Tag: family

  • ಪ್ರೇಮ ವೈಫಲ್ಯ- ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಯುವ ಪ್ರೇಮಿಗಳು

    ಪ್ರೇಮ ವೈಫಲ್ಯ- ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಯುವ ಪ್ರೇಮಿಗಳು

    ಕೊಪ್ಪಳ: ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಜೆ.ರಾಂಪೂರು ಸೀಮಾದಲ್ಲಿ ನಡೆದಿದೆ.

    ಕುಷ್ಟಗಿ ತಾಲೂಕಿನ ಮಾದಾಪೂರ ಗ್ರಾಮದ ವೀರೂಪಾಕ್ಷಗೌಡ (21) ಹಾಗೂ ಹುಲಿಗೇಮ್ಮ (18) ಆತ್ಮಹತ್ಯೆಗೆ ಶರಣಾಗಿರುವ ಯುವ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಈ ಇಬ್ಬರು ಪ್ರೇಮಿಗಳು ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಪ್ರೇಮಿಗಳಿಬ್ಬರ ಮನೆಯಲ್ಲಿ ಪ್ರೇಮ ವಿವಾಹಕ್ಕೆ ನಿರಾಕರಿಸಿದ್ದರು. ಇಬ್ಬರು ಅನ್ಯ ಜಾತಿಗೆ ಸೇರಿದವರಾಗಿದ್ದರು. ಇದಕ್ಕಾಗಿ ಮನೆಯವರು ಮದುವೆ ಬೇಡ ಎಂದಿದ್ದಾರೆ. ಇದರಿಂದ ಮನನೊಂದ ಪ್ರೇಮಿಗಳು ಜಮೀನೊಂದರಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ತಾವರಗೇರಾ ಪಿಎಸ್‍ಐ ಗೀತಾಂಜಲಿ ಶಿಂಧೆ ಹಾಗೂ ಸಿಪಿಐ ಚಂದ್ರಶೇಖರ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

  • ಲಾರಿ, ಆಟೋ ಡಿಕ್ಕಿ – ಅಂತಿಮ ದರ್ಶನ ಪಡೆದು ವಾಪಸ್ ಬರ್ತಿದ್ದ ಐವರು ದುರ್ಮರಣ

    ಲಾರಿ, ಆಟೋ ಡಿಕ್ಕಿ – ಅಂತಿಮ ದರ್ಶನ ಪಡೆದು ವಾಪಸ್ ಬರ್ತಿದ್ದ ಐವರು ದುರ್ಮರಣ

    – ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಸಂಬಂಧಿ

    ಹೈದರಾಬಾದ್: ಸಂಬಂಧಿಯೊಬ್ಬರ ಅಂತಿಮ ದರ್ಶನ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದ್ದು, ಐವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಲಾರಿ ಮತ್ತು ಆಟೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದಾರೆ. ವೆಂಕಟರಮಣ (65), ಪಾರ್ವತಮ್ಮ (60), ಸುಜಾತಮ್ಮ (58), ರೆಡ್ಡಿ ಗೋವರ್ಧನಿ (21) ಮತ್ತು ದಾಮೋದರ್ ಮೃತ ದುರ್ದೈವಿಗಳು.

    ಮೃತರು ಸಂಬಂಧಿಕರೊಬ್ಬರ ಅಂತಿಮ ದರ್ಶನ ಪಡೆಯಲು ಹೋಗಿದ್ದರು. ಅವರು ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಮುಗಿಸಿಕೊಂಡು ವಾಪಸ್ ಆಟೋದಲ್ಲಿ ಬರುತ್ತಿದ್ದರು. ಈ ವೇಳೆ ಚಿತ್ತೂರು ಜಿಲ್ಲೆಯ ಕೊತ್ತ ಗುಂಡ್ಲಪಲ್ಲಿ ವಯಲದಲ್ಲಿ ವೇಗವಾಗಿ ಬರುತ್ತಿದ್ದ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ.

    ಪರಿಣಾಮ ವೆಂಕಟರಮಣ, ಪರ್ವತಮ್ಮ, ಸುಜಾತಮ್ಮ ಮತ್ತು ರೆಡ್ಡಿ ಗೋವರ್ಧನಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಸ್ಥಳೀಯರು ಮತ್ತು ಪೊಲೀಸರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ದಾಮೋದರ್ ಮೃತಪಟ್ಟಿದ್ದಾರೆ.

    ಸದ್ಯಕ್ಕೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ನೀಲಾವತಿ ಮತ್ತು ಪುಷ್ಪಾವತಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಕೊಡಗಿನಲ್ಲಿ ಕೊರೊನಾ ವಾರಿಯರ್ಸ್‍ಗೆ ಮನೆಗೆ ಹೋಗಲು ಆತಂಕ!

