Tag: family

  • 2 ತಿಂಗಳ ಕಂದಮ್ಮನ ಮೇಲೆ ಕೊರೊನಾ ಕರಿನೆರಳು – ಓರ್ವನಿಂದ ಕುಟುಂಬದ 11 ಮಂದಿಗೆ ಸೋಂಕು

    2 ತಿಂಗಳ ಕಂದಮ್ಮನ ಮೇಲೆ ಕೊರೊನಾ ಕರಿನೆರಳು – ಓರ್ವನಿಂದ ಕುಟುಂಬದ 11 ಮಂದಿಗೆ ಸೋಂಕು

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಸೊಂಕಿತರ ಸಂಖ್ಯೆ ಏರುತ್ತಲೇ ಇದೆ. ಈಗ ಜಮಾ ಮಸೀದಿಯ ಜನನಿಬಿಡ ಚುಡಿವಾಲನ್ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿಗೆ ಕೊರೊನಾ ತಗುಲಿದ್ದು, ಇಡೀ ಪ್ರದೇಶವನ್ನೇ ಸೀಲ್‍ಡೌನ್ ಮಾಡಲಾಗಿದೆ.

    ಒಂದೇ ಕುಟುಂಬದ 11 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಈ ಸೋಂಕಿತರಲ್ಲಿ 2 ತಿಂಗಳು ಮಗು ಹಾಗೂ 6 ವರ್ಷದ ಬಾಲಕನೂ ಸೇರಿದ್ದಾನೆ. ಹೀಗಾಗಿ ಇಡೀ ಚುಡಿವಾಲನ್ ಪ್ರದೇಶವನ್ನು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಸಂಪೂರ್ಣ ಸೀಲ್‍ಡೌನ್ ಮಾಡಿದ್ದಾರೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾಹಿತಿ ನೀಡಿದ್ದಾರೆ.

    ಈ ಕುಟುಂಬದ ಒಬ್ಬರು ವಿದೇಶದಿಂದ ಮರಳಿದ್ದು, ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅಲ್ಲದೇ ಕುಟುಂಬದ 18 ಮಂದಿಯನ್ನು ಧೈರ್ಯಗಂಜ್‍ನ ಖಾಸಗಿ ಲ್ಯಾಬ್‍ನಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಇದರಲ್ಲಿ 11 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಈ ಹಿನ್ನೆಲೆ ಈ ಸೋಂಕಿತ ಕುಟುಂಬದೊಂದಿಗೆ ಸಂಪರ್ಕಕ್ಕೆ ಹೋಂದಿದ್ದ ಜನರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಸಂಪರ್ಕಿತರು ಸಿಕ್ಕ ಬಳಿಕ ಅವರನ್ನು ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್‍ನಲ್ಲಿ ಇರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಸದ್ಯ ದೆಹಲಿಯಲ್ಲಿ 90 ಪ್ರದೇಶಗಳನ್ನು ಕೊರೊನಾ ಹಾಟ್‍ಸ್ಪಾಟ್ ಪ್ರದೇಶಗಳು ಎಂದು ಗುರುತಿಸಲಾಗಿದೆ.

  • ಕ್ವಾರಂಟೈನ್ ಮಾಡಿದ್ದಕ್ಕೆ ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ

    ಕ್ವಾರಂಟೈನ್ ಮಾಡಿದ್ದಕ್ಕೆ ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ

    ಕೋಲಾರ: ಕೊರೊನಾ ಮಹಾಮಾರಿ ಹರಡುವ ನಿಟ್ಟಿನಲ್ಲಿ ಶಂಕಿತರನ್ನು ಹೋಂ ಕ್ವಾರಂಟೈನ್ ಮಾಡಿದ್ದಕ್ಕೆ ಆಕ್ರೋಶಗೊಂಡ ಕುಟುಂಬವೊಂದು ಪೆಟ್ರೋಲ್ ಬಾಟಲ್ ನೊಂದಿಗೆ ಗ್ರಾಮ ಪಂಚಾಯ್ತಿಯ ಒಳಗೆ ನುಗ್ಗಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಸಂತೆಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಾಟಲ್ ಹಿಡಿದು ಆತ್ಮಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ. ಸಂತೇಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಕುಟುಂಬದವರನ್ನು ಕಳೆದ ಎರಡು ದಿನದ ಹಿಂದೆ ಹೋಂ ಕ್ವಾರಂಟೈನ್ ಮಾಡಲಾಗಿತ್ತು.

