Tag: family

  • 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
    – ಜಾತ್ರೆಗೆ ಜಾಗ ಸಾಕಾಗಲ್ಲವೆಂದು ತೋಟ ನಾಶ

    ತುಮಕೂರು: ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ತಹಶೀಲ್ದಾರ್ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ತುಮಕೂರು ಜಿಲ್ಲೆಯ ಗುಬ್ಬಿ ತಹಶೀಲ್ದಾರ್ ಮಮತಾ ಅವರ ಮೇಲೆ ಆರೋಪ ಕೇಳಿ ಬಂದಿದೆ. ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಅವರಿಗೆ ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು. ಕಳೆದ 30 ವರ್ಷಗಳಿಂದಲೂ ತೆಂಗು, ಅಡಿಕೆ, ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗುವುದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶಿಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿದೆ.

    ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 300 ಅಡಿಕೆ, 30 ತೆಂಗು ಮತ್ತು ಬಾಳೆ ಗಿಡಗಳನ್ನು ಉರುಳಿಸಿದ್ದಾರೆ. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡುಗೆಯಾಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಜಮೀನು ಪೂರ್ಣ ಸ್ವಾಧೀನ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮುನಿ ಕೆಂಪಯ್ಯ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಗಿಡಗಳನ್ನು ನಾಶ ಮಾಡಿದ್ದಾರೆ.

    ಈ ನಡುವೆ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮರ ಮಧ್ಯೆಯೇ ಜಮೀನು ಹಂಚಿಕೆಯಲ್ಲಿ ವಿವಾದ ಉಂಟಾಗಿತ್ತು. ಇದರ ಲಾಭ ಪಡೆದುಕೊಂಡ ತಾಲೂಕು ಆಡಳಿತ ಏಕಾಏಕಿ ತೋಟವನ್ನು ಉರುಳಿಸಿದೆ. ಗುಬ್ಬಿ ಪೊಲೀಸರ ಸಮುಖದಲ್ಲೇ ಗ್ರಾಮ ಲೆಕ್ಕಿಗ ಮುರುಳಿ ಮರಗಳನ್ನು ಕಡಿದಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬ ದುಃಖದ ಮಡುವಿನಲ್ಲಿದೆ. ಮುನಿ ಕೆಂಪಯ್ಯ ಕುಟುಂಬದ ಆಕ್ರಂದನದ ವಿಡಿಯೋ ವೈರಲ್ ಆಗಿದೆ.

  • ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ – ಸೋಂಕು ಪೀಡಿತರ ಸಂಖ್ಯೆ 39 ಏರಿಕೆ

    ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ – ಸೋಂಕು ಪೀಡಿತರ ಸಂಖ್ಯೆ 39 ಏರಿಕೆ

    – ಆಸ್ಪತ್ರೆಗೆ ದಾಖಲಾಗಲು ಒಪ್ಪದ ಕುಟುಂಬ

    ತಿರುವಂತಪುರಂ: ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕಂಡು ಬಂದ ರಾಜ್ಯ ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

    ಕೊರೊನಾ ವೈರಸ್ ಪತ್ತೆಯಾಗಿರುವ ಕುಟುಂಬದವರು, ಪಥನಮತ್ತಟ್ಟ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಎಲ್ಲರನ್ನು ಪಥನಮತ್ತಟ್ಟ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಈ ಕುಟುಂಬದ ಮೂವರು ಇತ್ತೀಚೆಗೆ ಸಂಬಂಧಿಕರನ್ನು ಭೇಟಿ ಮಾಡಲು ಇಟಲಿಗೆ ಹೋಗಿ ಬಂದಿದ್ದು, ಅಲ್ಲಿಂದ ಇವರಿಗೆ ಸೋಂಕು ತಗಲುಲಿದೆ ಎಂದು ಹೇಳಲಾಗುತ್ತದೆ.

    ಇದರ ಬಗ್ಗೆ ಮಾಹಿತಿ ನೀಡಿರುವ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು, ಕೊರೊನಾ ವೈರಸ್‍ಗೆ ತುತ್ತಾಗಿರುವ ಕುಟುಂಬದವರು ತಮ್ಮ ಪ್ರಯಾಣದ ಇತಿಹಾಸದ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಹಾಗಾಗಿ ನಾವು ಅವರನ್ನು ಸ್ಕ್ರೀನಿಂಗ್ ಮಾಡಲು ಆಗಿಲ್ಲ. ಜೊತೆಗೆ ಅವರು ಮೊದಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿರಲಿಲ್ಲ. ನಂತರ ನಾವು ಅವರ ಮನವೊಲಿಸಿ ಆಸ್ಪತ್ರೆ ದಾಖಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: 1 ಲಕ್ಷ ದಾಟಿದ ಕೊರೊನಾ ಪ್ರಕರಣ – ಇದುವರೆಗೆ 3,412 ಸಾವು!

    ಈಗ ಸದ್ಯಕ್ಕೆ ಅವರನ್ನು ಪಥನಮತ್ತಟ್ಟ ಜೆನರಲ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುಟುಂಬದ ಮೂವರು ಇತ್ತೀಚೆಗೆ ಸಂಬಂಧಿಕರನ್ನು ಭೇಟಿ ಮಾಡಲು ಇಟಲಿಗೆ ಹೋಗಿ ಬಂದಿದ್ದರು. ಹೀಗಾಗಿ ಇವರಿಗೆ ಸೋಂಕು ತಗುಲಿದೆ. ಈಗ ನಾವು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕುಟುಂಬವನ್ನು ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಶೈಲಜಾ ಅವರು ಹೇಳಿದ್ದಾರೆ. ಇದನ್ನು ಓದಿ: ಕೊರೊನಾ ಆಯ್ತು, ಈಗ ಹೆಚ್1 ಎನ್1 ಭಯ- ಹಕ್ಕಿ ಜ್ವರದ ಲಕ್ಷಣಗಳೇನು?

    ಭಾರತದ ಮೊದಲ ಮೂರು ಕೊರೊನ ವೈರಸ್ ಪ್ರಕರಣಗಳು ಕೇರಳದಿಂದಲೇ ವರದಿಯಾಗಿದ್ದವು. ಮೂವರೂ ರೋಗಿಗಳು ಚೀನಾದ ವುಹಾನ್‍ನ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು. ಆದರೆ ಈಗ ಅವರು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

    ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಸೋಂಕು ತಡೆಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜೊತೆಗೆ ಸ್ವತಃ ಪ್ರಧಾನಿ ಮೋದಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರೋಗವು ಮತ್ತುಷ್ಟು ಹರಡುವ ಲಕ್ಷಣಗಳು ಕಂಡು ಬಂದರೆ ಅದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ. ಜೊತೆಗೆ ವೈರಸ್ ಹರಡದ ರೀತಿಯಲ್ಲಿ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.