    ಕೊಡಗಿನಲ್ಲಿ ಕೊರೊನಾ ವಾರಿಯರ್ಸ್‍ಗೆ ಮನೆಗೆ ಹೋಗಲು ಆತಂಕ!

    ಮಡಿಕೇರಿ: ಕೊರೊನಾ ಮಹಾಮಾರಿಯಿಂದ ಎಷ್ಟೋ ಕುಟುಂಬಗಳು ದುಡಿಮೆಯೂ ಇಲ್ಲದೆ ಕಷ್ಟದಲ್ಲೇ ಜೀವನ ಸಾಗಿಸುತ್ತಿವೆ. ಅಂತಹವರಿಗೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಸಹಾಯವನ್ನು ಮಾಡುತ್ತಿವೆ. ಆದರೆ ಕೊರೊನಾ ವಾರ್ಡ್‍ಗಳಲ್ಲೇ ಕೆಲಸ ಮಾಡುತ್ತಿರುವವರಿಗೆ ಪ್ರತ್ಯೇಕ ವಸತಿ ಸೌಲಭ್ಯವಿಲ್ಲದೆ ಮನೆಯವರೊಂದಿಗೆ ಆತಂಕದಿಂದಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಾವೇ ನಮ್ಮ ಮನೆಗಳಿಗೆ ಕೊರೊನಾ ಮಹಾಮಾರಿಯನ್ನು ತಂದುಬಿಡ್ತೇವಾ ಎಂಬ ಆಂತಕ ಕೊರೊನಾ ವಾರಿಯರ್ಸ್‍ಗೆ ಕಾಡುತ್ತಿದೆ.

    ಕೊರೊನಾ ರೋಗದ ವಿರುದ್ಧವೇ ಹೋರಾಡುತ್ತಾ, ರೋಗಿಗಳಿಗೆ ಶ್ರುಶೂಷೆ ಮಾಡುತ್ತಿರುವವರ ಧೈರ್ಯ, ಸ್ಥೈರ್ಯವನ್ನು ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಿರುವವರನ್ನು ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗಬೇಕಾಗಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿರುವ ವಾರಿಯರ್ಸ್, ಕೊರೊನಾ ವಾರ್ಡ್‍ಗಳಲ್ಲಿ ಕೆಲಸ ಮಾಡುವವರಿಗೆ ಪಿಪಿಇ ಕಿಟ್ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರುತ್ತೇವೆ. ಆದರೆ ಮನೆಯಲ್ಲಿ ವಯಸ್ಸಾದ ತಮ್ಮ ತಂದೆ, ತಾಯಿಗಳು, ಪುಟಾಣಿ ಮಕ್ಕಳು ಇರುತ್ತಾರೆ. ಹೀಗಾಗಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಹೋಗುವುದಾದರೆ ಬೀದಿಯಲ್ಲಿರುವ ಮಹಾಮಾರಿಯನ್ನು ನಾವೇ ಮನೆಗೆ ಕರೆದುಕೊಂಡು ಹೋದಂತೆ ಆಗುತ್ತದೆ.

    ಒಂದೊಮ್ಮೆ ಹಾಗೇನಾದರೂ ಆದರೆ ನಮ್ಮ ಸ್ಥಿತಿ ಏನು? ಬಿಪಿ, ಶುಗರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಯಲ್ಲಿದ್ದಾರೆ. ಇದರಿಂದ ಗಂಭೀರ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ ಎಂದು ಕೊರೊನಾ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿರುವ ನಾನ ಕ್ಲಿನಿಕ್ ಸಿಬ್ಬಂದಿಗಳ ಮತ್ತು ಪೋಷಕರ ಆತಂಕವಾಗಿದೆ.

    ಅಧಿಕಾರಗಳ ಗಮನಕ್ಕೆ ತಂದ ಪಬ್ಲಿಕ್: ಕೋವಿಡ್ ವಾರ್ಡ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳ ಈ ಸಮಸ್ಯೆಯನ್ನು ಪಬ್ಲಿಕ್ ಟಿವಿ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಕೂಡಲೇ ಈ ಕುರಿತು ಎಚ್ಚೆತ್ತ ಮೆಡಿಕಲ್ ಕಾಲೇಜಿನ ಅಧಿಕಾರಿಗಳು, ಕೋವಿಡ್ ವಾರ್ಡ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಜಿಲ್ಲಾಡಳಿತದಿಂದಲೇ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಬಯಸಿದರೆ ಹಾಸ್ಟೆಲ್ ಅಥವಾ ಕ್ವಾಟ್ರಸ್‍ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಅಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಅಗತ್ಯವಿರುವವರು ತನ್ನ ಹೆಸರನ್ನು ನೊಂದಾಯಿಸಿಕೊಂಡರೆ ಪ್ರತ್ಯೇಕ ವಸತಿ ಸಮೀಕ್ಷೆ ಮಾಡಲಾಗುವುದು ಎಂದು ಸೂಪರಿಡೆಂಟ್ ಆಫ್ ಮೆಡಿಕಲ್ ಸ್ಟ್ಯಾಫ್ ಲೋಕೇಶ್ ಅವರು ಸಮಸ್ಯೆ ಬಗ್ಗೆ ಹರಿಸುತ್ತೇವೆ ಎಂದಿದ್ದಾರೆ.