    ಬೆಂಗಳೂರಿನಿಂದ ಸಂಬಂಧಿಕರು ತಮ್ಮ ಮನೆಗೆ ಬಂದಿದ್ದರು. ಅದನ್ನೆ ಕೆಲವರು ದೊಡ್ಡ ಸುದ್ದಿಯೆಂದು ಆಶಾ ಕಾರ್ಯಕರ್ತರಿಗೆ ತಿಳಿಸಿ ಕ್ವಾರಂಟೈನ್ ಮಾಡಲು ಸೂಚಿಸಿದ್ದರು. ಜೊತೆಗೆ ಮಂಜುನಾಥ್ ಸೇರಿದಂತೆ ಕುಟುಂಬಸ್ಥರ ಭಾವಚಿತ್ರವನ್ನು ಕೊರೊನಾ ಶಂಕಿತರು ಎಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅನಾವಶ್ಯಕವಾಗಿ ಕ್ವಾರಂಟೈನ್ ಮಾಡಿದ್ದಾರೆಂದು ಆರೋಪಿಸಿರುವ ಕುಟುಂಬದ ಸದಸ್ಯರು, ಗ್ರಾಮ ಪಂಚಾಯ್ತಿ ಕಚೇರಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು.

    ಇಷ್ಟು ಮಾತ್ರವಲ್ಲದೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿ ಹೈಡ್ರಾಮಾ ಸೃಷ್ಟಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಮಾಲೂರು ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರು ಮಂಜುನಾಥ್ ಕುಟುಂಬಸ್ಥರನ್ನು ಮನವೊಲಿಸಿದರು.

  • ಕುಟುಂಬದ 26 ಮಂದಿಗೆ ಕೊರೊನಾ ಸೋಂಕು

    ಕುಟುಂಬದ 26 ಮಂದಿಗೆ ಕೊರೊನಾ ಸೋಂಕು

    – ರೆಡ್ ಝೋನ್‍ನಲ್ಲಿ ನಿಯಮ ಪಾಲಿಸದ ಜನರು

    ನವದೆಹಲಿ: ಇಡೀ ದೇಶ ಲಾಕ್‍ಡೌನ್ ಆಗಿದೆ. ಕೆಲವು ಕಡೆ ಸೀಲ್‍ಡೌನ್ ಕೂಡ ಮಾಡಿದೆ. ಸರ್ಕಾರ ಮನೆಯಿಂದ ಆಚೆ ಬರಬೇಡಿ ಅಂತ ಸಾರಿ ಸಾರಿ ಹೇಳುತ್ತಿದೆ. ಆದರೆ ಜನರು ಮಾತ್ರ ಸರ್ಕಾರದ ಮಾತು ಕೇಳುತ್ತಿಲ್ಲ. ಇದೀಗ ರೆಡ್ ಝೋನ್‍ನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿದ ಇಡೀ ಕುಟುಂಬವೊಂದಕ್ಕೆ ಕೊರೊನಾ ಸಂಕಷ್ಟ ಎದುರಾಗಿದೆ.

    ದೆಹಲಿಯ ರೆಡ್ ಝೊನ್ ಪ್ರದೇಶವಾಗಿರುವ ಜಹಾಂಗೀರ್ ಪುರಿಯಲ್ಲಿ ಒಂದೇ ಕುಟುಂಬದ 26 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ರೆಡ್ ಝೋನ್ ಅಂತ ಘೋಷಿಸಿ ನಿಯಮಗಳನ್ನು ಬಿಗಿ ಮಾಡಿದ್ದರೂ ಪೊಲೀಸರ ಕಣ್ಣು ತಪ್ಪಿಸಿ ಅದೇ ಪ್ರದೇಶದಲ್ಲಿದ್ದ ಇತರೆ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಹೀಗೆ ಪರಸ್ಪರ ಎಲ್ಲ ಕುಟುಂಬಗಳು ಒಂದೊಂದು ದಿನ ಒಬ್ಬರ ಮನೆಯಲ್ಲಿ ಸೇರಿಕೊಂಡಿದ್ದಾರೆ.

    ಹೀಗೆ ಓಡಾಡಿದ ಕುಟುಂಬ ಸದಸ್ಯನಲ್ಲಿ ಓರ್ವನಿಗೆ ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇಡೀ ಕುಟುಂಬಕ್ಕೆ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಕುಟುಂಬದ 26 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಎಲ್ಲರನ್ನೂ ಈಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

    ಅಷ್ಟೇ ಅಲ್ಲದೇ ಆ ಕುಟುಂಬದವರು ಸಂಪರ್ಕ ಹೊಂದಿದ್ದ ಅಕ್ಕಪಕ್ಕದವರನ್ನು ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ಜನರು ಮನೆಯಿಂದ ಹೊರಬರಬೇಡಿ. ಲಾಕ್‍ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಗೆ ಬರಬೇಕು ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.

  • ಬಳ್ಳಾರಿಯಲ್ಲಿ ಒಂದೇ ದಿನ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ

    ಬಳ್ಳಾರಿಯಲ್ಲಿ ಒಂದೇ ದಿನ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ

    – ಒಂದೇ ಕುಟುಂಬದ 10 ಮಂದಿಯಲ್ಲಿ ಸೋಂಕು

    ಬಳ್ಳಾರಿ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಏಳು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ 13ಕ್ಕೆ ತಲುಪಿದೆ.