    ಇಟಲಿಯಲ್ಲಿ ಸುಮಾರು 6,000 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 225 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ವೈರಸ್ ಕಂಡು ಬಂದಿರುವ ಇಟಲಿಯ ಉತ್ತರದ ಹೆಚ್ಚಿನ ಭಾಗಗಳನ್ನು ಇಟಾಲಿಯನ್ ಸರ್ಕಾರವು ಲಾಕ್ ಮಾಡಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಗರದಿಂದ ಕಾಣಿಸಿಕೊಂಡ ಕೊರೊನಾ ವೈರಸ್, ಈಗ ಸುಮಾರು 95ಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ಪ್ರಾಂತ್ಯಗಳಿಗೆ ಹರಡಿದೆ. 3,500ಕ್ಕೂ ಹೆಚ್ಚು ಜನರು ಸತ್ತಿದ್ದಾರೆ ಮತ್ತು ಒಂದು ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ.

  • ಕೃಷಿ ಕೆಲಸ ಮಾಡ್ತಿದ್ರು, ದೇವರ ದರ್ಶನಕ್ಕೆ ಹೋದಾಗ್ಲೇ ದುರಂತ: ಮೃತರ ಸಂಬಂಧಿ ಕಣ್ಣೀರು

    ಕೃಷಿ ಕೆಲಸ ಮಾಡ್ತಿದ್ರು, ದೇವರ ದರ್ಶನಕ್ಕೆ ಹೋದಾಗ್ಲೇ ದುರಂತ: ಮೃತರ ಸಂಬಂಧಿ ಕಣ್ಣೀರು

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಬ್ಯಾಲದ ಕೆರೆ ಬಳಿ ಭೀಕರ ಅಪಘಾತ ಸಂಭವಿಸಿ 13 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಅವರಲ್ಲಿ ಒಂದೇ ಕುಟುಂಬದ 8 ಜನರು ಮೃತಪಟ್ಟಿದ್ದು, ಇವರು ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಂಬಂಧಿ, ಮಂಜುನಾಥ್ ಕುಟುಂಬವರು ಧರ್ಮಸ್ಥಳಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಆಗ ಈ ಅಪಘಾತ ನಡೆದಿದೆ. ಒಂದೇ ಕುಟುಂಬದ 8 ಜನರು ಮೃತಪಟ್ಟಿದ್ದಾರೆ. ಮೃತರು ಕೃಷಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಟ್ಯಾಕ್ಟರ್ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ದೇವರ ದರ್ಶನಕ್ಕೆ ಹೋಗಿ ಬರುವಾಗ ಈ ದುರ್ಘಟನೆ ನಡೆದಿದೆ. ಇದು ತುಂಬಾ ದುಃಖದ ಸಂಗತಿಯಾಗಿದೆ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಕುಣಿಗಲ್ ಅಪಘಾತ: ಮಕ್ಕಳ ಮೃತದೇಹಗಳನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಪೊಲೀಸ್

    ಅಪಘಾತ:
    ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು ವಾಪಸ್ಸಾಗುತ್ತಿ ತಮಿಳುನಾಡಿನ ಟವೇರಾ ವಾಹನಕ್ಕೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬ್ರೀಜಾ ಕಾರು ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬ್ರೀಜಾ ಕಾರು ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸದಲ್ಲೇ ರಸ್ತೆಗೆ ಬಂದು ಬಳಿಕ ಟವೇರಾ ಕಾರಿಗೆ ಡಿಕ್ಕಿಯಾಗಿದೆ.

    ಟವೇರಾ ಕಾರಿನಲ್ಲಿದ್ದ ತಮಿಳುನಾಡಿನ ಕೃಷ್ಣಗಿರಿಯ ಸೂಳೆಗಿರಿಯ 10 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಮಂಜುನಾಥ್ ಕುಟುಂಬದ 8 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಮಂಜುನಾಥ್ ಅವರ ಒಂದೂವರೆ ವರ್ಷದ ಹಾಗೂ ನಾಲ್ಕು ವರ್ಷದ ಮಗುವೂ ಅಸುನೀಗಿದ್ದು ಕರುಣಾಜನಕವಾಗಿತ್ತು. ಬ್ರೀಜಾ ಕಾರಿನಲ್ಲಿನದ್ದ ನಾಲ್ವರು ಬೆಂಗಳೂರಿನ ರಾಮೋನಹಳ್ಳಿಯ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬನಿಗೆ ಕಾಲು ಮುರಿದು ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ರಾಮೋಹಳ್ಳಿಯ ಲಕ್ಷ್ಮೀಕಾಂತ್, ಸಂದೀಪ್, ಮಧು ಮೃತ ದುರ್ದೈವಿಗಳಾಗಿದ್ದಾರೆ. ತಮಿಳುನಾಡಿನ ಕೃಷ್ಣಗಿರಿಯ ಸೂಳೆಗಿರಿಯ ಮಂಜುನಾಥ್, ತನುಜ, ಗೌರಮ್ಮ, ರತ್ನಮ್ಮ, ಸೌಂದರ್ ರಾಜ್, ರಾಜೇಂದ್ರ, ಸರಳ, ಪ್ರಶನ್ಯಾ, ಮಾಲಾಶ್ರೀ ಎಂದು ತಿಳಿದುಬಂದಿದೆ.

    ಟವೇರಾದಲ್ಲಿ ಒಟ್ಟು 13 ಜನರು ಪ್ರಯಾಣಿಸುತಿದ್ದು, ಅದರಲ್ಲಿ 10 ಜನ ಸಾವನಪ್ಪಿದ್ದಾರೆ. ಉಳಿದ ಮೂವರು ಬೆಂಗಳೂರು ನಿಮ್ಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

  • ಹೆಂಡತಿ, ಮಕ್ಕಳನ್ನು ರೈಲ್ವೇ ನಿಲ್ದಾಣದಲ್ಲೆ ಬಿಟ್ಟು ಬಾರದ ಲೋಕಕ್ಕೆ ಹೋದ ತಂದೆ

    ಹೆಂಡತಿ, ಮಕ್ಕಳನ್ನು ರೈಲ್ವೇ ನಿಲ್ದಾಣದಲ್ಲೆ ಬಿಟ್ಟು ಬಾರದ ಲೋಕಕ್ಕೆ ಹೋದ ತಂದೆ

    ಬೆಂಗಳೂರು: ಹೆಂಡತಿ, ಮಕ್ಕಳೊಂದಿಗೆ ಊರಿಗೆ ಹೋಗುತ್ತಿದ್ದಾಗ ಹೃದಯಾಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ನಡೆದೆ.

