Tag: family

  • ದೇಶದ್ರೋಹಿಯನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಬಂದ ಆರ್ದ್ರಾ ಕುಟುಂಬಸ್ಥರು

    ದೇಶದ್ರೋಹಿಯನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಬಂದ ಆರ್ದ್ರಾ ಕುಟುಂಬಸ್ಥರು

    ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಅಮೂಲ್ಯ ಪ್ರಕರಣದ ಬೆನ್ನಲ್ಲೇ ಕಾಶ್ಮೀರ ಮುಕ್ತಿ, ದಲಿತ ಮುಕ್ತಿ, ಆದಿವಾಸಿ ಮುಕ್ತಿ ಎನ್ನುವ ಭಿತ್ತಿಪತ್ರ ಹಿಡಿದ ಆರೋಪದ ಅಡಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಆರ್ದ್ರಾ ಳನ್ನು ಕುಟುಂಬಸ್ಥರು ಭೇಟಿಮಾಡಿದ್ದಾರೆ.

    ದ್ರೋಶದ್ರೋಹಿ ಘೋಷಣೆ ಕೂಗಿ ಪರಪ್ಪನ ಅಗ್ರಹಾರ ಸೇರಿರುವ ಆರ್ದ್ರಾ ಳನ್ನು ಇಂದು ಆಕೆಯ ತಂದೆ ಹಾಗೂ ಕುಟುಂಬ ವರ್ಗ ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿ ಹಿಂತಿರುಗಿದ್ದಾರೆ.

    ಆರ್ದ್ರಾ ಳ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾದ ಹಿನ್ನೆಲೆ ಆಕೆಯ ತಂದೆ ಶನಿವಾರ ಜೈಲಿಗೆ ಬಂದು ಮನೆಯಿಂದ ತಂದಿದ್ದ ಮಾತ್ರೆಗಳನ್ನು ಕೊಟ್ಟು ಹೋಗಿದ್ದರು. ಬಳಿಕ ಇಂದು ಆರ್ದ್ರಾ ತಂದೆ ಹಾಗೂ ಕುಟುಂಬ ವರ್ಗದವರು ಭೇಟಿಗೆ ಅನುಮತಿ ಪಡೆದು ಔಷಧಿಗಳ ಜೊತೆ ಆಗಮಿಸಿದ್ದರು. ಆಕೆಯನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಕೆಲ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

    ಮಗಳ ಭೇಟಿಯ ನಂತರ ಜೈಲಿನಿಂದ ಹೊರಬಂದ ಆರ್ದ್ರಾ ಕುಟುಂಬದವರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಹಿಂತಿರುಗಿದ್ದಾರೆ.

  • ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ – ಕುಟುಂಬದ ಜೊತೆ ಮಾತನಾಡಿದ್ರೆ 5 ಸಾವಿರ ದಂಡ

    ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ – ಕುಟುಂಬದ ಜೊತೆ ಮಾತನಾಡಿದ್ರೆ 5 ಸಾವಿರ ದಂಡ

    – ಈ ಕುಟುಂಬಕ್ಕೆ ಊರ ಜಾತ್ರೆಗೂ ನೋ ಎಂಟ್ರಿ

    ಬೆಳಗಾವಿ/ಬೆಂಗಳೂರು: ಪುಲ್ವಾಮ ದಾಳಿ ನಡೆದಾಗ ಅದೆಷ್ಟೋ ಮಂದಿ ಕಣ್ಣೀರು ಹಾಕಿದ್ದರು. ಯೋಧರ ಛಿದ್ರ ಛಿದ್ರವಾದ ದೇಹಗಳನ್ನು ನೋಡಿ ಮನಸ್ಸು ವಿಲ ವಿಲ ಅಂದಿತ್ತು. ಮೊಂಬತ್ತಿಯ ಮಂದಬೆಳಕಿನಲ್ಲಿ ಮೌನವೇ ಮಾತಾಗಿತ್ತು. ಆದರೆ ಕರುನಾಡಿನ ಹೆಮ್ಮೆಯ ಯೋಧರೊಬ್ಬರ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ, ಅವರ ಜೊತೆ ಯಾರಾದರೂ ಮಾತನಾಡಿದರೆ ಐದು ಸಾವಿರ ದಂಡ ವಿಧಿಸುವ ನೀಚ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ರಾಮದುರ್ಗದ ತೋಟಗಿಟ್ಟಿ ಗ್ರಾಮಸ್ಥರು ಯೋಧ ವಿಠಲ್ ಕಡಕೋಳ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಹೀಗಾಗಿ ಈ ಕುಟುಂಬದ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ ಐದು ಸಾವಿರ ದಂಡ ವಿಧಿಸಲಾಗುತ್ತೆ. ಜೊತೆಗೆ ಯೋಧನ ಕುಟುಂಬಕ್ಕೆ ಯಾರೋಬ್ಬರ ಮನೆಯಲ್ಲೂ ನೀರು ಸಿಗಲ್ಲ, ಊರಿನ ಜಾತ್ರೆ, ದೇಗುಲಕ್ಕೆ ಕೂಡ ಯೋಧನ ಕುಟುಂಬದವರಿಗೆ ಪ್ರವೇಶ ನಿಷೇಧಿಸಲಾಗಿದೆ.

