Tag: family

  • ಪೋಷಕರು, ಅಪ್ರಾಪ್ತ ಮಗಳ ಶವ ಮನೆಯಲ್ಲೇ ಪತ್ತೆ – ಕೊಲೆಗೂ ಮುನ್ನ ಅತ್ಯಾಚಾರದ ಆರೋಪ

    ಪೋಷಕರು, ಅಪ್ರಾಪ್ತ ಮಗಳ ಶವ ಮನೆಯಲ್ಲೇ ಪತ್ತೆ – ಕೊಲೆಗೂ ಮುನ್ನ ಅತ್ಯಾಚಾರದ ಆರೋಪ

    – ತೋಟದಲ್ಲಿ ಪತಿ, ಮನೆಯ ಹೊರಗೆ ಪತ್ನಿ ಶವ
    – ಮನೆಯೊಳಗೆ ಅಪ್ರಾಪ್ತ ಮಗಳ ಮೃತದೇಹ ಪತ್ತೆ

    ಲಕ್ನೋ: ವೃದ್ಧ ದಂಪತಿ ಮತ್ತು ಅವರ 15 ವರ್ಷದ ಮಗಳು ತಮ್ಮ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯಲ್ಲಿ ನಡೆದಿದೆ.

    55 ವರ್ಷದ ವ್ಯಕ್ತಿ, 50 ವರ್ಷದ ಮಹಿಳೆ ಮತ್ತು ಅಪ್ರಾಪ್ತ ಮಗಳು ಮೃತರು ಎಂದು ಗುರುತಿಸಲಾಘಿದೆ. ಮೂವರನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ತಿ ವಿವಾದ ಅಥವಾ ಕುಟುಂಬ ಜಗಳದಿಂದ ಕೊಲೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಏನಿದು ಪ್ರಕರಣ?
    ಇಂದು ಮುಂಜಾನೆ ಗ್ರಾಮದಲ್ಲಿ ಮೂವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್ ಅಧಿಕಾರಿಗಳು, ಶ್ವಾನ ದಳ ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೂವರನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ವ್ಯಕ್ತಿಯ ಮೃತದೇಹ ಹೊಲದಲ್ಲಿ ಪತ್ತೆಯಾಗಿದೆ. ಅವರ ಪತ್ನಿಯ ಮೃತದೇಹ ಮನೆಯ ಹೊರಗೆ ಪತ್ತೆಯಾಗಿದೆ. ಇನ್ನೂ ಅಪ್ರಾಪ್ತ ಹುಡುಗಿಯ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೀಪೇಂದ್ರ ನಾಥ್ ಚೌಧರಿ ಹೇಳಿದ್ದಾರೆ.

    ಮೃತ ದಂಪತಿಯ 29 ವರ್ಷದ ಮಗ ತನ್ನ ಮಕ್ಕಳು ಮತ್ತು ಪತ್ನಿಯ ಜೊತೆ ಗ್ರಾಮದ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಾನೆ. ಈ ಕುರಿತು ಮಗ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ ಯಾವುದೇ ಶಂಕಿತನ ಹೆಸರನ್ನು ಸೂಚಿಸಿಲ್ಲ. ಇನ್ನೂ ದಂಪತಿಯ ಎರಡನೇ ಮಗ ಮುಂಬೈನಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

    ಘಟನಾ ಸ್ಥಳದಿಂದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಫೋನ್ ವಿವರಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಅಪ್ರಾಪ್ತೆಯನ್ನು ಕೊಲೆ ಮಾಡುವ ಮೊದಲು ಅತ್ಯಾಚಾರ ಎಸಗಲಾಗಿದೆ ಎಂದು ಮೃತ ದಂಪತಿಯ ಕುಟುಂಬದವರು ಆರೋಪಿಸಿದ್ದಾರೆ. ಮೃತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತಿಳಿಯುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ವಿಡಿಯೋ ಕಾಲ್ ಮಾಡಿದ ವೈದ್ಯಾಧಿಕಾರಿ- ಮನೆಗೆ ಯಾವಾಗ ಬರ್ತಿಯಪ್ಪಾ ಎಂದ ಮಕ್ಕಳು

    ವಿಡಿಯೋ ಕಾಲ್ ಮಾಡಿದ ವೈದ್ಯಾಧಿಕಾರಿ- ಮನೆಗೆ ಯಾವಾಗ ಬರ್ತಿಯಪ್ಪಾ ಎಂದ ಮಕ್ಕಳು

    – ಒಂದೂವರೆ ತಿಂಗಳಿಂದ ನೂಡಲ್ ಅಧಿಕಾರಿಯಾಗಿರುವ ವೈದ್ಯ

    ಬಾಗಲಕೋಟೆ: ಕೊರೊನಾ ಯುದ್ಧದಲ್ಲಿ ತಿಂಗಳುಗಟ್ಟಲೇ ಪತ್ನಿ, ಮಕ್ಕಳು ತಂದೆ ತಾಯಿಯಿಂದ ದೂರವಾದ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದರು.

    ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ನೂಡಲ್ ಅಧಿಕಾರಿಯಾಗಿರುವ ಚಂದ್ರಕಾಂತ ಜವಳಿ ಕಳೆದ ಒಂದೂವರೆ ತಿಂಗಳಿಂದ ಕೊರೊನಾ ಪ್ರಕರಣಗಳ ಮಾಹಿತಿ ಅಂಕಿ ಅಂಶ ದಾಖಲಾತಿ ಕಾರ್ಯ ನಿಭಾಯಿಸುತ್ತಿದ್ದಾರೆ. ಹೀಗಾಗಿ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿರುವ ತಂದೆ, ತಾಯಿ, ಪತ್ನಿ ಮಕ್ಕಳ ಭೇಟಿ ಮಾಡಿಲ್ಲ. ಕೊರೊನಾ ಕರ್ತವ್ಯದಲ್ಲಿರುವ ವೈದ್ಯ ಚಂದ್ರಕಾಂತ ಕುಟುಂಬ ಜೊತೆಗಿನ ಸಂಭ್ರಮ ತ್ಯಾಗ ಮಾಡಿದ್ದಾರೆ. ಕುಟುಂಬಸ್ಥರನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಚಂದ್ರಕಾಂತ, ವಿಡಿಯೋ ಕಾಲ್ ಮಾಡಿ ಮಾತನಾಡಿ ದೂರದಿಂದಲೇ ಸಂತಸ ಪಟ್ಟಿದ್ದಾರೆ.