    ಮನೋಜ್ ಕುಮಾರ್(33) ಹೃದಯಾಘಾತದಿಂದ ಸಾವನ್ನಪ್ಪಿರುವ ವ್ಯಕ್ತಿ. ಮನೋಜ್ ಕುಮಾರ್ ಉತ್ತರ ಪ್ರದೇಶ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಪೇಂಟರ್ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿಗೆ ಬಂದು ಆರು ತಿಂಗಳಾದರೂ ಊರಿಗೆ ಹೋಗಿರಲಿಲ್ಲ. ಇದೀಗ ಊರಿನಲ್ಲಿ ದೇವರ ಪೂಜೆ ಇದ್ದ ಕಾರಣ ಹೆಂಡತಿ ಮೂವರು ಮಕ್ಕಳೊಂದಿಗೆ ಉತ್ತರ ಪ್ರದೇಶಕ್ಕೆ ಹೋಗಲು ಬೆಂಗಳೂರಿನ ಯಶವಂತಪುರ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರು.

    ಗೋರಖ್‍ಪುರ ಎಕ್ಸ್‍ಪ್ರೆಸ್ ರೈಲಿಗೆ ಹೋಗಲು ಟಿಕೇಟ್ ಸಹ ಖರೀದಿಸಿದ್ದರು. ರೈಲು ಬರುವುದು ತಡವಾದ ಕಾರಣ ಹೆಂಡತಿ ಮಕ್ಕಳೊಂದಿಗೆ ರೈಲಿಗಾಗಿ ಪ್ಲಾಟ್ ಫ್ಲಾರ್ಮ್ ನಲ್ಲಿ ಕಾಯುತ್ತಿದ್ದಾಗ ಮನೋಜ್ ಕುಮಾರ್ ಅವರಿಗೆ ಹೃದಯಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಡೆಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ರಾಮಯ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

  • ‘ಬರೀ ಮನೆಯಲ್ಲ, ಮದುವೆ ಕನಸುಗಳೂ ಸುಟ್ಟು ಹೋಗಿವೆ’

    ‘ಬರೀ ಮನೆಯಲ್ಲ, ಮದುವೆ ಕನಸುಗಳೂ ಸುಟ್ಟು ಹೋಗಿವೆ’

    ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದ ಬಳಿಕ ಕರಳು ಕಿತ್ತುವ ಕಥೆಗಳು ಒಂದೊದಾಗಿ ಕಣ್ಣ ಮುಂದೆ ಬರುತ್ತಿವೆ. ದುಷ್ಕರ್ಮಿಗಳ ಬೆಂಕಿಯಾಟಕ್ಕೆ ಬದುಕು ಸುಟ್ಟು ಹೋಗಿದೆ. ಕಂಡ ಅದೇಷ್ಟೊ ಭವಿಷ್ಯದ ಕನಸುಗಳು ಭಸ್ಮವಾಗಿವೆ.

    ಹೌದು, ದೆಹಲಿಯಲ್ಲಿ ಪರಿಸ್ಥಿತಿ ಸುಧಾರಿಸಿದೆ. ಬೆಂಕಿ ಹೊತ್ತುವಾಗ ಆತಂಕಕ್ಕೀಡಾಗಿ ಮನೆ ಬಿಟ್ಟಿದ್ದ ಕುಟುಂಬಗಳು ವಾಪಸ್ ಆಗುತ್ತಿವೆ. ಕನಸಿನ ಮನೆಗಳು ಸುಟ್ಟು ಕರಕಲಾಗಿದ್ದನ್ನು ಕಂಡು ಕಣ್ಣೀರಿಡುತ್ತಿದ್ದಾರೆ. ಕಜೋರಿ ಖಾಸ್‍ನ ಇಲಿಯಾಸ್ ಕುಟುಂಬದ ಕಥೆಯೂ ಇದಕ್ಕೆ ಹೊರೆತಾಗಿಲ್ಲ.

    ಇಲಿಯಾಸ್, ಕಜೋರಿ ಖಾಸ್‍ನ ನಿವಾಸಿ, ಕಳೆದ ಇಪ್ಪತ್ತು ವರ್ಷಗಳಿಂದ ವಾಸವಾಗಿರುವ ಅವರು ಬೆವರು ಹರಿಸಿ ಮನೆ ಕಟ್ಟಿಕೊಂಡಿದ್ದರು. ಕೆಳ ಅಂತಸ್ತಿನಲ್ಲಿ ಬಡಿಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳ ತುಂಬು ಕುಟುಂಬ ಈಗ ಬೀದಿಗೆ ಬಂದಿದೆ. ಮುಂದಿನ ತಿಂಗಳ ನಿಗದಿಯಾಗಿದ್ದ ಮಕ್ಕಳ ಮದ್ವೆಗೆ ತಂದಿದ್ದ ಎಲ್ಲಾ ವಸ್ತುಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಬೂದಿಯಾಗಿವೆ.

    ಇಲಿಯಾಸ್ ಅವರ ಇಬ್ಬರು ಪುತ್ರಿಯರಾದ ನಗ್ಮಾ ಮತ್ತು ಫರ್ಜಾನ್ ಮದುವೆ ಮಾರ್ಚ್ ಅಂತ್ಯಕ್ಕೆ ನಿಗದಿಯಾಗಿತ್ತು. ಮದುವೆಗೆ ಎಲ್ಲ ರೀತಿಯ ತಯಾರಿ ಅವರು ಮಾಡಿಕೊಂಡಿದ್ದರು. ಚಿನ್ನಾಭರಣ ಸೇರಿ ಸುಮಾರು 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಎರಡು ಮದುವೆಯಾಗಿ ಖರೀದಿ ಮಾಡಿದ್ದರು. ಇಡೀ ಕುಟುಂಬ ಮದುವೆ ದಿನಗಳನ್ನು ಸಂಭ್ರಮದಿಂದ ಎದುರು ನೋಡುತ್ತಿತ್ತು. ಆದರೆ ಮಂಗಳವಾರ ನಡೆದ ಘಟನೆಯಿಂದ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಪ್ರಾಣ ಭೀತಿಯಲ್ಲಿ ಓಡಿ ಹೋಗಿದ್ದ ಕುಟುಂಬಗಳು ವಾಪಸ್ ಬಂದು ಮನೆಯೊಳಗೆ ತಮ್ಮ ಕನಸುಗಳು ಸುಟ್ಟಿದ್ದು ಕಂಡು ಆಕ್ರಂದಿಸುತ್ತಿದ್ದರು. ಇದನ್ನು ನೋಡುತ್ತಿದ್ದ ಎಂತವರಿಗೂ ಕರಳು ಹಿಂಡುದಂತಾಗುತ್ತಿತ್ತು.