    ಒಂದು ಜಾಗದ ವಿಚಾರಕ್ಕೆ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ದುಡಿಯುವ ಯೋಧ ವಿಠಲ್ ಹಾಗೂ ಅವರ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ವಿಠಲ್ ಅವರ ತಂದೆಗೆ ಸೇರಿದ ಜಾಗವನ್ನು ಕಬಳಿಸಿ, ಅಲ್ಲಿ ಅಂಗನವಾಡಿ ನಿರ್ಮಿಸೋಕೆ ಕೆಲ ಊರಿನ ಮುಖಂಡರು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನೇ ದೊಡ್ಡದು ಮಾಡಿಕೊಂಡ ಊರವರು ಇದೊಂದು ಯೋಧನ ಕುಟುಂಬ ಎನ್ನುವ ಗೌರವ ಮರೆತು, ಕನಿಷ್ಠ ಪಕ್ಷ ಮಾನವೀಯತೆಯನ್ನು ಮರೆತು ಕಳೆದ ಮೂರು ವರ್ಷದಿಂದ ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.

    ಅಷ್ಟೇ ಅಲ್ಲದೇ ಈಗ ವಿಠಲ್ ಹಾಗೂ ಅವರ ಅಣ್ಣನಿಗೆ ಮುಂದಿನ ತಿಂಗಳು ಮದುವೆ ನಿಗದಿ ಆಗಿದೆ. ಮದುವೆ ಶಾಸ್ತ್ರಕ್ಕೆ ಈ ಊರಿನ ಪೂಜಾರಿಯನ್ನೇ ಕರೆಯಬೇಕು ಎನ್ನುವುದು ಇಲ್ಲಿನ ಸಂಪ್ರದಾಯ. ಅವರನ್ನು ಬಿಟ್ಟು ಯಾರನ್ನೂ ಕರೆಯುವಂತಿಲ್ಲ. ಆ ಪೂಜಾರಿ ಬಾರದೇ ಇದ್ದರೆ ಮದುವೆ ಸಂಪ್ರದಾಯ ನಡೆಯೋದು ಕಷ್ಟ. ಆದರೆ ಗ್ರಾಮಸ್ಥರು ಈ ಕುಟುಂಬದ ಮೇಲೆ ಎಷ್ಟರ ಮಟ್ಟಿಗೆ ದ್ವೇಷ ಸಾಧಿಸುತ್ತಿದ್ದಾರೆ ಎಂದರೆ ಯೋಧನ ಮದುವೆ ಮಾಡಿಸೋಕೆ ಪೂಜಾರಿಗೂ ದಿಗ್ಭಂಧನ ಹಾಕಿದ್ದಾರೆ. ಯೋಧನ ಮದ್ವೆಗೆ ನಾನು ಬರೋದೇ ಇಲ್ಲ, ಇದು ದೈವ ನಿರ್ಣಯ ನಾನು ಮದುವೆ ಮಾಡಿಸಲ್ಲ ಅಂತ ಪೂಜಾರಿ ಹಠ ಹಿಡಿದು ಕುಳಿತಿದ್ದಾರೆ. ಅಯ್ಯೋ ಇಡೀ ಊರವರು ಬೇಡ ಅಂತಾರೆ ನಾನ್ಯಾಕೆ ಊರವರನ್ನು ಎದುರು ಹಾಕಿಕೊಂಡು ಬಾಳಲಿ ಎಂದು ಪೂಜಾರಿ ಹೇಳುತ್ತಿದ್ದಾರೆ.

    ಇದರಿಂದ ಯೋಧ ವಿಠಲ್ ಹಾಗೂ ಕುಟುಂಬಸ್ಥರು ಮನೆಯಲ್ಲಿ ನಡೆಯಬೇಕಿದ್ದ ಮದುವೆಯನ್ನು ಕೂಡ ಮುಂದೂಡುವ ಪರಿಸ್ಥಿತಿಗೆ ಬಂದಿದ್ದಾರೆ. ದೇಶ ಕಾಯುವ ಯೋಧನಿಗೆ ಶತ್ರುಗಳ ಕಾಟಕ್ಕಿಂತ ಈಗ ನೆರೆಹೊರೆಯವರ ಕಾಟವೇ ಹೆಚ್ಚಾಗಿ ಬದುಕೇ ಸಾಕಾಗಿದೆ ಎನ್ನುವ ನೋವು ತುಂಬಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಠಲ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಾನು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ಮನೆ ಮುಂದೆ ಒಂದು 30*40 ಜಾಗ ಇದೆ. ಹೊಲದಲ್ಲೂ ಮನೆ ಕಟ್ಟಿದ್ದೀವಿ. ಆ ಜಾಗವನ್ನು ಅಂಗನವಾಡಿಗೆ ತಗೋಳ್ತೀವಿ, ಸರ್ಕಾರಿ ಜಾಗ ಅಂತ ಹೇಳಿ ಒತ್ತಾಯವಾಗಿ ತಗೊಳೋಕೆ ಗ್ರಾಮದ ಕೆಲವರು ಪ್ರಯತ್ನಿಸಿದರು. ಎಲ್ಲಾ ನಮ್ಮ ಅಪ್ಪನ ಹೆಸರಲ್ಲೇ ದಾಖಲೆಗಳು ಇದೆ. ಡಿಸಿ ಅವರಿಗೂ ಈ ಬಗ್ಗೆ ಕಂಪ್ಲೆಂಟ್ ಕೊಟ್ಟಿದ್ದೆವು. ಯಾರು ಏನೂ ಮಾಡಲಿಲ್ಲ. ನಾನು ತುರ್ತು ರಜೆ ಹಾಕಿ ಬಂದು ಡಿಸಿಗೆ ಕೇಳಿದೆ, ಇವೆಲ್ಲಾ ನಾರ್ಮಲ್, ಊರಲ್ಲಿ ಇದೆಲ್ಲಾ ಇದ್ದೀದ್ದೆ ಅಂತ ಹೇಳಿ ಕಳುಹಿಸಿದರು. ಆದರೆ ಜಾಗ ಕೊಟ್ಟಿಲ್ಲ ಅಂತ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಯಾರು ನಮ್ಮ ಬಳಿ ಮಾತಾಡೊ ಹಂಗಿಲ್ಲ, ಮಾತಾಡಿದರೆ ಅವರಿಗೆ 5 ಸಾವಿರ ದಂಡ, ಯಾವುದೇ ಕಾರ್ಯಕ್ರಮ ಇದ್ದರೂ ನಮ್ಮ ಜನ ಕರೆಯೋ ಹಂಗಿಲ್ಲ ಎಂದು ಕಷ್ಟವನ್ನು ಹೇಳಿಕೊಂಡರು.

