Tag: family

  • ಅದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿ – ಅಣ್ಣನ ಅಗಲಿಕೆಯಿಂದ ಅಪ್ರಾಪ್ತೆ ಸೂಸೈಡ್

    ಅದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿ – ಅಣ್ಣನ ಅಗಲಿಕೆಯಿಂದ ಅಪ್ರಾಪ್ತೆ ಸೂಸೈಡ್

    – ಪತ್ನಿಯ ಅಗಲಿಕೆಯಿಂದ ಸಹೋದರ ಆತ್ಮಹತ್ಯೆ
    – ಮೂವರು ಸಹೋದರರನ್ನ ಅಗಲಿದ ತಂಗಿ

    ಗಾಂಧಿನಗರ: ಸಹೋದರ ಆತ್ಮಹತ್ಯೆ ಮಾಡಿಕೊಂಡ ಎರಡು ವಾರಗಳ ನಂತರ 17 ವರ್ಷದ ಅಪ್ರಾಪ್ತ ಸಹೋದರಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‍ನ ಅಹಮದಾಬಾದ್ ಜಿಲ್ಲೆಯ ರಾಮೋಲ್‍ನಲ್ಲಿ ನಡೆದಿದೆ.

    ಮೃತ ಹುಡುಗಿ ಉತ್ತರ ಪ್ರದೇಶ ಮೂಲದವಳಾಗಿದ್ದು, 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಪೋಷಕರು ಮತ್ತು ಮೂವರು ಸಹೋದರರೊಂದಿಗೆ ರಾಮೋಲ್‍ನ ರವಿನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಅದೇ ಪ್ರದೇಶದಲ್ಲಿ ಆಕೆಯ ಸೋದರಸಂಬಂಧಿ ಸಹೋದರ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನು. ಆದರೆ ಎರಡು ವಾರಗಳ ಹಿಂದೆ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದನು.

    ಮೃತ ಹುಡುಗಿಯ ತಂದೆ ಮತ್ತು ಇಬ್ಬರು ಹಿರಿಯ ಸಹೋದರರು ಸೋಮವಾರ ತಿಂಡಿ ಮಾಡಿ ಮನೆಯಿಂದ ಹೊರ ಹೋಗಿದ್ದರು. ಮಧ್ಯಾಹ್ನ ಅವಳ ಕಿರಿಯ ಸಹೋದರ ತಾಯಿಯ ಬಳಿ ಬಂದು ಸಹೋದರಿ ಬಾಯಿಂದ ಏನೋ ಹರಿಯುತ್ತಿದೆ ಎಂದು ಹೇಳಿದ್ದಾನೆ. ಊಟ ಮಾಡುತ್ತಿದ್ದ ತಾಯಿ ಕೂಡಲೇ ಹೋಗಿ ಮಗಳನ್ನು ನೋಡಿದ್ದಾರೆ. ಆಗ ಮಗಳು ತನ್ನ ದುಪಟ್ಟಾದಿಂದ ನೇಣು ಹಾಕಿಕೊಂಡಿದ್ದನ್ನು ನೋಡಿ ತಾಯಿ ಆಘಾತಕ್ಕೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಸ್ಥಳದಲ್ಲಿದ್ದ ಡೆತ್‍ನೋಟ್ ವಶಪಡಿಸಿಕೊಂಡಿದ್ದಾರೆ. ಮೃತ ಅಪ್ರಾಪ್ತೆ ತನ್ನ ಸೋದರಸಂಬಂಧಿ ಸಹೋದರನಿಗೆ ತುಂಬಾ ಹತ್ತಿರವಾಗಿದ್ದಳು. ಹೀಗಾಗಿ ಆತನ ಅಗಲಿಕೆಯಿಂದ ಖಿನ್ನತೆಗೆ ಒಳಗಾಗಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ಸಹೋದರ ಸಾವನ್ನಪ್ಪಿದ ನಂತರ ಈಗ ನನಗೆ ಬದುಕುವ ಆಸೆ ಇಲ್ಲ. ಸಹೋದರನ ಅಂತ್ಯಕ್ರಿಯೆ ಮಾಡಿದ ಅದೇ ಸ್ಥಳದಲ್ಲಿ ಶವಸಂಸ್ಕಾರ ಮಾಡಿ” ಎಂದು ಅಪ್ರಾಪ್ತೆ ಡೆತ್‍ನೋಟಿನಲ್ಲಿ ಬರೆದಿದ್ದಾಳೆ. ಮರಣೋತ್ತರ ಪರೀಕ್ಷೆಯ ನಂತರ ಹುಡುಗಿಯ ಮೃತದೇಹವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೆಡ್ ಕಾನ್ಸ್ಟೇಬಲ್ ವಿಜಯ್‍ಸಿಂಗ್ ಹೇಳಿದರು.

