Tag: family

  • ಪ್ರೀತ್ಸಿ ಮದ್ವೆಯಾದ ಜೋಡಿ – ಯುವಕನ ಮನೆ ಮುಂದೆ ಲಾಂಗ್ ಹಿಡಿದು ನಿಂತ ಯುವತಿ ಕುಟುಂಬ

    ಪ್ರೀತ್ಸಿ ಮದ್ವೆಯಾದ ಜೋಡಿ – ಯುವಕನ ಮನೆ ಮುಂದೆ ಲಾಂಗ್ ಹಿಡಿದು ನಿಂತ ಯುವತಿ ಕುಟುಂಬ

    ಯಾದಗಿರಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಕುಟುಂಬದ ಮೇಲೆ ಯುವತಿಯ ಕುಟುಂಬಸ್ಥರು ಹಲ್ಲೆ ನಡೆಸಲು ಯತ್ನಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಹುಣಸಗಿ ತಾಲೂಕಿನ ಗುಳಬಾಳ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುಳಬಾಳ್ ಗ್ರಾಮದ ತುಳಸಿನಾಥ್, ಸುಮಿತ್ರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹೀಗಾಗಿ ಕಳೆದ 2 ತಿಂಗಳ ಹಿಂದೆ ಇಬ್ಬರೂ ಮನೆಬಿಟ್ಟು ಓಡಿ ಹೋಗಿ ಮದುವೆ ಆಗಿದ್ದರು. ಇವರಿಬ್ಬರ ಪ್ರೀತಿಗೆ ಕುಟುಂಬಸ್ಥರ ಒಪ್ಪಿಗೆ ಇರಲಿಲ್ಲ. ಇದೇ ಸಿಟ್ಟಿಗೆ ಯುವತಿ ಕಡೆಯ ನಾಗೇಶ್ ಮತ್ತು ರಾಮು ಕೈಯಲ್ಲಿ ತಲವಾರ್ ಹಿಡಿದು ಯುವಕನ ಕುಟುಂಬಸ್ಥರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.

    ಯುವತಿ ಮನೆಯಲ್ಲಿ ಮದುವೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಯುವತಿಯ ಮನೆಯವರಿಗೆ ಹೆದರಿ ಈ ಜೋಡಿ ಇನ್ನೂ ಗ್ರಾಮಕ್ಕೆ ಬಂದಿಲ್ಲ. ಇದನ್ನೆ ನೆಪವಾಗಿಟ್ಟುಕೊಂಡು ಯುವಕನ ಮನೆ ಮುಂದೆ ಯುವತಿಯ ಮನೆಯವರು ತೆರಳಿ, ಕೈಯಲ್ಲಿ ತಲ್ವಾರ್ ಹಿಡಿದು ಜೀವ ಬೇದರಿಕೆ ಹಾಕಿದ್ದಾರೆ. ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಗೋಮೂತ್ರದಿಂದ ಬದುಕು ಕಟ್ಟಿಕೊಂಡು ಕುಟುಂಬ

    ಗೋಮೂತ್ರದಿಂದ ಬದುಕು ಕಟ್ಟಿಕೊಂಡು ಕುಟುಂಬ

    – ತಿಂಗಳಿಗೆ ಗಂಜಲದಿಂದ 40 ಸಾವಿರ ಸಂಪಾದನೆ
    – 18 ವರ್ಷದಿಂದ 23 ಜಾನುವಾರುಗಳ ಲಾಲನೆ ಪೋಷಣೆ

    ಮಡಿಕೇರಿ: ಗೋ ಮೂತ್ರ, ಗಂಜಲ ಇದನ್ನ ನೋಡಿದರೆ ಈಗಿನ ಕಾಲದ ಹೆಚ್ಚಿನ ಮಂದಿ ಅಸಡ್ಡೆ ತೋರಿಸುತ್ತಾರೆ. ಆದರೆ ಗೋ ಮೂತ್ರದಿಂದಲೂ ಬದುಕು ಕಟ್ಟಿಕೊಳ್ಳಬಹುದು, ಗಂಜಲದಿಂದಲೂ ಆದಾಯ ಗಳಿಸಬಹುದು ಎಂದು ಕುಟುಂಬವೊಂದು ನಿರೂಪಿಸಿದೆ.

    ಕೊಡುಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೊದೂರಿನ ದಿವಾಕರ್ ಭಟ್ ಕುಟುಂಬದವರು ಗೋಮೂತ್ರದಿಂದ ಬದುಕು ಕಟ್ಟಿಕೊಂಡಿದ್ದಾರೆ. ದನಗಳನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದಾಗ ಹಾಗೇ ಅಪ್ರಯೋಜಕವಾಗಿ ಕೆಳಗೆ ಬಿದ್ದು ಹೊರಹೋಗುವ, ಯಾರೂ ಕೇರ್ ಮಾಡದ ಗೋಮೂತ್ರವನ್ನ ಇವರ ಮನೆಯಲ್ಲಿ ವಿಶೇಷ ಆಸಕ್ತಿಯಿಂದ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಗಂಜಲವನ್ನ ಬಟ್ಟಿ ಇಳಿಸುವುದರ ಮೂಲಕ ಅರ್ಕಾ (ಪರಿಷ್ಕರಣೆ ಮಾಡಿದ ಗಂಜಲ) ಮಾಡಿ ಶೇಖರಣೆ ಮಾಡಲಾಗುತ್ತದೆ.

    ಶೇಖರಣೆಯಾದ ಅರ್ಕಾವನ್ನ ಪ್ರತಿ ತಿಂಗಳು ಮಾರಾಟ ಮಾಡಲಾಗುತ್ತದೆ. ಯಾರಿಗೂ ಬೇಡವಾದ ಗೋಮೂತ್ರವನ್ನ ತುಂಬಾ ಜಾಣತನದಿಂದ ಜಾಗೃತೆ ವಹಿಸಿ ಸಂಗ್ರಹಿಸುತ್ತಾರೆ. ಈ ಮೂಲಕ ಗೋ ಮೂತ್ರಕ್ಕೂ ಡಿಮ್ಯಾಂಡ್ ಇದೆ ಅನ್ನೋದನ್ನ ಈ ಕುಟುಂಬ ನಿರೂಪಿಸಿದೆ. ಸದ್ಯ ಇವರ ಮನೆಯಲ್ಲಿ ಗುಜರಾತಿನ ಕಾಂಕ್ರೇಜ್ ದೇಶಿ ತಳಿಯ 23 ಜಾನುವಾರುಗಳಿದ್ದು, ಕಳೆದ 18 ವರ್ಷಗಳಿಂದ ಈ ದನಗಳನ್ನ ಪಾಲನೆ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ.

    ದಿನಕ್ಕೆ ಏನಿಲ್ಲಾ ಅಂದರೂ ಕನಿಷ್ಠ 25 ಲೀಟರ್ ಅರ್ಕಾವನ್ನ ಶೇಖರಣೆ ಮಾಡಲಾಗುತ್ತದೆ. ಹೀಗೆ ಪರಿಶುದ್ಧ ಗಂಜಲವನ್ನ ರೆಡಿ ಮಾಡಲು ಸುಮಾರು 40 ಲೀಟರ್ ನಷ್ಟು ಗಂಜಲವನ್ನ ನಿರ್ದಿಷ್ಟ ಹಬೆ (ಶಾಕ)ಯನ್ನ ಕೊಟ್ಟು ಕುದಿಸಿದಾಗ 25 ಲೀಟರ್‌ನಷ್ಟು ಅರ್ಕಾ ತಯಾರಾಗುತ್ತದೆ. ಹೀಗೆ ತಿಂಗಳಿಗೆ ಏನಿಲ್ಲಾ ಅಂದರು ಅಂದಾಜು 600 ರಿಂದ 700 ಲೀಟರ್‌ನಷ್ಟು ಪರಿಶುದ್ಧ ಗಂಜಲ ಶೇಖರಣೆಯಾಗುತ್ತೆ. ಮಾರುಕಟ್ಟೆಯಲ್ಲಿ ಒಂದು ಲೀಟರ್‌ಗೆ ಕನಿಷ್ಠ 60ರೂ ಬೆಲೆಯಿದೆ. ಹೀಗಾಗಿ ತಿಂಗಳಿಗೆ ಸುಮಾರು 40 ಸಾವಿರ ಹಣವನ್ನ ಕೇವಲ ಗಂಜಲದಿಂದಲೇ ಗಳಿಸುತ್ತಾರೆ. ಆದ್ದರಿಂದ ನಾವುಗಳು ದನಗಳನ್ನ ಸಾಕಲ್ಲ, ನಮ್ಮನ್ನೇ ದನಗಳು ಸಾಕುತ್ತದೆ ಎಂದು ದಿವಾಕರ್ ಭಟ್ ಪುತ್ರ ಶಿವಶಂಕರ್ ಹೇಳಿದ್ದಾರೆ.

    ಗೋಮೂತ್ರದ ಪ್ರಾಮುಖ್ಯತೆಯನ್ನ ಅರಿತ ಕೊಡಗಿನ ಈ ಕುಟುಂಬ ಎಲ್ಲೋ ಹರಿದು ಕಸದ ಗುಂಡಿ ಸೇರುತ್ತಿದ್ದ ಗಂಜಲದಿಂದಲೂ ಆದಾಯ ಗಳಿಸಬಹುದು ಅನ್ನೋದನ್ನ ಸಾಬೀತು ಮಾಡಿ ತೋರಿಸಿದ್ದಾರೆ.

  • ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ಲಕ್ನೋ: ಉತ್ತರಪ್ರದೇಶದಲ್ಲಿ ದೂರು ವಾಪಸ್ ಪಡೆಯದಿದ್ದಕ್ಕೆ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ದಾಳಿ ನಡೆಸಿದ್ದಾರೆ.

    ಉತ್ತರ ಪ್ರದೇಶದ ಹಾಪುರ್ ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ಎರಚಿ, ಆಕೆಯ ಪೋಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಎರಚಿದ ಆ್ಯಸಿಡ್ ಬಾಲಕಿಯ ಕಾಲಿನ ಮೇಲೆ ಬಿದ್ದಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    2019ರ ಸೆಪ್ಟೆಂಬರ್ 2ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಆ ಬಳಿಕ ಬಾಲಕಿಯ ಕುಟುಂಬಸ್ಥರು ಕಾಮುಕನ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ಆರೋಪಿ ಕುಟುಂಬಸ್ಥರು ಕೊಟ್ಟಿರುವ ದೂರನ್ನು ವಾಪಸ್ ಪಡೆಯುವಂತೆ ಸಂತ್ರಸ್ತೆ ಹಾಗೂ ಆಕೆಯ ಪೋಷಕರಿಗೆ ಕಾಡುತ್ತಿದ್ದರು.

    ಇದೇ ವಿಚಾರಕ್ಕೆ ಭಾನುವಾರ ಕೂಡ ಸಂತ್ರಸ್ತೆ, ಆಕೆಯ ಪೋಷಕರು ಹಾಗೂ ಆರೋಪಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಆರೋಪಿ ಕುಟುಂಬಸ್ಥರು ಸಂತ್ರಸ್ತೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ.

  • ನನ್ನ ತಂದೆ ಜೊತೆ ಮಲಗು – ಪತಿಯಿಂದ ಪತ್ನಿಗೆ ಕಿರುಕುಳ

    ನನ್ನ ತಂದೆ ಜೊತೆ ಮಲಗು – ಪತಿಯಿಂದ ಪತ್ನಿಗೆ ಕಿರುಕುಳ

    ಕೊಪ್ಪಳ: ಪತಿಯೊಬ್ಬ ತನ್ನ ಅಪ್ಪನ ಜೊತೆ ಸಂಸಾರ ಮಾಡು ಎಂದು ಪತ್ನಿಗೆ ಕಿರುಕುಳ ನೀಡುತ್ತಿರುವ ವಿಚಿತ್ರ ಪ್ರಕರಣವೊಂದು ಕೊಪ್ಪಳದಲ್ಲಿ ನಡೆದಿದೆ.

    ಗೋಕುಲ್ ಪತ್ನಿಗೆ ಕಿರುಕುಳ ನೀಡುತ್ತಿರುವ ಪತಿ. ಮೂಲತಃ ಕೊಪ್ಪಳ ತಾಲೂಕಿನ ಬೊಮ್ಮಸಾಗರ ತಾಂಡಾ ನಿವಾಸಿಯಾಗಿರುವ ಮಹಿಳೆ 2018ರಲ್ಲಿ ಕಳಮಳಿ ತಾಂಡಾದ ಗೋಕುಲ್ ಜೊತೆ ಮದುವೆಯಾಗಿದ್ದರು. ಮದುವೆಯಾದ ನಂತರ ಗೋಕುಲ್ ತನ್ನ ಪತ್ನಿಗೆ ಅಪ್ಪನ ಜೊತೆ ಸಂಸಾರ ಮಾಡು ಎಂದು ಕಿರುಕುಳ ನೀಡುತ್ತಿದ್ದನು.

    ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆ ಎಸ್‍ಪಿ ಕಚೇರಿಗೆ ಬಂದು ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ. ನನ್ನ ಪತಿ ಹಾಗೂ ಆತನ ತಾಯಿ ಸೀತಮ್ಮ, ನಿನ್ನ ಮಾವ ಕೇಮಪ್ಪ ಜೊತೆ ಸಂಸಾರ ಮಾಡು ಎಂದು ಪೀಡಿಸುತ್ತಾರೆ. ಅಲ್ಲದೆ ನನ್ನ ಮಾವ ಕೇಮಪ್ಪ ನನ್ನ ಬಳಿ ಅಸಭ್ಯವಾಗಿ ವರ್ತಿಸುತ್ತಾನೆ ಎಂದು ಮಹಿಳೆ ಎಸ್‍ಪಿ ಬಳಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ.