    ಯೋಧನ ಕುಟುಂಬ ಕಳೆದ ಮೂರು ವರ್ಷದಿಂದ ನರಕ ನೋಡುತ್ತಿದ್ದರೂ, ಇಂತಹ ಬಹಿಷ್ಕಾರದಂತಹ ಅನಿಷ್ಠ ಪದ್ಧತಿ ನಡೆಯುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ರ ಮೌನವಾಗಿದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಬೆಳಗಾವಿಯ ರಾಜಕೀಯ ಶೂರರ ಮನಸ್ಸುಗಳು, ಈ ಯೋಧನ ಕುಟುಂಬದ ಪರ ನಿಲ್ಲುತ್ತಾ? ಅವರ ಕುಟುಂಬವನ್ನು ಬಹಿಷ್ಕಾರದ ಶಿಕ್ಷೆಯಿಂದ ಪಾರು ಮಾಡುತ್ತಾರಾ? ಇಲ್ಲವೋ ಎನ್ನುವುದನ್ನ ಕಾದು ನೋಡಬೇಕಿದೆ.

  • ನಿವೇಶನ ವಿವಾದ ಮಹಿಳೆಯರ ನಡುವೆ ಮಾರಾಮಾರಿ

    ನಿವೇಶನ ವಿವಾದ ಮಹಿಳೆಯರ ನಡುವೆ ಮಾರಾಮಾರಿ

    ಚಿಕ್ಕಬಳ್ಳಾಪುರ: ನಿವೇಶನ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮಾರಾಮಾರಿ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಫೆಬ್ರವರಿ 07ರಂದು ಈ ಘಟನೆ ನಡೆದಿದ್ದು, ಗ್ರಾಮದ ಮಂಜುಳಾ ಹಾಗೂ ಅನುಪಮಾ ಎಂಬವರು ನಾನಾ ನೀನಾ ಎಂದು ಕಿತ್ತಾಡಿಕೊಂಡಿದ್ದಾರೆ. ಅಸಲಿಗೆ ಹಳೆಯ ಮನೆಯ ಜಾಗವನ್ನು ಖರೀದಿ ಮಾಡಿದ್ದ ಅನುಪಮಾ ಕುಟುಂಬಸ್ಥರು ಕೆಡವಿ ಅಲ್ಲಿ ಹೊಸ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇನೂ ಸ್ವಲ್ಪ ಜಾಗ ಉಳಿದಿದ್ದು, ಆ ಜಾಗದಲ್ಲಿ ಶೀಟ್‍ಗಳನ್ನು ಹಾಕಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.

    ಮೊದಲಿನಿಂದಲೂ ಈ ಜಾಗ ತನಗೆ ಸೇರಬೇಕು ಎಂದು ಮಂಜುಳಾ, ಅನುಪಮಾ ಕುಟುಂಬಸ್ಥರ ಜೊತೆ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ. ಇನ್ನೂ ಫೆಬ್ರವರಿ 07ರಂದು ಸಹ ಖಾಲಿ ಜಾಗದಲ್ಲಿ ಹಸು ಕಟ್ಟಿ ಹಾಕೋಕೆ ಬಂದ ಮಂಜುಳಾ ಹಾಗೂ ಅನುಪಮಾ ನಡುವೆ ಜಗಳ ನಡೆದಿದೆ. ಈ ಜಗಳದ ವಿಡಿಯೋವನ್ನು ಮಂಜುಳಾ ಮಗ ತನ್ನ ಮೊಬೈಲ್ ಸೆರೆ ಹಿಡಿದ್ದಾನೆ ಎನ್ನಲಾಗಿದೆ.

    ಈ ಘಟನೆಯಲ್ಲಿ ಮಂಜುಳಾ ಹಾಗೂ ಅನುಪಮಾ ಸೇರಿ ಅವರ ಮಾವ ಭಾವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ಈ ನಿವೇಶನ ವಿವಾದ ಈಗಾಗಲೇ ಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

  • ಪ್ರಿಯಕರನನ್ನೇ ಮದ್ವೆ ಆಗ್ತೇನೆ ಎಂದಿದ್ದಕ್ಕೆ ಸಹೋದರಿಯ ಗುಪ್ತಾಂಗಕ್ಕೆ ಗುಂಡಿಕ್ಕಿದ

    ಪ್ರಿಯಕರನನ್ನೇ ಮದ್ವೆ ಆಗ್ತೇನೆ ಎಂದಿದ್ದಕ್ಕೆ ಸಹೋದರಿಯ ಗುಪ್ತಾಂಗಕ್ಕೆ ಗುಂಡಿಕ್ಕಿದ

    – ಕೊಲೆ ಮಾಡಿ 3 ಗಂಟೆ ವಿಷಯ ಮುಚ್ಚಿಟ್ಟಿದ್ದ ಕುಟುಂಬಸ್ಥರು
    – ಆಸ್ಪತ್ರೆಗೆ ಹೋದಾಗ ಪ್ರಕರಣ ಬೆಳಕಿಗೆ