    ಪತ್ನಿ, ಮಕ್ಕಳು, ತಂದೆ, ತಾಯಿ ಜೊತೆ ಮಾತನಾಡಿದ್ದು, ಕೆಲ ಕಾಲ ಮಾತನಾಡುವ ಮೂಲಕ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ಈ ವೇಳೆ ಮಕ್ಕಳು ಮನೆಗೆ ಬಾ ಎಂದು ಕರೆದಿದ್ದು, ಕೊರೊನಾ ಹಾವಳಿ ಮುಗಿದ ನಂತರ ಬರುತ್ತೇನೆ ಎಂದು ಹೇಳಿದ್ದಾರೆ. ಸಧ್ಯ ಒಂದೂವರೆ ತಿಂಗಳಿನಿಂದ ಬಾಗಲಕೋಟೆಯ ಖಾಸಗಿ ಲಾಡ್ಜ್ ನಲ್ಲಿಯೇ ಚಂದ್ರಕಾಂತ ಉಳಿದುಕೊಂಡಿದ್ದಾರೆ. ವೈದ್ಯರ ಕುಟುಂಬದದಿಂದ ದೂರ ಉಳಿದು ಕೆಲಸ ಮಾಡುತ್ತಿರುವುದಕ್ಕೆ ಸರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾತನಾಡಲು ಮಾಧ್ಯಮದವರು ಕೇಳಿದಾಗ ದಯವಿಟ್ಟು ಬೇಡ. ನನ್ನಂತೆ ಸಾಕಷ್ಟು ಜನ ಮನೆಗೆ ತೆರಳದೇ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮುಜುಗುರ ಉಂಟಾಗೋದು ಬೇಡ ಎಂದಿದ್ದಾರೆ.

  • ಅಕ್ರಮ ಮದ್ಯ ಮಾರಾಟ ತಡೆದ ಯೋಧನ ಕುಟುಂಬಕ್ಕೆ ಬಹಿಷ್ಕಾರ

    ಅಕ್ರಮ ಮದ್ಯ ಮಾರಾಟ ತಡೆದ ಯೋಧನ ಕುಟುಂಬಕ್ಕೆ ಬಹಿಷ್ಕಾರ

    – ತಾಯಿ ಸತ್ತರೂ ಹೋಗದಂತೆ ಗ್ರಾಮಸ್ಥರಿಗೆ ತಾಕೀತು

    ಗದಗ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆದ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ಯೋಧನ ತಾಯಿ ಮೃತಪಟ್ಟರೂ ಸ್ಥಳೀಯರು ಅಂತ್ಯಕ್ರಿಯೆಗೆ ಹೊದರೆ 10 ಸಾವಿರ ರೂ. ದಂಡ ಘೋಷಣೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಉಳ್ಳಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಪಬ್ಲಿಕ್ ಟಿವಿ ಸುದ್ದಿ ಮಾಡುತ್ತಿದ್ದಂತೆ ತಾಲೂಕು ಆಡಳಿತ ಹಾಗೂ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

    ಯೋಧ ಬಾಬಣ್ಣ ಲಮಾಣಿ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಲಾಗಿದೆ. ಲಾಕ್‍ಡೌನ್ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಲಮಾಣಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ. ಈ ಕುರಿತು ಯೋಧ ಬಾಬಣ್ಣ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಅವರ ಮೇಲೆ ಕ್ರಮ ಜರುಗುವಂತೆ ಮಾಡಿದ್ದರು. ಈ ಸಿಟ್ಟಿನಿಂದಾಗಿ ಯೋಧನ ಕುಟುಂಬಕ್ಕೆ ಗ್ರಾಮದ ಯಾರೊಬ್ಬರು ನೆರವಾಗದಂತೆ ಕೃಷ್ಣಪ್ಪ ಲಮಾಣಿ ಊರಿನ ಜನರಿಗೆ ಆದೇಶ ಮಾಡಿ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಇಂದು ಯೋಧನ ತಾಯಿ ಸಕ್ರವ್ವ ಲಮಾಣಿ ಮೃತಪಟ್ಟಿದ್ದಾರೆ. ಈ ವೇಳೆ ಗ್ರಾಮಸ್ಥರು ಯಾರೂ ಭಾಗವಹಿಸಿಲ್ಲ. ಯೋಧ ಬಾಬಣ್ಣ ಕಣ್ಣೀರಿಡುತ್ತಿದ್ದಾರೆ. ಬಾಬಣ್ಣ ಜಮ್ಮು ಕಾಶ್ಮೀರದಲ್ಲಿ ಸೇನೆಯಲ್ಲಿ ನಾಯಕನಾಗಿ ಸೇವೆಸಲ್ಲಿಸುತ್ತಿದ್ದಾರೆ. ರಜೆಗೆಂದು ಊರಿಗೆ ಬಂದಿದ್ದರು. ಏ.16 ಕ್ಕೆ ಯೋಧ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಲಾಕ್‍ಡೌನ್ ಹಿನ್ನೆಲೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಈ ಸಂದರ್ಭದಲ್ಲಿ ಅಕ್ರಮ ತಡೆಯಲು ಮುಂದಾಗಿದ್ದಕ್ಕೆ ಈ ಶಿಕ್ಷೆ ನೀಡಲಾಗಿದೆ. ಈಗ ತಾಯಿ ಸಕ್ರವ್ವ ಮೃತಪಟ್ಟಿದ್ದಾರೆ. ಅವರ ಮನೆಗೆ ಯಾರಾದರೂ ಹೋದರೆ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಹೀಗಾಗಿ ಯಾರೂ ಬರುತ್ತಿಲ್ಲ. ಇಷ್ಟೆಲ್ಲ ರಾದ್ಧಾಂತ ನಡೆದರೂ ತಾಲೂಕು ಹಾಗೂ ಜಿಲ್ಲಾಡಳಿತ ಇತ್ತ ತಲೆ ಹಾಕಿರಲಿಲ್ಲ.