    ಈ ಮೊದಲು ಗೋಕುಲ್‍ಗೆ ವಿವಾಹವಾಗಿದ್ದು, ಪತ್ನಿ ಇದ್ದರೂ ಆತ ಮತ್ತೊಂದು ಮದುವೆಯಾಗಿದ್ದಾನೆ. ಮದುವೆಯ ಆರಂಭದಿಂದಲೂ ಗೋಕುಲ್ ಹಾಗೂ ಆತನ ಕುಟುಂಬಸ್ಥರು ಮಹಿಳೆಗೆ ಕಿರುಕುಳ ನೀಡುತ್ತಿದ್ದಾರೆ. ಈ ಹಿಂದೆ ಗೋಕುಲ್ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದನು. ಅಲ್ಲದೆ ನನ್ನ ತಂದೆ ಜೊತೆ ಮಲಗು ಎಂದು ಗೋಕುಲ್ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದನು.

    ಈ ಬಗ್ಗೆ ಮಹಿಳೆ ತಾವರಗೇರಾ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಹಾಗಾಗಿ ಮಹಿಳೆ ಎಸ್‍ಪಿ ಕಚೇರಿಗೆ ಹೋಗಿ ದೂರು ದಾಖಲಿಸಿದ್ದು, ತಾವರಗೇರಾ ಪೊಲೀಸರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

  • ಮಕ್ಕಳ ಹುಟ್ಟುಹಬ್ಬಕ್ಕೆ ನೇಪಾಳಕ್ಕೆ ಪ್ರವಾಸ ತೆರಳಿ ಶವವಾದ ಕುಟುಂಬ

    ಮಕ್ಕಳ ಹುಟ್ಟುಹಬ್ಬಕ್ಕೆ ನೇಪಾಳಕ್ಕೆ ಪ್ರವಾಸ ತೆರಳಿ ಶವವಾದ ಕುಟುಂಬ

    ನೇಪಾಳ: ಮೂರು ಮಕ್ಕಳ ಹುಟ್ಟುಹಬ್ಬಕ್ಕೆಂದು ನೇಪಾಳಕ್ಕೆ ಪ್ರವಾಸ ತೆರಳಿದ್ದ ಕೇರಳದ ಕೊಚ್ಚಿ ಮೂಲದ ಕುಟುಂಬವೊಂದು ಹೋಟೆಲ್‍ವೊಂದರಲ್ಲಿ ದುರಂತ ಸಾವಿಗೀಡಾಗಿದೆ.

    ಮೃತರನ್ನು ತಿರುವನಂತಪುರ ನಿವಾಸಿ ಪ್ರವೀಣ್ ಮತ್ತು ಅವರ ಪತ್ನಿ ಸರಣ್ಯ ಹಾಗೂ ಅವರ ಮೂರು ಮಕ್ಕಳಾದ ಅರ್ಚ, ಶ್ರೀಭದ್ರ ಮತ್ತು ಅಭಿನವ್ ಎಂದು ಗುರುತಿಸಲಾಗಿದೆ. ಈ ಮ ಮೂವರು ಮಕ್ಕಳ ವಯಸ್ಸು ಬೇರೆಯಾದರೂ ಜನವರಿ ಒಂದೇ ತಿಂಗಳಲ್ಲಿ ಮೂವರು ಜನಿಸಿದ್ದರು. ಹೀಗಾಗಿ ಅವರ ಹುಟ್ಟುಹಬ್ಬ ಆಚರಿಸಲು ನೇಪಾಳ ಪ್ರವಾಸಕ್ಕೆ ತೆರಳಿದ್ದು, ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ.

    ಜನವರಿ 3 ರಂದು ಶ್ರೀಭದ್ರ, 15 ರಂದು ಅಭಿನವ್ ಮತ್ತು 31ರಂದು ಅರ್ಚ ಹುಟ್ಟುಹಬ್ಬವಿತ್ತು. ಕೊನೆಯ ಮಗ ಅಭಿನವ್ ಎಲಮಕ್ಕರದಲ್ಲಿರುವ ಸರಸ್ವತಿ ವಿದ್ಯಾನಿಕೇತನದಲ್ಲಿ ಎಲ್‍ಕೆಜಿ ಓದುತ್ತಿದ್ದ. ಮಗಳು ಶ್ರೀಭದ್ರ ಕಳೆದ ಗುರುವಾರ ಶಾಲೆಯಿಂದ ಮನೆಗೆ ಮರಳಲು ತುಂಬಾ ಖುಷಿಯಾಗಿದ್ದಳು. ನಮ್ಮ ಡ್ಯಾಡಿ ಬಂದಿದ್ದಾರೆ. ನಾವು ನೇಪಾಳ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಒಂದು ವಾರದ ಬಳಿಕ ಊರಿಗೆ ವಾಪಸ್ ಬರುತ್ತೇವೆ ಎಂದು ಹೇಳಿದ್ದಳು ಎನ್ನಲಾಗಿದೆ.