    ಲಕ್ನೋ: ಸಹೋದರಿ ಪ್ರೀತಿಸುತ್ತಿರುವ ವಿಷಯ ತಿಳಿದು ಸಹೋದರ ಸಂಬಂಧಿ ಆಕೆಯ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಟೀನಾ ಚೌಧರಿ ಕೊಲೆಯಾದ ಯುವತಿ. 12ನೇ ತರಗತಿಯಲ್ಲಿ ಓದುತ್ತಿರುವ ಟೀನಾ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಆಕೆ ಸಹೋದರ ಸಂಬಂಧಿ ಪ್ರಶಾಂತ್ ರೊಚ್ಚಿಗೆದ್ದು ಆಕೆಯ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಕುಟುಂಬಸ್ಥರು ಈ ಕೊಲೆ ವಿಷಯವನ್ನು ಮೂರು ಗಂಟೆಗಳ ಕಾಲ ಮುಚ್ಚಿಟ್ಟಿದ್ದರು. ಬಳಿಕ ಟೀನಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ವಿಷಯ ಪೊಲೀಸರಿಗೆ ತಿಳಿದು ಬಂತು. ಇದನ್ನೂ ಓದಿ: ಅವಳನ್ನ ಕರ್ಕೊಂಡು ಹೋಗ್ತೀನಿ, ಇಲ್ಲಾಂದ್ರೆ ಶೂಟ್ ಮಾಡ್ಕೋತಿನಿ: ಪಾಗಲ್ ಪ್ರೇಮಿಯ ಹುಚ್ಚಾಟ

    ದರೋಡೆಕೋರರು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬಂದು ಕೊಲೆ ಮಾಡಲು ಯತ್ನಿಸಿದರು ಎಂದು ಮೊದಲು ಕುಟುಂಬಸ್ಥರು ಸುಳ್ಳು ಹೇಳಲು ಪ್ರಯತ್ನಿಸಿದರು. ಈ ಮೂಲಕ ಸಾಕ್ಷಿಗಳನ್ನು ನಾಶ ಮಾಡಲು ಕುಟುಂಬಸ್ಥರು ಪ್ರಯತ್ನಿಸಿದ್ದರು. ಮರಣೋತ್ತರ ವರದಿ ಬಂದಾಗ ಯುವತಿಗೆ ಮೂರು ಗುಂಡು ತಗುಲಿದ ವಿಷಯ ಬೆಳಕಿಗೆ ಬಂತು. ಮೊದಲ ಗುಂಡು ಟೀನಾಳ ತೊಡೆಯ ಭಾಗದಲ್ಲಿ, ಎರಡನೇಯ ಗುಂಡು ಆಕೆಯ ಗುಪ್ತಾಂಗದಲ್ಲಿ ಹಾಗೂ ಮೂರನೇ ಗುಂಡು ಆಕೆಯ ಸೊಂಟದಲ್ಲಿ ಪತ್ತೆಯಾಗಿತ್ತು.

    ಸದ್ಯ ಪೊಲೀಸರು ಪ್ರಶಾಂತ್, ಆತನ ಪೋಷಕರ ಹಾಗೂ ಟೀನಾಳ ಪೋಷಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಎಸ್‍ಪಿ ಅವಿನಾಶ್ ಪಾಂಡೆ ಪ್ರತಿಕ್ರಿಯಿಸಿ, ಘಟನೆ ನಡೆದ ಸ್ಥಳದಲ್ಲಿ ಸಾಕಷ್ಟು ರಕ್ತ ಚೆಲ್ಲಿದ್ದು, ಯಾರೋ ಅದನ್ನು ಕ್ಲೀನ್ ಮಾಡಲು ಪ್ರಯತ್ನಿಸಿದ್ದರು. ಸ್ಥಳದಲ್ಲಿ ಬಳೆಗಳ ಚೂರು ಪತ್ತೆಯಾಗಿದೆ. ಇದರಿಂದ ಟೀನಾಳನ್ನು ಬಲವಂತ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಸದ್ಯ ಪ್ರಶಾಂತ್, ಆತನ ಪೋಷಕರನ್ನು ಹಾಗೂ ಟೀನಾಳ ಪೋಷಕರನ್ನು ಅರೆಸ್ಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಟೀನಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಇದು ಆಕೆಯ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅಲ್ಲದೆ ಈ ಸಂಬಂಧವನ್ನು ಅವರು ನಿರಾಕರಿಸಿದ್ದರು. ಟೀನಾ ನಾನು ಆ ಯುವಕನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಾಗ ಆಕೆಯ ಪೋಷಕರು ಆಕೆಯನ್ನು ರೂಮಿನಲ್ಲಿ ಲಾಕ್ ಮಾಡಿದ್ದರು. ಟೀನಾಳ ಮನೆಯ ಹತ್ತಿರದಲ್ಲೇ ಪ್ರಶಾಂತ್ ಮನೆ ಕೂಡ ಇತ್ತು. ಹಲವು ದಿನಗಳಿಂದ ಪ್ರಶಾಂತ್‍ಗೆ ಈ ಸಂಬಂಧ ಇಷ್ಟವಿರಲಿಲ್ಲ.