    ಪಬ್ಲಿಕ್ ಟಿವಿ ವರದಿ ನೋಡಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಅಧಿಕಾರಿಗಳು ಯೋಧನ ನೆರವಿಗೆ ಬಂದಿದ್ದಾರೆ. ಗ್ರಾ.ಪಂ. ಸದಸ್ಯನ ಆದೇಶ ಮೇರೆಗೆ ಸ್ಥಳೀಯರು ಬಹಿಷ್ಕಾರ ಮಾಡಿದ್ದರು. ಯೋಧನ ತಾಯಿ ಮೃತಪಟ್ಟ ವೇಳೆ ಸ್ಥಳೀಯರು ಸಹ ತೆರಳಿರಲಿಲ್ಲ. ಇದೀಗ ಸ್ಥಳೀಯರನ್ನು ಪೊಲೀಸರು ಮನವೊಲಿಸಿದ್ದು, ಅವರ ಸಮ್ಮುಖದಲ್ಲೇ ಯೋಧನ ತಾಯಿ ಸಕ್ರವ್ವ ಅವರ ಅಂತ್ಯಕ್ರಿಯೆ ಮಾಡಲಾಗಿದೆ.

  • ವರದಿಗಾರ ಹನುಮಂತು ಕುಟುಂಬಕ್ಕೆ ವೆಬಿನಾರ್ ಹಣ – ಸುರಾನಾ ಕಾಲೇಜು ತೀರ್ಮಾನ

    ವರದಿಗಾರ ಹನುಮಂತು ಕುಟುಂಬಕ್ಕೆ ವೆಬಿನಾರ್ ಹಣ – ಸುರಾನಾ ಕಾಲೇಜು ತೀರ್ಮಾನ

    ಬೆಂಗಳೂರು: ಸುರಾನಾ ಪೀಣ್ಯಾ ಕ್ಯಾಂಪಸ್ ಅಲ್ಲಿ ವೆಬಿನಾರ್ ಅನ್ನು ಆಯೋಜನೆ ಮಾಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್‍ಲೈನ್ ಕ್ಲಾಸ್ ಮಾಡಲು ತೀರ್ಮಾನಿಸಿ ಇದನ್ನು ಶುರು ಮಾಡಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲೆ ರಮ್ಯಾ ಅವರು ಹೇಳಿದ್ದಾರೆ.

    ಕೇವಲ ಉಪನ್ಯಾಸಕರಿಂದ ಕ್ಲಾಸ್ ಮಾಡುವುದಕ್ಕಿಂತ ಅತಿಥಿ ಉಪನ್ಯಾಸಕರಿಂದ ಆನ್‍ಲೈನ್ ಕ್ಲಾಸ್ ಮಾಡಿಸಲು ಶುರು ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ಕ್ಲಾಸಿನ ಬಗ್ಗೆ ಗಂಭೀರತೆ ಇರಲಿ ಎಂದು 100, 200 ರೂಪಾಯಿ ಎಂದು ಫೀಸ್ ಕೂಡ ಮಾಡಿದ್ದೇವೆ. ಈ ಹಣವನ್ನು ಈ ಕೊರೊನಾ ಲಾಕ್‍ಡೌನ್ ಇದರೂ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಹೇಲ್ತ್ ವಾರಿಯರ್ಸ್, ಮೀಡಿಯಾ, ಸಿಎಂ ರಿಲೀಫ್ ಫಂಡಿಗೆ ಕೊಡಲು ಕಾಲೇಜಿನ ಆಡಳಿತ ಮಂಡಳಿ ತೀರ್ಮಾನಿಸಿದೆ.

    ಇಂದಿನ ವೆಬಿನಾರ್ ಕ್ಲಾಸ್ ಮಾಧ್ಯಮಕ್ಕೆ ಸಂಬಂಧಪಟ್ಟಿತ್ತು, ಹೀಗಾಗಿ ಕೊರೊನಾ ಲಾಕ್‍ಡೌನ್‍ನಲ್ಲಿ ವರದಿ ಮಾಡುತ್ತಿದ್ದ ಸಂದರ್ಭದಲ್ಲೇ ಪಬ್ಲಿಕ್ ಟಿವಿ ರಾಮನಗರ ವರದಿಗಾರ ಹನುಮಂತು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ ಇಂದಿನ ಹಣವನ್ನು ನೇರವಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ರಮ್ಯಾ ಅವರು ತಿಳಿಸಿದ್ದಾರೆ.