    ಮಕ್ಕಳನ್ನು ಪ್ರತಿದಿನವು ಅವರ ತಾತ ಶಾಲೆ ಡ್ರಾಪ್ ಮಾಡುತ್ತಿದ್ದರು. ಆದರೆ ಕಳೆದ ಗುರುವಾರ ತಂದೆ ಪ್ರವೀಣ್ ತಾವೇ ಹೋಗಿ ಮಕ್ಕಳನ್ನು ಶಾಲೆಗೆ ಬಿಟ್ಟು, ಪ್ರವಾಸದ ಬಗ್ಗೆ ಶಿಕ್ಷಕರಿಗೆ ಹೇಳಿ ರಜೆ ಕೊಡಿ ಎಂದು ಮನವಿ ಮಾಡಿದ್ದಾರೆ. ಅದರಂತೆ ಮಕ್ಕಳನ್ನು ಕರೆದುಕೊಂಡು ಹುಟ್ಟುಹಬ್ಬದ ಸಂಭ್ರಮಾಚರಣೆಗೆ ನೇಪಾಳಕ್ಕೆ ಬಂದಿದ್ದರು. ಆದರೆ ನೇಪಾಳದ ಹೋಟೆಲ್‍ವೊಂದರಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ರೂಮಿನೊಳಗೆ ಇಡಲಾಗಿದ್ದ ಔಟ್‍ಡೋರ್ ಹೀಟರ್ ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೇವನೆಯಿಂದ ಈ ಕುಟುಂಬ ಸಾವನ್ನಪ್ಪಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

  • ರಾತ್ರೋರಾತ್ರಿ ಮೂವರ ಭೀಕರ ಕೊಲೆ-11 ದಿನದಲ್ಲಿ ಹಸೆಮಣೆ ಏರಬೇಕಿದ್ದಾತ ಸಾವು

    ರಾತ್ರೋರಾತ್ರಿ ಮೂವರ ಭೀಕರ ಕೊಲೆ-11 ದಿನದಲ್ಲಿ ಹಸೆಮಣೆ ಏರಬೇಕಿದ್ದಾತ ಸಾವು

    – ಮಲಗಿದ್ದಾಗಲೇ ತಂದೆ-ತಾಯಿ, ಮಗನ ಕೊಚ್ಚಿ ಕೊಂದ್ರು

    ಬೆಳಗಾವಿ: ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ನಡೆದಿದೆ.

    ಬೈಲಹೊಂಗಲದ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯ ಶಿವಾನಂದ ಅಂದಾನ ಶೆಟ್ಟಿ, ಪತ್ನಿ ಶಾಂತವ್ವ ಮತ್ತು ಪುತ್ರ ವಿನೋದ್ ಅಂದಾನ ಶೆಟ್ಟಿ ಮೃತ ದುರ್ದೈವಿಗಳು. ಶನಿವಾರ ರಾತ್ರಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

    ತಂದೆ, ಮಗ ಮತ್ತು ತಾಯಿ ಮೂವರು ಮನೆಯಲ್ಲಿ ಮಲಗಿದ್ದಾಗಲೇ ರಾತ್ರಿ ಬಂದು ಕೊಲೆ ಮಾಡಿ ಹೋಗಿದ್ದಾರೆ. ಮುಂಜಾನೆ ನೆರೆಹೊರೆಯವರು ಬಂದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮೃತ ಶಿವಾನಂದ ಮತ್ತು ಶಾಂತವ್ವ ತಮ್ಮ ಮಗ ವಿನೋದ್ ಮದುವೆಯನ್ನು ಇದೇ ತಿಂಗಳ 30 ರಂದು ಫಿಕ್ಸ್ ಮಾಡಿದ್ದರು. ಹೀಗಾಗಿ ಕುಟುಂಬದವರು ಮದುವೆ ಸಂಭ್ರಮದಲ್ಲಿದ್ದರು. ಆದರೆ ರಾತ್ರೋರಾತ್ರಿ ಒಂದು ಕುಟುಂಬವನ್ನೇ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ದೊಡ್ಡವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹಂತಕರು ಒಂದೇ ಮನೆಯಲ್ಲಿ ಮೂರು ಜನರನ್ನ ಕೊಚ್ಚಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಹುತಾತ್ಮ ಯೋಧನ ಪಾರ್ಥಿವ ಶರೀರ ಇಂದು ಮಾಗಡಿಗೆ ಆಗಮನ

    ಹುತಾತ್ಮ ಯೋಧನ ಪಾರ್ಥಿವ ಶರೀರ ಇಂದು ಮಾಗಡಿಗೆ ಆಗಮನ

    – ಶುಕ್ರವಾರ ಸಕಲ ಸರ್ಕಾರಿ ಗೌರವದ ಅಂತ್ಯಕ್ರಿಯೆ

    ರಾಮನಗರ: ಜಮ್ಮುವಿನ ಉಧಂಪುರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಸಿಎಲ್‍ಎಸ್‍ಎಫ್‍ನ ಯೋಧ ವೆಂಕಟ ನರಸಿಂಹಮೂರ್ತಿಯ ಪಾರ್ಥಿವ ಶರೀರ ಇಂದು ಹುಟ್ಟೂರು ಮಾಗಡಿಗೆ ಆಗಮಿಸಲಿದೆ.