  • ಇಂದು ಹಸೆಮಣೆ ಏರಬೇಕಿದ್ದ ಮದುಮಗ ಕಾನ್‌ಸ್ಟೇಬಲ್‌ಗೆ ಕೊರೊನಾ

    ಇಂದು ಹಸೆಮಣೆ ಏರಬೇಕಿದ್ದ ಮದುಮಗ ಕಾನ್‌ಸ್ಟೇಬಲ್‌ಗೆ ಕೊರೊನಾ

    – ಮದುಮಗ ಆಸ್ಪತ್ರೆಗೆ, ಸಂಬಂಧಿಕರು ಕ್ವಾರಂಟೈನ್‍ಗೆ

    ವಿಜಯಪುರ: ಜಿಲ್ಲೆಯಲ್ಲಿ ಮದುವೆ ಮನೆಗೆ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ಮದುಮಗನಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿದೆ.

    ವಿವಾಹವಾಗಲು ಹೊರಟಿದ್ದ ಪೊಲೀಸ್ ಕಾನ್‌ಸ್ಟೇಬಲ್‌ಗೆ ಸೋಂಕು ತಗುಲಿದ್ದು, ಹಸೆಮಣೆ ಏರಬೇಕಿದ್ದ ಮದುಮಗ ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ ಇಂದು ನಡೆಯಬೇಕಿದ್ದ ಮದುವೆಯನ್ನು ರದ್ದು ಮಾಡಲಾಗಿದೆ. ಮದುಮಗ ಆಸ್ಪತ್ರೆಗೆ ಹೋಗಿದ್ದು, ಕಾನ್‌ಸ್ಟೇಬಲ್‌ ಸಂಪರ್ಕಕ್ಕೆ ಬಂದವರು ಹಾಗೂ ಸಂಬಂಧಿಕರು ಕ್ವಾರಂಟೈನ್‍ಗೆ ಹೋಗಿದ್ದಾರೆ.

    26 ವರ್ಷದ ಪೊಲೀಸ್ ಕಾನ್‌ಸ್ಟೇಬಲ್‌ನಲ್ಲಿ ಕೊರೊನಾ ಪತ್ತೆಯಾಗಿದ್ದು, ಈ ಪೊಲೀಸ್ ಪೇದೆ ಬೆಂಗಳೂರಿನ ಕಮಿಷಿನರೇಟ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮದುವೆ ಹಿನ್ನೆಲೆಯಲ್ಲಿ ರಜೆ ಪಡೆದು ವಿಜಯಪುರಕ್ಕೆ ಬಂದಿದ್ದರು. ಆಗ ಆರೋಗ್ಯ ಇಲಾಖೆ ಸ್ವಾಬ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳಿಸಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಮನೆಯವರನ್ನು ಮನವೊಲಿಸಿ ಮದುವೆ ಮುಂದೂಡಿಸಲಾಗಿದೆ ಎಂದು ಡಿಸಿ ವೈ.ಎಸ್.ಪಾಟೀಲ್ ತಿಳಿಸಿದರು.

    ಸೋಂಕಿತ ಕಾನ್‌ಸ್ಟೇಬಲ್‌ ಸಂಪರ್ಕಕ್ಕೆ ಬಂದ 30 ಜನರ ಸ್ವ್ಯಾಬ್ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದಾರೆ. ಒಟ್ಟಿನಲ್ಲಿ ಇಂದು ಮದುವೆ ಸಂಭ್ರಮದಲ್ಲಿರಬೇಕಾದ ಮದುವೆ ಮನೆಯಲ್ಲಿ ಕೊರೊನಾ ನೆರಳು ಬಿದ್ದಿದೆ.

  • ಬೆಂಗ್ಳೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಬೆಂಗ್ಳೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಬೆಂಗಳೂರು: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂಟೌನ್ ವ್ಯಾಪ್ತಿಯ ಅನಂತಪುರದಲ್ಲಿ ನಡೆದಿದೆ.