    ಶನಿವಾರ ಟೀನಾ ಯಾವುದೋ ಕೆಲಸದ ಮೇಲೆ ಪ್ರಶಾಂತ್ ಮನೆಗೆ ಹೋಗಿದ್ದಳು. ಈ ವೇಳೆ ಪ್ರಶಾಂತ್, ಟೀನಾಳಿಗೆ ಪ್ರೀತಿ-ಪ್ರೇಮದಿಂದ ದೂರ ಇರುವಂತೆ ಹೇಳಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಟೀನಾ, ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಪ್ರಶಾಂತ್ ಆಕೆಯ ಮೇಲೆ ಮೂರು ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಪರಿಣಾಮ ಟೀನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

  • ಸರೋಜಿನಿ ಮಹಿಷಿ ವರದಿ ಜಾರಿಯಾಗದ್ದಕ್ಕೆ ಧಾರವಾಡದಲ್ಲಿರುವ ಮಹಿಷಿ ಕುಟುಂಬ ಬೇಸರ

    ಸರೋಜಿನಿ ಮಹಿಷಿ ವರದಿ ಜಾರಿಯಾಗದ್ದಕ್ಕೆ ಧಾರವಾಡದಲ್ಲಿರುವ ಮಹಿಷಿ ಕುಟುಂಬ ಬೇಸರ

    ಧಾರವಾಡ: ಸರೋಜಿನಿ ಮಹಿಷಿ ವರದಿ ಜಾರಿಯಾಗದ ಹಿನ್ನೆಲೆಯಲ್ಲಿ ಮಹಿಷಿ ಸಹೋದರಿ ಸಾವಿತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಧಾರವಾಡದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂದು ನನ್ನ ಸಹೋದರಿ ವರದಿ ನೀಡಿದ್ದರು. ಆದರೆ ಅದು ಇಂದು ಜಾರಿಯಾಗದೇ ಇರುವುದು ಬೇಸರ ತಂದಿದೆ ಎಂದು ಸರೋಜಿನಿ ಮಹಿಷಿ ಸಹೋದರಿ ಸಾವಿತ್ರಿ ಹೇಳಿದ್ದಾರೆ.

    ಈ ವರದಿ ಜಾರಿಗೆ ಅವರು ಸಾಕಷ್ಟು ಅಭ್ಯಾಸ ಮಾಡಿ ವರದಿ ತಯಾರಿಸಿದ್ದರು. ಆದರೆ ಸರ್ಕಾರ ಅದನ್ನು ಯಾಕೆ ಜಾರಿಗೆ ತರುತ್ತಿಲ್ಲ ಎನ್ನುವುದು ಬೇಸರವಾಗಿದೆ. ವರದಿ ಜಾರಿಗೆ ತರುವುದು ಮನಸ್ಸು ಮಾಡಿದರೆ ದೊಡ್ಡ ಮಾತಲ್ಲ ಎಂದರು.

    ಕರ್ನಾಟಕದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದು ವರದಿಯಲ್ಲಿದೆ. ಬೇರೆ ರಾಜ್ಯದಲ್ಲಿ ನಮ್ಮವರಿಗೆ ಕೆಲಸ ಸಿಗಲ್ಲ, ಅದಕ್ಕಾಗಿ ಅವರು ಈ ವರದಿ ತಯಾರಿಸಿ ಕೊಟ್ಟಿದ್ದರು. ಆದರೆ 3 ವರ್ಷಗಳಲ್ಲಿ ಅವರು ರಾಜ್ಯದ ತುಂಬೆಲ್ಲ ಓಡಾಡಿ ವರದಿ ತಯಾರಿಸಿದ್ದರು. ಬೇರೆ ರಾಜ್ಯದ ಜನರು ರಾಜ್ಯಕ್ಕೆ ಬಂದಾಗ ಅವರಿಗೆ ಇಲ್ಲಿ ಕೆಲಸ ಸಿಗುತ್ತಿದೆ ಎನ್ನುವ ಕಳವಳ ಅವರು ವ್ಯಕ್ತಪಡಿಸಿದ್ದರು ಎಂದು ಸಾವಿತ್ರಿ ಹೇಳಿದರು.

    ಎಲ್ಲ ಕಡೆ ಪ್ರಾದೇಶಿಕ ಅಸಮಾನಾತೆ ಇರುವ ಕಾರಣ ಸರೋಜಿನಿ ಅವರು ಈ ವರದಿ ಕೊಟ್ಟಿದ್ದರು, ಹೀಗಿನ ಸರ್ಕಾರವಾದರೂ ಮಾಡಬೇಕು. ಏಕೆಂದರೆ ಸರ್ಕಾರಕ್ಕೆ ಆ ಶಕ್ತಿ ಇದೆ ಎಂದು ಸಾವಿತ್ರಿ ಹೇಳಿದರು. ನಮ್ಮ ಅಕ್ಕಳಿಗೆ ಕನ್ನಡಿಗರ ಬಗ್ಗೆ ಬಹಳ ಕಳಕಳೀ ಇತ್ತು ಎಂದು ಅವರು ಹೇಳಿದರು.

  • ಅಭಿಮಾನಿಯ ಕುಟುಂಬಕ್ಕೆ 10 ಲಕ್ಷ ರೂ. ಚೆಕ್ ನೀಡಿದ ನಟ ರಾಮ್ ಚರಣ್

    ಅಭಿಮಾನಿಯ ಕುಟುಂಬಕ್ಕೆ 10 ಲಕ್ಷ ರೂ. ಚೆಕ್ ನೀಡಿದ ನಟ ರಾಮ್ ಚರಣ್

    ಹೈದರಾಬಾದ್: ಟಾಲಿವುಡ್ ನಟ ರಾಮ್ ಚರಣ್ ಅವರು ಡಿಸೆಂಬರ್ ನಲ್ಲಿ ನಿಧನರಾದ ತಮ್ಮ ಹಿರಿಯ ಅಭಿಮಾನಿಯ ಕುಟುಂಬಕ್ಕೆ 10 ಲಕ್ಷ ರೂ. ಚೆಕ್ ನೀಡಿದ್ದಾರೆ.