    ಜಿಲ್ಲೆಯ ಹೊಸಪೇಟೆ ನಗರದಲ್ಲಿ ಈ ಹಿಂದೆ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ಏಳು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಹೊಸಪೇಟೆ ನಗರದಲ್ಲಿಯೇ 11 ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ.

    ಹೊಸಪೇಟೆ ಎಸ್.ಆರ್. ನಗರದ ಒಂದೇ ಕುಟುಂಬದ ನಾಲ್ವರಿಗೆ ಈ ಕೊರೊನಾ ಪಾಸಿಟಿವ್ ಬಂದಿತ್ತು. ಅದೇ ಕುಟುಂಬದ ಪ್ರಾಥಮಿಕ ಸಂಪರ್ಕ ಹೊಂದಿದ್ದ 25 ಮಂದಿಯನ್ನೂ ಸೇರಿದಂತೆ ಸುಮಾರು 125 ಮಂದಿಯನ್ನು ಕಳೆದ 14 ದಿನಗಳಿಂದ ಜಿಲ್ಲಾಡಳಿತ ಹೊಸಪೇಟೆ ಹೊಟೇಲೊಂದರಲ್ಲಿ ಕ್ವಾರಂಟೈನ್ ಮಾಡಿತ್ತು. 12ನೇಯ ದಿನಕ್ಕೆ ಟೆಸ್ಟ್ ಮಾಡಿದಾಗ 7 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

    ಅಲ್ಲದೆ ಹೊಸಪೇಟೆ ಎಸ್.ಆರ್.ನಗರದ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೆಷಂಟ್ ಸಂಖ್ಯೆ 89, 90, 91 ರೋಗಿಗಳನ್ನ ಜಿಲ್ಲಾಸ್ಪತ್ರೆಯ ಕೋವಿಡ್-19 ಐಸೊಲೇಷನ್ ವಾರ್ಡಿನಲ್ಲಿ ಇರಿಸಲಾಗಿದ್ದು, ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಏಳು ಮಂದಿಯಲ್ಲಿ ಈಗ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಹತ್ತು ಜನರಲ್ಲಿ ಸೋಂಕು ತಗುಲಿದೆ.

  • ಕೊರೊನಾ ಭೀತಿಗೆ ತಾಯಿಯನ್ನ ಕಳೆದುಕೊಂಡು ತಬ್ಬಲಿಗಳಾದ ಮಕ್ಕಳು

    ಕೊರೊನಾ ಭೀತಿಗೆ ತಾಯಿಯನ್ನ ಕಳೆದುಕೊಂಡು ತಬ್ಬಲಿಗಳಾದ ಮಕ್ಕಳು

    ರಾಯಚೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಜಿಲ್ಲೆಯ ಸಿಂಧನೂರಿಗೆ ಪ್ರಯಾಣಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ ಕೂಲಿಕಾರ್ಮಿಕ ಮಹಿಳೆ ಗಂಗಮ್ಮಳ ಇಬ್ಬರು ಮಕ್ಕಳು ಈಗ ದಿಕ್ಕುಕಾಣದ ತಬ್ಬಲಿಗಳಾಗಿದ್ದಾರೆ.

    ಮಕ್ಕಳಾದ ಮಂಜುನಾಥ್ ಹಾಗೂ ಪ್ರೀತಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಬೆಂಗಳೂರಿನಿಂದ ಬರುವಾಗ ಬಳ್ಳಾರಿಯಲ್ಲಿ ಅನಾರೋಗ್ಯದಿಂದ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಗಂಗಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದಳು. ಬೆಂಗಳೂರಿನ ಕೆಂಗೇರಿಯ ಗ್ಲೋಬಲ್ ವಿಲೇಜ್ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಗಂಗಮ್ಮಳಿಗೆ ಅಪಾರ್ಟ್ ಮೆಂಟ್ ಮಾಲೀಕರು ಯಾವುದೇ ಸಹಾಯ ಮಾಡಿಲ್ಲ. ಮೃತಳ ಪತಿ ಮಲ್ಲಿಕಾರ್ಜುನ ನಿರುದ್ಯೋಗಿಯಾಗಿದ್ದು, ಈವರೆಗೂ ಮಕ್ಕಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈಗ ಮಕ್ಕಳು ತಾಯಿಯ ತವರು ಮನೆ ಸಿಂಧನೂರಿನ ಸಾಸಲಮರಿ ಗ್ರಾಮದಲ್ಲಿದ್ದಾರೆ.

    ಅಜ್ಜಿ ಮನೆಯಲ್ಲೂ ದುಡಿಯುವವರು ಇಲ್ಲದೆ, ಮಕ್ಕಳನ್ನ ಸಾಕುವುದು ಅಜ್ಜಿಗೂ ಕಷ್ಟದ ಕೆಲಸವಾಗಿದೆ. ತಾಯಿಯಿಲ್ಲದೆ ತಬ್ಬಲಿಗಳಾಗಿರುವ ಮಕ್ಕಳ ಮುಂದಿನ ಭವಿಷ್ಯ ಹಾಗೂ ಸದ್ಯ ಪರಿಸ್ಥಿತಿ ಶೋಚನೀಯವಾಗಿದೆ. ಸಿಂಧನೂರಿನಲ್ಲಿ ಪುಟ್ಟ ಮನೆಯೊಂದು ಬಿಟ್ಟರೆ ಕುಟುಂಬಕ್ಕೆ ಆಧಾರವೇನು ಇಲ್ಲ.

    ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿ ಮಕ್ಕಳನ್ನ ಸಾಕುತ್ತಿದ್ದ ತಾಯಿ ಮೃತಪಟ್ಟಿರುವುದರಿಂದ ಮಕ್ಕಳು ಸಂಕಷ್ಟಕ್ಕೀಡಾಗಿದ್ದಾರೆ. ತಾಲೂಕು ಆಡಳಿತ ಮಕ್ಕಳ ಮನೆಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ಮಕ್ಕಳ ಕಷ್ಟಕ್ಕೆ ಸ್ಪಂದಿಸಿದರೆ ಅವರ ಬಾಳಿಗೆ ಬೆಳಕಾಗಲಿದೆ.

  • ಕೊರೊನಾ ರೋಗಿಗಳಿಗೆ ಚಿಕಿತ್ಸೆ – ಮನೆಗೆ ತೆರಳದೇ 1 ವಾರದಿಂದ ಕಾರಿನಲ್ಲೇ ವಾಸ

    ಕೊರೊನಾ ರೋಗಿಗಳಿಗೆ ಚಿಕಿತ್ಸೆ – ಮನೆಗೆ ತೆರಳದೇ 1 ವಾರದಿಂದ ಕಾರಿನಲ್ಲೇ ವಾಸ

    ಭೋಪಾಲ್: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮಧ್ಯ ಪ್ರದೇಶದ ಇಬ್ಬರು ಸರ್ಕಾರಿ ವೈದ್ಯರು ತಮ್ಮ ಕಾರುಗಳಲ್ಲೇ ವಾಸಿಸುತ್ತಿದ್ದಾರೆ.

    ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನ ಒಂದೇ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಸಚಿನ್ ನಾಯಕ್ ಮತ್ತು ಸಚಿನ್ ಪಟಿದಾರ್ ಇಬ್ಬರೂ ತಮ್ಮ ಕಾರುಗಳಲ್ಲಿ ಒಂದು ವಾರದಿಂದ ವಾಸಿಸುತ್ತಿದ್ದಾರೆ. ಕೊರೊನಾ ಸೋಂಕಿನಿಂದ ತಮ್ಮ ಕುಟುಂಬವನ್ನು ರಕ್ಷಿಸಲು ತಮ್ಮನ್ನು ತಾವೇ ಕಾರಿನಲ್ಲಿ ನಿರ್ಬಂಧಿಸಿಕೊಂಡಿದ್ದಾರೆ.

    ಆಸ್ಪತ್ರೆಯಲ್ಲಿ ಅವರ ದಿನದ ಶಿಫ್ಟ್ ಮುಗಿದ ನಂತರ, ಅವರು ಸ್ವಲ್ಪ ಸಮಯದವರೆಗೆ ತಮ್ಮ ಮನೆಗಳ ಬಳಿ ಬಂದು ದೂರದಿಂದಲೇ ತಮ್ಮ ಕುಟುಂಬಸ್ಥರನ್ನು ಮಾತನಾಡಿಸುತ್ತಾರೆ ನಂತರ ತಮ್ಮ ಕಾರಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಜೊತೆಗೆ ಅಲ್ಲೇ ಮಲಗುತ್ತಾರೆ. ಬಿಡುವಿನ ವೇಳೆಯಲ್ಲಿ ಕಾರಿನಲ್ಲೇ ಕುಳಿತುಕೊಂಡು ಪುಸ್ತಕ ಓದುತ್ತಾರೆ. ಇದರ ಜೊತೆ ಬೇಜಾರದಾಗ ಕುಟುಂಬದೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಾರೆ. ಕಾರಿನಲ್ಲಿ ಬೆಡ್‍ಶೀಟ್‍ಗಳು, ಬಟ್ಟೆ, ಲ್ಯಾಪ್‍ಟಾಪ್ ಮತ್ತು ಹಾಸಿಗೆ ಎಲ್ಲವನ್ನು ಇಟ್ಟುಕೊಂಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಕೊರೊನಾ ವೈರಸ್ ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುವ ವೈದ್ಯ ಸಚಿನ್ ನಾಯಕ್, ಈ ಸಾಂಕ್ರಾಮಿಕ ರೋಗ ಬಹುಬೇಗ ಹರಡಿತು. ಹೀಗಾಗಿ ರಾಜ್ಯದ ಆಡಳಿತ ವರ್ಗಕ್ಕಾಗಲಿ ಅಥವಾ ನಮಗಾಗಲಿ ಇದರ ವಿರುದ್ಧದ ಹೋರಾಟಕ್ಕೆ ತಯಾರಾಗಲು ಸಮಯವಿರಲಿಲ್ಲ. ಹಾಗಾಗಿ ನಮ್ಮವರನ್ನು ರಕ್ಷಿಸಿಕೊಳ್ಳುವುದು ನಮ್ಮ ಕೆಲಸ. ನಾವು ಕೊರೊನಾ ಮಾದರಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತೇವೆ. ಇದರಿಂದ ರೋಗ ಹರಡಬಹುದು. ಆದ್ದರಿಂದ ನಾವು ಕಾರಿನಲ್ಲಿ ವಾಸಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಮೊತ್ತೊಬ್ಬ ವೈದ್ಯರಾದ ಸಚಿನ್ ಪಟಿದಾರ್ ಅವರು ಅರಿವಳಿಕೆ ತಜ್ಞರಾಗಿದ್ದಾರೆ. ಅವರು ಕೂಡ ಮಾರ್ಚ್ 31ರಿಂದ ಕಾರಿನಲ್ಲೇ ವಾಸಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನಗೆ ಕಾರಿನಲ್ಲಿ ಸೋಪ್, ಡಿಯೋಡರೆಂಟ್ ಬಾಚಣಿಗೆ ಮತ್ತು ಶೇವಿಂಗ್ ಕಿಟ್ ಇದೆ. ಮಲಗಲು ಕಾರಿನ ಹಿಂಬದಿಯ ಸೀಟಿನಲ್ಲಿ ಹಾಸಿಗೆಯೂ ಇದೆ. ಆದರೆ ನನಗೆ ನನ್ನ ಕುಟುಂಬದ ಹಿರಿಯ ಜೀವಗಳ ಬಗ್ಗೆ ಚಿಂತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