    ಬಡಿಗೆ ಕೆಲಸ ಮಾಡುತ್ತಿದ್ದ ಹಿನ್ನೆಲೆ ಇಲಿಯಾಸ್ ಲಕ್ಷಾಂತರ ಮೌಲ್ಯದ ಕಟ್ಟಿಗೆಗಳನ್ನು ಮನೆಯ ಕೆಳ ಅಂತಸ್ತಿನಲ್ಲಿ ಸಂಗ್ರಹಿಸಿದ್ದರು. ಮನೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ಕಟ್ಟಿಗೆಗಳಿಗೂ ಇದು ವ್ಯಾಪಿಸಿದ್ದು ಮೂರು ಅಂತಸ್ತಿನ ಮನೆ ಸಂಪೂರ್ಣ ಸುಟ್ಟಿದೆ. ಅಲ್ಲದೆ ಮನೆಯ ಎಲ್ಲ ದಾಖಲೆಗಳು ಕೂಡ ನಾಶವಾಗಿದೆ. ಮದುವೆ ಸಿದ್ಧತೆಯ ವಸ್ತುಗಳು ಸೇರಿ ಕೆಲಸದ ಸಾಮಗ್ರಿಗಳು, ಯಂತ್ರಗಳು ಇಡೀ ಮನೆ ಹಾನಿಯಾಗಿದ್ದು ಲಕ್ಷಾಂತರ ಮೌಲ್ಯ ಆಸ್ತಿ ಪಾಸ್ತಿ ನಷ್ಟವಾಗಿದೆ. ಘಟನೆಯಿಂದ ಆಘಾತಕ್ಕೆ ಈ ಕುಟುಂಬ ಒಳಗಾಗಿದ್ದು ಮದುವೆ ನಿಂತು ಹೋಗುವ ಭೀತಿಯಲ್ಲಿದೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನಗ್ಮಾ, ಮದುವೆ ಮಾಡಿಕೊಂಡ ಸಿದ್ಧತೆಗಳು ಎಲ್ಲವೂ ನಾಶವಾಗಿದೆ. ಟೇಲರಿಂಗ್ ಮಾಡಿಕೊಂಡಿದ್ದೆ ಅದೇಲ್ಲವೂ ಹೊಯ್ತು. ಕಷ್ಟ ಪಟ್ಟ ಪಡೆದ ಡಿಗ್ರಿ ಸರ್ಟಿಫಿಕೇಟ್‍ಗಳು ಸುಟ್ಟು ಹೋಗಿವೆ ಎಂದು ನೋವನ್ನು ಹಂಚಿಕೊಂಡರು. ಏಕಾಏಕಿ ಬಂದ ಗುಂಪೊಂದು ಪೆಟ್ರೋಲ್ ಬಾಂಬ್ ಮೂಲಕ ದಾಳಿ ಮಾಡಿತ್ತು. ಮನೆಯಿಂದ ಓಡಿ ಪ್ರಾಣ ಉಳಿಸಿಕೊಂಡೆವು. ಮಕ್ಕಳ ಮದುವೆ ನಿಗದಿ ಮಾಡಿದೆ. ಮದುವೆ ನಿಲ್ಲುವ ಭೀತಿ ಇದೆ ತಮ್ಮ ಆತಂಕವನ್ನು ಇಲಿಯಾಸ್ ಕುಟುಂಬಸ್ಥರು ವ್ಯಕ್ತಪಡಿಸಿದರು.

  • ಸಾವಿರಾರು ಜನರು, ಗಣ್ಯರ ಸಮ್ಮುಖದಲ್ಲಿ ವೀರ ಯೋಧನ ಅಂತ್ಯಸಂಸ್ಕಾರ

    ಸಾವಿರಾರು ಜನರು, ಗಣ್ಯರ ಸಮ್ಮುಖದಲ್ಲಿ ವೀರ ಯೋಧನ ಅಂತ್ಯಸಂಸ್ಕಾರ

    – ತಾಯಿ ಕಣ್ಣೀರು, ಜಿಲ್ಲಾಡಳಿತದಿಂದ ಸಹಾಯ ಹಸ್ತದ ಭರವಸೆ

    ಕೋಲಾರ: ಸಾವಿರಾರು ಜನರು ಮತ್ತು ಗಣ್ಯರ ಸಮ್ಮುಖದಲ್ಲಿ ಕೋಲಾರದ ವೀರ ಯೋಧ ಪ್ರಶಾಂತ್, ಅಮರ್ ರಹೇ ಅನ್ನೋ ಜನರ ಜಯ ಘೋಷಗಳ ನಡುವೆ ಮಣ್ಣಲ್ಲಿ ಮಣ್ಣಾಗಿದ್ದಾರೆ.

    ರಸ್ತೆಯುದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲೂ ಸೇರಿರುವ ಜನಸಾಗರ, ವೀರ ಯೋಧನ ಪಾರ್ಥಿವ ಶರೀರಕ್ಕೆ ಹೂಮಳೆ ಸುರಿಸುತ್ತಾ, ಎಲ್ಲರ ಬಾಯಲ್ಲೂ ಪ್ರಶಾಂತ್ ಅಮರ್ ರಹೇ.. ಅಮರ್ ರಹೇ ಅನ್ನೋ ಜಯಘೋಷ ಮೊಳಗಿತು. ಅದ್ಧೂರಿಯಾಗಿ ತ್ರಿವರ್ಣ ದ್ವಜದ ನಡುವೆ ವೀರ ಯೋಧನ ಪಾರ್ಥಿವ ಶರೀರದ ಮೆರವಣಿಗೆ, ಮತ್ತೊಂದೆಡೆ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

    ಬಂಗಾರಪೇಟೆ ತಾಲೂಕು ಕಣಿಂಬೆಲೆ ಗ್ರಾಮದ ನಾರಾಯಣಪ್ಪ ಹಾಗೂ ಲಕ್ಷ್ಮಮ್ಮ ದಂಪತಿಯ ಪುತ್ರ ಪ್ರಶಾಂತ್ ಕಳೆದ ಐದು ವರ್ಷಗಳಿಂದ ಗಡಿಭದ್ರತಾ ಪಡೆಯ 17ನೇ ಮದ್ರಾಸ್ ರೆಜ್‍ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಫೆ.26 ರ ಬುಧವಾರ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು. ಶುಕ್ರವಾರ ಮಧ್ಯರಾತ್ರಿ ಸುಮಾರಿಗೆ ವಿಮಾನದ ಮೂಲಕ ಯೋಧನ ಪಾರ್ಥಿವ ಶರೀರ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಅಲ್ಲಿಂದ ನೇರ ಬಂಗಾರಪೇಟೆ ಪಟ್ಟಣಕ್ಕೆ ತರಲಾಗಿತ್ತು, ಈ ವೇಳೆ ಜನರು ಮಧ್ಯರಾತ್ರಿಯಲ್ಲೂ ಯೋಧನ ಪಾರ್ಥಿವ ಶರೀರವನ್ನು ಸ್ವಾಗತ ಮಾಡಿಕೊಂಡಿದ್ದರು.