  • ರಾಯಚೂರಿನಲ್ಲಿ ನಾಲ್ಕು ದಿನಗಳಿಂದ ಸತತ ಮಳೆ: ಮನೆ ಕುಸಿದು ಮಹಿಳೆ ಸಾವು

    ರಾಯಚೂರಿನಲ್ಲಿ ನಾಲ್ಕು ದಿನಗಳಿಂದ ಸತತ ಮಳೆ: ಮನೆ ಕುಸಿದು ಮಹಿಳೆ ಸಾವು

    ರಾಯಚೂರು: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ.

    ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ ಮಣ್ಣಿನ ಮನೆ ಕುಸಿದು ಬಿದ್ದಿದ್ದು, 32 ವರ್ಷದ ಮಹಿಳೆ ಶಕುಂತಲಾ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಾತ್ರಿ ಮನೆಯಲ್ಲಿ ಐದು ಜನ ಮಲಗಿದ್ದರು. ಈ ವೇಳೆ ಸತತ ಮಳೆಯಿಂದ ನೆನೆದಿದ್ದ ಮನೆ ಕುಸಿತವಾಗಿದೆ. ಮನೆ ಕುಸಿಯುವುದನ್ನು ಕಂಡು ಮೂವರು ಮಕ್ಕಳು ಹಾಗೂ ಸಾವನ್ನಪ್ಪಿದ ಮಹಿಳೆಯ ಪತಿ ಹೊರಗಡೆ ಬಂದಿದ್ದಾರೆ. ಮಹಿಳೆಯೂ ಎದ್ದು ಬರುವಾಗ ಅಷ್ಟರಲ್ಲೇ ಮನೆ ಕುಸಿದಿದೆ. ಮಹಿಳೆಯ ಮೇಲೆ ಮನೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಡೆದು ಐದಾರು ಗಂಟೆಗಳಾದರೂ ಸ್ಥಳಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶೌಚಕ್ಕೆ ತೆರಳಿದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ

    ಶೌಚಕ್ಕೆ ತೆರಳಿದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ

    ನವದೆಹಲಿ: ಅಪ್ರಾಪ್ತೆ ಶೌಚಕ್ಕೆ ಹೋದಾಗ ಇಬ್ಬರು ಕಾಮುಕರು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.

    ಆಗ್ನೇಯ ದೆಹಲಿಯ ಜೆಜೆ ಕಾಲೋನಿಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದ್ದು, 13 ವರ್ಷದ ಬಾಲಕಿ ಸಾಮೂಹಿಕ ಶೌಚಾಲಯಕ್ಕೆ ತೆರಳಿದಾಗ ಇಬ್ಬರು ಕಾಮುಕರು ಬಾಲಕಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇದರಲ್ಲಿ ಒಬ್ಬ ಬಾಲಕಿ ಮನೆಯ ನೆರೆಹೊರೆಯವನು ಎನ್ನಲಾಗಿದೆ.

    ರಾತ್ರಿ 9ರ ಸಮಾರಿಗೆ ಬಾಲಕಿ ಶೌಚಕ್ಕೆಂದು ಸಾಮೂಹಿಕ ಶೌಚಾಲಯಕ್ಕೆ ಬಂದಿದ್ದಾಳೆ. ಈ ವೇಳೆ ಅದೇ ಪ್ರದೇಶದ ವ್ಯಕ್ತಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಬಾಲಕಿಯನ್ನು ಎಳೆದೊಯ್ದಿದ್ದಾನೆ. ನಂತರ ಸ್ನೇಹಿತನನ್ನು ಕಾವಲಿಗೆ ಇರಿಸಿ ಅತ್ಯಾಚಾರ ಎಸಗಿದ್ದಾನೆ. ಅಪರಾಧ ಎಸಗಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಬಾಲಕಿ ಕಾಣದ್ದನ್ನು ಗಮನಿಸಿದ ಮನೆಯವರು, ಹುಡುಕಲು ಆರಂಭಿಸಿದ್ದಾರೆ. ಆದರೆ ಬಲಕಿ ಸಿಕ್ಕಿಲ್ಲ.

    ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಸೆಕ್ಷನ್‍ಗಳಡಿ ಹಾಗೂ ಪೋಕ್ಸೋ ಕಾಯ್ದೆಯಡಿ ಬಾಲಕಿಯ ತಂದೆ ಪ್ರಕರಣ ದಾಖಲಿಸಿದ್ದು, ಈಗಾಗಲೇ ನಾವು ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ಆಗ್ನೇಯ ಡಿಸಿಪಿ ಆರ್‍ಪಿ ಮೀನಾ ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಬಾಲಕಿಯ ತಂದೆ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಊಟದ ಬಳಿಕ ಬಾಲಕಿ ಮನೆಯಿಂದ ಸುಮಾರು 50-100 ಮೀಟರ್ ದೂರದಲ್ಲಿರುವ ಶೌಚಾಲಯಕ್ಕೆ ತೆರಳಿದ್ದಳು. ನಂತರ ತುಂಬಾ ಸಮಯ ಕಳೆದರೂ ಬಾಲಕಿ ಮರಳಿಲಿಲ್ಲ. 15-20 ನಿಮಿಷಗಳ ಬಳಿಕ ನಾವೇ ಹುಡುಕಲು ಪ್ರಾರಂಭಿಸಿದೆವು. ಕಾಡಿನ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಘಟನೆ ಕುರಿತು ಬಾಲಕಿ ತನ್ನ ತಂದೆಗೆ ವಿವರಿಸಿದ್ದು, ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಾಮಾನ್ಯವಾಗಿ ಯಾವಾಗಲೂ ಅವಳ ತಾಯಿಯೇ ಅವಳನ್ನು ಶೌಚಕ್ಕೆ ಕರೆದೊಯ್ಯುತ್ತಿದ್ದಳು. ಆದರೆ ಹತ್ತಿರವಿದ್ದರಿಂದ ಅಂದು ಒಬ್ಬಳನ್ನೆ ಕಳುಹಿಸಿದೆವು. ಹೊರಗಡೆ ಸುರಕ್ಷಿತವಾಗಿಲ್ಲ ಎಂಬುದನ್ನು ನಾವು ನಿರೀಕ್ಷಿಸಿರಲೇ ಇಲ್ಲ. ಬಾಲಕಿಯ ಹೊಟ್ಟೆ ಭಾಗದಲ್ಲಿ ಕೆಲ ಗಾಯಗಳಾಗಿವೆ. ಪಕ್ಕದ ಮನೆಯವನೇ ಮಾಡಿರುವ ಕುರಿತು ನಮಗೆ ತಿಳಿದಿದೆ ಎಂದು ಬಾಲಕಿಯ ಕುಟುಂಬಸ್ಥರು ವಿವರಿಸಿದ್ದಾರೆ.

    ಬಾಲಕಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಅತ್ಯಾಚಾರ ಎಸಗಿರುವುದು ವೈದ್ಯಕೀಯ ಪರೀಕ್ಷೆ ವೇಳೆ ಖಚಿತವಾಗಿದೆ. ಕಳೆದ 10 ದಿನಗಳಲ್ಲಿ ಈ ಭಾಗದಲ್ಲಿ ಬಾಲಕಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವ 4ನೇ ಪ್ರಕರಣ ಇದಾಗಿದೆ ಎನ್ನಲಾಗಿದೆ.

  • ಒಂದೇ ಕುಟುಂಬದ ನಾಲ್ವರ ಮೃತದೇಹ ಮನೆಯ ಬೇರೆ ಬೇರೆ ಸ್ಥಳದಲ್ಲಿ ಪತ್ತೆ

    ಒಂದೇ ಕುಟುಂಬದ ನಾಲ್ವರ ಮೃತದೇಹ ಮನೆಯ ಬೇರೆ ಬೇರೆ ಸ್ಥಳದಲ್ಲಿ ಪತ್ತೆ

    – ಶವದ ಪಕ್ಕದಲ್ಲಿ ನಿಂಬೆ ಹಣ್ಣು, ಕಾಯಿ ಪತ್ತೆ
    – ನಿಧಿಯ ಆಸೆಗಾಗಿ ಜೀವ ಕಳೆದುಕೊಂಡ್ರಾ?

    ಹೈದರಾಬಾದ್: ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಅಜ್ಮೀರಾ ಬೀ (63), ಅವರ ಪುತ್ರಿ ಆಸ್ಮಾ ಬೇಗಂ (35), ಅಳಿಯ ಖವಾಜಾ ಪಾಷಾ (42) ಮತ್ತು ಮೊಮ್ಮಗಳು ಹಸೀನಾ (10) ಎಂದು ಗುರುತಿಸಲಾಗಿದೆ. ಮಹಿಳೆ, ಆಕೆಯ ಮಗಳು, ಅಳಿಯ ಮತ್ತು ಮೊಮ್ಮಗಳ ಮೃತದೇಹಗಳು ಮನೆಯ ವಿವಿಧ ಭಾಗಗಳಲ್ಲಿ ಪತ್ತೆಯಾಗಿವೆ. ಮೂವರ ಶವ ಮನೆಯೊಳಗೆ ಮೂರು ವಿಭಿನ್ನ ಸ್ಥಳಗಳಲ್ಲಿ ಪತ್ತೆಯಾಗಿವೆ. ಅಳಿಯ ಮನೆಯ ಹಿಂಭಾಗದಲ್ಲಿ ಪತ್ತೆಯಾಗಿದ್ದಾನೆ. ದೇಹದ ಪಕ್ಕದಲ್ಲಿ ನಿಂಬೆ ಹಣ್ಣಿನ ಪ್ಯಾಕೆಟ್ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮನೆಯಿಂದ ಯಾರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಒಳಗೆ ಹೋಗಿ ನೋಡಿದ್ದಾರೆ. ಆಗ ಕುಟುಂಬದ ಎಲ್ಲ ಸದಸ್ಯರು ಮೃತಪಟ್ಟಿರುವುದು ತಿಳಿದುಬಂದಿದೆ. ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ನಾಲ್ಕು ಶವಗಳು ಮನೆಯ ವಿವಿಧ ಭಾಗಗಳಲ್ಲಿ ಪತ್ತೆಯಾಗಿವೆ. ದೇಹಗಳಲ್ಲಿ ಯಾವುದೇ ಗಾಯಗಳು ಅಥವಾ ಗುರುತುಗಳು ಕಂಡುಬಂದಿಲ್ಲ. ವಿಷ ಸೇವಿಸಿದಂತೆ ಕಾಣುತ್ತದೆ. ಮನೆಯ ಹಿಂಭಾಗ 1 ಅಡಿ ಆಳದ ಹಳ್ಳದ ಪಕ್ಕದಲ್ಲಿ ಅಳಿಯನ ಶವ ಪತ್ತೆಯಾಗಿದೆ. ಹಳ್ಳದೊಳಗೆ ನಿಂಬೆಹಣ್ಣುಗಳು ಕಂಡುಬಂದಿವೆ. ಮನೆಯೊಳಗೆ ನಿಂಬೆ ಮತ್ತು ತೆಂಗಿನಕಾಯಿ ಕೂಡ ಪತ್ತೆಯಾಗಿದೆ. ಹೀಗಾಗಿ ನಾವು ಎಲ್ಲ ರೀತಿಯ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದೇವೆ ಎಂದು ವನಪಾರ್ತಿ ಜಿಲ್ಲಾ ಎಸ್‍ಪಿ ಅಪೂರ್ವಾ ರಾವ್ ಹೇಳಿದ್ದಾರೆ.