    ವೈದ್ಯರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡ ಈ ವಿಚಾರವಾಗಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ 359 ಕೊರೊನಾ ಸೋಂಕಿತರ ಪತ್ತೆಯಾಗಿದ್ದು, ಸುಮಾರು 26 ಜನರು ಸಾವನ್ನಪ್ಪಿದ್ದಾರೆ.

  • ಕಳೆದ ವಾರ ನೆಗೆಟಿವ್, ಈಗ ಪಾಸಿಟಿವ್ – ಒಂದೇ ಕುಟುಂಬದ 6 ಮಂದಿಗೆ ಕೊರೊನಾ

    ಕಳೆದ ವಾರ ನೆಗೆಟಿವ್, ಈಗ ಪಾಸಿಟಿವ್ – ಒಂದೇ ಕುಟುಂಬದ 6 ಮಂದಿಗೆ ಕೊರೊನಾ

    – ಆರು ಮಂದಿಯಲ್ಲಿ ಮೂವರು ಡಿಸ್ಚಾರ್ಜ್

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆಯಾಗಿದೆ. ಆದರೆ ಕಳೆದ ವಾರ ನೆಗೆಟಿವ್ ಬಂದ ಮಹಿಳೆಗೆ ಈಗ ಕೊರೊನಾ ಪಾಸಿಟಿವ್ ಕಂಡು ಬಂದಿದೆ.

    ಗೌರಿಬಿದನೂರಿನ 48 ವರ್ಷದ ಮಹಿಳೆಗೆ ಕೊರೊನಾ ದೃಢವಾಗಿದೆ. ಈಕೆಯ ಸಹೋದರನಿಂದ (ರೋಗಿ 94) ಮತ್ತು ರೋಗಿ 19ರ ಸಂಪರ್ಕಕ್ಕೆ ಬಂದಿದ್ದರಿಂದ ಕೊರೊನಾ ಬಂದಿದೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೆಕ್ಕಾದಿಂದ ಗೌರಿಬಿದನೂರಿಗೆ ವಾಪಸ್ಸಾಗಿದ್ದ ಮೊದಲ ರೋಗಿ 19 ಆಗಿದ್ದು, 19 ರ ತಾಯಿ, ತಂದೆ ಮತ್ತು ಇಬ್ಬರೂ ಸಹೋದರಿಯರಿಗೆ ಸೋಂಕು ಕಂಡುಬಂದಿತ್ತು. ಕಳೆದ ವಾರ ಇಬ್ಬರ ಸಹೋದರಿಯರಲ್ಲಿ ಓರ್ವಳಿಗೆ ಪಾಸಿಟಿವ್ ಬಂದಿದ್ದು, ಮತ್ತೊಬ್ಬಳಿಗೆ ನೆಗೆಟಿವ್ ಬಂದಿತ್ತು. ಅನುಮಾನ ಬಂದು ಮತ್ತೆ ಪರೀಕ್ಷೆಗೆ ಕಳುಹಿಸಿದಾಗ ಪಾಸಿಟಿವ್ ಬಂದಿದೆ. ಈ ಮೂಲಕ ಒಂದೇ ಕುಟುಂಬದ 6 ಜನರಿಗೂ ಸೋಂಕು ಧೃಡವಾಗಿದೆ.