  • ದೇವಸ್ಥಾನಕ್ಕೆ ಹೋಗೋ ನೆಪದಲ್ಲಿ ಕರ್ಕೊಂಡು ಹೋಗಿ ಮಗ್ಳ ಕೊಂದ ತಾಯಿ, ಚಿಕ್ಕಪ್ಪ

    ದೇವಸ್ಥಾನಕ್ಕೆ ಹೋಗೋ ನೆಪದಲ್ಲಿ ಕರ್ಕೊಂಡು ಹೋಗಿ ಮಗ್ಳ ಕೊಂದ ತಾಯಿ, ಚಿಕ್ಕಪ್ಪ

    – ಪ್ರೀತಿಸಿದ ಹುಡುಗನ ಜೊತೆ 16ರ ಅಪ್ರಾಪ್ತೆ ಎಸ್ಕೇಪ್
    – ಬಾಲಕಿ ಮನೆಗೆ, ಯುವಕ ಜೈಲಿಗೆ

    ಜೈಪುರ: 16 ವರ್ಷದ ಬಾಲಕಿಯನ್ನು ಆಕೆಯ ತಾಯಿ ಮತ್ತು ಚಿಕ್ಕಪ್ಪ ಸೇರಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ರಿಂಕು (16) ಮೃತ ಬಾಲಕಿ. ತಾಯಿ ಸೀತಾದೇವಿ ಮತ್ತು ಚಿಕ್ಕಪ್ಪ ಸವರಂ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ಘಟನೆ ಮಾರ್ಚ್ 19 ರಂದು ನಡೆದಿದ್ದು, ಒಂದು ತಿಂಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಕೊಲೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಅಪ್ರಾಪ್ತ ಬಾಲಕಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಗಳಾದ ತಾಯಿ ಸೀತಾದೇವಿ ಮತ್ತು ಚಿಕ್ಕಪ್ಪ ಸವರಂ ಇಬ್ಬರನ್ನು ಬಂಧಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಸವರಂ ಮತ್ತು ಆತನ ಸಹೋದರ ಶೇಷರಂ ತಮ್ಮ ಕುಟುಂಬದೊಂದಿಗೆ ಪಾಲಿ ಜಿಲ್ಲೆಯ ಸೋನೈ ಮಾಜಿ ಗ್ರಾಮದಿಂದ ಪುಣೆಗೆ ಹೋಗಿದ್ದರು. ಅಲ್ಲಿ ದಿನಸಿ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಮೃತ ರಿಂಕು ಶೇಷರಂ ಅವರ ಮಗಳು. ಈಕೆಗೆ ಪುಣೆಯಲ್ಲಿ ಸ್ಥಳೀಯ ಯುವಕನ ಪರಿಚಯವಾಗಿದೆ. ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಎರಡು ತಿಂಗಳ ಹಿಂದೆ ರಿಂಕು ಆತನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಾಳೆ.

    ಆಗ ರಿಂಕು ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ಯುವಕನ ವಿರುದ್ಧ ಅಪಹರಣದ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕುರಿತು ತನಿಖೆ ಶುರು ಮಾಡಿದ್ದಾರೆ. ನಂತರ ಮುಂಬೈ ಪೊಲೀಸರಿಗೆ ದಾದರ್ ರೈಲ್ವೆ ನಿಲ್ದಾಣದಲ್ಲಿ ರಿಂಕು ಮತ್ತು ಯುವಕ ಇಬ್ಬರು ಸಿಕ್ಕಿಬಿದ್ದಿದ್ದಾರೆ. ರಿಂಕು ಅಪ್ರಾಪ್ತೆಯಾಗಿದ್ದರಿಂದ ಆಕೆಯನ್ನು ಕುಟುಂಬದವರ ಜೊತೆ ಮನೆಗೆ ಕಳುಹಿಸಿದ್ದಾರೆ.

    ಯುವಕ ಜೈಲಿಗೆ ಹೋಗಿದ್ದು, ಒಂದು ತಿಂಗಳ ನಂತರ ಯುವಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಈ ಬಗ್ಗೆ ತಿಳಿದು ರಿಂಕು ತನ್ನ ಕುಟುಂಬದವರ ಬಳಿ ತಮ್ಮ ಮದುವೆಗೆ ಒಪ್ಪಿಕೊಳ್ಳುವಂತೆ ಪದೇ ಪದೇ ಮನವಿ ಮಾಡಿಕೊಂಡಿದ್ದಾಳೆ. ಆದರೆ ಕುಟುಂಬದವರ ಮಗಳ ಮದುವೆಗೆ ಒಪ್ಪಲಿಲ್ಲ. ಕೊನೆಗೆ ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಮಾರ್ಚ್ 18 ರಂದು ರಾಜಸ್ಥಾನದ ತಮ್ಮ ಹಳ್ಳಿಗೆ ಕರೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

    ಮರುದಿನ ತಾಯಿ ಮತ್ತು ಚಿಕ್ಕಪ್ಪ ಇಬ್ಬರು ಸೇರಿ ರಿಂಕುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಸುಟ್ಟು ಸಮಾಧಿ ಮಾಡಿ ವಾಪಸ್ ಪುಣೆಗೆ ಹೋಗಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕೊಲೆಯಲ್ಲಿ ಕುಟುಂಬದ ಇತರ ಸದಸ್ಯರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  • ತನ್ನ ಕುಟುಂಬದ 6 ಮಂದಿಯನ್ನ ಕೊಂದು ಪೊಲೀಸರಿಗೆ ಶರಣಾದ

    ತನ್ನ ಕುಟುಂಬದ 6 ಮಂದಿಯನ್ನ ಕೊಂದು ಪೊಲೀಸರಿಗೆ ಶರಣಾದ

    – ಪೋಷಕರು, ಸೋದರ, ಪತ್ನಿ, ಮಕ್ಕಳಿಬ್ಬರ ಬರ್ಬರ ಹತ್ಯೆ

    ಲಕ್ನೋ: ವ್ಯಕ್ತಿಯೊಬ್ಬ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಕುಟುಂಬದ ಆರು ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಲಕ್ನೋದ ಹೊರವಲಯದಲ್ಲಿ ಗುರುವಾರ ಈ ಘಟನೆ ನಡೆದಿದೆ. ಆರೋಪಿ ಅಜಯ್ ಸಿಂಗ್ (26) ಕೊಲೆ ಮಾಡಿದ ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

    ಆರೋಪಿ ಸಿಂಗ್ ತನ್ನ ಕುಟುಂಬದ ಸದಸ್ಯರೊಂದಿಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಸಿಂಗ್ ಕೋಪಗೊಂಡು ಆಯುಧದಿಂದ ಎಲ್ಲರ ಮೇಲೆ ಹಲ್ಲೆ ಮಾಡಿದ್ದಾನೆ. ಪತ್ನಿ, ತನ್ನ ಮಕ್ಕಳು ಸೇರಿದಂತೆ ಆರು ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.

    ಕೊಲೆ ಮಾಡಿದ ನಂತರ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ವೇಳೆ ನನ್ನ ತಾಯಿ, ತಂದೆ, ಹಿರಿಯ ಸಹೋದರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

    ಮೃತರನ್ನು ತಂದೆ ಅಮರ್ (60), ತಾಯಿ ರಾಮ್‍ಸಖಿ (55), ಸಹೋದರ ಅರುಣ್ (40), ಪತ್ನಿ ರಾಮ್‍ದುಲಾರಿ (35), ಸೌರಭ್ (7) ಮತ್ತು ಸಾರಿಕಾ (2) ಎಂದು ಗುರುತಿಸಲಾಗಿದೆ.

    ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದು, ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ತಿಳಿಸಿದರು.

