– ಮಾವ ಸಾವು, ಗಂಭೀರ ಸ್ಥಿತಿಯಲ್ಲೇ ಉಳಿದ ಸೋದರತ್ತೆ
ಚಂಡೀಗಢ: ಭಾರತದ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರ ಸೋದರತ್ತೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರು ದರೋಡೆಕೋರರನ್ನು ಪಂಜಾಬ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಆಗಸ್ಟ್ 28ರ ರಾತ್ರಿ ರೈನಾ ಸೋದರತ್ತೆ ಕುಟುಂಬದ ಮೇಲೆ ತಂಡವೊಂದು ದಾಳಿ ಮಾಡಿತ್ತು. ಮನೆಯ ಮಹಡಿಯ ಮೇಲೆ ಮಲಗಿದ್ದ ಕುಟುಂಬದ ಎಲ್ಲರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಈ ಘಟನೆಯಲ್ಲಿ ರೈನಾರ ಸೋದರ ಮಾವ ಸಾವನ್ನಪ್ಪಿದ್ದರು. ಅತ್ತೆಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದರು. ಜೊತೆಗೆ ಅವರ ಮಕ್ಕಳಿಬ್ಬರು ಕೂಡ ಹಲ್ಲೆಗೊಳಗಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಪಂಜಾಬಿನ ಡಿಜಿಪಿ ದಿನಕರ್ ಗುಪ್ತಾ, ಬಂಧಿತರು ಹೊರರಾಜ್ಯದವರಾಗಿದ್ದಾರೆ. ಇವರ ಗ್ಯಾಂಗಿನಲ್ಲಿ 11 ಮಂದಿ ಇದ್ದು ಎಲ್ಲರನ್ನು ಪತ್ತೆ ಮಾಡಲಾಗಿದೆ. ಆದರೆ ಸದ್ಯ ಮೂವರು ಸಿಕ್ಕಿದ್ದು, ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಅವರನ್ನು ಹುಡುಕಲು ನಮ್ಮ ಸಿಬ್ಬಂದಿ ಶೋಧಕಾರ್ಯ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬಂಧಿತರು ಪಠಾಣ್ ಕೋಟ್ ರೈಲ್ವೆ ನಿಲ್ದಾಣದಲ್ಲಿರುವ ಕೊಳೆಗೇರಿಯಲ್ಲಿ ವಾಸವಾಗಿದ್ದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಇವರನ್ನು ಬಂಧಿಸಲಾಗಿದೆ. ಆರೋಪಿಗಳು ಇದೇ ರೀತಿಯಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ದರೋಡೆ ಮತ್ತು ಕೊಲೆ ಮಾಡಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಇವರು ಶ್ರೀಮಂತರ ಮನೆ ನೋಡಿ ದರೋಡೆ ಮಾಡುತ್ತಿದ್ದರು. ತಡೆಯಲು ಬಂದವರನ್ನು ರಾಡುಗಳಿಂದ ಹೊಡೆದು ಕೊಲೆ ಮಾಡುತ್ತಿದ್ದರು ಎಂದು ಗುಪ್ತಾ ತಿಳಿಸಿದ್ದಾರೆ.

ಘಟನೆ ನಡೆದ ಆ.28ರ ರಾತ್ರಿ ರೈನಾ ಅವರ ಕುಟುಂಬದ ಮೇಲೆ ಹಲ್ಲೆ ಮಾಡುವ ಮೊದಲು, ಬೇರೆ ಮನೆಯಲ್ಲಿ ದರೋಡೆ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಮೂರು ಮನೆಯಲ್ಲಿ ಪ್ರಯತ್ನಿಸಿದರೂ ಆಗಿಲ್ಲ. ಕೊನೆಗೆ ನಾಲ್ಕನೇಯದಾಗಿ ರೈನಾ ಅವರ ಸೋದರತ್ತೆ ಮನೆಗೆ ಬಂದಿದ್ದಾರೆ.

ಮನೆಗೆ ಏಣಿ ಹಾಕಿ ಮೇಲೆ ಹೋಗಿದ್ದಾರೆ. ಮೊದಲಿಗೆ ಮಹಡಿ ಮೇಲೆ ಮಲಗಿದ್ದ ನಾಲ್ವರನ್ನು ರಾಡುಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ಮನೆಯೊಳಗೆ ನುಗ್ಗಿ ಮನೆಯಲಿದ್ದ ಒಡವೆ ಮತ್ತು ಹಣವನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಪಠಾಣ್ ಕೋಟ್ ರೈಲ್ವೆ ನಿಲ್ದಾಣಕ್ಕೆ ಬಂದ ಕದ್ದ ಚಿನ್ನ ಮತ್ತು ಹಣವನ್ನು ಸಮನಾಗಿ ಹಂಚಿಕೊಂಡು, ಅದೇ ಕೊಳಗೇರಿಯಲ್ಲಿ ಬೇರೆ ಬೇರೆ ವಾಸ ಮಾಡಲು ಪ್ರರಂಭಿಸಿದ್ದಾರೆ. ಆದರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಮಾರಕಾಸ್ತ್ರಗಳು ಮತ್ತು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

ಈ ವಿಚಾರವಾಗಿ ಅಂದು ಟ್ವೀಟ್ ಮಾಡಿದ್ದ ರೈನಾ, ಪಂಜಾಬ್‍ನಲ್ಲಿ ನನ್ನ ಕುಟುಂಬದವರಿಗೆ ಆಗಿರುವುದು ಭಯಾನಕತೆಯನ್ನು ಮೀರಿದೆ. ನನ್ನ ಸೋದರಮಾವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನನ್ನ ಸೋದರತ್ತೆ ಮತ್ತು ನನ್ನ ಸೋದರತ್ತೆಯ ಮಕ್ಕಳ ಮೇಲೂ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ದುರಾದೃಷ್ಟವಶಾತ್ ನನ್ನ ಸೋದರತ್ತೆ ಮಗನೋರ್ವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾರೆ. ನನ್ನ ಸೋದರತ್ತೆ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ ಎಂದಿದ್ದರು.
ಜೊತೆಗೆ ಇದೂವರೆಗೂ ಅಂದು ರಾತ್ರಿ ಏನಾಯಿತು ಮತ್ತು ಯಾರೂ ಮಾಡಿದರು ಎಂಬುದು ಏನೂ ಗೊತ್ತಿಲ್ಲ. ನಾನು ಪಂಜಾಬ್ ಪೊಲೀಸರಿಗೆ ಮನವಿ ಮಾಡುತ್ತೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಾವು ಕೊನೆ ಪಕ್ಷ ಈ ಘೋರ ಕೃತ್ಯವನ್ನು ಯಾರು ಮಾಡಿದ್ದಾರೆ ಎಂದು ತಿಳಿದುಕೊಳ್ಳಲು ಬಯಸುತ್ತೇವೆ. ಆ ಅಪರಾಧಿಗಳು ಇನ್ನೊಂದು ಕೃತ್ಯ ಮಾಡಲು ನಾವು ಬಿಡಬಾರದು ಎಂದು ರೈನಾ ಟ್ವೀಟ್ ಮೂಲಕ ಕೇಳಿಕೊಂಡಿದ್ದರು.