    ಇಂದು ಬೆಳಗ್ಗೆ 7 ಗಂಟೆಯಿಂದ ವೀರ ಯೋಧ ಪ್ರಶಾಂತ್ ಪಾರ್ಥಿವ ಶರೀರವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ, ಮಾಲೂರು ಶಾಸಕ ನಂಜೇಗೌಡ, ಸಂಸದ ಮುನಿಸ್ವಾಮಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಹಲವು ಗಣ್ಯರು ಪಕ್ಷ ಭೇದ ಮರೆತು ಹುತಾತ್ಮ ಯೋಧ ಪ್ರಶಾಂತ್‍ಗೆ ಹೂಗುಚ್ಚವಿಟ್ಟು ಅಂತಿಮ ನಮನ ಸಲ್ಲಿಸಿದರು. ಹೊಸ ಮನೆ ಕಟ್ಟಿಸಲು ಸಾಲ ಮಾಡಿ ಹಣ ನೀಡಿ ಈ ಬಾರಿ ಬಂದಾಗ ಗೃಹಪ್ರವೇಶ ಮಾಡೋಣ ಎಂದು ಹೇಳಿ ಹೋಗಿದ್ದ ಮಗ ನಮ್ಮನ್ನೆಲ್ಲಾ ಅಗಲಿದನ್ನು ನೆನೆದು ತಾಯಿ ಲಕ್ಷ್ಮಮ್ಮ ಕಣ್ಣೀರಾಕಿದರು.

    10.30ರ ಸುಮಾರಿಗೆ ಯೋಧನ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಂಗಾರಪೇಟೆ ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯ ಜನಸ್ತೋಮದ ನಡುವೆ ವೀರ ಯೋಧನ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಜನರು ಅಮರ್ ರಹೇ ಅಮರ್ ರಹೇ ಪ್ರಶಾಂತ್ ಎಂದು ಜಯಘೋಷಗಳನ್ನು ಕೂಗುತ್ತಾ ಪಾರ್ಥಿವ ಶರೀರಕ್ಕೆ ಹೂಮಳೆ ಸುರಿಸಿದರು. ಪಾರ್ಥಿವ ಶರೀರ ಸಾಗಿದ ನಾಲ್ಕು ಕಿಲೋಮೀಟರ್ ದೂರಕ್ಕೂ ಜನ ಸಾಗರ ತುಂಬಿತ್ತು.

    ಸಂಸದರು, ಶಾಸಕರುಗಳು ಪಾರ್ಥಿವ ಶರೀರದ ಜೊತೆಗೆ ನಡೆದೇ ಸಾಗಿದರು. ವೀರಯೋಧ ಪ್ರಶಾಂತ್ ಓದಿದ್ದ ಶಾಲೆಯಲ್ಲಿ ತ್ರಿವರ್ಣದ್ವಜವನ್ನು ಅರ್ಧಕ್ಕೆ ಹಾರಿಸಿ ಶಾಲೆಗೆ ರಜೆ ನೀಡಿ ಗೌರವ ಸಲ್ಲಿಸಲಾಯಿತು. ಗ್ರಾಮದ ಹೊರಗಡೆ ಸರ್ಕಾರಿ ಜಾಗದಲ್ಲಿ ಯೋಧನ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಸಾವಿರಾರು ಜನರ ನಡುವೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಪ್ರಶಾಂತ್ ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಆಗ ಮಗನನ್ನು ನೆನೆದು ಕಣ್ಣೀರಾಕುತ್ತಿದ್ದ ಕುಟುಂಬಸ್ಥರಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಧೈರ್ಯ ಹೇಳಿ ನಿಮ್ಮ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

    ದೇಶಸೇವೆ ಮಾಡುತ್ತೇನೆ ಎಂದು ಕನಸು ಕಟ್ಟಿಕೊಂಡು ಸೇನೆಗೆ ಸೇರಿದ್ದ ಯುವಕ ಪ್ರಶಾಂತ್, ಇಂದು ದೇಶದ ಮಗನಾಗಿ ಮಣ್ಣಲ್ಲಿ ಮಣ್ಣಾದರು. ಆದರೆ ಅವನನ್ನೇ ನಂಬಿದ್ದ ಯೋಧ ಪ್ರಶಾಂತ್ ಕುಟುಂಬ ನಾವಿಕನನ್ನು ಕಳೆದು ಕೊಂಡ ದೋಣಿಯಂತಾಗಿದ್ದು, ಸರ್ಕಾರಗಳು ಯೋಧನ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದೆ.

  • 6 ಮಂದಿಯನ್ನು ಹತ್ಯೆಗೈದಿದ್ದ ಸೈನೈಡ್ ಕಿಲ್ಲರ್ ಆತ್ಮಹತ್ಯೆಗೆ ಯತ್ನ

    6 ಮಂದಿಯನ್ನು ಹತ್ಯೆಗೈದಿದ್ದ ಸೈನೈಡ್ ಕಿಲ್ಲರ್ ಆತ್ಮಹತ್ಯೆಗೆ ಯತ್ನ

    ತಿರುವನಂತಪುರಂ: ಕುಟುಂಬದ ಆರು ಮಂದಿಯನ್ನು ಕೊಲೆ ಮಾಡಿ ಜೈಲುಪಾಲಾದ ಕೇರಳದ ಸೈನೈಡ್ ಕಿಲ್ಲರ್ ಜ್ಯೂಲಿ ಕೈ ಕೊಯ್ದುಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಗುರುವಾರ ನಸುಕಿನ ಜಾವ ಜ್ಯೂಲಿ ಥಾಮಸ್ ತನ್ನ ಕೈ ಕೊಯ್ದುಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಜ್ಯೂಲಿಯ ಈ ಸ್ಥಿತಿ ನೋಡಿದ ಪೊಲೀಸರು ತಕ್ಷಣ ಆಕೆಯನ್ನು ಕೋಯಿಕೋಡ್ ನ ಮೆಡಿಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಏನಿದು ಪ್ರಕರಣ?
    ಕಳೆದ ವರ್ಷ ಕೇರಳದ ಕೋಯಿಕೋಡ್ ಜಿಲ್ಲೆಯಲ್ಲಿ ಪೊಲೀಸರು ಹಂತಕಿ ಜ್ಯೂಲಿಯ ಜೊತೆಗೆ 2ನೇ ಪತಿ ಹಾಗೂ ಮತ್ತೊಬ್ಬನನ್ನು ಕೂಡ ಪೊಲೀಸರು ಬಂಧಿಸಿದ್ದರು. ಹಂತಕಿ ಜ್ಯೂಲಿ ತನ್ನ ಕುಟುಂಬಸ್ಥರನ್ನು ಕೊಲ್ಲುವುದರ ಜೊತೆಗೆ ಸಂಬಂಧಿ ಮಹಿಳೆಯನ್ನು ಕೊಂದು ಆಕೆಯ ಪತಿಯನ್ನ ಮದುವೆಯಾಗಿದ್ದಳು. ಎರಡು ಕುಟುಂಬಗಳ ಆಸ್ತಿಯನ್ನು ಅನುಭವಿಸಲು ಹಂತಕಿ ಜ್ಯೂಲಿ ಮತ್ತು ಆಕೆಯ ಎರಡನೇ ಗಂಡ ಶಜು 2002ರಿಂದ 2016ರ ಅವಧಿಯಲ್ಲಿ ಕ್ಯಾಥೋಲಿಕ್ ಕುಟುಂಬದ 6 ಮಂದಿಯನ್ನು ಬಲಿಪಡೆದಿದ್ದಾರೆ.