    ಅನಂತಪುರ ನಿವಾಸಿ ಮುನಿ ವೆಂಕಟಪ್ಪ (54), ಪತ್ನಿ ನಾಗಮಣಿ (50) ಮತ್ತು ಮಗ ರವಿ ಕುಮಾರ್ (27) ನೇಣಿಗೆ ಶರಣಾದ ಕುಟುಂಬ. ಗಂಡ, ಹೆಂಡತಿ ಹಾಗೂ ಮಗ ಮೂವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ವೆಂಕಟಪ್ಪ ಕುಟುಂಬ ಯಲಹಂಕ ಉಪನಗರದಲ್ಲಿ ವಾಸವಿದ್ದರು. ವೆಂಕಟಪ್ಪ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ತಂದೆಗೆ ಮಗ ರವಿ ಕುಮಾರ್ ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ವೆಂಕಟಪ್ಪ ತಮ್ಮ ಸ್ನೇಹಿತರ ಬಳಿ ಲಕ್ಷಾಂತರ ಸಾಲ ಪಡೆದಿದ್ದ. ಆದರೆ ಅದನ್ನು ವಾಪಸ್ಸು ಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಇದರಿಂದ ನೊಂದು ಪತ್ನಿ ಮತ್ತು ಮಗನ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಯಲಹಂಕ ನ್ಯೂಟೌನ್ ಠಾಣಾ ಪೊಲೀಸರು ಮೂವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಸರ್ಕಾರದ ನಿರ್ಧಾರದಿಂದ 2,000 ಕುಟುಂಬಗಳು ಬೀದಿಗೆ ಬರುವ ದುಸ್ಥಿತಿ

    ಸರ್ಕಾರದ ನಿರ್ಧಾರದಿಂದ 2,000 ಕುಟುಂಬಗಳು ಬೀದಿಗೆ ಬರುವ ದುಸ್ಥಿತಿ

    – ಸರ್ಕಾರದ ನಿರ್ಧಾರ ಖಂಡಿಸಿ ಕಂಕನವಾಡಿ ಪಟ್ಟಣ ಬಂದ್

    ಚಿಕ್ಕೋಡಿ(ಬೆಳಗಾವಿ): ಒಂದು ಕಡೆ ಆ ಗ್ರಾಮಸ್ಥರಿಗೆ ಸರ್ಕಾರನೇ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಅಲ್ಲದೇ ಸರ್ಕಾರದ ಯೋಜನೆಯಡಿ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ಈಗ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಸರ್ಕಾರದ ತೀರ್ಮಾನದಿಂದ ಇಡೀ ಪಟ್ಟಣದ ಜನರೇ ಬೀದಿಗೆ ಬರುವ ಸ್ಥಿತಿ ಬಂದಿದೆ.

    ಕಳೆದ 40 ವರ್ಷಗಳಿಂದ ನೆಮ್ಮದಿಯಿಂದ ಇದ್ದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮಸ್ಥರ ಜನರ ಪರಿಸ್ಥಿತಿ ಈಗ ಸರ್ಕಾರದ ಒಂದು ನಿರ್ಧಾರದಿಂದ ಬೀದಿಗೆ ಬಂದು ನಿಲ್ಲುವ ಸ್ಥಿತಿ ಬಂದೊದಗಿದೆ. ಕಳೆದ 40 ವರ್ಷಗಳಿಂದ ಕಂಕನವಾಡಿ ಗ್ರಾಮದ ಗೈರಾಣು ಜಮೀನಿನಲ್ಲಿ ವಾಸವಿದ್ದ 2,000 ಕುಟುಂಬಗಳಿಗೆ ಸರ್ಕಾರನೇ ಮೂಲಭೂತ ಸೌಕರ್ಯಗಳನ್ನ ನೀಡಿ ಆಶ್ರಯ ಯೋಜನೆಯಲ್ಲೂ ಮನೆ ನಿರ್ಮಿಸಿ ಕೊಟ್ಟಿದೆ.

    ಆದರೆ ಈಗ ಏಕಾಏಕಿ ಗೈರಾಣು ಜಮೀನನ್ನ ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ. ಇದರಿಂದ ಮನೆಗಳನ್ನು ಈಗ ಖಾಲಿ ಮಾಡಿಸುವಂತೆ ರಾಯಬಾಗ ತಾಲೂಕಾಡಳಿತ ಸೂಚನೆ ನೀಡಿರುವ ಕಾರಣ ಈಗ ಕಂಕನವಾಡಿ ಪಟ್ಟಣದ ಶೇ.75 ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿಯಲ್ಲಿವೆ. ರಾಯಬಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಅವರು ಈಗ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಪ್ರಶ್ನೆ ಕೇಳದ ಕಾರಣ ಸರ್ಕಾರ ಜಮೀನನ್ನು ಖಾಲಿ ಮಾಡಿಸಲು ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಅಲ್ಲದೇ ಸರ್ಕಾರದ ನೀತಿಯನ್ನು ಖಂಡಿಸಿ ಈಡಿ ಪಟ್ಟಣವನ್ನೇ ಬಂದ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ತಕ್ಷಣವೇ ಅಕ್ರಮ ಸಕ್ರಮದಡಿ ಗೈರಾಣ ಜಮೀನನಲ್ಲೇ ನಮಗೆ ವಾಸವಿರಲು ಅವಕಾಶ ಮಾಡಿಕೊಡುವಂತೆ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ 40 ವರ್ಷಗಳ ಕಾಲ ಈ ಗ್ರಾಮಸ್ಥರಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನ ಕೊಟ್ಟು ಈಗ ಏಕಾಏಕಿ ಮನೆಗಳನ್ನು ಖಾಲಿ ಮಾಡಿಸಲು ಮುಂದಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ಅಪ್ರಾಪ್ತೆ ಸೋದರಿಯನ್ನೇ ಕೊಂದ ಅಣ್ಣ- ಅರ್ಧ ತಿಂದ ಶವ ಪತ್ತೆ