    ಕಳೆದ 14ರಂದು ಜಮ್ಮುವಿನ ಉಧಂಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ವೆಂಕಟ ನರಸಿಂಹಮೂರ್ತಿ ಹುತಾತ್ಮರಾಗಿದ್ದರು. ಇಂದು ಬೆಂಗಳೂರಿಗೆ 4:30ಕ್ಕೆ ಪಾರ್ಥಿವ ಶರೀರ ಆಗಮಿಸಲಿದೆ. ಯೋಧನ ಹುಟ್ಟೂರು ಮಾಗಡಿಯ ಹೊಂಬಾಳಮ್ಮನ ಪೇಟೆಗೆ ಸುಮಾರು 6.30ಕ್ಕೆ ಪಾರ್ಥಿವ ಶರೀರ ಆಗಮಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ಉಗ್ರರ ದಾಳಿಯಲ್ಲಿ ಮಾಗಡಿಯ ಯೋಧ ಹುತಾತ್ಮ

    ವೆಂಕಟ ನರಸಿಂಹಮೂರ್ತಿ ಅವರ ಪಾರ್ಥಿವ ಶರೀರ ರಾತ್ರಿಯ ಒಳಗಾಗಿ ಬಂದಲ್ಲಿ ಇಂದೇ ಅಂತ್ಯಕ್ರಿಯೆ ನೆರವೇರಲಿದೆ. ಒಂದು ವೇಳೆ ಪಾರ್ಥಿವ ಶರೀರ ಸಂಜೆ ಬಳಿಕ ಬಂದಲ್ಲಿ ಶುಕ್ರವಾರ ಬೆಳಗ್ಗೆ 10.30ರ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

    ಹೊಂಬಾಳಮ್ಮನ ಪೇಟೆಯ ಪಾಪಣ್ಣ- ಲಕ್ಷ್ಮಮ್ಮ ದಂಪತಿಯ ಪುತ್ರನಾಗಿದ್ದ ಹುತಾತ್ಮ ಯೋಧ ವೆಂಕಟ ನರಸಿಂಹ ಮೂರ್ತಿ ಕಳೆದ 2013ರಲ್ಲಿ ಸೇನೆ ಸೇರ್ಪಡೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗೆ ಮನೆಗೆ ಬಂದಿದ್ದ ಯೋಧನ ಮದುವೆ ವಿಚಾರವಾಗಿ ಪ್ರಸ್ತಾಪ ಕೂಡ ನಡೆದಿತ್ತು. ಪೋಷಕರು ಕನ್ಯೆಯ ಹುಡುಕಾಟದಲ್ಲಿ ನಿರತರಾಗಿದ್ದರು. ಆದರೆ ದುರಾದೃಷ್ಟವಶಾತ್ ಗುಂಡಿನ ದಾಳಿಯಲ್ಲಿ ಯೋಧ ಹುತಾತ್ಮರಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

  • ವಿಶೇಷ ಫೋಟೋ ಹಂಚಿಕೊಂಡ ಸಚಿವೆ ಸ್ಮೃತಿ ಇರಾನಿ- ಪೋಸ್ಟ್ ವೈರಲ್

    ವಿಶೇಷ ಫೋಟೋ ಹಂಚಿಕೊಂಡ ಸಚಿವೆ ಸ್ಮೃತಿ ಇರಾನಿ- ಪೋಸ್ಟ್ ವೈರಲ್

    ನವದೆಹಲಿ: ಸ್ಮೃತಿ ಇರಾನಿ ಅವರು ಕೇಂದ್ರ ಸಚಿವೆಯಾಗಿ ತಮ್ಮ ವಿಶಿಷ್ಟ ಕೆಲಸಗಳ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಅದೇ ರೀತಿ ಕುಟುಂಬದ ಜೊತೆ ಕಾಲ ಕಳೆಯುವುದು, ಹರಟೆ, ಮೋಜು ಮಸ್ತಿ ಮಾಡುವುದರಿಂದಲೂ ಸುದ್ದಿಯಾಗುತ್ತಾರೆ. ಇದೀಗ ತಮ್ಮ ಕುಟುಂಬದ ಪ್ರೀತಿಯನ್ನು ಸೂಚಿಸುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸಚಿವೆಯಾಗಿ ಆ್ಯಕ್ಟಿವ್ ಆಗಿರುವ ಸ್ಮೃತಿ ಇರಾನಿ ಅವರು, ಸಾಮಾಜಿಕ ಜಾಲತಾಣಗಳಲ್ಲಿಯೂ ಅಷ್ಟೇ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಕುಟುಂಬದ ಚಟುವಟಿಕೆಗಳ ಕುರಿತು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ತಮ್ಮ ಪತಿ ಹಾಗೂ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ನೆಟ್ಟಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.