    ಹಂತ ಹಂತವಾಗಿ ಕೊಲೆ: 2002ರಿಂದ 2016ರ ಅವಧಿಯಲ್ಲಿ ಕ್ಯಾಥೊಲಿಕ್ ಕುಟುಂಬದ 6 ಮಂದಿಯನ್ನು ಜ್ಯೂಲಿ ಕೊಲೆ ಮಾಡಿದ್ದಳು. ನಿವೃತ್ತ ಶಿಕ್ಷಕಿ ಅಣ್ಣಮ್ಮ ಥಾಮಸ್ (57) 2002ರಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ವೇಳೆ ಅವರ ಸಾವನ್ನ ಸಹಜ ಸಾವು ಎಂದು ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದರು. 6 ವರ್ಷದ ಬಳಿಕ ಅಣ್ಣಮ್ಮ ಥಾಮಸ್ ಪತಿ ಟಾಮ್ ಥಾಮಸ್ (66) ಹೃದಯಘಾತದಿಂದ ಸಾವನ್ನಪ್ಪಿದ್ದರು. 2001ರಲ್ಲಿ ದಂಪತಿಯ ಪುತ್ರ ರಾಯ್ ಥಾಮಸ್ (40) ಕೂಡ ಇದೇ ರೀತಿ ಮೃತ ಪಟ್ಟಿದ್ದರು. ಈ ವೇಳೆ ಅವರನ್ನು ವಿಷ ಉಣಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆ ಬಳಿಕ ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) 2014ರಲ್ಲಿ ಸಾವನ್ನಪ್ಪಿದ್ದರು. ಎಲ್ಲರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

    ಎರಡರ ಕಂದಮ್ಮ ಬಲಿ: 2016ರಲ್ಲಿ ಇದೇ ಕುಟುಂಬದ ಸಂಬಂಧಿಯ 2 ವರ್ಷದ ಮಗಳು ಅಲ್ಫೋನ್ಸ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಇದಾದ ಕೆಲ ತಿಂಗಳ ಅಂತರದಲ್ಲೇ ಅಲ್ಫೋನ್ಸ ತಾಯಿ 27 ವರ್ಷದ ಸಿಲಿ ಕೂಡ ಸಾವನ್ನಪ್ಪಿದ್ದರು. ಇತ್ತ ಪತಿ ಮರಣದ ಬಳಿಕ ಪತ್ನಿ ಜ್ಯೂಲಿ ಮೃತ ಸಿಲಿ ಪತಿಯನ್ನು ಮದುವೆಯಾಗಿ ಕುಟುಂಬ ಆಸ್ತಿ ತಮಗೆ ಸೇರಬೇಕು ಎಂದು ಕಾನೂನಿನ ಅನ್ವಯ ಮನವಿ ಸಲ್ಲಿಸಿದ್ದರು. ಆದರೆ ಅಮೆರಿಕದಲ್ಲಿ ನೆಲೆಸಿರುವ ಟಾಮ್ ಥಾಮಸ್ ಕಿರಿಯ ಪುತ್ರ ಮೆಜೊ ಆಕ್ಷೇಪಣೆ ಸಲ್ಲಿಸಿ ಕುಟುಂಬ ಸರಣಿ ಸಾವಿನ ಕುರಿತು ಕ್ರೈಂ ಬ್ರಾಂಚ್‍ಗೆ ದೂರು ನೀಡಿದ್ದರು.

    ಪ್ರಕರಣದ ದಾಖಲಿಸಿ ವಿಚಾರಣೆ ಆರಂಭಿಸಿದ ಅಪರಾಧದಳ ಪೊಲೀಸರಿಗೆ ವಿಚಾರಣೆ ವೇಳೆ ಶಾಕಿಂಗ್ ಅಂಶಗಳು ತಿಳಿದು ಬಂದಿದ್ದವು. ಈ ಪ್ರಕರಣ ಕೇರಳದಲ್ಲಿ ಸಂಚಲನವನ್ನು ಉಂಟು ಮಾಡಿತ್ತು. ಪ್ರತಿ ಬಾರಿ ಕುಟುಂಬ ಸದಸ್ಯರನ್ನು ಕೊಲೆ ಮಾಡುವ ವೇಳೆ ಜ್ಯೂಲಿ ಸೂಕ್ತ ಪ್ಲಾನ್ ಮಾಡಿ ಯಾರಿಗೂ ಅನುಮಾನಬಾರದಂತೆ ಕೃತ್ಯ ಎಸಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ಮೃತರ ವೈಜ್ಞಾನಿಕ ಪರೀಕ್ಷೆಗಳ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ವಿಚಾರಣೆ ವೇಳೆ ಮೃತ 6 ಮಂದಿ ಸಾವಿನ ವೇಳೆ ಜ್ಯೂಲಿ ಸ್ಥಳದಲ್ಲಿ ಇರುವುದು ಖಚಿತವಾಗಿದೆ. ಈ ಪ್ರಕರಣ ತಮಗೆ ಹೆಚ್ಚು ಚಾಲೆಂಜಿಂಗ್ ಆಗಿತ್ತು ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಸಿಕ್ಕಿ ಬಿದ್ದಿದ್ದು ಹೇಗೆ?
    ಪ್ರಕರಣವನ್ನು ಬೇದಿಸಲು ಪೊಲೀಸರು ಜೂಲಿ ಹಾಗೂ ಆಕೆಯ 2ನೇ ಪತಿ ಶಾಜುನನ್ನು 8 ಬಾರಿ ತೀವ್ರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಎಂಟು ಬಾರಿ ವಿಚಾರಣೆಯಲ್ಲಿಯೂ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಲ್ಲದೇ ಜೂಲಿಯ ಫೋನ್ ವಿವರ ಪಡೆದ ವೇಳೆ ಆಕೆ ಶಾಜುನೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದು ತಿಳಿದು ಬಂದಿತ್ತು. ಅಂದಹಾಗೇ ಜೂಲಿ ವಾಣಿಜ್ಯ ಪದವೀಧರೆಯಾಗಿದ್ದು, ಎಂಜಿನಿಯರಿಂಗ್ ಪದವಿ ಪಡೆದಿದ್ದೇನೆ ಎಂದು ಹೇಳಿ ಕೆಲಸ ಪಡೆದಿದ್ದಳು.