    ಕಳೆದ ವರ್ಷ ಡಿಸೆಂಬರ್ 8ರಂದು ‘ಗ್ರೇಟರ್ ಹೈದರಾಬಾದ್ ಮೆಗಾ ಫ್ಯಾನ್ಸ್ ಅಸೋಸಿಯೇಷನ್’ ಅಧ್ಯಕ್ಷರಾಗಿದ್ದ ನೂರ್ ಅಹಮ್ಮದ್ ನಿಧನರಾಗಿದ್ದರು. ನೂರ್ ಅಹಮ್ಮದ್ ಅವರು ಚಿರಂಜೀವಿ, ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಹಲವು ವರ್ಷಗಳಿಂದ ಮೆಗಾ ಸ್ಟಾರ್ ಕುಟುಂಬವನ್ನು ಬೆಂಬಲಿಸಿದ್ದರು. ಇದನ್ನೂ ಓದಿ: ನಿಧನರಾದ ಅಭಿಮಾನಿ ಕುಟುಂಬಕ್ಕೆ ಅಲ್ಲು ಅರ್ಜುನ್ ಆರ್ಥಿಕ ನೆರವು 

    ನೂರ್ ಅಹಮ್ಮದ್ ನಿಧನರಾಗಿದ್ದ ವಿಷಯ ತಿಳಿದು ಚಿರಂಜೀವಿ, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದರು. ಈ ವೇಳೆ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಆರ್ಥಿಕ ಸಹಾಯ ಮಾಡುವುದ್ದಾಗಿ ಹೇಳಿದ್ದರು. ಅಭಿಮಾನಿಯ ಕುಟುಂಬಸ್ಥರಿಗೆ ಕೊಟ್ಟ ಮಾತನ್ನು ರಾಮ್ ಚರಣ್ ಅವರು 10 ಲಕ್ಷ ರೂ. ಚೆಕ್ ನೀಡುವ ಮೂಲಕ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಮುಂದೆಯೂ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ರಾಮ್ ಚರಣ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

    ರಾಮ್ ಚರಣ್ ಅವರು ನೂರ್ ಅಹಮ್ಮದ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳೆದ ವರ್ಷ ಡಿಸೆಂಬರ್ 10ರಂದು ರಾಮ್ ಚರಣ್ ಅವರಿಗೆ ಚೆನ್ನೈನಲ್ಲಿ ‘ದಿ ಪೀಪಲ್ ಎಂಟರ್‍ಟೈನರ್ ಪರ್ ಎಕ್ಸಲೆನ್ಸ್ ಅವಾರ್ಡ್’ ನೀಡಲಾಗಿತ್ತು. ಈ ವೇಳೆ ರಾಮ್ ಚರಣ್ ತಮ್ಮ ಅವಾರ್ಡ್ ಅನ್ನು ನೂರ್ ಅಹಮ್ಮದ್ ಅವರಿಗೆ ಡೆಡಿಕೇಟ್ ಮಾಡಿದ್ದರು. ವೇದಿಕೆ ಮೇಲೆ ಅವರನ್ನು ನೆನಸಿಕೊಂಡು ಭಾವುಕರಾಗಿದ್ದರು.

    ಸದ್ಯ ರಾಮ್ ಚರಣ್ ಅವರು ನಿರ್ದೇಶಕ ಎಸ್‍ಎಸ್ ರಾಜಮೌಳಿ ನಿರ್ದೇಶಿಸುತ್ತಿರುವ ‘ಆರ್‌ಆರ್‌ಆರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ಅಜಯ್ ದೇವಗನ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  • ಮದುವೆ ಆಗ್ತಿಲ್ಲ ಎಂದು ಮನನೊಂದು ಟೆಕ್ಕಿ ಆತ್ಮಹತ್ಯೆ

    ಮದುವೆ ಆಗ್ತಿಲ್ಲ ಎಂದು ಮನನೊಂದು ಟೆಕ್ಕಿ ಆತ್ಮಹತ್ಯೆ

    – ಹುಡುಗಿ ಸಿಗುತ್ತಿಲ್ಲ ಎಂದು ಖಿನ್ನತೆ ಜಾರಿದ್ದ
    – ಮನೆಯಲ್ಲಿ ಯಾರು ಇಲ್ಲದ ವೇಳೆ ಸೂಸೈಡ್

    ಹೈದರಾಬಾದ್: ಮದುವೆ ಆಗುತ್ತಿಲ್ಲ ಎಂದು ಮನನೊಂದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ರಾಮಂತಪುರದಲ್ಲಿ ನಡೆದಿದೆ.

    ಪಿ. ನಿಖಿಲ್ ಗೌಡ್(24) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ರಾಮಂತಪುರದ ಶಾರದಾನಗರದ ನಿವಾಸಿಯಾಗಿರುವ ನಿಖಿಲ್ ಏರೆನಾ ಟವರ್ಸ್‍ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಕೆಲವು ದಿನಗಳಿಂದ ನಿಖಿಲ್ ಕುಟುಂಬಸ್ಥರು ಆತನಿಗಾಗಿ ಹುಡುಗಿಯನ್ನು ಹುಡುಕುತ್ತಿದ್ದರು.