     

    View this post on Instagram

     

    Mia Familia My Life My Love ❤️

    A post shared by Smriti Irani (@smritiiraniofficial) on

    ಸ್ಮೃತಿ ಇರಾನಿಯವರ ಪತಿ ಜುಬಿನ್ ಇರಾನಿ ಅವರು ತಮ್ಮ ಮೂವರು ಮಕ್ಕಳಾದ ಜೋಹ್ರ್ ಇರಾನಿ, ಜೋಯಿಶ್ ಇರಾನಿ ಹಾಗೂ ಶನೆಲ್ಲೆ ಇರಾನಿ ಯವರನ್ನು ಗಟ್ಟಿಯಾಗಿ ತಬ್ಬಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ‘ಮಿಯಾ ಫ್ಯಾಮಿಲಿಯಾ ಮೈ ಲೈಫ್ ಮೈ ಲವ್’ ಎಂಬ ಸಾಲನ್ನು ಬರೆದಿದ್ದಾರೆ.

    ಈ ಚಿತ್ರವನ್ನು ಮೇಲಿಂದ ತೆಗೆಯಲಾಗಿದ್ದು, ತಂದೆ ಮಕ್ಕಳು ತಬ್ಬಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸ್ಮೃತಿ ಇರಾನಿಯವರು ಈ ವರ್ಷದಲ್ಲಿ ಹಂಚಿಕೊಂಡ ಕುಟುಂಬದ ಮೊದಲ ಚಿತ್ರ ಇದಾಗಿದೆ. ಸ್ಮೃತಿ ಇರಾನಿಯವರ ಬಹುತೇಕ ಪೋಸ್ಟ್ ಗಳು ನಗುವಿನಿಂದ ಕೂಡಿರುತ್ತವೆ. ಸ್ಮೃತಿ ಇರಾನಿಯವರು ಜವಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾರೆ.

  • ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಕುಟುಂಬಕ್ಕೆ ಡಿಸಿಎಂರಿಂದ 5 ಲಕ್ಷ ಪರಿಹಾರ

    ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಕುಟುಂಬಕ್ಕೆ ಡಿಸಿಎಂರಿಂದ 5 ಲಕ್ಷ ಪರಿಹಾರ

    ಬಳ್ಳಾರಿ: ಕಳೆದ ಎರಡು ದಿನಗಳ ಹಿಂದೆ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಮನೆಗೆ ಇಂದು ಡಿಸಿಎಂ ಲಕ್ಷ್ಮಣ ಸವದಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ಜಿಲ್ಲೆಯ ಹೊಸಪೇಟೆ ತಾಲೂಕಿನ ಗುಂಡ್ಲುವದ್ದಿಗೇರಿ ಗ್ರಾಮದ ರೈತ ಜೆ.ತಿಮ್ಮಾರೆಡ್ಡಿ ಬೆಳೆಹಾನಿ ಹಾಗೂ ಸಾಲಭಾದೆಯಿಂದ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್, ಕೈ ಸಾಲ ಸೇರಿ ಸುಮಾರು 12 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

    ಈ ಹಿನ್ನೆಲೆಯಲ್ಲಿ ಇಂದು ತಿಮ್ಮಾರೆಡ್ಡಿ ಧರ್ಮಪತ್ನಿ ಸುಧಾ ಹಾಗೂ ಕುಟುಂಬದವರಿಗೆ 5 ಲಕ್ಷ ರೂ.ಗಳ ಚೆಕ್ ಅನ್ನು ಉಪಮುಖ್ಯಮಂತ್ರಿ, ಸಾರಿಗೆ, ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ವಿತರಿಸಿದ್ದಾರೆ. ಇದೇ ವೇಳೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸರ್ಕಾರ ರೈತರ ಪರವಾಗಿ ನಿಲ್ಲಲಿದೆ ಎಂದು ರೈತ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

  • ದೋಣಿ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಗೃಹ ಸಚಿವರಿಂದ ಪರಿಹಾರ ವಿತರಣೆ

    ದೋಣಿ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಕ್ಕೆ ಗೃಹ ಸಚಿವರಿಂದ ಪರಿಹಾರ ವಿತರಣೆ