    ಕೊಲೆಗೆ ಸೈನೈಡ್ ಬಳಕೆ: ಜೂಲಿ ತನ್ನ ಕುಟುಂಬದ 6 ಮಂದಿಯನ್ನು ಕೊಲೆ ಮಾಡಲು ನಿಧಾನವಾಗಿ ಸಾಯಿಸುವ ಸೈನೈಡನ್ನು ಬಳಕೆ ಮಾಡಿದ್ದಳು. ಮೃತ ದೇಹಗಳನ್ನು ಹೊರ ತೆಗೆದು ಪರೀಕ್ಷೆ ನಡೆಸಿದ ವೇಳೆ ಮೃತರ ದೇಹದಲ್ಲಿ ವಿಷ ಇರುವುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ಖಚಿತವಾಗಿತ್ತು. ಜೂಲಿಗೆ ಸೈನೈಡ್ ಪೂರೈಕೆ ಮಾಡುತ್ತಿದ್ದ ಆರೋಪದ ಅಡಿ ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಜಿಕುಮಾರ್ ಹಾಗೂ ಎಂಎಸ್ ಮ್ಯಾಥ್ಯೂರನ್ನು ಬಂಧಿಸಿದ್ದಾರೆ.

    ಈ ಹಿಂದೆ ವಿಶೇಷ ತನಿಖಾ ತಂಡ(ಎಸ್‍ಐಟಿ) ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾಗ, ಜ್ಯೂಲಿ ಹೆಣ್ಣು ಮಕ್ಕಳನ್ನು ದ್ವೇಷಿಸುತ್ತಾಳೆ ಎನ್ನುವ ಬಗ್ಗೆ ತಿಳಿದುಬಂದಿತ್ತು. ಜ್ಯೂಲಿ ಹೆಣ್ಣು ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ದ್ವೇಷ ಇಟ್ಟುಕೊಂಡಿದ್ದಳು ಎಂದರೆ, ತನ್ನ ಮೊದಲ ಪತಿಯ 2 ವರ್ಷದ ಹೆಣ್ಣು ಮಗುವನ್ನು ಜ್ಯೂಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ್ದಳು. ಅಲ್ಲದೆ ಆಕೆ ಗರ್ಭಿಣಿಯಾಗಿದ್ದಾಗ ತನ್ನ ಹೊಟ್ಟೆಯಲ್ಲಿ ಇರುವುದು ಹೆಣ್ಣು ಮಗು ಎಂದು ತಿಳಿದಾಗ, ಎರಡು ಬಾರಿ ಗರ್ಭಪಾತ ಕೂಡ ಮಾಡಿಸಿಕೊಂಡಿದ್ದಳು ಎಂದು ಎಸ್‍ಐಟಿ ಅಧಿಕಾರಿ ತಿಳಿಸಿದ್ದರು.

  • ಫಸ್ಟ್ ನೈಟ್‍ನಲ್ಲಿ ಪತಿಯ ಸ್ಥಿತಿ ನೋಡಿ ಕಿರುಚಿಕೊಂಡ ಪತ್ನಿ

    ಫಸ್ಟ್ ನೈಟ್‍ನಲ್ಲಿ ಪತಿಯ ಸ್ಥಿತಿ ನೋಡಿ ಕಿರುಚಿಕೊಂಡ ಪತ್ನಿ

    – ವಧುವಿನ ಪಾಲಿಗೆ ಮೊದಲರಾತ್ರಿ ಆಯ್ತು ಕರಾಳ ರಾತ್ರಿ
    – ಸಂಭ್ರಮವಿದ್ದ ಮನೆಯಲ್ಲಿ ಸೂತಕದ ಛಾಯೆ

    ಲಕ್ನೋ: ಫಸ್ಟ್ ನೈಟ್‍ನಲ್ಲಿ ಹೃದಯಾಘಾತದಿಂದ ವರ ಮೃತಪಟ್ಟಿದ್ದು, ಮೊದಲ ರಾತ್ರಿಯೇ ಆತನಿಗೆ ಕೊನೆ ರಾತ್ರಿ ಆದ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ನಡೆದಿದೆ.

    ಶಿವ್ ಬಾಲಕ್(24) ಮೃತಪಟ್ಟ ವರ. ಫೆ.23ರಂದು ಶಿವ್ ಗದಾಗಂಜ್ ಗ್ರಾಮದ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದನು. ಮದುವೆ ನಂತರ 24ರಂದು ವಧು ತನ್ನ ಪತಿಯ ಮನೆಗೆ ಹೋದಳು. ವಧು ಆಗಮನದಿಂದ ಮನೆಯಲ್ಲಿ ಎಲ್ಲಾ ಕಡೆ ಸಂಭ್ರಮದ ವಾತಾವರಣವಿತ್ತು.

    ವಧು ಮನೆಗೆ ಆಗಮಿಸಿದ ಕಾರಣ ಸೋಮವಾರ ರಾತ್ರಿ ಮನೆಯಲ್ಲಿದ್ದ ಮಹಿಳೆಯರು ಮಂಗಳಗೀತೆ ಹಾಡುತ್ತಿದ್ದರು. ಅಲ್ಲದೆ ವಧು-ವರನಿಗೆ ಮೊದಲರಾತ್ರಿಯ ತಯಾರಿ ಕೂಡ ನಡೆದಿತ್ತು. ರಾತ್ರಿ ಸುಮಾರು 11 ಗಂಟೆಗೆ ಶಿವ್ ಆರೋಗ್ಯ ಏರುಪೇರಾಗಿ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದನು. ಮೊದಲ ರಾತ್ರಿಯಲ್ಲಿ ಪತಿಯ ಸ್ಥಿತಿ ನೋಡಿ ವಧು ಜೋರಾಗಿ ಕಿರುಚಿಕೊಂಡಿದ್ದಾಳೆ.

    ವಧುವಿನ ಕಿರುಚಾಟದ ಶಬ್ದ ಕೇಳಿ ಮನೆಯವರು ಓಡಿ ಬಂದಿದ್ದಾರೆ. ಶಿವ್ ಸ್ಥಿತಿ ನೋಡಿದ ಕುಟುಂಬಸ್ಥರು ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲೇ ಶಿವ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಎಮ್ಕೆ ಶರ್ಮಾ, ಹೃದಯಾಘಾತದಿಂದ ಶಿವ್ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೆ ಪೊಲೀಸ್ ಅಧಿಕಾರಿ ರಾಮ್‍ದಾಸ್ ವರ್ಮಾ ಕೂಡ ಮಾತನಾಡಿ, ಶಿವ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.

  • ಒಂದೇ ತಿಂಗಳಲ್ಲಿ 3 ಸಾವು – ಸೂತಕ ಛಾಯೆಯಲ್ಲಿ ರವಿ ಕುಟುಂಬ

    ಒಂದೇ ತಿಂಗಳಲ್ಲಿ 3 ಸಾವು – ಸೂತಕ ಛಾಯೆಯಲ್ಲಿ ರವಿ ಕುಟುಂಬ

    ಬಳ್ಳಾರಿ: ಜಿಲ್ಲೆಯ ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿ ವಿಐಪಿ ಮಗನ ಕಾರು ಅಪಘಾತ ಪ್ರಕರಣದ ಘಟನೆಯಲ್ಲಿ ರವಿನಾಯಕ್ ಮೃತಪಟ್ಟಿದ್ದನು. ಆದರೆ ರವಿನಾಯಕ್ ಸಾವಿಗೀಡಾದ 10 ದಿನದಲ್ಲೇ ಆತನ ಅಜ್ಜಿ ಕೂಡ ಸಾವನ್ನಪ್ಪಿದ್ದಾರೆ.