  • ರಕ್ತದಾನ ಮಾಡಿ ಮಾನವೀಯತೆ ಮೆರೆದ ಪುರೋಹಿತರು

    ರಕ್ತದಾನ ಮಾಡಿ ಮಾನವೀಯತೆ ಮೆರೆದ ಪುರೋಹಿತರು

    – 35 ರಿಂದ 45 ಪುರೋಹಿತರು, ಕುಟುಂಬದವರಿಂದ ರಕ್ತದಾನ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್‍ನಿಂದ ಜನರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ರೋಗಿಗಳಿಗೆ ರಕ್ತದಾನ ಮಾಡುವವರ ಕೊರತೆ ಸಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ ಪ್ರಾರ್ಥನೆ, ಆರಾಧನೆ, ಪೂಜೆ ಪುನಸ್ಕಾರಕ್ಕೆ ಸೀಮಿತವಾಗಿದ್ದ ಪುರೋಹಿತರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲಾ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಶೇಖರಣೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಇರುವ ರೋಗಿಗಳಿಗೆ ರಕ್ತ ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಕೊರೊನಾ ಸಮಸ್ಯೆ ಹೊರತುಪಡಿಸಿ, ಇತರೆ ರೋಗಿಗಳಿಗೆ ರಕ್ತದ ತುರ್ತು ಅವಶ್ಯಕತೆ ಎದ್ದು ಕಾಣುತ್ತಿದ್ದು, ಈ ಕಷ್ಟವನ್ನು ಮನಗಂಡ ಪುರೋಹಿತ ಯುವ ಪರಿಷತ್ ಸದಸ್ಯರು ರಕ್ತದಾನ ಮಾಡಿದ್ದಾರೆ.

    ಶಿವಮೊಗ್ಗದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಸುಮಾರು 35 ರಿಂದ 45 ಪುರೋಹಿತರು ಹಾಗೂ ಅವರ ಕುಟುಂಬ ವರ್ಗದವರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ದಿನೇ ದಿನೇ ಕೊರೊನಾ ದೇಶದಲ್ಲಿ ವ್ಯಾಪಿಸುತ್ತಿದೆ. ಇದರಿಂದ ರಕ್ತದಾನ ಮಾಡಲು ಯಾರೂ ಕೂಡ ಮುಂದೆ ಬರುತ್ತಿಲ್ಲ. ಆದರೆ ಅಗತ್ಯವಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ರಕ್ತ ಸಿಗದೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲರೂ ರಕ್ತದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಒಂದೇ ಕುಟುಂಬದ ಐವರ ಮೃತದೇಹ ಮನೆಯೊಳಗೆ ಪತ್ತೆ

    ಒಂದೇ ಕುಟುಂಬದ ಐವರ ಮೃತದೇಹ ಮನೆಯೊಳಗೆ ಪತ್ತೆ

    – ಇಬ್ಬರು ಮಕ್ಕಳು, ಮಹಿಳೆಯರಿಬ್ಬರು ಸಾವು
    – ಗ್ಯಾಸ್ ಕಟ್ಟರ್‌ನಿಂದ ಕಬ್ಬಿಣದ ಗೇಟ್ ಮುರಿದು ಮನೆಗೆ ಪೊಲೀಸ್ ಎಂಟ್ರಿ

    ಲಕ್ನೋ: ಒಂದೇ ಕುಟುಂಬದ ಐವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಅವರ ಮನೆಯಲ್ಲಿಯೇ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಶೃಂಗಾರ್ ನಗರ ಕಾಲೋನಿಯಲ್ಲಿ ನಡೆದಿದ್ದು, ತಮ್ಮ ನಿವಾಸದಲ್ಲಿ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ನಿವೃತ್ತ ಆರೋಗ್ಯ ಕಾರ್ಯಕರ್ತ ರಾಜೇಶ್ವರ್ ಪ್ರಸಾದ್ ಪಚೌರಿ (80), ಅವರ ಸೊಸೆ ದಿವ್ಯಾ (33), ಅವರ ಇಬ್ಬರು ಮಕ್ಕಳಾದ ಲಾಲೂ (1), ಆರುಶ್ (10) ಮತ್ತು ದಿವ್ಯಾ ಸಹೋದರಿ ಬುಲ್‍ಬುಲ್ (25) ಎಂದು ತಿಳಿದುಬಂದಿದೆ.

    ಬೆಳಗ್ಗೆ ಹಾಲಿನವನು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಾಲಿನವರು ಅನೇಕ ಬಾರಿ ಬಾಗಿಲು ಬಡಿದರೂ ಯಾರೂ ಪ್ರತಿಕ್ರಿಯಿಸಿಲ್ಲ. ಕೊನೆಗೆ ಅನುಮಾನಗೊಂಡು ಕಿಟಕಿಯಿಂದ ಮನೆಯೊಳಗೆ ನೋಡಿದಾಗ ಮೃತದೇಹ ಬಿದ್ದಿರುವುದನ್ನು ನೋಡಿ ಭಯಗೊಂಡಿದ್ದಾನೆ. ತಕ್ಷಣ ಆತ ನೆರೆಹೊರೆಯವರಿಗೆ ಮಾಹಿತಿ ತಿಳಿಸಿದ್ದಾನೆ. ಆಗ ನೆರೆಹೊರೆಯ ವಕೀಲ ಅಲೋಕ್ ತಿವಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅವರ ಮನೆಗೆ ಕಬ್ಬಿಣದ ಗೇಟ್ ಹಾಕಿಸಲಾಗಿತ್ತು. ಹೀಗಾಗಿ ಪೊಲೀಸರು ಗ್ಯಾಸ್ ಕಟ್ಟರ್ ಬಳಸಿ ಕಬ್ಬಿಣದ ಗೇಟ್ ಮುರಿದು ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಸ್ಥಳದಲ್ಲಿ ಟಾಯ್ಲೆಟ್ ಕ್ಲೀನರ್‌ನ ಖಾಲಿ ಬಾಟೆಲ್, ಮಾತ್ರೆಗಳು ಮತ್ತು ಬ್ಲೇಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಶಾನ್ವ ದಳ ಮತ್ತು ವಿಧಿ ವಿಜ್ಞಾನ ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಸಾಕ್ಷ್ಯಗಳು ಮತ್ತು ಫಿಂಗರ್‌ಪ್ರಿಂಟ್ಸ್ ಸಂಗ್ರಹಿಸಿಕೊಂಡಿದ್ದಾರೆ. ಬಳಿಕ ಪೊಲೀಸರು ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಐವರ ಮೃತದೇಹ ಅವರ ಮನೆಯಲ್ಲೇ ಪತ್ತೆಯಾಗಿವೆ. ಮನೆಯ ವಿವಿಧ ಸ್ಥಳಗಳಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಅವರ ಬಾಯಿಂದ ನೊರೆ ಬರುತ್ತಿರುವುದು ಕಂಡುಬಂದಿದೆ. ಕೆಲವರ ಬಾಯಿಯಲ್ಲಿ ರಕ್ತ ಬಂದಿದೆ ಎಂದು ಪೊಲೀಸ್ ಅಧಿಕಾರಿ ಸುನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.