    ಹಾವೇರಿ: ಕಾರವಾರ ಅರಬ್ಬಿ ಸಮುದ್ರದ ನಡುಗಡ್ಡೆ ಕೂರ್ಮಗಡ ನರಸಿಂಹದೇವರ ಜಾತ್ರೆಗೆ ತೆರಳಿದ ಸಂದರ್ಭದಲ್ಲಿ ದೋಣಿ ದುರಂತದಲ್ಲಿ ಮಡಿದ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೊಸೂರ ಹಾಗೂ ಯತ್ನಳ್ಳಿಯ ಬೆಳವಲಕೊಪ್ಪ ಕುಟುಂಬಗಳ ಒಂಭತ್ತು ಜನರಿಗೆ ತಲಾ ಐದು ಲಕ್ಷ ರೂ. ಪರಿಹಾರದಂತೆ ಒಟ್ಟಾರೆ 45 ಲಕ್ಷ ರೂ. ಪರಿಹಾರ ಚೆಕ್‍ ಅನ್ನು ಕುಟುಂಬ ವರ್ಗಕ್ಕೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ವಿತರಿಸಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ, ದೋಣಿ ದುರಂತದಲ್ಲಿ ಮಡಿದ ಕುಟುಂಬದ ಸೋಮಪ್ಪ ಬಿ.ಬೆಳವಲಕೊಪ್ಪ ಸವಣೂರ ಇವರಿಗೆ 20 ಲಕ್ಷ ರೂ. ಚೆಕ್ ಹಾಗೂ ಎಂಟು ವರ್ಷದ ಬಾಲಕ ಗಣೇಶ ಪಿ.ಬೆಳವಲಕೊಪ್ಪ ಹಾಗೂ ಶ್ರೀಮತಿ ಕೇಶವ್ವ ಬಿ.ಬೆಳವಲಕೊಪ್ಪ ಅವರಿಗೆ 25 ಲಕ್ಷ ರೂ.ಗಳ ಚೆಕ್‍ಗಳನ್ನು ಸಚಿವರು ನೀಡಿದರು.

    ಕಾರವಾರ ಅರಬ್ಬಿಸಮುದ್ರದ ನಡುಗಡ್ಡೆ ಕೂರ್ಮಗಡ ದೋಣಿ ದುರಂತದಲ್ಲಿ 16 ಜನ ಜಲಸಮಾಧಿಯಾಗಿದ್ದು, ಈ ಪೈಕಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೊಸೂರು ಯತ್ನಳ್ಳಿಯ 9 ಜನ ದುರಂತದಲ್ಲಿ ಸಾವನ್ನಪ್ಪಿದ್ದರು. ಬಿ.ಸೋಮಪ್ಪ ಅವರ ಹೆಂಡತಿ ಶ್ರೀಮತಿ ಮಂಜುಳಾ ಎಸ್. ಬೆಳವಲಕೊಪ್ಪ, ಮಕ್ಕಳಾದ ಕಿರಣ, ಅರುಣಾ ಹಾಗೂ ಸಹೋದರಿ ಕೀರ್ತಿ ಸಾವನ್ನಪ್ಪಿದ್ದರು. ತಲಾ ಐದು ಲಕ್ಷ ರೂ.ದಂತೆ 20 ಲಕ್ಷ ರೂ. ಪರಿಹಾರ ಚೆಕ್‍ನ್ನು ಸೋಮಪ್ಪ ಅವರು ಗೃಹ ಸಚಿವರಿಂದ ಸ್ವೀಕರಿಸಿದರು. ಇದೇ ಗ್ರಾಮದ ಇನ್ನೊಂದು ಕುಟುಂಬದ ಪರಶುರಾಮ ಬಿ.ಬೆಳವಲಕೊಪ್ಪ, ಹೆಂಡತಿ ಭಾರತಿ ಬೆಳವಲಕೊಪ್ಪ, ಮಗಳಾದ ಸಂಜನಿ, ಸುಜಾತಾ, ಮಗ ಸಂಜಯ ಸೇರಿದಂತೆ ಐದು ಜನ ಮೃತಪಟ್ಟಿದ್ದು, ಪರಶುರಾಮ ಅವರ ಎರಡನೇ ಮಗನಾದ ಗಣೇಶ ಘಟನೆಯಲ್ಲಿ ಬದುಕಿ ಉಳಿದ್ದನು. ಮೃತರ ಮಗ ಗಣೇಶ ಹಾಗೂ ಅವರ ಅಜ್ಜಿ ಕೇಶವ್ವ (ಮೃತ ಪರಶುರಾಮ ತಾಯಿ) ಅವರಿಗೆ ಗೃಹ ಸಚಿವರು 25 ಲಕ್ಷ ರೂ. ಪರಿಹಾರದ ಚೆಕ್‍ನ್ನು ವಿತರಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರಾದ ಎಸ್.ಕೆ ಕರಿಯಣ್ಣನವರ, ಬ್ಯಾಡಗಿ ಕ್ಷೇತ್ರದ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿಗಳಾದ ಕೃಷ್ಣ ಭಾಜಪೇಯಿ, ಪೊಲೀಸ್ ಅಧೀಕ್ಷಕರಾದ ಕೆ.ಜಿ.ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‍ಪಿ ವಿಜಯಕುಮಾರ, ಜಿ.ಪಂ. ಸದಸ್ಯರಾದ ಸಿದ್ದರಾಜು ಕಲಕೋಟಿ, ಹಾಗೂ ಪೊಲೀಸ್ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.