆಸರು ಹೇಳಿದ್ರೆ, ಒಂದು ಅಕ್ಷರವನ್ನು ಮಾತಾಡಾದೇ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾನೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತ- ಇಬ್ಬರು ಹೆಣ್ಣುಮಕ್ಕಳ ಸಮಾಧಿ ಬಳಿ ಹೋಗಿ ತಂದೆ ಕಣ್ಣೀರು

    ರೋಹಿತ್ ತನ್ನ ಕಣ್ಣೆದುರು ನಡೆದ ಘಟನೆಯನ್ನು ನೋಡಿ ಹೀಗೆ ಕಣ್ಣೀರು ಹಾಕುತ್ತಿದ್ರೆ, ಇನ್ನೊಂದೆಡೆ ತಮ್ಮವರನ್ನು ಕಳೆದುಕೊಂಡವರು ಕೂಡ ಅದೇ ನೆನಪಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಕನಗನಮರಡಿ ಗ್ರಾಮದ ಪಕ್ಕದಲ್ಲಿರುವ ವದೆಸಮುದ್ರ ಗ್ರಾಮದವರೇ ಅತೀ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಈ ಗ್ರಾಮದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಕೆಲವರು ಮಕ್ಕಳನ್ನು ಕಳೆದುಕೊಂಡಿದ್ರೆ, ಇನ್ನೂ ಕೆಲವರು ತಂದೆ-ತಾಯಿ ಹಾಗೂ ಕುಟಂಬಸ್ಥರನ್ನು ಕಳೆದುಕೊಂಡಿದ್ದಾರೆ. ಬದುಕಿ ಬಂದಿರುವ ರೋಹಿತ್ ಕೂಡ ಇದೇ ಗ್ರಾಮದ ಬಾಲಕ. ಸರ್ಕಾರ ಆ ವೇಳೆ ಪರಿಹಾರವನ್ನು ಸಹ ಆಯಾ ಕುಟಂಬಗಳಿಗೆ ನೀಡಿದೆ. ಇಲ್ಲಿನ ಜನರು ಸರ್ಕಾರ ನಮಗೆ ಆ ವೇಳೆ ಎಲ್ಲಾ ರೀತಿಯಲ್ಲೂ ಸ್ಪಂದನೆಯನ್ನು ನೀಡಿತು. ಆದರೆ ಏನೇ ನೀಡಿದ್ರು ನಮ್ಮವರು ಈಗ ನಮಗೆ ಮರಳಿ ಬರುವುದಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.

  • 7 ವರ್ಷದ ನರಕದ ಜೀವನಕ್ಕೆ 2 ಗಂಟೆಯಲ್ಲೇ ಮುಕ್ತಿ ಕೊಟ್ಟ ‘ಪಬ್ಲಿಕ್ ಟಿವಿ’

    7 ವರ್ಷದ ನರಕದ ಜೀವನಕ್ಕೆ 2 ಗಂಟೆಯಲ್ಲೇ ಮುಕ್ತಿ ಕೊಟ್ಟ ‘ಪಬ್ಲಿಕ್ ಟಿವಿ’

    ಮೈಸೂರು: ನಗರದ ರಾಜೇಂದ್ರನಗರ ‘ಎ’ ಬ್ಲಾಕಿನ ಸಾರ್ವಜನಿಕ ಶೌಚಾಲಯದಲ್ಲಿ ಕಳೆದ ಏಳು ವರ್ಷದಿಂದ ವಾಸವಿದ್ದ 13 ಮಂದಿ ಸದಸ್ಯರ ಬಡ ಕುಟುಂಬಕ್ಕೆ ಕೊನೆಗೂ ಅಲ್ಲಿಂದ ಮುಕ್ತಿ ಸಿಕ್ಕಿದೆ. ಶೌಚಾಲಯದಲ್ಲಿ ಬಡ ಕುಟುಂಬ ವಾಸ ಇರುವ ಕುರಿತು ಪಬ್ಲಿಕ್ ಟಿವಿ ಬೆಳಗ್ಗೆ ವಿಶೇಷ ವರದಿ ಮಾಡಿತ್ತು.

    ವರದಿ ಬಿತ್ತರ ಬೆನ್ನಲ್ಲೇ ಶೌಚಾಲಯದಿಂದ ಮುಕ್ತಿ ನೀಡಿ ಸೂರು ಕಲ್ಪಿಸಲು ವ್ಯವಸ್ಥೆ ಆಗಿದೆ. ಸ್ಥಳೀಯ ಪಾಲಿಕೆ ಸದಸ್ಯ ಪ್ರದೀಪ್ ಚಂದ್ರ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕುಟುಂಬಕ್ಕೆ ಪರ್ಯಾಯ ಸ್ಥಳ ನಿಯೋಜನೆ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೇ 13 ಜನರಿರುವ ಬಿಂದು ಕುಟುಂಬಸ್ಥರನ್ನು ಸರ್ಕಾರ ನಿರ್ಮಿಸಿರುವ ಮನೆಗಳ ಬಳಿ ಕರೆದೊಯ್ದು ಮನೆಗಳನ್ನು ತೋರಿಸಿದ್ದಾರೆ.

    ಸದ್ಯ ಸರ್ಕಾರ ಮನೆ ನಿರ್ಮಿಸುತ್ತಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಎರಡು ಮನೆಗಳಲ್ಲಿ ಬಡಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ದಿನಗಳ ಗುಂಪು ಮನೆ ಅಥವಾ ಆಶ್ರಯ ಮನೆ ಯೋಜನೆಯಲ್ಲಿ ಕುಟುಂಬಗಳಿಗೆ ಮನೆ ವಿತರಣೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

    ಕಳೆದ 7 ವರ್ಷಗಳಿಂದ ಹಿಂದೆ ಕೃಷ್ಣಮ್ಮ ಎಂಬವರ ಕುಟುಂಬ ಗುಡಿಸಲಿನಲ್ಲಿ ವಾಸ ಮಾಡುತ್ತಿತ್ತು. ಗುಡಿಸಲು ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಲು ಮನೆ ಖಾಲಿ ಮಾಡಿಸಿ ಬೇರೆ ನಿವೇಶನ ಕೊಡುತ್ತೇವೆ ಎಂದು ಹೇಳಿದ್ದರು. ಪರಿಣಾಮ ಕಳೆದ 7 ವರ್ಷಗಳಿಂದ ಇಡೀ ಕುಟುಂಬ ಸಾರ್ವಜನಿಕ ಶೌಚಾಲಯದಲ್ಲೇ ವಾಸಿಸುತ್ತಿದ್ದರು. ಆದರೆ ಈಗ ಆ ಸ್ಥಳವನ್ನು ಖಾಲಿ ಮಾಡಲು ಅಧಿಕಾರಿಗಳು ಹೇಳಿದ್ದರು. ಈ ಕುರಿತ ವಿಶೇಷ ವರದಿಯನ್ನು ಪಬ್ಲಿಕ್ ಟಿವಿ ಪ್ರವಾಸ ಮಾಡಿ ಬಡಕುಟುಂಬಕ್ಕೆ ಆಶ್ರಯ ಕಲ್ಪಿಸಿಕೊಡಲು ಮನವಿ ಮಾಡಿತ್ತು.