    ಅಪ್ರಾಪ್ತೆ ಸೋದರಿಯನ್ನೇ ಕೊಂದ ಅಣ್ಣ- ಅರ್ಧ ತಿಂದ ಶವ ಪತ್ತೆ

    – ಸ್ಥಳೀಯ ಯುವಕನೊಂದಿಗೆ 16ರ ಹುಡುಗಿ ಲವ್

    ಮುಂಬೈ: ಸ್ಥಳೀಯ ಯುವಕನನ್ನು ಪ್ರೀತಿಸಿದ್ದಕ್ಕೆ 16 ವರ್ಷದ ಅಪ್ರಾಪ್ತೆಯನ್ನು ಆಕೆಯ ಸಹೋದರನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ.

    ಡೆಗ್ಲೂರ್ ತಾಲೂಕಿನ ಧಮಗಾಂವ್‍ನಲ್ಲಿ ಈ ಘಟನೆ ನಡೆದಿದ್ದು, ಮೃತಳನ್ನು ಕಲ್ಪನಾ ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆರೋಪಿ ಅನಿಲ್ ಸೂರ್ಯವಂಶಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಕಲ್ಪನಾ ಸೂರ್ಯವಂಶಿ ಜೂನ್ 20 ರಂದು ನಾಪತ್ತೆಯಾಗಿದ್ದಳು. ಆದರೆ ಎರಡು ದಿನದ ನಂತರ ಜೂನ್ 22 ರಂದು ಆಕೆಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ನರಿಗಳು ಮತ್ತು ನಾಯಿಗಳು ಭಾಗಶಃ ತಿಂದಿದ್ದವು. ನಂತರ ನಾಂದೇಡ್ ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಂಡಿದ್ದು, ಈ ಕೊಲೆಯನ್ನು ಮರ್ಯಾದಾ ಹತ್ಯೆಯ ಪ್ರಕರಣ ಎಂದು ಶಂಕಿಸಿದ್ದರು.

    ಕಲ್ಪನಾ ಸೂರ್ಯವಂಶಿ ಮೃತದೇಹ ಪತ್ತೆಯಾದ ನಂತರ ಆಕೆಯ ತಾಯಿ ಸ್ಥಳೀಯ ಯುವಕನ ವಿರುದ್ಧ ಕೊಲೆ ಆರೋಪ ಮಾಡಿದ್ದರು. ನನ್ನ ಮಗಳು ಮತ್ತು ಯುವಕ ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ದರಿಂದ ಆತನೇ ಕೊಂದಿರಬೇಕು ಎಂದು ಆರೋಪಿಸಿದ್ದರು. ನಂತರ ಆಕೆಯ ಪ್ರಿಯಕರನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದರು.

    ಇತ್ತ ಮಗಳು ನಾಪತ್ತೆಯಾದರೂ ಕುಟುಂಬದವರು ದೂರು ದಾಖಲಿಸದ ಕಾರಣ ತನಿಖಾ ಅಧಿಕಾರಿಗಳು ಕುಟುಂಬದವರ ಮೇಲೆ ಅನುಮಾನಗೊಂಡಿದ್ದಾರೆ. ಈ ಕೊಲೆಯಲ್ಲಿ ಕುಟುಂಬದ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

    ಕಲ್ಪನಾ ಅಂತ್ಯ ಸಂಸ್ಕಾರದ ನಂತರ ಪೊಲೀಸರು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿದ ನಂತರ ಮೃತ ಹುಡುಗಿಯ ಸಹೋದರ ಅನಿಲ್ ಸೂರ್ಯವಂಶಿ (26) ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಲ್ಪನಾ ಸ್ಥಳೀಯ ಯುವಕನನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರ ಸಂಬಂಧವನ್ನು ನಮ್ಮ ಕುಟುಂಬದವರು ವಿರೋಧಿಸಿದ್ದರು. ಹೀಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

    ಇದು ನಿಜಕ್ಕೂ ಮರ್ಯಾದಾ ಹತ್ಯೆ ಪ್ರಕರಣ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ಆತನನ್ನು ಜೂನ್ 30ರವರೆಗೂ ಪೊಲೀಸ್ ಕಸ್ಟಡಿಯಲ್ಲಿರುವಂತೆ ಆದೇಶಿಸಿದೆ ಎಂದು ಇನ್ಸ್ ಪೆಕ್ಟರ್ ದ್ವಾರಕದಾಸ್ ಚಿಖ್ಲಿಕರ್ ತಿಳಿಸಿದ್ದಾರೆ.

  • ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಕೊರೊನಾ ಚಿಕಿತ್ಸೆ ನೀಡಿ- ಪಿಎಂಗೆ ಸಂಸದ ಚಂದ್ರಶೇಖರ್ ಪತ್ರ

    ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಕೊರೊನಾ ಚಿಕಿತ್ಸೆ ನೀಡಿ- ಪಿಎಂಗೆ ಸಂಸದ ಚಂದ್ರಶೇಖರ್ ಪತ್ರ

    – ಪತ್ರದಲ್ಲಿ ಕರ್ನಾಟಕ ಮಾದರಿಯ ಉಲ್ಲೇಖ

    ನವದೆಹಲಿ: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಬಡ ವರ್ಗದ ಜನರು ಮತ್ತು ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಉಚಿತ ಚಿಕಿತ್ಸೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯಸಭೆ ಸಂಸದ ಜಿ.ಸಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.

    ಈ ಸಂಬಂಧ ಪತ್ರ ಬರೆದಿರುವ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಬಡವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಕೊರೊನಾ ಸೋಂಕಿಗೆ ಸ್ವತಃ ಹಣ ಖರ್ಚು ಮಾಡಿ ಚಿಕಿತ್ಸೆಗೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ ಬಿಪಿಎಲ್ ಪಡಿತರ ಕಾರ್ಡು ಹೊಂದಿದ ಕುಟುಂಬಗಳಿಗೆ ಉಚಿತ ಚಿಕಿತ್ಸೆ ನೀಡಲು ಆದೇಶಿಸುವಂತೆ ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ಅವರು ಉಲ್ಲೇಖಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಉಚಿತ ಚಿಕಿತ್ಸೆ ನೀಡುವ ಬಗ್ಗೆ ಸಲಹೆ ನೀಡಿದ್ದೆ. ಕರ್ನಾಟಕ ಸರ್ಕಾರ ತಮ್ಮ ಸಲಹೆಯನ್ನು ಒಪ್ಪಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರ ಕರ್ನಾಟಕದ ಮಾದರಿಯನ್ನು ಅಳವಡಿಸಿಕೊಂಡು ದೇಶಾದ್ಯಂತ ಬಡವರಿಗೆ ಉಚಿತವಾಗಿ ಸಿಗುವಂತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

    ಕರ್ನಾಟಕ ಸರ್ಕಾರ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲೆಂದು ‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ ರಚಿಸಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವ ಜಿ.ಸಿ. ಚಂದ್ರಶೇಖರ್, ಇದೇ ರೀತಿ ದೇಶವ್ಯಾಪ್ತಿ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು ಎಂದು ಜಿ.ಸಿ. ಚಂದ್ರಶೇಖರ್ ಹೇಳಿದ್ದಾರೆ.

  • 40 ವರ್ಷಗಳ ನಂತ್ರ ಕಾವೇರಿಯಲ್ಲಿ ಈಜಾಡಿದ ಡಿಕೆಶಿ

    40 ವರ್ಷಗಳ ನಂತ್ರ ಕಾವೇರಿಯಲ್ಲಿ ಈಜಾಡಿದ ಡಿಕೆಶಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರೋಬ್ಬರಿ 40 ವರ್ಷಗಳ ನಂತರ ಕಾವೇರಿ ನದಿಯಲ್ಲಿ ಈಜಾಡಿ ಸ್ವಲ್ಪ ಕಾಲ ಕಳೆದಿದ್ದಾರೆ. ಇದನ್ನೂ ಓದಿ: ಹೊಸ ಸೈಕಲ್ ಖರೀದಿಸಿದ ಸಿದ್ದರಾಮಯ್ಯ 

    ಡಿ.ಕೆ.ಶಿವಕುಮಾರ್ ಭಾನುವಾರ ಕಾವೇರಿ ನದಿಯಲ್ಲಿ ಈಜಾಡಿ ಕೆಲ ಸಮಯ ಕಳೆದಿದ್ದಾರೆ. ಈ ವೇಳೆ ತಮ್ಮ ಶಾಲಾ, ಕಾಲೇಜು ದಿನ ಮತ್ತು ತಂದೆಯ ಜೊತೆ ಕಾಲ ಕಳೆದಿದ್ದ ಕೆಲವು ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಡಿಕೆಶಿ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ.