    ರಾಜೇಶ್ವರ್ ಮೃತದೇಹ ಡ್ರಾಯಿಂಗ್ ರೂಮಿನಲ್ಲಿ ಪತ್ತೆಯಾಗಿದ್ದು, ಅವರ ಸೊಸೆಯ ಮೃತದೇಹ ಮನೆಯ ಪ್ರವೇಶದ್ವಾರದ ಬಳಿಯಿರುವ ಹಾಸಿಗೆಯ ಮೇಲೆ ಪತ್ತೆಯಾಗಿದೆ. ಇನ್ನೂ ಇಬ್ಬರು ಮಕ್ಕಳ ಮೃತದೇಹ ಬೆಡ್ ರೂಮಿನಲ್ಲಿ ಪತ್ತೆಯಾಗಿದ್ದು, ಮನೆಯ ಮೊದಲ ಮಹಡಿಯಲ್ಲಿ ಬುಲ್‍ಬುಲ್ ಶವ ಪತ್ತೆಯಾಗಿದೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆದರೆ ಇವರ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ.

  • ಲಾಕ್‍ಡೌನ್‍ನಿಂದ 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳ ಪರದಾಟ

    ಲಾಕ್‍ಡೌನ್‍ನಿಂದ 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳ ಪರದಾಟ

    ಬೆಳಗಾವಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದರೆ ಈ ಲಾಕ್ ಡೌನ್ ನಿಂದ ಸುಮಾರು 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಪರದಾಟ ಅನುಭವಿಸುತ್ತಿವೆ.

    ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕೆಂಗಾನೂರು ಗ್ರಾಮದಲ್ಲಿ ಉತ್ತರಕನ್ನಡ ಜಿಲ್ಲೆಯ ಹಡಗಲಿ, ಡೊಂಗ್ರಿಕೊಪ್ಪ ಗ್ರಾಮದ 50ಕ್ಕೂ ಹೆಚ್ಚು ಕುಟುಂಬಗಳು ನರಕಯಾತನೆ ಅನುಭವಿಸುತ್ತಿವೆ. ಹಸುಗೂಸಿನೊಂದಿಗೆ ವಾಸವಿರುವ ಬಾಣಂತಿ, ಪುಟ್ಟ ಪುಟ್ಟ ಕಂದಮ್ಮಗಳ ಜೊತೆ ಇಲ್ಲಿ ಕುಟುಂಬಗಳು ವಾಸವಾಗಿವೆ.

    ಇವರು ವರ್ಷದ 9 ತಿಂಗಳು ಊರೂರು ಸುತ್ತಿ ಮನೆ ಮನೆಗೆ ತೆರಳಿ ಅವರ ಕುಟುಂಬದ ಇತಿಹಾಸ ಹೇಳುವವರಾಗಿದ್ದಾರೆ. ಬೈಲಹೊಂಗಲ, ಗೋಕಾಕ್, ಬಾಗಲಕೋಟೆ ಹಾಗೂ ರಾಯಚೂರು ಸೇರಿ ವಿವಿಧೆಡೆ ತೆರಳುತ್ತಿದ್ದರು. ಆದರೆ ಇದೀಗ ಲಾಕಡೌನ್‍ನಿಂದ ಎಲ್ಲಿಯೂ ಹೋಗದೆ ಕುಟುಂಬ ಕೆಂಗಾನೂರಲ್ಲಿ ಸಿಲುಕಿದ್ದು, ಜಾಗ ಖಾಲಿ ಮಾಡಿ ಅಂತ ಪೊಲೀಸರು ಹೇಳುತ್ತಿದ್ದಾರೆ ಎಂದು ಅವರು ಆರೋಪ ಮಾಡುತ್ತಿದ್ದಾರೆ.

    ಸದ್ಯ ಲಾಕ್‍ಡೌನ್‍ನಲ್ಲಿ ಸಿಲುಕಿರುವ ಕುಟುಂಬಗಳಿಗೆ ತಾಲೂಕು ಆಡಳಿತ ಪಡಿತರ ವ್ಯವಸ್ಥೆ ಕಲ್ಪಿಸಿದೆ. ಆದರೆ ಇತರೆ ಸಾಮಗ್ರಿ ವಿತರಿಸುವಂತೆ ಹೆಳವರ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.

  • ವಿಧಿಗೆ ಸೆಡ್ಡು ಹೊಡೆದ ಬಡವರ ಮೇಲೆಯೇ ವಿಧಿಯ ಮತ್ತೊಂದು ಸವಾರಿ

    ವಿಧಿಗೆ ಸೆಡ್ಡು ಹೊಡೆದ ಬಡವರ ಮೇಲೆಯೇ ವಿಧಿಯ ಮತ್ತೊಂದು ಸವಾರಿ

    ಚಿಕ್ಕಮಗಳೂರು: ವಯಸ್ಸಿಗೆ ಬಂದ ಇಬ್ಬರು ಮಕ್ಕಳು ಬುದ್ಧಿಮಾಂದ್ಯರು. ಆ ಮಕ್ಕಳ ಪರಿಸ್ಥಿತಿ ಕೂತಲ್ಲೇ ಎಲ್ಲಾ. ಮನೆಗೆ ಆಧಾರ ಸ್ತಂಭವಾಗಿ ಸಂಸಾರದ ನೊಗ ಹೊತ್ತಿದ್ದ ಅಪ್ಪನೂ ಮಕ್ಕಳ ಜೊತೆ ಮಗುವಾಗಿದ್ದಾನೆ. ಮೂವರನ್ನೂ ನೋಡಿಕೊಳ್ಳಬೇಕಾದ ಸ್ಥಿತಿ ಅಮ್ಮನದ್ದು. 3 ದಶಕಗಳಿಂದ ಅಕ್ಷರಶಃ ಗೃಹಬಂಧನದಂತೆ ಬದುಕು ಸವೆಸಿದ ಆ ತಾಯಿ ಈಗ ಮಕ್ಕಳ ಜೊತೆ ಗಂಡನನ್ನೂ ನೋಡಿಕೊಳ್ಳಬೇಕಾದ ಸ್ಥಿತಿ ನೆನೆದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

    ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚನ್ನಹಡ್ಲು ಗ್ರಾಮದ ಈ ಕಥೆ ಕೇಳಿದ್ರೆ ನಿಮ್ಮ ಕಣ್ಣುಗಳು ತೇವಗೊಂಡು, ನಮ್ಮ ಶತ್ರುಗೂ ಈ ಸ್ಥಿತಿ ಬೇಡ ಅಂತ ಭಗವಂತನಿಗೆ ಬೇಡಿಕೊಳ್ಳುತ್ತೀರ.

    ಹೌದು, ಬದುಕಿನ ಮೇಲೆ ವಿಧಿ ಸವಾರಿ ಮಾಡ ಹೊರಟರೆ ಬದುಕು ಮೂರಾಬಟ್ಟೆಯಾಗೋದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ಈ ಕುಟುಂಬದ ಕಣ್ಣೀರ ಕಥೆ ಇಂದು-ನಿನ್ನೆಯದಲ್ಲ. ಬರೋಬ್ಬರಿ ಮೂರು ದಶಕದ್ದು. ವಯಸ್ಸಿಗೆ ಬಂದ ಬುದ್ದಿಮಾಂದ್ಯ ಮಕ್ಕಳಿಬ್ಬರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆ ದಂಪತಿಗೆ ಮಕ್ಕಳ ಸಾಕುವುದೇ ಸವಾಲು. ಅಮ್ಮ ಮಕ್ಕಳ ಆರೈಕೆಯಲ್ಲಿದ್ದರೆ, ಅಪ್ಪ ತುತ್ತಿನ ಚೀಲಕ್ಕಾಗಿ ಹೋರಾಡುತ್ತಿದ್ದ. ಇದೀಗ ತಂದೆಯೂ ಹಾಸಿಗೆ ಹಿಡಿದಿದ್ದಾರೆ. 2 ಬುದ್ಧಿಮಾಂದ್ಯ ಮಕ್ಕಳ ಜೊತೆ ಆ ತಾಯಿಗೆ ಕೈಕಾಲಾಡದ ಗಂಡನೂ ಮಗುವಾಗಿದ್ದಾರೆ. ಈ ಸ್ಟೋರಿ ಓದಿದ ಮೇಲೆ ಕಲ್ಲಿನ ದೇವರು ನಿಜಕ್ಕೂ ಕಲ್ಲೇ ಎಂದು ಅನ್ನಿಸದೆ ಇರದು.

    ಸದಾ ಹಸನ್ಮುಖಿ ಮಗಳು. ಕೂತಲ್ಲಿಂದ ಮೇಲೇಳದ ಮಗ. ಪಾರ್ಶ್ವವಾಯುವಿನಿಂದ ಬಳಲುತ್ತಿರೋ ಅಪ್ಪ. ಕಟ್ಕೊಂಡ ಗಂಡ, ಹೆತ್ತ ಮಕ್ಕಳ ಸ್ಥಿತಿ ಕಂಡು ಕಣ್ಣೀರಿಡುತ್ತಿರುವ ಅಮ್ಮ. ವಿಧಿಯ ಕಣ್ಣಾಮುಚ್ಚಾಲೆ ಆಟಕ್ಕೆ ಈ ಕುಟುಂಬ ನೊಂದು-ಬೆಂದು, ಬಳಲಿ ಬೆಂಡಾಗಿದೆ. ನಮ್ಮ ಶತ್ರುಗಳಿಗೂ ಈ ಸ್ಥಿತಿ ಬರೋದು ಬೇಡ. ಇದು ಮಲೆನಾಡ ಶ್ರಮಜೀವಿ ಹಾಗೂ ಸ್ವಾಭಿಮಾನಿ ಸುಂದರ್ ಕುಟುಂಬ ಘನಘೋರ ಕಥೆ. ಇರೋ ಇಬ್ಬರು ಮಕ್ಕಳು ಚಿಕ್ಕವರಲ್ಲ. ಮಗನಿಗೆ 29 ವರ್ಷ. ಮಗಳಿಗೆ 24 ವರ್ಷ ವಯಸ್ಸು. ವಿಧಿಯಾಟಕ್ಕೆ ಇಬ್ಬರೂ ದೈಹಿಕ ಹಾಗೂ ಮಾನಸಿಕವಾಗಿ ಬಲವಿಲ್ಲದೆ ಬಳಲುತ್ತಿದ್ದಾರೆ.

    ಮೂರು ದಶಕಗಳಿಂದ 2 ಮಕ್ಕಳ ಸಾಕುವುದಕ್ಕೆ ಸುಂದರ್-ಅರುಣ ದಂಪತಿ ಪಟ್ಟ ಕಷ್ಟ ಹೇಳಲು ಪದ ಸಾಲದು. ಮಕ್ಕಳ ಒಂದೊಂದು ಹೆಜ್ಜೆಯ ಹಿಂದೆಯೂ ದೈವಸ್ವರೂಪಿ ಅಮ್ಮನ ನೆರಳಿದೆ. ಹಾಗಾಗಿ ಅಮ್ಮನದ್ದು ಅಕ್ಷರಶಃ ಗೃಹಬಂಧನ. ಅಮ್ಮ ಮಕ್ಕಳ ನೋಡ್ಕೊಂಡ್ರೆ, ಮಕ್ಕಳ ಮೆಡಿಸನ್ ಹಾಗೂ ತುತ್ತಿನ ಚೀಲಕ್ಕಾಗಿ 3 ದಶಕಗಳಿಂದ ದಣಿವರಿಯದ ದುಡಿಮೆ ಅಪ್ಪನದ್ದು. ಆದರೆ ಪಾಪಿ ಕೊರೊನಾ ಕಾಟಕ್ಕೆ ತಿಂಗಳಿಂದ ಮನೆಯಲ್ಲಿದ್ದ ಅಪ್ಪನೂ ಪಾಶ್ರ್ವವಾಯುವಿನಿಂದ ಹಾಸಿಗೆ ಹಿಡಿದಿದ್ದಾರೆ. ಹಾಸಿಗೆಯಿಂದ ಏಳಲಾಗದೆ, ಮಾತನಾಡಲಾಗದೆ ವಿಧಿಗೆ ಹಿಡಿಶಾಪ ಹಾಕೊಂಡ್ ಮೌನಕ್ಕೆ ಜಾರಿದ್ದಾರೆ.