    ಖವಾಜಾ ಪಾಷಾ ಆಗಾಗ ನಿಧಿ ಹುಡುಕುತ್ತಾ ಮನೆಯ ಸುತ್ತಲೂ ಹೊಂಡಗಳನ್ನು ಅಗೆಯುತ್ತಿದ್ದನು ಎಂದು ಮೃತರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಮನೆಯ ಹಿಂಭಾಗದಲ್ಲಿರುವ ಹಳ್ಳದ ಪಕ್ಕದಲ್ಲಿ ಆತನ ಶವ ಪತ್ತೆಯಾಗಿರುವುದು ಅನುಮಾನ ಮೂಡಿಸಿದೆ.

    ಅಲ್ಲದೇ ಖವಾಜಾ ಹುಡುಕುತ್ತಿದ್ದ ನಿಧಿಯನ್ನು ಹುಡುಕುವ ಆಶಯದಿಂದ ಕುಟುಂಬವು ವಿಷ ಸೇವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

  • ಸಚಿವ ಶ್ರೀರಾಮುಲು ಬಳಿಕ ತಾಯಿ, ತಮ್ಮನಿಗೂ ಕೊರೊನಾ ಸೋಂಕು

    ಸಚಿವ ಶ್ರೀರಾಮುಲು ಬಳಿಕ ತಾಯಿ, ತಮ್ಮನಿಗೂ ಕೊರೊನಾ ಸೋಂಕು

    – 85 ವರ್ಷದ ತಾಯಿಗೂ ತಗುಲಿದ ಸೋಂಕು

    ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲುಗೆ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಇದೀಗ ಅವರ ತಾಯಿ ಹಾಗೂ ತಮ್ಮನಿಗೂ ಸೋಂಕು ದೃಢಪಟ್ಟಿದೆ.

    ಇತ್ತೀಚೆಗಷ್ಟೇ ಕೊರೊನಾ ಸೋಂಕು ತಗುಲಿ ಸಚಿವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅವರ ತಾಯಿ ಹಾಗೂ ತಮ್ಮನಿಗೆ ಕೊರೊನಾ ದೃಢಪಟ್ಟಿದೆ. ಇಬ್ಬರನ್ನೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿಗೆ 85 ವರ್ಷ ವಯಸ್ಸಾಗಿದ್ದು, ಅವರನ್ನೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವರು ಇನ್ನೂ ಸರ್ಕಾರ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಡೆಯುತ್ತಿದ್ದು, ಇದರ ಮಧ್ಯೆ ಇವರಿಬ್ಬರಿಗೆ ಸೋಂಕು ತಗುಲಿದೆ.

    ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಆಗಸ್ಟ್ 9ರಂದು ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸಚಿವರು ಟ್ವೀಟ್ ಮಾಹಿತಿ ನೀಡಿದ್ದರು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನನ್ನ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳೂ ಜೀವದ ಹಂಗು ತೊರೆದು ಮಹಾಮಾರಿಯ ವಿರುದ್ಧ ಹಗಲಿರುಳು ಶ್ರಮಿಸುತ್ತಿವೆ.

    ಕೊರೊನಾ ಕಾಣಿಸಿಕೊಂಡ ಸಮಯದಿಂದಲೂ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡುವ ಸರ್ಕಾರದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ನನಗೆ ಸತ್ವಪರೀಕ್ಷೆಯ ಸಮಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದೇನೆ ಎಂದಿದ್ದರು.