    ಕೊಟ್ರಿಬಾಯಿ (65) ಮೃತ ರವಿ ಅಜ್ಜಿ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಫೆಬ್ರವರಿ 10 ರಂದು ರವಿ ನಾಯಕ್ ಸಾವಿನ ನಂತರ ಅಜ್ಜಿ ಕೊಟ್ರಿಬಾಯಿ ಹಾಸಿಗೆ ಹಿಡಿದಿದ್ದರು. ಕೊನೆಗೆ ಮೊಮ್ಮಗನ ದುಃಖದಲ್ಲಿ ಕೊರಗಿ ಕೊರಗಿ ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಕಾರು ಅಪಘಾತ ಮಾಡಿದ್ದ ಆರೋಪಿ ಅರೆಸ್ಟ್ – ನ್ಯಾಯಾಲಯದಿಂದ ಜಾಮೀನು

    ಒಂದು ತಿಂಗಳ ಹಿಂದೆ ಮಂಜುನಾಯಕ್ (24) ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದ. 15 ದಿನದ ನಂತರ 16 ವರ್ಷದ ರವಿನಾಯಕ್ ಕೂಡ ಕಾರು ಅಪಘಾತದಲ್ಲಿ ಮೃತಪಟ್ಟಿದ್ದನು. ಹೀಗಾಗಿ ಒಂದೇ ಕುಟುಂಬದಲ್ಲಿ 1 ತಿಂಗಳ ಅವಧಿಯಲ್ಲಿ ಮೂರು ಜನ ಸಾವಿಗೀಡಾಗಿದ್ದಾರೆ. ಸಾವಿನ ಮೇಲೆ ಸಾವು ಕಂಡು ರವಿ ನಾಯಕ್ ಕುಟುಂಬ ಆತಂಕಕ್ಕೆ ಒಳಗಾಗಿದ್ದಾರೆ. ಮನೆಯಲ್ಲಿ ಆಕ್ರಂದ ಮುಗಿಲು ಮುಟ್ಟಿದೆ.

    ಆಕಾಶ ತಲೆಯ ಮೇಲೆ ಬಿದ್ದಾಂಗಿದೆ ಎನ್ನುತ್ತಾರೆ ಕುಟುಂಬದವರು. ರವಿ ನಾಯಕ್ ಮನೆಯಲ್ಲಿ ಸಾವಿನ ಮೇಲೆ ಸಾವನ್ನು ಕಂಡು ಕುಟುಂಬದವರು ಆತಂಕಗೊಂಡು ಸ್ವಂತ ಮನೆ ಬಿಟ್ಟು ಬೇರೆ ಮನೆಯಲ್ಲಿ ವಾಸಮಾಡಿದ್ದಾರೆ. ಮನೆಯ ಸದಸ್ಯರು ಸೂತಕದ ಛಾಯೆಯಲ್ಲಿ ಜೀವನ ನಡೆಸುತ್ತಿದ್ದಾರೆ.

  • ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ – ಪ್ರೇಮಸೌಧದ ಅಂದಕ್ಕೆ ಟ್ರಂಪ್ ದಂಪತಿ ಫಿದಾ

    ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ – ಪ್ರೇಮಸೌಧದ ಅಂದಕ್ಕೆ ಟ್ರಂಪ್ ದಂಪತಿ ಫಿದಾ

    ಆಗ್ರಾ: 2 ದಿನ ಭಾರತ ಪ್ರವಾಸ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ಐತಿಹಾಸಿಕ ಪ್ರೇಮಸೌಧ ತಾಜ್‍ಮಹಲ್‍ಗೆ ಭೇಟಿಕೊಟ್ಟಿದ್ದು, ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ ಎಂದು ಹಾಡಿ ಹೊಗಳಿದ್ದಾರೆ.

    ಕುಟುಂಬದೊಂದಿಗೆ ಆಗ್ರಾಕ್ಕೆ ಬಂದ ಟ್ರಂಪ್ ಅವರಿಗೆ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯ್ತು. ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕ ಹಾಗೂ ಅಳಿಯ ಜ್ಯಾರಿದ್‍ನೊಂದಿಗೆ ತಾಜ್‍ಮಹಲ್ ವೀಕ್ಷಿಸಿ ಪ್ರೇಮಸೌಧದ ಅಂದವನ್ನು ಕಣ್ತುಂಬಿಕೊಂಡರು.

    ಈ ವೇಳೆ ಸಂದರ್ಶಕ ಪುಸ್ತಕದಲ್ಲಿ ತಮ್ಮ ಅನಿಸಿಕೆ ಬರೆದ ಟ್ರಂಪ್ ತಾಜ್‍ಮಹಲ್ ಅಂದವನ್ನು ಹೊಗಳಿದ್ದಾರೆ. ತಾಜ್‍ಮಹಲ್ ಪ್ರೇರಣೆಯ ವಿಸ್ಮಯ, ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಹಾಗೂ ಅನಂತತೆಯ ವಿಸ್ಮಯ ಎಂದು ಬರೆದಿದ್ದಾರೆ.

    ತಾಜ್‍ಮಹಲ್ ಇತಿಹಾಸ, ಭವ್ಯತೆಯ ಬಗ್ಗೆ ಟ್ರಂಪ್ ಕುಟುಂಬಕ್ಕೆ ಮಾರ್ಗದರ್ಶಕರು ಮಾಹಿತಿ ನೀಡಿದರು. ಅಲ್ಲದೆ ತಾಜ್‍ಮಹಲ್ ಆವರಣದಲ್ಲಿ ಟ್ರಂಪ್ ದಂಪತಿ ನಡೆದುಕೊಂಡು ಹೋಗಿಯೇ ಅದರ ಅಂದವನ್ನು ಕಣ್ತುಂಬಿಕೊಂಡರು. ಜೊತೆಗೆ ಪ್ರೇಮಸೌಧದ ಮುಂದೆ ಫೋಟೋವನ್ನು ತೆಗೆಸಿಕೊಂಡು ಖುಷಿಪಟ್ಟರು.

    ತಾಜ್ ಮಹಲ್ ಗೇಟಿನ 500 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ವಾಹನ ಸಂಚಾರಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ದಂಪತಿ ಎಕೋ ಫ್ರೆಂಡ್ಲಿ ಗಾಲ್ಫ್ ಕಾರ್ಟ್ ಮೂಲಕ ಸ್ಥಳಕ್ಕೆ ಬಂದು ನಂತರ ತಾಜ್ ಮಹಲ್ ಬಳಿ ನಡೆದುಕೊಂಡು ಹೋದರು.