    ಮನುಷ್ಯನಿಗೆ ಜೀವನದಲ್ಲಿ ಒಂದೋ-ಎರಡೋ ಕಷ್ಟ ಬಂದರೆ ಎದುರಿಸಿ, ಜಯಿಸಬಹುದು. ಮೇಲಿಂದ ಮೇಲೆ ಕಷ್ಟಗಳು ಬಂದರೆ ಎಂತವರಿಗೂ ಗೆಲುವು ಸಾಧಿಸುವುದು ಅಸಾಧ್ಯ. ಈ ಕುಟುಂಬ ಕಥೆ ಅದಕ್ಕಿಂತ ಭಿನ್ನವಾಗೇನಿಲ್ಲ. 2019ರ ವರುಣನ ರಣರುದ್ರ ಪ್ರವಾಹಕ್ಕೆ ಮನೆ-ಮಠ ಬಿಟ್ಟು 3 ಕಿ.ಮೀ. ಮಕ್ಕಳನ್ನ ಹೆಗಲ ಮೇಲಾಕ್ಕೊಂಡ್ ಬಂದು ನಿರಾಶ್ರಿತ ಕೇಂದ್ರ ಸೇರಿದರು. 2 ತಿಂಗಳ ಬಳಿಕ ಮನೆ ಸೇರಿ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಎದುರಾಗಿದ್ದೆ ಕಣ್ಣಿಗೆ ಕಾಣದ ನರಹಂತಕ ಕೊರೊನಾ. ತಿಂಗಳಿಂದ ದುಡಿಮೆ ಇಲ್ಲ. ಕೆಲಸಕ್ಕೆ ಹೋಗಂಗಿಲ್ಲ. ತುತ್ತು ಅನ್ನಕ್ಕಾಗಿ ಪರದಾಡಿದ ಪರಿಪಾಟಲು ಅಷ್ಟಿಷ್ಟಲ್ಲ. ಮಕ್ಕಳನ್ನೂ ಸಂಭಾಳಿಸಬೇಕು. ಅವರ ಹೊಟ್ಟೆ ತುಂಬಿಸಬೇಕು. ತೋಳಲ್ಲಿ ಶಕ್ತಿ ಇದೆ. ದುಡಿಯೋ ಚೈತನ್ಯ-ಹುಮ್ಮಸ್ಸು ಎರಡೂ ಇದೆ. ಆದರೆ ಲಾಕ್‍ಡೌನ್‍ನಿಂದಾಗಿ ಕೆಲಸಕ್ಕೆ ಹೋಗಂಗಿಲ್ಲ. ಸಂಪಾದನೆಯೂ ಇಲ್ಲ. ಹಾಗಾಗಿ ಚಿಂತಾಕ್ರಾಂತನಾಗಿದ್ದ ಸುಂದರ್ ಇದೀಗ, ಪಾರ್ಶ್ವವಾಯುವಿಗೆ ತುತ್ತಾಗಿ ಬಲಗೈ, ಬಲಗಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಆ ತಾಯಿ ಮಕ್ಕಳ ನೋಡ್ತಾಳೋ, ಗಂಡನ ನೋಡ್ತಾಳೋ, ದುಡಿಯುತ್ತಾಳೋ ಯಾವುದೊಂದು ಅಸಾಧ್ಯ. ಇದರಿಂದಾಗಿ ಬಾಗಿಲ ಹೊಸ್ತಿಲ ಬಳಿ ನಿಂತು ದಾನಿಗಳ ದಾರಿ ಕಾಯ್ತಿದ್ದಾರೆ ಆ ತಾಯಿ.

    ಒಂದೆಡೆ ಕಲ್ಲಿನ ದೇವರು ಕಲ್ಲೇ ಅನ್ನೋದಕ್ಕೆ ಸಾಕ್ಷಿ. ಮತ್ತೊಂದೆಡೆ ವಿಧಿಗೆ ಸೆಡ್ಡು ಹೊಡೆದಿದ್ದವರ ಬದುಕಿನ ಮೇಲೆ ವಿಧಿಯ ಮತ್ತೊಂದು ಸವಾರಿ. ಮಗದೊಡೆ ಬದುಕು, ಬದುಕುವ ಆಸೆಯನ್ನ ಕಿತ್ತು ತಿನ್ನುಂತಿರೋ ಕೊರೊನಾ. ಈ ಕುಟುಂಬ ಸ್ಥಿತಿ ನಮ್ಮ ಶತ್ರುಗೂ ಬರಬಾರದರು. ವಯಸ್ಸಿಗೆ ಬಂದ ಮಕ್ಕಳಲ್ಲಿ ಚೈತನ್ಯವಿಲ್ಲ. ದುಡಿಯೋ ಅಪ್ಪನ ತೋಳ ರಟ್ಟೆಯಲ್ಲಿ ಶಕ್ತಿ ಇಲ್ಲ. ಮಕ್ಕಳು-ಗಂಡನ ಸಾಕೋ ಹಠವಿರೋ ಅಮ್ಮನಿಗೆ ಪರಿಸ್ಥಿತಿ-ವಯಸ್ಸು ಎರಡೂ ಸಪೋರ್ಟ್ ಮಾಡುತ್ತಿಲ್ಲ. ಹಾಗಾಗಿ ಕಣ್ಣೀರಲ್ಲೇ ಕೈ ತೊಳೆಯುತ್ತಿರೋ ಈ ಕುಟುಂಬಕ್ಕೆ ತುಂಬು ಹೃದಯದ ದಾನಿಗಳ ನೆರವು ಬೇಕಿದೆ.