    ಆದಷ್ಟೂ ಬೇಗ ಗುಣಮುಖನಾಗಿ ಸಂಕಷ್ಟ ಸಮಯದಲ್ಲಿ ಇನ್ನಷ್ಟು ಜನಸೇವೆ ಮಾಡಲು ಶಕ್ತಿ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದರು. ಇದಾದ ಬಳಿಕ ಸರ್ಕಾರಿ ಆಸ್ಪತ್ರೆ ಬೌರಿಂಗ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಮೂಲಕ ಸರಳತೆ ಮೆರೆದಿದ್ದಾರೆ. ಅಲ್ಲದೆ ಚಿಕಿತ್ಸೆ ಸಂದರ್ಭದಲ್ಲಿಯೂ ಕಾರ್ಯನಿರ್ವಹಿಸುವ ಮೂಲಕ ವೃತ್ತಿಪರತೆ ಮೆರೆದಿದ್ದಾರೆ.

  • ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ – ಗೋಲಿಬಾರ್‌ಗೆ ಮೃತಪಟ್ಟ ಕುಟುಂಬಸ್ಥರ ಅಳಲು

    ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ – ಗೋಲಿಬಾರ್‌ಗೆ ಮೃತಪಟ್ಟ ಕುಟುಂಬಸ್ಥರ ಅಳಲು

    ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸರ ಗುಂಡೇಟಿಗೆ ಮೂವರು ಬಲಿಯಾಗಿದ್ದು, ಮೃತರ ಗುರುತು ಪತ್ತೆಯಾಗಿದೆ. ಇದನ್ನೂ ಓದಿ: ಗಲಭೆ ಮಾಡಿ ಊರು ಬಿಟ್ಟ ಪುಂಡರು – ಎರಡು ಎಟಿಎಂ ಧ್ವಂಸ

    ವಾಜಿದ್ ಖಾನ್ (20), ಯಾಸಿಂ ಪಾಷಾ (20) ಮತ್ತು ಮತ್ತೊಬ್ಬ 40 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ನಡೆದ ಪೊಲೀಸ್ ಫೈರಿಂಗ್‍ಗೆ ಇಬ್ಬರು ಮೃತಪಟ್ಟಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬ ಮೃತಪಟ್ಟಿದ್ದಾನೆ. ಸದ್ಯಕ್ಕೆ ಗುಂಡಿಗೆ ಬಲಿಯಾದ ಮೂವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ ಟೆಸ್ಟ್ ಮಾಡಲು ಮೂವರ ಸ್ವಾಬ್ ತೆಗೆದುಕೊಳ್ಳಲಾಗಿದೆ. ಕೋವಿಡ್ ಟೆಸ್ಟ್ ಏನು ಬರುತ್ತೆ ಅಂತ ನೋಡಿಕೊಂಡು ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ.

    ಫೈರಿಂಗ್‍ನಲ್ಲಿ ಮೃತಪಟ್ಟರೆ ಫೋರೆನ್ಸಿಕ್ ಎಕ್ಸ್‌ಪರ್ಟ್ ವೈದ್ಯರು ಮರಣೋತ್ತರ ಪರೀಕ್ಷೆ ಮಾಡುವುದು ಕಡ್ಡಾಯ. ಹೀಗಾಗಿ ಬೋರಿಂಗ್ ಆಸ್ಪತ್ರೆಯಲ್ಲಿ ಫೋರೆನ್ಸಿಕ್ ಎಕ್ಸ್‌ಪರ್ಟ್ ಇದ್ದಾರೆ. ಆದ್ದರಿಂದ ಅವರಿಂದಲೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಲರ್ಟ್ ಆಗಿದ್ದು, ಮಂಗಳವಾರ ರಾತ್ರಿಯೇ ಆಸ್ಪತ್ರೆಯ ಸುತ್ತಮುತ್ತ ಭದ್ರತೆ ನಿಯೋಜನೆ ಮಾಡಿದ್ದಾರೆ.

    ಇತ್ತ ಗುಂಡೇಟಿಗೆ ಬಲಿಯಾದ ವಾಜಿದ್ ಕುಟುಂಬಸ್ಥರು ಅನ್ಯಾಯದ ಸಾವು ಎಂದು ಬೋರಿಂಗ್ ಆಸ್ಪತ್ರೆ ಶವಾಗಾರದ ಬಳಿ ಕಣ್ಣೀರು ಹಾಕುತ್ತಿದ್ದಾರೆ. ವಾಜಿದ್ ಖಾನ್ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ. ನಾನು ಇಲ್ಲಿ ಗಲಾಟೆ ಶುರುವಾಗಿದ್ದು ನೋಡಿ ಅವರ ಮಾಲೀಕರಿಗೆ ಬೇಗ ಮನೆಗೆ ಕರೆದುಕೊಂಡು ಬಿಡುವಂತೆ ಹೇಳಿದ್ವಿ. ಅವರು ಕರೆದುಕೊಂಡು ಬಂದರು. ಆದರೆ ನಡೆದುಕೊಂಡು ಬರುವಾಗ ಫೈರಿಂಗ್ ಆಗಿದೆ. ನಮಗೂ ಈ ಘಟನೆಗೂ ಯಾವ ಸಂಬಂಧ ಇಲ್ಲ. ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಯಾದರು. ಹೀಗಾಗಿ ನಮಗೆ ನ್ಯಾಯ ಬೇಕು ಎಂದು ಗುಂಡೇಟಿಗೆ ಬಲಿಯಾದ ವಾಜಿದ್ ಚಿಕ್ಕಮ್ಮ ರೇಷ್ಮಾ ಕಣ್ಣೀರು ಹಾಕಿದ್ದಾರೆ.

  • ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಭಯದಿಂದ ಬಾತ್‍ರೂಮಿನಲ್ಲಿ 3 ಗಂಟೆ ಬಚ್ಚಿಟ್ಟುಕೊಂಡಿದ್ದ ಕುಟುಂಬ

    ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಭಯದಿಂದ ಬಾತ್‍ರೂಮಿನಲ್ಲಿ 3 ಗಂಟೆ ಬಚ್ಚಿಟ್ಟುಕೊಂಡಿದ್ದ ಕುಟುಂಬ

    – ಘಟನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ

    ಬೆಂಗಳೂರು: ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ಮನೆ ದಾಳಿಗೂ ಮುನ್ನ ಪಾಲಿಕೆ ಹಾಗೂ ಖಾಸಗಿಯಾಗಿ ಹಾಕಿರುವ ಎಲ್ಲಾ ಸಿಸಿಟಿವಿಗಳನ್ನ ಕಿಡಿಗೇಡಿಗಳು ಧ್ವಂಸ ಮಾಡಿದ್ದು, ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ದುಷ್ಕರ್ಮಿಗಳು ಮನೆ ಜಖಂ ಮಾಡಿದ್ದಲ್ಲದೇ ಮನೆಯಲ್ಲಿರುವ ಲ್ಯಾಪ್‍ಟಾಪ್ ತಂದು ಹೊಡೆದು ಹಾಕಿದ್ದಾರೆ. ಅಲ್ಲದೇ ಒಂದೇ ಮನೆಯ ಎರಡು ಕಾರು, ಎರಡು ಬೈಕ್‍ಗೆ ಬೆಂಕಿ ಹಾಕಿದ್ದಾರೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕಿಡಿಗೇಡಿಗಳು ಲಾಂಗು, ಮಚ್ಚು ಹಿಡಿದು ದಾಳಿ ಮಾಡಿದ್ದಾರೆ. ಅಲ್ಲದೇ ಕಲ್ಲುಗಳನ್ನು ಮನೆಯ ಮೇಲೆ ಎಸೆಯುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಶಾಸಕರ ಮನೆ ಹಾಗೂ ದಾಳಿ ಮಾಡುವ ಜಾಗದಲ್ಲಿರುವ ಎಲ್ಲಾ ಸಿಸಿಟಿವಿಗಳನ್ನ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ದಾಳಿಯ ದೃಶ್ಯವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗದ ರೀತಿ ನೋಡಿಕೊಳ್ಳುವ ದೃಷ್ಟಿಯಿಂದ ದುಷ್ಕರ್ಮಿಗಳು ಪ್ಲಾನ್ ಮಾಡಿ ಕಾವಲ್ ಬೈರಸಂದ್ರದ ಏರಿಯಾದಲ್ಲಿದ್ದ ಎಲ್ಲ ಸಿಸಿಟಿಗಳನ್ನ ಧ್ವಂಸ ಮಾಡಿದ್ದಾರೆ.

    ನೋವಿನ ಕಥೆ:
    ಮಂಗಳವಾರ ರಾತ್ರಿ ನಡೆದ ಘಟನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ ಇದೆ. ಸಾಲ ಸೋಲ ಮಾಡಿ ಹೊಸದಾಗಿ ಮನೆ ಮಾಡಿಕೊಂಡಿದ್ವಿ. ಈಗ ಸಂಪೂರ್ಣ ಹಾಳು ಮಾಡಿದ್ದಾರೆ. ಚಿಕ್ಕ ಮಗು ಇಟ್ಟುಕೊಂಡು ನಾವು ಹೇಗೆ ಬದುಕಬೇಕು ಎಂದು ಗಲಭೆಯಲ್ಲಿ ಹಾನಿಯದ ಕುಟುಂಬ ಕಣ್ಣೀರು ಹಾಕಿದೆ. ಮತ್ತೊಂದು ಕಡೆ ಗಲಾಟೆ ವೇಳೆ ನಾಲ್ವರು ಜೀವ ಭಯದಿಂದ ಬಾತ್ ರೂಮ್‍ನಲ್ಲಿ ಮೂರು ಗಂಟೆಗಳ ಕಾಲ ಬಚ್ಚಿಟ್ಟುಕೊಂಡು ಜೀವ ಉಳಿಸಿಕೊಂಡಿದ್ವಿ ಎಂದು ಮತ್ತೊಂದು ಕುಟುಂಬ ಹೇಳಿದೆ.