    ಕುಟುಂಬಸ್ಥರು ನಿಖಿಲ್‍ಗಾಗಿ ಹುಡುಗಿ ಹುಡುಕುತ್ತಿದ್ದರೂ ಕಾರಣಾಂತರಗಳಿಂದ ಹುಡುಗಿ ಸಿಗುತ್ತಿರಲಿಲ್ಲ. ಇದರಿಂದ ನಿಖಿಲ್ ಖಿನ್ನತೆಗೆ ಒಳಗಾಗಿ ಸೋಮವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮನೆಯವರು ಮನೆಗೆ ಹಿಂತಿರುಗಿದಾಗ ಡೋರ್ ಲಾಕ್ ಆಗಿರುವುದು ಕಂಡು ಬಂತು. ಎಷ್ಟೇ ಬಾಗಿಲು ತಟ್ಟಿದ್ದರು ನಿಖಿಲ್ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಬಾಗಿಲು ಒಡದು ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ನಿಖಿಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

    ಕುಟುಂಬಸ್ಥರು ನಿಖಿಲ್‍ನನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದರು. ಸದ್ಯ ಈ ಬಗ್ಗೆ ಉಪ್ಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಕೆಳಜಾತಿ ಯುವಕನ ಜೊತೆ ಓಡಿ ಹೋದ ಮಗಳು – ಬಾವಿಗೆ ಹಾರಿ ಜೀವ ಬಿಟ್ಟ ಕುಟುಂಬ

    ಕೆಳಜಾತಿ ಯುವಕನ ಜೊತೆ ಓಡಿ ಹೋದ ಮಗಳು – ಬಾವಿಗೆ ಹಾರಿ ಜೀವ ಬಿಟ್ಟ ಕುಟುಂಬ

    – ಮರ್ಯಾದೆಗೆ ಅಂಜಿ ಯುವತಿ ತಂದೆ, ತಾಯಿ, ಸಹೋದರ ಆತ್ಮಹತ್ಯೆ
    – ಕುಟುಂಬಸ್ಥರ ಸಾವಿನ ಬಗ್ಗೆ ತಿಳಿದು ನದಿಗೆ ಹಾರಿದ ಜೋಡಿ

    ಮುಂಬೈ: ಮಗಳು ಕೆಳಜಾತಿ ಯುವಕನನ್ನು ಪ್ರೀತಿಸಿ ಓಡಿ ಹೋಗಿ, ಮದುವೆಯಾದ ಸುದ್ದಿ ಕೇಳಿ ಆಘಾತಕ್ಕೊಳಗಾದ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದಿದೆ.

    ಕೆಳಜಾತಿ ಯುವಕನ ಜೊತೆ ಮಗಳು ಓಡಿ ಹೋಗಿ, ಮದುವೆ ಆಗಿ ಮರ್ಯಾದೆ ಕಳೆದಳು ಎಂದು ಮನನೊಂದ ಯುವತಿಯ ತಂದೆ, ತಾಯಿ ಹಾಗೂ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆತ್ತವರು ಮತ್ತು ಸಹೋದರನ ಸಾವಿನ ಸುದ್ದಿ ಕೇಳಿದ ನವ ದಂಪತಿ ಕೂಡ ಪ್ರಾಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಯುವತಿಯನ್ನು ಪ್ರಣಾಲಿ ವಾರ್ಗಂತಿವರ್(24) ಎಂದು ಗುರುತಿಸಲಾಗಿದ್ದು, ಆಕೆಯ ತಂದೆ ರವೀಂದ್ರ(52), ತಾಯಿ ವೈಶಾಲಿ(45) ಮತ್ತು ಆಕೆಯ ಸಹೋದರ ಸಾಯಿರಾಮ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತ ನಮ್ಮಿಂದ ಕುಟುಂಬಸ್ಥರು ಜೀವ ಕಳೆದುಕೊಂಡರು ಎಂದು ಮನನೊಂದು ನವ ದಂಪತಿ ನದಿಗೆ ಹಾರಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನೂ ರಕ್ಷಿಸಿ, ಆಸ್ಪತ್ರೆಯಲ್ಲಿ ರವಾನಿಸಿದ್ದಾರೆ. ಸದ್ಯ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

    ಶಾಲಾ ಶಿಕ್ಷಕಿಯಾಗಿರುವ ಪ್ರಣಾಲಿ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ್ದು, ಆಕೆ ಪ್ರೀತಿ ಮಾಡುತ್ತಿದ್ದ ಯುವಕ ಪರಿಶಿಷ್ಟ ಜಾತಿಯವನಾಗಿದ್ದಾನೆ. ಈತ ಖಾಸಗಿ ಕಂಪನಿಯೊಂದಲ್ಲಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರ ಪ್ರೀತಿಗೆ ಮನೆಮಂದಿಯ ಒಪ್ಪಿಗೆ ಇರಲಿಲ್ಲ. ಹೀಗಾಗಿ ಕಳೆದ ಶನಿವಾರ ಪ್ರಣಾಲಿ ಮನೆಬಿಟ್ಟು ಓಡಿ ಹೋಗಿದ್ದಳು. ಬಳಿಕ ಮಾರ್ಕಂಡ ಹಳ್ಳಿಗೆ ತೆರಳಿ ತಾನ್ನ ಪ್ರೇಮಿ ಜೊತೆಗೆ ಭಾನುವಾರ ಶಿವನ ದೇವಾಸ್ಥಾನವೊಂದರಲ್ಲಿ ಮದುವೆಯಾಗಿದ್ದಳು.