    “40 ವರ್ಷಗಳ ನಂತರ ಭಾನುವಾರ ಸಂಜೆ 4:30ಕ್ಕೆ ನಮ್ಮ ಹಳ್ಳಿಯ ಬಳಿ ಕಾವೇರಿ ನದಿಯಲ್ಲಿ ಈಜಾಡಿ ನಾನು ಕೆಲ ಸಮಯ ಕಳೆದದ್ದು ನಿಜಕ್ಕೂ ಸಂತಸ ನೀಡಿದೆ. ನನ್ನ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಾನು ಮತ್ತು ನನ್ನ ತಂದೆಯೊಂದಿಗೆ ಇದೇ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದೆ. ನದಿಯಲ್ಲಿ ಈಜಾಡುತ್ತಿದ್ದ ಕ್ಷಣಗಳು ಮತ್ತೊಮ್ಮೆ ಕಣ್ಣ ಮುಂದೆ ಹಾದುಹೋದವು” ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

    ಅಷ್ಟೇ ಅಲ್ಲದೇ ಭಾನುವಾರ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಗ್ರಹಣ ಮುಗಿದ ನಂತರ, ತಮ್ಮ ಕುಟುಂಬದೊಂದಿಗೆ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ತಾವು ನದಿಯಲ್ಲಿ ಈಜುತ್ತಿರುವ ಮತ್ತು ಕುಟುಂಬದವರೊಂದಿಗೆ ಕ್ಲಿಕ್ಕಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

     

    ಇತ್ತೀಚೆಗಷ್ಟೆ ಡಿ.ಕೆ ಶಿವಕುಮಾರ್ ತನ್ನ ಮಗಳು ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯ ಕಾರ್ಯಕ್ರಮವನ್ನು ಸರಳವಾಗಿ ಮನೆಯಲ್ಲಿಯೇ ಮಾಡಿದ್ದರು. ಗುರು-ಹಿರಿಯ ಸಮ್ಮಖದಲ್ಲಿ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಗೂ ಮದುವೆ ನಿಶ್ಚಯವಾಗಿದೆ.

    ಈಗ ಕೇವಲ ಮದುವೆ ನಿಶ್ಚಯವಾಗಿದ್ದು, ಎರಡು ಕುಟುಂಬಗಳು ತಾಂಬೂಲ ಬದಲಿಸಿಕೊಂಡಿವೆ. ಆಷಾಢ ಕಳೆದ ನಂತರ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಸುವ ಸಂಬಂಧ ಮಾತುಕತೆ ನಡೆದಿದೆ. ಆಗಸ್ಟ್ ತಿಂಗಳಿನಲ್ಲಿ ಒಳ್ಳೆಯ ದಿನ ನೋಡಿ ನಿಶ್ಚಿತಾರ್ಥದ ದಿನಾಂಕ ನಿಗದಿ ಆಗಲಿದೆ. ಬಹುತೇಕ ಡಿಸೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

  • ಹುತಾತ್ಮ ಕರ್ನಲ್ ಕುಟುಂಬಕ್ಕೆ 5 ಕೋಟಿ ಪರಿಹಾರ- ಪತ್ನಿಗೆ ಸರ್ಕಾರಿ ಉದ್ಯೋಗ

    ಹುತಾತ್ಮ ಕರ್ನಲ್ ಕುಟುಂಬಕ್ಕೆ 5 ಕೋಟಿ ಪರಿಹಾರ- ಪತ್ನಿಗೆ ಸರ್ಕಾರಿ ಉದ್ಯೋಗ

    ಹೈದರಾಬಾದ್: ಲಡಾಖ್‍ನ ಗಾಲ್ವಾನ್ ಗಡಿಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಕುಟುಂಬಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಐದು ಕೋಟಿ ರೂ. ಪರಿಹಾರ ನೀಡುವುದಾಗಿ ಫೋಷಿಸಿದ್ದಾರೆ. ಇದನ್ನೂ ಓದಿ: ಮೊಳೆಗಳಿರುವ ಕಬ್ಬಿಣದ ರಾಡ್‌ಗಳಿಂದ ವೀರ ಯೋಧರ ಮೇಲೆ ಹಲ್ಲೆ – ಚೀನಾ ಪೈಶಾಚಿಕ ಕೃತ್ಯ ಬಯಲು