    ಇನ್ನೂ ಆರೋಪಿ ನವೀನ್ ಮನೆಗೆ ದಾಳಿಯಾಗುವ ಕೆಲವೇ ನಿಮಿಷಗಳ ಹಿಂದೆ ನವೀನ್ ಮನೆಯಲ್ಲಿದ್ದ ಆರು ಜನರನ್ನು ಪಕ್ಕದ ಮನೆಗೆ ಸ್ಥಳೀಯರು ಶಿಫ್ಟ್ ಮಾಡಿದ್ದಾರೆ. ಈ ವೇಳೆ ಲಾಕರ್ ತೆಗೆದು ಚಿನ್ನಾಭರಣ, ಬೆಳ್ಳಿ ವಸ್ತುಗಳು, ಹಣ ದೋಚಿದ್ದಾರೆ. ಈ ಬಗ್ಗೆ ಆರೋಪಿ ನವೀನ್ ಕುಟುಂಬಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

  • ಎಂಆರ್‌ಪಿಎಲ್ ಕಂಪನಿಯ ನಿರ್ಲಕ್ಷ್ಯ – ಜನವಸತಿ ಪ್ರದೇಶಕ್ಕೆ ನುಗ್ಗಿದ ಸಮುದ್ರದ ನೀರು

    ಎಂಆರ್‌ಪಿಎಲ್ ಕಂಪನಿಯ ನಿರ್ಲಕ್ಷ್ಯ – ಜನವಸತಿ ಪ್ರದೇಶಕ್ಕೆ ನುಗ್ಗಿದ ಸಮುದ್ರದ ನೀರು

    ಮಂಗಳೂರು: ನಗರದ ಪಣಂಬೂರು ಸಮೀಪದ ತಣ್ಣೀರುಬಾವಿ ಎಂಬಲ್ಲಿ ಸಮುದ್ರದ ನೀರು ದಡಕ್ಕೆ ನುಗ್ಗಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

    ಎಂಆರ್‌ಪಿಎಲ್ ಪೆಟ್ರೋಲಿಯಂ ಕಂಪನಿಗೆ ಕಡಲಿನ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಘಟಕ ಈ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಹೀಗಾಗಿ ಸಮುದ್ರದ ನೀರನ್ನು ಪೈಪ್ ಮೂಲಕ ಸ್ಥಾವರಕ್ಕೆ ತರುವ ಕಾಮಗಾರಿ ನಡೆಯುತ್ತಿದ್ದು, ಪೈಪ್ ಅಳವಡಿಸಲು ಸಮುದ್ರ ತೀರದ ಮರಳನ್ನು ತೆಗೆಯಲಾಗಿದೆ.

    ಇದೀಗ ಕಡಲಿನ ಅಬ್ಬರ ಹೆಚ್ಚಾಗಿದ್ದರಿಂದ ಸಮುದ್ರದ ನೀರು ಮರಳು ತೆಗೆದ ಪ್ರದೇಶದಿಂದ ಜನ ವಸತಿ ಸ್ಥಳಕ್ಕೆ ನುಗ್ಗಿ ಬಂದಿದೆ.ಸಮುದ್ರದ ಅಲೆಗಳ ಅಬ್ಬರ ಹೆಚ್ಚಾದರೆ ಇನ್ನೂ ತೊಂದರೆಗಳಾಗಬಹುದು ಅನ್ನೋ ಹಿನ್ನೆಲೆಯಲ್ಲಿ ಸ್ಥಳೀಯ 15 ಕುಟುಂಬಗಳನ್ನು ಜಿಲ್ಲಾಡಳಿತ ಸ್ಥಳಾಂತರಿಸಿದೆ. ಎಂಆರ್‌ಪಿಎಲ್ ನ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಹೀಗಾಗಿ ಇಲ್ಲಿ ಸ್ಥಾವರದ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್, ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮಳೆಗೆ ಮನೆ ಕಳೆದುಕೊಂಡು ಬೀದಿಯಲ್ಲಿ ಬದುಕುತ್ತಿರುವ ಕುಟುಂಬ

    ಮಳೆಗೆ ಮನೆ ಕಳೆದುಕೊಂಡು ಬೀದಿಯಲ್ಲಿ ಬದುಕುತ್ತಿರುವ ಕುಟುಂಬ

    – ಕಣ್ಣುಚ್ಚಿ ಕುಳಿತ ಜಿಲ್ಲಾಡಳಿತ

    ಯಾದಗಿರಿ: ಕಳೆದ ಹತ್ತು ದಿನದ ಹಿಂದೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿದ್ದು, ಬಡ ಜನರ ಮನೆಯ ಜೊತೆ ಜೀವನವನ್ನೂ ಹಾಳು ಮಾಡಿದೆ.

    ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಕುಟುಂಬವೊಂದು ಇದೀಗ ಬೀದಿಯಲ್ಲಿ ಬದುಕು ಸಾಗಿಸುತ್ತಿದೆ. ನಾಯ್ಕಲ್ ಗ್ರಾಮದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಗಾಳೆಪ್ಪ ಅವರ ಮನೆ ಸಂಪೂರ್ಣವಾಗಿ ಕುಸಿದಿತ್ತು. ತಡರಾತ್ರಿ ಏಕಾಏಕಿ ಮನೆ ಕುಸಿದ ಪರಿಣಾಮ, ಮನೆಯಲ್ಲಿ ಮಲಗಿದ್ದ ಮಹಿಳೆಯರು ಮತ್ತು ಮಗುವಿಗೆ ಗಂಭೀರ ಗಾಯಗಳಾಗಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳಾಗಿರಲಿಲ್ಲ. ಸದ್ಯ ಕುಟುಂಬಸ್ಥರು ಚೇತರಿಸಿಕೊಂಡಿದ್ದು, ವಾಸಿಸಲು ಮನೆಯಲ್ಲದಂತಾಗಿದೆ.

    ಕೊರೊನಾ ಸಮಯದಲ್ಲಿ ಕೆಲಸವಿಲ್ಲದೆ. ಕುಸಿದ ಮನೆಯನ್ನು ನಿರ್ಮಿಸಿಕೊಳ್ಳಲು ಹಣವಿಲ್ಲದೆ ಕುಟುಂಬ ಪರದಾಡುತ್ತಿದೆ. ಬಿದ್ದ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಜೀವನ ನಡೆಸುತ್ತಿರುವ ಕುಟುಂಬಸ್ಥರು, ತಾರ್ಪಲ್ ಮತ್ತು ಶೀಟ್ ಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಜೀವನ ದೂಡುತ್ತಿದ್ದಾರೆ. ಮತ್ತೆ ಮಳೆ, ಗಾಳಿ ಆರಂಭವಾದರೆ ಎಂಬ ಆತಂಕ ಇದೀಗ ಕುಟುಂಬಸ್ಥರಲ್ಲಿ ಮೂಡಿದೆ.

    ತೆರದ ಜಾಗದಲ್ಲೇ ಅಡುಗೆ, ಊಟ ಮತ್ತು ಮಕ್ಕಳು ಓದುತ್ತಿದ್ದಾರೆ. ಕೊರೊನಾ ಭೀತಿಯಿಂದ ಗ್ರಾಮಸ್ಥರು ಸಹ ಈ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗುತ್ತಿಲ್ಲ. ಕೆಲವರು ಆಹಾರ ಧಾನ್ಯಗಳನ್ನು ಕೊಟ್ಟಿದ್ದಾರೆ. ಹೀಗೆ ಸಂಕಷ್ಟದಲ್ಲೇ ಕುಟುಂಬ ಜೀವನ ಸಾಗಿಸುತ್ತಿದೆ. ಇಲ್ಲಿಯವರಿಗೆ ಯಾವುದೇ ಅಧಿಕಾರಿ, ಸ್ಥಳೀಯ ಜನ ಪ್ರತಿನಿಧಿ ಇವರ ಕಷ್ಟ ಆಲಿಸಿಲ್ಲ. ಹೀಗಾಗಿ ಕುಟುಂಬಸ್ಥರು ಆಕ್ರೋಶಕ್ಕೊಳಗಾಗಿದ್ದಾರೆ.

  • ಸಚಿವ ಬಿ.ಸಿ.ಪಾಟೀಲ್ ಪತ್ನಿ, ಅಳಿಯ ಸೇರಿ ಐವರಿಗೆ ಕೊರೊನಾ ಸೋಂಕು

    ಸಚಿವ ಬಿ.ಸಿ.ಪಾಟೀಲ್ ಪತ್ನಿ, ಅಳಿಯ ಸೇರಿ ಐವರಿಗೆ ಕೊರೊನಾ ಸೋಂಕು

    ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಪತ್ನಿ, ಅಳಿಯ ಹಾಗೂ ಅವರ ನಿವಾಸದ ಸಿಬ್ಬಂದಿ ಸೇರಿ ಒಟ್ಟು ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದು, ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗ ಸೇರಿದಂತೆ ಒಟ್ಟು ಐವರಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಅವರನ್ನು ನಿರ್ದಿಷ್ಟವಾದ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದೆ. ಅವರೆಲ್ಲ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಹಾರೈಕೆಯೂ ಇರಲಿ ಎಂದು ಬರೆದುಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಿರೇಕೆರೂರು ತಾಲೂಕಿನಲ್ಲಿ ಸಹ ಕೊರೊನಾ ಪ್ರಕರಣಗಳು ಹೆಚ್ಚು ಕಂಡು ಬಂದಿವೆ. ಜಿಲ್ಲೆಯಲ್ಲಿ ಈ ವರೆಗೆ 935 ಪ್ರಕರಣಗಳು ಪತ್ತೆಯಾಗಿದ್ದು, ಇಂದು ಸಹ 86 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ. ಹಿರೇಕೆರೂರು ತಾಲೂಕಿನಲ್ಲೇ ಒಟ್ಟು 101 ಜನರಿಗೆ ಕೊರೊನಾ ಸೋಂಕು ತಗುಲಿದೆ.