    ಈ ಬಗ್ಗೆ ತಿಳಿದ ಪ್ರಣಾಲಿ ಪೋಷಕರು ಮಗಳಿಂದ ಅವಮಾನ ಆಯ್ತು ಎಂದು ಮನನೊಂದು ಮರ್ಯಾದೆಗೆ ಅಂಜಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ರವೀಂದ್ರ, ತಾಯಿ ವೈಶಾಲಿ ಮತ್ತು ಯುವತಿಯ ಸಹೋದರ ಸಾಯಿರಾಮ್ ಮೊದಲು ಊಟ ಬಿಟ್ಟು, ಬಳಿಕ ಮನೆಯಿಂದ ಹೊರಟಿದ್ದಾರೆ. ಹಸಿವಿನಿಂದಲೇ ಕಿಲೋಮೀಟರ್‍ಗಟ್ಟಲೇ ನಡೆದುಕೊಂಡು ಹೋಗಿ, ನಂತರ ಜಮೀನೊಂದರಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕುಟುಂಬಸ್ಥರ ಸಾವಿನ ವಿಷಯ ತಿಳಿದ ನವ ದಂಪತಿ ತಾವು ಕೂಡ ಸಾಯಲು ನಿರ್ಧರಿಸಿ, ಮೊದಲು ಕೆಮಿಕಲ್ಸ್ ಸೇವಿಸಿ, ಬಳಿಕ ನದಿಗೆ ಹಾರಿದ್ದಾರೆ. ಆದರೆ ಈ ಬಗ್ಗೆ ವಿಷಯ ತಿಳಿದ ಪೊಲೀಸರ ತಂಡ ಸ್ಥಳೀಯರ ಸಹಾಯದಿಂದ ಇಬ್ಬರನ್ನು ರಕ್ಷಿಸಿದ್ದಾರೆ.

  • ಆನ್‍ಲೈನ್ ನಿಶ್ಚಿತಾರ್ಥ – ವಿಡಿಯೋ ಕಾಲ್‍ನಲ್ಲಿ ವಧು, ವರ

    ಆನ್‍ಲೈನ್ ನಿಶ್ಚಿತಾರ್ಥ – ವಿಡಿಯೋ ಕಾಲ್‍ನಲ್ಲಿ ವಧು, ವರ

    ಬೆಂಗಳೂರು: ಉತ್ತರ ಭಾರತದ ಜೋಡಿಯೊಂದು ಆನ್‍ಲೈನ್‍ನಲ್ಲಿ ನಿಶ್ಚಿತಾರ್ಥ ಮಾಡಿಸಿಕೊಂಡಿದೆ.

    ಆನ್‍ಲೈನ್‍ನಲ್ಲಿ ಇಂದು ಎಲ್ಲಾ ರೀತಿಯ ವ್ಯಾಪಾರ, ಶಾಪಿಂಗ್, ಊಟ, ಅನೇಕ ಸೇವೆಗಳು ಹಾಗೂ ಹತ್ತು ಹಲವು ವಿಚಾರಗಳು ನಮ್ಮ ಕೈಬೆರಳಿನ ತುದಿಯಲ್ಲಿ ಇಂಟರ್‌ನೆಟ್ ಮೂಲಕ ಮೊಬೈಲ್‍ನಲ್ಲಿ ದೊರೆಯುತ್ತಿದೆ. ಇದಕ್ಕೆ ಈಗ ನಿಶ್ಚಿತಾರ್ಥವೂ ಸೇರ್ಪಡೆಗೊಂಡಿದೆ.

    ವಧು-ವರರು ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆ ಮಂದಿಯೆಲ್ಲ ಸೇರಿಕೊಂಡು ಮೊಬೈಲ್‍ನಲ್ಲಿ ವಿಡಿಯೋ ಕಾಲ್‍ನಲ್ಲಿದ್ದ ವಧು-ವರರಿಗೆ ನಿಶ್ಚಿತಾರ್ಥದ ಶಾಸ್ತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಆನ್‍ಲೈನ್ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಇದು ಹೊಸ ಟ್ರೆಂಡ್ ಕೂಡ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    https://www.facebook.com/100002633985035/posts/2593783187386122/

  • ವಸತಿ ಶಾಲೆಯಲ್ಲಿ ನಿಗೂಢವಾಗಿ ಮೃತಪಟ್ಟ ವಿದ್ಯಾರ್ಥಿನಿಯ ಮನೆಗೆ ಈಶ್ವರ ಖಂಡ್ರೆ ಭೇಟಿ

    ವಸತಿ ಶಾಲೆಯಲ್ಲಿ ನಿಗೂಢವಾಗಿ ಮೃತಪಟ್ಟ ವಿದ್ಯಾರ್ಥಿನಿಯ ಮನೆಗೆ ಈಶ್ವರ ಖಂಡ್ರೆ ಭೇಟಿ

    ಬೀದರ್: ಶ್ರಮ ಜೀವಿ ವಸತಿ ಶಾಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿ ಸುಪ್ರಿಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನರಸಿಂಹಪೂರ್ ತಾಂಡದಲ್ಲಿರುವ ಮೃತ ಸುಪ್ರಿಯಾ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಈಶ್ವರ ಖಂಡ್ರೆ, ಈ ಪ್ರಕರಣವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಮೃತ ಸುಪ್ರಿಯಾ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

    ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವಸತಿ ಶಾಲೆಯ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಇದೊಂದು ಅಸಾಮಾನ್ಯ ಸಾವಾಗಿದ್ದು, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆಯಲ್ಲಿ ಮೃತ ಸುಪ್ರಿಯಾ ತಂದೆ ಸಂಜೀವ ಕುಮಾರ್ ಅವರಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡುವ ಮೂಲಕ ಬಡ ಕುಟುಂಬಕ್ಕೆ ಆರ್ಥಿಕವಾಗಿ ಧೈರ್ಯ ತುಂಬಿದರು.