    6 ಮಂದಿಯಲ್ಲಿ ಮಗ, ತಾಯಿ ಹಾಗೂ ಚಿಕ್ಕಮ್ಮ ಮೆಕ್ಕಾದಿಂದ ವಾಪಸ್ಸಾಗಿದ್ದರು. ತಂದೆ ಹಾಗೂ ಇಬ್ಬರು ಸಹೋದರಿಯರಿಗೂ ಸೋಂಕು ಬಂದಿದೆ. ಈ ಆರು ಮಂದಿಯಲ್ಲಿ ಮೂವರು ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬುಧವಾರ ತಾಯಿ ಡಿಸ್ಚಾರ್ಜ್ ಆಗಿದ್ದು, ಇಂದು ತಂದೆ ಹಾಗೂ ಚಿಕ್ಕಮ್ಮ ಡಿಸ್ಚಾರ್ಜ್ ಆಗಿದ್ದಾರೆ ಎಂದು ಡಿಸಿ ಆರ್.ಲತಾ ಸ್ಪಷ್ಟನೆ ನೀಡಿದ್ದಾರೆ.

    ಇವತ್ತು ರಾಜ್ಯದಲ್ಲಿ 10 ಕೊರೊನಾ ಪ್ರಕರಣ ದಾಖಲಾಗಿದೆ. ಬಾಗಲಕೋಟೆಯಲ್ಲಿ ಮೂರು, ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ 2, ಬೆಳಗಾವಿ, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.

  • ಪ್ರಜ್ಞೆ ತಪ್ಪಿದ ವ್ಯಕ್ತಿಗೆ ಕೊರೊನಾ ಎಂದು ಶಂಕಿಸಿ ದೂರವಿದ್ದ ಮನೆಮಂದಿ – ವ್ಯಕ್ತಿ ಸಾವು

    ಪ್ರಜ್ಞೆ ತಪ್ಪಿದ ವ್ಯಕ್ತಿಗೆ ಕೊರೊನಾ ಎಂದು ಶಂಕಿಸಿ ದೂರವಿದ್ದ ಮನೆಮಂದಿ – ವ್ಯಕ್ತಿ ಸಾವು

    ಚಂಡೀಗಡ: ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂದು ಭಾವಿಸಿ ಮನೆಮಂದಿ ದೂರ ಉಳಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ಚಂಡೀಗಢದ ಮಲೋಯಾದಲ್ಲಿ ನಡೆದಿದೆ.

    ಧರಮ್ ಕುಮಾರ್(30) ಮೃತ ದುರ್ದೈವಿ. ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲೋಯಾದಲ್ಲಿ ಧರಮ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಆದರೆ ಕೆಲ ದಿನಗಳಿಂದ ಆತ ಹುಚ್ಚನಂತೆ ವರ್ತಿಸುತ್ತಿದ್ದನು. ಭಾನುವಾರ ಮನೆಯ ಮೇಲ್ಚಾವಣಿಗೆ ಹೋಗಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದನು. ಆದರೆ ಆತನಿಗೆ ಕೊರೊನಾ ಸೊಂಕು ತಟ್ಟಿದೆ ಎಂದು ಭಯಗೊಂಡು ಮನೆಮಂದಿ ಆತನನ್ನು ಮೊದಲು ಮುಟ್ಟಲು ಹೋಗಲಿಲ್ಲ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಧರಮ್ ಸಾವನ್ನಪ್ಪಿದ್ದನು.

    ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ, ಧರಮ್‍ಗೆ ಕಳೆದ ಆರೇಳು ತಿಂಗಳ ಹಿಂದೆ ಬೀದಿ ನಾಯಿಯೊಂದು ಕಚ್ಚಿತ್ತು. ಆಗಿನಿಂದ ಆತ ವಿಚಿತ್ರವಾಗಿ ಹುಚ್ಚನಂತೆ ವರ್ತಿಸುತ್ತಿದ್ದನು ಎಂದು ಕುಟುಂಬಸ್ಥರು, ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಆದರೆ ಧರಮ್ ದೇಹದ ಮೇಲೆ ನಾಯಿ ಕಚ್ಚಿದ ಯಾವುದೇ ಗಾಯದ ಕಲೆ ಇಲ್ಲ. ಜೊತೆಗೆ ಆತನಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳೂ ಕಾಣಿಸಿಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.