    ಸಿಎಂ ಕೆ.ಚಂದ್ರಶೇಖರ್ ರಾವ್ ಕರ್ನಲ್ ಸಂತೋಷ್ ಬಾಬು ಅವರ ಮನೆಗೆ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಐದು ಕೋಟಿ ರೂ. ಪರಿಹಾರದ ಜೊತೆಗೆ ಕುಟುಂಬಕ್ಕೆ ನಿವಾಸ ಮತ್ತು ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಣೆ ಮಾಡಿದರು. ಹುತಾತ್ಮರಾದ ಇತರ 19 ಸೈನಿಕರಿಗೆ ತಲಾ 10 ಲಕ್ಷ ರೂ.ಗಳನ್ನು ನೀಡಲಿದೆ ಎಂದು ಸಿಎಂ ರಾವ್ ಹೇಳಿದ್ದಾರೆ. ಇದನ್ನೂ ಓದಿ: ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ

    “ಇಡೀ ದೇಶವು ನಮ್ಮ ದೇಶದ ಗಡಿಗಳನ್ನು ಕಾಪಾಡುವ ಮಿಲಿಟರಿ ಸಿಬ್ಬಂದಿಯೊಂದಿಗೆ ನಿಲ್ಲಬೇಕು. ಹುತಾತ್ಮ ಯೋಧರ ಕುಟುಂಬಸ್ಥರೊಂದಿಗೆ ನಾವು ನಿಲ್ಲಬೇಕು. ಜೊತೆಗೆ ಕುಟುಂಬ ಸದಸ್ಯರಿಗೆ ಸಹಾಯ ಮಾಡಬೇಕು. ಇಂತಹ ಸಂದರ್ಭದಲ್ಲಿ ಸೈನ್ಯದ ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಇಡೀ ದೇಶ ಅವರೊಂದಿಗೆ ಇದೆ ಎಂಬ ಸಂದೇಶವನ್ನು ನಾವು ರವಾನಿಸಬೇಕು” ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರವು ಹುತಾತ್ಮರಾದ ಯೋಧ ಕುಟುಂಬದವರಿಗೆ ಸಹಾಯವನ್ನು ನೀಡುತ್ತದೆ. ಆದರೆ ರಾಜ್ಯಗಳು ಸಹ ಅವರಿಗೆ ಸಹಾಯ ಮಾಡಬೇಕು. ಆಗ ಮಾತ್ರ ಸೇನಾ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ದೇಶವು ನಮ್ಮ ಬೆಂಬಲವಾಗಿ ನಿಂತಿದ್ದಾರೆ ಎಂಬ ವಿಶ್ವಾಸವನ್ನು ಬರುತ್ತದೆ. ನಾವೆಲ್ಲರೂ ಒಟ್ಟಾಗಿ ರಕ್ಷಣಾ ಪಡೆಗಳ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದು ಸಿಎಂ ರಾವ್ ತಿಳಿಸಿದ್ದಾರೆ.

    ಗಾಲ್ವಾನ್ ನದಿ ಪ್ರದೇಶದಲ್ಲಿ ಪೆಟ್ರೋಲಿಂಗ್ ಪಾಯಿಂಟ್ 14ರ ಬಳಿ ಚೀನಾ ಟೆಂಟ್ ನಿರ್ಮಿಸಿತ್ತು. ಕಳೆದ ವಾರ ಲೆಫ್ಟಿನೆಂಟ್ ಕಮಾಂಡರ್ ಮಟ್ಟದಲ್ಲಿ ಪಾಯಿಂಟ್ 14ನಲ್ಲಿ ಸಭೆ ನಡೆಸಿತ್ತು. ಮಾತುಕತೆಯಂತೆ ಟೆಂಟ್ ತೆರವು ಆಗಿದ್ಯಾ? ಇಲ್ವಾ? ಅಂತ ಪರಿಶೀಲನೆಗೆ ಭಾರತ ಹೋಗಿತ್ತು. ವಾಹನದಲ್ಲಿ ಕರ್ನಲ್ ಸಂತೋಷ್ ಬಾಬು, ಪಳನಿ, ಓಝೋ ಗಸ್ತು ಹೋಗಿದ್ದರು.

    ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್ ತೆರವು ಮಾಡದ ಹಿನ್ನೆಲೆಯಲ್ಲಿ ಮಾತುಕತೆ ನಡೆಸುತ್ತಿದ್ದಾಗಲೇ ಚೀನಿ ಸೈನಿಕರು ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ವಿಚಾರ ತಿಳಿದು ಭಾರತದ ಸೈನಿಕರು ಮತ್ತಷ್ಟು ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದಾಗ ಚೀನಿಯರು ಕಲ್ಲು ತೂರಾಟ ನಡೆಸಿ ಕಬ್ಬಿಣದ ರಾಡ್‍ಗಳಿಂದ ಹೊಡೆದಿದ್ದಾರೆ. ಪರಿಣಾಮ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ವೇಳೆ ಭಾರತದ ಸೈನಿಕರು ತಿರುಗೇಟು ನೀಡಿ 43 ಚೀನಿ ಸೈನಿಕರನ್ನು ಹತ್ಯೆ ಮಾಡಿದ್ದಾರೆ.