    ಭಾನುವಾರ ಧರಮ್ ಪ್ರಜ್ಞೆ ತಪ್ಪಿ ಬಿದ್ದಾಗ ಆತನಿಗೆ ಕೊರೊನಾ ಇದೆ ಎಂದು ಯಾರೂ ಹತ್ತಿರ ಹೋಗಲಿಲ್ಲ. ಬಳಿಕ ಕುಮಾರ್ ತಂದೆ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಧರಮ್ ಸಾವಿಗೆ ನಿಖರ ಕಾರಣ ಏನೆಂದು ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಮಲೋಯಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ರಾಗಿಮುದ್ದೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದ ಕಾಮಿಡಿ ಕಿಲಾಡಿ

    ರಾಗಿಮುದ್ದೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದ ಕಾಮಿಡಿ ಕಿಲಾಡಿ

    ಬೆಂಗಳೂರು: ಕಾಮಿಡಿ ಕಿಲಾಡಿ ಖ್ಯಾತಿಯ ನಟ ಶಿವರಾಜ್ ಕೆಆರ್ ಪೇಟೆ ಅವರು ಕೊರೊನಾ ಲಾಕ್‍ಡೌನ್ ಮಧ್ಯೆ ರಾಗಿಮುದ್ದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಯಾರು ಮನೆಯಿಂದ ಹೊರೆಗೆ ಬರುತ್ತಿಲ್ಲ. ಅಂಗಡಿಗಳು ಎಲ್ಲವೂ ಮುಚ್ಚಿದೆ. ಈ ನಡುವೆ ಕೇಕ್ ಸಿಗದೆ ಇದ್ದರೂ ಇಂದು ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿರುವ ಶಿವರಾಜ್ ಅವರು, ಮನೆಯಲ್ಲೇ ಮಾಡಿದ ರಾಗಿಮುದ್ದೆ ಕೇಕ್ ಕಟ್ ಮಾಡಿ ಕುಟುಂಬದ ಜೊತೆ ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ.

    ಲಾಕ್‍ಡೌನ್ ಮಧ್ಯೆ ಕುಟುಂಬದ ಜೊತೆ ಕಾಲಕಳೆಯುತ್ತಿರುವ ಶಿವರಾಜ್ ಕೆ.ಆರ್ ಪೇಟೆಯವರು, ಇಂದು 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಗಿಮುದ್ದೆಯನ್ನು ಕೇಕ್ ರೀತಿ ಮಾಡಿ ಕತ್ತರಿಸಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರ ಮಗ, ಹೆಂಡತಿ ಹಾಗೂ ಅಕ್ಕ, ಅಕ್ಕನ ಗಂಡ ಮತ್ತು ಮಗಳು ರಾಗಿಮುದ್ದೆ ಕೇಕ್ ಅನ್ನು ಬಸ್ಸಾರಿನ ಜೊತೆ ತಿಂದು ಖುಷಿಪಟ್ಟಿದ್ದಾರೆ.

    ಈ ವಿಡಿಯೋದಲ್ಲಿ ಮಾತನಾಡಿರುವ ಶಿವರಾಜ್ ಅವರು, ಈ ರೀತಿಯ ಹುಟ್ಟುಹಬ್ಬವನ್ನು ಯಾರೂ ಕೂಡ ಆಚರಣೆ ಮಾಡಿಕೊಂಡಿರುವುದಿಲ್ಲ. ಇದು ನಿಜವಾಗಿ ಕೇಕ್ ಅಲ್ಲ ಇದನ್ನು ರಾಗಿಮುದ್ದೆಯಿಂದ ಮಾಡಲಾಗಿದೆ. ರಾಗಿಮುದ್ದೆ ಕೇಕ್ ಮಾಡಿ ನನ್ನ ಹುಟ್ಟುಹಬ್ಬ ಮಾಡುತ್ತಿರುವ ನನ್ನ ಕುಟುಂಬದವರಿಗೂ ಮತ್ತು ನನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

    ರಾಗಿಮುದ್ದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಮಾಡಿಕೊಂಡಿರುವ ಶಿವರಾಜ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯವಾದ ಶಿವರಾಜ್, ಇಂದು ಸ್ಯಾಂಡಲ್‍ವುಡ್‍ನಲ್ಲಿ ಉತ್ತಮ ಪೋಷಕನಟ ಮತ್ತು ಹಾಸ್ಯನಟನಾಗಿ ಮಿಂಚುತ್ತಿದ್ದಾರೆ. ಜೊತೆಗೆ ನಾನು ಮತ್ತು ಗುಂಡ ಎಂಬ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ.

    https://www.instagram.com/p/BpNGsQiApd9/

    ಶಿವರಾಜ್ ಕೆ.ಆರ್ ಪೇಟೆ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್ ಅವರು, ಈಗ ದರ್ಶನ್ ಅಭಿನಯದ ರಾಬರ್ಟ್, ನಿಖಿಲ್ ಕುಮಾರ್ ಅಭಿನಯದ ಇನ್ನು ಹೆಸರಿಡದ ಸಿನಿಮಾ, ಬಂಪರ್, ಮದಗಜ ಮತ್ತು ಪುರುಸೊತ್ ರಾಮ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

  • 2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕೊರೊನಾ

    2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕೊರೊನಾ

    – ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ 325 ಜನರಿಗೆ ನಿರ್ಬಂಧ

    ಮುಂಬೈ: 2 ವರ್ಷದ ಗಂಡು ಮಗು ಸೇರಿ ಒಂದೇ ಕುಟುಂಬದ 25 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಈ ಕುಟುಂಬದ ನಾಲ್ಕು ಜನರು ಸೌದಿ ಅರೇಬಿಯಾದ ಹಜ್ ಯಾತ್ರೆಗೆ ಹೋಗಿ ವಾಪಸ್ ಆಗಿದ್ದರು. ಈ ನಾಲ್ವರಿಗೆ ಮಾರ್ಚ್ 19ರಂದು ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಆಗ ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ನಾಲ್ವರನ್ನು ಮಾರ್ಚ್ 19ರಂದು ಮೀರಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಇದಾದ ನಂತರ ಮಾರ್ಚ್ 21ರಂದು ಇದೇ ಕುಟುಂಬದ ಇನ್ನೂ ಐವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಇದರಿಂದ ಭಯಬಿದ್ದ ಸರ್ಕಾರ ಕುಟುಂಬದ ಎಲ್ಲಾ ಸದಸ್ಯರನ್ನು ಚಿಕಿತ್ಸೆಗೆ ಒಳಪಡಿಸಿದ್ದರು. ಈ ವೇಳೆ ಮಾರ್ಚ್ 27 ಇದೇ ಕುಟುಂಬದ ಮೂವರಿಗೂ ಮತ್ತೆ ಕೊರೊನಾ ವೈರಸ್ ಇರುವುದು ಪರೀಕ್ಷೆ ನಡೆಸಿದಾಗ ದೃಢಪಟ್ಟಿತ್ತು. ಈ ಮೂಲಕ ಕುಟುಂಬದ 12 ಮಂದಿಗೆ ಕೊರೊನಾ ಇರುವುದು ಪತ್ತೆಯಾಗಿತ್ತು.

    ಈ 12 ಜನ ಆದ ಮೇಲೆ ಪರೀಕ್ಷೆ ಮಾಡಿದ ಕುಟುಂಬ ಉಳಿದ 13 ಜನರಲ್ಲೂ ಇಂದು ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಇದರಲ್ಲಿ ಎರಡು ವರ್ಷದ ಗಂಡು ಮಗುವಿದೆ. ಹೀಗಾಗಿ ಕುಟುಂಬದ ಜೊತೆ ಸಂಪರ್ಕದಲ್ಲಿ ಇದ್ದ ಸುಮಾರು 325 ಜನರನ್ನು ಸರ್ಕಾರ ಹೋಂ ಕ್ವಾರೆಂಟೈನ್ ಇರುವಂತೆ ಸೂಚಿಸಿದ್ದು, ಜೊತೆಗೆ ಸೋಂಕಿತರನ್ನು ಮೀರಾಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾ ವೈದ್ಯಾಧಿಕಾರಿ ಸುಲಿಂಖೆ, ಈ ಕುಟುಂಬದವರು ಪರಸ್ಪರ ಒಟ್ಟಿಗೆ ಇದ್ದರು. ಕುಟುಂಬದವರೆಲ್ಲ ಒಟ್ಟಿಗೆ ಇದ್ದ ಕಾರಣ ಕೊರೊನಾ ಎಲ್ಲರಿಗೂ ಹಬ್ಬಿದೆ. ಕೊರೊನಾ ವೈರಸ್ ಇರುವ ವ್ಯಕ್ತಿ ಕೆಮ್ಮಿದರೆ ಆ ಜಾಗದಲ್ಲಿ ವೈರಸ್ ಬಿದ್ದಿರುತ್ತದೆ. ಅದನ್ನು ಮನೆಯವರು ಮಟ್ಟಿದರೆ ಅವರಿಗೂ ಸೋಂಕು ಹರಡುತ್ತದೆ. ಹೀಗಾಗಿ ಈಗ ಕುಟುಂಬದ ಎಲ್ಲರಿಗೂ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿಜೀತ್ ಚೌಧರಿ, 25 ಸೋಂಕಿತರು ದೊಡ್ಡ ಕುಟುಂಬಕ್ಕೆ ಸೇರಿದವರು ಎಂದು ದೃಢಪಟ್ಟಿದೆ. ಈ ಕುಟುಂಬ ಸಾಂಗ್ಲಿಯ ಇಸ್ಲಾಂಪುರ್ ತಹಸಿಲ್ನಲ್ಲಿ ಇರುವ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದೆ. ಇತ್ತೀಚೆಗೆ ಈ ಕುಟುಂಬದ ನಾಲ್ಕು ಜನರು ವಿದೇಶಕ್ಕೆ ಹೋಗಿ ಸೋಂಕಿಗೆ ಒಳಗಾಗಿದ್ದಾರೆ. ಈ ನಾಲ್ವರು ವಾಪಸ್ ಬಂದಾಗ ಮನೆಯವರು ಇವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದ ಕಾರಣ ಎಲ್ಲರಿಗೂ ರೋಗ ತಗುಲಿದೆ ಎಂದು ತಿಳಿಸಿದ್ದಾರೆ.